ವಿಷಯಕ್ಕೆ ಹೋಗಿ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ.
ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ.
ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ ವಿರುದ್ಧ ಯೂಟ್ಯೂಬ್ನಲ್ಲಿ ದೃಶ್ಯಾವಳಿ ಹರಿಬಿಡುತ್ತಿದ್ದಾರೆ ಎಂಬುದು ಆಯೋಗಕ್ಕೆ ಗೊತ್ತಾಗುತ್ತದೆ. ಒಂದು ಖಾತೆ ಬ್ಲಾಕ್‌ ಮಾಡಿದರೆ, ಇನ್ನೊಂದು ಖಾತೆ ಮೂಲಕ ಅದೇ ಕೆಲಸ ಮುಂದುವರಿಯುತ್ತದೆ. ನವಮಾಧ್ಯಮಗಳ ಮೂಲಕ ನಡೆದ ವ್ಯವಸ್ಥಿತ ಅಪ್ರಚಾರದ ಕಾರಣ ಕೊಠಾರಿ ಅವರಿಗೆ ನಿರ್ದಿಷ್ಟ ಸಂಖ್ಯೆಯ ಮತಗಳು ಕೈತಪ್ಪುತ್ತವೆ.
ಸಾಮಾನ್ಯನ ಧ್ವನಿ ಕೂಡ ಆಳುವ ಪ್ರಭುವಿಗೆ ಕೇಳುವಂತೆ ಮಾಡುತ್ತವೆ ಎಂಬ ವಿಶೇಷಣ ಹೊತ್ತಿರುವ ನವ ಮಾಧ್ಯಮಗಳು ತೆರೆದಿಟ್ಟಿರುವ ಹೊಸ ಸವಾಲುಗಳು ಇವು. ಲೋಕಸಭೆಗೆ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗ ಭರದ ಸಿದ್ಧತೆಯಲ್ಲಿ ತೊಡಗಿದೆ. ಆದರೆ ಸಾಮಾಜಿಕ ಸಂಪರ್ಕ ತಾಣಗಳು ಸೇರಿದಂತೆ ವಿವಿಧ ಮಾದರಿಯ ನವ ಮಾಧ್ಯಮಗಳು ಒಡ್ಡಿರುವ ಹೊಸ ಬಗೆಯ ಸವಾಲನ್ನು ಎದುರಿಸಲು ಬೇಕಿರುವ ಸಿದ್ಧತೆ ಮಾಡಿಕೊಳ್ಳಲು ತೀರಾ ಕಡಿಮೆ ಸಮಯ ಇರುವಂತೆ ಭಾಸವಾಗುತ್ತಿದೆ.
2009ರಲ್ಲಿ ಭಾರತದ ಲೋಕಸಭೆಗೆ ಚುನಾ ವಣೆ ನಡೆಯಿತು. ಆದರೆ ಆ ಸಂದರ್ಭದಲ್ಲಿ ಭಾರತದಲ್ಲಿದ್ದ ಅಂತರ್ಜಾಲಿಗರ ಸಂಖ್ಯೆ ಅಂದಾಜು 4.6 ಕೋಟಿ. ಫೇಸ್‌ಬುಕ್‍, ಟ್ವಿಟರ್‌ ಗಳಂತಹ ನವ ಮಾಧ್ಯಮಗಳು ಭಾರತದಲ್ಲಿ ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದವು. ಆದರೆ ಈ ಬಾರಿಯ ಚುನಾವಣೆ ಮೊದಲಿನಂತಿಲ್ಲ. ಚುನಾವಣೆ ಕುರಿತು ವರದಿ ಮಾಡುವ ಸಂದರ್ಭದಲ್ಲಿ ಮಾಧ್ಯಮಗಳು ಅನುಸರಿಸ ಬೇಕಾದ ನಿಯಮಗಳನ್ನು ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯಲ್ಲೇ ಸ್ಪಷ್ಟಪಡಿಸಿದೆ.
ಸಾಂಪ್ರದಾಯಿಕ ಮಾಧ್ಯಮ ಗಳಾದ ಪತ್ರಿಕೆಗಳು ಮತ್ತು ಟಿ.ವಿ. ವಾಹಿನಿಗಳಲ್ಲಿ ಪ್ರಸಾರ ಆಗುವ ವರದಿಗಳ ಮೇಲೆ ಕಣ್ಣಿಡುವುದು ಆಯೋಗಕ್ಕೆ ಕಷ್ಟದ ಕೆಲಸವೇನೂ ಅಲ್ಲ. ಟಿ.ವಿ, ಪತ್ರಿಕೆಗಳು ಎಲ್ಲಿಂದ ಕಾರ್ಯಾಚರಿಸುತ್ತವೆ ಎಂಬುದು ಆಯೋಗಕ್ಕೆ ಗೊತ್ತಿರುತ್ತದೆ. ಆದರೆ ಟಿ.ವಿ., ಪತ್ರಿಕೆ, ರೇಡಿಯೊ ಮಾಧ್ಯಮ ಮಾಡ ಬಹುದಾದ ಕೆಲಸಗಳೆಲ್ಲವನ್ನೂ ತಾನೊಬ್ಬನೇ ಮಾಡಬಲ್ಲ ಸಾಮರ್ಥ್ಯ ಇರುವ ನವ ಮಾಧ್ಯಮದ ಚಟುವಟಿಕೆ ಮೇಲೆ ನಿಗಾ ಇಡುವುದು ಆಯೋಗಕ್ಕೆ ಸುಲಭದ ಕೆಲಸವಲ್ಲ.    ಏಕೆಂದರೆ ನವ ಮಾಧ್ಯಮದ ಒಡೆಯ ಎಲ್ಲಿದ್ದಾನೆ ಎಂಬುದೇ ಬಹುತೇಕ ಸಂದರ್ಭದಲ್ಲಿ ಗೊತ್ತಾಗುವುದಿಲ್ಲ.
ಸಾಂಪ್ರದಾಯಿಕ ಮಾಧ್ಯಮಗಳು ನಿಯಮ ಗಳನ್ನು ಉಲ್ಲಂಘಿಸಿದರೆ ಯಾರ ವಿರುದ್ಧ ಕ್ರಮ ಜರುಗಿಸಬೇಕು ಎಂಬುದಕ್ಕೆ ಕಾನೂನಿನಲ್ಲಿ ವಿವರಣೆ ಇದೆ. ಆದರೆ ಗೋಪ್ಯವಾಗಿದ್ದೇ ತನ್ನನ್ನು ಬಳಸಿಕೊಳ್ಳುವ ಅವಕಾಶ ನೀಡುವ ನವ ಮಾಧ್ಯಮ, ಕಾನೂನಿನ ಕೈಗಳಿಂದಲೂ ತಪ್ಪಿಸಿ ಕೊಳ್ಳುತ್ತದೆ! 2012ರ ವೇಳೆಗೆ ಭಾರತದಲ್ಲಿನ ಅಂತರ್ಜಾಲಿಗರ ಸಂಖ್ಯೆ 15.16 ಕೋಟಿ. ಇದು ನವ ಮಾಧ್ಯಮಗಳ ವ್ಯಾಪ್ತಿಯನ್ನು ಹೇಳುತ್ತದೆ.
‘ಚುನಾವಣಾ ವರದಿಗಾರಿಕೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಮಾಧ್ಯಮಗಳಿಗೆ ರೂಪಿಸಿರುವ ನಿಯಮಗಳು ನವಮಾಧ್ಯಮಗಳಿಗೂ ಅನ್ವಯ ಆಗುತ್ತದೆ ಎಂದು ಆಯೋಗ ಕಳೆದ ವರ್ಷವೇ ಸ್ಪಷ್ಟಪಡಿಸಿದೆ. ಆದರೆ ನವ ಮಾಧ್ಯಮಗಳು ಮತ್ತು ಸಾಂಪ್ರದಾಯಿಕ ಮಾಧ್ಯಮಗಳಿಗೆ ಇರುವ ವ್ಯತ್ಯಾಸ ಗುರುತಿಸುವಲ್ಲಿ ಆಯೋಗ ವಿಫಲವಾದಂತಿದೆ. ಉದಾಹರಣೆಗೆ, ಅಮೆರಿಕದಲ್ಲೋ, ಆಸ್ಟ್ರೇಲಿಯಾ ದಲ್ಲೋ ಇರುವ ವ್ಯಕ್ತಿಯೊಬ್ಬ ನವ ಮಾಧ್ಯಮ ಗಳನ್ನು ಬಳಸಿ ತನ್ನಿಷ್ಟದ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರ ನಡೆಸಬಲ್ಲ. ಹೀಗೆ ಪ್ರಚಾರ ನಡೆಸುವ ವ್ಯಕ್ತಿ ಎಲ್ಲಿ ಕುಳಿತಿದ್ದಾನೆ ಎಂಬುದು ಹಲವು ಸಂದರ್ಭಗಳಲ್ಲಿ ಎದುರಾಳಿ ಪಕ್ಷದವರಿಗೆ, ಆಯೋಗದವರಿಗೆ ಗೊತ್ತಾಗುವುದೂ ಇಲ್ಲ. ಅವರು ಮಾಡುವ ಚುನಾವಣಾ ಖರ್ಚು ಲೆಕ್ಕಕ್ಕೂ ಸಿಗುವುದಿಲ್ಲ’ ಎಂದು ವಿಶ್ಲೇಷಿಸುತ್ತಾರೆ ವಕೀಲ ಕೆ.ವಿ. ಧನಂಜಯ್‍.
ಚುನಾವಣೆ ವರದಿಯನ್ನು ಪತ್ರಿಕೆಗಳು ಹೇಗೆ ಮಾಡಬೇಕು ಎಂಬ ಬಗ್ಗೆ ಭಾರತೀಯ ಪತ್ರಿಕಾ ಮಂಡಳಿ ನಿಯಮ ರೂಪಿಸಿದೆ. ‘ಜಾತಿ, ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳು ವುದು ನಿಷಿದ್ಧ. ಹಾಗಾಗಿ ಭಾಷೆ, ಜಾತಿ, ಧರ್ಮಗಳ ನೆಲೆಯಲ್ಲಿ ಜನರಲ್ಲಿ ದ್ವೇಷ ಮೂಡಿಸುವಂಥ ವರದಿಗಳನ್ನು ಮಾಧ್ಯಮಗಳು ಪ್ರಕಟಿಸಬಾರದು’ ಎಂದು ಮಂಡಳಿ ಸೂಚಿಸಿದೆ. ಆದರೆ ನವ ಮಾಧ್ಯಮಗಳು ಪತ್ರಿಕಾ ಮಂಡಳಿಯ ವ್ಯಾಪ್ತಿಗೆ ಬರುವುದಿಲ್ಲ. ನವ ಮಾಧ್ಯಮಗಳ ನಿಯಂತ್ರಣಕ್ಕೆ ಭಾರತದಲ್ಲಿ ಸಾಂವಿಧಾನಿಕ ಸಂಸ್ಥೆ ಇಲ್ಲ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಜಾತಿ–ಧರ್ಮದ ಆಧಾರದಲ್ಲಿ ಇಂಥ ಅಭ್ಯರ್ಥಿಗೇ ಮತ ಹಾಕಿ, ಇಂಥವರಿಗೆ ಮತ ಹಾಕಬೇಡಿ ಎಂದು ಕರೆ ನೀಡುವ ಹತ್ತಾರು ಪೋಸ್ಟ್‌ಗಳು ಫೇಸ್‌ ಬುಕ್‌ ನಲ್ಲಿ ಈಗಾಗಲೇ ಹರಿದಾಡುತ್ತಿವೆ. 
ವುಗಳನ್ನು ಫೇಸ್‌ ಬುಕ್‌ನಲ್ಲಿ ಪ್ರಕಟಿಸುವವರು ತಮ್ಮದೇ ಖಾತೆಯಿಂದ ಹಾಗೆ ಮಾಡಿರುತ್ತಾರೆ ಎನ್ನಲಾ ಗದು. ಎಷ್ಟೇ ಉದ್ರೇಕಕಾರಿ ವಾಕ್ಯಗಳನ್ನು ಬರೆದೂ, ಅನಾಮಿಕರಾಗಿಯೇ ಉಳಿದುಬಿಡುವ ಅವಕಾಶ ವನ್ನು ನವ ಮಾಧ್ಯಮ ನೀಡುತ್ತಿದೆ. ಇಂಥ ಸವಾಲುಗಳನ್ನು ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗ ಹೇಗೆ ಎದುರಿಸುತ್ತದೆ?
