ಅಂಕೋಲಾ ಮತ್ತು ಹುಬ್ಬಳ್ಳಿ ನಡುವಿನ ರೈಲು ಮಾರ್ಗ ಕಾರ್ಯಗತಗೊಂಡರೆ ಆರ್ಥಿಕವಾಗಿ ಬಹಳ ಅನುಕೂಲವಾಗುತ್ತದೆ. ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾಗಾಟದ ಅಮೂಲ್ಯ ವೇಳೆ ಮತ್ತು ಇಂಧನ ಉಳಿತಾಯವಾಗುತ್ತದೆ. ಆದರೆ ಈ ಯೋಜನೆ ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಕ್ಕೆ ಅಪಾರ ಪ್ರಮಾಣದ ಪೆಟ್ಟು ನೀಡುತ್ತದೆ. ಸಾವಿರಾರು ಎಕರೆ ನೈಸರ್ಗಿಕ ಅರಣ್ಯ ಇನ್ನಿಲ್ಲದಂತೆ ನಾಶವಾಗುತ್ತದೆ. ಉದ್ದೇಶಿತ ಗುಂಡ್ಯ ಜಲವಿದ್ಯುತ್ ಯೋಜನೆಯ ಕಥೆಯೂ ಇದೇ ಆಗಿದೆ. ಒಂದು ವೇಳೆ ಈ ಯೋಜನೆ ಕಾರ್ಯಗತಗೊಂಡರೆ 400 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗುವುದು ನಿಜವಾದರೂ ಸುಮಾರು 700 ಹೆಕ್ಟೇರ್‌ನಷ್ಟು ಅಮೂಲ್ಯ ಅರಣ್ಯ ಸಂಪತ್ತು ನಾಶವಾಗುತ್ತದೆ. ಅಲ್ಲಿರುವ ವನ್ಯಜೀವಿಗಳು, ಮಳೆಯ ಕಾಡುಗಳು ಶಾಶ್ವತವಾಗಿ ಕಣ್ಮರೆಯಾಗಲಿವೆ. ‘ಪರಿಸರ-ಅಭಿವೃದ್ಧಿ’ ಮೇಲಿನ ಚರ್ಚೆ ಇಂದು ನಿನ್ನೆಯದಲ್ಲ, ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾದದ್ದೂ ಅಲ್ಲ. ವಿಶ್ವದಾದ್ಯಂತ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ ಸಂಪತ್ತು ನಾಶವಾಗಿದ್ದು ನಿಜ. ಅದೇ ರೀತಿ ಭಾರತದ ಬಹುಪಾಲು ಅಭಿವೃದ್ಧಿ ಯೋಜನೆಗಳು ಇಲ್ಲಿನ ಅರಣ್ಯ ನಾಶಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಹಾಗಂತ ಅರಣ್ಯವನ್ನು ನಾಶಮಾಡಬೇಕೆಂಬುದೇ ಅಭಿವೃದ್ಧಿ ಯೋಜನೆಗಳ ಉದ್ದೇಶವಾಗಿರುವುದಿಲ್ಲ. ನಾವು ಕೈಗೊಂಡ ಎಲ್ಲ ಅಭಿವೃದ್ಧಿ ಯೋಜನೆಗಳ ಹಿಂದೆಯೂ ಆರ್ಥಿಕ ಲಾಭದ ಉದ್ದೇಶವಿರುತ್ತದೆ
ಆನೋ ಭದ್ರಾಃ ಕೃತವೋ ಯಂತು ವಿಶ್ವತ: