ಅದು 1980-90ರ ದಶಕ. ಪ್ರಪಂಚದ ಅತಿಸೂಕ್ಷ್ಮ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟ ಸಾಲಿನ ಉತ್ತರ ಕನ್ನಡ ಜಿಲ್ಲೆಗೆ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಯೋಜನೆಗಳು ದಾಂಗುಡಿಯಿಡಲು ಸಿದ್ಧವಾಗಿ ನಿಂತಿದ್ದ ಕಾಲ.ಕೈಗಾದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಅಣುಸ್ಥಾವರದ, ಬೇಡ್ತಿ ಯೋಜನೆ ವಿರುದ್ಧ ರಾಜ್ಯದಾದ್ಯಂತ ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿದ್ದವು. 1981-82ರ ಸುಮಾರಿಗೆ ಉ.ಕ. ಜಿಲ್ಲೆಯ ಶಿರಸಿಯಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಸಭೆ ಸೇರಿ ಬೃಹತ್ ಜಲವಿದ್ಯುತ್ ಯೋಜನೆಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದ್ದರು.
ಶಿರಸಿ ತಾಲೂಕಿನ ಭೈರುಂಬೆಯ ಪ್ರಗತಿಪರ ಕೃಷಿಕ ಕೆ.ಎಂ. ಹೆಗಡೆ ಮತ್ತಿತರರು 1995-96ರ ಸಮಯದಲ್ಲಿ ಉ.ಕ. ಜಿಲ್ಲೆಗೆ ಪರ್ಯಾಯ ಅಭಿವೃದ್ಧಿ ಮಾದರಿಗಳ ರೂಪುರೇಷೆಗಳ ಬಗ್ಗೆ ಚಿಂತನೆ ನಡೆಸಿದ್ದರು. 1993-94ರಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬೇಡ್ತಿ ಯೋಜನೆಯನ್ನು ವಿರೋಧಿಸಿ ತಾವೇ ಖುದ್ದಾಗಿ ಸೋಂದಾದಿಂದ ಯಲ್ಲಾಪುರ ತಾಲೂಕಿನ ಮಾಗೋಡಿನ ತನಕ ಪಾದಯಾತ್ರೆ ನಡೆಸಿದ್ದರು; ಬೇಡ್ತಿ ನದಿಗೆ ಅಣೆಕಟ್ಟು ನಿರ್ಮಿಸಲು ಬಿಡಲಾರೆವು ಎಂದು ಮಾಗೋಡಿನಲ್ಲಿ ಸುಮಾರು 40 ಸಾವಿರ ಮಂದಿ ಪ್ರತಿಜ್ಞೆ ಕೈಗೊಂಡಿದ್ದರು. ಹೀಗೆ ಇಡೀ ಉ.ಕ. ಜಿಲ್ಲೆಯೇ ಪರಿಸರ ಪರ ಹೋರಾಟವೊಂದರಲ್ಲಿ ಕುದಿಯುತ್ತಿತ್ತು.
ಇಂಥ ಮಹತ್ವದ ಕಾಲಘಟ್ಟದಲ್ಲಿ, ಅಂದರೆ 1989ರಲ್ಲಿ ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರು ಕೆನರಾ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುವ ನಿರ್ಧಾರ ಕೈಗೊಂಡರು. ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದು ರಾಜಕೀಯ ಜೀವನ ಆರಂಭಿಸಲು ಅಲ್ಲ; ಬದಲಿಗೆ ಪ್ರಕೃತಿ ವಿರೋಧಿ ಯೋಜನೆಗಳ ವಿರುದ್ಧದ ಬಂಡಾಯಕ್ಕೆ ಶಕ್ತಿ ನೀಡಲು.
ಆ ಸಂದರ್ಭದಲ್ಲಿ ಉ.ಕ. ಜಿಲ್ಲೆಯ ರಾಜಕೀಯ ಪರಿಸ್ಥಿತಿ ಗಮನಿಸಿದ್ದ ರಾಜಕೀಯ ವಿಶ್ಲೇಷಕರು ‘ಚುನಾವಣೆಯಲ್ಲಿ ಕಾರಂತರ ಜಯ ನಿಶ್ಚಿತ’ ಎಂದು ಷರಾ ಬರೆದಿದ್ದರು. ಇಷ್ಟಿದ್ದರೂ ಚುನಾವಣೆ ಫಲಿತಾಂಶ ಬಂದಾಗ ಕಾರಂತರಿಗೆ ಸೋಲಾಗಿತ್ತು.ಅದೇ ಕೊನೆ, ಅನಂತರ ರಾಜ್ಯ ರಾಜಕೀಯದಲ್ಲಿ ಯಾರೊಬ್ಬರೂ ಪರಿಸರ ಸಂರಕ್ಷಣೆಯನ್ನು ಗುರಿಯಾಗಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ ದಾಖಲೆ ಇಲ್ಲ.
