ವಿಷಯಕ್ಕೆ ಹೋಗಿ

ಕನ್ನಡ ಪುಸ್ತಕಗಳು ಹೇಗಿರಬೇಕು?


ನನಗೆ ಪತ್ರಿಕೋದ್ಯಮ ಮತ್ತು ಬರವಣಿಗೆಯ ಬಗ್ಗೆ ಅನುಮಾನಗಳು ಮೂಡಿದಾಗ, ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಲು ನಾನು ಆಯ್ಕೆಮಾಡಿಕೊಳ್ಳುವ ವ್ಯಕ್ತಿಗಳ ಪೈಕಿ ನಮ್ಮ ಮನೆಯ ಸಮೀಪದಲ್ಲೇ ಇರುವ ಗಣಪತಿ ಎಂ. ಎಂ. ಅವರೂ ಒಬ್ಬರು. ವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ವಿದ್ಯಾರ್ಥಿ ದೆಸೆಯಿಂದಲೂ ಪ್ರಗತಿಪರ ಚಳವಳಿಯೊಂದಿಗೆ ಬೆಳೆದುಬಂದವರು. ನಾನೊಬ್ಬ ಪ್ರಗತಿವಾದಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವವರು. ಜೊತೆಗೆ ಕನ್ನಡ ಭಾಷೆ, ಕನ್ನಡ ಪುಸ್ತಕಗಳ ಬಗ್ಗೆ ಅಭಿಮಾನ ಇರುವವರು.

ಒಮ್ಮೆ ಹೀಗೆ ಅವರ ಮನೆಗೆ ಹೋಗಿದ್ದಾಗ ಕನ್ನಡ ಪುಸ್ತಕಗಳ ಬಗ್ಗೆ ನನ್ನ ಮತ್ತು ಅವರ ನಡುವೆ ನಡೆದ ಸಣ್ಣ ಮಾತುಕತೆಯ ಬಗ್ಗೆ ನಿಮ್ಮ ಮುಂದೆ ಪ್ರಸ್ತಾಪ ಮಾಡಬೇಕೆನಿಸುತ್ತಿದೆ.

ನಾನು ಗಣಪತಿಯವರ ಮನೆಗೆ ಹೋದಾಗ ಅವರು ಆಗತಾನೇ ಕೊಂಡುತಂದಿದ್ದ ಯಾವುದೋ ಪುಸ್ತಕದ ಪುಟಗಳನ್ನು ತಿರುವಿ ಹಾಕುತ್ತಿದ್ದರು. ನನ್ನನ್ನು ಕಂಡೊಡನೆಯೇ ಒಮ್ಮೆ ಮುಗುಳ್ನಕ್ಕು ಒಂದೆರಡು ಪುಸ್ತಕಗಳನ್ನು ನನ್ನ ಮುಂದಿಟ್ಟರು. ಪುಸ್ತಕಗಳನ್ನು ಕಂಡೊಡನೆಯೇ ನಾನು ಕೆಲವೇ ದಿನಗಳ ಹಿಂದೆ ಕೊಂಡು ತಂದಿದ್ದ ಹೆಗ್ಗೋಡಿನ ಅಕ್ಷರ ಪ್ರಕಾಶನದ 'ಗೋಪಾಲಕೃಷ್ಣ ಅಡಿಗ ಅವರ ಆಯ್ದ ಕವಿತೆಗಳು' ಪುಸ್ತಕ ನೆನಪಿಗೆ ಬಂತು. ಈ ಪುಸ್ತಕದ ಮುದ್ರಣ, ಪುಟ ವಿನ್ಯಾಸ, ಕಾಗದದ ಗುಣಮಟ್ಟ ಇವೆಲ್ಲವೂ ಶ್ರೇಷ್ಠ ದರ್ಜೆಯಲ್ಲಿಯೇ ಇವೆಯಾದರೂ ಪುಸ್ತಕದ ಬೆಲೆ ತುಸು ಹೆಚ್ಚಾಯಿತು ಎಂಬ ಭಾವನೆ ನನ್ನಲ್ಲಿತ್ತು. ಇದೇ ವಿಚಾರವಾಗಿ ಗಣಪತಿಯವರಲ್ಲಿಯೂ ಕೇಳಿದೆ.

