ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ.
ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ.
ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ.
ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನೂರಾಮೂವತ್ತು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಕೇವಲ ಎರಡು ಪುಟಗಳ ವಾರಪತ್ರಿಕೆಯಾಗಿ ಆರಂಭವಾಗಿ ನಂತರ ದಿನಪತ್ರಿಕೆಯಾಗಿ ರೂಪುಗೊಂಡು ಇಡೀ ಭಾರತದ ರಾಜಕೀಯವನ್ನು ಪ್ರಭಾವಿಸಿದ ಪತ್ರಿಕೆ ಇದು. ನೂರಕ್ಕೂ ಹೆಚ್ಚು ವರ್ಷಗಳಿಂದ ಭಾರತದ ರಾಷ್ಟ್ರೀಯ ದಿನಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಗೆ ಇದೆ. ಇಂಥ ಪತ್ರಿಕೆಯ ಬಗ್ಗೆ ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಓದಿರುವ ನನ್ನ ಸ್ನೇಹಿತರು "ಅದೆಂಥಾ ಪೇಪರ್ ಮಾರಾಯಾ. ಒಂದು ಗ್ಲಾಮರ್ ಇಲ್ಲ, ಒಂದು ಗಾಸಿಪ್ ಕಾಲಮ್ ಇಲ್ಲ." ಅಂತ ಮಾತಾಡಿದರೆ ಬೇಸರವಾಗದೆ ಇರುತ್ತಾ? ಪತ್ರಿಕೋದ್ಯಮ ಎಂದರೆ ಗಾಸಿಪ್ ಕಾಲಮ್ ಪ್ರಕಟಿಸುವುದು, ಪತ್ರಕರ್ತರು ಎಂದರೆ ಗಾಸಿಪ್ ಕಾಲಮ್ ಬರೆಯುವವರು ಅಂತ ಪತ್ರಿಕೋದ್ಯಮ ವಿದ್ಯಾರ್ಥಿಗಳೇ ಅಂದುಕೊಂಡುಬಿಟ್ಟರೆ ಮುಂದಿನ ಪೀಳಿಗೆಯ ಪತ್ರಿಕೋದ್ಯಮದ ಕಥೆ ಏನು?
ಇವತ್ತು ಪತ್ರಿಕೋದ್ಯಮಕ್ಕೆ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಅವರಲ್ಲಿ ಹಲವರಿಗೆ ಓದುವ ಆಸಕ್ತಿ ಇಲ್ಲ. ಇವತ್ತಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ಹಲವರು ಮಯೂರ ಓದುವುದಿಲ್ಲ, ಸುಧಾ ಇವರಿಗೆ ದೂರ, ಕಸ್ತೂರಿ ಇವರ ಪಾಲಿಗೆ ಹಳತಾಗಿದೆ. ಇವರು ಓದುವ ಪತ್ರಿಕಾ ಅಂಕಣಗಳೂ ಅಷ್ಟಕ್ಕಷ್ಟೆ. ಸದ್ಯ ಸುದ್ದಿಯಲ್ಲಿರುವ ಒಂದಿಬ್ಬರು ಪತ್ರಕರ್ತರ ಅಂಕಣಗಳನ್ನು ಮಾತ್ರ ಓದಿಕೊಂಡು ನಾನೆಲ್ಲಾ ಓದಿದ್ದೇನೆ ಎಂಬ ಭಾವದಲ್ಲಿರುತ್ತಾರೆ. ಇವರಿಗೆ ಕಸ್ತೂರಿಯಲ್ಲಿ ಬರೆಯುತ್ತಿದ್ದ ಲಾಂಗೂಲಾಚಾರ್ಯ ಯಾರು ಅಂತ ಸರಿಯಾಗಿ ಗೊತ್ತಿಲ್ಲ, ಕನ್ನಡಪ್ರಭದಲ್ಲಿ ಸಂದೇಶ್ ಎಂಬ ಗುಪ್ತನಾಮದಲ್ಲಿ ನಾಟಕವಿಮರ್ಶೆ ಬರೆಯುತ್ತಿದ್ದವರು ಯಾರು ಅಂತ ತಿಳಿದಿಲ್ಲ.
ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಆಳವಾದ ಓದು ಇರಬೇಕು ಅಂತ ಎಲ್ಲರೂ ಹೇಳುತ್ತಾರೆ. ಅದು ವಿದ್ಯಾರ್ಥಿಗಳಿಗೂ ಗೊತ್ತು. ಆದರೆ ಕೆಲವು ವಿದ್ಯಾರ್ಥಿಗಳನ್ನು ನೋಡಬೇಕು, ಇವರಿಗೆ ಸಮಾಜವಾದ, ಸಾಮ್ಯವಾದ, ರಾಷ್ಟ್ರೀಯವಾದ ಅಂದರೆ ಏನು ಅಂತ ತಿಳಿದುಕೊಳ್ಳುವ ಅಗತ್ಯವಿಲ್ಲ. ಲೋಹಿಯಾ, ಗಾಂಧಿ, ಗೋಳವಲ್ಕರ್ ವಿಚಾರಧಾರೆ ಏನು ಅಂತ ತಿಳಿಯುವ ಹಂಬಲವೂ ಇಲ್ಲ. ಲೋಹಿಯಾ, ಗಾಂಧಿ, ವಿವೇಕಾನಂದ, ಗೋಳವಲ್ಕರ್ ಅಂಥವರು ಭಾರತೀಯರ ಯೋಚನಾಲಹರಿಯ ಮೇಲೆ ಪ್ರಭಾವ ಬೀರಿದ, ಭಾರತದ ಇತಿಹಾಸ ಸದಾ ನೆನಪಿನಲ್ಲಿಟ್ಟುಕೊಳ್ಳುವ ವ್ಯಕ್ತಿಗಳು. ಇವರ ವಿಚಾರಧಾರೆಯನ್ನು ಒಪ್ಪುವುದು ಬಿಡುವುದು ವ್ಯಕ್ತಿಗತ ವಿಚಾರ. ಆದರೆ ಅಂಥವರ ವಿಚಾರಗಳನ್ನು ಓದುವುದೇ ಇಲ್ಲ ಅಂತ ಪತ್ರಿಕೋದ್ಯಮ ವಿದ್ಯಾರ್ಥಿಗಳು ತೀರ್ಮಾನಿಸಿ ಕೂತುಬಿಟ್ಟರೆ? ಮುಂದೊಂದು ದಿನ ಇವರ ವಿಚಾರಗಳನ್ನು ಓದುಗರಿಗೆ ಸ್ಥೂಲವಾಗಿಯಾದರೂ ತಿಳಿಸಿಕೊಡುವ ಜವಾಬ್ದಾರಿ ಯಾರದ್ದು?
ನಮ್ಮ ಹಿಂದಿನ ತಲೆಮಾರಿನ ಪತ್ರಕರ್ತರಲ್ಲಿ ಹೆಚ್ಚಿನವರಿಗೆ ಪತ್ರಿಕೋದ್ಯಮದ ಬಗ್ಗೆ ತೀವ್ರ ಆಸಕ್ತಿಯಿದ್ದರೂ ಆಗ ಈಗಿನಂತೆ ಕಾಲೇಜುಗಳಲ್ಲಿ ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಕಲಿಸುತ್ತಿರಲಿಲ್ಲವಾದ್ದರಿಂದ ಅವರಲ್ಲಿ ಅನೇಕರು ಪತ್ರಿಕೋದ್ಯಮವನ್ನು ಕಾಲೇಜಿನ ತರಗತಿಗಳಲ್ಲಿ ಓದದೆಯೇ ಪತ್ರಕರ್ತರಾದರು. ಆದರೆ ತಮ್ಮ ಜೀವಿತಾವಧಿಯಲ್ಲಿ ಅಸಾಮಾನ್ಯ ಸಾಧನೆಗೈದರು. ಇದಕ್ಕೆ ಕಾರಣ ನಮಗೂ ಗೊತ್ತಿದೆ; ಅವರ ಓದಿನ ಆಳ ಆಗಾಧವಾಗಿತ್ತು.
ಕನ್ನಡ ಸಾಹಿತ್ಯವನ್ನು, ಆಂಗ್ಲ ಸಾಹಿತ್ಯವನ್ನು ಆಳವಾಗಿ ಓದಿಕೊಂಡಿದ್ದ ಲಂಕೇಶ್ ಕನ್ನಡ ಪತ್ರಿಕೋದ್ಯಮದಲ್ಲಿ ಮಾಡಿದ ಸಾಹಸಗಳು ಚಿರಸ್ಮರಣೀಯ. ಅದೇ ರೀತಿ ಇಂಗ್ಲಿಷ್ ಪತ್ರಿಕೋದ್ಯಮದ ದಿಗ್ಗಜರಾದ ಎಮ್. ವಿ. ಕಾಮತ್, ಫ್ರಾಂಕ್ ಮೋರಾಸ್, ಎಸ್. ಸದಾನಂದ್, ಖುಷ್‌ವಂತ್ ಸಿಂಗ್... ಇವರಲ್ಲಿ ಯಾರೂ ಕೂಡ (ನಾನು ತಿಳಿದ ಮಟ್ಟಿಗೆ) ಪತ್ರಿಕೋದ್ಯಮದಲ್ಲಿ ಡಿಗ್ರಿ ಪಡೆದುಕೊಂಡವರಲ್ಲ. ಆದರೆ ಅವರ ಅರಿವಿನ ವಿಸ್ತಾರದ ಬಗ್ಗೆ ಯಾರೊಬ್ಬರಿಗೂ ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ.
ಪ್ರತಿಯೊಂದು ಪತ್ರಿಕೆಗೂ ತನ್ನದೇ ಆದ ಸಂಪಾದಕೀಯ ನಿಲುವಿರುತ್ತದೆ. ತನ್ನದೇ ಆದ ಭಾಷಾ ಶೈಲಿಯೂ ಇರುತ್ತದೆ. ಇದನ್ನೂ ಕೂಡ ಒಪ್ಪುವುದು ಅಥವಾ ವಿರೋಧಿಸುವುದು ವ್ಯಕ್ತಿಗತ ವಿಚಾರ. ಆದರೆ ಪತ್ರಿಕೋದ್ಯಮ ವಿದ್ಯಾರ್ಥಿಯಾದ ಪ್ರತಿಯೊಬ್ಬರಿಗೂ ತಮ್ಮ ಪ್ರದೇಶದಲ್ಲಿ ಸಿಗುವ ಎಲ್ಲಾ ಪತ್ರಿಕೆಗಳ ಸಂಪಾದಕೀಯ ನಿಲುವು ಮತ್ತು ವರದಿಗಾರಿಕೆಯ ಭಾಷೆಯ ಬಗ್ಗೆ ಸ್ಥೂಲವಾದ ಅರಿವು ಇರಲೇಬೇಕು. ಇದನ್ನು ಪತ್ರಿಕೋದ್ಯಮದ ಅಧ್ಯಾಪಕರುಗಳೂ ಒಪ್ಪುತ್ತಾರೆ. ಕೆಲವು ಪತ್ರಿಕೆಗಳಲ್ಲಿ ಸಂಪಾದಕೀಯ ನಿಲುವಿಗೆ ಅನುಗುಣವಾಗಿ ಕೆಲವು ಘಟನೆಗಳನ್ನು ಹೇಗೆ ವರದಿ ಮಾಡಬೇಕು ಎಂಬುದೂ ನಿರ್ಧಾರವಾಗುತ್ತದೆ. ಆದರೆ ಕೆಲವು ಪತ್ರಿಕೋದ್ಯಮ ವಿದ್ಯಾರ್ಥಿಗಳು "ನನಗೆ ಆ ಪತ್ರಿಕೆಯ ನಿಲುವು ಸರಿ ಕಾಣಲಿಲ್ಲ. ಹಾಗಾಗಿ ಆ ಪತ್ರಿಕೆಯನ್ನು ಓದುವುದನ್ನು ನಿಲ್ಲಿಸಿದೇನೆ" ಅಂತ ಹೇಳಿದರೆ ನಿಜಕ್ಕೂ ಆತಂಕವಗುತ್ತದೆ.
