ವಿಷಯಕ್ಕೆ ಹೋಗಿ

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ.

ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ.

ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು.

ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜೊತೆಯಲ್ಲಿ ನನ್ನ ಸ್ನೇಹಿತೆಯೊಬ್ಬಳು ಇದ್ದಳು. ಮೂಡುಬಿದಿರೆಯಿಂದ ಬೆಳ್ತಂಗಡಿಗೆ ಹೋಗುವ ಮಾರ್ಗದಲ್ಲಿ ಸಿಗುವ ಪೆರಿಂಜೆ ಎಂಬ ಪುಟ್ಟ ಊರಿನಲ್ಲಿ ಹರೀಶ್ ಅವರ ಮನೆಯಿದೆ. ಅವರ ಮನೆಯ ಅಂಗಳದಲ್ಲಿ ಕಾಮತರ 'ಭಾರತಾಯಣ' ಉಪನ್ಯಾಸ ಕಾರ್ಯಕ್ರಮ ಆಯೋಜನೆ ಆಗಿತ್ತು.

ನಾವು ಅಲ್ಲಿಗೆ ಹೋಗುವ ವೇಳೆಗೆ ಕಾಮತರು ಬಂದಾಗಿತ್ತು. ಕಾಫಿಯೋ, ಚಹಾನೋ... ಬಿಸಿ ಬಿಸಿಯಾಗಿ ಏನೋ ಒಂದು ಕುಡಿಯುತ್ತಿದ್ದರು. ನಾವು ಅವರಲ್ಲಿಗೆ ಹೋಗುತ್ತಿದ್ದಂತೆಯೇ, ಅವರ ಆತ್ಮೀಯರು ಹಾಗೂ ನನಗೆ ಪರಿಚಿತರೂ ಆಗಿದ್ದವರೊಬ್ಬರು, 'ಈತ ವಿಜಯ್ ಜೋಷಿ. ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದಾನೆ' ಎಂದು ಕಾಮತರಿಗೆ ಪರಿಚಯಿಸಿದರು. ಕಾಮತರು ನನ್ನನ್ನು ಕಂಡು ಮುಗುಳ್ನಕ್ಕರು. ಕುಳಿತುಕೊಳ್ಳಲು ಹೇಳಿದರು.

'ಏನು ಮಾಡುತ್ತಿದ್ದೀಯಾ? ಓದುತ್ತಿರುವುದು ಏನನ್ನು' ಎಂದು ಪ್ರಶ್ನಿಸಿದರು ನನ್ನನ್ನು ಉದ್ದೇಶಿಸಿ. ಪತ್ರಕರ್ತನಾಗಬೇಕು ಎಂಬ ಆಸೆ ಇರುವ ಕಾರಣ ಜರ್ನಲಿಸಂ ಓದುತ್ತಿರುವುದಾಗಿ ಹೇಳಿದೆ. ಈ ಮಾತು ಕೇಳಿದ ತಕ್ಷಣ ಕಾಮತರು, 'Why did you take up this dirty profession my boy' ಎಂದು ಪ್ರಶ್ನಿಸಿಬಿಟ್ಟರು! ಏನು ಹೇಳಬೇಕು ಎಂದು ನನಗೆ ತೋಚಲಿಲ್ಲ. ಸುಮ್ಮನೆ ನಿಂತಿದ್ದೆ. ಆಗ ಅವರೇ ಮುಗುಳ್ನಕ್ಕು, 'Good, have a bright future' ಎಂದು ಹರಸಿದರು.

ಇದೇ ಪ್ರಶ್ನೆಯನ್ನು ನನ್ನ ಜೊತೆ ಇದ್ದ ಸ್ನೇಹಿತೆ ಸಿರಿ ಅಯ್ಯಂಗಾರ್ ಬಳಿಯೂ ಕೇಳಿದರು. ಅವಳು, ತನಗೆ ಬರೆಯುವುದು ಇಷ್ಟವಾಗಿರುವ ಕಾರಣ, ಇಂಗ್ಲಿಷ್ ಸಾಹಿತ್ಯದ ಜೊತೆ ಜರ್ನಲಿಸಂ ಕೂಡ ಓದುತ್ತಿರುವುದಾಗಿ ಹೇಳಿದಳು.

ಒಬ್ಬರಿಗೊಬ್ಬರು ತುಸು ಮಟ್ಟಿಗೆ ಪರಿಚಯ ಆದ ನಂತರ ಕಾಮತರು ಮಾತನಾಡಿದ್ದು ತಾವು ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ದಿನಗಳ ಬಗ್ಗೆ - ಆ ದಿನಗಳಲ್ಲಿ ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯ ಸಂಪಾದಕ ಎಸ್. ಸದಾನಂದ್ ಅವರಿಂದ ಕಲಿತ ಒಂದು ಪಾಠದ ಬಗ್ಗೆ. ಅಂದು ಕಾಮತರು ನನಗೆ ಹೇಳಿದ ಈ ಪಾಠ ಇಂದಿಗೂ ಮನಸ್ಸಿನಲ್ಲಿ ಬೆಚ್ಚಗೆ ಕುಳಿತಿದೆ. ಅದೊಂದು ಅಚ್ಚಳಿಯದ ನೆನಪಿನಂತೆ.

ಅದು ಕಾಮತರು ವೃತ್ತಿ ಆರಂಭಿಸಿದ ದಿನಗಳು. ಕಾರ್ಯಕ್ರಮವೊಂದರ ಬಗ್ಗೆ ವರದಿ ಮಾಡಲು ಕಾಮತರನ್ನು ಒಂದು ಕಡೆ ಕಳುಹಿಸಿದ್ದರಂತೆ. ಆ ಕಾರ್ಯಕ್ರಮದಲ್ಲಿ ಸಮಾಜವಾದಿಗಳು ಹಾಗೂ ಕಾಂಗ್ರೆಸ್ಸಿಗರು ಪಾಲ್ಗೊಂಡಿದ್ದರಂತೆ. ಕಾರ್ಯಕ್ರಮದ ಉದ್ದಕ್ಕೂ ಅಲ್ಲಿದ್ದ ಯುವ ಪತ್ರಕರ್ತ ಕಾಮತ್, ಕಚೇರಿಗೆ ಮರಳಿ ವರದಿ ಸಿದ್ಧಪಡಿಸಿದರು. ಆ ವರದಿ ಮಾರನೆಯ ದಿನ ಪತ್ರಿಕೆಯಲ್ಲಿ ಪ್ರಕಟವಾಯಿತು.

ವರದಿಯನ್ನು ಓದಿದ ಕೆಲವು ಕಾಂಗ್ರೆಸ್ಸಿಗರು ಸದಾನಂದ್ ಅವರಲ್ಲಿ, ವರದಿಯ ಬಗ್ಗೆ ಕೆಲವು ತಕರಾರುಗಳನ್ನು ತಂದಿಟ್ಟರಂತೆ. ಆ ವರದಿಯಲ್ಲಿ ಸಮಾಜವಾದಿಗಳ ಮಾತುಗಳಿಗೆ ಬಹಳ ಪ್ರಾಧಾನ್ಯತೆ ನೀಡಲಾಗಿದೆ, ಕಾಂಗ್ರೆಸ್ಸಿಗರ ಮಾತುಗಳಿಗೆ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡಲಾಗಿಲ್ಲ ಎಂಬುದು ತಕರಾರಿನ ಮುಖ್ಯ ಅಂಶವಾಗಿತ್ತಂತೆ. ತಕರಾರು ಕೇಳಿಸಿಕೊಂಡ ಸದಾನಂದ್ ಅವರು ಕಾಮತರನ್ನು ತಮ್ಮ ಬಳಿ ಕರೆಸಿಕೊಂಡರಂತೆ. ವರದಿಯಲ್ಲಿ ಒಬ್ಬರಿಗೆ ಹೆಚ್ಚು ಆದ್ಯತೆ ನೀಡಿದ್ದು ಏಕೆ ಎಂದು ಪ್ರಶ್ನಿಸಿದರಂತೆ.

