ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳನ್ನು ‘ಕೊಲಿಜಿಯಂ’ ಮೂಲಕ ನೇಮಕ ಮಾಡಬೇಕು ಎಂದು ಸಂವಿಧಾನ ಹೇಳುವುದಿಲ್ಲ. ಆದರೆ 1993ರಲ್ಲಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕ ‘ಕೊಲಿಜಿಯಂ’ ಮೂಲಕ ಆಗಬೇಕು ಎಂದು ಹೇಳಿತು.
ಭಾರತದ ನ್ಯಾಯಾಂಗಕ್ಕೆ ನಡೆಯುವ ನೇಮಕಾತಿಗಳು ಕೊಲಿಜಿಯಂ ಮೂಲಕ ಆಗಬೇಕು ಎಂಬ ವ್ಯವಸ್ಥೆ ಜಾರಿಗೆ ಬಂದಿದ್ದು ಹಂತಹಂತವಾಗಿ. ಇದೊಂದು ವಿಕಸನದ ಕತೆ. ಕಾರ್ಯಾಂಗವು ನ್ಯಾಯಾಂಗದ ಜೊತೆ ಸಂಘರ್ಷಕ್ಕೆ ಮುಂದಾದಾಗ ರಕ್ಷಣಾತ್ಮಕ ಕ್ರಮವಾಗಿ ‘ಕೊಲಿಜಿಯಂ’ ವ್ಯವಸ್ಥೆ ಜನ್ಮತಾಳಿತು ಎಂಬ ವಾದ ಇದೆ. ಕೊಲಿಜಿಯಂ ವ್ಯವಸ್ಥೆ ವಿಕಸನ ಹೊಂದಲು ಮೂಲ, ಕೇಂದ್ರ ಕಾನೂನು ಸಚಿವರು ಹೊರಡಿಸಿದ ಒಂದು ಸುತ್ತೋಲೆ ಎಂದು ತಜ್ಞರು ಹೇಳುತ್ತಾರೆ.
‘ಯಾವುದೇ ರಾಜ್ಯದ ಹೈಕೋರ್ಟ್‌ನ ಶೇಕಡ 33ರಷ್ಟು ನ್ಯಾಯಮೂರ್ತಿಗಳು ಹೊರ ರಾಜ್ಯಗಳಿಗೆ ಸೇರಿದವರಾಗಿದ್ದರೆ ಉತ್ತಮ. ದೇಶದಲ್ಲಿ ಏಕತೆ ಮೂಡಿಸಲು ಇದು ನೆರವಾಗುತ್ತದೆ’ ಎಂಬ ಮಾತಿನೊಂದಿಗೆ 1981ರಲ್ಲಿ ಹೊರಡಿಸಿದ್ದ ಸುತ್ತೋಲೆ ಆರಂಭವಾಗುತ್ತದೆ. ಪಂಜಾಬ್‌ನ ರಾಜ್ಯಪಾಲರು ಮತ್ತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ (ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ) ರವಾನಿಸಿದ ಸುತ್ತೋಲೆ ಇದು. ನಂತರ ಈ ಸುತ್ತೋಲೆಯಲ್ಲಿ ಒಂದು ಮಾತು ಬರುತ್ತದೆ.
‘ನಿಮ್ಮ ರಾಜ್ಯಗಳ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿ ಯಾಗಿ ಕೆಲಸ ಮಾಡುತ್ತಿರುವವರಿಂದ, ಬೇರೆ ರಾಜ್ಯಗಳ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ವರ್ಗಾವಣೆ ಹೊಂದಲು ಒಪ್ಪಿಗೆ ಪತ್ರ ಪಡೆದುಕೊಳ್ಳಿ’ ಎಂಬ ಸಂದೇಶ ಅದರಲ್ಲಿ ಇತ್ತು. ಇದು ನ್ಯಾಯಾಂಗದ ಮೇಲೆ ರಾಜಕೀಯ ಹಿಡಿತ ಸಾಧಿಸುವ ಯತ್ನ ಎಂಬ ಆರೋಪಗಳು ಆ ಸಂದರ್ಭದಲ್ಲಿ ಕೇಳಿಬಂದವು. ಕಾನೂನು ಸಚಿವರ ಸುತ್ತೋಲೆಯನ್ನು ಬೇರೆ ಬೇರೆ ನೆಲೆಗಳಲ್ಲಿ ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾದವು. ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 1981ರ ಡಿಸೆಂಬರ್‌ನಲ್ಲಿ ‘ಎಸ್.ಪಿ. ಗುಪ್ತ ಮತ್ತು ಭಾರತದ ರಾಷ್ಟ್ರಪತಿ’ ನಡುವಿನ ಪ್ರಕರಣದಲ್ಲಿ ಒಂದು ತೀರ್ಪು ನೀಡಿತು.
