ಅರವಿಂದ ಚೊಕ್ಕಾಡಿಯವರು ಮೂಡುಬಿದಿರೆಯಲ್ಲಿ ವಾಸಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಜಧಾನಿಯಂತಿರುವ ಮೂಡುಬಿದಿರೆಯಲ್ಲಿ ಇದ್ದುಕೊಂಡು ಇವರಷ್ಟು ಬರೆಯುತ್ತಿರುವವರು ಬಹುಷಃ ಮತ್ತಾರೂ ಇರಲಿಕ್ಕಿಲ್ಲ. ಚೊಕ್ಕಾಡಿಯವರು ನನ್ನಂತಹ ಸಾಮಾನ್ಯ ಓದುಗನೊಬ್ಬ ಒಂದು ವಾರಕ್ಕೆ ಓದಬಹುದಾದಷ್ಟನ್ನು ಒಂದು ವಾರದಲ್ಲಿ ತಾವು ಖುದ್ದು ಬರೆಯುತ್ತಾರೆ. ಅವರ ಓದಿನ ಮತ್ತು ಅರಿವಿನ ವ್ಯಾಪ್ತಿ ಅಷ್ಟಿದೆ.
ಅದಿರಲಿ, ಈ ಬರಹದ ವಿಷಯ ಬೇರೆಯೇ ಇದೆ.
ಪ್ರಜಾವಾಣಿ ಪತ್ರಿಕೆ ಕನ್ನಡ ಕರಾವಳಿಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆಯೇ ತನ್ನ ಆವೃತ್ತಿಯನ್ನು ಆರಂಭಿಸಿದೆ. ೧೯೪೮ರಲ್ಲೇ ಆರಂಭವಾದ ಪ್ರಜಾವಾಣಿ ಕರಾವಳಿಯಲ್ಲಿ ಸ್ವತಂತ್ರ ಆವೃತ್ತಿಯನ್ನು ಆರಂಭಿಸಿದ್ದು ಸ್ವಲ್ಪ ತಡವಾಯಿತು ಅಂತಲೇ ಹೇಳಬಹುದು. ಹಾಗೆ ತಡವಾಗಿಯಾದರೂ ತನ್ನ ಆವೃತ್ತಿಯನ್ನು ಕರಾವಳಿಯಲ್ಲಿ ಆರಂಭಿಸಿದ ಪ್ರಜಾವಾಣಿ ತನ್ನ ಓದುಗರಿಗೆ ಕಳೆದ ಒಂದೂವರೆ ವರ್ಷಗಳಿಂದ ಕರಾವಳಿಯ ಜಿಲ್ಲೆಗಳಾದ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆಂದೇ ಮೀಸಲಾದ ’ಕರಾವಳಿ’ ಎಂಬ ಸುದ್ದಿ ಪುರವಣಿಯೊಂದ ವಾರದಲ್ಲಿ ಆರು ದಿನ ಕೊಡುತ್ತಿದೆ. ನಾಲ್ಕು ಪುಟದ ಈ ಪುರವಣಿಯಲ್ಲಿ ಕಡಲ ತಡಿಯ ಸಮೃದ್ಧ ಸುದ್ದಿ, ಸುದ್ದಿ ವಿಶ್ಲೇಷಣೆ ಇರುತ್ತದೆ. ಒಟ್ಟಿನಲ್ಲಿ ಓದಲು ಖುಷಿಕೊಡುವ ದೈನಿಕ ಪುರವಣಿ ಇದು.
ಇದೇ ಪುರವಣಿಯಲ್ಲಿ ಪ್ರತಿ ಬುಧವಾರ ಅರವಿಂದ ಚೊಕ್ಕಾಡಿಯವರು ’ತೀರದ ತಲ್ಲಣ’ ಎಂಬ ಅಂಕಣವೊಂದನ್ನು ಕಳೆದೊಂದು ವರ್ಷದಿಂದ ನಿಯಮಿತವಾಗಿ ಬರೆಯುತ್ತಿದ್ದಾರೆ. ಕನ್ನಡ ಕರಾವಳಿಯನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳನ್ನು ಈ ಅಂಕಣದಲ್ಲಿ ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಾ ಬಂದಿದ್ದಾರೆ. ಎಸ್‌ಇಝೆಡ್ ನಿಂದ ಹಿಡಿದು ಕರಾವಳಿಯ ರಾಜಕೀಯದ ವರೆಗೆ, ಕೋಮುವಾದದಿಂದ ಹಿಡಿದು ಭಯೋತ್ಪಾದನೆಯವರೆಗೆ, ಧರ್ಮ ಮತ್ತು ಆಧ್ಯಾತ್ಮದ ಬಗ್ಗೆ ಚೊಕ್ಕಾಡಿಯವರ ’ತೀರದ ತಲ್ಲಣ’ ಅಂಕಣ ತನ್ನ ಪ್ರತಿಕ್ರಿಯೆಗಳನ್ನು ನೀಡಿದೆ.
