(ಪರೀಕ್ಷೆ, ತಿರುಗಾಟ, ಅನಾರೋಗ್ಯ... ಹೀಗೆ ಹಲವಾರು ಕಾರಣಗಳಿಂದ ಬ್ಲಾಗಿನಲ್ಲಿ ಹಲವು ದಿನಗಳ ನಂತರ ಅಕ್ಷರಗಳನ್ನು ಕಟ್ಟುತ್ತಿದ್ದೇನೆ. ಇದೇನೂ ಲೇಖನವಲ್ಲ. ಸುಮ್ಮನೆ ಕುಳಿತುಕೊಂಡು ಬರೆದ - ಯಾರನ್ನೂ ನೇರವಾಗಿ ಉದ್ದೇಶಿಸಿರದ - ಒಂದು ಪುಟ್ಟ ಪತ್ರ. ಹೊಸ ಬರಹದೊಂದಿಗೆ ಮತ್ತೆ ಕೆಲವೇ ದಿನಗಳಲ್ಲಿ ಭೇಟಿಯಾಗೋಣ.)
ಆತ್ಮೀಯ ಸ್ನೇಹಿತೆ...
ಬರಹವನ್ನು ಮುಂದುವರೆಸುವದೋ ಬೇಡವೋ ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ನೀನು ನನಗೆ ಬರೆದ ಪತ್ರ ಓದಿದೆ. ಆ ಪತ್ರವನ್ನೇ ನಿನ್ನ ಬ್ಲಾಗಿನಲ್ಲಿ ಹಾಕಿದ್ದರೆ ಒಂದು ಒಳ್ಳೆಯ ಲೇಖನ ಆಗುತ್ತಿತ್ತು. ನಾನು ನಿನಗೆ support ಮಾಡ್ತಿ ಅಂತ ಬರೆದಿದ್ದೀಯಾ. ಧನ್ಯವಾದ ನೆನಪಿಟ್ಟುಕೊಂಡದ್ದಕ್ಕೆ!
ಅದಿರಲಿ. ಒಂದು ವಿಷಯ ನೆನಪಿರಲಿ. ಯಾರೊಬ್ಬರ ಬರಹವೂ ಪರಿಪೂರ್ಣ ಅಲ್ಲ. ಪರಿಪಕ್ವವೂ ಅಲ್ಲ. ನನ್ನ ಬರಹ ಪರಿಪಕ್ವ ಅಂತ ಇವತ್ತಿನವರೆಗೆ ಯಾರೂ ಘೋಷಿಸಿಕೊಂಡಿಲ್ಲ. ಹಾಗೊಮ್ಮೆ ಯಾರಾದರೂ ಘೋಷಿಸಿಕೊಂಡರೆ ಅದು ಅಹಂಕಾರವಷ್ಟೆ.
ನೀನು ಲಂಕೇಶ್, ಅಡಿಗರ ಉದಾಹರಣೆ ಕೊಟ್ಟಿದ್ದೀಯಾ. ಇದರರ್ಥ ನೀನು ಅವರ ಬರಹ ಓದುತ್ತಿದ್ದೀಯಾ ಎಂದಾಯಿತು. ಬಹಳ ಒಳ್ಳೆಯದು. ಅವರ ಬರಹಗಳಿಗೆ ದೊಡ್ಡ ಪ್ರಮಾಣದ ಓದುಗರಿದ್ದಾರೆ. ಹಾಗೆಯೇ ಲಂಕೇಶರ ಬರಹಗಳನ್ನು ಟೀಕಿಸುವ ಒಂದು ಬಣವೇ ಇದೆ. ಅಡಿಗರ ಬರಹವನ್ನೂ ಹಲವು ಮಂದಿ ಪ್ರಶ್ನಿಸಿದ್ದಾರೆ. ಇವರಿಬ್ಬರೇ ಅಲ್ಲ ಜಗತ್ತಿನ ಯಾವ ಬರಹಗಾರನ ಬರಹವೂ ಪ್ರಶ್ನಾತೀತವಲ್ಲ. ನನ್ನದು-ನಿನ್ನದೂ ಕೂಡ. ನೀನು ಬರೆದದ್ದನ್ನು ಹತ್ತು ಮಂದಿ ಇಷ್ಟಪಟ್ಟರೆ ಹನ್ನೊಂದನೆಯ ವ್ಯಕ್ತಿ ಟೀಕಿಸುತ್ತಾನೆ ಎಂಬುದು ನೆನಪಿರಲಿ.