ಈ ಮಾತು ಅಂಕಣ ಓದುವುದಕ್ಕೂ ಅನ್ವಯವಾಗುತ್ತದೆ. ನಮಗೆ ಒಬ್ಬ ಅಂಕಣಕಾರ ಇಷ್ಟವಿರಲಿ ಇಲ್ಲದಿರಲಿ ಚರ್ಚೆಯಲ್ಲಿರುವ ಅಂಕಣಕಾರರ ಎಲ್ಲಾ ಬರಹಗಳನ್ನೂ ನಾವು ಓದಿಕೊಂಡಿದ್ದರೆ ಉತ್ತಮ. ಕೆಲವು ಬಾರಿ ಅಂಕಣ ಬರಹದ ತಲೆಬರಹವನ್ನು ಓದಿದ ಮಾತ್ರಕ್ಕೆ ಆ ದಿನದ/ವಾರದ ಅಂಕಣ ಯಾವ ವಿಷಯಕ್ಕೆ ಸಂಬಂಧಿಸಿದ್ದು ಎಂಬುದು ಗೊತ್ತಾಗುತ್ತದೆ. "ಅವನ ಅಂಕಣದ ತಲೆಬರಹ ನೋಡಿದೆ. ನನಗೆ ಗೊತ್ತಿದ್ದ ವಿಚಾರವನ್ನೇ ಅವನೂ ಬರೆದಿದ್ದ." ಹಾಗಾಗಿ ಅವನ ಅಂಕಣವನ್ನು ಓದಲಿಲ್ಲ ಎಂದು ಪತ್ರಿಕೋದ್ಯಮ ವಿದ್ಯಾರ್ಥಿಗಳ ಬಾಯಿಯಿಂದ ನುಡಿಮುತ್ತು ಹೊರಬಿದ್ದರೆ ಅದು ಏನೋ ಎಡವಟ್ಟಾಗಿರುವುದರ ಸಂಕೇತ. ಒಬ್ಬ ಅಂಕಣಕಾರನ ಬರಹಗಳನ್ನು ಒಂದೂ ಬಿಡದೆ ಓದುತ್ತಿದ್ದರೆ ವಿವಿಧ ವಿಷಯಗಳ ಬಗ್ಗೆ ಅವರ ನಿಲುವು ಏನು ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಅದು ಬಿಟ್ಟು ಅವರ ವಿಚಾರ ನಮಗೆ ಸರಿಬರುವುದಿಲ್ಲ ಎಂಬ ಕಾರಣಕ್ಕೆ ಒಬ್ಬ ಅಂಕಣಕಾರನ ಬರಹವನ್ನು ಓದುವುದೇ ಇಲ್ಲ ಎಂಬ ನಿರ್ಣಯಕ್ಕೆ ಬರುವುದು ಆತ್ಮಘಾತಕ.
ಈಗ ಕೆಲವು ದಿನಗಳ ಹಿಂದೆ ಪತ್ರಿಕೋದ್ಯಮದ ಬಗ್ಗೆ ತೀವ್ರ ಆಸಕ್ತಿಯಿರುವ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿರುವ ನನ್ನ ಸ್ನೇಹಿತರೊಬ್ಬರ ಬಳಿ ಮಾತಾಡುತ್ತಿದ್ದಾಗ ಒಂದು ಮಾತು ಬಂತು. "ಇವತ್ತು ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳ ನಡುವೆ ತೀವ್ರ ಪೈಪೋಟಿಯಿದೆ. ವಿದ್ಯುನ್ಮಾನ ಮಾಧ್ಯಮಗಳಂತೂ ಬ್ರೇಕಿಂಗ್ ನ್ಯೂಸ್ ನೀಡುವ ಭರದಲ್ಲಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ವೈಯುಕ್ತಿಕ ಬದುಕನ್ನೇ ಬೆತ್ತಲು ಮಾಡುವ ಅನಾಹುತಕಾರಿ ಕೆಲಸಕ್ಕೆ ಇಳಿದಿವೆ. ಇನ್ನು ಕೆಲವು ಟಿವಿ ಚಾನೆಲ್‌ಗಳು ರಾಖಿ ಸಾವಂತ್‌ಗೆ ಯಾವನೋ ಒಬ್ಬ ಪಾರ್ಟಿಯಲ್ಲಿ ಚುಂಬಿಸಿದ ಎನ್ನುವುದನ್ನೇ ರಾಷ್ಟ್ರೀಯ ಮಹತ್ವದ ಸುದ್ದಿ ಎಂಬಂತೆ ಮೂರು ದಿನ ಪ್ರಸಾರ ಮಾಡುತ್ತವೆ. ಕೆಲವು ಪತ್ರಿಕೆಗಳೂ ಸುದ್ದಿಯನ್ನು ಸಂಪಾದಕೀಯದಂತೆ ಬರೆಯುವ ಹಂತಕ್ಕೆ ತಲುಪಿವೆ. ಸುದ್ದಿಯ ಮೂಲಕ ತಮ್ಮ ಅಭಿಪ್ರಾಯವನ್ನು ಓದುಗರ ಮೇಲೆ ಹೇರುವ ಕೆಲಸಕ್ಕೆ ಕೈಹಾಕಿವೆ. ಆದರೆ ಇಂಥದೆಲ್ಲ ನಕಾರಾತ್ಮಕ ಬೆಳವಣಿಗೆಗಳ ಮಧ್ಯದಲ್ಲೂ ಕೆಲವು ಪತ್ರಿಕೆಗಳು ಶ್ರೇಷ್ಠ ಮೌಲ್ಯಗಳ ಪ್ರಸಾರಕ್ಕಾಗಿ, ಪತ್ರಿಕಾಧರ್ಮದ ರಕ್ಷಣೆಗಾಗಿ, ದೇಶಹಿತಕ್ಕಾಗಿ ತಮ್ಮ ಹಣವನ್ನು ಖರ್ಚು ಮಾಡಿಕೊಂಡು ಓದುಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಕೆಲವು ಪತ್ರಕರ್ತರು ತಮ್ಮದೇ ಆದ ಬ್ಲಾಗ್‌ಗಳನ್ನು ಮಾಡಿಕೊಂಡು ಪತ್ರಿಕೆಗಳ ಮೂಲಕ ಹೇಳಲಾಗದ್ದನ್ನು ಬ್ಲಾಗಿನ ಮೂಲಕ ಜನಕ್ಕೆ ತಿಳಿಸುತ್ತಿದ್ದಾರೆ. ಅದೇ ತುಂಬ ಸಂತೋಷ ಕೊಡುವ ವಿಚಾರ ಮಾರಾಯಾ" ಅಂತ ಹೇಳಿದ್ದರು.
ಅವರ ಮಾತುಗಳನ್ನು ಕೇಳಿದ ಮೇಲೆ, ಅವರ ಜೊತೆ ಕೆಲವು ಕಾಲ ಕಳೆದ ನಂತರ ನಿಮ್ಮ ಮುಂದೆ ಇದನ್ನೆಲ್ಲ ಹೇಳಿಕೊಳ್ಳುವ ಆತುರವಾಯಿತು. ಅಷ್ಟೇ ಅಲ್ಲ, ಇಂದಿನ ಹಲವಾರು ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಇಂಥ ಮಾತು ಬರುತ್ತಿಲ್ಲವಲ್ಲಾ ಎಂದು ಬೇಸರವೂ ಆಯಿತು.
ಹಾಗಾಗಿಯೇ ನನಗೆ ಅನಿಸಿದನ್ನೆಲ್ಲ ನಿಮ್ಮ ಮುಂದೆ ತೋಡಿಕೊಂಡಿದ್ದೇನೆ. ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ಮನ್ನಿಸುವ, ತಿದ್ದುವ ಹೊಣೆ ಪ್ರಾಜ್ಞರಾದ ನಿಮ್ಮದು.
ಕಾಮೆಂಟ್‌ಗಳು
ಎಲ್ಲ ರೀತಿಯೂ ಬೇಕಾಗುತ್ತದೆ.
ಎಲ್ಲ ರೀತಿಯೂ ಬೇಕಾಗುತ್ತದೆ.