ವಿಷಯಕ್ಕೆ ಹೋಗಿ

ರಾಜಕೀಯದಲ್ಲಿ ಹದಿಹರಯ!


ಆಕಾಶದಲ್ಲಿ ಹಾರುವ ಏರೋಪ್ಲೇನು! ಕಣ್ಣಿನ ನೇರಕ್ಕೇ ರೆಕ್ಕೆ ಬಿಚ್ಚಿ ಹಾರುವ ಕೀಟ ಏರೋಪ್ಲೇನು! ಇವೆರಡು ಚಿತ್ರಗಳು ಬೆಂಗಳೂರು ಮತ್ತು ಉತ್ತರ ಕನ್ನಡದ ಪರಿಸರವನ್ನು ಕಟ್ಟಿಕೊಡುವಂತಿವೆ. ಅಷ್ಟು ಮಾತ್ರವಲ್ಲ, ಎರಡು ಪ್ರದೇಶಗಳಲ್ಲಿನ ರಾಜಕೀಯ ಪರಿಸರವನ್ನೂ ಈ ರೂಪಕಗಳನ್ನು ಹಿಡಿದಿಡುವಂತಿವೆ.
ಬೆಂಗಳೂರು, ಮಂಡ್ಯ, ತುಮಕೂರುಗಳಲ್ಲಿ ಚಲಾವಣೆಯಾಗುಷ್ಟು ಹಣ, ಚುನಾವಣೆಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗುವುದಿಲ್ಲ. ನಾಡಿನ ಎರಡು ಪ್ರಮುಖ ಸಮುದಾಯಗಳು ಈ ಭಾಗದ ಚುನಾವಣೆಯ ಫಲಿತಾಂಶ ನಿರ್ಧರಿಸಿದರೆ, ಉತ್ತರ ಕನ್ನಡ ಜಿಲ್ಲೆಯ ಚುನಾವಣೆಗಳ ಫಲಿತಾಂಶ ನಿರ್ಧರಿಸುವ ಸಮುದಾಯಗಳ ಸಂಖ್ಯೆ ಬಹುವಾಗಿದೆ. ಅಷ್ಟರ ಮಟ್ಟಿಗೆ ಅಲ್ಲಿ ಹಣ ಮತ್ತು ಜಾತಿಯ ಪ್ರಭಾವ ಕಡಿಮೆ.
ಇಂತಿಪ್ಪ ಉತ್ತರ ಕನ್ನಡ ಜಿಲ್ಲೆಯ ಪಟ್ಟಣ ಪಂಚಾಯಿತಿಯೊಂದರ ಚುನಾವಣೆಗೆ ಕೆಲವು ವರ್ಷಗಳ ಹಿಂದೆ ಪರಿಚಯದ ವ್ಯಕ್ತಿಯೊಬ್ಬರು ಸ್ಪರ್ಧಿಸಿದ್ದರು. ಅವರು ಯುವಕರು, ಒಳ್ಳೆಯ ಹೆಸರು ಸಂಪಾದಿಸಿರುವ ಕುಟುಂಬದ ಹಿನ್ನೆಲೆ ಉಳ್ಳವರು, ಊರಿನಲ್ಲಿ ಒಂದಷ್ಟು ಕೆಲಸಗಳನ್ನು ಮಾಡಿದವರು. ರಾಜಕಾರಣಕ್ಕೆ ಯುವಕರು ಬರಬೇಕು, ಯುವಕರು ರಾಜಕೀಯ ಪ್ರವೇಶ ಮಾಡಿ ಅಲ್ಲಿನ ದೋಷಗಳನ್ನು ನಿವಾರಿಸಬೇಕು (ಹೇಗೆ ನಿವಾರಿಸಬೇಕು? ಪವಾಡ ಮಾಡಬೇಕೆ?) ಎಂಬೆಲ್ಲ ಮಾತುಗಳನ್ನು ಕೇಳುತ್ತಿದ್ದೇವಲ್ಲ? ಇದೇ ರೀತಿಯ ಮಾತುಗಳು ಆಗಲೂ ಕೇಳಿಬರುತ್ತಿದ್ದವು.
ಸಾಕಷ್ಟು ಧನಾತ್ಮಕ ಅಂಶಗಳು ಇದ್ದರೂ ಅವರು ಚುನಾವಣೆಯಲ್ಲಿ ಸೋಲುಂಡರು. `ಎಲೆಕ್ಷನ್ನಲ್ಲಿ ಆರಿಸಿ ಬಂದು, ಒಂದಷ್ಟು ಒಳ್ಳೆಯ ಕೆಲಸ ಮಾಡಲು ಮನ್ಷಂಗೆ 45 ವರ್ಷ ದಾಟಬೇಕು. 
28 ವರ್ಷದ ಪೋರರಿಗೆ ಮನೆ ಯಜಮಾನಿಕೆ ನೀಡಲೂ ಹಿಂದೆ ಮುಂದೆ ನೋಡುವ ನಮ್ಮ ಜನ, ಲೋಕ ಆಳಲು ಬಿಟ್ಟಾರೆಯೇ?' ಎಂದು ಆ ಸಂದರ್ಭದಲ್ಲಿ ಹಿರಿಯರೊಬ್ಬರು ಕಳಕಳಿಯಿಂದ ಮಾತನಾಡ್ದ್ದಿದರು. ಅದಾದ ನಂತರ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಂತಿಲ್ಲ.
ಸಮಾಜದ ವಿವಿಧ ಜಾತಿಗಳಿಗೆ ನಮ್ಮ ರಾಜಕೀಯ ಕ್ಷೇತ್ರ ತಕ್ಕ ಮಟ್ಟಿಗೆ ಮೀಸಲಾತಿ ಕಲ್ಪಿಸಿದೆ. ಕೆಲವು ಜಾತಿಗಳಿಗೆ ಅಗತ್ಯಕ್ಕಿಂತ ಹೆಚ್ಚು, ಇನ್ನು ಕೆಲವು ಜಾತಿಗಳಿಗೆ ಕಡಿಮೆ ಪ್ರಾತಿನಿಧ್ಯ ದೊರೆತಿರಬಹುದು. ಆದರೆ ಆ ಸಮುದಾಯಗಳ ಕಿಂಚಿತ್ ಧ್ವನಿಯಾದರೂ ಕೇಳಿಬರುವಷ್ಟು ಪ್ರಾತಿನಿಧ್ಯ ಶಾಸನಸಭೆಗಳಲ್ಲಿ ಇದೆ. ಆದರೆ ಈ ಅದೃಷ್ಟ ನಾಡಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಯುವ ಸಮುದಾಯಕ್ಕೆ ಇದೆಯೇ? `ಕಾಮನಬಿಲ್ಲು' ಸಂಚಿಕೆಯಲ್ಲೇ ಹಿಂದೊಮ್ಮೆ ಪ್ರಕಟವಾದ ಲೇಖನ, ಅಂಕಿ-ಅಂಶ ಆಧರಿಸಿ ಹೇಳುವುದಾದರೆ, ರಾಜ್ಯದ ವಿಧಾನಸಭೆಯಲ್ಲಿ ಯುವ ಸಮುದಾಯದ ಪ್ರಾತಿನಿಧ್ಯ ನಗಣ್ಯ.
ಯುವಕರು ಸೂಕ್ತ ಪ್ರಾತಿನಿಧ್ಯ ಹಾಗೂ ಅದಕ್ಕೂ ಮೊದಲು ರಾಜಕೀಯಕ್ಕೆ ಪ್ರವೇಶ ಪಡೆಯಲು, ರಾಜಕೀಯದಲ್ಲಿ ಈಗಾಗಲೇ ನೆಲೆಯೂರಿರುವ ಹಿರಿಯರ ಕೃಪಾಕಟಾಕ್ಷಕ್ಕೆ ಒಳಗಾಗಲೇಬೇಕು ಎಂಬ ಸ್ಥಿತಿ ಇದೆ. ಏಕೆಂದರೆ, ಇಂದಿನ ರಾಜಕೀಯ ಸನ್ನಿವೇಶದಲ್ಲಿ ಹೆಚ್ಚಿನ ರಾಜಕೀಯ ಪಕ್ಷಗಳು 50-60 ವರ್ಷ ವಯಸ್ಸು ಮೀರಿರುವವರ ನಾಯಕತ್ವದಲ್ಲಿದೆ.
