ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಒಂದು ದಿನ ಕಾಲೇಜು ಬಿಟ್ಟ ನಂತರ ನಮ್ಮ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಬಳಿ ಹೋಗಿದ್ದೆ. ಅದೇ ತಾನೆ ಬರೆದು ಮುಗಿಸಿದ್ದ ಎರಡು ಅಸೈನ್‌ಮೆಂಟುಗಳನ್ನು ಅವರಿಗೆ ತೋರಿಸಬೇಕಾಗಿತ್ತು.
ಅಸೈನ್‌ಮೆಂಟುಗಳನ್ನು ಅವರ ಟೇಬಲ್ಲಿನ ಮೇಲಿಟ್ಟು ವಾಪಸ್ ಬರಬೇಕು ಅನ್ನುವಷ್ಟರಲ್ಲಿ ವಿಭಾಗ ಮುಖ್ಯಸ್ಥರು ನನ್ನನ್ನು ಕರೆದು "ಬೆಂಗಳೂರಿನಿಂದ ಗರ್ವ ಪತ್ರಿಕೆಯ ಪತ್ರಕರ್ತರೊಬ್ಬರು ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಇಲ್ಲಿಗೆ ಬರಲಿಕ್ಕಿದ್ದಾರೆ. ಅವರನ್ನು ಭೇಟಿ ಮಾಡಬೇಕು ಎನ್ನುವಂತಿದ್ದರೆ ಸ್ವಲ್ಪ ಸಮಯ ನಿಲ್ಲಿ. ಅವರ ಜೊತೆ ಮಾತನಾಡಿ ಹೋಗೋಣ" ಎಂದರು. ನಾನು ಆಗ ಗರ್ವ ಪತ್ರಿಕೆಯನ್ನು ಒಂದೂ ಬಿಡದೆ ಓದುತ್ತಿದ್ದೆ. ಹಾಗಾಗಿ ನಿಂತು ಅವರ ಜೊತೆ ಮಾತನಾಡಿ ಹೋಗುವ ಮನಸ್ಸಾಯಿತು.
ಐದೇ ನಿಮಿಷದಲ್ಲಿ ಅವರು ಬಂದರು. ನಮ್ಮ ವಿಭಾಗ ಮುಖ್ಯಸ್ಥರ ಬಳಿ ಸ್ವಲ್ಪ ಹೊತ್ತು ಪತ್ರಿಕೆ-ಸಾಹಿತ್ಯ-ಬರವಣಿಗೆ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದರು. ನಂತರ ನನ್ನ ಹೆಸರು ಕೇಳಿದರು. ತಮ್ಮ ಪರಿಚಯವನ್ನೂ ಮಾಡಿಕೊಂಡರು. ಆದರೆ ಅವರು ಗರ್ವ ಪತ್ರಿಕೆಯವರಲ್ಲ ಎಂದು ನಂತರ ತಿಳಿತು. ತಿಳಿದಾಗ ಸ್ವಲ್ಪ ಬೇಸರವೂ ಆತು!
ಅವರು ತುಂಬ ಓದಿಕೊಂಡಿದ್ದಾರೆ ಎಂಬುದು ಅವರ ಮಾತಿನಿಂದಲೇ ತಿಳಿಯುತ್ತಿತ್ತು. ನನ್ನ ಮತ್ತು ಅವರ ಸಂಬಂಧ ನಂತರದ ದಿನಗಳಲ್ಲಿ ಆತ್ಮೀಯವಾತು. ಅವರು ಕಾರ್ಕಳ, ಉಡುಪಿ, ಕುಂದಾಪುರದಂತಹ ಕರಾವಳಿಯ ಊರುಗಳಿಗೆ ಬಂದಾಗ ಅವರ ಜೊತೆ ಮಾತನಾಡಲೆಂದೇ ಅಲ್ಲಿಗೆ ಹೋಗುತ್ತಿದ್ದೆ.
ಪತ್ರಿಕೋದ್ಯಮ ವಿದ್ಯಾರ್ಥಿಯಾದ ನನಗೆ ಹೈಸ್ಕೂಲಿನ ದಿನಗಳಿಂದಲೂ ಗಾಂಧೀವಾದಿಗಳು, ಸಮಾಜವಾದಿಗಳು, ರಾಷ್ಟ್ರೀಯವಾದಿಗಳು, ಮಹಿಳಾವಾದಿಗಳು ಮುಂತಾದ ವಿಭಿನ್ನ ಸಿದ್ಧಾಂತಗಳ ಹಿನ್ನಲೆಯಿಂದ ಆಲೋಚಿಸುವವರ ಬಗ್ಗೆ ಕುತೂಹಲವಿತ್ತು. ಈ 'ವಾದಿ'ಗಳಲ್ಲಿ ಯಾರು ಶ್ರೇಷ್ಠರು ಎಂಬ ಪ್ರಶ್ನೆಯೂ ನನ್ನಲ್ಲಿತ್ತು. ಹಲವರ ಬಳಿ ಈ ಬಗ್ಗೆ ಕೇಳಿಯೂ ಇದ್ದೆ. ನಾನು ಅಲ್ಲಿಯವರೆಗೆ ಭೇಟಿಯಾದ ಎಲ್ಲರೂ ತಮ್ಮ ವಾದವನ್ನು ಸಮರ್ಥಿಸಿಕೊಂಡು ಇನ್ನೊಬ್ಬರ ವಾದವನ್ನು ಅಲ್ಲಗಳೆದವರೇ ಆಗಿದ್ದರು. ಅದೇ ಪ್ರಶ್ನೆಯನ್ನು ಇವರ ಬಳಿಯೂ ಕೇಳಿದೆ. ಉತ್ತರ ತುಂಬ ಅರ್ಥಗರ್ಬಿತವಾಗಿತ್ತು.
"ನೋಡು, ಇವರಲ್ಲಿ ಯಾರು ಶ್ರೇಷ್ಠರು ಯಾರು ಅಧಮರು ಎಂದು ಯೋಚಿಸುವುದು ಸರಿಯಲ್ಲ. ಇವರೆಲ್ಲರ ಗುರಿಯೂ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದೇ ಆಗಿದೆ. ಇವರೆಲ್ಲರೂ ಕೂಡ ನಮ್ಮ ಸಮಾಜ ಜಾತಿ-ಮತಗಳ ಬಂಧನದಿಂದ ಹೊರಬರಲಿ ಎನ್ನುವವರೇ ಆಗಿದ್ದಾರೆ. ಆದರೆ ಸೈದ್ಧಾಂತಿಕ ಹಿನ್ನಲೆಟ್ಟುಕೊಂಡು ಆಲೋಚನೆ ಮಾಡುವವರಿಗೆ - ಮಾತನಾಡುವವರಿಗೆ ಸಮಾಜದ ಕೆಲವು ಹುಳುಕುಗಳು ಮಾತ್ರ ಗಾಢವಾಗಿ ಕಾಣುತ್ತವೆ. ಇನ್ನು ಕೆಲವು ಹುಳುಕುಗಳು ಅಷ್ಟೊಂದು ಗಾಢವಾಗಿ ಕಾಣಿಸುವುದಿಲ್ಲ. ಉದಾಹರಣೆಗೆ, ಕೆಲವರಿಗೆ ಕಾಶ್ಮೀರ ಸಮಸ್ಯೆ ಪ್ರಮುಖವಾಗಿ ಕಂಡರೆ ಇನ್ನು ಕೆಲವರಿಗೆ ಬಡತನ ಪ್ರಮುಖವಾಗಿ ಕಾಣುತ್ತದೆ. ಆದರೆ ಇವೆರಡೂ ನಮ್ಮ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳೇ ಆಗಿವೆ. ಹಾಗಾಗಿ ಎಲ್ಲರ ವಿಚಾರಗಳನ್ನೂ ಚೆನ್ನಾಗಿ ಓದಿಕೊಂಡು, ಎಲ್ಲ ರೀತಿಯಿಂದಲೂ ಯೋಚಿಸುವುದನ್ನು ಕಲಿತಾಗ ನೀನು ಉತ್ತಮ ಪತ್ರಕರ್ತನಾಗಬಲ್ಲೆ" ಎಂದರು.
ಅಲ್ಲಿಯವರೆಗೂ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ ಇನ್ನೊಬ್ಬರನ್ನು ತೆಗಳುವುದರಲ್ಲೇ ಕಾಲಹರಣ ಮಾಡುವ ಅನೇಕರನ್ನು ಕಂಡಿದ್ದ ನನಗೆ ಇವರ ಮಾತುಗಳು ಹೊಸ ಆಲೋಚನೆಯನ್ನು ನೀಡಿದವು. ಅವತ್ತಿನಿಂದ ನಾನು ಎಲ್ಲ ಬಗೆಯ ವಿಚಾರಗಳ ಪುಸ್ತಕಗಳನ್ನೂ ಓದಲು ಆರಂಭಿಸಿದ್ದೇನೆ. ಒಮ್ಮೆ ಲೋಹಿಯಾರ ಜೀವನಚರಿತ್ರೆಯನ್ನು ಓದಿದರೆ ಇನ್ನೊಮ್ಮೆ ಗುರೂಜಿಯವರದ್ದು. ಮತ್ತೊಮ್ಮೆ ಗಾಂಧೀಜಿಯವರದ್ದು. ಒಟ್ಟಿನಲ್ಲಿ ಕೆಲವು ಸಿದ್ಧಾಂತವಾದಿಗಳಿಗಿರುವ 'ಪುಸ್ತಕ ಮೈಲಿಗೆ'ಯನ್ನು ಸಾಧ್ಯವಾದಷ್ಟರ ಮಟ್ಟಿಗೆ ಬಿಡಲು ಪ್ರಾರಂಭಿಸಿದ್ದೇನೆ.
ಅಂದಹಾಗೆ ಲೇಖನದುದ್ದಕ್ಕೂ 'ಅವರು' 'ಇವರು' ಅಂತಲೇ ಸಂಬೋಧಿಸಿರುವ ಅವರು ಯಾರು ಅಂತ ಕೇಳಬೇಡಿ. ನನಗೂ ಆ ಬಗ್ಗೆ ಗೊಂದಲಗಳು ಪ್ರಾರಂಭವಾಗಿ ಬಿಟ್ಟಿವೆ. ಗುರುಗಳು ಅಂತ ಕರೆಯೋಣವೆಂದರೆ ಅವರು ಗುರುಗಳಿಗಿಂತ ಆತ್ಮೀಯರಾಗಿಬಿಟ್ಟಿದ್ದಾರೆ. ಸ್ನೇಹಿತ ಅಂತ ಕರೆಯೋಣವೆಂದರೆ ಸ್ನೇಹಿತರಂತೆ ನನ್ನನ್ನು ಅವರು ಗದರಿಸಿಲ್ಲ. ಹಾಗಾಗಿ ಅವರು ಯಾರು ಎನ್ನುವುದು ಇಲ್ಲಿ ಬೇಡ. ಆದರೆ ಅವರ ವಿಚಾರಗಳು ನನ್ನಂಥ ಸಾಮಾನ್ಯ ವಿದ್ಯಾರ್ಥಿಗಳಿಗೆ ಸರಿಯಾಗಿ ಅರ್ಥವಾದರೆ ಸಾಕು.
ಕಾಮೆಂಟ್‌ಗಳು
ಚಿತ್ರಾ
In a non-commercial TV ad, they say Use CONDOME for safe SEX. What's meant by this????
And that ad is being published by Government authorities in public interest..!!
SO they are encouraging mens to go to prostitutes..??????
OR Y a man should use CONDOME with his own wife..????