ನ್ಯಾಯಾಂಗದ ನೇಮಕಾತಿಗಳಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಪರಮಾಧಿಕಾರ ಇಲ್ಲ ಎಂದು ಸುಪ್ರೀಂ ಪೀಠ ಹೇಳಿತು. ‘ಈ ತೀರ್ಪು ನೀಡಿದ ವಿಭಾಗೀಯ ಪೀಠದ ಬಹುಪಾಲು ನ್ಯಾಯಮೂರ್ತಿಗಳು, ನ್ಯಾಯಾಂಗಕ್ಕೆ ನಡೆಯುವ ನೇಮಕಾತಿಗಳಲ್ಲಿ ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರ ನೀಡಿದ್ದರು’ ಎಂದು ವಕೀಲೆ ಜಿಯಾ ಮೋದಿ ಅವರು ‘ಭಾರತವನ್ನು ಬದಲಿಸಿದ 10 ತೀರ್ಪುಗಳು’ (Ten Judgements that Changed India) ಕೃತಿಯಲ್ಲಿ ಹೇಳಿದ್ದಾರೆ. ಈ ತೀರ್ಪು ಬಂದ ಒಂದು ದಶಕದವರೆಗೆ ನ್ಯಾಯಾಂಗಕ್ಕೆ ನಡೆಯುವ ನೇಮಕಾತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಎರಡನೆಯ ಪ್ರಕರಣ: 1980ರ ದಶಕದಲ್ಲಿ ಒಂದು ಮಹತ್ವದ ಬೆಳವಣಿಗೆ ನಡೆಯಿತು. ವಕೀಲ ಸುಭಾಷ್ ಶರ್ಮ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ವಿವಿಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಮಾಡುವಂತೆ ಕೋರಿದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಎಸ್.ಪಿ. ಗುಪ್ತ ಪ್ರಕರಣದಲ್ಲಿ ನೀಡಿದ ತೀರ್ಪಿನ ಪುನರ್ ಪರಿಶೀಲನೆಯನ್ನು ವಿಸ್ತೃತ ಪೀಠವೊಂದು ನಡೆಸಬೇಕು ಎಂಬ ಅಭಿಪ್ರಾಯಕ್ಕೆ ಬಂತು. ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ವಿಸ್ತೃತ ಪೀಠ ನಡೆಸಿದ ವಿಚಾರಣೆ ‘ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣ’ ಎಂದೇ ಖ್ಯಾತವಾಗಿದೆ.
ಈ ಪ್ರಕರಣದಲ್ಲಿ 1993ರಲ್ಲಿ ನೀಡಿದ ತೀರ್ಪಿನ ಅನ್ವಯ, ನ್ಯಾಯಾಂಗದ ನೇಮಕಾತಿಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಹೆಚ್ಚಿನ ಅಧಿಕಾರ ದೊರೆಯಿತು. ನ್ಯಾಯಮೂರ್ತಿಗಳ ನೇಮಕ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ತನ್ನ ಇಬ್ಬರು ಅತ್ಯಂತ ಹಿರಿಯ ಸಹೋದ್ಯೋಗಿಗಳ (ನ್ಯಾಯಮೂರ್ತಿಗಳು) ಜೊತೆ ಸಮಾಲೋಚಿಸಬೇಕು ಎಂಬ ನಿಯಮ ಚಾಲ್ತಿಗೆ ಬಂತು. ಸಿಜೆಐ ತನ್ನ ಹಿರಿಯ ಸಹೋದ್ಯೋಗಿಗಳ ಜೊತೆ ಚರ್ಚಿಸಿ ನೇಮಕಾತಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದಾಗಿನಿಂದ ’ಕೊಲಿಜಿಯಂ’ ವ್ಯವಸ್ಥೆ ಜನ್ಮತಾಳಿತು.
ಈ ತೀರ್ಪಿನ ಕಾರಣ, ಎಸ್.ಪಿ. ಗುಪ್ತ ಪ್ರಕರಣದಲ್ಲಿ ನೀಡಿದ ತೀರ್ಪು ಬದಿಗೆ ಸರಿಯಿತು. ನ್ಯಾಯಾಂಗದ ನೇಮಕಾತಿಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ನ್ಯಾಯಾಂಗಕ್ಕೇ ದೊರೆಯಿತು. ಆದರೆ ನೇಮಕಾತಿಗಳಲ್ಲಿನ ಅಧಿಕಾರವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಾತ್ರವಲ್ಲದೆ, ಆಯಾ ನ್ಯಾಯಾಲಯಗಳ ಕನಿಷ್ಠ ಇಬ್ಬರು ಹಿರಿಯ ನ್ಯಾಯಮೂರ್ತಿಗಳಿಗೂ ನೀಡಿತು. ನೇಮಕಾತಿ ಅಧಿಕಾರವನ್ನು ಅಷ್ಟರಮಟ್ಟಿಗೆ ವಿಕೇಂದ್ರೀಕರಣ ಮಾಡಲಾಯಿತು ಎನ್ನುತ್ತಾರೆ ಜಿಯಾ ಮೋದಿ.