ತಮಗೆ ಸಮಾಜವಾದಿಗಳ ಬಗ್ಗೆ ಒಲವು ಹೆಚ್ಚಿರುವ ಕಾರಣ ಅವರ ಮಾತುಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾಗಿಯೂ, ಕಾಂಗ್ರೆಸ್ಸಿಗರ ಮಾತುಗಳಿಗೆ ತುಸು ಕಡಿಮೆ ಆದ್ಯತೆ ನೀಡಿದ್ದಾಗಿಯೂ ಕಾಮತರು ಉತ್ತರಿಸಿದರಂತೆ. ಈ ಉತ್ತರ ಕೇಳಿ ಸದಾನಂದ್ ಅವರಲ್ಲಿನ ಸಿಟ್ಟು ಕಡಿಮೆ ಆಗುತ್ತದೆ ಎಂದು ಕಾಮತರು ನಿರೀಕ್ಷಿಸಿದ್ದರೇನೋ! ಆದರೆ ಸದಾನಂದ್ ಅವರು ಇನ್ನಷ್ಟು ಕೋಪಗೊಂಡರಂತೆ.

'ನೋಡು ಕಾಮತ್, ನಿನಗೆ ಸಮಾಜವಾದಿಗಳ ಬಗ್ಗೆ ಹೆಚ್ಚು ಆಸ್ಥೆ ಇದೆ ಎಂದಾದರೆ ಬಾವುಟ ಹಿಡಿದುಕೊಂಡು ಅವರ ಜೊತೆ ಚಳವಳಿ ಮಾಡಿಕೊಂಡಿರು. ವರದಿಗಾರಿಕೆಗೆ ಹೋಗಬೇಡ. ನೀನು ನನ್ನ ಪತ್ರಿಕೆಯ ವರದಿಗಾರನಾಗಿ ಯಾವುದೇ ಕಾರ್ಯಕ್ರಮಕ್ಕೆ ಹೋದಾಗ ಎಲ್ಲರಿಗೂ ಸಮಾನ ಆದ್ಯತೆ ನೀಡಬೇಕು' ಎಂದು ಗದರಿದ್ದರಂತೆ. ಈ ಕಥೆಯನ್ನು ಸ್ವಾರಸ್ಯಕರವಾಗಿ ಕಾಮತರು ನಮ್ಮಲ್ಲಿ ಹೇಳಿದ್ದರು. ಇದು ನಮಗೂ ಒಂದು ಪಾಠವಾಗಿ ಕಂಡಿತ್ತೇ ವಿನಾ, ಬರೀ ಕಥೆಯಾಗಿ ಕಾಣಿಸಿರಲಿಲ್ಲ. ಇಂದಿನ ಸಂದರ್ಭಕ್ಕೂ ಕಾಮತರ ಈ ಮಾತುಗಳು ಸರಿಹೊಂದುತ್ತವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಕಾಮತರು ಈ ಕಥೆ ಹೇಳಿ ಮುಗಿಸುತ್ತಿದ್ದಂತೆಯೇ, ಹರೀಶ್ ಆದೂರು ಅಲ್ಲಿಗೆ ಬಂದರು. 'ಭಾರತಾಯಣ' ಉಪನ್ಯಾಸಕ್ಕೆ ಸಮಯವಾಗುತ್ತಿದೆ ಎಂದರು. ಕಾಮತರು ಸಾವಧಾನವಾಗಿ ಎದ್ದು ವೇದಿಕೆಯ ಮೇಲೆ ಕುಳಿತರು. ನಾವು ವೇದಿಕೆಯ ಕೆಳಗೆ ಕುಳಿತೆವು. ಅನಂತರ ಅಂದಾಜು ಒಂದೂವರೆ ಗಂಟೆ ಕಾಲ ಕಾಮತರು ತಾವು ಕಂಡಂತೆ ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಹೇಳಿದರು. ನೆಹರೂ ಯುಗದ ಬಗ್ಗೆಯೂ ತುಸು ಮಾತನಾಡಿದರು. ಅವರಿಗೆ ಮಾತನಾಡುವುದು ಇನ್ನೂ ಇತ್ತೇನೋ... ಸಮಯ ಆಗಿದ್ದನ್ನು ಗಮನಿಸಿ, 'ಮಾತು ನಿಲ್ಲಿಸುತ್ತೇನೆ, ಸಂವಾದ ಆರಂಭಿಸೋಣ' ಎಂದರು.

