"ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರಿಗೆ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಸಂಸ್ಕೃತದಲ್ಲಿ ಮಾತ್ರ ಸಾಧ್ಯ - ಡಾ. ಬಿ ಆರ್ ಅಂಬೇಡ್ಕರ್"
ಈ ಮೇಲಿನ ಅರ್ಥ ಬರುವ ಎಸ್ಸೆಮ್ಮೆಸ್ ಅನ್ನು ಕೆಲ ತಿಂಗಳುಗಳ ಹಿಂದೆ ಸ್ನೇಹಿತರಿಗೆಲ್ಲ ಕಳುಹಿಸುತ್ತಿದ್ದೆ. ಹಾಗೆ ಮಾಡುತ್ತಿದ್ದಾಗ ಸ್ನಾತಕೋತ್ತರ ಪದವಿ ಓದುತ್ತಿರುವ ಸ್ನೇಹಿತರೊಬ್ಬರಿಂದ ಪ್ರತಿಕ್ರಿಯೆ ಬಂತು; "ಅಂಬೇಡ್ಕರ್ ನಿಜಕ್ಕೂ ಹಾಗಂದಿದ್ದರಾ?" ಎಂಬ ಪ್ರಶ್ನೆಯನ್ನು ಅವರ ಪ್ರತಿಕ್ರಿಯೆ ಹೊತ್ತು ತಂದಿತ್ತು. "ಹೌದು, ನನಗೆ ತಿಳೀದಿರುವಂತೆ ಅಂಥದೊಂದು ಮಾತನ್ನು ಡಾ. ಅಂಬೇಡ್ಕರ್ ೧೯೪೯ರ ಸುಮಾರಿಗೆ ಆಡಿದ್ದರು. ಅದಲ್ಲದೆ ಸೆಪ್ಟೆಂಬರ್ ೧೦, ೧೯೪೯ ರಂದು ಸಂಸ್ಕೃತವನ್ನೇ ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸುವಂತೆ ಸಂಸತ್ತಿನಲ್ಲಿ ವಿಧೇಯಕವೊಂದನ್ನು ಮುಂದಿಟ್ಟವರೂ ಸ್ವತಃ ಅಂಬೇಡ್ಕರ್" ಎಂದು ನನ್ನ ಉತ್ತರ ಕಳಿಸಿದೆ. ನನ್ನ ಸ್ನೇಹಿತರಿಗೆ ಸಮಾಧಾನವಾಯಿತಿರಬೇಕು. ಆದರೂ ಕೊನೆಗೊಂದು ಮಾತು ಹೇಳಿದರು;
"ಈ ಅಂಬೇಡ್ಕರ್ ತಂದ ಮೀಸಲಾತಿಯೆಂಬ ನೀತಿಯಿಂದಾಗಿ ನಾವೆಲ್ಲರೂ ಇವತ್ತು ಪಡಿಪಾಟಲು ಅನುಭವಿಸುವಂತಾಗಿದೆ."
ಇವತ್ತು ನಾಡಿನ ಉದ್ದಗಲಕ್ಕೂ ಅಂಬೇಡ್ಕರ್ ಹೆಸರನ್ನು ಕೇಳದವರು ಇಲ್ಲ. ಅವರ ಬಗ್ಗೆ ಓದದವರು ಇಲ್ಲ. ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ಅಂಬೇಡ್ಕರ್ ಚಿಂತನೆಗಳ ಮಾತು ಬರುತ್ತಿರುತ್ತದೆ. ಇಷ್ಟೆಲ್ಲ ಆದರೂ ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥಮಾಡಿಕೊಂಡವರು ನಮ್ಮಲ್ಲಿ ಬಹಳ ಕಡಿಮೆ ಮಂದಿ ಎಂಬುದನ್ನೂ ನೋವಿನಿಂದಲೇ ಹೇಳಬೇಕಾದ ಪರಿಸ್ಥಿತಿ ಬಂದಿದೆ. ನಮ್ಮಲ್ಲಿ ಅನೇಕರಿಗೆ ಇವತ್ತು ಅಂಬೇಡ್ಕರ್ ಬಗ್ಗೆ ತಕರಾರು ಇರುವುದು ಅವರು ನಮ್ಮ ಸಮಾಜದ ಉಪೇಕ್ಷಿತ ಬಂಧುಗಳಿಗೆ ಮೀಸಲಾತಿಯ ವ್ಯವಸ್ಥೆಯನ್ನು ತಂದು ನಮ್ಮ ಸಮಾಜದ ತಥಾಕಥಿತ ಮೇಲ್ವರ್ಗದವರಿಗೆ (ಅವರೇಕೆ ಮೇಲ್ವರ್ಗದವರು ಎಂಬುದನ್ನು ಸ್ವತಃ ಬ್ರಹ್ಮನೂ ತಾರ್ಕಿಕವಾಗಿ ವಿವರಿಸಲಾರ!) ಸಿಗುತ್ತಿದ್ದ ಅವಕಾಶಗಳನ್ನು ಕಡಿಮೆ ಮಾಡಿದರು ಎಂಬುದೇ ಆಗಿದೆ. ಈ ಒಂದು ಕಾರಣ ಬಿಟ್ಟರೆ, ಅಂಬೇಡ್ಕರ್ ವಿಚಾರಗಳನ್ನು ವಿರೋಧಿಸುವ ಬಹುತೇಕರಲ್ಲಿ ಬೇರೆ ಯಾವುದೇ ಕಾರಣಗಳು ಇಲ್ಲ.
ಮೀಸಲಾತಿಯ ವಿಚಾರಕ್ಕಾಗಿ ತಪ್ಪು ತಿಳುವಳಿಕೆಗೆ ಒಳಪಟ್ಟಿರುವ ಅಂಬೇಡ್ಕರ್‌ರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮುಂಚೆ ಅಂಬೇಡ್ಕರ್ ಹೇಳಿದ ಮೀಸಲಾತಿಯ ವ್ಯವಸ್ಥೆ ಹೇಗಿತ್ತೆಂಬುದನ್ನು ಅರ್ಥಮಾಡಿಕೊಳ್ಳಬೇಕು.
ಒಂದೂರಿನಲ್ಲಿ ನೂರು ಮೀಟರ್ ಓಟದ ಸ್ಪರ್ಧೆ ಇದೆ ಅಂತ ಇಟ್ಟುಕೊಳ್ಳಿ. ಇಲ್ಲಿ ಅಂಬೇಡ್ಕರ್ ಪ್ರಣೀತ ಮೀಸಲಾತಿಯ ವ್ಯವಸ್ಥೆ ಇದೆ. ಹಾಗಂದರೆ ಸಮಾಜದ ಕೆಳವರ್ಗದವರೆಲ್ಲಾ ಐವತ್ತು ಮೀಟರ್ ಮಾತ್ರ ಓಡಲಿ, ಸಮಾಜದ ಮೇಲ್ವರ್ಗದವರೆಲ್ಲಾ ನೂರು ಮೀಟರ್ ಓಡಲಿ ಎಂಬುದಲ್ಲ ಅಂಬೇಡ್ಕರ್ ಚಿಂತನೆ. ಅವರು ಹೇಳಿದ್ದು ’ಓಟದ ಸ್ಪರ್ಧೆಯಲ್ಲಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟವರೂ ಬಂದು ಸೇರಿಕೊಳ್ಳಲಿ. ಎಲ್ಲರೂ ಓಟದ ಸ್ಪರ್ಧೆಯಲ್ಲಿ ಭಾಗವಹಿಸೋಣ. ಯಾರು ಮೊದಲು ಬರುತ್ತಾರೋ ಅವರೇ ವಿಜಯಿ’ ಎಂದು.
