ಆದರಪೂರ್ವಕ ನಮನಗಳು. ಕನ್ನಡ ಬರಹಗಾರರು ಅಂತ ನಾನು ಸಂಬೋಧಿಸಿದ್ದು ಪತ್ರಿಕೆ-ನಿಯತಕಾಲಿಕೆಗಳ ಮೂಲಕ, ಬ್ಲಾಗು/ವೆಬ್‌ಸೈಟುಗಳ ಮೂಲಕ, ಪುಸ್ತಕಗಳ ಮೂಲಕ ಕನ್ನಡದಲ್ಲಿ ಬರೆಯುತ್ತಿರುವ ಪ್ರತಿಯೊಬ್ಬ ಹಿರಿಕಿರಿಯ ಬರಹಗಾರರನ್ನು.
ಒಂದು ಘಟನೆ ನೆನಪಿಗೆ ಬರುತ್ತಿದೆ. ಕನ್ನಡದ ಹೆಮ್ಮೆಯ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರಿಗೆ ಸಂಬಂಧಿಸಿದ್ದು. ಹೊಸ ಸಹಸ್ರಮಾನವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಲೆಂದು ತೇಜಸ್ವಿ ‘ಮಿಲೆನಿಯಮ್’ ಸರಣಿ ಪುಸ್ತಕಗಳನ್ನು ಬರೆದರಷ್ಟೇ. ವಿಶ್ವದ ಅಸಂಖ್ಯ ಕೌತುಕಗಳನ್ನು, ವಿವಿಧ ನಾಗರೀಕತೆಗಳು ನಡೆಸಿದ ‘ಜೀವನ ಸಂಗ್ರಾಮ’ಗಳನ್ನು, ಪ್ರಪಂಚ ಕಂಡ ಮಹಾಯುದ್ಧಗಳನ್ನು ಕನ್ನಡದ ಮೂಲಕವೇ ಓದುಗರಿಗೆ ಪರಿಚಯಿಸುವ ವಿನೂತನ ಪ್ರಯತ್ನವದು. ಕನ್ನಡ ಪುಸ್ತಕಲೋಕ ಕಂಡ ಬಹಳ ವಿಶಿಷ್ಟ ಕೈಂಕರ್ಯ ತೇಜಸ್ವಿ ಮತ್ತು ಅವರ ಸಂಗಡಿಗರು ಹೊರತಂದ ಮಿಲೆನಿಯಮ್ ಸರಣಿ ಪುಸ್ತಕಗಳು.
ತೇಜಸ್ವಿಯವರ ಈ ಪುಸ್ತಕ ಸರಣಿಯ ಪ್ರಕಟಣೆ ಆರಂಭವಾಗುತ್ತಿದ್ದಂತೆಯೇ ಒಂದು ವರ್ಗದಿಂದ ಕೂಗು ಆರಂಭವಾಯಿತು. ‘ತೇಜಸ್ವಿಯವರ ಸೃಜನಶೀಲ ಬರವಣಿಗೆ ಸತ್ತುಹೋಗುತ್ತಿದೆ’ ಎಂದು ಕೆಲವರು ವಾದಿಸತೊಡಗಿದರು. ಆದರೆ ಟೀಕೆಟಿಪ್ಪಣಿಗಳಿಗೆ ಸೊಪ್ಪು ಹಾಕದ ತೇಜಸ್ವಿ ತಮ್ಮ ಕಾಯಕ ಮುಂದುವರೆಸಿದರು; ಮಿಲೆನಿಯಮ್ ಸರಣಿಯ 16 ಪುಸ್ತಕಗಳನ್ನು ಕನ್ನಡಿಗರಿಗೆ ಕೊಟ್ಟರು. ಕನ್ನಡಿಗರಿಗೆ ವಿಶ್ವದರ್ಶನ ಮಾಡಿಸಿದ ಪುಣ್ಯ ಅವರದ್ದು.
