ವಿಷಯಕ್ಕೆ ಹೋಗಿ

ಒಂದು ಖಾಸಗಿ ಪತ್ರ

ಅರವಿಂದ ಚೊಕ್ಕಾಡಿಯವರು ಮೂಡುಬಿದಿರೆಯಲ್ಲಿ ವಾಸಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಜಧಾನಿಯಂತಿರುವ ಮೂಡುಬಿದಿರೆಯಲ್ಲಿ ಇದ್ದುಕೊಂಡು ಇವರಷ್ಟು ಬರೆಯುತ್ತಿರುವವರು ಬಹುಷಃ ಮತ್ತಾರೂ ಇರಲಿಕ್ಕಿಲ್ಲ. ಚೊಕ್ಕಾಡಿಯವರು ನನ್ನಂತಹ ಸಾಮಾನ್ಯ ಓದುಗನೊಬ್ಬ ಒಂದು ವಾರಕ್ಕೆ ಓದಬಹುದಾದಷ್ಟನ್ನು ಒಂದು ವಾರದಲ್ಲಿ ತಾವು ಖುದ್ದು ಬರೆಯುತ್ತಾರೆ. ಅವರ ಓದಿನ ಮತ್ತು ಅರಿವಿನ ವ್ಯಾಪ್ತಿ ಅಷ್ಟಿದೆ.
ಅದಿರಲಿ, ಈ ಬರಹದ ವಿಷಯ ಬೇರೆಯೇ ಇದೆ.

ಪ್ರಜಾವಾಣಿ ಪತ್ರಿಕೆ ಕನ್ನಡ ಕರಾವಳಿಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆಯೇ ತನ್ನ ಆವೃತ್ತಿಯನ್ನು ಆರಂಭಿಸಿದೆ. ೧೯೪೮ರಲ್ಲೇ ಆರಂಭವಾದ ಪ್ರಜಾವಾಣಿ ಕರಾವಳಿಯಲ್ಲಿ ಸ್ವತಂತ್ರ ಆವೃತ್ತಿಯನ್ನು ಆರಂಭಿಸಿದ್ದು ಸ್ವಲ್ಪ ತಡವಾಯಿತು ಅಂತಲೇ ಹೇಳಬಹುದು. ಹಾಗೆ ತಡವಾಗಿಯಾದರೂ ತನ್ನ ಆವೃತ್ತಿಯನ್ನು ಕರಾವಳಿಯಲ್ಲಿ ಆರಂಭಿಸಿದ ಪ್ರಜಾವಾಣಿ ತನ್ನ ಓದುಗರಿಗೆ ಕಳೆದ ಒಂದೂವರೆ ವರ್ಷಗಳಿಂದ ಕರಾವಳಿಯ ಜಿಲ್ಲೆಗಳಾದ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆಂದೇ ಮೀಸಲಾದ ’ಕರಾವಳಿ’ ಎಂಬ ಸುದ್ದಿ ಪುರವಣಿಯೊಂದ ವಾರದಲ್ಲಿ ಆರು ದಿನ ಕೊಡುತ್ತಿದೆ. ನಾಲ್ಕು ಪುಟದ ಈ ಪುರವಣಿಯಲ್ಲಿ ಕಡಲ ತಡಿಯ ಸಮೃದ್ಧ ಸುದ್ದಿ, ಸುದ್ದಿ ವಿಶ್ಲೇಷಣೆ ಇರುತ್ತದೆ. ಒಟ್ಟಿನಲ್ಲಿ ಓದಲು ಖುಷಿಕೊಡುವ ದೈನಿಕ ಪುರವಣಿ ಇದು.

ಇದೇ ಪುರವಣಿಯಲ್ಲಿ ಪ್ರತಿ ಬುಧವಾರ ಅರವಿಂದ ಚೊಕ್ಕಾಡಿಯವರು ’ತೀರದ ತಲ್ಲಣ’ ಎಂಬ ಅಂಕಣವೊಂದನ್ನು ಕಳೆದೊಂದು ವರ್ಷದಿಂದ ನಿಯಮಿತವಾಗಿ ಬರೆಯುತ್ತಿದ್ದಾರೆ. ಕನ್ನಡ ಕರಾವಳಿಯನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳನ್ನು ಈ ಅಂಕಣದಲ್ಲಿ ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಾ ಬಂದಿದ್ದಾರೆ. ಎಸ್‌ಇಝೆಡ್ ನಿಂದ ಹಿಡಿದು ಕರಾವಳಿಯ ರಾಜಕೀಯದ ವರೆಗೆ, ಕೋಮುವಾದದಿಂದ ಹಿಡಿದು ಭಯೋತ್ಪಾದನೆಯವರೆಗೆ, ಧರ್ಮ ಮತ್ತು ಆಧ್ಯಾತ್ಮದ ಬಗ್ಗೆ ಚೊಕ್ಕಾಡಿಯವರ ’ತೀರದ ತಲ್ಲಣ’ ಅಂಕಣ ತನ್ನ ಪ್ರತಿಕ್ರಿಯೆಗಳನ್ನು ನೀಡಿದೆ.

ಬಹಳ ಸುಂದರವಾಗಿ ಮೂಡಿಬರುತ್ತಿದ್ದ ಈ ಅಂಕಣವನ್ನು ನಿಲ್ಲಿಸುವ ಮಾತನ್ನು ಈಗ ಚೊಕ್ಕಾಡಿಯವರು ಆಡಿದ್ದಾರೆ. ನನ್ನ ಬೇಸರಕ್ಕೆ ಇದೇ ಕಾರಣ.

ಚೊಕ್ಕಾಡಿಯವರ ಅಂಕಣ ಬರಹಗಳು ಕರಾವಳಿಯಲ್ಲಿ ಬಹಳಷ್ಟು ಚರ್ಚೆಯಾಗಿರಬಹುದು, ಅವರ ಅಂಕಣ ಬರಹಗಳನ್ನು ಇಷ್ಟಪಡದವರು ಅವರಿಗೆ ಬೆದರಿಕೆಯನ್ನು ಹಾಕಿರಬಹುದು, ಪತ್ರಿಕೆಯ ಮುಖ್ಯಸ್ಥರ ಮೇಲೆ ಈ ಅಂಕಣವನ್ನು ನಿಲ್ಲಿಸುವಂತೆ ಒತ್ತಡವನ್ನೂ ತಂದಿರಬಹುದು. ಒಂದು ಅಂಕಣ ಬರೆಹವೆಂದರೆ ಅದೆಲ್ಲ ಸಹಜ ಮತ್ತು ಅನಿವಾರ್ಯ. ಇದೆಲ್ಲ ಚೊಕ್ಕಾಡಿಯವರಿಗೆ ಗೊತ್ತಿಲ್ಲದ್ದೇನಲ್ಲ. ಆದರೆ ಅಕಾಲದಲ್ಲಿ ಅಂಕಣವೊಂದನ್ನು ನಿಲ್ಲಿಸಹೊರಟಿರುವ ಚೊಕ್ಕಾಡಿಯವರ ನಿರ್ಧಾರ ಮಾತ್ರ ಅತ್ಯಂತ ಆತುರದ್ದು ಮತ್ತು ಅನಗತ್ಯವಾದದ್ದು.

ಕರಾವಳಿಯ ಪರಿಸ್ಥಿತಿ ನಿಮಗೇ ಗೊತ್ತಿದೆ. ಹುಡುಗಿಯರು ಜೀನ್ಸ್ ಪ್ಯಾಂಟ್ ಹಾಕಿಕೊಂಡರೆ ಒಂದಷ್ಟು ಮಂದಿ ಸಂಸ್ಕೃತಿ ರಕ್ಷಕರ ಕಣ್ಣು ಕೆಂಪಾಗುತ್ತದೆ. ಹುಡುಗ-ಹುಡುಗಿ ರಸ್ತೆಯಲ್ಲಿ ನಿಂತು ಒಂದು ನಾಲ್ಕು ಮಾತನಾಡಲೂ ಸಂಸ್ಕೃತಿ ರಕ್ಷಕರ ಅಪ್ಪಣೆ ಪಡೆದುಕೊಳ್ಳಬೇಕು. ಹೇಮಂತ ಹೆಗಡೆಯವರು ಕುಂದಾಪುರದ ಬೈಂದೂರಿನಲ್ಲಿ ಚಾರ್ಲಿ ಚಾಪ್ಲಿನ್‌ನ ಮೊರ್ತಿ ಸ್ಥಾಪಿಸಲು ಸಾಧ್ಯವಿಲ್ಲ; ಏಕೆಂದರೆ ಚಾಪ್ಲಿನ್ ಒಬ್ಬ ಕ್ರಿಶ್ಚಿಯನ್ ಎಂಬ ಕಾರಣ ಮುಂದಿಡಲಾಗುತ್ತಿದೆ. ಬಪ್ಪ ಬ್ಯಾರಿಯನ್ನು ದೇವರೆಂದು ಪೂಜಿಸಿದ ಕರಾವಳಿ ಇವತ್ತು ಖಂಡಿತಾ ತೀವ್ರಗತಿಯ, ಆದರೆ ಅಪಾಯಕಾರಿಯಾದ, ಬದಲಾವಣೆಯನ್ನು ಕಾಣುತ್ತಿದೆ.

