ಕೆಲವರಿರುತ್ತಾರೆ. ಅವರಿಗೆ ರಾಜಕಾರಣಿಗಳನ್ನು ತೆಗಳುವುದೆಂದರೆ ಎಲ್ಲಿಲ್ಲದ ಸಂತೋಷ. ರಾಜಕಾರಣಿಗಳೆಲ್ಲಾ ಭ್ರಷ್ಟರು, ಅಯೋಗ್ಯರು, ಪಾಪಿಗಳು... ಹೀಗೆ ಸಾಧ್ಯವಾದ ಎಲ್ಲ ಪದವಿಶೇಷಣಗಳನ್ನೂ ಉಪಯೋಗಿಸಿ ರಾಜಕಾರಣಿಗಳನ್ನು ಬಯ್ಯುತ್ತಾರೆ. ಅಂದಹಾಗೆ, ರಾಜಕಾರಣಿಗಳನ್ನು ಆ ಪಾಟಿ ಬಯ್ಯುವುದರಲ್ಲಿ ತಪ್ಪೇನೂ ಇಲ್ಲ ಬಿಡಿ. ನಮ್ಮ ರಾಜಕಾರಣಿಗಳು ಜನರಿಂದ ತೆಗಳಿಸಿಕೊಳ್ಳಲು ಯೋಗ್ಯರೇ. ಅದಲ್ಲದೆ, ಜನರಿಂದ ಹೇಲಿಸಿಕೊಳ್ಳದ ರಾಜಕಾರಣಿ ಜಗತ್ತಿನಲ್ಲಿ ಒಬ್ಬನೂ ಇರಲಿಕ್ಕಿಲ್ಲ.
ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ತಮ್ಮ ಪಕ್ಷ ಉಳಿಸುವ ನೆಪ ಒಡ್ಡಿ ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಸರಕಾರ ರಚಿಸಿದಾಗ ಕರ್ನಾಟಕದಲ್ಲಿ ವಚನಭ್ರಷ್ಟತೆಯ ಬಗ್ಗೆ ಅಷ್ಟೇನೂ ಚರ್ಚೆಯಾಗಲಿಲ್ಲ. ಆದರೆ ಯಾವಾಗ ಇಪ್ಪತ್ತು ತಿಂಗಳ ತನ್ನ ಅವಧಿ ಮುಗಿದ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಕುಮಾರಸ್ವಾಮಿ ನಿರಾಕರಿಸಿದರೋ ಆವಾಗ ವಚನಭ್ರಷ್ಟತೆಯ ಬಗ್ಗೆ ನಾಡಿನಾದ್ಯಂತ ಚರ್ಚೆ ಆರಂಭವಾಯಿತು. ಅದರಲ್ಲೂ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದಿರಲು ಕುಮಾರಸ್ವಾಮಿ ನೀಡಿದ ಕಾರಣಗಳು ಜನರಲ್ಲಿ ಪ್ರಸ್ತುತ ರಾಜಕಾರಣದ ಬಗ್ಗೆ ಹೇಸಿಗೆ ಮೂಡಲು ಕಾರಣವಾಯಿತು.
ಇವತ್ತು ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹ ಎನ್ನುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ದೇವರ ಕೆಲಸವೇ ಆಗಿರುವ ಸರಕಾರದ ಕೆಲಸದಲ್ಲಂತೂ ಭ್ರಷ್ಟತೆ ಎಂಬುದು ಸಾಂಸ್ಥಿಕ ರೂಪವನ್ನೇ ಪಡೆದುಕೊಂಡಿದೆ. ಹಾಗಂತ ಮನುಷ್ಯನ ವಯುಕ್ತಿಕ ಜೀವನದಲ್ಲಿ ವಚನಭ್ರಷ್ಟತೆ, ವಿಶ್ವಾಸದ್ರೋಹ ಎಂಬುದು ಚಾಲ್ತಿಯಲ್ಲಿ ಇಲ್ಲ ಅಂತಲ್ಲ. ಅಪ್ಪ ಕಾಲೇಜಿನ ಶುಲ್ಕ ಕಟ್ಟಲು ನೀಡಿದ ಹಣದಿಂದ ’ಇನ್ನೇನೋ’ ಮಾಡಿ, ಅಪ್ಪ ಮಗನ ಮೇಲಿಟ್ಟಿರುವ ವಿಶ್ವಾಸವನ್ನು ಕೊಂದುಹಾಕುವ ಮಕ್ಕಳಿಂದ ಹಿಡಿದು ರೈತನ ಬೆವರಿನ ಪ್ರತೀಕವಾದ ಬೆಳೆಯನ್ನು ಆತನ ಶ್ರಮಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಮತ್ತೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮಧ್ಯವರ್ತಿಯವರೆಗೆ ಭ್ರಷ್ಟಾಚಾರವೆಂಬುದು ವ್ಯಾಪಿಸಿದೆ. ನಮ್ಮಲ್ಲಿ ಕೆಲವರಿಗೆ ನ್ಯಾಯವಾಗಿ ತೆರಿಗೆ ಕಟ್ಟಲು ಮನಸ್ಸಿಲ್ಲ. ಕೆಲವೇ ಕೆಲವರು ನ್ಯಾಯವಾಗಿ ಕಟ್ಟುವ ತೆರಿಗೆಯನ್ನು ನಾಡಿನ ಅಭ್ಯುದಯಕ್ಕೆ ವಿನಿಯೋಗಿಸಲು ನಮ್ಮ ಅಧಿಕಾರಶಾಹಿಗೆ ಮತ್ತು ಆಡಳಿತಶಾಹಿಗೆ ಆಗಿಬರುವಂಥದ್ದಲ್ಲ. ಇನ್ನು ಕೆಲವರಿಗೆ ತಾವು ಅಕ್ರಮವಾಗಿ ಒತ್ತುವರಿ ಮಾಡಿಕೊಂದ ಜಮೀನು ಹೇಗಾದರೂ ಸಕ್ರಮವಾದರೆ ಸಾಕು ಎಂಬ ಮನಸ್ಥಿತಿ.
