ವಿಷಯಕ್ಕೆ ಹೋಗಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ.


ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ.


ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ.


ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನೂರಾಮೂವತ್ತು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಕೇವಲ ಎರಡು ಪುಟಗಳ ವಾರಪತ್ರಿಕೆಯಾಗಿ ಆರಂಭವಾಗಿ ನಂತರ ದಿನಪತ್ರಿಕೆಯಾಗಿ ರೂಪುಗೊಂಡು ಇಡೀ ಭಾರತದ ರಾಜಕೀಯವನ್ನು ಪ್ರಭಾವಿಸಿದ ಪತ್ರಿಕೆ ಇದು. ನೂರಕ್ಕೂ ಹೆಚ್ಚು ವರ್ಷಗಳಿಂದ ಭಾರತದ ರಾಷ್ಟ್ರೀಯ ದಿನಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಗೆ ಇದೆ. ಇಂಥ ಪತ್ರಿಕೆಯ ಬಗ್ಗೆ ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಓದಿರುವ ನನ್ನ ಸ್ನೇಹಿತರು "ಅದೆಂಥಾ ಪೇಪರ್ ಮಾರಾಯಾ. ಒಂದು ಗ್ಲಾಮರ್ ಇಲ್ಲ, ಒಂದು ಗಾಸಿಪ್ ಕಾಲಮ್ ಇಲ್ಲ." ಅಂತ ಮಾತಾಡಿದರೆ ಬೇಸರವಾಗದೆ ಇರುತ್ತಾ? ಪತ್ರಿಕೋದ್ಯಮ ಎಂದರೆ ಗಾಸಿಪ್ ಕಾಲಮ್ ಪ್ರಕಟಿಸುವುದು, ಪತ್ರಕರ್ತರು ಎಂದರೆ ಗಾಸಿಪ್ ಕಾಲಮ್ ಬರೆಯುವವರು ಅಂತ ಪತ್ರಿಕೋದ್ಯಮ ವಿದ್ಯಾರ್ಥಿಗಳೇ ಅಂದುಕೊಂಡುಬಿಟ್ಟರೆ ಮುಂದಿನ ಪೀಳಿಗೆಯ ಪತ್ರಿಕೋದ್ಯಮದ ಕಥೆ ಏನು?


ಇವತ್ತು ಪತ್ರಿಕೋದ್ಯಮಕ್ಕೆ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಅವರಲ್ಲಿ ಹಲವರಿಗೆ ಓದುವ ಆಸಕ್ತಿ ಇಲ್ಲ. ಇವತ್ತಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಹಲವರು ಮಯೂರ ಓದುವುದಿಲ್ಲ, ಸುಧಾ ಇವರಿಗೆ ದೂರ, ಕಸ್ತೂರಿ ಇವರ ಪಾಲಿಗೆ ಹಳತಾಗಿದೆ. ಇವರು ಓದುವ ಪತ್ರಿಕಾ ಅಂಕಣಗಳೂ ಅಷ್ಟಕ್ಕಷ್ಟೆ. ಸದ್ಯ ಸುದ್ದಿಯಲ್ಲಿರುವ ಒಂದಿಬ್ಬರು ಪತ್ರಕರ್ತರ ಅಂಕಣಗಳನ್ನು ಮಾತ್ರ ಓದಿಕೊಂಡು ನಾನೆಲ್ಲಾ ಓದಿದ್ದೇನೆ ಎಂಬ ಭಾವದಲ್ಲಿರುತ್ತಾರೆ. ಇವರಿಗೆ ಕಸ್ತೂರಿಯಲ್ಲಿ ಬರೆಯುತ್ತಿದ್ದ ಲಾಂಗೂಲಾಚಾರ್ಯ ಯಾರು ಅಂತ ಸರಿಯಾಗಿ ಗೊತ್ತಿಲ್ಲ, ಕನ್ನಡಪ್ರಭದಲ್ಲಿ ಸಂದೇಶ್ ಎಂಬ ಗುಪ್ತನಾಮದಲ್ಲಿ ನಾಟಕವಿಮರ್ಶೆ ಬರೆಯುತ್ತಿದ್ದವರು ಯಾರು ಅಂತ ತಿಳಿದಿಲ್ಲ.


ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಆಳವಾದ ಓದು ಇರಬೇಕು ಅಂತ ಎಲ್ಲರೂ ಹೇಳುತ್ತಾರೆ. ಅದು ವಿದ್ಯಾರ್ಥಿಗಳಿಗೂ ಗೊತ್ತು. ಆದರೆ ಕೆಲವು ವಿದ್ಯಾರ್ಥಿಗಳನ್ನು ನೋಡಬೇಕು, ಇವರಿಗೆ ಸಮಾಜವಾದ, ಸಾಮ್ಯವಾದ, ರಾಷ್ಟ್ರೀಯವಾದ ಅಂದರೆ ಏನು ಅಂತ ತಿಳಿದುಕೊಳ್ಳುವ ಅಗತ್ಯವಿಲ್ಲ. ಲೋಹಿಯಾ, ಗಾಂಧಿ, ಗೋಳವಲ್ಕರ್ ವಿಚಾರಧಾರೆ ಏನು ಅಂತ ತಿಳಿಯುವ ಹಂಬಲವೂ ಇಲ್ಲ. ಲೋಹಿಯಾ, ಗಾಂಧಿ, ವಿವೇಕಾನಂದ, ಗೋಳವಲ್ಕರ್ ಅಂಥವರು ಭಾರತೀಯರ ಯೋಚನಾಲಹರಿಯ ಮೇಲೆ ಪ್ರಭಾವ ಬೀರಿದ, ಭಾರತದ ಇತಿಹಾಸ ಸದಾ ನೆನಪಿನಲ್ಲಿಟ್ಟುಕೊಳ್ಳುವ ವ್ಯಕ್ತಿಗಳು. ಇವರ ವಿಚಾರಧಾರೆಯನ್ನು ಒಪ್ಪುವುದು ಬಿಡುವುದು ವ್ಯಕ್ತಿಗತ ವಿಚಾರ. ಆದರೆ ಅಂಥವರ ವಿಚಾರಗಳನ್ನು ಓದುವುದೇ ಇಲ್ಲ ಅಂತ ಪತ್ರಿಕೋದ್ಯಮ ವಿದ್ಯಾರ್ಥಿಗಳು ತೀರ್ಮಾನಿಸಿ ಕೂತುಬಿಟ್ಟರೆ? ಮುಂದೊಂದು ದಿನ ಇವರ ವಿಚಾರಗಳನ್ನು ಓದುಗರಿಗೆ ಸ್ಥೂಲವಾಗಿಯಾದರೂ ತಿಳಿಸಿಕೊಡುವ ಜವಾಬ್ದಾರಿ ಯಾರದ್ದು?


ನಮ್ಮ ಹಿಂದಿನ ತಲೆಮಾರಿನ ಪತ್ರಕರ್ತರಲ್ಲಿ ಹೆಚ್ಚಿನವರಿಗೆ ಪತ್ರಿಕೋದ್ಯಮದ ಬಗ್ಗೆ ತೀವ್ರ ಆಸಕ್ತಿಯಿದ್ದರೂ ಆಗ ಈಗಿನಂತೆ ಕಾಲೇಜುಗಳಲ್ಲಿ ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಕಲಿಸುತ್ತಿರಲಿಲ್ಲವಾದ್ದರಿಂದ ಅವರಲ್ಲಿ ಅನೇಕರು ಪತ್ರಿಕೋದ್ಯಮವನ್ನು ಕಾಲೇಜಿನ ತರಗತಿಗಳಲ್ಲಿ ಓದದೆಯೇ ಪತ್ರಕರ್ತರಾದರು. ಆದರೆ ತಮ್ಮ ಜೀವಿತಾವಧಿಯಲ್ಲಿ ಅಸಾಮಾನ್ಯ ಸಾಧನೆಗೈದರು. ಇದಕ್ಕೆ ಕಾರಣ ನಮಗೂ ಗೊತ್ತಿದೆ; ಅವರ ಓದಿನ ಆಳ ಆಗಾಧವಾಗಿತ್ತು.