ಅಂದಹಾಗೆ, ಯಾವುದು ಸೃಜನಶೀಲ ಸಾಹಿತ್ಯ? ಯಾವುದು ಸೃಜನೇತರ ಸಾಹಿತ್ಯ? ಕಥೆ, ಕಾದಂಬರಿ, ನಾಟಕ, ಕವನಗಳು ಮಾತ್ರ ಸೃಜನಶೀಲವೆ? ಉಳಿದ ಪ್ರಕಾರಗಳೆಲ್ಲ ಸೃಜನೇತರ ಎಂದು ಷರಾ ಬರೆದದ್ದು ಯಾರು? ಯಾಕೆ? ಸೃಜನಶೀಲ-ಸೃಜನೇತರ ಎಂದು ತೇಜಸ್ವಿ ಯೋಚಿಸುತ್ತಾ ಕುಳಿತಿದ್ದರೆ ನಮಗೆಲ್ಲಿ ಸಿಗುತ್ತಿದ್ದವು ಮಿಲೆನಿಯಮ್ ಪುಸ್ತಕಗಳು? ಸೃಜನೇತರ ಎಂದು ಕರೆಸಿಕೊಂಡ ಬರವಣಿಗೆಯನ್ನು ನಿರ್ಲಕ್ಷಿಸಿದ ಕಾರಣ ಕನ್ನಡ ತೆತ್ತ ಬೆಲೆ ಸಾಮಾನ್ಯದ್ದಾ?
ನಾನು ಹೇಳಲಿಕ್ಕೆ ಹೊರಟಿರುವುದು ತೇಜಸ್ವಿಯವರ ಮಿಲೆನಿಯಮ್ ಸರಣಿಯ ಪುಸ್ತಕಗಳ ಬಗ್ಗೆ ಮಾತ್ರ ಅಲ್ಲ. ಪ್ರಸ್ತುತ ಪರಿಸ್ಥಿತಿ ಹೇಗಿದೆಯೆಂದರೆ, ಯುವ ಬರಹಗಾರನೊಬ್ಬ ಕನ್ನಡದಲ್ಲಿ ಬರೆಯುತ್ತಿದ್ದಾನೆ ಎಂದರೆ ಆತ ಒಂದೋ ಕಥೆ, ಕವನ ಅಥವಾ ಕಾದಂಬರಿ (ಅಪರೂಪದ ಸಂದರ್ಭದಲ್ಲಿ) ಬರೆಯುತ್ತಿದ್ದಾನೆ ಎಂದು ಅರ್ಥೈಸಬೇಕಾಗುತ್ತದೆ. ವಿಜ್ಞಾನ, ಇತಿಹಾಸ, ಅರ್ಥಶಾಸ್ತ್ರ, ಕಂಪ್ಯೂಟರ್ ತಂತ್ರಜ್ಞಾನ, ಭೌತವಿಜ್ಞಾನ, ರಸಾಯನವಿಜ್ಞಾನ- ಇವುಗಳಲ್ಲಿ ಒಂದಾದರೂ ವಿಷಯದ ಬಗ್ಗೆ ಬರೆಯುವ ಯುವ ಬರಹಗಾರರೊಬ್ಬರ ಹೆಸರು ನೆನಪು ಮಾಡಿಕೊಳ್ಳಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇವತ್ತಿನದು.
ಇಂಗ್ಲಿಷಿನಲ್ಲಿ ನೋಡಿ: ಎಲ್ಲ ವಯೋಮಾನದ ಓದುಗನಿಗೂ ಅಗತ್ಯವಾದ ಪುಸ್ತಕಗಳ ರಾಶಿಯೇ ಸಿಗುತ್ತದೆ. 2-4, 4-6, 6-9, ಹೀಗೆ ಆಯಾ ವಯೋಮಾನದವರು ಓದಬಹುದಾದ ಪುಸ್ತಕಗಳು ದೊಡ್ಡ ಸಂಖ್ಯೆಯಲ್ಲಿ ಇಂಗ್ಲಿಷ್‌ನಲ್ಲಿ ಲಭ್ಯ. ಇದರಿಂದಾಗಿ ಇಂಗ್ಲಿಷ್ ಬಲ್ಲ ಮಕ್ಕಳಿಗೆ ಎಳೆ ವಯಸಿನಲ್ಲೇ ಓದು ಆಪ್ತವೆನ್ನಿಸುತ್ತೆ. ಆದರೆ ಕನ್ನಡದಲ್ಲಿ?