ಇಂಥ ಪರಿಸ್ಥಿತಿಯಲ್ಲೂ ’ತೀರದ ತಲ್ಲಣ’ ಹೊಸ ಸಾಧ್ಯತೆಗಳ ಬಗ್ಗೆ, ಹೊಸ ಭರವಸೆಗಳ ಬಗ್ಗೆ ಮಾತನಾಡುತ್ತಿತ್ತು. ಕರಾವಳಿಯ ಬದಲಾವಣೆಯನ್ನು ನೋಡಿ ಆತಂಕಿತರಾದವರ ಮನಸ್ಸಿನಲ್ಲಿ ಹೊಸ ಆಸೆಯನ್ನೂ ಹೊತ್ತಿಸಿತ್ತು. ಮುಂದೊಂದು ದಿನ ಕರಾವಳಿಯಲ್ಲಿ ಎಲ್ಲ ರೀತಿಯ ಭಾವತೀವ್ರತೆಗಳು ನಾಶವಾಗುತ್ತವೆ ಎಂಬ ಭರವಸೆಯನ್ನೂ ಹೊತ್ತಿಸುತ್ತಿತ್ತು. ಪ್ರಜಾವಾಣಿ ಕರಾವಳಿಯ ಉದ್ದಗಲವನ್ನೂ ತಲುಪುವ ಪತ್ರಿಕೆಯಾಗಿದ್ದರಿಂದ ’ತೀರದ ತಲ್ಲಣ’ ಕರಾವಳಿಯ ತವಕ ತಲ್ಲಣಗಳಿಗೆ ಸಮರ್ಥ ಉತ್ತರ ನೀಡಬಲ್ಲದು ಎಂಬ ನಂಬಿಕೆಯಿತ್ತು. ಹಾಗಾಗಿಯೇ ಅವರ ಅಂಕಣ ಬರಹದ ಅಗತ್ಯ ಕರಾವಳಿಗೆ ಬಹಳ ಅಗತ್ಯವಿತ್ತು.

ಆದರೆ ತಮ್ಮ ಬರಹವನ್ನು ಕರಾವಳಿಗರಿಂದ ದೂರ ಕೊಂಡುಹೋಗುತ್ತಾರೆ ಅಂದುಕೊಂಡಿರಲಿಲ್ಲ.

ಅರವಿಂದ ಚೊಕ್ಕಾಡಿಯವರು ಓದಿಕೊಂಡವರು, ತಿಳಿದವರು. ಮೇಲಾಗಿ ಶಿಕ್ಷಕರು. ಹಾಗಾಗಿ ಅವರಿಗೆ ಹೀಗೆ ಮಾಡಿ, ಹೀಗೆ ಮಾಡಬೇಡಿ ಎನ್ನುವ ಸ್ಥಿತಿಯಲ್ಲಂತೂ ನಾನಿಲ್ಲ. ಆದರೂ ಒಂದೇ ಒಂದು ಮಾತನ್ನು ಹೇಳಬೇಕೆನಿಸುತ್ತಿದೆ: "ಚೊಕ್ಕಾಡಿಯವರು ತಮ್ಮ ನಿರ್ಧಾರದ ಬಗ್ಗೆ ಇನ್ನೊಮ್ಮೆ ಆಲೋಚಿಸಲಿ, ಅಂಕಣವನ್ನು ನಿಲ್ಲಿಸದಿರಲಿ."
ವಿಜಯ ಜೋಶಿ