ಕನ್ನಡ ಸಾಹಿತ್ಯವನ್ನು, ಆಂಗ್ಲ ಸಾಹಿತ್ಯವನ್ನು ಆಳವಾಗಿ ಓದಿಕೊಂಡಿದ್ದ ಲಂಕೇಶ್ ಕನ್ನಡ ಪತ್ರಿಕೋದ್ಯಮದಲ್ಲಿ ಮಾಡಿದ ಸಾಹಸಗಳು ಚಿರಸ್ಮರಣೀಯ. ಅದೇ ರೀತಿ ಇಂಗ್ಲಿಷ್ ಪತ್ರಿಕೋದ್ಯಮದ ದಿಗ್ಗಜರಾದ ಎಮ್. ವಿ. ಕಾಮತ್, ಫ್ರಾಂಕ್ ಮೋರಾಸ್, ಎಸ್. ಸದಾನಂದ್, ಖುಷ್‌ವಂತ್ ಸಿಂಗ್... ಇವರಲ್ಲಿ ಯಾರೂ ಕೂಡ (ನಾನು ತಿಳಿದ ಮಟ್ಟಿಗೆ) ಪತ್ರಿಕೋದ್ಯಮದಲ್ಲಿ ಡಿಗ್ರಿ ಪಡೆದುಕೊಂಡವರಲ್ಲ. ಆದರೆ ಅವರ ಅರಿವಿನ ವಿಸ್ತಾರದ ಬಗ್ಗೆ ಯಾರೊಬ್ಬರಿಗೂ ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ.

ಪ್ರತಿಯೊಂದು ಪತ್ರಿಕೆಗೂ ತನ್ನದೇ ಆದ ಸಂಪಾದಕೀಯ ನಿಲುವಿರುತ್ತದೆ. ತನ್ನದೇ ಆದ ಭಾಷಾ ಶೈಲಿಯೂ ಇರುತ್ತದೆ. ಇದನ್ನೂ ಕೂಡ ಒಪ್ಪುವುದು ಅಥವಾ ವಿರೋಧಿಸುವುದು ವ್ಯಕ್ತಿಗತ ವಿಚಾರ. ಆದರೆ ಪತ್ರಿಕೋದ್ಯಮ ವಿದ್ಯಾರ್ಥಿಯಾದ ಪ್ರತಿಯೊಬ್ಬರಿಗೂ ತಮ್ಮ ಪ್ರದೇಶದಲ್ಲಿ ಸಿಗುವ ಎಲ್ಲಾ ಪತ್ರಿಕೆಗಳ ಸಂಪಾದಕೀಯ ನಿಲುವು ಮತ್ತು ವರದಿಗಾರಿಕೆಯ ಭಾಷೆಯ ಬಗ್ಗೆ ಸ್ಥೂಲವಾದ ಅರಿವು ಇರಲೇಬೇಕು. ಇದನ್ನು ಪತ್ರಿಕೋದ್ಯಮದ ಅಧ್ಯಾಪಕರುಗಳೂ ಒಪ್ಪುತ್ತಾರೆ. ಕೆಲವು ಪತ್ರಿಕೆಗಳಲ್ಲಿ ಸಂಪಾದಕೀಯ ನಿಲುವಿಗೆ ಅನುಗುಣವಾಗಿ ಕೆಲವು ಘಟನೆಗಳನ್ನು ಹೇಗೆ ವರದಿ ಮಾಡಬೇಕು ಎಂಬುದೂ ನಿರ್ಧಾರವಾಗುತ್ತದೆ. ಆದರೆ ಕೆಲವು ಪತ್ರಿಕೋದ್ಯಮ ವಿದ್ಯಾರ್ಥಿಗಳು "ನನಗೆ ಆ ಪತ್ರಿಕೆಯ ನಿಲುವು ಸರಿ ಕಾಣಲಿಲ್ಲ. ಹಾಗಾಗಿ ಆ ಪತ್ರಿಕೆಯನ್ನು ಓದುವುದನ್ನು ನಿಲ್ಲಿಸಿದೇನೆ" ಅಂತ ಹೇಳಿದರೆ ನಿಜಕ್ಕೂ ಆತಂಕವಗುತ್ತದೆ.


ಈ ಮಾತು ಅಂಕಣ ಓದುವುದಕ್ಕೂ ಅನ್ವಯವಾಗುತ್ತದೆ. ನಮಗೆ ಒಬ್ಬ ಅಂಕಣಕಾರ ಇಷ್ಟವಿರಲಿ ಇಲ್ಲದಿರಲಿ ಚರ್ಚೆಯಲ್ಲಿರುವ ಅಂಕಣಕಾರರ ಎಲ್ಲಾ ಬರಹಗಳನ್ನೂ ನಾವು ಓದಿಕೊಂಡಿದ್ದರೆ ಉತ್ತಮ. ಕೆಲವು ಬಾರಿ ಅಂಕಣ ಬರಹದ ತಲೆಬರಹವನ್ನು ಓದಿದ ಮಾತ್ರಕ್ಕೆ ಆ ದಿನದ/ವಾರದ ಅಂಕಣ ಯಾವ ವಿಷಯಕ್ಕೆ ಸಂಬಂಧಿಸಿದ್ದು ಎಂಬುದು ಗೊತ್ತಾಗುತ್ತದೆ. "ಅವನ ಅಂಕಣದ ತಲೆಬರಹ ನೋಡಿದೆ. ನನಗೆ ಗೊತ್ತಿದ್ದ ವಿಚಾರವನ್ನೇ ಅವನೂ ಬರೆದಿದ್ದ." ಹಾಗಾಗಿ ಅವನ ಅಂಕಣವನ್ನು ಓದಲಿಲ್ಲ ಎಂದು ಪತ್ರಿಕೋದ್ಯಮ ವಿದ್ಯಾರ್ಥಿಗಳ ಬಾಯಿಯಿಂದ ನುಡಿಮುತ್ತು ಹೊರಬಿದ್ದರೆ ಅದು ಏನೋ ಎಡವಟ್ಟಾಗಿರುವುದರ ಸಂಕೇತ. ಒಬ್ಬ ಅಂಕಣಕಾರನ ಬರಹಗಳನ್ನು ಒಂದೂ ಬಿಡದೆ ಓದುತ್ತಿದ್ದರೆ ವಿವಿಧ ವಿಷಯಗಳ ಬಗ್ಗೆ ಅವರ ನಿಲುವು ಏನು ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಅದು ಬಿಟ್ಟು ಅವರ ವಿಚಾರ ನಮಗೆ ಸರಿಬರುವುದಿಲ್ಲ ಎಂಬ ಕಾರಣಕ್ಕೆ ಒಬ್ಬ ಅಂಕಣಕಾರನ ಬರಹವನ್ನು ಓದುವುದೇ ಇಲ್ಲ ಎಂಬ ನಿರ್ಣಯಕ್ಕೆ ಬರುವುದು ಆತ್ಮಘಾತಕ.