ಆದರೆ ಈ ತೀರ್ಪಿನ ಕುರಿತು ಸಾಕಷ್ಟು ಟೀಕೆಗಳೂ ಇವೆ. ಸುಪ್ರೀಂ ಕೋರ್ಟ್, ನ್ಯಾಯಾಂಗದ ನೇಮಕಾತಿಗಳಲ್ಲಿ ಸಿಜೆಐ ಜೊತೆ ‘ಸಮಾಲೋಚನೆ’ ನಡೆಸಬೇಕು ಎಂಬುದನ್ನು ಸಿಜೆಐ ‘ಸಮ್ಮತಿ’ ಬೇಕು ಎನ್ನುವ ಮೂಲಕ ಈ ತೀರ್ಪು, ಸಂವಿಧಾನದ ಕೆಲವು ಅಂಶಗಳನ್ನು ತಿದ್ದಿತು ಎಂಬ ಮಾತೂ ಇದೆ. ಈ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಮುಂಚೂಣಿಯಲ್ಲಿ ನಿಂತು ವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರು ತಮ್ಮ ಆತ್ಮಕಥೆ ‘ನೆನಪು ಮಾಸುವ ಮುನ್ನ’ (Before Memory Fades) ಪುಸ್ತಕದಲ್ಲಿ: ‘ಈ ಪ್ರಕರಣದಲ್ಲಿ ನಾನು ಸೋಲಬೇಕಿತ್ತು. ಆದರೆ ಗೆದ್ದುಬಿಟ್ಟೆ’ ಎಂದು ಬರೆದಿದ್ದಾರೆ.
ಮೂರನೆಯ ಪ್ರಕರಣ: 1997–98ರಲ್ಲಿ ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಎಂ.ಎಂ. ಪುಂಚಿ ಅವರು ಐವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿದರು. ಆದರೆ ಇವರ ಅರ್ಹತೆ ಕುರಿತ ಪ್ರಶ್ನೆಗಳನ್ನು ಎತ್ತಿದ ಕಾರ್ಯಾಂಗ, ನೇಮಕ ಮಾಡಲು ನಿರಾಕರಿಸಿತು. ಇದರ ಪರಿಣಾಮವಾಗಿ, ಅಂದಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು, ಒಂಬತ್ತು ಪ್ರಶ್ನೆಗಳ ಕುರಿತು ಉತ್ತರ ಕಂಡುಕೊಳ್ಳುವಂತೆ ಸೂಚಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು.
‘ಅಡ್ವೊಕೇಟ್ಸ್ ಆನ್ ರೆಕಾರ್ಡ್ ...’ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಸಮರ್ಥಿಸಿಕೊಂಡ ಸುಪ್ರೀಂ ಕೋರ್ಟ್ ನೇಮಕಾತಿ ಪ್ರಕ್ರಿಯೆಯಲ್ಲಿ ಸಣ್ಣ ಪ್ರಮಾಣದ ಬದಲಾವಣೆ ತಂದಿತು. ನೇಮಕಾತಿ ಶಿಫಾರಸು ಮಾಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು, ತಮ್ಮ ನಾಲ್ವರು ಹಿರಿಯ ಸಹೋದ್ಯೋಗಿ ನ್ಯಾಯಮೂರ್ತಿಗಳ ಜೊತೆ ಸಮಾಲೋಚನೆ ನಡೆಸಬೇಕು ಎಂದು ಹೇಳಿತು. ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ಸಂದರ್ಭದಲ್ಲಿ ಸಿಜೆಐ ಅವರು ನಾಲ್ವರು ಹಿರಿಯ ಸಹೋದ್ಯೋಗಿಗಳ ಜೊತೆ ಸಮಾಲೋಚಿಸುವ ಪದ್ಧತಿ ಅಂದಿನಿಂದ ಜಾರಿಯಲ್ಲಿದೆ.
(ಈ ಲೇಖನ ಪ್ರಜಾವಾಣಿ ದೈನಿಕದಲ್ಲಿ ಆಗಸ್ಟ್ ೨೩ರಂದು ಪ್ರಕಟವಾಗಿದೆ.)
ಕಾಮೆಂಟ್‌ಗಳು