ಒಂದೆರಡು ವಿಷಯಗಳ ಬಗ್ಗೆ ಮಾತನಾಡಬೇಕಿದೆ - ಪಂಕ್ತಿಭೇದ ಮತ್ತು ಮುಸ್ಲಿಂ ವಿಶ್ವವಿದ್ಯಾಲಯದ ಬಗ್ಗೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಂಕ್ತಿಭೇದ ತಾಂಡವವಾಡಿದೆ. ಅಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಮತ್ತು ಇನ್ನುಳಿದ ಜಾತಿಯ ಭಕ್ತರಿಗೆ ಒಂದು ಪಂಕ್ತಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಾಲ್ಕು ವರ್ಣಗಳು (ಅಥವಾ ಜಾತಿಗಳು) ಜನ್ಮದಿಂದ ಬರುವುದಿಲ್ಲ. ಅದು ಮನುಷ್ಯ ಮಾಡುವ ಕಾರ್ಯಗಳಿಂದ, ಆತ ಪಡೆಯುವ ಸಂಸ್ಕಾರದಿಂದ ದೊರೆಯುವಂಥದ್ದು. ಬ್ರಾಹ್ಮಣ್ಯ ಎಂಬುದು ಶ್ರೇಷ್ಠ ಎಂಬ ಬಗ್ಗೆ ಸಹಮತವಿದೆ. ಆದರೆ ಅದು ಹುಟ್ಟಿನಿಂದ ಬರುವಂಥದ್ದಲ್ಲ. ಜ್ಞಾನಾರ್ಜನೆಯಿಂದ ಮತ್ತು ಒಳ್ಳೆಯ ಸಂಸ್ಕಾರದಿಂದ ಬರುವಂಥದ್ದು ಅದು. ಇವತ್ತು ಬ್ರಾಹ್ಮಣರು ಎಂದು ಹೇಳಿಕೊಂಡು, ಜಾತಿಯ ಅಹಮಿಕೆ ತೋರುತ್ತಿರುವ ಬಹುತೇಕರು ಸಂಸ್ಕಾರದಿಂದ ಬ್ರಾಹ್ಮಣರಲ್ಲ. ಅವರಿಗೆ ನಾಡಿನ ಯಾವುದೇ ದೇವಸ್ಥಾನದಲ್ಲೂ ಪ್ರತ್ಯೇಕ ಪಂಕ್ತಿಯಲ್ಲಿ ಊಟ ಬಡಿಸುವ ಸಂಪ್ರದಾಯ ಇರಕೂಡದು.
ತಮಗೆ ಪ್ರತ್ಯೇಕ ಪಂಕ್ತಿಯೇ ಬೇಕು, ಎಲ್ಲರ ಜೊತೆಗೂಡಿ ಊಟ ಮಾಡಲು ಸಾಧ್ಯವಿಲ್ಲ ಎನ್ನುವ ಸ್ವಯಂಘೋಷಿತ ಬ್ರಾಹ್ಮಣರು, ಮನೆಯಲ್ಲೇ ಅಡುಗೆ ಮಾಡಿಕೊಂಡು ಉಣ್ಣುವುದು ಒಳಿತು. ಹಿಂದೂ ಸಮಾಜದಿಂದ ಇಂಥದೊಂದು ಖಡಕ್ ಸಂದೇಶ ಹೋಗಲೇಬೇಕಿದೆ. ಇಲ್ಲವಾದರೆ, ಸಮಾಜದ ಸಾಮರಸ್ಯಕ್ಕೆ ಪಂಕ್ತಿಭೇದ ಎಂಬುದು ಮಾರಕವಾಗಿ ಪರಿಣಮಿಸುತ್ತದೆ. ದೇವಸ್ಥಾನದ ಪುನರ್ ನವೀಕರಣ ಕಾರ್ಯದಲ್ಲಿ ಎಲ್ಲ ಜಾತಿಯ ಜನ ಒಟ್ಟಾಗಿ ಸೇರಿ ದುಡಿದಿದ್ದಾರೆ. ಅಂಥದ್ದರಲ್ಲಿ ನಿರ್ದಿಷ್ಟ ಜಾತಿಯೊಂದರ ಜನರಿಗೆ ಪ್ರತ್ಯೇಕ ಪಂಕ್ತಿಯಲ್ಲಿ ಊಟ ಬಡಿಸುವುದು ಸರ್ವಥಾ ಸಲ್ಲದು.
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನನ ಹೆಸರಿನಲ್ಲಿ ಪ್ರತ್ಯೇಕ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಕರ್ನಾಟಕದಲ್ಲಿ ಹೊಸ ವಿ.ವಿ. ಸ್ಥಾಪನೆಗೆ ವಿರೋಧ ಇಲ್ಲ. ಆದರೆ ಟಿಪ್ಪು ಹೆಸರಿನ ಮುಸ್ಲಿಂ ವಿವಿ ಬೇಡ. ಒಂದು ಹೊಸ ವಿ.ವಿ. ಸ್ಥಾಪಿಸಿ ಅದಕ್ಕೆ ಮೌಲಾನಾ ಅಬುಲ್ ಕಲಾಂ ಆಜಾದ್ ಅಥವಾ ಶಿಷುನಾಳ ಷರೀಫರ ಹೆಸರನ್ನು ಇಡಲಿ. ಆದರೆ ಆ ವಿ.ವಿ.ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾದ ವಿ.ವಿ. ಆಗುವುದು ಬೇಡ. ಸೆಕ್ಯುಲರ್ ತತ್ವವನ್ನು ಒಪ್ಪಿಕೊಂಡಿರುವ ದೇಶದಲ್ಲಿ ಇರುವುದು ಭಾರತೀಯರು ಮಾತ್ರ. ಇಲ್ಲಿ ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಕಾಣಬೇಕಾದ ಅನಿವಾರ್ಯತೆಯೇ ಇಲ್ಲ. ಅವರನ್ನು ಎಲ್ಲ ಭಾರತೀಯರಂತೆ ಕಂಡರೆ ಸಾಕು.