2013ರಲ್ಲಿ ಭಾರತದಲ್ಲಿ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ 8.20 ಕೋಟಿ ಆಗಿತ್ತು ಎಂದು ಕಂಪೆನಿ ಹೇಳಿಕೊಂಡಿದೆ. 18 ವರ್ಷ ಮೇಲ್ಪಟ್ಟವರು ಮಾತ್ರ ಫೇಸ್‌ಬುಕ್‌ನಲ್ಲಿ ಖಾತೆ ಹೊಂದಬಹುದು ಎಂದು ಕಂಪೆನಿ ಹೇಳುತ್ತದೆ. ಇಷ್ಟೂ ಜನ 18 ವರ್ಷ ಮೇಲ್ಪಟ್ಟವರೇ ಆಗಿದ್ದು, ಅವರೆಲ್ಲರ ಹೆಸರು ಮತದಾರರ ಪಟ್ಟಿಯಲ್ಲಿ ಇದೆ ಎಂದು ಭಾವಿಸುವು ದಾದರೆ, ಫೇಸ್‌ಬುಕ್‌ ಮೂಲಕ ನಡೆಯುವ ಚುನಾವಣಾ ಪ್ರಚಾರ ಮತ್ತು ಅಪಪ್ರಚಾರದ ಪರಿಣಾಮ ಓದುಗರ ಊಹೆಗೆ ಬಿಟ್ಟಿದ್ದು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಹೆಸರಿನಲ್ಲಿ ನವಮಾಧ್ಯಮಗಳಲ್ಲಿ ನಡೆಸುವ ಪ್ರಚಾರದ ಮೇಲೆ ಆಯೋಗ ಕಣ್ಣಿಡಬಹುದು.
ಆದರೆ ಅವರ ಸಹಸ್ರಾರು ಬೆಂಬಲಿಗರು ನಡೆಸುವ ಪ್ರಚಾರದ ಬಗ್ಗೆ ಕಣ್ಣಿಡುವುದು ಯಾವುದೇ ಸಂಸ್ಥೆಗೂ ಕಷ್ಟದ ಕೆಲಸ. ‘ಕಾರ್ಯಕರ್ತರು ನಡೆಸುವ ಮನೆ ಮನೆ ಪ್ರಚಾರವನ್ನು ತಡೆಯಲು ಆಗದು. ಅದೇ ರೀತಿ ನವಮಾಧ್ಯಮಗಳ ಮೂಲಕ ನಡೆಯುವ ಪ್ರಚಾರ ಕಾನೂನಿಗೆ ಅನುಗುಣವಾಗಿ ಇರುವಂತೆ ನಿಗಾ ವಹಿಸುವುದು ಕಷ್ಟದ ಕೆಲಸ’ ಎನ್ನುತ್ತಾರೆ ವಕೀಲ ಕೆ.ಎನ್‌. ಫಣೀಂದ್ರ.
ಇಬ್ಬರು ವ್ಯಕ್ತಿಗಳು ಖಾಸಗಿಯಾಗಿ ಮಾತನಾ ಡುವಾಗ ನಡೆಯುವ ನಿರ್ದಿಷ್ಟ ಅಭ್ಯರ್ಥಿಯ ವೈಯಕ್ತಿಕ ನಿಂದನೆಯನ್ನು ಕಾನೂನಿನ ಮೂಲಕ ತಡೆಯಲಾಗದು. ಆದರೆ ಮತದಾರರ ಸಮೂಹ ವನ್ನು ಉದ್ದೇಶಿಸಿ ಮಾತನಾಡುವಾಗ ಅಭ್ಯರ್ಥಿಗಳ ಚಾರಿತ್ರ್ಯ ಹರಣ ಮಾಡುವಂತಿಲ್ಲ. ಇದು ಕಾನೂನು. ನವ ಮಾಧ್ಯಮಗಳ ಮೂಲಕ ವೈಯಕ್ತಿಕ ಮಾತುಕತೆಯನ್ನೂ ನಡೆಸಬಹುದು, ಸಮೂಹ ವನ್ನು ಉದ್ದೇಶಿಸಿಯೂ ಮಾತನಾಡ ಬಹುದು. ಬಹಿರಂಗ ಸಮಾವೇಶಗಳ ವೇದಿಕೆ ಯಿಂದ ಅಭ್ಯರ್ಥಿಗಳು ಆಡುವ ಮಾತಿನ ಕುರಿತು ಆಯೋಗ ನಿಗಾ ಇಡಬಹುದು. ಆದರೆ ನವ ಮಾಧ್ಯಮಗಳಲ್ಲಿ ಖಾಸಗಿ ಮಟ್ಟದಲ್ಲಿ ನಡೆ ಯುವ ವೈಯಕ್ತಿಕ ನಿಂದನೆಯನ್ನು ತಡೆಯು ವುದು ಹೇಗೆ? ಹೀಗೆ ಮಾಡುತ್ತಿರುವ ವ್ಯಕ್ತಿ ಯಾರು, ಆತ ಎಲ್ಲಿದ್ದಾನೆ, ಆತನಿಗೆ ಯಾವುದೇ ಅಭ್ಯರ್ಥಿಯ ಜೊತೆ ನೇರ ಸಂಬಂಧ ಇದೆಯೇ ಎಂಬುದನ್ನು ಅರಿಯುವ ಮುನ್ನವೇ ಮತದಾನವೂ ಮುಗಿದುಹೋಗಬಹುದು.
‘ನವ ಮಾಧ್ಯಮಗಳ ಮೂಲಕ ಚುನಾವಣಾ ಪ್ರಚಾರವನ್ನು ನೀತಿ ಸಂಹಿತೆಗೆ ಅನುಗುಣವಾಗಿ ಕೈಗೊಳ್ಳಲು ಅಭ್ಯಂತರವಿಲ್ಲ. ಆದರೆ ಅಲ್ಲಿ ನೀಡುವ ಜಾಹೀರಾತನ್ನು ಚುನಾವಣಾ ವೆಚ್ಚಕ್ಕೇ ಸೇರಿಸಲಾಗುತ್ತದೆ. ನವ ಮಾಧ್ಯಮಗಳ ಮೂಲಕ ಯಾವುದೇ ವ್ಯಕ್ತಿ ನೀತಿ ಸಂಹಿತೆ ಉಲ್ಲಂಘಿಸಿದರೆ, ಅವರು ಕಾನೂನು ಕ್ರಮ ಎದುರಿಸಬೇಕಾ ಗು ತ್ತದೆ’ ಎಂದು ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಅನಿಲ್‌ ಕುಮಾರ್‌ ಝಾ ಸ್ಪಷ್ಟಪಡಿಸುತ್ತಾರೆ.
‘ಫೇಸ್‌ಬುಕ್‌, ಟ್ವಿಟರ್‌ನಂಥ ಮಾಧ್ಯಮಗಳ ಮೂಲಕ ಜಾಹೀರಾತು ನೀಡುವುದನ್ನು ನಿಯಂತ್ರಿಸುವ ಕಾರ್ಯ ಆಯೋಗದ ಪಾಲಿಗೆ ಕಷ್ಟಕರವಾದದ್ದು. ವಿದೇಶದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬ ತನ್ನಿಷ್ಟದ ಅಭ್ಯರ್ಥಿಯ ಪರವಾಗಿ ಫೇಸ್‌ಬುಕ್‌ ಮೂಲಕ ಜಾಹೀರಾತು ನೀಡುತ್ತಾನೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ  ಆಯೋಗಕ್ಕೆ ಬಿಗಿ ಕ್ರಮ ಕೈಗೊಳ್ಳಲು ಆಗದು’ ಎಂದು ಧನಂಜಯ್‌ ವಾದಿಸುತ್ತಾರೆ.