40 ವರ್ಷ ವಯಸ್ಸಿನ ಒಳಗಿನವರನ್ನು ಯುವಕರು ಎಂದು ಒಪ್ಪಿಕೊಳ್ಳಬಹುದು ಎಂದಾದರೆ, ಇಂದಿನ ಯುವಕರಿಗೆ ಪ್ರಾತಿನಿಧ್ಯ ನೀಡುವ ಸಾಮರ್ಥ್ಯ ಇರುವುದು ಹಿರಿಯರ ಕೈಯಲ್ಲಿ ಎಂದಾಯಿತು. ಉತ್ತರ ಕನ್ನಡ ಜಿಲ್ಲೆಯ ಘಟನೆಯೊಂದನ್ನು ಪ್ರಾಸಂಗಿಕವಾಗಿ ಈಗಾಗಲೇ ಉಲ್ಲೇಖಿಸಿದ್ದರ ಎಳೆ ಹಿಡಿದು ಹೇಳುವುದಾದರೆ, ಹುಡುಗರಿಗೆ ಮನೆಯ ಯಜಮಾನಿಕೆ ನಿರ್ವಹಿಸಲಿಕ್ಕೇ ಸುಲಭಕ್ಕೆ ಎಡೆಮಾಡಿಕೊಡದ ಇಂದಿನ ಹಿರಿಯರು, ದೇಶ ಅಥವಾ ರಾಜ್ಯ ಆಳುವ ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಿಯಾರೇ?
ಈಗಾಗಲೇ ಇರುವ ರಾಜಕೀಯ ಪಕ್ಷಗಳಲ್ಲಿ ಪ್ರಿಯಾಂಕ ಖರ್ಗೆ, ಬಿ.ವೈ. ರಾಘವೇಂದ್ರ, ಎಚ್.ಡಿ. ಕುಮಾರಸ್ವಾಮಿ ಪ್ರಧಾನ ಭೂಮಿಕೆಗೆ ನೇರವಾಗಿ ಪ್ರವೇಶ ಪಡೆಯಬಹುದು. ಆದರೆ ನಮ್ಮ ನಿಮ್ಮ ಓಣಿಯ ಚಿಗುರು ಮೀಸೆಯ, ಕನಸು ಕಂಗಳ ಪೋರ ಹೇಗೆ ಪ್ರವೇಶ ಪಡೆಯಬೇಕು? ನಮ್ಮ ಸಮಾಜದ ವೈಚಿತ್ರ್ಯವೆಂದರೆ, ಈಗಾಗಲೇ ಬೆಳೆದು ನಿಂತ ನಾಯಕರ ಕುಟುಂಬದ ಯುವಕ ಚುನಾವಣೆಗೆ ನಿಂತರೆ ಅವನನ್ನು ಒಪ್ಪಿಕೊಳ್ಳಲು ಸಿದ್ಧರಿರುತ್ತಾರೆ.
ಆದರೆ ರಾಜಕೀಯದ ಹಿನ್ನೆಲೆ ಇಲ್ಲದ ಕುಟುಂಬದ ಕುಡಿಯೊಬ್ಬ ಚುನಾವಣೆಗೆ ಸ್ಪರ್ಧಿಸಿದರೆ ಅವನನ್ನು ನಂಬುವ ಜನಸಾಮಾನ್ಯರ ಸಂಖ್ಯೆಯೂ ಕಡಿಮೆ. ಊರಿನ ಗೌಡನ ಮಗನೇ ಮುಂದಿನ ಗೌಡ ಆಗಬೇಕು (ಇದನ್ನು ಪಟೇಲ ಎಂದೂ ಓದಿಕೊಳ್ಳಬಹುದು!) ಎಂದು ಜನರೂ ಬಯಸುತ್ತಾರಲ್ಲ, ಹಾಗೆ. ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿದ, ರಾಜಕೀಯ ಹಿನ್ನೆಲೆ ಇಲ್ಲದ ಯುವಕರು ಪಡೆದ ಮತಗಳ ಸಂಖ್ಯೆಯೇ ಇದಕ್ಕೆ ನಿದರ್ಶನ. ಹಾಗಾದರೆ ಕುಟುಂಬ ರಾಜಕಾರಣದ ಹಿನ್ನೆಲೆ ಇಲ್ಲದವರಿಗೆ ಚುನಾವಣಾ ರಾಜಕೀಯ ಮರೀಚಿಕೆಯೇ? ಅವರು ಸದಾಕಾಲ, ಇನ್ನೊಬ್ಬ ಮುಖಂಡನ ಜೈಕಾರದಲ್ಲೇ ತೃಪ್ತಿಪಟ್ಟುಕೊಳ್ಳಬೇಕೇ?
ಯುವ ಕಾಂಗ್ರೆಸ್ಸಿನ ಅಧ್ಯಕ್ಷರಾಗಿರುವ ರಿಜ್ವಾನ್ ಅರ್ಷದ್ ಅವರಿಗೆ ಬಲಾಢ್ಯ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲ. ಆದರೆ ಅವರು ಈಗ ರಾಜ್ಯ ಯುವ ಕಾಂಗ್ರೆಸ್ಸಿನ ಅಧ್ಯಕ್ಷರು, ಅವರ ವಯಸ್ಸು 34ರ ಆಸುಪಾಸಿನಲ್ಲಿದೆ. ಎಡೆಬಿಡದ ಚುನಾವಣಾ ಪ್ರಚಾರ ಕಾರ್ಯದ ನಡುವೆ `ಕಾಮನಬಿಲ್ಲು' ಜೊತೆ ಮಾತನಾಡಿದ ರಿಜ್ವಾನ್ ಅವರಲ್ಲೂ ಇದೇ ಪ್ರಶ್ನೆ ಕೇಳಿದ್ದಾಯಿತು.
“ಇವತ್ತಿನ ಸಂದರ್ಭದಲ್ಲಿ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿರುವುದು ಧನಾತ್ಮಕ ಅಂಶ ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಯುವಕರು ರಾಜಕೀಯಕ್ಕೆ ಬರಲು ಹಾದಿಗಳು ಮುಚ್ಚಿಹೋಗಿಲ್ಲ. ನನಗೆ ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲ. ಆದರೆ ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕ (ಎನ್.ಎಸ್.ಯು.ಐ) ಮೂಲಕ ನಾನು ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಪಡೆದೆ. ಇದೇ ರೀತಿಯ ರಾಜಕೀಯ ಪ್ರವೇಶವನ್ನು ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎ.ಬಿ.ವಿ.ಪಿ ಮತ್ತು ಎಡ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳೂ ನೀಡುತ್ತಿವೆ” ಎಂಬುದು ರಿಜ್ವಾನ್ ಮುಂದಿಡುವ ವಾದ.
ರಾಜಕೀಯದ ಒಳಸುಳಿಗಳೇ ಬೇರೆ. ಚಳವಳಿ, ಹೋರಾಟಗಳ ಒಳಸುಳಿಗಳೇ ಬೇರೆ. ಚಳವಳಿ ಅಥವಾ ಹೋರಾಟ ಯುವಜನರಲ್ಲಿ ನೀನೆಷ್ಟು ಸಮರ್ಥವಾಗಿ ಚಳವಳಿ ಕಟ್ಟಬಲ್ಲೆ ಎಂಬ ಪ್ರಶ್ನೆ ಕೇಳಿದರೆ, ರಾಜಕೀಯ ಬೇರೆಯದೇ ಆದ ಪ್ರಶ್ನೆಗಳನ್ನು ಮುಂದಿಡುತ್ತದೆ.
ರಾಜಕೀಯ ಮಾಡು ಇಲ್ಲವೆ ಮಡಿ ಯುದ್ಧದಂತೆ. ಅದು ತನ್ನಲ್ಲಿಗೆ ಪ್ರವೇಶ ಬಯಸುವ ಯುವಕನಲ್ಲಿ, `ನನ್ನ ಪಕ್ಷಕ್ಕೆ ನೀನೇನು ಕೊಡಬಲ್ಲೆ' ಎಂಬ ಪ್ರಶ್ನೆಯನ್ನು ನೇರವಾಗಿ ಕೇಳುತ್ತದೆ. ಪಕ್ಷದ ನಿಧಿಗೆ ನೀನೇನು ಕೊಡಬಲ್ಲೆ ಎಂಬಂಥ ಪ್ರಶ್ನೆಯೂ ಅದರಲ್ಲಿ ಇರಬಹುದು. ನಿನ್ನ ಚುನಾವಣೆಯ ಖರ್ಚನ್ನು ನೋಡಿಕೊಳ್ಳಬಲ್ಲೆಯಾ? ನಿನ್ನ ಅಕ್ಕಪಕ್ಕದ ಕ್ಷೇತ್ರಗಳ ಖರ್ಚಿಗೂ ಸಹಾಯ ಮಾಡಬಲ್ಲೆಯಾ, ಎಷ್ಟು ಜನರನ್ನು ಸಂಘಟಿಸಬಲ್ಲೆ? ಎಂಬ ಪ್ರಶ್ನೆಗಳೂ ಇಲ್ಲದಿಲ್ಲ.
ಸಮಾಜದಲ್ಲಿ ಪರಿವರ್ತನೆ ತರಬಲ್ಲೆ ಎಂದು ಯುವಕರು ಆತ್ಮವಿಶ್ವಾಸದಿಂದ ಹೇಳಿದರೂ ಪಕ್ಷಕ್ಕೆ ಏನು ನೀಡಬಲ್ಲೆ ಎಂಬ ಪ್ರಶ್ನೆಗೆ ಸಾಮಾನ್ಯ ಯುವಕರು ಅಳುಕಿನ ಉತ್ತರ ನೀಡಬೇಕಾದ ಸಂದರ್ಭ ಎದುರಾಗಬಹುದು. ಇದು ಇಂದಿನ ಯುವಕರ ಪಾಲಿನ ಅತಿದೊಡ್ಡ ತೊಡಕು.
`ಧ್ವನಿ ಇಲ್ಲದವನಿಗೆ ಚಳವಳಿಗಳು, ಹೋರಾಟಗಳು ಧ್ವನಿ ಕೊಡುತ್ತವೆ. ಅದೇ ರೀತಿ, ರಾಜಕೀಯ ಶಕ್ತಿಯನ್ನೂ ಚಳವಳಿ, ಹೋರಾಟಗಳು ನೀಡುತ್ತವೆ. ನನಗೆ ರಾಜಕೀಯ ಕುಟುಂಬದ ಹಿನ್ನೆಲೆ ಕಿಂಚಿತ್ತೂ ಇಲ್ಲ. ಆದರೂ ನಾನು ರಾಜಕೀಯ ಪ್ರವೇಶ ಪಡೆದೆ' ಎನ್ನುತ್ತಾರೆ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಬಿಜೆಪಿಯ ಸಿ.ಟಿ. ರವಿ. ವಿದ್ಯಾರ್ಥಿ ಸಂಘಟನೆಗಳು ಮತ್ತು ಚಳವಳಿಗಳೇ ಯುವಕರಿಗೆ ರಾಜಕೀಯ ಪ್ರವೇಶಕ್ಕೆ ಇರುವ ಹೆಬ್ಬಾಗಿಲು.
ಮಂಗಳೂರು ಮೂಲದ ಜಾರ್ಜ್ ಫರ್ನಾಂಡೀಸ್ ಅವರಿಗೆ ಯಾವ ಜಾತಿಯ ಬಲ ಇತ್ತು? ಅವರಿಗೆ ಹಣದ ಬಲ ಎಂದಾದರೂ ಇತ್ತೇ? ಆದರೂ ಅವರು ಬಿಹಾರದಿಂದ ಲೋಕಸಭೆಗೆ ಆಯ್ಕೆಯಾಗಲಿಲ್ಲವೇ? ಇದು ಸಾಧ್ಯವಾಗಿದ್ದು ಅವರು ಮುನ್ನಡೆಸಿದ ಕಾರ್ಮಿಕ ಹೋರಾಟದಿಂದ ಎನ್ನುವುದು ರವಿ ಅವರ ವಾದ.
ಈ ಮಾತನ್ನು ರಿಜ್ವಾನ್ ಅವರೂ ಆಂಶಿಕವಾಗಿ ಒಪ್ಪುತ್ತಾರೆ. `ದುಡ್ಡಿದ್ದವರಿಗೇ ರಾಜಕೀಯ ಎಂಬ ಧೋರಣೆ ಮಧ್ಯಮ ವರ್ಗದ ಯುವಕರು ರಾಜಕೀಯಕ್ಕೆ ಬರಲು ದೊಡ್ಡ ತೊಡಕಾಗಿರುವುದು ನಿಜ. ಇಂಥ ಧೋರಣೆ, ನಿಲುವುಗಳಿಂದ ನಾಡಿಗೆ ಹೊಸ ರಾಜಕೀಯ ಮುಂದಾಳತ್ವವೇ ಸಿಗದಂತೆ ಆಗಬಹುದು. ಆದರೆ ಇವತ್ತಿನ ದುಡ್ಡಿನ ಬಲದ ರಾಜಕೀಯ ಮುಖಂಡರಿಗೂ, ಚಳವಳಿಗಳ ಹಿನ್ನೆಲೆಯಿಂದ ಬಂದ ರಾಜಕೀಯ ಮುಖಂಡರಿಗೂ ಸಾಕಷ್ಟು ವ್ಯತ್ಯಾಸ ಇದೆ.
ಚಳವಳಿ, ಹೋರಾಟಗಳು ಸಾಮಾಜಿಕ ಬದ್ಧತೆಯನ್ನು ಬಿತ್ತುತ್ತವೆ. ಹಣ ಬಲವೊಂದನ್ನೇ ನಂಬಿಕೊಂಡು ರಾಜಕೀಯ ಮಾಡುವವರಲ್ಲಿ ಅಂಥ ಬದ್ಧತೆ ಕಾಣುವುದು ಕಷ್ಟ' ಎಂದು ಅವರು ಹೇಳುತ್ತಾರೆ. `ರಾಜಕೀಯಕ್ಕೆ ನಮ್ಮ ಬದುಕಿನ ದಿಕ್ಕು ನಿರ್ಧರಿಸುವ ಶಕ್ತಿ ಇದೆ. ವಿಭಿನ್ನ ಪಕ್ಷಗಳ ರಾಜಕೀಯ ಸಿದ್ಧಾಂತಗಳನ್ನು ಅರಿಯುವುದು, ನಮ್ಮ ಸಮಾಜಕ್ಕೆ ಯಾವುದು ಯುಕ್ತ, ಯಾವುದು ಯುಕ್ತವಲ್ಲ ಎಂಬ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದೂ ರಾಜಕೀಯ ಪ್ರವೇಶಕ್ಕೆ ಇರುವ ಪ್ರಧಾನ ಬಾಗಿಲು' ಎನ್ನುವುದು ಸಿಪಿಎಂ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯ ಎಸ್.ವೈ. ಗುರುಶಾಂತ್ ಅವರ ಮಾತು.
ಹಾಲಿ ರಾಜಕಾರಣಿಗಳು ಚಳವಳಿಗಳ ಮೂಲಕ ಯುವಕರು ರಾಜಕೀಯಕ್ಕೆ ಬರಬಹುದು ಎಂಬ ವಾದವನ್ನು ಮುಂದೊಡ್ಡಿದರೆ, ಅವರ ವಾದವನ್ನು ಪ್ರಶ್ನಿಸುವ ಧಾಟಿಯಲ್ಲಿ ಮಾತನಾಡುತ್ತಾರೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಎ. ನಾರಾಯಣ. `2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯುವಕರಲ್ಲಿ ಬಹುಪಾಲು ಮಂದಿ ರಾಜಕೀಯ ಕುಟುಂಬದ ಹಿನ್ನೆಲೆ ಉಳ್ಳವರಾಗಿದ್ದರು.
ರಾಜಕೀಯ ಪ್ರವೇಶವೂ ಎಂಥವನಿಗೇ ಆದರೂ ಕಷ್ಟಕರ ಎಂಬ ವಾತಾವರಣ ಬೆಳೆಯುತ್ತಿದೆ. ಅದರಲ್ಲೂ ಮಧ್ಯಮ ವರ್ಗದ, ರಾಜಕೀಯ ಕುಟುಂಬ ಮತ್ತು ದುಡ್ಡಿನ ಶಕ್ತಿ ಇಲ್ಲದ ಯುವಕರ ಪಾಲಿಗೆ ಇದು ಮತ್ತೂ ಕಷ್ಟಕರ. ರಾಜಕೀಯ ಪ್ರವೇಶಕ್ಕೆ ಇರುವ ರಹದಾರಿಯನ್ನು ಸರಿಪಡಿಸದೆ ಯುವಕರು ರಾಜಕೀಯಕ್ಕೆ ಬರಬೇಕು ಎಂದು ಆಶಿಸುವುದು ಸಮಂಜಸ ಅಲ್ಲ' ಎಂದು ಅವರು ಹೇಳುತ್ತಾರೆ.
ಆದರೆ ರಾಜಕೀಯ ಎಂದರೆ ಚುನಾವಣೆಗಳಲ್ಲಿ ಸ್ಪರ್ಧಿಸುವುದು ಮಾತ್ರವಲ್ಲ. ವಿವಿಧ ವೇದಿಕೆಗಳನ್ನು ಬಳಸಿಕೊಂಡು ರಾಜಕೀಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದೂ ಯುವಕರಿಂದ ಆಗಬೇಕಾದ ಕೆಲಸ ಎನ್ನುವುದು ಡಾ. ನಾರಾಯಣ ಅವರ ಮಾತು. ರಾಜಕೀಯ ಪ್ರವೇಶಕ್ಕೆ ಪಕ್ಷಗಳ ಹಿರಿಯ ಮರ್ಜಿ ಬೇಕು ಎಂಬುದು ನಿಜ. ಆದರೆ ಯುವಕರ ಪಾಲಿಗೆ ಧ್ವನಿಯಾಗಿ ಎಂದು ರಾಜಕೀಯ ಪಕ್ಷಗಳ ಮೇಲೆ ಒತ್ತಡ ತರಬಲ್ಲ ಗುಂಪಾದರೂ ಯುವಕರಲ್ಲಿ ಇದೆಯೇ? ಊಹೂಂ, ಅದೂ ಇಲ್ಲ. ಪ್ರವೇಶಕ್ಕೆ ಇನ್ನೊಬ್ಬರ ಮರ್ಜಿ ಬೇಕು, ಆದರೆ ಇಂಥ ಗುಂಪು ಸೃಷ್ಟಿಸಿಕೊಂಡು ರಾಜಕೀಯವಾಗಿ ಸಕ್ರಿಯವಾಗಲು ಯಾವ ಸಮಸ್ಯೆ ಇದೆ? ಸಾಮಾಜಿಕ ಹೊಣೆಗಾರಿಕೆಯಿಂದ ಯುವಕರೇ ಹಿಂದೆ ಸರಿಯುತ್ತಿದ್ದಾರೆ ಎಂದು ಕೆಲವೊಮ್ಮ ಭಾಸವಾಗಲು ಇದು ಒಂದು ಕಾರಣ.
