ಆದರಪೂರ್ವಕ ನಮನಗಳು. ಕನ್ನಡ ಬರಹಗಾರರು ಅಂತ ನಾನು ಸಂಬೋಧಿಸಿದ್ದು ಪತ್ರಿಕೆ-ನಿಯತಕಾಲಿಕೆಗಳ ಮೂಲಕ, ಬ್ಲಾಗು/ವೆಬ್‌ಸೈಟುಗಳ ಮೂಲಕ, ಪುಸ್ತಕಗಳ ಮೂಲಕ ಕನ್ನಡದಲ್ಲಿ ಬರೆಯುತ್ತಿರುವ ಪ್ರತಿಯೊಬ್ಬ ಹಿರಿಕಿರಿಯ ಬರಹಗಾರರನ್ನು. ಒಂದು ಘಟನೆ ನೆನಪಿಗೆ ಬರುತ್ತಿದೆ. ಕನ್ನಡದ ಹೆಮ್ಮೆಯ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರಿಗೆ ಸಂಬಂಧಿಸಿದ್ದು. ಹೊಸ ಸಹಸ್ರಮಾನವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಲೆಂದು ತೇಜಸ್ವಿ ‘ಮಿಲೆನಿಯಮ್’ ಸರಣಿ ಪುಸ್ತಕಗಳನ್ನು ಬರೆದರಷ್ಟೇ. ವಿಶ್ವದ ಅಸಂಖ್ಯ ಕೌತುಕಗಳನ್ನು, ವಿವಿಧ ನಾಗರೀಕತೆಗಳು ನಡೆಸಿದ ‘ಜೀವನ ಸಂಗ್ರಾಮ’ಗಳನ್ನು, ಪ್ರಪಂಚ ಕಂಡ ಮಹಾಯುದ್ಧಗಳನ್ನು ಕನ್ನಡದ ಮೂಲಕವೇ ಓದುಗರಿಗೆ ಪರಿಚಯಿಸುವ ವಿನೂತನ ಪ್ರಯತ್ನವದು. ಕನ್ನಡ ಪುಸ್ತಕಲೋಕ ಕಂಡ ಬಹಳ ವಿಶಿಷ್ಟ ಕೈಂಕರ್ಯ ತೇಜಸ್ವಿ ಮತ್ತು ಅವರ ಸಂಗಡಿಗರು ಹೊರತಂದ ಮಿಲೆನಿಯಮ್ ಸರಣಿ ಪುಸ್ತಕಗಳು. ತೇಜಸ್ವಿಯವರ ಈ ಪುಸ್ತಕ ಸರಣಿಯ ಪ್ರಕಟಣೆ ಆರಂಭವಾಗುತ್ತಿದ್ದಂತೆಯೇ ಒಂದು ವರ್ಗದಿಂದ ಕೂಗು ಆರಂಭವಾಯಿತು. ‘ತೇಜಸ್ವಿಯವರ ಸೃಜನಶೀಲ ಬರವಣಿಗೆ ಸತ್ತುಹೋಗುತ್ತಿದೆ’ ಎಂದು ಕೆಲವರು ವಾದಿಸತೊಡಗಿದರು. ಆದರೆ ಟೀಕೆಟಿಪ್ಪಣಿಗಳಿಗೆ ಸೊಪ್ಪು ಹಾಕದ ತೇಜಸ್ವಿ ತಮ್ಮ ಕಾಯಕ ಮುಂದುವರೆಸಿದರು; ಮಿಲೆನಿಯಮ್ ಸರಣಿಯ 16 ಪುಸ್ತಕಗಳನ್ನು ಕನ್ನಡಿಗರಿಗೆ ಕೊಟ್ಟರು. ಕನ್ನಡಿಗರಿಗೆ ವಿಶ್ವದರ್ಶನ ಮಾಡಿಸಿದ ಪುಣ್ಯ ಅವರದ್ದು. ಅಂದಹಾಗೆ, ಯಾವುದು ಸೃಜನಶೀಲ ಸಾಹಿತ್...
ಆನೋ ಭದ್ರಾಃ ಕೃತವೋ ಯಂತು ವಿಶ್ವತ: