ವಿದ್ಯಾಧರ ಎಸ್. ನೈಪಾಲ್ ಅವರ ಬಗ್ಗೆ ಇತ್ತೀಚೆಗೆ ಗಿರೀಶ ಕಾರ್ನಾಡರು
ಒಂದು ಹೇಳಿಕೆ ನೀಡಿದ್ದರು. ಅದು ವಿವಾದಕ್ಕೂ ಕಾರಣವಾಗಿತ್ತು. (ಅಂದಹಾಗೆ ನಮ್ಮಲ್ಲಿ ಎಲ್ಲವೂ ವಿವಾದಕ್ಕೆ
ಹೇತುವಾಗುತ್ತಿದೆಯಲ್ಲ?!) ಈ ಸಂದರ್ಭದಲ್ಲಿ ನೈಪಾಲರನ್ನು ನಿಮ್ಮ ಅಭಿಪ್ರಾಯದಲ್ಲಿ ಸೆಕ್ಯುಲರಿಸಂ ಅಂದರೆ
ಏನು ಎಂದು ಒಬ್ಬರು ಪ್ರಶ್ನಿಸಿದ್ದರು. “ಭಾರತದ ಮಟ್ಟಿಗೆ ಸೆಕ್ಯುಲರಿಸಂ ಅಂದರೆ ಯಾವುದೋ ಒಂದು ರಾಜಕೀಯ
ಪಕ್ಷದ ಜೊತೆ ಗುರುತಿಸಿಕೊಳ್ಳುವುದು ಅಥವಾ ಗುರುತಿಸಿಕೊಳ್ಳದೇ ಇರುವುದು. ಅದಕ್ಕಿಂತ ಹೆಚ್ಚಿನ ಯಾವುದೇ
ಅರ್ಥ ಇಲ್ಲ” ಎಂದು ನೈಪಾಲರು ಉತ್ತರಿಸಿದ್ದರು.
ಹೌದು ನಮ್ಮಲ್ಲಿ ಸೆಕ್ಯುಲರಿಸಂ ಅಂದರೆ ಏನರ್ಥ? ಈ ಬಗ್ಗೆ ಬೇರೆ
ಬೇರೆ ಸಂದರ್ಭಗಳಲ್ಲಿ ಬರೆದ ಮೂರು ಪುಟ್ಟ ಪುಟ್ಟ ಬರಹಗಳು ಇಲ್ಲಿವೆ. ನೋಡಿ. ಓದಿದ ನಂತರ ನಿಮಗೆ ಏನನ್ನಿಸಿತು
ಎಂಬುದನ್ನು ಬರೆಯಿರಿ.
***
ನಾನು ಭಾರತೀಯ. ನಾನು ಯಾವುದೇ ಮತದ ಅನುಯಾಯಿ ಅಲ್ಲ. ಅಂದರೆ ಯಾವುದೇ ಒಂದು ನಿರ್ದಿಷ್ಟ ಗ್ರಂಥ ಹಾಗೂ ನಿರ್ದಿಷ್ಟ ಮತಸ್ಥಾಪಕನ ಅನುಯಾಯಿ ನಾನಲ್ಲ. ಭಾರತದಲ್ಲಿರುವ ಬಹುಪಾಲು ಮಂದಿ ನನ್ನಂಥವರೇ. ಅವರಿಗೆ ಒಂದೇ ದೇವರು, ಒಂದೇ ಗ್ರಂಥ, ಒಬ್ಬನೇ ಗುರು ಇಲ್ಲ. ಹಿಂದೂ ಎಂಬ ರಿಲಿಜನ್ ನನಗೆ ಇನ್ನೂ ಅರ್ಥವಾಗುತ್ತಿಲ್ಲ.
ನಾನು ಯಾವುದೇ ರಿಲಿಜನ್ನ ಅನುಯಾಯಿ ಅಲ್ಲದ ಕಾರಣ, ರಿಲಿಜನ್ ಇರುವ ದೇಶಗಳಿಗೆ ಬೇಕಾದ ಸೆಕ್ಯುಲರಿಸಂ ನನಗೆ ಅನ್ವಯ ಆಗದು! ಸೆಕ್ಯುಲರಿಸಂ ನನಗೆ ಅನ್ವಯ ಆಗದು ಎಂದಾಕ್ಷಣ ನಾನು ಕೋಮುವಾದಿ ಆಗುವುದಿಲ್ಲ!! ಸೆಕ್ಯುಲರ್ ಅಲ್ಲದ, ಕೋಮುವಾದಿ ಕೂಡ ಅಲ್ಲದ ಮೂರನೆಯ ಒಂದು ಐಡೆಂಟಿಟಿ ನನಗಿದೆ. ಅದು ಯಾವುದು ಎಂದು ಹೇಳಿ. ನೀನು ಸೆಕ್ಯುಲರ್, ಅದಲ್ಲದಿದ್ದರೆ ನೀನು ಕೋಮುವಾದಿ. ಇವೆರಡರಲ್ಲಿ ಯಾವುದೋ ಒಂದು, ಅಷ್ಟೇ ಎಂದು ಹೇಳಬೇಡಿ!
ನಾನು ಯಾವುದೇ ರಿಲಿಜನ್ನ ಅನುಯಾಯಿ ಅಲ್ಲದ ಕಾರಣ, ರಿಲಿಜನ್ ಇರುವ ದೇಶಗಳಿಗೆ ಬೇಕಾದ ಸೆಕ್ಯುಲರಿಸಂ ನನಗೆ ಅನ್ವಯ ಆಗದು! ಸೆಕ್ಯುಲರಿಸಂ ನನಗೆ ಅನ್ವಯ ಆಗದು ಎಂದಾಕ್ಷಣ ನಾನು ಕೋಮುವಾದಿ ಆಗುವುದಿಲ್ಲ!! ಸೆಕ್ಯುಲರ್ ಅಲ್ಲದ, ಕೋಮುವಾದಿ ಕೂಡ ಅಲ್ಲದ ಮೂರನೆಯ ಒಂದು ಐಡೆಂಟಿಟಿ ನನಗಿದೆ. ಅದು ಯಾವುದು ಎಂದು ಹೇಳಿ. ನೀನು ಸೆಕ್ಯುಲರ್, ಅದಲ್ಲದಿದ್ದರೆ ನೀನು ಕೋಮುವಾದಿ. ಇವೆರಡರಲ್ಲಿ ಯಾವುದೋ ಒಂದು, ಅಷ್ಟೇ ಎಂದು ಹೇಳಬೇಡಿ!
***
ಭಾರತದ ರಾಜಕೀಯ ಸಂದರ್ಭದಲ್ಲಿ ಸೆಕ್ಯುಲರ್ ಆಗಿರುವುದು ಅಂದರೇನು? ಇಲ್ಲಿ ಸೆಕ್ಯುಲರ್ ಆಗಿರುವುದು ಎಂದರೆ ಕೋಮುವಾದಿ ಆಗಿರದೇ ಇರುವುದು ಮಾತ್ರವೇ? ಕೋಮುವಾದಿ ಆಗಿರುವುದು ಎಂದರೆ ಸೆಕ್ಯುಲರ್ ಆಗಿರದೇ ಇರುವುದೇ?
ಭಾರತದ ಬಹುಪಾಲು ಮಂದಿ ಯಾವುದೇ ರಿಲಿಜನ್ ಅನುಯಾಯಿಗಳಲ್ಲ. ರಿಲಿಜನ್ ಇರುವ ದೇಶಗಳಿಗೆ ಬೇಕಿರುವ ಸೆಕ್ಯುಲರಿಸಮ್ಮಿಗೆ ಹೊರತಾದ ಒಂದು ಮೌಲ್ಯ ಈ ನಾಡಿನಲ್ಲಿ ಈಗಾಗಲೇ ಇದೆ ಅಲ್ಲವೇ? ಅದೇ ನಮ್ಮ ದೇಶವನ್ನು, ಇಲ್ಲಿನ ಸಾಮಾಜಿಕ ಸಾಮರಸ್ಯ ಕಾಪಾಡಿಕೊಂಡು ಬಂದಿದೆ ಅಲ್ಲವೇ? ಹಾಗಾದರೆ ಆ ಮೌಲ್ಯವನ್ನು ಯಾವ ಹೆಸರಿನಿಂದ ಕರೆಯೋಣ?
***
ನಾಡಿನ ಕೋಟ್ಯಂತರ ಆಸ್ತಿಕರ ಪಾಲಿಗೆ ಧರ್ಮಸ್ಥಳ ಶ್ರದ್ಧಾಕೇಂದ್ರ. ಅಲ್ಲಿನ ದೇವರು ಮಂಜುನಾಥಸ್ವಾಮಿ. ಅಂದರೆ ಶಿವ. ಶೈವ ಪಂಥದ ಆಸ್ತಿಕರು ಆರಾಧಿಸುವುದು ಇವನನ್ನೇ. ಧರ್ಮಸ್ಥಳದ ಅರ್ಚಕರು ವೈಷ್ಣವ ಪಂಥದವರು. ಅಲ್ಲಿನ ಧರ್ಮಾಧಿಕಾರಿಗಳು ಜೈನರು. ಅಲ್ಲಿಗೆ ಬರುವ ಆಸ್ತಿಕರು ಸರ್ವಪಂಥಗಳಿಗೆ ಸೇರಿದವರು!