ಮುಸ್ಲಿಮರಲ್ಲಿ ಶೈಕ್ಷಣಿಕ ಪ್ರಗತಿ ಮಂದಗತಿಯಲ್ಲಿದೆ ಎಂಬುದನ್ನು ಹಲವಾರು ವರದಿಗಳು ಖಚಿತಪಡಿಸಿವೆ. ಆಧರೆ ಅದಕ್ಕೆ ಕಾರಣ ಏನು ಮತ್ತು ಯಾರು ಎಂಬುದನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಮಾನ್ಯ ರೆಹಮಾನ್ ಖಾನ್ ಅವರೇ ತಿಳಿಸಬೇಕು. ಅದು ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೆ ರಾಜಕೀಯ ಕಾರಣಗಳಿಂದಾಗಿ, ಪಕ್ಷದ ವರಿಷ್ಠರ ಒತ್ತಡಗಳಿಂದಾಗಿ ಅವರು ಅದನ್ನು ಹೇಳದೆ ಇರಬಹುದು. ಮುಸ್ಲಿಮರು ವಿಶ್ವವಿದ್ಯಾಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಆಗಬೇಕಾದರೆ, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಅವರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ಅವರಿಗೆ ಪ್ರತ್ಯೇಕ ಹಾಗೂ ವಿಶೇಷ ಗಮನ ನೀಡಬೇಕೇ ಹೊರತು, ಅವರು ಪ್ರತ್ಯೇಕವಾಗಿ ಕಾಣುವುದು ಒಳಿತಲ್ಲ. ಇದೂ ಖಾನ್ ಅವರಿಗೆ ಬಹಳ ಸ್ಪಷ್ಟವಾಗಿ ತಿಳಿದಿದೆ. ಆದರೆ ರಾಜಕೀಯ ಅನಿವಾರ್ಯತೆಗಳು ಬೇರೆಯೇ ಇರುತ್ತವಲ್ಲ!?
ಪ್ರಾತಮಿಕ ಹಂತದಿಂದಲೇ ಮುಸ್ಲಿಮರು ಹೆಚ್ಚಿನ ಪ್ರಮಾಣದಲ್ಲಿ ಶೀಕ್ಷಣ ಪಡೆಯುವಂಥ ಅವಕಾಶ ಸೃಷ್ಟಿಸಿ, ಸ್ನಾತಕೋತ್ತರ ಹಂತದಲ್ಲಿ ಅವರನ್ನು ಎಲ್ಲ ಸಮುದಾಯಗಳ ಜೊತೆ ಬೆರೆತು ಓದುವಂಥ ವಾತಾವರಣವನ್ನು ಸರ್ಕಾರ ಸೃಷ್ಟಿಸಬೇಕು. ಆಗ ಮಾತ್ರ ಸೌಹಾರ್ದ ಭಾವ ಮೂಡುವುದು. ಪ್ರತ್ಯೇಕ ವಿ.ವಿ. ಸ್ಥಾಪನೆಯಿಂದ ಯಾವ ಪುರುಷಾರ್ಥವೂ ಈಡೇರದು. ಅದು ಮುಸ್ಲಿಂ ವಿ.ವಿ ಅಲ್ಲ, ಅದು ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ವಿ.ವಿ. ಎಂದು ಕೇಂದ್ರ ಸರ್ಕಾರ ಈಗ ಸ್ಪಷ್ಟನೆ ನೀಡುತ್ತಿದೆ. ಆದರೆ ಮತ-ಧರ್ಮಗಳ ನೆಲೆಗಟ್ಟಿನಲ್ಲಿ ಪ್ರತ್ಯೇಕ ವಿ.ವಿ. ಸ್ಥಾಪನೆಗೆ ಅವಕಾಶ ಇದೆಯೇ?
ಇದೇ ಮಾದರಿಯಲ್ಲಿ, ಹಿಂದೂಗಳಲ್ಲೇ ಹಿಂದುಳಿದಿರುವ ಒಬಿಸಿ ವರ್ಗ, ದಲಿತರು, ಆದಿವಾಸಿಗಳು ಹಾಗೂ ಇನ್ನಿತರ ಸಮುದಾಯಗಳಿಗೆ ಪ್ರತ್ಯೇಕ ವಿ.ವಿ. ಅಥವಾ ಪ್ರತ್ಯೇಕ ಕಾಲೇಜುಗಳನ್ನು ಸ್ಥಾಪಿಸುವುದರಿಂದ ಸೌಹಾರ್ದ ಸ್ಥಾಪನೆಯೇನೂ ಆಗುವುದಿಲ್ಲವಲ್ಲ?
ಕಾಮೆಂಟ್‌ಗಳು