ನೀನು ಬರೆದ ಬರಹ ನಿನಗೇ ನಗು ತರಿಸುವಂತಿದೆ ಎಂದೆ. ಒಪ್ಪೋಣ. ನಮ್ಮ ಮೊದಮೊದಲ ಬರಹಗಳು ನಮಗೆ ನಗುಬರಿಸುವಂಥದ್ದೇ ಆಗಿರುತ್ತವೆ. ನನಗೂ ಆ ಅನುಭವ ಇದೆ. ನಿನ್ನ ಬ್ಲಾಗಿನ ಬಗ್ಗೆ ಈಗೊಂದು ಹದಿನೈದು ದಿನಗಳ ಹಿಂದೆ ಕನ್ನಡದ ಹೆಸರಾಂತ ಪತ್ರಿಕೆಯೊಂದರಲ್ಲಿ ನಿನ್ನ ಪರಿಚಯದೊಂದಿಗೆ ಬಂದಿತ್ತು. ನಾನಂತೂ ಖಂಡಿತ ನಿನ್ನದು ಹೀಗೊಂದು ಬ್ಲಾಗಿದೆ ನೋಡಿ ಅಂತ ಅವರಿಗೆ ಹೇಳಿಲ್ಲ. ಅವರು ಬೇರೆ ಬೇರೆ ಬ್ಲಾಗುಗಳನ್ನು ನೋಡುವಾಗ ನಿನ್ನದು ಅವರಿಗೆ ಕಂಡಿದೆ. ಅವರಿಗೆ ಇಷ್ಟವಾಗಿದೆ. ಹಾಗಾಗಿ ಅವರ ಪತ್ರಿಕೆಯಲ್ಲಿ ಹಾಕಿದ್ದಾರೆ. ನೀನು ಬರೆದದ್ದು ನಿನಗೆ ಸಮಾಧಾನ ತರದಿರಬಹುದು. ಆದರೆ ಅದನ್ನು ಓದಿದವರಿಗೆ ಇಷ್ಟವಾಗಿದೆ. ನಿನ್ನ ಕವನಗಳಿಗೆ ೧೦-೧೩ ಪ್ರತಿಕ್ರಿಯೆಗಳೂ ಬಂದಿವೆ. ಅವರಲ್ಲಿ ಹೆಚ್ಚಿನವರಿಗೆ ನಿನ್ನ ಬ್ಲಾಗು ಇಷ್ಟವಾಗಿದೆ. ಹೀಗಿರುವಾಗ ನೀನು ಇಷ್ಟು ದಿನ ಹೊಸದನ್ನು ಬರೆಯದೆ ಕುಳಿತಿದ್ದು ಸರಿಯಲ್ಲ..
ಒಂದು ಮಾತು ನೆನಪಿಡು. ಇವತ್ತಿನ ಅನೇಕ ಯಶಸ್ವಿ ಬ್ಲಾಗರ್‌ಗಳ ಮೊದಲ ಬರಹಗಳಿಗೆ ಒಂದೂ ಪ್ರತಿಕ್ರಿಯೆ ಬರುತ್ತಿರಲಿಲ್ಲ. ನನ್ನ ಬ್ಲಾಗ್ ಬರಹಕ್ಕೆ ಇವತ್ತಿಗೂ ೬-೭ ಪ್ರತಿಕ್ರಿಯೆಗಳು ಬಂದರೆ ಹೆಚ್ಚು. ಅದಲ್ಲದೆ ಕನ್ನಡದ ಯಾವ ಪತ್ರಿಕೆಗಳಲ್ಲೂ ನನ್ನ ಬ್ಲಾಗಿನ ಬಗ್ಗೆ ಬರೆದಿಲ್ಲ - ನಿನ್ನ ಬ್ಲಾಗಿನ ಬಗ್ಗೆ ಬಂದಂತೆ. ನನಗಂತೂ ನಿನ್ನ ಬ್ಲಾಗ್ ಪಡೆದುಕೊಂಡಿರುವ ಜನಪ್ರಿಯತೆಯನ್ನು ನೋಡಿ ಹೊಟ್ಟೆಕಿಚ್ಚಾಗುತ್ತಿದೆ.
ಹಿರಿಯರು, ಅನುಭವಿಗಳು ನಿನ್ನ ಬ್ಲಾಗನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿರುವಾಗ ಇನ್ನೆಂತ ಕೀಳರಿಮೆ ನಿನಗೆ? ಶ್ರೇಷ್ಠತೆಯ ವ್ಯಸನ ಬೇಡ, ನಿನಗನ್ನಿಸಿದ್ದನ್ನು ಬರೆಯುತ್ತಿರು. ಭಾಷೆ ಕೂಡ ಚೆನ್ನಾಗಿದೆ.