ಸೆಕ್ಯುಲರ್ ಎಂಬ ಪರಿಕಲ್ಪನೆಯು ಮೊದಲು ಬಳಕೆಗೆ ಬಂದಿದ್ದು ಇಂಗ್ಲೆಂಡಿನಲ್ಲಿ, 1851ರಲ್ಲಿ. ಇಲ್ಲಿ ಧರ್ಮಸ್ಥಳದಲ್ಲಿ ಅದಕ್ಕಿಂತಲೂ ಹಿಂದಿನಿಂದಲೇ ಶೈವ, ವೈಷ್ಣವ ಮತ್ತು ಜೈನ ಸಂಪ್ರದಾಯಗಳ ತ್ರಿವೇಣಿ ಸಂಗಮ ಅಸ್ತಿತ್ವದಲ್ಲಿ ಇದೆ. ಪರಸ್ಪರ ವಿಭಿನ್ನ ಚಿಂತನೆಗಳನ್ನು ಹೊಂದಿರುವ ಈ ಮೂರು ಪಂಥದವರು ಅಪೂರ್ವ ಸಾಮರಸ್ಯ ದಿಂದ ಈ ಕ್ಷೇತ್ರದಲ್ಲಿ ಭಕ್ತಿಭಾವದಿಂದ ನಡೆದುಕೊಳ್ಳುತ್ತಿರುವುದು ಸೆಕ್ಯುಲರ್ ವಾದದಿಂದಲಾ?
ನನ್ನಜ್ಜ ಧರ್ಮಸ್ಥಳದ ಭಕ್ತ. ಆತ ಒಂದರ್ಥದಲ್ಲಿ ಶೈವ. ಏಕೆಂದರೆ ಆತನ ಕುಲದೈವ ಶಿವ. ಶ್ರದ್ಧಾವಂತ ಸಂಪ್ರದಾಯಸ್ಥ ಆತ. 'ವಿಭಿನ್ನ ಸಂಪ್ರದಾಯಗಳನ್ನು ಪಾಲಿಸುವವರು ಅಲ್ಲಿನ ಅರ್ಚಕರು. ಆದರೂ ನೀನು ಅಲ್ಲಿಗೆ ಹೋಗುತ್ತೀಯಾ. ನೀನು ಸೆಕ್ಯುಲರ್ ವಾದಿಯಾ?' ಎಂದು ಒಮ್ಮೆ ಕೇಳಿದ್ದೆ. ಸೆಕ್ಯುಲರ್ ಅಂದರೆ ಏನು ಎಂಬುದು ಗೊತ್ತಾಗದರೆ ಅಜ್ಜ ಕಣ್ಣು ಪಿಳಿಪಿಳಿ ಬಿಟ್ಟಿದ್ದ. ಸೆಕ್ಯುಲರ್ ಅಲ್ಲದಿದ್ದರೆ ನೀನು ಕೋಮುವಾದಿ ಆಗಿದ್ದೀಯಾ ಎಂದು ಕೇಳಿದ್ದೆ. ಅದೂ ಅಜ್ಜನಿಗೆ ಗೊತ್ತಾಗಲಿಲ್ಲ. ಊಹೊಂ ಗೊತ್ತಾಗುತ್ತಿಲ್ಲ ನನಗೆ ಇದೆಲ್ಲ ಎಂದಿದ್ದ.
ನಾವು ರಾಜಕೀಯ ಮತ್ತು ಸಂಸ್ಕೃತಿಯ ಕುರಿತು ಚರ್ಚೆ ನಡೆಸುವಾಗಲೆಲ್ಲ, ಒಬ್ಬ ಸೆಕ್ಯುಲರ್ ಅದಲ್ಲದಿದ್ದರೆ ಆತ ಕೋಮುವಾದಿ ಎಂಬ ಪೂರ್ವ ನಿರ್ಧಾರಿತ ನೆಲೆಯಲ್ಲೇ ಮಾತನಾಡುತ್ತಿದ್ದೇವೆ. ಇದೇ ರೀತಿ ಮುಂದುವರಿದರೆ ನಮ್ಮ ಯಾವ ಚರ್ಚೆಗಳೂ, ಮಂಥನಗಳೂ ಅಮೃತವನ್ನು ನೀಡಲಾರವು. ಅವು ಹಾಲಾಹಲವನ್ನು ಮಾತ್ರ ನೀಡಬಲ್ಲವು. ಯಾವುದೇ ರಿಲಿಜನ್ ಅನುಯಾಯಿ ಅಲ್ಲದ ನಮಗೆ (ಅಥವಾ ನಮ್ಮಲ್ಲಿನ ಬಹುಸಂಖ್ಯಾತರಿಗೆ) ಸೆಕ್ಯುಲರ್ ಅಲ್ಲದ, ಕೋಮುವಾದಿಯೂ ಅಲ್ಲದ ಮೂರನೆಯ ಇರುವು ಇದೆಯಲ್ಲವೇ? ಬನ್ನಿ ಅದನ್ನು ಹುಡುಕೋಣ...!!!
ಕಾಮೆಂಟ್‌ಗಳು