ವಿಷಯಕ್ಕೆ ಹೋಗಿ

“ಮಡಿಕ್ಕಳಿ ಸಾರ್!”

ಒಂದು ತಿಂಗಳಿಗೂ ಮಿಕ್ಕಿ ಮಾಡಿದ ಕೆಲಸವೊಂದು ಅಂತಿಮ ಹಂತಕ್ಕೆ ಬಂದಿದೆ. ಅದರ ಕೆಲಸದ ನಿಮಿತ್ತ ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ಮೂರು ದಿನ ಬೆಂಗಳೂರಲ್ಲಿದ್ದು ಮೊನ್ನೆ ಮಂಗಳವಾರ ಧರ್ಮಸ್ಥಳಕ್ಕೆ ಹೋಗುವ ಬಸ್ ಹತ್ತಿದೆ. ಬಸ್ ತನ್ನ ಪಯಣ ಆರಂಭಿಸಿತು. ಇನ್ನೂ ಬೆಂಗಳೂರನ್ನು ಬಸ್ಸು ಬಿಟ್ಟಿರಲಿಲ್ಲ. ಬಿಸಿಲು ತೀವ್ರವಾಗಿದ್ದ ಕಾರಣ ಬಾಯಾರಿಕೆ ಜೋರಾಗಿತ್ತು.

ಬಸ್ಸು ಅದ್ಯಾವುದೋ ಸಿಗ್ನಲ್ಲಿನ ಬಳಿ ಬಂದು ನಿಂತಿತು. ಬಸ್ ನಿಂತ ಕೂಡಲೇ ಒಂದಿಷ್ಟು ಮಂದಿ ಹುಡುಗರು "ಮಜ್ಗೆ ಸಾರ್ ಮಜ್ಗೆ, ತಂಪು ಮಜ್ಗೆ" ಅಂತ ಕೂಗುತ್ತಾ ತಂಪಾದ ನಂದಿನಿ ಮಜ್ಜಿಗೆ ಪ್ಯಾಕೆಟ್ ಮಾರಲು ಬಸ್ಸನ್ನೇರಿದರು. ಅವರೆಲ್ಲರೂ ಹತ್ತರಿಂದ ಹದಿನಾಲ್ಕರ ನಡುವಿನ ವಯಸ್ಸಿನವರು.

ನನಗೂ ಬಾಯಾರಿಕೆ ತೀವ್ರವಾಗಿದ್ದ ಕಾರಣ ಒಬ್ಬನನ್ನು ಕರೆದು "ಒಂದು ಪ್ಯಾಕ್ ಮಜ್ಜಿಗೆಗೆ ಎಷ್ಟು" ಅಂತ ಕೇಳಿದೆ. "ಏಳ್ರುಪಾಯ್ ಸಾರ್" ಅಂದ.

"ಸರಿ, ಒಂದು ಪ್ಯಾಕ್ ಕೊಡು" ಅಂದೆ.

ಒಂದು ಪ್ಯಾಕ್ ಮಜ್ಜಿಗೆಯನ್ನು ಅವನಿಂದ ಇಸಿದುಕೊಂಡು ಅವನಿಗೆ ಹತ್ತು ರೂಪಾಯಿ ನೋಟು ಕೊಟ್ಟೆ. ಆ ಹುಡುಗ "ಚಿಲ್ರೆ ಕೊಡಿ ಸಾರ್" ಎಂದ. ನನ್ನ ಬಳಿ ಏಳು ರೂಪಾಯಿ ಚಿಲ್ಲರೆ ಇರಲಿಲ್ಲ. "ಚಿಲ್ರೆ ಇಲ್ಲಪ್ಪಾ, ನೀನೇ ಕೊಡು" ಎಂದೆ. ಊಹೂಂ, ಆ ಹುಡುಗ ಎಷ್ಟೇ ತಡಕಾಡಿದರೂ ಅವನಿಗೆ ನನಗೆ ಕೊಡಲು ಬೇಕಾದ ಮೂರು ರೂಪಾಯಿ ಚಿಲ್ಲರೆ ಸಿಗಲಿಲ್ಲ.

"ಏನ್ಮಾಡ್ಲಿ ಸಾರ್? ಚಿಲ್ರೆ ಇಲ್ಲ" ಎಂದ. ನನಗೂ ಏನು ಮಾಡಬೇಕೆಂದು ತೋಚಲಿಲ್ಲ. ಮತ್ತೊಮ್ಮೆ ಆ ಹುಡುಗನ ಬಳಿ ಚಿಲ್ಲರೆ ವಾಪಸ್ ತೆಗೆದುಕೊಳ್ಳೋಣವೆಂದರೆ ನಾನು ಮತ್ತೊಮ್ಮೆ ಆ ಮಾರ್ಗದಲ್ಲಿ ಸದ್ಯೋಭವಿಷ್ಯತ್ತಿನಲ್ಲಿ ಪ್ರಯಾಣ ಮಾಡುವ ಯೋಚನೆ ಇಟ್ಟುಕೊಂಡಿರಲಿಲ್ಲ. ಅದಲ್ಲದೆ ಮೂರು ರೂಪಾಯಿ ಸಿಗದಿದ್ದರೆ ನಾನೇನೂ ಮುಳುಗಿ ಹೋಗುವುದಿಲ್ಲ ಅಂತ ಅಂದುಕೊಂಡು "ಚಿಲ್ರೆ ಈಗ ನಿನ್ ಹತ್ರಾನೆ ಇರ್ಲಿ. ನಾನು ನಾಳೆ ಇದೇ ಬಸ್ನಲ್ಲಿ ಬರ್ತಿನಿ. ಆಗ ಕೊಡುವಿಯಂತೆ" ಎಂದು ಹೇಳಿದೆ. ಆದರೆ ಆ ಹುಡುಗನಿಗೆ ಅದು ಇಷ್ಟವಾಗಲಿಲ್ಲವೇನೋ. ಸ್ವಲ್ಪ ಅತ್ತಿತ್ತ ನೋಡಿದ. ನಂತರ ಧಡಕ್ಕನೆ ಬಸ್ಸಿನಿಂದ ಜಿಗಿದು ಎತ್ತಲೋ ಓಡಿಹೋದ. ನಾನು ಒಮ್ಮೆ ನಿರಾಳವಾಗಿ ಉಸಿರಾಡಿಕೊಂಡೆ.