ವೈದೇಹಿಯವರ ಕವನಗಳು ’ತೂಕ’ದಿಂದ ಕೂಡಿರುತ್ತವೆ. ನಿನ್ನದು ಹಾಗಿಲ್ಲ ಎಂಬ ಭಾವನೆ ಒಳ್ಳೆಯದಲ್ಲ. ನೀನು ವೈದೇಹಿಯಲ್ಲ. ವೈದೇಹಿ ನೀನಲ್ಲ. ಸಾಧ್ಯವಾದರೆ ನಿನ್ನನ್ನು ನಿನ್ನದೇ ವಯಸ್ಸಿನ ಇತರ ಬರಹಗಾರರ ಜೊತೆ ಹೋಲಿಸಿಕೊ, ಆಗಲೂ ನಿನ್ನ ಬರಹಗಳ ಬಗ್ಗೆ ನಿನಗೆ ವಿಶ್ವಾಸ ಮೂಡದಿದ್ದರೆ ನನ್ನ ಬಳಿ ಹೇಳು. ಅದಲ್ಲದೆ ಲಂಕೇಶರು ಹಾಗೆ ಬರೆಯುತ್ತಿದ್ದರು, ಹೀಗೆ ಬರೆಯುತ್ತಿದ್ದರು ಎಂದು ತಲೆ ಕೆಡಿಸಿಕೊಳ್ಳಬೇಡ. ಎಲ್ಲರಿಂದಲೂ ’ಲಂಕೇಶ್’ ಆಗಲು ಸಾಧ್ಯವಿಲ್ಲ. ಅದಲ್ಲದೆ ಲಂಕೇಶರ ಕಾಲಾನಂತರ ಕನ್ನಡದಲ್ಲಿ ಮತ್ತೊಬ್ಬ ಲಂಕೇಶ್ ಹುಟ್ಟಿಲ್ಲ ಎನ್ನುವುದೂ ನೆನಪಿರಲಿ.
ಇವತ್ತಿನ ಓದುಗರಿಗೆ ಬೇಕಿರುವುದು ಸರಳವಾಗಿರುವ, ತಮಗನ್ನಿಸಿದ್ದನ್ನು ನೇರವಾಗಿ ಹೇಳುವ ಬರಹಗಳೇ ಹೊರತು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಹ ಬರಹಗಳಲ್ಲ. ಅದಲ್ಲದೆ ಬರಹ ಎನ್ನುವುದು ಮನುಷ್ಯನ ಆತ್ಮ ಮತ್ತು ಮನಸ್ಸನ್ನು ಶುದ್ಧವಾಗಿಡುವ ಸಾಧನಗಳಲ್ಲಿ ಒಂದು. ಅದು ಯಾರನ್ನೂ ಖುಷಿಪಡಿಸುವ ಅಥವಾ ಯಾರಿಗೋ ಸಿಟ್ಟು ಬರಿಸುವ ಸಾಧನ ಅಲ್ಲವಲ್ಲ? ಇನ್ನು ಪಕ್ವ ಅಪಕ್ವದ ಪ್ರಶ್ನೆ ಎಲ್ಲಿಯದು? ಅದರಲ್ಲಿ ಕೆಟ್ಟ ವಿಚಾರ ಇಲ್ಲದಿದ್ದರಾಯಿತು, ಅಷ್ಟೆ.
ಇನ್ನು ನಿನ್ನ ಸಮಯವನ್ನು ನೀನು ಹೇಗೆ ಹೊಂದಿಸಿಕೊಳ್ಳುತ್ತೀಯಾ ಎನ್ನುವುದು ನಿನಗೆ ಬಿಟ್ಟಿದ್ದು.
ಸುಮ್ಮನೆ ಇಲ್ಲಸಲ್ಲದ ಕಾರಣ, ನೆವಗಳನ್ನು ಹುಡುಕುವುದನ್ನು ಬಿಡು. ಇದು ನನಗನಿಸಿದ್ದು. ಬರೆಯುವುದನ್ನು ಬಿಡಬೇಡ. ಸಾಹಿತ್ಯ ಮತ್ತು ಬರಹ ನಮ್ಮನ್ನು ಕಡೆ ತನಕವೂ ಕೆಟ್ಟ ದಾರಿ ಹಿಡಿಯಲು ಬಿಡುವುದಿಲ್ಲ.
ನನ್ನ ಪತ್ರ ಸ್ವಲ್ಪ ಖಾರವಾಗಿದ್ದರೆ ಬೇಸರಿಸಿಕೊಳ್ಳಬೇಡ. ನಿನ್ನ ಬಗೆಗಿನ ಕಾಳಜಿಯಿಂದಾಗಿ ಹಾಗೆ ಬರೆಯಬೇಕಾಯಿತು. ನಿನ್ನ ಪ್ರತಿಕ್ರಿಯೆಗಾಗಿ ಕಾಯುತ್ತಿರುತ್ತೇನೆ.