ಬೆರಳೆಣಿಕೆಯ ಆಕರ್ಷಕ ಪುಸ್ತಕಗಳನ್ನು ಬಿಟ್ಟರೆ (ಉದಾ: ಬೊಳುವಾರು ಮಹಮದ್ ಕುಂಞಿ ಅವರ ‘ಪಾಪು ಗಾಂಧಿ ಬಾಪು ಗಾಂಧಿ ಆದ ಕತೆ’) ವಿವಿಧ ವಯೋಮಾನದ ಮಕ್ಕಳು ಓದುವಂತಹ ಪುಸ್ತಕಗಳೇ ನಮ್ಮಲ್ಲಿ ಲಭ್ಯವಿಲ್ಲ. ಶಿಶು ಸಾಹಿತ್ಯ ಕನ್ನಡದಲ್ಲಿ ಬಡವಾಗಲು ಕಾರಣವೇನು? ಓದುವವರಿಲ್ಲವೋ ಅಥವಾ ಬರೆಯುವರಿಲ್ಲವೋ? ಶಿಶು ಸಾಹಿತ್ಯ ಅಂದಕೂಡಲೇ ಅದು ಕಥೆ, ಕವಿತೆಯೇ ಆಗಬೇಕಿಲ್ಲ. ಪರಿಸರ, ಕಾಡು, ಅಂತರಿಕ್ಷ ಮುಂತಾದ ಬೆರಗು ಹುಟ್ಟಿಸುವ ವಿಷಯಗಳ ಬಗ್ಗೆ ಮಕ್ಕಳಿಗೆ ಅರ್ಥವಾಗುವಂತೆ ಬರೆಯುವವರು ಕನ್ನಡದಲ್ಲಿ ಯಾರಿದ್ದಾರೆ? ಎಲ್ಲಿದ್ದಾರೆ?
ಚಿಕ್ಕ ವಯಸ್ಸಿನವರಿಗೆ ಕನ್ನಡದಲ್ಲಿ ಓದಿನ ರುಚಿ ಹಿಡಿಸುವಂಥ ಪುಸ್ತಕಗಳ ಅಭಾವ, ವಯಸ್ಸು ಹೆಚ್ಚಾದಂತೆಲ್ಲಾ ಅವರು ಕನ್ನಡ ಪುಸ್ತಕಗಳಿಂದ ವಿಮುಖವಾಗುವಂತೆ ಮಾಡಬಹುದು. ಹಾಗೊಂದು ವೇಳೆ ಆ ಮಗು ಕನ್ನಡ ಓದುಗನಾಗಿಯೇ ಉಳಿದುಕೊಂಡರೂ- ಆಧುನಿಕ, ವಿಜ್ಞಾನ ವಿಷಯಗಳಲ್ಲಿನ ಕನ್ನಡ ಪುಸ್ತಕಗಳ ಕೊರತೆ ಆತನನ್ನು ಇಂಗ್ಲಿಷಿನೆಡೆಗೆ ಗಮನಹರಿಸುವಂತೆ ಮಾಡಬಲ್ಲದು.
