ಒಂದು ತಿಂಗಳಿಗೂ ಮಿಕ್ಕಿ ಮಾಡಿದ ಕೆಲಸವೊಂದು ಅಂತಿಮ ಹಂತಕ್ಕೆ ಬಂದಿದೆ. ಅದರ ಕೆಲಸದ ನಿಮಿತ್ತ ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ಮೂರು ದಿನ ಬೆಂಗಳೂರಲ್ಲಿದ್ದು ಮೊನ್ನೆ ಮಂಗಳವಾರ ಧರ್ಮಸ್ಥಳಕ್ಕೆ ಹೋಗುವ ಬಸ್ ಹತ್ತಿದೆ. ಬಸ್ ತನ್ನ ಪಯಣ ಆರಂಭಿಸಿತು. ಇನ್ನೂ ಬೆಂಗಳೂರನ್ನು ಬಸ್ಸು ಬಿಟ್ಟಿರಲಿಲ್ಲ. ಬಿಸಿಲು ತೀವ್ರವಾಗಿದ್ದ ಕಾರಣ ಬಾಯಾರಿಕೆ ಜೋರಾಗಿತ್ತು.
ಬಸ್ಸು ಅದ್ಯಾವುದೋ ಸಿಗ್ನಲ್ಲಿನ ಬಳಿ ಬಂದು ನಿಂತಿತು. ಬಸ್ ನಿಂತ ಕೂಡಲೇ ಒಂದಿಷ್ಟು ಮಂದಿ ಹುಡುಗರು "ಮಜ್ಗೆ ಸಾರ್ ಮಜ್ಗೆ, ತಂಪು ಮಜ್ಗೆ" ಅಂತ ಕೂಗುತ್ತಾ ತಂಪಾದ ನಂದಿನಿ ಮಜ್ಜಿಗೆ ಪ್ಯಾಕೆಟ್ ಮಾರಲು ಬಸ್ಸನ್ನೇರಿದರು. ಅವರೆಲ್ಲರೂ ಹತ್ತರಿಂದ ಹದಿನಾಲ್ಕರ ನಡುವಿನ ವಯಸ್ಸಿನವರು.
ನನಗೂ ಬಾಯಾರಿಕೆ ತೀವ್ರವಾಗಿದ್ದ ಕಾರಣ ಒಬ್ಬನನ್ನು ಕರೆದು "ಒಂದು ಪ್ಯಾಕ್ ಮಜ್ಜಿಗೆಗೆ ಎಷ್ಟು" ಅಂತ ಕೇಳಿದೆ. "ಏಳ್ರುಪಾಯ್ ಸಾರ್" ಅಂದ.
"ಸರಿ, ಒಂದು ಪ್ಯಾಕ್ ಕೊಡು" ಅಂದೆ.
ಒಂದು ಪ್ಯಾಕ್ ಮಜ್ಜಿಗೆಯನ್ನು ಅವನಿಂದ ಇಸಿದುಕೊಂಡು ಅವನಿಗೆ ಹತ್ತು ರೂಪಾಯಿ ನೋಟು ಕೊಟ್ಟೆ. ಆ ಹುಡುಗ "ಚಿಲ್ರೆ ಕೊಡಿ ಸಾರ್" ಎಂದ. ನನ್ನ ಬಳಿ ಏಳು ರೂಪಾಯಿ ಚಿಲ್ಲರೆ ಇರಲಿಲ್ಲ. "ಚಿಲ್ರೆ ಇಲ್ಲಪ್ಪಾ, ನೀನೇ ಕೊಡು" ಎಂದೆ. ಊಹೂಂ, ಆ ಹುಡುಗ ಎಷ್ಟೇ ತಡಕಾಡಿದರೂ ಅವನಿಗೆ ನನಗೆ ಕೊಡಲು ಬೇಕಾದ ಮೂರು ರೂಪಾಯಿ ಚಿಲ್ಲರೆ ಸಿಗಲಿಲ್ಲ.
"ಏನ್ಮಾಡ್ಲಿ ಸಾರ್? ಚಿಲ್ರೆ ಇಲ್ಲ" ಎಂದ. ನನಗೂ ಏನು ಮಾಡಬೇಕೆಂದು ತೋಚಲಿಲ್ಲ. ಮತ್ತೊಮ್ಮೆ ಆ ಹುಡುಗನ ಬಳಿ ಚಿಲ್ಲರೆ ವಾಪಸ್ ತೆಗೆದುಕೊಳ್ಳೋಣವೆಂದರೆ ನಾನು ಮತ್ತೊಮ್ಮೆ ಆ ಮಾರ್ಗದಲ್ಲಿ ಸದ್ಯೋಭವಿಷ್ಯತ್ತಿನಲ್ಲಿ ಪ್ರಯಾಣ ಮಾಡುವ ಯೋಚನೆ ಇಟ್ಟುಕೊಂಡಿರಲಿಲ್ಲ. ಅದಲ್ಲದೆ ಮೂರು ರೂಪಾಯಿ ಸಿಗದಿದ್ದರೆ ನಾನೇನೂ ಮುಳುಗಿ ಹೋಗುವುದಿಲ್ಲ ಅಂತ ಅಂದುಕೊಂಡು "ಚಿಲ್ರೆ ಈಗ ನಿನ್ ಹತ್ರಾನೆ ಇರ್ಲಿ. ನಾನು ನಾಳೆ ಇದೇ ಬಸ್ನಲ್ಲಿ ಬರ್ತಿನಿ. ಆಗ ಕೊಡುವಿಯಂತೆ" ಎಂದು ಹೇಳಿದೆ. ಆದರೆ ಆ ಹುಡುಗನಿಗೆ ಅದು ಇಷ್ಟವಾಗಲಿಲ್ಲವೇನೋ. ಸ್ವಲ್ಪ ಅತ್ತಿತ್ತ ನೋಡಿದ. ನಂತರ ಧಡಕ್ಕನೆ ಬಸ್ಸಿನಿಂದ ಜಿಗಿದು ಎತ್ತಲೋ ಓಡಿಹೋದ. ನಾನು ಒಮ್ಮೆ ನಿರಾಳವಾಗಿ ಉಸಿರಾಡಿಕೊಂಡೆ.