ನಾವು ಬದುಕುತ್ತಿರುವ ಸಂದರ್ಭವನ್ನು ‘ಫೇಸ್‌ಬುಕ್ ಮೂಲಕ ವಿಕಾರಗಳನ್ನು ತೋರಿಸಿಕೊಳ್ಳುವ ಹೊತ್ತು’ ಎಂದು ಕರೆಯಲು ಅಡ್ಡಿಯಿಲ್ಲ ಅನಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಕೆಲವು ಚರ್ಚೆಗಳ ಮಟ್ಟವನ್ನು ಗಮನಿಸಿದರೆ ನಿಮಗೂ ಹಾಗೆ ಅನಿಸಬಹುದು. ಅದರಲ್ಲೂ ಎಡ–ಬಲ ಪಂಥಗಳ ಚರ್ಚೆಗಳಿಗೆ ತಲೆ ಹಾಕಿದರೆ ಮುಗಿದೇ ಹೋಯಿತು. ಅಲ್ಲಿ ಏನಾಗುತ್ತದೆ ಎಂಬುದು ನಿಮ್ಮೆಲ್ಲರ ಗಮನಕ್ಕೂ ಬಂದಿರಬಹುದು ಎಂಬುದು ನನ್ನ ಭಾವನೆ. ಮೂಡುಬಿದಿರೆಯಲ್ಲಿ ಇದ್ದುಕೊಂಡು, ಮಕ್ಕಳಿಗೆ ಪಾಠ ಹೇಳಿಕೊಡುತ್ತ, ಸಾಹಿತ್ಯ, ಸಮಾಜ, ಅರ್ಥವ್ಯವಸ್ಥೆ ಬಗ್ಗೆ ಮಾತನಾಡುವ, ನಾನು ಅವರ ಮನೆಗೆ ಹೋದಾಗಲೆಲ್ಲ ಒಳ್ಳೆಯ ಎಲೆ ಅಡಿಕೆ ಕೊಡುವ ಅರವಿಂದ ಚೊಕ್ಕಾಡಿಯವರು ಎಡ–ಬಲ ಪಂಥಗಳ ಬಗ್ಗೆ, ಅವೆರಡರ ನಡುವೆ ಸಂವಾದ ಆಗಬೇಕಿರುವ ಅಗತ್ಯದ ಬಗ್ಗೆ ಪುಟ್ಟ ಬರಹ ಬರೆದಿದ್ದಾರೆ. ಆ ಬರಹವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಅವರ ಬರಹಕ್ಕೆ ನಾನು ಬರೆದ ಪ್ರತಿಕ್ರಿಯೆ ಕೂಡ ಇಲ್ಲಿದೆ. ದಯವಿಟ್ಟು ಎರಡನ್ನೂ ಓದಿ. ನಿಮ್ಮ ಅನಿಸಿಕೆ ತಿಳಿಸಿ. =========== ಚೊಕ್ಕಾಡಿಯವರಿಗೆ ಬರೆದ ಪ್ರತಿಕ್ರಿಯೆ... ಸರ್, ನಿಮ್ಮ ಬರಹ ಓದಿದ ನಂತರ ಹಳೆಯ ಕೆಲವು ಪ್ರಯತ್ನಗಳು ನೆನಪಿಗೆ ಬಂದವು. ಆ ಪ್ರಯತ್ನಗಳು ನಡೆದಿದ್ದ ಹೊತ್ತಿನಲ್ಲಿ ನೀವೂ ಜೊತೆಯಲ್ಲಿ ಇದ್ದಿದ್ದು ಅಥವಾ ನಾವು ನಿಮ್ಮ ಜೊತೆಯಲ್ಲಿ ಇದ್ದಿದ್ದು ನಿಮ್ಮ ನೆನಪಿನಲ್ಲಿ ಇದೆ ಎಂದು ಭಾವಿಸುವೆ. ಎಡಪಂಥೀಯರು ಮತ್ತು ಬಲಪಂಥೀಯರಲ್ಲಿ ಇರುವ, ಸಂವಾದಿ...
ಕಾಮೆಂಟ್‌ಗಳು
ಅಷ್ಟಕ್ಕೂ ಅಭಿಪ್ರಾಯಭೇದ ಇರಬಾರದು ಅಂತಲ್ಲ. ಆದರೆ, ಅದು ವೈಯಕ್ತಿಕ ಭೇದವಾಗಬಾರದು ಅಷ್ಟೇ.
ಚೆನ್ನಾಗಿ ಬರೆದಿದ್ದೀರಿ. ಇಷ್ಟವಾಯಿತು.
- ಚಾಮರಾಜ ಸವಡಿ
Intha baraha bekittu nange :)thanks a lot :)
Baritaa iri :)
shubhavaagali :)
Sunil.