ಈಗ ಕೆಲವು ದಿನಗಳ ಹಿಂದೆ ಪತ್ರಿಕೋದ್ಯಮದ ಬಗ್ಗೆ ತೀವ್ರ ಆಸಕ್ತಿಯಿರುವ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿರುವ ನನ್ನ ಸ್ನೇಹಿತರೊಬ್ಬರ ಬಳಿ ಮಾತಾಡುತ್ತಿದ್ದಾಗ ಒಂದು ಮಾತು ಬಂತು. "ಇವತ್ತು ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳ ನಡುವೆ ತೀವ್ರ ಪೈಪೋಟಿಯಿದೆ. ವಿದ್ಯುನ್ಮಾನ ಮಾಧ್ಯಮಗಳಂತೂ ಬ್ರೇಕಿಂಗ್ ನ್ಯೂಸ್ ನೀಡುವ ಭರದಲ್ಲಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ವೈಯುಕ್ತಿಕ ಬದುಕನ್ನೇ ಬೆತ್ತಲು ಮಾಡುವ ಅನಾಹುತಕಾರಿ ಕೆಲಸಕ್ಕೆ ಇಳಿದಿವೆ. ಇನ್ನು ಕೆಲವು ಟಿವಿ ಚಾನೆಲ್‌ಗಳು ರಾಖಿ ಸಾವಂತ್‌ಗೆ ಯಾವನೋ ಒಬ್ಬ ಪಾರ್ಟಿಯಲ್ಲಿ ಚುಂಬಿಸಿದ ಎನ್ನುವುದನ್ನೇ ರಾಷ್ಟ್ರೀಯ ಮಹತ್ವದ ಸುದ್ದಿ ಎಂಬಂತೆ ಮೂರು ದಿನ ಪ್ರಸಾರ ಮಾಡುತ್ತವೆ. ಕೆಲವು ಪತ್ರಿಕೆಗಳೂ ಸುದ್ದಿಯನ್ನು ಸಂಪಾದಕೀಯದಂತೆ ಬರೆಯುವ ಹಂತಕ್ಕೆ ತಲುಪಿವೆ. ಸುದ್ದಿಯ ಮೂಲಕ ತಮ್ಮ ಅಭಿಪ್ರಾಯವನ್ನು ಓದುಗರ ಮೇಲೆ ಹೇರುವ ಕೆಲಸಕ್ಕೆ ಕೈಹಾಕಿವೆ. ಆದರೆ ಇಂಥದೆಲ್ಲ ನಕಾರಾತ್ಮಕ ಬೆಳವಣಿಗೆಗಳ ಮಧ್ಯದಲ್ಲೂ ಕೆಲವು ಪತ್ರಿಕೆಗಳು ಶ್ರೇಷ್ಠ ಮೌಲ್ಯಗಳ ಪ್ರಸಾರಕ್ಕಾಗಿ, ಪತ್ರಿಕಾಧರ್ಮದ ರಕ್ಷಣೆಗಾಗಿ, ದೇಶಹಿತಕ್ಕಾಗಿ ತಮ್ಮ ಹಣವನ್ನು ಖರ್ಚು ಮಾಡಿಕೊಂಡು ಓದುಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಕೆಲವು ಪತ್ರಕರ್ತರು ತಮ್ಮದೇ ಆದ ಬ್ಲಾಗ್‌ಗಳನ್ನು ಮಾಡಿಕೊಂಡು ಪತ್ರಿಕೆಗಳ ಮೂಲಕ ಹೇಳಲಾಗದ್ದನ್ನು ಬ್ಲಾಗಿನ ಮೂಲಕ ಜನಕ್ಕೆ ತಿಳಿಸುತ್ತಿದ್ದಾರೆ. ಅದೇ ತುಂಬ ಸಂತೋಷ ಕೊಡುವ ವಿಚಾರ ಮಾರಾಯಾ" ಅಂತ ಹೇಳಿದ್ದರು.


ಅವರ ಮಾತುಗಳನ್ನು ಕೇಳಿದ ಮೇಲೆ, ಅವರ ಜೊತೆ ಕೆಲವು ಕಾಲ ಕಳೆದ ನಂತರ ನಿಮ್ಮ ಮುಂದೆ ಇದನ್ನೆಲ್ಲ ಹೇಳಿಕೊಳ್ಳುವ ಆತುರವಾಯಿತು. ಅಷ್ಟೇ ಅಲ್ಲ, ಇಂದಿನ ಹಲವಾರು ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಇಂಥ ಮಾತು ಬರುತ್ತಿಲ್ಲವಲ್ಲಾ ಎಂದು ಬೇಸರವೂ ಆಯಿತು.


ಹಾಗಾಗಿಯೇ ನನಗೆ ಅನಿಸಿದನ್ನೆಲ್ಲ ನಿಮ್ಮ ಮುಂದೆ ತೋಡಿಕೊಂಡಿದ್ದೇನೆ. ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ಮನ್ನಿಸುವ, ತಿದ್ದುವ ಹೊಣೆ ಪ್ರಾಜ್ಞರಾದ ನಿಮ್ಮದು.