ಸಿಗ್ನಲ್ ಬಿಟ್ಟು ಬಸ್ಸು ಇನ್ನೇನು ಮುಂದಕ್ಕೆ ಕದಲಬೇಕು ಎನ್ನುವ ಹವಣಿಕೆಯಲ್ಲಿತ್ತು. ನಾನು ಯಾವುದೋ ಲೋಕದಲ್ಲಿ ಏನೋ ಯೋಚಿಸುತ್ತಿದ್ದೆ. ಎಲ್ಲಿಂದಲೋ ಥಟ್ಟನೆ ಓಡಿಬಂದ ಆ ಹುಡುಗ ನನ್ನ ಮಡಿಲ ಮೇಲೆ ಐದು ರೂಪಾಯಿಯ ನೋಟೊಂದನ್ನಿಟ್ಟು ವಾಪಸ್ ಓಡಲು ಆರಂಭಿಸಿದ.

"ಇಲ್ಲಿ ಕೇಳು, ನೀನು ನನಗೆ ಕೊಡಬೇಕಾಗಿದ್ದು ಮೂರು ರೂಪಾಯಿ ಮಾತ್ರ, ಐದಲ್ಲ. ಇದ್ಯಾಕೆ ಐದು ರೂಪಾಯಿ ಕೊಟ್ಟಿದ್ದೀಯಾ? ಇನ್ನೊಮ್ಮೆ ಕೊಡುವಿಯಂತೆ, ಈಗ ನಿನ್ ಹತ್ರಾನೆ ಇಟ್ಕೊಂಡಿರು" ಅಂತ ನಾನು ಕೂಗಿದೆ.

ಆ ಹುಡುಗ ನನ್ನ ಕಡೆ ಮುಗ್ಧತೆಯಿಂದ - ಆದರೆ ಅಷ್ಟೇ ಪ್ರಾಮಾಣಿಕತೆಯಿಂದ - ತಿರುಗಿದ. ಎರಡು ಕ್ಷಣ ನನ್ನತ್ತ ನೋಡಿ "ಮಡಿಕ್ಕಳಿ ಸಾರ್!" ಅಂದ. ನನ್ನ ಪ್ರತಿಕ್ರಿಯೆಗೂ ಕಾಯದೆ ಬಸ್ಸಿನಿಂದಿಳಿದು ಓಡಿಹೋದ. ನಾನು ಆ ಶ್ರಮಜೀವಿಯ ಕೈಯಲ್ಲಿ ಎರಡು ರೂಪಾಯಿ ಸಾಲಗಾರನಾದೆ!

ಬಿಡಿ, ಒಂದು ವೇಳೆ ಆತ ನನಗೆ ಮೂರು ರೂಪಾಯಿ ಕೊಡದೆ ಇದ್ದಿದ್ದರೆ ಅಥವಾ ನಾನು ಅವನಿಗೆ ಎರಡು ರೂಪಾಯಿಯನ್ನು ಕೊಡದೇ ಇದ್ದರೆ ಜಗತ್ತೇನೂ ಅಂತ್ಯವಾಗುವುದಿಲ್ಲ. ನಾನೂ ಆ ಹುಡುಗನೂ ದಿವಾಳಿಯೂ ಆಗುವುದಿಲ್ಲ. ಆದರೆ ಕಷ್ಟಪಟ್ಟು ದುಡಿಯುವ ಆ ಮಜ್ಜಿಗೆ ಹುಡುಗನ ಪ್ರಾಮಾಣಿಕತೆಗೆ ಒಂದು 'ನಮಸ್ತೆ' ಎನ್ನದಿದ್ದರೆ ಸರಿಯಾಗದು ಅನ್ನಿಸಿತು. ಹಾಗಾಗಿಯೇ ಈ ಪುಟ್ಟ ಬರಹ ಬರೆದೆ.

(ವಿಶೇಷ ಮನವಿ: ಸಾಧ್ಯವಾದರೆ ಓದುಗ ಮಿತ್ರರು ಈ ನನ್ನ ಪುಟ್ಟ ಬರಹವನ್ನು ನಮ್ಮ ಘನ ಶಾಸಕರಾದ ಸಂಪಂಗಿಯವರಿಗೆ ಓದಲು ಕೊಡಿ. ನಾನು ಕೃತಾರ್ಥನಾಗುತ್ತೇನೆ!)

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
hudugana pramanikatege nannadu ondu "namaskara"....
Unknown ಹೇಳಿದ್ದಾರೆ…
ಆ ಎಮ್.ಎಲ್.ಎ. ಸಂಪಂಗಿಗಿಂತ ಆ ಮಜ್ಜಿಗೆ ಮಾರುವ ಹುಡುಗನೇ ಎಷ್ಟೋ ಪಾಲಿಗೆ ಲೇಸು
ಲೇಖನ ಚೆನ್ನಾಗಿದೆ.
ವಿ.ರಾ.ಹೆ. ಹೇಳಿದ್ದಾರೆ…
vishya enta gottunta? majjige packet bele 5 Rupayi maatra. Adru aa huDugana chilre tandu kotnalla adakke mechbeku.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