ನಮ್ಮ ಜನಪ್ರಿಯ ರಾಜಕೀಯ ಪಕ್ಷಗಳ ಸಿದ್ಧಾಂತದ ಬಗ್ಗೆ ಒಮ್ಮೆ ಕಣ್ಣು ಹಾಯಿಸೋಣ. ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‌ನ ಅಜೆಂಡಾ ಬಡತನ ನಿರ್ಮೂಲನೆ, ಜಾತ್ಯತೀತ ತತ್ವದ ಬಲಪಡಿಸುವಿಕೆ ಮತ್ತು ಅಭಿವೃದ್ಧಿ.ದೇಶದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯ ರಾಜಕೀಯ ಸಿದ್ಧಾಂತ ಗಾಂಧೀ ಪ್ರಣೀತ ಸಮಾಜವಾದ (1984ರ ಲಖನೌ ಸಮಾವೇಶದಲ್ಲಿ ಪಕ್ಷ ಕೈಗೊಂಡ ನಿರ್ಣಯದಂತೆ). ಇನ್ನು ಎಡಪಕ್ಷಗಳು, ಜನತಾದಳ, ಡಿಎಂಕೆ, ಪಿಎಂಕೆ ಮುಂತಾದ ಅಸಂಖ್ಯ ಪಕ್ಷಗಳ ರಾಜಕೀಯ ಸಿದ್ಧಾಂತ ಕೂಡ ಬಡತನ ನಿರ್ಮೂಲನೆ, ಅಭಿವೃದ್ಧಿಯೇ ಆಗಿದೆ. ರಾಜಕೀಯ ಪಕ್ಷಗಳು ತಾವು ಹೇಳಿಕೊಳ್ಳುವ ಸಿದ್ಧಾಂತವನ್ನು ಎಷ್ಟರಮಟ್ಟಿಗೆ ಪಾಲಿಸುತ್ತವೆ ಎಂಬ ವಿಚಾರದ ಚರ್ಚೆಗೆ ಈಗ ಹೋಗುವುದೇ ಬೇಡ!
ಆದರೆ ಪ್ರಶ್ನೆಯಿಷ್ಟೆ: ನಮ್ಮ ಪ್ರಮುಖ ರಾಜಕೀಯ ಪಕ್ಷಗಳಿಗೆ ಕನಿಷ್ಟ ಹೇಳಿಕೊಳ್ಳಲಿಕ್ಕಾದರೂ ಪರಿಸರ ಪರ ನಿಲುವು ಇಲ್ಲವಾ? ಯಾವ ಪಕ್ಷಕ್ಕೆ ಅಂಥ ಗಟ್ಟಿ ನಿಲುವಿದೆ? ಕಾಂಗ್ರೆಸ್ ಆಡಳಿತವಿದ್ದಾಗ ಪರಿಸರ ವಿರೋಧಿ ಯೋಜನೆಯೊಂದು ಜಾರಿಗೆ ಬಂದರೆ ಬಿಜೆಪಿ ಅದನ್ನು ವಿರೋಧಿಸುವ ನಾಟಕವಾಡುತ್ತದೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ನಾಟಕ ಆಡುವ ಸರದಿ ಕಾಂಗ್ರೆಸ್‌ನದ್ದಾಗುತ್ತದೆ, ಅಷ್ಟೆ. ಇದೇ ಕಾರಣಕ್ಕೇ ಇವತ್ತು ನಮ್ಮ ರಾಜಕೀಯ ಪಕ್ಷಗಳಿಗೆ ಎಸ್.ಇ.ಝೆಡ್, ತದಡಿ ಯೋಜನೆ, ಗುಂಡ್ಯ ಯೋಜನೆ, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ, ಕುಲಾಂತರಿ ತಳಿಗಳ ಬಗ್ಗೆ ಒಂದು ಖಚಿತ ನಿಲುವು ತೆಗೆದುಕೊಳ್ಳಲಾಗುತ್ತಿಲ್ಲ.
ನಾವು ಪ್ರಾಕೃತಿಕ ಸಂಪನ್ಮೂಲಗಳನ್ನು ಈಗ ಬಳಸುತ್ತಿರುವ ವೇಗದಲ್ಲೇ ಮುಂದೆಯೂ ಬಳಸಿದರೆ ಈ ಭೂಮಿ ಇನ್ನು ನೂರು ವರ್ಷಕ್ಕಿಂತ ಹೆಚ್ಚು ಕಾಲ ಬಾಳಲಾರದು ಎಂಬ ಮಾತು ಪರಿಸರ ವಿಜ್ಞಾನಿಗಳ ವಲಯದಲ್ಲಿ ಈಗಾಗಲೇ ಕೇಳಿಬರುತ್ತಿದೆ.ಪರಿಸರ ಹಾಳು ಮಾಡುವ ಕೆಲಸದಲ್ಲಿ ಭಾರತ ಕೂಡ ವಿಶ್ವದ ಮುಂದುವರೆದ ದೇಶಗಳಿಗೆ ಸ್ಪರ್ಧೆ ನೀಡುತ್ತಿದೆ.ಇನ್ನು ‘ಅಭಿವೃದ್ಧಿ’ಯ ಹೆಸರಿನಲ್ಲಿ ಅರಣ್ಯ ಮತ್ತು ಕೃಷಿ ಭೂಮಿಯನ್ನೂ ಕೈಗಾರಿಕೆಗಳಿಗೆ ದಾನ ಮಾಡುವ ಕೆಲಸ ನಮ್ಮ ದೇಶದಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಭಾರತ ಭೀಕರ ಆಹಾರ ಕ್ಷಾಮಕ್ಕೆ ಒಳಗಾಗುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ.