ಮತದಾನ ನಡೆಯಲಿರುವ 48 ಗಂಟೆಗಳ ಮೊದಲಿನ ಅವಧಿಯಲ್ಲಿ ಅಭ್ಯರ್ಥಿಗಳು ಬಹಿರಂಗ ಸಮಾವೇಶ ಆಯೋಜಿಸುವಂತಿಲ್ಲ. ಈ ಕಾನೂನು ರೂಪಿಸಿದ್ದು ನವಮಾಧ್ಯಮಗಳೇ ಇಲ್ಲವಾಗಿದ್ದ ಕಾಲದಲ್ಲಿ. ಆದರೆ ಈಗ  48 ಗಂಟೆಗಳ ಮೊದಲಿನ ಅವಧಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬ ತನಗಿಷ್ಟ ವಿರುವ ಅಭ್ಯರ್ಥಿಯ ಭಾಷಣದ ದೃಶ್ಯಾವಳಿ ಯನ್ನು ಯೂಟ್ಯೂಬ್‌ ಅಥವಾ ಅದೇ ಮಾದರಿಯ ಇತರ ವೆಬ್‌ಸೈಟ್‌ ಮೂಲಕ ಸಹಸ್ರಾರು ಜನರಿಗೆ ಹಂಚುತ್ತಾನೆ. ಬಹಿರಂಗ ಸಮಾವೇಶಗಳಲ್ಲಿ ಆದಂತೆಯೇ, ಇಲ್ಲಿ ಸಂದೇಶ ಸಹಸ್ರಾರು ಜನರನ್ನು ತಲುಪಿರುತ್ತದೆ. ಆದರೆ ಇದು ವಾಸ್ತವದಲ್ಲಿ ಬಹಿರಂಗ ಸಮಾವೇಶ ಅಲ್ಲ. ಹಾಗೆ ಸಂದೇಶ ರವಾನಿಸುವ ವ್ಯಕ್ತಿ ತನ್ನ ನೈಜ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಕಾನೂನು ಹೇಗೆ ಕೆಲಸ ಮಾಡುತ್ತದೆ?
ಆಧುನಿಕ ಮಾಧ್ಯಮಗಳನ್ನು ಋಣಾತ್ಮಕ ವಾಗಿಯೇ ನೋಡಬೇಕಿಲ್ಲ. ಈ ಮಾಧ್ಯಮಗಳ ಬಳಕೆದಾರರು ವ್ಯಕ್ತಪಡಿಸುವ ಅನಿಸಿಕೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲೂ ಅಳವಡಿಸಿಕೊಳ್ಳುತ್ತಿವೆ. ಸಾಮಾನ್ಯನ ದನಿಗೆ ಅಷ್ಟರಮಟ್ಟಿಗೆ ಬೆಲೆ ಬಂದಿದೆ.
ಭಾರತದ ಪ್ರಜಾ ಪ್ರಭುತ್ವವೇ trial and error  ಹಂತದಲ್ಲಿದೆ. ಈ ವ್ಯವಸ್ಥೆ ಪಕ್ವಗೊಳ್ಳಲು ಇನ್ನೂ ಕೆಲವು ಕಾಲ ಬೇಕು. ಇನ್ನೂ ಪಕ್ವಗೊಂಡಿರದ ಪ್ರಜಾಪ್ರಭುತ್ವ ವ್ಯವಸ್ಥೆ ಯೊಂದು, ಈಗ ಹೊಸ ಕಾಲದ ಸವಾಲನ್ನು ಎದುರಿಸಬೇಕಾಗಿದೆ. ನವ ಮಾಧ್ಯಮಗಳನ್ನು ಬಳಸಿ ಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸ ದಂತೆ ತಡೆಯುವ ಸವಾಲನ್ನು ದೇಶ ಹೇಗೆ ಎದುರಿಸುತ್ತದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ವಿಜಯ್ ಜೋಷಿ.
(ಈ ಬರಹ ಪ್ರಜಾವಾಣಿಯಲ್ಲಿ 15-03-2014ರಂದು ಪ್ರಕಟವಾಗಿದೆ.)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