ಕಾಮೆಂಟ್‌ಗಳು

Sushrutha Dodderi ಹೇಳಿದ್ದಾರೆ…
ನಿಜಕ್ಕೂ ಬೇಸರವಾಗ್ತಿದೆ ವಿಜಯ್..
ವಿ.ರಾ.ಹೆ. ಹೇಳಿದ್ದಾರೆ…
ಕರಾವಳಿಯನ್ನು ಯಾರಿಗಾದ್ರೂ ಗುತ್ತಿಗೆ ಕೊಟ್ಟಿದ್ದೀರಾ? ಅಲ್ಲಿ ಸರಿಯಾಗಿರುವ ಜನ ಸರಿಯಾಗಿಯೇ ಇದ್ದಾರೆ. ಕೆಲವರು ಮಾತ್ರ ಇಲ್ಲದ ಸುಳ್ಳು ಸುದ್ದಿ ಹರಡಿ ಕರಾವಳಿ ಬಗ್ಗೆ ಅಪಪ್ರಚಾರ ಮಾಡುತ್ತಲೇ ಇದ್ದಾರೆ. ಇದನ್ನು ಕರಾವಳಿ ಜನರೇ ಮಟ್ಟ ಹಾಕಬೇಕು ಹೊರತು, ವ್ಯವಸ್ಥಿತ ಕುತಂತ್ರಕ್ಕೆ ಬಲಿಯಾಗಿ ಕರಾವಳಿಯನ್ನು ಬಿಟ್ಟು ಹೋಗಬೇಕೆನಿಸುತ್ತಿದೆ ಎನ್ನುವುದು total nonsense.
ಸಂದೀಪ್ ಕಾಮತ್ ಹೇಳಿದ್ದಾರೆ…
ಚೊಕ್ಕಾಡಿಯವರು ಕರಾವಳಿ ಬಿಟ್ಟು ಹೋಗುವ ಯೋಚನೆ ಮಾಡಿದ್ದು ಅವರ ವೈಯುಕ್ತಿಕ ಅಭಿಪ್ರಾಯ ..
ಆದ್ರೆ ಬಿಟ್ಟು ಎಲ್ಲಿಗೆ ಹೋಗ್ತಾರೆ ಅನ್ನೋದೆ ತುಂಬಾ ಕುತೂಹಲ ನನಗೆ.
ಕರಾವಳಿಗಿಂತ ಚೆನ್ನಾಗಿರುವ ಸಮಸ್ಯೆಗಳೇ ಇಲ್ಲದ ಊರು ಯಾವುದಾದರೂ ಇದೆಯಾ??

ಅದಿರಲಿ ’ಬಪ್ಪ ಬ್ಯಾರಿಯನ್ನು ದೇವರೆಂದು ಪೂಜಿಸಿದ ಕರಾವಳಿ’ ಅಂತ ಏನೋ ಬರೆದೆರಲ್ವ ಏನದು?
ಬಪ್ಪ ಬ್ಯಾರಿ ಒಬ್ಬ ವ್ಯಾಪಾರಿ.ಅವನು ಶ್ರೀ ದುರ್ಗಾಪರಮೇಶ್ವರಿಯ ದೇವಸ್ಥಾನ ಕಟ್ಟಿಸಿದ್ದು ಬಪ್ಪನಾಡಿನಲ್ಲಿ.ಇವತ್ತಿಗೂ ಅವನ ಮನೆಯವರು ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸ್ತಾರೆ ಉತ್ಸವದ ಸಮಯದಲ್ಲಿ.
ಅವನನ್ನು ದೇವರೆಂದು ಪೂಜಿಸೋದು ನನಗಂತೂ ಗೊತ್ತಿಲ್ಲ.
ಇದು ಕೇವಲ ಮಾಹಿತಿಗಾಗಿ .ಆರ್ಗುಮೆಂಟ್ ಅಂದುಕೋಬೇಡಿ.
Unknown ಹೇಳಿದ್ದಾರೆ…
ನಾನು ಮೊದಲು ಅವರ ಲೇಖನವನ್ನು ಅಷ್ಟಾಗಿ ಓದಿರಲಿಲ್ಲ ಮೊನ್ನೆ ಪ್ರಜಾವಾಣಿಯಲ್ಲಿ ಬಂದ ಶೌಯಱ ಸಾಹಸದ ಆಚೆಗೂ ದೇಶಪ್ರೇಮದ ಆಯಾಮ ಎನ್ನುವ ಲೇಖನ ತುಂಬಾ ಚೆನ್ನಾಗಿದೆ. ಇಂತಹ ಲೇಖಕರು ಕರಾವಳಿಯನ್ನು ಬಿಟ್ಟು ಹೋಗುವ ನಿಧಾಱರ ಮಾಡಿರುವುದು ತುಂಬಾ ಬೇಸರದ ವಿಷಯ.
ವಿಜಯ್ ಜೋಶಿ ಹೇಳಿದ್ದಾರೆ…
The debate is not about where Chokkadi has to goif he decides to leave the Coastal Karnataka, nor is it about the condition of Coastal strip.

Please let us have a bedate on his column - whether it should be continued or not..

Vijay Joshi
ಸಂದೀಪ್ ಕಾಮತ್ ಹೇಳಿದ್ದಾರೆ…
ಡಿಬೇಟ್ ಮಾಡಿ ಶುಭವಾಗಲಿ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