ಕಾಮೆಂಟ್‌ಗಳು

PRANJALE ಹೇಳಿದ್ದಾರೆ…
nice article yar
Unknown ಹೇಳಿದ್ದಾರೆ…
nice article.... a truth about modern journalism...
Ravi Adapathya ಹೇಳಿದ್ದಾರೆ…
really great article...keep it up
Unknown ಹೇಳಿದ್ದಾರೆ…
very nise article keep it up
ಅನಾಮಧೇಯಹೇಳಿದ್ದಾರೆ…
very good article........
ಅನಾಮಧೇಯಹೇಳಿದ್ದಾರೆ…
ಪತ್ರಿಕೋದ್ಯಮದ ಬಗ್ಗೆ ಅರಿವಿದ್ದವರೇ ಗಾಸಿಪ್ ಕಾಲಮ್ ಇಲ್ಲದೆ ಪತ್ರಿಕೆ ಹಳಸಲಾಗಿದೆ ಎನ್ನುತ್ತಾರೆ. ಹಾಗಾದರೆ ಅವರು ಆ ಮನಸ್ಥಿತಿ ಹೊಂದಲು ಪತ್ರಿಕೋದ್ಯಮವೇ ಕಾರಣವಲ್ಲವೇ? ಜನರಲ್ಲಿ ಈ ಮನಸ್ಥಿತಿ ಮೂಡಲು ಕಾರಣವಾಗಿರುವ ಪತ್ರಿಕೆಗಳಾಗಿರಲಿ ಅಥವಾ ವಿದ್ಯನ್ಮಾನ ಮಾಧ್ಯಮಗಳಾಗಲಿ ಮೊದಲು ತಮ್ಮ ನಿಲುವನ್ನು ಬದಲಿಸಬೇಕಿದೆ. ಆದರೆ ಇಂದಿನ ಪತ್ರಿಕಾ 'ಉದ್ಯಮ'ದ ಅದು ಸಾಧ್ಯವಿದೆ ಎಂಬುದು ದೂರದ ಮಾತು!
Unknown ಹೇಳಿದ್ದಾರೆ…
nimma lekanadalli kushwant singh odidavaralla. anta heliddiri. adre cambridgenalli sikshana padediddare.
ವಿ.ರಾ.ಹೆ. ಹೇಳಿದ್ದಾರೆ…
ಚೆನ್ನಾಗಿ ಬರೆದಿದ್ದೀರಾ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ, ಭವಿಷ್ಯದ ಪತ್ರಕರ್ತರಿಗೆ, ಮಾಧ್ಯಮ ವ್ಯಕ್ತಿಗಳಿಗೆ ಒಳ್ಳೆಯ ಪಾಠವಿದು.
ವಿನಾಯಕ ಭಟ್ಟ ಹೇಳಿದ್ದಾರೆ…
ವಿಜಯ್, ಪತ್ರಿಕೋದ್ಯಮದ ಾರಂಭಿಕ ಹಂತದಲ್ಲಿರುವ ನೀವು ಅದ್ಯಾಕೆ ಅಷ್ಟು ಗಾಬರಿಯಾಗಿದ್ದೀರಿ. ಎಲ್ಲ ಕೋರ್ಸ್ ನಂತೆ ಪತ್ರಿಕೋದ್ಯಮ ಕೂಡ. ವೈದ್ಯಕೀಯ ಕಲಿಯುವ ಎಲ್ಲರೂ ಅದನ್ನು ಸರಿಯುಆಗಿ ಕಲಿಯುವುದಿಲ್ಲ. ಕಲಿತವರೆಲ್ಲ ಪ್ರಸಿದ್ಧ ವೈದ್ಯರಾಗುವುದಿಲ್ಲ. ಪತ್ರಿಕೋದ್ಯಮದಲ್ಲೂ ಅಷ್ಟೆ. ಒಂದು ಕ್ಲಾಸಿಗೆ ಒಬ್ಬಿಬ್ಬರು ಸಮಾಜದ ಬಗ್ಗೆ ಕಾಳಜಿಯುಳ್ಳ ಪತ್ರಕತ೵ರು ಬರಲಿ ಸಾಕು. ಎಲ್ಲರೂ ತನಿಖಾ ವರದಿಗಾರರೇ ಆದರೆ ಪತ್ರಿಕೆಯಲ್ಲಿ ಜಾಗ ಸಾಲಲಿಕ್ಕಿಲ್ಲ. ಸುದ್ದಿ ಪ್ರಕಟಿಸಲು ಮತ್ತು ಪ್ರಕರಣಗಳ ದಾಖಲೆ ಇಡಲು!ಪತ್ರಿಕೆ ಅಂದ ಮೇಲೆ ಗಾ"ಸಿಪ್' ಬರೆಯುವವರೂ ಬೇಕು. ನಿಮಗೇ ಮುಂದೆ ಇದೆಲ್ಲ ಅರ್ಥವಾಗುತ್ತದೆ. ಎಲ್ಲ ಪತ್ರಕರ್ತರೂ ಆಳ ಅಧ್ಯಯನ ಮಾಡಿರಬೇಕು ಎಂದು ತಿಳವಳಿಕೆ ಸಂಪೂರ್ಣ ಸರಿಯಲ್ಲ. ಯಾಕೆಂದರೆ ಕೆಲವು ಸಾರಿ ತುಂಬ ತಿಳಿದುಕೊಂಡವರು ಕೆಲವು ವಿಷಯದ ಬಗ್ಗೆ ಪೈರ್ವಾಗೃಹ ಹೊಂದಿರುತ್ತಾರೆ. ಅರಿಯದವ ಆ ವಿಷಯವನ್ನು ಸಾಮಾನ್ಯ ಜನರ ದೃಷ್ಟಿಯಿಂದ ನೋಡಬಲ್ಲ.
ಎಲ್ಲ ರೀತಿಯೂ ಬೇಕಾಗುತ್ತದೆ.
ವಿನಾಯಕ ಭಟ್ಟ ಹೇಳಿದ್ದಾರೆ…
ವಿಜಯ್, ಪತ್ರಿಕೋದ್ಯಮದ ಾರಂಭಿಕ ಹಂತದಲ್ಲಿರುವ ನೀವು ಅದ್ಯಾಕೆ ಅಷ್ಟು ಗಾಬರಿಯಾಗಿದ್ದೀರಿ. ಎಲ್ಲ ಕೋರ್ಸ್ ನಂತೆ ಪತ್ರಿಕೋದ್ಯಮ ಕೂಡ. ವೈದ್ಯಕೀಯ ಕಲಿಯುವ ಎಲ್ಲರೂ ಅದನ್ನು ಸರಿಯುಆಗಿ ಕಲಿಯುವುದಿಲ್ಲ. ಕಲಿತವರೆಲ್ಲ ಪ್ರಸಿದ್ಧ ವೈದ್ಯರಾಗುವುದಿಲ್ಲ. ಪತ್ರಿಕೋದ್ಯಮದಲ್ಲೂ ಅಷ್ಟೆ. ಒಂದು ಕ್ಲಾಸಿಗೆ ಒಬ್ಬಿಬ್ಬರು ಸಮಾಜದ ಬಗ್ಗೆ ಕಾಳಜಿಯುಳ್ಳ ಪತ್ರಕತ೵ರು ಬರಲಿ ಸಾಕು. ಎಲ್ಲರೂ ತನಿಖಾ ವರದಿಗಾರರೇ ಆದರೆ ಪತ್ರಿಕೆಯಲ್ಲಿ ಜಾಗ ಸಾಲಲಿಕ್ಕಿಲ್ಲ. ಸುದ್ದಿ ಪ್ರಕಟಿಸಲು ಮತ್ತು ಪ್ರಕರಣಗಳ ದಾಖಲೆ ಇಡಲು!ಪತ್ರಿಕೆ ಅಂದ ಮೇಲೆ ಗಾ"ಸಿಪ್' ಬರೆಯುವವರೂ ಬೇಕು. ನಿಮಗೇ ಮುಂದೆ ಇದೆಲ್ಲ ಅರ್ಥವಾಗುತ್ತದೆ. ಎಲ್ಲ ಪತ್ರಕರ್ತರೂ ಆಳ ಅಧ್ಯಯನ ಮಾಡಿರಬೇಕು ಎಂದು ತಿಳವಳಿಕೆ ಸಂಪೂರ್ಣ ಸರಿಯಲ್ಲ. ಯಾಕೆಂದರೆ ಕೆಲವು ಸಾರಿ ತುಂಬ ತಿಳಿದುಕೊಂಡವರು ಕೆಲವು ವಿಷಯದ ಬಗ್ಗೆ ಪೈರ್ವಾಗೃಹ ಹೊಂದಿರುತ್ತಾರೆ. ಅರಿಯದವ ಆ ವಿಷಯವನ್ನು ಸಾಮಾನ್ಯ ಜನರ ದೃಷ್ಟಿಯಿಂದ ನೋಡಬಲ್ಲ.
ಎಲ್ಲ ರೀತಿಯೂ ಬೇಕಾಗುತ್ತದೆ.
sameer ahmed ಹೇಳಿದ್ದಾರೆ…
hai viji nanu patrikodyama vidhyarthi nangu nim hange modlu bhaya aithu adre eg parwag illa nanu mys university alli odtha idini nange eng prblm nods gall bere kannanda dalli sugtha illa

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