ಬಹಳ ಸುಂದರವಾಗಿ ಮೂಡಿಬರುತ್ತಿದ್ದ ಈ ಅಂಕಣವನ್ನು ನಿಲ್ಲಿಸುವ ಮಾತನ್ನು ಈಗ ಚೊಕ್ಕಾಡಿಯವರು ಆಡಿದ್ದಾರೆ. ನನ್ನ ಬೇಸರಕ್ಕೆ ಇದೇ ಕಾರಣ.
ಚೊಕ್ಕಾಡಿಯವರ ಅಂಕಣ ಬರಹಗಳು ಕರಾವಳಿಯಲ್ಲಿ ಬಹಳಷ್ಟು ಚರ್ಚೆಯಾಗಿರಬಹುದು, ಅವರ ಅಂಕಣ ಬರಹಗಳನ್ನು ಇಷ್ಟಪಡದವರು ಅವರಿಗೆ ಬೆದರಿಕೆಯನ್ನು ಹಾಕಿರಬಹುದು, ಪತ್ರಿಕೆಯ ಮುಖ್ಯಸ್ಥರ ಮೇಲೆ ಈ ಅಂಕಣವನ್ನು ನಿಲ್ಲಿಸುವಂತೆ ಒತ್ತಡವನ್ನೂ ತಂದಿರಬಹುದು. ಒಂದು ಅಂಕಣ ಬರೆಹವೆಂದರೆ ಅದೆಲ್ಲ ಸಹಜ ಮತ್ತು ಅನಿವಾರ್ಯ. ಇದೆಲ್ಲ ಚೊಕ್ಕಾಡಿಯವರಿಗೆ ಗೊತ್ತಿಲ್ಲದ್ದೇನಲ್ಲ. ಆದರೆ ಅಕಾಲದಲ್ಲಿ ಅಂಕಣವೊಂದನ್ನು ನಿಲ್ಲಿಸಹೊರಟಿರುವ ಚೊಕ್ಕಾಡಿಯವರ ನಿರ್ಧಾರ ಮಾತ್ರ ಅತ್ಯಂತ ಆತುರದ್ದು ಮತ್ತು ಅನಗತ್ಯವಾದದ್ದು.
ಕರಾವಳಿಯ ಪರಿಸ್ಥಿತಿ ನಿಮಗೇ ಗೊತ್ತಿದೆ. ಹುಡುಗಿಯರು ಜೀನ್ಸ್ ಪ್ಯಾಂಟ್ ಹಾಕಿಕೊಂಡರೆ ಒಂದಷ್ಟು ಮಂದಿ ಸಂಸ್ಕೃತಿ ರಕ್ಷಕರ ಕಣ್ಣು ಕೆಂಪಾಗುತ್ತದೆ. ಹುಡುಗ-ಹುಡುಗಿ ರಸ್ತೆಯಲ್ಲಿ ನಿಂತು ಒಂದು ನಾಲ್ಕು ಮಾತನಾಡಲೂ ಸಂಸ್ಕೃತಿ ರಕ್ಷಕರ ಅಪ್ಪಣೆ ಪಡೆದುಕೊಳ್ಳಬೇಕು. ಹೇಮಂತ ಹೆಗಡೆಯವರು ಕುಂದಾಪುರದ ಬೈಂದೂರಿನಲ್ಲಿ ಚಾರ್ಲಿ ಚಾಪ್ಲಿನ್‌ನ ಮೊರ್ತಿ ಸ್ಥಾಪಿಸಲು ಸಾಧ್ಯವಿಲ್ಲ; ಏಕೆಂದರೆ ಚಾಪ್ಲಿನ್ ಒಬ್ಬ ಕ್ರಿಶ್ಚಿಯನ್ ಎಂಬ ಕಾರಣ ಮುಂದಿಡಲಾಗುತ್ತಿದೆ. ಬಪ್ಪ ಬ್ಯಾರಿಯನ್ನು ದೇವರೆಂದು ಪೂಜಿಸಿದ ಕರಾವಳಿ ಇವತ್ತು ಖಂಡಿತಾ ತೀವ್ರಗತಿಯ, ಆದರೆ ಅಪಾಯಕಾರಿಯಾದ, ಬದಲಾವಣೆಯನ್ನು ಕಾಣುತ್ತಿದೆ.