ಇವೆಲ್ಲ ನಡೆದಿದ್ದು ಅಂದಾಜು ಒಂಬತ್ತು ವರ್ಷಗಳ ಹಿಂದೆ. ಆದರೆ ಅವೆಲ್ಲವೂ ಸ್ಮೃತಿಪಟಲದಲ್ಲಿ ಹಾಗೆಯೇ ಉಳಿದಿವೆ. ಆ ಸಂದರ್ಭದಲ್ಲಿ ಕಾಮತರ ವಯಸ್ಸು 85 ವರ್ಷಗಳನ್ನು ದಾಟಿಯಾಗಿತ್ತು. ಆ ಇಳಿ ವಯಸ್ಸಿನಲ್ಲೂ ಅವರ ಮುಖದ ಸೌಂದರ್ಯ ಮಾಸಿರಲಿಲ್ಲ. ಅಪಾರ ಜೀವನ ಪ್ರೀತಿ ಅವರಲ್ಲಿನ ಸೌಂದರ್ಯವನ್ನು ಹಾಗೆ ಕಾಪಾಡಿದ್ದಿರಬಹುದು. ಜೀವನದ ಮುಸ್ಸಂಜೆಯಲ್ಲಿ ಇದ್ದಾಗ ಕೂಡ ಅವರು ಎಷ್ಟು ಸುಂದರರಾಗಿದ್ದರು ಎಂಬುದನ್ನು ನನ್ನ ಸ್ನೇಹಿತೆಯೊಬ್ಬಳ ಮಾತುಗಳನ್ನು ಉಲ್ಲೇಖಿಸುವ ಮೂಲಕ ವಿವರಿಸಲು ಯತ್ನಿಸುವೆ: 'ಜೋಶಿ, ಎಷ್ಟು ಚೆಂದ ಇದ್ದಾರೋ ಕಾಮತರು. ಇವರೇನಾದರೂ ಎಳೆಯ ವಯಸ್ಸಿನವರಾಗಿದ್ದಿದ್ದರೆ, ನಾನು ದುಂಬಾಲು ಬಿದ್ದು ಇವರನ್ನೇ ಲವ್ ಮಾಡುತ್ತಿದ್ದೆ!'

ಕಾಮೆಂಟ್‌ಗಳು

ಕಾಮತರು ಆ ಕಾಲದಲ್ಲಿ ಸಮಾಜವಾದದ ಬಗ್ಗೆ ತುಸು ಹೆಚ್ಚು ಬರೆದು ಸಿಟ್ಟಿಗೆ ಗುರಿಯಾಗಿದ್ದೇನೊ ಸರಿ. ಆದ್ರೆ, ಈಗಿನ ಸ್ಥಿತಿ ನೋಡಿದಾಗ ಬಾವುಟ ಹಿಡಿದ ಪತ್ರಕರ್ತರ ಸಂಖ್ಯೆಯೇ ಹೆಚ್ಚಾಗಿ ಕಾಣಿಸ್ತಿದೆಯಲ್ಲಾ ಜೋಷಿ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರ

ಒಂದು ಖಾಸಗಿ ಪತ್ರ

ಅರವಿಂದ ಚೊಕ್ಕಾಡಿಯವರು ಮೂಡುಬಿದಿರೆಯಲ್ಲಿ ವಾಸಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಜಧಾನಿಯಂತಿರುವ ಮೂಡುಬಿದಿರೆಯಲ್ಲಿ ಇದ್ದುಕೊಂಡು ಇವರಷ್ಟು ಬರೆಯುತ್ತಿರುವವರು ಬಹುಷಃ ಮತ್ತಾರೂ ಇರಲಿಕ್ಕಿಲ್ಲ. ಚೊಕ್ಕಾಡಿಯವರು ನನ್ನಂತಹ ಸಾಮಾನ್ಯ ಓದುಗನೊಬ್ಬ ಒಂದು ವಾರಕ್ಕೆ ಓದಬಹುದಾದಷ್ಟನ್ನು ಒಂದು ವಾರದಲ್ಲಿ ತಾವು ಖುದ್ದು ಬರೆಯುತ್ತಾರೆ. ಅವರ ಓದಿನ ಮತ್ತು ಅರಿವಿನ ವ್ಯಾಪ್ತಿ ಅಷ್ಟಿದೆ. ಅದಿರಲಿ, ಈ ಬರಹದ ವಿಷಯ ಬೇರೆಯೇ ಇದೆ. ಪ್ರಜಾವಾಣಿ ಪತ್ರಿಕೆ ಕನ್ನಡ ಕರಾವಳಿಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆಯೇ ತನ್ನ ಆವೃತ್ತಿಯನ್ನು ಆರಂಭಿಸಿದೆ. ೧೯೪೮ರಲ್ಲೇ ಆರಂಭವಾದ ಪ್ರಜಾವಾಣಿ ಕರಾವಳಿಯಲ್ಲಿ ಸ್ವತಂತ್ರ ಆವೃತ್ತಿಯನ್ನು ಆರಂಭಿಸಿದ್ದು ಸ್ವಲ್ಪ ತಡವಾಯಿತು ಅಂತಲೇ ಹೇಳಬಹುದು. ಹಾಗೆ ತಡವಾಗಿಯಾದರೂ ತನ್ನ ಆವೃತ್ತಿಯನ್ನು ಕರಾವಳಿಯಲ್ಲಿ ಆರಂಭಿಸಿದ ಪ್ರಜಾವಾಣಿ ತನ್ನ ಓದುಗರಿಗೆ ಕಳೆದ ಒಂದೂವರೆ ವರ್ಷಗಳಿಂದ ಕರಾವಳಿಯ ಜಿಲ್ಲೆಗಳಾದ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆಂದೇ ಮೀಸಲಾದ ’ಕರಾವಳಿ’ ಎಂಬ ಸುದ್ದಿ ಪುರವಣಿಯೊಂದ ವಾರದಲ್ಲಿ ಆರು ದಿನ ಕೊಡುತ್ತಿದೆ. ನಾಲ್ಕು ಪುಟದ ಈ ಪುರವಣಿಯಲ್ಲಿ ಕಡಲ ತಡಿಯ ಸಮೃದ್ಧ ಸುದ್ದಿ, ಸುದ್ದಿ ವಿಶ್ಲೇಷಣೆ ಇರುತ್ತದೆ. ಒಟ್ಟಿನಲ್ಲಿ ಓದಲು ಖುಷಿಕೊಡುವ ದೈನಿಕ ಪುರವಣಿ ಇದು. ಇದೇ ಪುರವಣಿಯಲ್ಲಿ ಪ್ರತಿ ಬುಧವಾರ ಅರವಿಂದ ಚೊಕ್ಕಾಡಿಯವರು ’ತೀರದ ತಲ್ಲಣ’ ಎಂಬ ಅಂಕಣವೊಂದನ್ನು ಕಳೆದೊಂ