ಅಂಬೇಡ್ಕರ್ ಪ್ರಣೀತ ಮೀಸಲಾತಿ ವ್ಯವಸ್ಥೆ ಎಂಬುದು ಇಲ್ಲವಾಗಿದ್ದರೆ ನಮ್ಮ ಸಮಾಜದಲ್ಲಿ ಮೇಲೆ ಹೇಳಿದ ಒಂದು ಕಾಲ್ಪನಿಕ ನೂರು ಮೀಟರ್ ಓಟದ ರೇಸಿನಲ್ಲಿ ಸಮಾಜದ ಕೆಳವರ್ಗದವರಿಗೆ ಓಡಲು ಅವಕಾಶವೇ ಸಿಗುತ್ತಿರಲಿಲ್ಲ. ಅಲ್ಲೇನಿದ್ದರೂ ಸಮಾಜದ ಮೇಲ್ವರ್ಗದವರ ಪ್ರತಿಭೆಯಷ್ಟೇ ಪರಿಗಣನೆಗೆ ಬರುತ್ತಿತ್ತು. ಆದರೆ ಅಂಬೇಡ್ಕರ್‌ರ ಮೀಸಲಾತಿಯನ್ನು ನಮ್ಮ ಕಾನೂನು ನಿರ್ಮಾತೃಗಳು ಒಪ್ಪಿಕೊಂಡ ಪರಿಣಾಮವಾಗಿ ಇವತ್ತು ಸಮಾಜದ ಎಲ್ಲ ವರ್ಗಗಳಿಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ, ಅದರ ಪ್ರಯೋಜನವನ್ನು ಸಮಾಜಕ್ಕೆ ನೀಡುವ ಅವಕಾಶ ಸಿಗುತ್ತಿದೆ. ಇದು ಅಂಬೇಡ್ಕರ್ ಅವರ ಕಲ್ಪನೆಯ ಮೀಸಲಾತಿ. ಆದರೆ ಅಂಬೇಡ್ಕರ್ ನಂತರ ಬಂದ ರಾಜಕಾರಣಿಗಳು ತಂದ ಸ್ವಹಿತಾಸಕ್ತಿ ಕೇಂದ್ರಿತ ಮೀಸಲಾತಿಗೆ ನಾವು ಅಂಬೇಡ್ಕರ್‌ರನ್ನು ಜವಾಬ್ದಾರರನ್ನಾಗಿಸಬೇಕಾಗಿಲ್ಲ. ಅಂಬೇಡ್ಕರ್ ಹೆಸರು ಹೇಳಿಕೊಂಡು ತೀರಾ ಕೆಳಮಟ್ಟದ ರಾಜಕೀಯ ಮಾಡುವ ಕೆಲವು ಸಂಘಟನೆಗಳ ಕೆಲಸಕ್ಕೂ ನಾವು ಅಂಬೇಡ್ಕರ್‌ರಂತಹ ಮಹಾಮೇಧಾವಿಯನ್ನು ಜವಾಬ್ದಾರಿ ವ್ಯಕ್ತಿಯನ್ನಾಗಿಸಬೇಕಾಗಿಲ್ಲ.
ಅದಲ್ಲದೆ, ಅಂಬೇಡ್ಕರ್‌ರ ಒಟ್ಟೂ ಹೋರಾಟವಿದ್ದದ್ದು ಅಸಮಾನತೆ ಮತ್ತು ತಾರತಮ್ಯದ ವಿರುದ್ಧವೇ ಹೊರತು ಯಾವ ಜಾತಿಯ ವಿರುದ್ಧವೂ ಅಲ್ಲವಾಗಿತ್ತು. ಅವರ ಹೋರಾಟ ಯಾವುದಾದರೂ ಜಾತಿಯ ವಿರುದ್ಧ ಆಗಿದ್ದಿದ್ದರೆ, ಅಂದಿನ ಕಾಲದಲ್ಲಿ ಅವರಿಗಿದ್ದ ದಲಿತ ವರ್ಗಗಳ ಮೇಲಿನ ಪ್ರಭಾವವನ್ನು ಬಳಸಿ ದಲಿತರನ್ನು ಮೇಲ್ವರ್ಗಗಳ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಅಣಿಗೊಳಿಸುವ ತಾಕತ್ತೂ ಅವರಿಗಿತ್ತು. ಆದರೆ ಈ ದೇಶದ ಐಕ್ಯತೆ ಮತ್ತು ಸಮಗ್ರತೆಯ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ. ತಮ್ಮ ಪ್ರತಿಯೊಂದು ಹೋರಾಟವನ್ನೂ ಅವರು ಪ್ರಜಾಸತ್ತಾತ್ಮಕ ಮಾರ್ಗಗಳಲ್ಲಿಯೇ ಕೈಗೊಂಡರು. ಪ್ರಜಾಸತ್ತೆಯ ಬಗೆಗೆ ಅವರಿಗಿದ್ದ ಅಪಾರ ಗೌರವ ಮುಂದೊಂದು ದಿನ ಗಾಂಧಿಯ ಅಸಹಕಾರ ಚಳವಳಿಯ ಬಗ್ಗೆ ಐತಿಹಾಸಿಕ ಮಾತನ್ನಾಡುವಂತೆ ಮಾಡಿತು. ಗಾಂಧಿಯವರ ಅಸಹಕಾರ ಚಳವಳಿಗಳು ವಿದೇಶಿ ಪ್ರಭುತ್ವದ ವಿರುದ್ಧ ಒಳ್ಳೆಯ ಅಸ್ತ್ರಗಳಾಗಬಲ್ಲವು. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕ ನಂತರ ನಾವು ನಮ್ಮಿಂದಲೇ ಚುನಾಯಿತವಾದ ಸರ್ಕಾರದ ವಿರುದ್ಧ ಇಂತಹ ಚಳವಳಿಗಳನ್ನು ಹಮ್ಮಿಕೊಳ್ಳಬಾರದು. ಆಗೇನಿದ್ದರೂ ಕಾನೂನಿನ ಮೂಲಕವೇ ಹೋರಾಟ ನಡೆಸಬೇಕು.
ಅಂಬೇಡ್ಕರ್ ಪೂರ್ವಾಪರ ಹೀಗಿದ್ದರೂ ೧೯೫೧-೫೨ ರಲ್ಲಿ ನಡೆದ ದೇಶದ ಮೊಟ್ಟಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟದಿಂದ ಮುಂಬಯಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂಬೇಡ್ಕರ್ ಸೋಲೊಪ್ಪಬೇಕಾಯಿತು. ಚುನಾವಣೆಯ ನಂತರ ಜಾತಿವಾರು ಮತ ಚಲಾವಣೆ ಹೇಗಿದೆ ಎಂಬುದನ್ನು ಪರಿಶೀಲಿಸಿದ ಅಂಬೇಡ್ಕರ್‌ಗೆ ಆಘಾತ ಕಾದಿತ್ತು. ದಲಿತರನ್ನು ಬಿಟ್ಟರೆ ಮೇಲ್ವರ್ಗದವರಾರೂ ಅಂಬೇಡ್ಕರ್‌ಗೆ ಮತ ನೀಡಿರಲಿಲ್ಲ!
ಸ್ವತಃ ಅಂಬೇಡ್ಕರ್ ಮೀಸಲಾತಿಯ ಕಾರಣದಿಂದ ಉನ್ನತ ಮಟ್ಟಕ್ಕೆ ಬಂದವರಲ್ಲ. ಅವರು ತಮ್ಮ ಕಾಲದ ಇತರರೆಲ್ಲರಿಗಿಂತ ಹೆಚ್ಚೇ ಶ್ರಮ ಪಟ್ಟು ಜ್ಞಾನ ಸಂಪಾದಿಸಿದ್ದು. ಮಹರ್ ಜಾತಿಗೆ ಸೇರಿದ ಹುಡುಗ ಎಂಬ ಕಾರಣಕ್ಕಾಗಿಯೇ ತಮ್ಮ ಬಾಲ್ಯದಿಂದಲೂ ತಿರಸ್ಕಾರ, ಅಪಮಾನವನ್ನೇ ಅನುಭವಿಸುತ್ತಾ ಸಾಗಿದ ಭೀಮನ ಜೀವನ ಹೂವಿನ ಹಾದಿಯೇನಲ್ಲವಲ್ಲ. ಸಾರ್ವಜನಿಕ ಸ್ಥಳದಲ್ಲಿ ನೀರು ಕುಡಿದ ಕಾರಣಕ್ಕೆ ಅಮಾನವೀಯವಾಗಿ ಪೆಟ್ಟು ತಿಂದಿದ್ದು, ಸವರ್ಣೀಯನೊಬ್ಬನ ಎತ್ತಿನ ಗಾಡಿಯ ಮೇಲೆ ಹೋಗುತ್ತಿದ್ದಾಗ ಆತ ಅಂಬೇಡ್ಕರರ ಜಾತಿ ಯಾವುದು ಅಂತ ಗೊತ್ತಾಗಿ ಅವರನ್ನು ಅವಮಾನಿಸಿದ್ದು... ಇವೆಲ್ಲಾ ಭೀಮನಲ್ಲಿನ ಅಂಬೇಡ್ಕರ್ ಪ್ರಜ್ಞೆ ಜಾಗೃತಗೊಳ್ಳಲು ಕಾರಣವಾದವು.
ರಾಷ್ಟ್ರದ ಐಕ್ಯತೆ ಕಾಪಾಡುವಲ್ಲಿ ಮತ್ತು ಇಲ್ಲಿ ಪ್ರಜಾಪ್ರಭುತ್ವ ಭದ್ರವಾಗಿ ತಳವೂರುವಲ್ಲಿಯೂ ಅಂಬೇಡ್ಕರ್ ಪ್ರಜ್ಞೆ ಸಾಕಷ್ಟು ಕೆಲಸಮಾಡಿದೆ. ದೇಶಕ್ಕೆ ಸ್ವಾತಂತ್ರ ಸಿಕ್ಕಾಗ ಗಾಂಧಿ ಈ ದೇಶದಲ್ಲಿ ಹಿಂದೂ ಮುಸ್ಲಿಂ ಐಕ್ಯತೆಗಾಗಿ ಶ್ರಮಿಸುತ್ತಿದ್ದರು. ಆದರೆ ಆ ಯೋಜನೆಯಲ್ಲಿ ಗಾಂಧಿ ಸೋತಿದ್ದು ಈ ದೇಶದ ಮತ್ತೊಂದು ದುರಂತ ಅಧ್ಯಾಯ. ಅದರ ಚರ್ಚೆ ಇಲ್ಲಿ ಬೇಡ. ಇತ್ತ ನೆಹರೂ ತಮಗೆ ದಕ್ಕಿದ ದೇಶದ ಮೊಟ್ಟಮೊದಲ ಪ್ರಧಾನಿ ಹುದ್ದೆಯನ್ನು ಸಂಪೂರ್ಣವಾಗಿ ಅನುಭವಿಸಲು ಕುಳಿತಿದ್ದರು. ಅತ್ತ ಸರ್ದಾರ್ ಪಟೇಲರು ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಹೊಂಚುಹಾಕುತ್ತಿದ್ದ ಹೈದರಾಬಾದಿನ ನಿಜಾಮನಂತಹ ಸಮಯಸಾಧಕರನ್ನು ಹದ್ದುಬಸ್ತಿನಲ್ಲಿಡುವ ಕೆಲಸದಲ್ಲಿ ನಿರತರಾಗಿದ್ದರು. ಇಡೀ ದೇಶ ಸಂಭ್ರಮ ಮತ್ತು ಉತ್ಸಾಹದಲ್ಲಿ ಇದ್ದಂತಹ ಸಂದರ್ಭದಲ್ಲಿ ಇತ್ತ ಅಂಬೇಡ್ಕರ್ ಇಡೀ ದೇಶಕ್ಕಾಗಿ ಸಂವಿಧಾನ ಹೇಗಿರಬೇಕು, ಈ ದೇಶದಲ್ಲಿ ಯಾವುದು ಪರಮೋಚ್ಛವಾಗಿರಬೇಕು, ಈ ದೇಶದ ಬಹುಸಂಸ್ಕೃತಿಯನ್ನು ಪೋಷಿಸುವಂತಹ ವ್ಯವಸ್ಥೆಯೊಂದನ್ನು ಕಾಪಾಡುವ ಸಂವಿಧಾನ ಹೇಗಿರಬೇಕು ಎಂಬ ಚಿಂತನೆಯಲ್ಲಿ ಮಗ್ನರಾಗಿದ್ದರು.
ಪರಿಣಾಮವಾಗಿಯೇ ದೇಶದ ಪ್ರತಿಯೊಬ್ಬ ಪ್ರಜೆಗೂ ಆತನ ಹುಟ್ಟಿನೊಂದಿಗೆ ದಕ್ಕುವ ಮೂಲಭೂತ ಹಕ್ಕುಗಳ ಪರಿಕಲ್ಪನೆ ದೇಶದ ಸಂವಿಧಾನದೊಳಗೆ ಭದ್ರವಾಗಿ ಬೇರೂರಿತು. ಯಾವುದೇ ಸಾಂವಿಧಾನಿಕ ತಿದ್ದುಪಡಿ ಕೂಡ ದೇಶದ ಪ್ರತಿಯೊಬ್ಬ ಪ್ರಜೆಗೆ ಸಂವಿಧಾನವೇ ನೀಡಿರುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವಂತಿಲ್ಲ ಎಂಬ ಅನುಪಮ ಲಕ್ಷಣಗಳು ನಮ್ಮ ಸಂವಿಧಾನದಲ್ಲಿ ಬರಲು ಕಾರಣ ಅಂಬೇಡ್ಕರ್ ಪ್ರಜ್ಞೆ.
ನಮಗೆ ಇಂದು ಅಂಬೇಡ್ಕರ್ ಬೇಕಾಗಿರುವುದು ಅಸಮಾನತೆಯ ವಿರುದ್ಧದ ಹೋರಾಟದ ಪ್ರಜ್ಞೆಯಾಗಿ. ಅಸಮಾನತೆ ಎಂದ ಕೂಡಲೆ ಅದು ಜಾತಿ ಆಧಾರಿತ ಅಸಮಾನತೆಯೇ ಆಗಬೇಕೆಂದಿಲ್ಲ. ಅದು ಶ್ರೀಮಂತ - ಬಡವ ಎಂಬ ಅಸಮಾನತೆಯೂ ಆಗಿರಬಹುದು, ನಗರವಾಸಿ - ಗ್ರಾಮವಾಸಿ ಎಂಬ ಅಸಮಾನತೆಯೂ ಆಗಿರಬಹುದು. ಇಂಥದ್ದೆಲ್ಲ ಅಸಮಾನತೆಗಳ ವಿರುದ್ಧದ ಹೋರಾಟಕ್ಕೆ ಅಂಬೇಡ್ಕರ್ ಪ್ರಜ್ಞಾಶಕ್ತಿಯಾಗಿ ಕಾಣುತ್ತಾರೆ. ಯಾವುದೇ ಹೋರಾಟವನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನೊಳಗೆಯೇ ಮಾಡಬೇಕು ಎಂಬ ಎಚ್ಚರವನ್ನೂ ಅಂಬೇಡ್ಕರ್ ಪ್ರಜ್ಞೆ ನಮಗೆ ಕೊಡುತ್ತದೆ.
ಅಸಮಾನತೆಯೆಂಬುದು ನಿನ್ನೆ ಇತ್ತು, ಇವತ್ತೂ ಇದೆ. ಆದೆ ಅದು ನಾಳೆಯೂ ಇರದಂತೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟವರೆಲ್ಲರ ಜವಾಬ್ದಾರಿ. ಅಂಥದೊಂದು ಜವಾಬ್ದಾರಿಯನ್ನು ನಿರ್ವಹಿಸಲು ನಮ್ಮೊಳಗಿನ ಅಂಬೇಡ್ಕರ್ ಪ್ರಜ್ಞೆ ಪ್ರೇರಣೆಯಾಗಲಿ.
- ವಿಜಯ್ ಜೋಷಿ

ಕಾಮೆಂಟ್‌ಗಳು
ಜನನಾಯಕರೇ ಹೆಚ್ಚು.