ಇವತ್ತಿನ ಕನ್ನಡ ಬ್ಲಾಗುಗಳನ್ನೊಮ್ಮೆ ನೋಡಿ. ಹೊಸ ಬರಹಗಾರರು ಮುಕ್ತವಾಗಿ ಬ್ಲಾಗುಗಳ ಮೂಲಕ ಬರೆಯುತ್ತಿದ್ದಾರೆ ಎಂಬುದನ್ನು ಬಿಟ್ಟರೆ, ಹೆಚ್ಚಿನ ಬ್ಲಾಗ್ ಬರಹಗಳು ಅಧ್ಯಯನದ ಬಲವಿಲ್ಲದ, ವೈಯುಕ್ತಿಕ ವಿಚಾರಗಳ ಸರಕು. ಯಾವ ವಿಚಾರದ ಬಗ್ಗೆ ಬೇಕಾದರೂ ಬರೆಯುವ ಸ್ವಾತಂತ್ರ್ಯ ಅವರಿಗಿದೆ, ನಿಜ. ಆದರೆ ಅನುಭವ, ಅಧ್ಯಯನ ಎರಡೂ ಇಲ್ಲದ ಕೇವಲ ವೈಯುಕ್ತಿಕ ಖಯಾಲಿಗಳಿಂದ ಯಾರಿಗೆ ಲಾಭ?
ಇತ್ತೀಚೆಗೆ ನಡೆದ ‘ಅಕ್ಕ’ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ವಿದ್ವಾಂಸರಾದ ಡಾ.ಎಂ.ಎಂ.ಕಲಬುರ್ಗಿ ಅವರು ಕನ್ನಡದ ‘ಕಲ್ಪನಾ ಸಾಹಿತ್ಯ’ದ ಮೇಲೆ ಚಾಟಿ ಬೀಸಿದ್ದು ಇಂಥ ಪುಸ್ತಕ ವೈವಿಧ್ಯದ ಅಭಾವ ಕಂಡೇ ಇರಬೇಕು. ಆಧುನಿಕ ವಿಜ್ಞಾನ, ಖಗೋಳ ವಿಜ್ಞಾನ, ರಾಜಕೀಯ ಮುಂತಾದ ವಿಚಾರಗಳಲ್ಲಿ ಕನ್ನಡದಲ್ಲಿ ವಿಪುಲ ಸಾಹಿತ್ಯ ಬಾರದಿರಲು ಕಾರಣವೇನು? ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಗಳಲ್ಲಿಯೂ ‘ಬರಹಗಾರರು’ ಎಂದು ಮಿಂಚುವವರು ಕತೆ, ಕವನ, ಕಾದಂಬರಿ ಪ್ರಕಾರಗಳಲ್ಲಿ ಬರೆಯುವವರೇ ವಿನಾ ವಿಜ್ಞಾನ, ಇತಿಹಾಸ, ಅರ್ಥಶಾಸ್ತ್ರ, ಪರಿಸರದ ಬಗ್ಗೆ ಬರೆಯುವವರಲ್ಲ. ಅಂಥವರು ‘ಸಾಹಿತಿ’ ಎಂದು ಪರಿಗಣಿತವಾಗುವುದಿಲ್ಲ. ಇದು ಈ ಹೊತ್ತಿನ ವಿಪರ್ಯಾಸ.
ಹಿಂದೆ ತೇಜಸ್ವಿಯವರೇ ಒಂದು ಮಾತು ಬರೆದಿದ್ದರು: ‘ಕನ್ನಡದಲ್ಲಿ ಏನೂ ಇಲ್ಲ ಅನ್ನುವವರೂ, ಕನ್ನಡದಲ್ಲಿ ಎಲ್ಲವೂ ಇದೆ ಅನ್ನುವವರು ಒಟ್ಟಿಗೆ ಕುಳಿತು ಕನ್ನಡದ ಮುಂದಿರುವ ಸವಾಲುಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು’. ಕನ್ನಡದ ಮೂಲಕವೇ ವಿಶ್ವವನ್ನು ಓದಲು, ಗ್ರಹಿಸಲು ಸಾಧ್ಯವಾಗಬೇಕು ಎಂಬುದೂ ತೇಜಸ್ವಿಯವರ ಆಶಯವಾಗಿತ್ತು. ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕು, ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾಗದ ಹೊರತು ಕನ್ನಡಕ್ಕೆ ಉಳಿವಿಲ್ಲ ಎಂಬುದನ್ನು ತೇಜಸ್ವಿ ಎಂದೋ ಹೇಳಿದ್ದರು.