ಹಿಂದೆ ಎಲ್ಲೋ ಓದಿದ ನೆನಪು. ಬಹುಷಃ ಯು.ಆರ್. ಅನಂತಮೂರ್ತಿ ಅವರು ಬರೆದ ವಾಲ್ಮೀಕಿಯ ನೆವದಲ್ಲಿ ಪುಸ್ತಕದಲ್ಲಿರಬೇಕು: "ನಮ್ಮಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ... ಹೀಗೆ ಎಲ್ಲ ಜಾತಿ ಧರ್ಮಗಳ ಪರವಾಗಿ ಮಾತನಾಡಲು ಒಂದೊಂದು ರಾಜಕೀಯ ಪಕ್ಷಗ್ಳಿವೆ. ಆದರೆ ನಮ್ಮ ದೇಶದ ಅವಿಭಾಜ್ಯ ಅಂಗವಾದ ಪರಿಸರ, ಪ್ರಾಣಿ, ಪಕ್ಷಿಗಳ ಪರವಾಗಿ ಮಾತನಾಡಲು ಒಂದೇ ಒಂದೆ ರಾಜಕೀಯ ಪಕ್ಷನಮ್ಮಲ್ಲಿಲ್ಲ" ಎಂದು ಅವರು ಬರೆದಿದ್ದರು.
ರಾಜಕೀಯ ಎಂಬುದು ಕೊಳಕು, ಅಲ್ಲಿರುವವರೇ ಭ್ರಷ್ಟರು ಎಂಬ ಮಾತುಗಳನ್ನು ಕ್ಷಣಕಾಲ ಬದಿಗಿಟ್ಟು ಯೋಚಿಸಿದರೆ ಇಂದು ಪರಿಸರಪರ ಚಳವಳಿಗಳಿಗೆ ರಾಜಕೀಯ ಬಲ ಅತ್ಯಗತ್ಯ ಎಂಬುದು ಯಾರಿಗಾದರೂ ಮನವರಿಕೆಯಾದೀತು.ಪರಿಸರದ ಪರವಾಗಿ ಯಾರೆಷ್ಟೇ ಪ್ರಾಮಾಣಿಕ ಹೋರಾಟ ನಡೆಸಿದರೂ ಆಳುವವರಿಗೆ ಅವರ ಕಳಕಳಿ ಅರ್ಥವಾಗದಿದ್ದರೆ ಆ ಹೋರಾಟ ವ್ಯರ್ಥವಾಗಿಬಿಡುವ ಅಪಾಯ ಇದೆ. ರಾಜಕೀಯ ಬಲವಿಲ್ಲದ ಹೋರಾಟ ಬಲಹೀನನ ಆರ್ತನಾದವಾಗುವ ಸಂಭವವೂ ಇದೆ.ಇದಕ್ಕೆ ನಮ್ಮ ಇತಿಹಾಸವೇ ಸಾಕ್ಷಿ.
ನಮ್ಮ ಭೂಮಿ, ಕಾಡನ್ನು ರಕ್ಷಿಸಲು ಆಡಳಿತ ಕೇಂದ್ರದಲ್ಲಿ ಅಚಲ ನಿರ್ಧಾರ ತೆಗೆದುಕೊಳ್ಳಬಲ್ಲ ಗಟ್ಟಿಯಾದ ನಾಯಕತ್ವ ಬೇಕು. ನಮ್ಮ ನೆಮ್ಮದಿಯ ಬದುಕಿಗೆ ಪ್ರಬಲ ‘ಹಸಿರು ಪಕ್ಷ’ ಬೇಕು. ನಾಡಿನ ಅಭಿವೃದ್ಧಿ ಮಾಡುತ್ತೇವೆ ಎಂದು ದಿನಂಪ್ರತಿ ಘೋಷಿಸುವ ರಾಜಕಾರಣಿಗಳು ತಮ್ಮ ಪ್ರಣಾಳಿಕೆಗಳಲ್ಲಿ ‘ಹಸಿರು ತತ್ವ’ವನ್ನು ತರುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು.
ವಿಜಯ್ ಜೋಶಿ

ಕಾಮೆಂಟ್‌ಗಳು