ವಸ್ತುಸ್ಥಿತಿ ಹೀಗಿರುವಾಗ ಜನಸಾಮಾನ್ಯರ ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹದ ವರ್ತನೆಯನ್ನು ಗಣನೆಗೆ ತೆಗೆದುಕೊಳ್ಳದೆ, ಕೇವಲ ರಾಜಕಾರಣಿಗಳು ಮಾಡಿದ ಭ್ರಷ್ಟಾಚಾರ ಮತ್ತು ವಚನಭ್ರಷ್ಟತೆಯನ್ನು ನಾವು ವೈಭವೀಕರಿಸುವುದು ಎಷ್ಟು ಸರಿ? ನಿಜ, ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಉನ್ನತ ವಿಚಾರಗಳನ್ನು ಮೈಗೂಡಿಸಿಕೊಂಡಿರಬೇಕು ಎಂಬ ನಿರೀಕ್ಷೆ ಖಂಡಿತಾ ತಪ್ಪಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಕೂಡ ನಾವು-ನೀವು ಜೀವಿಸುತ್ತಿರುವ ಸಮಾಜದ ಒಂದು ಭಾಗವೇ ಆಗಿದ್ದಾರೆ. ಅವರೇನೂ ದೇವಲೋಕದಿಂದ ಇಳಿದುಬಂದವರಲ್ಲ. ಸಮಾಜವೇ ಇಡಿಯಾಗಿ ಭ್ರಷ್ಟವಾಗಿರುವಾಗ ರಾಜಕಾರಣಿಯೊಬ್ಬ ಪ್ರಾಮಾಣಿಕನಾಗಿರಲು ಹೇಗೆ ಸಾಧ್ಯ.
ಅದಲ್ಲದೆ ಪ್ರತಿಯೊಬ್ಬ ರಾಜಕಾರಣಿಯೂ ನಮ್ಮಿಂದಲೇ ಆರಿಸಿಬಂದವನಾಗಿರುತ್ತಾನೆ. ಅವನ ಪೂರ್ವಾಪರಗಳು ಚುನಾವಣೆಗೆ ಮೊದಲೇ ಸ್ವಲ್ಪಮಟ್ಟಿಗಾದರು ಆತ ಪ್ರತಿನಿಧಿಸಲಿರುವ ಕ್ಷೇತ್ರದ ಜನತೆಗೆ ತಿಳಿದಿರುತ್ತದೆ.
ಇವತ್ತಿನ ರಾಜಕಾರಣ ಮತ್ತು ರಾಜಕಾರಣಿಗಳು ದಾರಿತಪ್ಪಿದ್ದಾರೆ ಎನ್ನುವುದಾದರೆ ಇವತ್ತಿನ ಸಮಾಜ ಕೂಡ ದಾgತಪ್ಪಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ರಾಜಕಾರಣಿಗಳೂ ನಾಚುವಷ್ಟರಮಟ್ಟಿಗೆ ವಿಶ್ವಾಸಘಾತುಕತನ ಎಸಗಿದವರು ಇದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ನಮ್ಮದೇ ಸಮಾಜವನ್ನು ಪ್ರತಿನಿಧಿಸುವ ರಾಜಕೀಯ ನಾಯಕರನ್ನು ಮಾತ್ರ ದೂರಿ ನಾವು ನಮ್ಮ ಸಮಾಜದ ತಪ್ಪನ್ನು ತಿದ್ದಿಕೊಳ್ಳದೇ ಹೋದಲ್ಲಿ ರಾಜಕೀಯ ಎನ್ನುವುದು ಶುಚಿಯಾಗಲು ಸಾಧ್ಯವಿಲ್ಲ.
ಕಾಮೆಂಟ್‌ಗಳು
ವಿದ್ಯಾರ್ಥಿ ಅಲ್ಲ ನೀನು ಒಂದು ಪತ್ರಿಕೆಯಲ್ಲಿ ಕೆಲಸ ಮಾಡುವ ನೌಕರ okna
ಲೇಖನ ಚೆನ್ನಾಗಿದೆ ಹೀಗೆ ಮುಂದುವರೆಸು