ಗೂಗಲ್‌ಗೆ ಹೋಗಿ ಇಂಗ್ಲಿಷಿನಲ್ಲಿ ‘ಲಿಟರೇಚರ್’ ಅಂತ ಟೈಪ್ ಮಾಡಿದರೆ ಲಕ್ಷಗಟ್ಟಲೆ ಪುಟಗಳು ತೆರೆದುಕೊಳ್ಳುತ್ತವೆ. ಕನ್ನಡದಲ್ಲಿ ‘ಸಾಹಿತ್ಯ’ ಎಂದು ಟೈಪ್ ಮಾಡಿ? ತೆರೆದುಕೊಳ್ಳುವ ಪುಟಗಳ ಸಂಖ್ಯೆ ನೂರನ್ನು ಮೀರುವುದಿಲ್ಲ. ಮಾಹಿತಿ ಸ್ಫೋಟದ ಈ ಯುಗದಲ್ಲಿ ಕನ್ನಡದಲ್ಲಿ ಅಗತ್ಯ ಮಾಹಿತಿ ಸಿಗುವುದಿಲ್ಲ ಎಂದಾದರೆ ಯಾರು ತಾನೇ ಕನ್ನಡದ ಬಳಕೆಯನ್ನು ಹೆಚ್ಚಿಸಿಯಾರು? ವಿವಿಧ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ‘ಬರೆಯಬಲ್ಲ’ ಪ್ರತಿಭಾನ್ವಿತರನ್ನು ನಾವು ಪ್ರೋತ್ಸಾಹಿಸದೇ ಇದ್ದರೆ ಕನ್ನಡದ ಭವಿಷ್ಯ ಏನಾದೀತು? ಇಂಗ್ಲಿಷ್‌ನಿಂದಾಗಿ ಕನ್ನಡ ಹಾಳಾಯಿತು ಎಂಬ ಕೂಗಿಗೆ ಅರ್ಥವಾದರೂ ಇದೆಯೇ?
ಸೃಜನಶೀಲವೋ, ಸೃಜನೇತರವೋ; ವಿವಿಧ ಕೇತ್ರಗಳ ಬಗೆಗಿನ ಮಾಹಿತಿಯನ್ನು ಕನ್ನಡಲ್ಲಿ ಬರೆಯುವ ಕಾರ್ಯ ಮೊದಲಾಗಬೇಕು. ಕತೆ, ಕವಿತೆ ಬರೆಯುವವರನ್ನು ವಿವಿಧ ಸ್ಪರ್ಧೆಗಳ ಮೂಲಕ ಗುರುತಿಸಿ, ಗೌರವಿಸುವಂತೆ ಗಹನ ಅಧ್ಯಯನದ ಆಧಾರದಲ್ಲಿ ಮಾಹಿತಿ, ವಿಶ್ಲೇಷಣೆ ಬರೆಯುವವರನ್ನೂ ಗುರುತಿಸುವ, ಬೆಳೆಸುವ, ಗೌರವಿಸುವ ಕೆಲಸ ಆಗಬೇಕು- ಕನ್ನಡ ಬೆಳೆಯಬೇಕು ಎಂಬ ಆಸೆ ನಮಗಿದ್ದರೆ.
ಇಂತೀ ತಮ್ಮ ವಿಶ್ವಾಸಿ,
-ವಿಜಯ್ ಜೋಷಿ
ಅಕ್ಟೋಬರ್ ೩, ೨೦೧೦ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.

ಕಾಮೆಂಟ್‌ಗಳು