ಇವತ್ತಿನ ಸಾಮಾಜಿಕ ಸಂದರ್ಭ ಯುವಕರು ರಾಜಕೀಯ ಪ್ರವೇಶಿಸಲು ಅನುಕೂಲ ಆಗಿದೆಯೇ? ರಾಜಕೀಯ ಕಲುಷಿತಗೊಂಡಿದೆ, ಅಲ್ಲಿ ಹಣ ಮತ್ತು ತೋಳ್ಬಲಕ್ಕೆ ಇರುವ ಪ್ರಾಧಾನ್ಯತೆ ಅಭಿವೃದ್ಧಿ ವಿಚಾರಗಳಿಗೆ ಇಲ್ಲ ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ ಇಂಥ ಅಪಸವ್ಯಗಳನ್ನು ನಿವಾರಿಸುವ ಉದ್ದೇಶದಿಂದ ರಾಜಕೀಯಕ್ಕೆ ಪ್ರವೇಶ ಪಡೆಯಲು ಎಷ್ಟು ಮಂದಿ ಯುವಕರು ತಯಾರಿದ್ದಾರೆ? ಈಗಿರುವ ಯಾವ ರಾಜಕೀಯ ಪಕ್ಷ ಅಭಿವೃದ್ಧಿಯೊಂದನ್ನೇ ಅಜೆಂಡಾ ಮಾಡಿಕೊಂಡಿರುವ ಯುವಕರನ್ನು ಸೆಳೆಯುವ ಶಕ್ತಿ ಉಳಿಸಿಕೊಂಡಿದೆ.
ನಾಡಿನ ಸಮಸ್ತ ಯುವ ಸಮುದಾಯವನ್ನು ಸೆಳೆಯಬಲ್ಲ ಅಜೆಂಡಾ ಪ್ರಧಾನ ಭೂಮಿಕೆಯಲ್ಲಿರುವ ಯಾವುದೇ ರಾಜಕೀಯ ಪಕ್ಷದಲ್ಲಿಯೂ ಇಲ್ಲ. ಇದೇ ಕಾರಣಕ್ಕೆ ರಾಜಕೀಯ ಎಂಬುದು ಇವತ್ತು ಯುವಕರನ್ನು ಆಕರ್ಷಿಸುತ್ತಿಲ್ಲ.
ಎಲ್ಲೋ ಒಂದೆರಡು ಕಡೆ ಯುವಕರು ರಾಜಕೀಯ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಿಕೊಂಡರೂ, ಅವರಿಗೆ ಅಭಿವೃದ್ಧಿಯ ಕುರಿತು ಸ್ಪಷ್ಟ ಕಲ್ಪನೆಯೇ ಇರುವುದಿಲ್ಲ. ಆ ವ್ಯಕ್ತಿ ಆರಿಸಿ ಬಂದರೂ, ಮಾಡುವುದು ಹಿರಿಯರು ತೋರಿಸಿದ ಕೆಲಸಗಳನ್ನೇ! ಇಂಥ ಶೂನ್ಯತೆಯ ಕಾರಣಕ್ಕೇ ಇಂದಿನ ಯುವಕರು ಅಣ್ಣಾ ಹಜಾರೆಯಂಥ ಹಿರಿಯಜ್ಜನ ಹಿಂದೆ ಹೋಗಬಲ್ಲರು. ಆದರೆ ರಾಜಕೀಯದತ್ತ ಮನಸ್ಸು ಮಾಡಲಾರರು. ಅಲ್ಲವೇ?
    -ವಿಜಯ್ ಜೋಷಿ
    (ಪ್ರಜಾವಾಣಿಯ 'ಕಾಮನಬಿಲ್ಲು' ಪುರವಣಿಯಲ್ಲಿ ಏಪ್ರಿಲ್‌ ೨೫ರಂದು ಪ್ರಕಟವಾದ ಲೇಖನ...)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