ಇಂಥ ಪರಿಸ್ಥಿತಿಯಲ್ಲೂ ’ತೀರದ ತಲ್ಲಣ’ ಹೊಸ ಸಾಧ್ಯತೆಗಳ ಬಗ್ಗೆ, ಹೊಸ ಭರವಸೆಗಳ ಬಗ್ಗೆ ಮಾತನಾಡುತ್ತಿತ್ತು. ಕರಾವಳಿಯ ಬದಲಾವಣೆಯನ್ನು ನೋಡಿ ಆತಂಕಿತರಾದವರ ಮನಸ್ಸಿನಲ್ಲಿ ಹೊಸ ಆಸೆಯನ್ನೂ ಹೊತ್ತಿಸಿತ್ತು. ಮುಂದೊಂದು ದಿನ ಕರಾವಳಿಯಲ್ಲಿ ಎಲ್ಲ ರೀತಿಯ ಭಾವತೀವ್ರತೆಗಳು ನಾಶವಾಗುತ್ತವೆ ಎಂಬ ಭರವಸೆಯನ್ನೂ ಹೊತ್ತಿಸುತ್ತಿತ್ತು. ಪ್ರಜಾವಾಣಿ ಕರಾವಳಿಯ ಉದ್ದಗಲವನ್ನೂ ತಲುಪುವ ಪತ್ರಿಕೆಯಾಗಿದ್ದರಿಂದ ’ತೀರದ ತಲ್ಲಣ’ ಕರಾವಳಿಯ ತವಕ ತಲ್ಲಣಗಳಿಗೆ ಸಮರ್ಥ ಉತ್ತರ ನೀಡಬಲ್ಲದು ಎಂಬ ನಂಬಿಕೆಯಿತ್ತು. ಹಾಗಾಗಿಯೇ ಅವರ ಅಂಕಣ ಬರಹದ ಅಗತ್ಯ ಕರಾವಳಿಗೆ ಬಹಳ ಅಗತ್ಯವಿತ್ತು.
ಆದರೆ ತಮ್ಮ ಬರಹವನ್ನು ಕರಾವಳಿಗರಿಂದ ದೂರ ಕೊಂಡುಹೋಗುತ್ತಾರೆ ಅಂದುಕೊಂಡಿರಲಿಲ್ಲ.
ಅರವಿಂದ ಚೊಕ್ಕಾಡಿಯವರು ಓದಿಕೊಂಡವರು, ತಿಳಿದವರು. ಮೇಲಾಗಿ ಶಿಕ್ಷಕರು. ಹಾಗಾಗಿ ಅವರಿಗೆ ಹೀಗೆ ಮಾಡಿ, ಹೀಗೆ ಮಾಡಬೇಡಿ ಎನ್ನುವ ಸ್ಥಿತಿಯಲ್ಲಂತೂ ನಾನಿಲ್ಲ. ಆದರೂ ಒಂದೇ ಒಂದು ಮಾತನ್ನು ಹೇಳಬೇಕೆನಿಸುತ್ತಿದೆ: "ಚೊಕ್ಕಾಡಿಯವರು ತಮ್ಮ ನಿರ್ಧಾರದ ಬಗ್ಗೆ ಇನ್ನೊಮ್ಮೆ ಆಲೋಚಿಸಲಿ, ಅಂಕಣವನ್ನು ನಿಲ್ಲಿಸದಿರಲಿ."
ವಿಜಯ ಜೋಶಿ
ಕಾಮೆಂಟ್‌ಗಳು
ಆದ್ರೆ ಬಿಟ್ಟು ಎಲ್ಲಿಗೆ ಹೋಗ್ತಾರೆ ಅನ್ನೋದೆ ತುಂಬಾ ಕುತೂಹಲ ನನಗೆ.
ಕರಾವಳಿಗಿಂತ ಚೆನ್ನಾಗಿರುವ ಸಮಸ್ಯೆಗಳೇ ಇಲ್ಲದ ಊರು ಯಾವುದಾದರೂ ಇದೆಯಾ??
ಅದಿರಲಿ ’ಬಪ್ಪ ಬ್ಯಾರಿಯನ್ನು ದೇವರೆಂದು ಪೂಜಿಸಿದ ಕರಾವಳಿ’ ಅಂತ ಏನೋ ಬರೆದೆರಲ್ವ ಏನದು?
ಬಪ್ಪ ಬ್ಯಾರಿ ಒಬ್ಬ ವ್ಯಾಪಾರಿ.ಅವನು ಶ್ರೀ ದುರ್ಗಾಪರಮೇಶ್ವರಿಯ ದೇವಸ್ಥಾನ ಕಟ್ಟಿಸಿದ್ದು ಬಪ್ಪನಾಡಿನಲ್ಲಿ.ಇವತ್ತಿಗೂ ಅವನ ಮನೆಯವರು ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸ್ತಾರೆ ಉತ್ಸವದ ಸಮಯದಲ್ಲಿ.
ಅವನನ್ನು ದೇವರೆಂದು ಪೂಜಿಸೋದು ನನಗಂತೂ ಗೊತ್ತಿಲ್ಲ.
ಇದು ಕೇವಲ ಮಾಹಿತಿಗಾಗಿ .ಆರ್ಗುಮೆಂಟ್ ಅಂದುಕೋಬೇಡಿ.
Please let us have a bedate on his column - whether it should be continued or not..
Vijay Joshi