ಸಿಗ್ನಲ್ ಬಿಟ್ಟು ಬಸ್ಸು ಇನ್ನೇನು ಮುಂದಕ್ಕೆ ಕದಲಬೇಕು ಎನ್ನುವ ಹವಣಿಕೆಯಲ್ಲಿತ್ತು. ನಾನು ಯಾವುದೋ ಲೋಕದಲ್ಲಿ ಏನೋ ಯೋಚಿಸುತ್ತಿದ್ದೆ. ಎಲ್ಲಿಂದಲೋ ಥಟ್ಟನೆ ಓಡಿಬಂದ ಆ ಹುಡುಗ ನನ್ನ ಮಡಿಲ ಮೇಲೆ ಐದು ರೂಪಾಯಿಯ ನೋಟೊಂದನ್ನಿಟ್ಟು ವಾಪಸ್ ಓಡಲು ಆರಂಭಿಸಿದ.
"ಇಲ್ಲಿ ಕೇಳು, ನೀನು ನನಗೆ ಕೊಡಬೇಕಾಗಿದ್ದು ಮೂರು ರೂಪಾಯಿ ಮಾತ್ರ, ಐದಲ್ಲ. ಇದ್ಯಾಕೆ ಐದು ರೂಪಾಯಿ ಕೊಟ್ಟಿದ್ದೀಯಾ? ಇನ್ನೊಮ್ಮೆ ಕೊಡುವಿಯಂತೆ, ಈಗ ನಿನ್ ಹತ್ರಾನೆ ಇಟ್ಕೊಂಡಿರು" ಅಂತ ನಾನು ಕೂಗಿದೆ.
ಆ ಹುಡುಗ ನನ್ನ ಕಡೆ ಮುಗ್ಧತೆಯಿಂದ - ಆದರೆ ಅಷ್ಟೇ ಪ್ರಾಮಾಣಿಕತೆಯಿಂದ - ತಿರುಗಿದ. ಎರಡು ಕ್ಷಣ ನನ್ನತ್ತ ನೋಡಿ "ಮಡಿಕ್ಕಳಿ ಸಾರ್!" ಅಂದ. ನನ್ನ ಪ್ರತಿಕ್ರಿಯೆಗೂ ಕಾಯದೆ ಬಸ್ಸಿನಿಂದಿಳಿದು ಓಡಿಹೋದ. ನಾನು ಆ ಶ್ರಮಜೀವಿಯ ಕೈಯಲ್ಲಿ ಎರಡು ರೂಪಾಯಿ ಸಾಲಗಾರನಾದೆ!
ಬಿಡಿ, ಒಂದು ವೇಳೆ ಆತ ನನಗೆ ಮೂರು ರೂಪಾಯಿ ಕೊಡದೆ ಇದ್ದಿದ್ದರೆ ಅಥವಾ ನಾನು ಅವನಿಗೆ ಎರಡು ರೂಪಾಯಿಯನ್ನು ಕೊಡದೇ ಇದ್ದರೆ ಜಗತ್ತೇನೂ ಅಂತ್ಯವಾಗುವುದಿಲ್ಲ. ನಾನೂ ಆ ಹುಡುಗನೂ ದಿವಾಳಿಯೂ ಆಗುವುದಿಲ್ಲ. ಆದರೆ ಕಷ್ಟಪಟ್ಟು ದುಡಿಯುವ ಆ ಮಜ್ಜಿಗೆ ಹುಡುಗನ ಪ್ರಾಮಾಣಿಕತೆಗೆ ಒಂದು 'ನಮಸ್ತೆ' ಎನ್ನದಿದ್ದರೆ ಸರಿಯಾಗದು ಅನ್ನಿಸಿತು. ಹಾಗಾಗಿಯೇ ಈ ಪುಟ್ಟ ಬರಹ ಬರೆದೆ.
(ವಿಶೇಷ ಮನವಿ: ಸಾಧ್ಯವಾದರೆ ಓದುಗ ಮಿತ್ರರು ಈ ನನ್ನ ಪುಟ್ಟ ಬರಹವನ್ನು ನಮ್ಮ ಘನ ಶಾಸಕರಾದ ಸಂಪಂಗಿಯವರಿಗೆ ಓದಲು ಕೊಡಿ. ನಾನು ಕೃತಾರ್ಥನಾಗುತ್ತೇನೆ!)
ಕಾಮೆಂಟ್‌ಗಳು
ಲೇಖನ ಚೆನ್ನಾಗಿದೆ.