"ನಾನು ಮೊನ್ನೆಯಷ್ಟೆ ಅಕ್ಷರ ಪ್ರಕಾಶನದವರ ಗೋಪಾಲಕೃಷ್ಣ ಅಡಿಗ ಅವರ ಆಯ್ದ ಕವಿತೆಗಳು ಎಂಬ ಪುಸ್ತಕ ತಂದೆ. ಪುಸ್ತಕವೇನೋ ಬಹಳ ಚೆನ್ನಾಗಿದೆ. ಆದರೆ ಅದರ ಬೆಲೆ ಮಾತ್ರ ತುಸು ಹೆಚ್ಚಾಯಿತು ಅನಿಸುತ್ತಿದೆ. ಈ ಪುಸ್ತಕದಲ್ಲಿ ಒಟ್ಟೂ ೧೦೮ ಪುಟಗಳಿವೆ. ಇದಕ್ಕೆ ೭೫ ರೂಪಾಯಿ ಮುಖಬೆಲೆ ಇಟ್ಟಿದ್ದಾರೆ. ಅಂದರೆ ಪ್ರತಿ ಪುಟಕ್ಕೆ ಸುಮಾರು ೭೦ ಪೈಸೆಯಷ್ಟು ಹಣವನ್ನು ನಾವು ಕೊಟ್ಟಂತಾಯಿತು. ಒಂದು ಪುಟ ನೆರಳಚ್ಚು ಪ್ರತಿ ತೆಗೆಯಲು ಕೇವಲ ೫೦ ಪೈಸೆ ಖರ್ಚು ಬರುವ ಇಂದಿನ ಕಾಲದಲ್ಲೂ ಇಷ್ಟೊಂದು ದೊಡ್ಡ ಮೊತ್ತವನ್ನು ಈ ಪುಟ್ಟ ಪುಸ್ತಕಕ್ಕೆ ಇಟ್ಟಿರುವುದು ಸಾಮಾನ್ಯರ ಜೇಬಿಗೆ ಸ್ವಲ್ಪ ಭಾರವಾದಂತೆ" ಎಂದೆ.

ಗಣಪತಿಯವರಲ್ಲಿ ನನ್ನ ಮಾತಿಗೆ ಸಹಮತವಿದ್ದಂತೆ ಕಂಡುಬರಲಿಲ್ಲ. "ನೋಡು, ಪುಸ್ತಕ ಅಂದರೆ ಕೇವಲ ಪುಟಗಳನ್ನು ಮುದ್ರಿಸುವುದು ಮಾತ್ರವಲ್ಲ. ಅದರಲ್ಲಿ ಪುಸ್ತಕಕ್ಕೊಂದು ಆಕರ್ಷಕ ಹೊದಿಕೆಯನ್ನು ಹಾಕುವುದು, ಆಕರ್ಷಕ ಪುಟವಿನ್ಯಾಸ ಮಾಡುವುದೂ ಸೇರಿದೆ. ನೀನು ಹೇಳಿದ ಪುಸ್ತಕವನ್ನು ನಾನೂ ನೋಡಿದ್ದೇನೆ. ಅದರ ಕಾಗದದ ಗುಣಮಟ್ಟ, ಮುದ್ರಣ, ಮುಖಪುಟ ವಿನ್ಯಾಸ ಇವೆಲ್ಲಾ ಬಹಳ ಉತ್ತಮ ಗುಣಮಟ್ಟದಲ್ಲಿವೆ. ಅಷ್ಟೊಂದು ಉತ್ತಮ ಗುಣಮಟ್ಟದ ಪುಸ್ತಕ ಹೊರತರುವಾಗ ಖರ್ಚು ಸಹಜವಾಗಿಯೇ ಸ್ವಲ್ಪ ಮಟ್ಟಿಗೆ ಹೆಚ್ಚಾಗುತ್ತದೆ. ಆ ಬಗ್ಗೆ ನಾವು ತಕರಾರು ಮಾಡಬಾರದು."

"ತೇಜಸ್ವಿಯವರು ಬದುಕಿದ್ದಾಗ ಇದೇ ತರಹದ ವಿಷಯ ಅವರ ಮುಂದೆಯೂ ಚರ್ಚೆಗೆ ಬಂದಿತ್ತು. ಅವರು ಕನ್ನಡ ಪುಸ್ತಕಗಳು ಎಲ್ಲ ರೀತಿಯಿಂದಲೂ ವಿಶ್ವದ ಶ್ರೇಷ್ಠ ಪುಸ್ತಕಗಳೊಂದಿಗೆ ಸ್ಪರ್ಧೆಗೆ ಇಳಿಯುವಂತಾಗಬೇಕು ಎನ್ನುವ ಜಾಯಮಾನದವರಾಗಿದ್ದರು. ಅವರ 'ಪುಸ್ತಕ ಪ್ರಕಾಶನ'ದ ಪ್ರಕಟಣೆಗಳು ವಸ್ತು ಮತ್ತು ವಿಷಯದ ವಿಚಾರ ಬಂದಾಗ ಜಗತ್ತಿನ ಯಾವುದೇ ಪ್ರಕಾಶನ ಸಂಸ್ಥೆಯೊಂದಿಗೆ ಸ್ಪರ್ಧೆನಡೆಸಬಲ್ಲ ಗುಣಮಟ್ಟ ಹೊಂದಿವೆ. ಅವರ ಪ್ರಕಾಶನದ ಪುಸ್ತಕಗಳು ತುಸು ಹೆಚ್ಚು ಎನ್ನುವ ಬೆಲೆಯನ್ನು ಹೊಂದಿದ್ದರೂ ಜನ ಅವುಗಳನ್ನು ಮುಗಿಬಿದ್ದು ಖರೀದಿಸುತ್ತಾರೆ" ಎಂಬ ವಿವರಣೆ ನೀಡಿದರು.

ನಾನೂ ಕೂಡ ಪಟ್ಟು ಬಿಡಲಿಲ್ಲ. "ನೀವು ಹೇಳುತ್ತಿರುವುದು ಅರ್ಧ ಸತ್ಯ ಅಂತ ನನಗನಿಸುತ್ತದೆ. ಸ್ವಂತದ ದುಡಿಮೆಯಿರುವವರು ದುಡ್ಡು ಎಷ್ಟಾದರೂ ಚಿಂತೆಯಿಲ್ಲ ಎಂದು ದುಬಾರಿ ಬೆಲೆಯ ಪುಸ್ತಕಗಳನ್ನು ಖರೀದಿ ಮಾಡಬಹುದು. ಆದರೆ ಸಾಮಾನ್ಯವಾಗಿ ಸ್ವಂತದ ದುಡಿಮೆಯಿಲ್ಲದ ವಿದ್ಯಾರ್ಥಿ ವರ್ಗದವರಿಗೆ ಅದು ಸಾಧ್ಯವಾಗಲಿಕ್ಕಿಲ್ಲ. ಯುವಕರಲ್ಲಿ ಪುಸ್ತಕವನ್ನು ಕೊಂಡು ಓದುವ ಹವ್ಯಾಸ ಕಡಿಮೆಯಾಗಿರಲು ಇದೂ ಒಂದು ಕಾರಣವಾಗಿರಬಹುದು."

"ಕನ್ನಡ ಪುಸ್ತಕ ಪ್ರಕಾಶನದವರು ಪುಸ್ತಕದ ವಿಷಯದ ವಿಚಾರದಲ್ಲಿ ರಾಜಿಮಾಡಿಕೊಳ್ಳದೆ, ವಸ್ತುವಿನ ವಿಚಾರದಲ್ಲಿ ಸ್ವಲ್ಪ ಮಟ್ಟಿಗಿನ ರಾಜಿ ಮಾಡಿಕೊಂಡು ತುಸು ಕಡಿಮೆ ಬೆಲೆಯ ಪುಸ್ತಕಗಳನ್ನು ಓದುಗರ ಕೈಗಿಡಬಹುದು ಅಂತ ನನಗನಿಸುತ್ತದೆ. ಪುಸ್ತಕಗಳ ಬೆಲೆ ಕಡಿಮೆಯಾದರೆ ವಿದ್ಯಾರ್ಥಿ ಸಮೂಹವೂ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬಹುದು" ಎಂದೆ.

ನನ್ನ ಮಾತು ಬಹುಷಃ ಅವರಿಗೂ ಹೌದೆನ್ನಿಸಿತೇನೊ. ಸ್ವಲ್ಪ ಹೊತ್ತು ಸುಮ್ಮನಿದ್ದು, "ಯಾರೇನೇ ಹೇಳಲಿ, ನಮ್ಮ ಜನ ಇತರೆ ಭೋಗದ ವಸ್ತುಗಳ ಬೆಲೆಯಲ್ಲಿ ಏರಿಕೆಯಾದರೂ ಕೊಂಡುಕೊಳ್ಳುತ್ತಾರೆ. ಆದರೆ ಪುಸ್ತಕಗಳ ವಿಚಾರದಲ್ಲಿ ಮಾತ್ರ ಯಾಕೋ ತೀವ್ರ ನಿರ್ಲಕ್ಷ ವಹಿಸುತ್ತಾರೆ. ಒಳ್ಳೆಯ ಪುಸ್ತಕ ಕೊಟ್ಟರೂ ದರ ಹೆಚ್ಚು ಎಂದು ವರಾತ ತೆಗೆಯುತ್ತಾರೆ. ಬೆಲೆಯನ್ನು ತುಸು ಕಡಿಮೆ ಮಾಡಿದರೆ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಸ್ವಲ್ಪ ಹೆಚ್ಚಾಗಬಹುದೇನೋ"ಎಂದು ಸುಮ್ಮನಾದರು.

ನನ್ನ ಮತ್ತು ಅವರ ನಡುವೆ ನಡೆದ ಮಾತುಕತೆಗೆ ಇಲ್ಲಿಗೆ ಪೂರ್ಣವಿರಾಮ ಹಾಕುತ್ತೇನೆ.

ನಿಜ, ಕನ್ನಡ ಪುಸ್ತಕಗಳನ್ನು ಕೊಂಡು ಓದುವ ವಿಚಾರಕ್ಕೆ ಬಂದರೆ ನಾವೇನು ಸುಭಗರೂ ಅಲ್ಲ, ಸಂಭಾವಿತರೂ ಅಲ್ಲ. ಬಿಗ್ ಬಜಾರ್, ಗರುಡ ಮಾಲ್‌ನಂತಹ ದೊಡ್ಡ ದೊಡ್ಡ ಅಂಗಡಿಗಳಿಗೆ ಹೋಗಿ ಅವರು ಹೇಳಿದಷ್ಟು ದುಡ್ಡು ಕೊಟ್ಟು ಭೋಗದ ಸಾಮಾನುಗಳನ್ನು ಕೊಂಡು ತರುವ ನಮ್ಮ ಜನ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ವಿಷಯ ಬಂದಾಗ ಜೇಬು ಮುಟ್ಟಿ ತಮ್ಮಲ್ಲಿ ಹಣ ಎಷ್ಟಿದೆ ಅಂತ ನೋಡಿಕೊಳ್ಳುತ್ತಾರೆ. ನೈಕಿ, ರಿಬೋಕ್ ನಂತಹ ಬ್ರಾಂಡಡ್ ಟೀ ಶರ್ಟ್‌ಗಳನ್ನು ಆರುನೂರು - ಏಳುನೂರು ರೂಪಾಯಿ ಕೊಟ್ಟು ಕೊಂಡುಕೊಳ್ಳುವ ನಮ್ಮ ಯುವಕರು ೫೦ ರೂಪಾಯಿಯ ಪುಸ್ತಕದ ವಿಚಾರ ಬಂದಾಗ "ಸುಮ್ನೆ ದುಡ್ಡು ಯಾಕೆ ವೇಸ್ಟ್ ಮಾಡೋದು" ಅಂತ ಉಪದೇಶ ಕೊಡಲು ಪ್ರಾರಂಭಿಸುತ್ತಾರೆ. ವಿದೇಶಿ ಮದ್ಯ ಕುಡಿಯಲು ತಿಂಗಳಿಗೆ ೫೦೦ ರೂಪಾಯಿ ಖರ್ಚು ಮಾಡುವ ನನ್ನ ಸ್ನೇಹಿತನೊಬ್ಬ ಪುಸ್ತಕಗಳನ್ನು ಕೊಂಡು ಓದುವ ವಿಚಾರದಲ್ಲಿ ಮಾತ್ರ ಹಣಕಾಸಿನ ಬಗ್ಗೆ ತೀವ್ರ ಲೆಕ್ಕಾಚಾರ ಮಾಡುತ್ತಾನೆ! ಹಾಗಂತ ಗ್ರಂಥಾಲಯದಿಂದ ಕನ್ನಡದ ಶ್ರೇಷ್ಠ ಲೇಖಕರ ಪುಸ್ತಕಗಳನ್ನು ತಂದು ಓದಲು ಮರೆಯುವುದಿಲ್ಲ! ಇದೇ ಸಮಯದಲ್ಲಿ ಪುಸ್ತಕಗಳನ್ನು ಕೊಂಡು ಓದಬೇಕು ಎಂಬ ಹಂಬಲವಿರುವ ಹಲವಾರು ಯುವ ಓದುಗರಿಗೆ ಅವರ ಆರ್ಥಿಕ ಅನಾನುಕೂಲತೆಯೇ ಪುಸ್ತಕ ಕೊಳ್ಳಲಾಗದಂತೆ ಮಾಡುತ್ತದೆ.

ಈಗ ನೀವೇ ಹೇಳಿ. ಕನ್ನಡ ಪುಸ್ತಕಗಳು ಹೇಗಿರಬೇಕು? ವಿದೇಶಿ ಕಾಗದ, ದುಬಾರಿ ಮುದ್ರಣಗಳನ್ನು ಹೊಂದಿಸಿಕೊಂಡು ದುಬಾರಿಯಾಗಬೇಕೋ ಅಥವಾ ಭಾರತದಲ್ಲೇ ಸಿಗುವ ತಕ್ಕ ಮಟ್ಟಿಗೆ ಒಳ್ಳೆಯ ಗುಣಮಟ್ಟದ ಕಾಗದ, ಕೈಗೆಟಕುವ ಬೆಲೆಯ ಮುದ್ರಣವನ್ನು ಮಾಡಿಕೊಂಡು ಜನಸಾಮಾನ್ಯರ ಜೇಬಿಗೆ ಭಾರವಾಗದಂತೆ ಇರಬೇಕೋ? ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ಹೆಚ್ಚಾಗುವಂತೆ ಮಾಡುವುದು ಹೇಗೆ?

ಇತ್ತೀಚೆಗೆ ಬಂದ ಒಂದೆರಡು ಕನ್ನಡ ಪುಸ್ತಕಗಳ ಬೆಲೆ ಹೆಚ್ಚೂ ಕಡಿಮೆ ಅವುಗಳ ಪುಟದಷ್ಟೇ ಇವೆ! ಅವನ್ನು ನೋಡಿದಾಗ ಇವನ್ನೆಲ್ಲ ನಿಮ್ಮ ಮುಂದೆ ಹೇಳಬೇಕು, ನಿಮ್ಮನ್ನು ಕೇಳಬೇಕು ಎನ್ನುವ ಆತುರವಾಯಿತು.

ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮನಸ್ಸುಳ್ಳ ನೀವು ಈ ಬಗ್ಗೆ ನಿಮಗನಿಸಿದ್ದನ್ನು ದಯವಿಟ್ಟು ತಿಳಿಸಿ.

- ವಿಜಯ್ ಜೋಶಿ

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
GOOD ONE JOSHI. WRITE ABOUT THIS IN DETAIL LATER
JOGI
ಅನಾಮಧೇಯಹೇಳಿದ್ದಾರೆ…
nice article mama..... book odbeku anta nenapu madikottiddakke thank's
Sushrutha Dodderi ಹೇಳಿದ್ದಾರೆ…
good one. ಪ್ರಕಾಶಕರು ಇದರ ಬಗ್ಗೆ ಯೋಚಿಸಲೇಬೇಕು. ಈ ನಿಟ್ಟಿನಲ್ಲಿ ಸ್ವಾಗತಾರ್ಹ ಸಂಗತಿಗಳೆಂದ್ರೆ, ಇತ್ತೀಚಿಗೆ 'ಛಂದ ಪುಸ್ತಕ'ದಂತಹ ಸಂಸ್ಥೆಗಳು ಕಡಿಮೆ ಬೆಲೆಗೆ ಪುಸ್ತಕಗಳನ್ನು ಹೊರತರುತ್ತಿದೆ. ಹಾಗೇ ರಾಜ್ಯ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಕಾರಂತರ ಸಾಹಿತ್ಯವನ್ನೆಲ್ಲ ತಲಾ ಐವತ್ತು ಬೆಲೆಯ ಪುಸ್ತಕಗಳನ್ನಾಗಿ ಬಿಡುಗಡೆ ಮಾಡಿದೆ.
ಅನಾಮಧೇಯಹೇಳಿದ್ದಾರೆ…
ಲೇಖನ ಚೆನ್ನಾಗಿದೆ ಗಣಪತಣ್ಣನಿಗೆ ಇದನ್ನು ನೋಡಿದರೆ ತುಂಬಾ ಕುಷಿಯಾಗುತ್ತದೆ.
ಪದ್ಮಾವತಿ
ವಿ.ರಾ.ಹೆ. ಹೇಳಿದ್ದಾರೆ…
ಒಳ್ಳೆಯ ವಿಚಾರ ಜೋಶಿ.

ನನ್ನಭಿಪ್ರಾಯದಲ್ಲಿ ಕನ್ನಡ ಪುಸ್ತಕಗಳು ತಕ್ಕಮಟ್ಟಿಗಿನ ಒಳ್ಳೆಯ ಗುಣಮಟ್ಟದ materialನೊಂದಿಗೆ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲರಿಗೂ ಎಟುಕುವ ಬೆಲೆಯಲ್ಲಿ ಸಿಗಬೇಕು. ಎಷ್ಟೋ ಆವೃತ್ತಿಗಳಾದ ನಂತರವೂ ಕೆಲ ಪ್ರಮುಖರ ಪುಸ್ತಕಗಳಿಗೆ ಈಗಲೂ ಕೂಡ ದುಬಾರಿ ಬೆಲೆ ಇದೆ. ಭೈರಪ್ಪನವರ ಸಾರ್ಥಕ್ಕೆ ಈಗಲೂ ಮುನ್ನೂರು ಚಿಲ್ಲರೆ ರೂ.! ತೇಜಸ್ವಿಯವರ ಪ್ಯಾಪಿಲೋನ್ ಈಗಲೂ ನೂರ್ಮೂವತ್ತೈದು ! ಈ ಬಗ್ಗೆ ಓದುಗರೇ ಒಂದು ಹೇಳಿದರೆ, ಪ್ರಕಾಶಕರ ಗೋಳೇ ಬೇರೆ ಇರುತ್ತದೆ. ಲೇಖಕರದ್ದು ಮತ್ತೊಂದು ಕತೆ. ಏನೇ ಆದರೂ ಈಗಿನ ಕಾಲದಲ್ಲಿ pleasing look ಭಾರಿ ಮುಖ್ಯ. ಈ ನಿಟ್ಟಿನಲ್ಲಿ ಛಂದ ಪ್ರಕಾಶನ ಒಳ್ಳೆಯ ಕೆಲಸ ಮಾಡುತ್ತಿದೆ. ಬೆಲೆ, ಕ್ವಾಲಿಟಿ ಎರಡೂ ಒ.ಕೆ.
ಅನಾಮಧೇಯಹೇಳಿದ್ದಾರೆ…
laibrayyinda book tagondu odi nanu ella book odidini anno nannatorigella sariyada ppta kali so artical idu
tunba chennagide
ಅನಾಮಧೇಯಹೇಳಿದ್ದಾರೆ…
laibrayyinda book tagondu odi nanu ella book odidini anno nannatorigella sariyada pata kali so artical idu
tunba chennagide
ಅನಾಮಧೇಯಹೇಳಿದ್ದಾರೆ…
laibrayyinda book tagondu odi nanu ella book odidini anno nannatorigella sariyada pata kali so artical idu
tunba chennagide
Shree ಹೇಳಿದ್ದಾರೆ…
book bele jasthi idovaga prakashakaru ashtu jasthi ittu aa books janru thogothara ilwa antha yoochese irthare andhre artha aa books nalli ashtu stuff irutthe antha;matte innu swantha dudime illada students bagge maathu bandre thande taayi yavude vishyakke beda andhru oodoodakke support maadee madthare antha nan abhipraya matthe eega adakke antha ne oorigondu,college ge ondu antha library antha bandirodalwa hige nange ansthu:)yenadru taap helidre thilisbeku:):)
Unknown ಹೇಳಿದ್ದಾರೆ…
nice article.... now i dont have time to read all articles but one thing nowadays importent thing is books are not in the good quality quality in the sence matrials whatevr they wright.... your argument is correct regardind students ... this is not only falt of students but also of our society education system.... anyway continue your work good luck
ವಿಜಯ್ ಜೋಶಿ ಹೇಳಿದ್ದಾರೆ…
@ಜೊಗಿ
ಮೊಟ್ಟಮೊದಲ ಬಾರಿಗೆ ನನ್ನ ಬರಹಕ್ಕೆ ಪ್ರತಿಕ್ರಿಯಿಸಿದ್ದೀರಿ. ನಿಮಗೆ ಧನ್ಯವಾದಗಳು.
@ಸುಶ್ರುತ, ವಿಕಾಸ್
ಇಂಗ್ಲೀಷಿನಲ್ಲೂ ಕಡಿಮೆ ಬೆಲೆಗೆ ಉತ್ತಮ ಪುಸ್ತಕ ನೀಡುವ ಪರಿಪಾಠವಿದೆ. ಕನ್ನಡದಲ್ಲಿ ಅದು ಬರಲಿ. ಕನ್ನಡಿಗರಲ್ಲಿ ಓದುವ ಆಸೆ ಹೆಚ್ಚಾಗಲಿ ಎನ್ನುವ ಹಂಬಲ ನನ್ನದು.
@ಚೈತ್ರಾ
ಧನ್ಯವಾದ. ನಿಮ್ಮ ಬ್ಲಾಗನ್ನೂ ನೋಡುತ್ತಿದ್ದೇನೆ. ಚೆನ್ನಾಗಿ ಬರೀತಿದ್ದೀರಿ.
@ಅಗ್ನಿ
ನಿಮ್ಮ ಅಭಿಪ್ರಾಯಕ್ಕೆ ಸಹಮತವಿಲ್ಲ, ಆದರೆ ಗೌರವವಿದೆ. ಪುಸ್ತಕದ ಬೆಲೆ ನಿಗದಿ ಮಾಡುವಾಗ ಅದರ ಹೂರಣದ ಬಗ್ಗೆಯೂ ಯೋಚಿಸಿರುತ್ತಾರಾದರೂ ಕಾಗದದ ವಿಚಾರದಲ್ಲಿ ಸ್ವಲ್ಪ ರಾಜಿ ಮಾಡ್ಕೊಂಡು ಪುಸ್ತಕಗಳನ್ನು ಕಡಿಮೆ ಬೆಲೆಗೆ ಮಾರಬಹುದು ಎನ್ನುವುದು ನನ್ನ ಅಭಿಪ್ರಾಯ.
@ಕೃಷಿಕ್
ನನ್ನನ್ನು ಬೆಂಬಲಿಸಿದ್ದಕ್ಕೆ ನಿನಗೊಂದು ಥ್ಯಾಂಕ್ಸ್ ಮಾರಾಯಾ.. ಆಗಾಗ ನಾ ಬರೆದದ್ದನ್ನು ಓದಿ ಪ್ರತಿಕ್ರಿಯಿಸುತ್ತಿರು.
ಅನಾಮಧೇಯಹೇಳಿದ್ದಾರೆ…
olle vichaara prastaapa maadiddira...
pustaka kaigeTovanthe maaDodralli Vasudhendra ra chanda pustaka olle kelasa maadta ide

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