ವಿಷಯಕ್ಕೆ ಹೋಗಿ

ದೇಶಪ್ರೇಮದ ಆಯಾಮಗಳು...

ಕನ್ನಡಿಗರ ಪಾಲಿಗೆ ಕುಂಟೆಗೋಡು ವಿಭೂತಿ ಸುಬ್ಬಣ್ಣ ಯಾವತ್ತಿಗೂ ಒಂದು ಅಚ್ಚರಿಯೇ ಸರಿ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ತಮ್ಮ ಸ್ನಾತಕೋತ್ತರ ಅಧ್ಯಯನ ಮುಗಿಸಿದ ಕೆ. ವಿ. ಸುಬ್ಬಣ್ಣ ಮನಸ್ಸು ಮಾಡಿದ್ದರೆ ನಾಡಿನ ಯಾವುದಾದರೂ ವಿಶ್ವವಿದ್ಯಾಲಯದ ಆಯಕಟ್ಟಿನ ಜಾಗವನ್ನು ಆಕ್ರಮಿಸಿ ಕೂರಬಹುದಿತ್ತು. ಬಹುಷ: ಅವರು ಹಾಗೆ ಮಾಡಿದ್ದರೆ ತಮ್ಮ ನಿವೃತ್ತಿಯ ಅಂಚಿಗೆ ಬರುವ ಹೊತ್ತಿಗೆ ಒಂದಿಷ್ಟು ವಿದೇಶ ಪ್ರವಾಸ, ಒಂದಿಷ್ಟು ಡಾಕ್ಟರೇಟ್ ಡಿಗ್ರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಿದ್ದರು.

ಆದರೆ ಸುಬ್ಬಣ್ಣ ಹಾಗೆ ಮಾಡಲಿಲ್ಲ. ತಮ್ಮ ಊರಾದ ಹೆಗ್ಗೋಡಿಗೆ ವಾಪಸಾದ ಸುಬ್ಬಣ್ಣ ಅಲ್ಲಿಯೇ ನೀಲಕಂಠೇಶ್ವರ ನಾಟಕ ಸಂಘವನ್ನು ಕಟ್ಟಿದರು. ಬಹುಷ: ಜಾಗತಿಕ ರಂಗಭೂಮಿಯ ಯಾವ ಗಾಳಿಯೂ ಬೀಸದಿದ್ದ ಹೆಗ್ಗೋಡಿನಲ್ಲಿ ರಂಗಚಟುವಟಿಕೆಗಳನ್ನು ಆರಂಭಿಸಿದರು. ನೋಡನೋಡುತ್ತಿದ್ದ ಹಾಗೆ ನೀನಾಸಂ ಅನ್ನು ಜಗವೇ ಮೆಚ್ಚುವ ರೆಪರ್‍ಟರಿಯನ್ನಾಗಿಸಿದರು. ಕೆ ವಿ ಸುಬ್ಬಣ್ಣ ಕೇವಲ ವ್ಯಕ್ತಿಯಾಗುಳಿಯಲಿಲ್ಲ; ಈ ನಾಡಿನ ಪ್ರಜ್ಞೆಯಾಗಿ ಬೆಳೆದರು. ಕನ್ನಡ ರಂಗಭೂಮಿಯ ’ಗಾಂಧಿ’ಯಾದರು.

***

ಕೈಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಬಳ ತರುವ ಕೆಲಸ ಬ್ಲಿಟ್ಜ್ ಪತ್ರಿಕೆಯಲ್ಲಿತ್ತು. ಕೆಲ ಕಾಲ ಆ ಕೆಲಸವನ್ನು ಮಾಡಿದ ಪಿ ಸಾಯಿನಾಥ್‌ಗೆ ಅದೇಕೋ ಇದ್ದಕ್ಕಿದ್ದಂತೆ ಆ ಕೆಲಸ ತಮಗೆ ಸರಿಹೊಂದುವುದಿಲ್ಲ ಅಂತ ಅನಿಸಿಬಿಟ್ಟಿತು. ಸರಿ, ತಮ್ಮ ಪೆನ್ನು, ಪುಸ್ತಕ ಹಿಡಿದು ಬ್ಯಾಗ್ ಹೆಗಲಿಗೇರಿಸಿ ಹೊರಟ ಸಾಯಿನಾಥ್ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಕದ ತಟ್ಟಿದರು. ಟೈಮ್ಸ್ ಪತ್ರಿಕೆಯ ಫೆಲೋಶಿಪ್ ದೊರೆತದ್ದೇ ಈ ದೇಶದ ಹಳ್ಳಿಗಳ ದಾರಿ ಹಿಡಿದ ಸಾಯಿನಾಥ್, ಈ ದೇಶದ ಬೆನ್ನೆಲುಬು ಅಂತ ಕರೆಸಿಕೊಳ್ಳುವ - ಆದರೆ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಪಟ್ಟ - ರೈತರ ನೋವು-ನಲಿವುಗಳ ಬಗ್ಗೆ ಸಾಲು ಸಾಲು ಲೇಖನ ಬರೆದರು.

ತಾನು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಮಾಜಿ ರಾಷ್ಟಪತಿ ವಿ ವಿ ಗಿರಿಯವರ ಮೊಮ್ಮಗ ಎಂಬ ಬಿಗುಮಾನಗಳು ಸಾಯಿನಾಥ್ ಕಡೆ ಸುಳಿಯಲಿಲ್ಲ. ಈ ದೇಶದ ಅಸಂಖ್ಯ ಹಳ್ಳಿಗಳನ್ನು ಕಾಲುನಡಿಗೆಯಲ್ಲಿ ಸುತ್ತಿದರು (ಅವು ಸುಮಾರು ಐದು ಸಾವಿರ ಕಿಲೋಮೀಟರುಗಳಷ್ಟು ದೂರ). ಸಾದಾ ಪತ್ರಕರ್ತನಾಗಿ ಉಳಿಯದೇ, ಹೆಸರಾಂತ ದೈನಿಕದ ಹಿರಿಯ ಸಿಬ್ಬಂದಿಯಾಗಿ ಸೀಮಿತವಾಗದೆ ಈ ನಾಡಿನ ಅಸಂಖ್ಯ ಪತ್ರಕರ್ತರ ಸಾಕ್ಷಿಪ್ರಜ್ಞೆಯಾಗಿ ಬೆಳೆದುನಿಂತರು.

ಅದಿರಲಿ, ಇವತ್ತಿನ ಯುವ ಮನಸ್ಸುಗಳ ಪಾಲಿಗೆ ಸುಬ್ಬಣ್ಣ ಅಥವಾ ಸಾಯಿನಾಥ್ ಏಕೆ ದೇಶಪ್ರೇಮಿಗಳಂತೆ ಕಾಣಿಸುತ್ತಿಲ್ಲ? ಅವರು ಮಾಡುವ ಕೆಲಸಗಳು ರಾಷ್ಟ್ರನಿರ್ಮಾಣದ ಕೆಲಸ ಅಂತ ಏಕೆ ಅನಿಸುತ್ತಿಲ್ಲ?

ಇಲ್ಲಿ ಸುಬ್ಬಣ್ಣ ಮತ್ತು ಸಾಯಿನಾಥ್ ಮಾತ್ರ ದೇಶಪ್ರೇಮಿಗಳಂತೆ ಕಾಣಿಸುತ್ತಿಲ್ಲ ಎಂದಲ್ಲ. ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಒಂದು ಗೌರವ ತಂದುಕೊಟ್ಟ ಸಂಸ್ಥೆಗಳಾದ ಕ್ಯಾಂಪ್ಕೋದ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಅಥವಾ ಶಿರಸಿಯ ಟಿಎಸ್‌ಎಸ್ ಸಂಸ್ಥೆಯ ಜನಕ ದಿವಂಗತ ಕಡವೆ ಶ್ರೀಪಾದ ಹೆಗಡೆ, ನಮ್ಮ ನಾಡಿನ ರೈತರ ಸಾಕ್ಷಿಪ್ರಜ್ಞೆಯಂತಿದ್ದ ಪ್ರೊ. ಎಂ ಡಿ ನಂಜುಂಡಸ್ವಾಮಿ, ನಾಡಿನ ರಾಜಕಾರಣಿಗಳಿಗೆ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟ ಶಾಂತವೇರಿ ಗೋಪಾಲಗೌಡ, ಪರಿಸರ ಹೋರಾಟದಲ್ಲೇ ಬದುಕು ಕಂಡುಕೊಂಡ ಸುಂದರಲಾಲ್ ಬಹುಗುಣ ಇವತ್ತಿನ ಯುವ ಮನಸ್ಸುಗಳಲ್ಲಿರುವ ದೇಶಭಕ್ತರ ಪಟ್ಟಿಯಲ್ಲಿ ಸ್ಥಾವನ್ನೇಕೆ ಗಿಟ್ಟಿಸುತ್ತಿಲ್ಲ?

ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುವುದು, ಚೀನಾದ ವಿರುದ್ಧ ಭಾಷಣ ಮಾಡುವುದು ಮಾತ್ರ ದೇಶಪ್ರೇಮ ಎಂಬ ಭಾವನೆ ನಮ್ಮ ಮನದಲ್ಲಿ ಮೂಡಲು ಕಾರಣವೇನು? ಹಾಗಂತ ಇವು ದೇಶಪ್ರೇಮ ಅಲ್ಲ ಎಂದು ಖಂಡಿತಾ ಹೇಳುತ್ತಿಲ್ಲ. ಆದರೆ ದೇಶದ ಆಂತರಿಕ ಸಮಸ್ಯೆಗಳ ನಿರ್ಮೂಲನೆಗೆ ಟೊಂಕ ಕಟ್ಟಿ ದುಡಿಯುವುದೂ ದೇಶಪ್ರೇಮ ಎಂಬ ಭಾವನೆ ನಮ್ಮಲ್ಲೇಕೆ ಮೂಡುತ್ತಿಲ್ಲ?

ಹಿಂದೊಂದು ಕಾಲವಿತ್ತು. ಅಂದರೆ ದೇಶಕ್ಕೆ ಸ್ವಾತಂತ್ರ್ಯ ಇನ್ನೂ ದೊರೆತಿಲ್ಲದ ಕಾಲ. ಆಗ ಇಡೀ ದೇಶವಾಸಿಗಳ ಪಾಲಿಗೆ ಬ್ರಿಟಿಷರು ಸಮಾನ ಶತ್ರುಗಳಾಗಿದ್ದರು. ಅವತ್ತಿನ ಎಲ್ಲ ರಾಷ್ಟ್ರನಾಯಕರ ಹೋರಾಟ ಬ್ರಿಟಿಷರ ವಿರುದ್ಧ ಇದ್ದೇ ಇತ್ತು. ಗಾಂಧೀಜಿ ಆದಿಯಾಗಿ ಸಾವರ್ಕರ್ ವರೆಗೆ ಪ್ರತಿಯೊಬ್ಬರೂ ತಮ್ಮ ದೇಶಭಕ್ತಿಯ ಪ್ರಕಟೀಕರಣಕ್ಕೆ ಬ್ರಿಟಿಷರ ವಿರುದ್ಧದ ಹೋರಾಟವನ್ನು ಒಂದು ಮಾರ್ಗವನ್ನಾಗಿಸಿಕೊಂಡಿದ್ದರು. ಅದು ಅವತ್ತಿನ ಅನಿವಾರ್ಯವೂ ಆಗಿತ್ತು. ಮೊದಲು ದೇಶಕ್ಕೆ ಸ್ವಾತಂತ್ರ್ಯ ಸಿಗಲಿ ಆಮೇಲೆ ದೇಶದ ಉಳಿದ ಸಮಸ್ಯೆಗಳ ಬಗ್ಗೆ ಗಮನ ಹರಿಸೋಣ ಎಂಬ ನಿಲುವು ಅವತ್ತಿನ ಮಟ್ಟಿಗೆ ಸರಿಯೇ ಆಗಿತ್ತು. ಹಾಗಾಗಿಯೇ ಅವತ್ತು ಇಡೀ ದೇಶವಾಸಿಗಳ ಮನದಲ್ಲಿ ಬ್ರಿಟಿಷ್ ಸಾಮಾನ್ಯ ಶತ್ರುವಾಗಿದ್ದ. ಅಂಥ ಶತ್ರುವಿನ ವಿರುದ್ಧ ಹೋರಾಡುವುದೇ ದೇಶಭಕ್ತಿಯ ಪ್ರಕಟೀಕರಣಕ್ಕೆ ಇರುವ ದಾರಿ ಎಂಬ ಭಾವನೆ ಎಲ್ಲರಲ್ಲೂ ಮೂಡಿತು.

ಸ್ವಾತಂತ್ರ್ಯಾನಂತರದ ಪರಿಸ್ಥಿತಿ ಬೇರೆಯದೇ ಆಯಿತು. ಆಗ ಸ್ವಲ್ಪ ಕಾಲ ದೇಶಕ್ಕೆ ಯಾವುದೇ ’ಸಾಮಾನ್ಯ ಶತ್ರು’ ಅಂತ ಇರಲಿಲ್ಲ. ಆದರೆ ಆ ಪರಿಸ್ಥಿತಿ ಕೆಲವೇ ದಿನಗಳಿಗೆ ಸೀಮಿತವಾಯಿತು. ತನ್ನ ಪಾಡಿಗೆ ತಾನಿದ್ದು, ತನ್ನ ಜನರ ಅಭಿವೃದ್ಧಿಯ ಬಗ್ಗೆ ಆಲೋಚಿಸಿಕೊಂಡಿರಬಹುದಾಗಿದ್ದ ಪಾಕಿಸ್ತಾನ ವಿನಾ ಕಾರಣ ಭಾರತಕ್ಕೆ ಉಪಟಳ ನೀಡಲು ಆರಂಭಿಸಿತು. ಪಾಕಿಸ್ತಾನದ ಹುಟ್ಟಿನೊಂದಿಗೇ ಒಂದಷ್ಟು ಯುದ್ಧಗಳು ಭಾರತದ ಪಾಲಿಗೆ ಅನಿವಾರ್ಯವಾಗಿ ಬಂದೆರಗಿದವು. ಹಾಗಾಗಿ ಆ ಸಂದರ್ಭದಲ್ಲಿ ಮತ್ತೊಮ್ಮೆ ದೇಶಕ್ಕೆ ಸಾಮಾನ್ಯ ಶತ್ರುವೊಬ್ಬ ಹುಟ್ಟಿದ. ಪಾಕಿಸ್ತಾನದ ವಿರುದ್ಧ ನಡೆದ ೧೯೪೮ರ ಯುದ್ಧ, ೧೯೭೧ರ ಯುದ್ಧ, ೧೯೬೫ರ ಯುದ್ಧ ಮತ್ತು ೧೯೯೯ರ ಕಾರ್ಗಿಲ್ ಯುದ್ಧಗಳು ಆ ದೇಶ ಭಾರತೀಯರ ಪಾಲಿಗೆ ಸಾರ್ವಕಾಲಿಕ ಶತ್ರುವನ್ನಾಗಿಸಿದವು. ಇದಕ್ಕೆ ಕಲಶಪ್ರಾಯವಾಗಿ ಪಾಕಿಸ್ತಾನ ಲಾಗಾಯ್ತಿನಿಂದಲೂ ಪ್ರಾಯೋಜಿಸಿಕೊಂಡು ಬರುತ್ತಿರುವ ಧರ್ಮ ಆಧಾರಿತ ಗಡಿಯಾಚೆಗಿನ ಭಯೋತ್ಪಾದನೆ ಕೂಡ ಭಾರತೀಯರು ಪಾಕಿಸ್ತಾನವನ್ನು ತಮ್ಮ ಶತ್ರು ಎಂದು ಗಟ್ಟಿಯಾಗಿ ಅಂದುಕೊಳ್ಳಲು ಕಾರಣಗಳಾದವು.

೧೯೬೨ರಲ್ಲಿ ಚೀನಾದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಅನುಭವಿಸಿದ ಅಪಮಾನಕಾರಿ ಸೋಲು ಮತ್ತು ಅಂದಿನಿಂದ ಚೀನಾ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ’ಗಡಿತಂಟೆ’ ಚೀನಾ ಕೂಡ ನಮ್ಮ ಶತ್ರು ಎಂಬ ಭಾವನೆಯನ್ನು ಬೆಳೆಸಿತು.

ಇವೆರಡರ ಜೊತೆಗೆ ಬಾಂಗ್ಲಾದೇಶ ತನ್ನ ನಾಗರಿಕರನ್ನು ಅಕ್ರಮವಾಗಿ ಭಾರತದೊಳಕ್ಕೆ ನುಸುಳುವಂತೆ ಮಾಡುವುದು ಮತ್ತು ಆ ನಾಗರಿಕರು ಭಾರತದಲ್ಲಿ ಇದ್ದುಕೊಂಡೇ, ಈ ದೇಶದ ವಿರುದ್ಧ ವ್ಯವಸ್ಥಿತ ಪಿತೂರಿಯಲ್ಲಿ ತೊಡಗಿಕೊಂಡಿರುವುದು ಬಾಂಗ್ಲಾದೇಶವನ್ನು ನಮ್ಮ ದೇಶವಾಸಿಗಳ ಪಾಲಿಗೆ ಒಬ್ಬ ಸಮಾನ ಶತ್ರುವನ್ನಾಗಿಸಿದೆ.

ಹೇಗಿದ್ದರೂ ಸ್ವಾತಂತ್ರ ಪೂರ್ವದ ಕಾಲದಿಂದಲೇ ಶತ್ರುವಿನ ವಿರುದ್ಧ ಹೋರಾಡುವುದು ದೇಶಭಕ್ತಿಯ ಪ್ರಕಟೀಕರಣಕ್ಕೆ ಇರುವ ದಾರಿ ಎಂಬ ಭಾವನೆ ನಮ್ಮಲ್ಲಿ ಅಸಂಖ್ಯ ಮಂದಿಯ ಮನದಲ್ಲಿ ಬೆಳೆದುಬಿಟ್ಟಿತ್ತು. ಅಂಥ ಸಂದರ್ಭದಲ್ಲೇ ಉಗಮವಾದ ಹೊಸ ಸಾಮಾನ್ಯ ಶತ್ರುಗಳು ದೇಶಪ್ರೇಮದ ಬಗೆಗಿನ ನಮ್ಮ ದೃಷ್ಟಿಕೋನ ಬೇರೆ ಆಗದಂತೆ ತಡೆದವು. ಹಾಗಾಗಿಯೇ ಸೈನ್ಯಕ್ಕೆ ಸೇರುವುದು, ಯುದ್ಧದಲ್ಲಿ ಭಾಗವಹಿಸುವುದು ಅಥವಾ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳ ವಿರುದ್ಧ ತಾರಕ ಸ್ವರದಲ್ಲಿ ಘೋಷಣೆ ಕೂಗುವುದು ಮಾತ್ರ ದೇಶಪ್ರೇಮ ಎಂಬ ಭಾವನೆ ನಮ್ಮ ಮನದಲ್ಲಿ ಮೂಡುವಂತೆ ಮಾಡಿದೆ.

ದೇಶದ ಸಾಮಾನ್ಯ ಶತ್ರುಗಳ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ಬೇರೆ ಸಮಸ್ಯೆಗಳನಿವಾರಣೆಯ ಬಗ್ಗೆ ಕೆಲಸ ಮಾಡುವುದೂ ದೇಶಪ್ರೇಮದ ಪ್ರಕಟೀಕರಣದ ಮಾರ್ಗವೇ ಹೌದು ಎಂದು ಅರ್ಥಮಾಡಿಕೊಳ್ಳುವಾಗ ಇನ್ನೊಂದು ಸೂಕ್ಷ್ಮ ವಿಚಾರದ ಬಗ್ಗೆ ನಮ್ಮ ಗಮನ ಇರಲೇಬೇಕು. ಇವತ್ತು ನಾವು ದೇಶಭಕ್ತಿಯ ಮಾದರಿಗಳು ಎಂದು ತಿಳಿದಿರುವ ನಮ್ಮ ಯೋಧರ ದೇಶಪ್ರೇಮವನ್ನು ಪ್ರಶ್ನಿಸುವ ಅವಿವೇಕದ ಕೆಲಸವನ್ನು ನಾವು ಸರ್ವಥಾ ಮಾಡಬಾರದು. ತಮ್ಮ ಪ್ರೀತಿಪಾತ್ರರೆಲ್ಲರನ್ನೂ ಬಿಟ್ಟು, ಬೇರೆ ನೌಕರಿ ಮಾಡುವ ಅನೇಕ ಸಾಧ್ಯತೆಗಳಿದ್ದೂ ತಮ್ಮ ಜೀವವನ್ನು ಒತ್ತೆಯಿಟ್ಟು ನಮ್ಮಂಥ ಸಾಮಾನ್ಯರ ರಕ್ಷಣೆಗಾಗಿ ಬಂದೂಕು ಹೆಗಲಿಗೇರಿಸಿಕೊಂಡು ಹಿಮಾಲಯದ ಕೊರೆಯುವ ಚಳಿಗಳಲ್ಲಿ, ಮರುಭೂಮಿಯ ರಣಬಿಸಿಲಿನಲ್ಲಿ, ಗುಡ್ಡಗಾಡಿನ ನೀರವ ಏಕಾಂತಗಳಲ್ಲಿ ನಿಂತುಕೊಂಡು ಈ ದೇಶವನ್ನು ಕಾಯುವ ಯೋಧರದ್ದು ಅಸೀಮ ದೇಶಪ್ರೇಮ. ಅವರ ನಿಷ್ಠೆಯ ಬಗ್ಗೆ ಅನುಮಾನದ ಮಾತುಗಳನ್ನಾಡುವವ ಸರ್ವರೀತಿಯಿಂದಲೂ ಅಯೋಗ್ಯನೇ ಸರಿ.

ಆದರೆ ಎಲ್ಲರಿಂದಲೂ ಯೋಧನಾಗಲು ಸಾಧ್ಯವಿಲ್ಲವಲ್ಲ? ಅಂಥವರು ಏನು ಮಾಡಬೇಕು?

ಸೈನಿಕರಾಗಿ ಈ ದೇಶಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗದವರು ಈ ದೇಶದ ಸಂವಿಧಾನದ ಆಶಯಗಳನ್ನು ಪಾಲನೆ ಮಾಡಿದರೆ ದೇಶದ ಅನೇಕ ಆಂತರಿಕ ಸಮಸ್ಯೆಗಳೇ ಇಲ್ಲವಾಗುತ್ತವೆ. ಆಗ ಶತ್ರುವಿನ ವಿರುದ್ಧ ಹೋರಾಡಲು ವಿನಿಯೋಗಿಸಬೇಕಾದ ನಮ್ಮ ಸಮಯವನ್ನು ಅಭಿವೃದ್ಧಿಯ ಕುರಿತು ವಿನಿಯೋಗಿಸಬಹುದು.

ಈ ದೇಶದ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆತ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ವ್ಯವಸ್ಥೆಯ ತಪ್ಪಿಗೆ ತಾನು ಶಿಕ್ಷೆ ಅನುಭವಿಸುತ್ತಿದ್ದಾನೆ. ಒಂದೇ ಒಂದು ರಚನಾತ್ಮಕ ಕೆಲಸದ ಮೂಲಕ ನಮ್ಮ ರೈತನನ್ನು, ಗ್ರಾಮಭಾರತವನ್ನು ಉಳಿಸಿಕೊಡಿ. ಅಅದು ಕೂಡ ದೇಶಪ್ರೇಮವೇ ಅಂತ ಇಂದಿನ ಯುವಕರಿಗೆ ಹೇಳುವ ಒಬ್ಬನೇ ಒಬ್ಬ ನಾಯಕ ನಮಗೆ ಕಾಣಿಸುತ್ತಿಲ್ಲ.

ಈ ದೇಶದ ಜಲ, ಪರಿಸರ, ಪ್ರಾಣಿ ಸಂಪತ್ತು ಅಪಾಯದಲ್ಲಿದೆ. ಎಸ್‌ಇಝೆಡ್‌ಗಳು, ಬೃಹತ್ ಕೈಗಾರಿಕೆಗಳು, ಬೃಹತ್ ಜಲವಿದ್ಯುತ್ ಸ್ಥಾವರಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಈ ದೇಶದ ಅಪಾರ ಪ್ರಮಾಣದ ಪರಿಸರ ನಾಶವಾಗುತ್ತಿದೆ. ಅವುಗಳ ಉಳಿವಿಗೆ ಈಗಾಗಲೇ ಜನಾಂದೋಲನಗಳು ಆರಂಭವಾಗಿವೆ. ಅವುಗಳಿಗೆ ಬೆಂಬಲ ನೀಡಿ, ಈ ದೇಶದ ಬಡವನ ಬದುಕುವ ಹಕ್ಕನ್ನು ಉಳಿಸಿಕೊಡಿ ಎಂದು ಕರೆ ನೀಡುವುದೂ ದೇಶಪ್ರೇಮವೇ ಎಂಬ ತಿಳಿವಳಿಕೆಯನ್ನು ಇಂದಿನವರಿಗೆ ನೀಡುವವರು ಯಾರು?

ರಾಜಕಾರಣವೆಂಬುದು ಕೇವಲ ಉಳ್ಳವರ ಪಾಲಿನ ದಂಧೆಯಾಗಿದೆ. ಅಂಥವರಿಂದ ದೇಶದ ಪ್ರಜಾಪ್ರಭುತ್ವ ಮಾರಾಟದ ಸರಕಾಗಿದೆ. ಮನೆಯಿಂದ ಹೊರಬನ್ನಿ, ಮತ ನೀಡಿ, ಯೋಗ್ಯರನ್ನೇ ಆರಿಸಿ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದರೆ ಮಾತ್ರ ನಾವೆಲ್ಲ ನೆಮ್ಮದಿಯಿಂದ ಉಸಿರಾಡಿಕೊಂಡಿರಲು ಸಾಧ್ಯ. ಪ್ರಜಾಪ್ರಭುತ್ವವನ್ನು ಉಳಿಸುವುದೂ ದೇಶಪ್ರೇಮವೇ ಎಂದು ಹೇಳುವವರು ಯಾರಾದರೂ ಇದ್ದಾರಾ?

ಇವತ್ತಿನ ಯುವಕರಲ್ಲಿ ದೇಶಪ್ರೇಮ ಕಡಿಮೆಯಾಗುತ್ತಿದೆ ಎಂಬ ಬೊಬ್ಬೆ ಎಲ್ಲೆಡೆ ಕೇಳುತ್ತದೆ. ಸ್ವಾತಂತ್ರ್ಯೋತ್ಸವದ ಭಾಷಗಳಲ್ಲಂತೂ ಎಲ್ಲ ಹಿರಿಯರು ದೇಶಪ್ರೇಮ ಬೆಳೆಸಿಕೊಳ್ಳಲು ಯುವಕರಿಗೆ ಕರೆ ಕೊಡುತ್ತಾರೆ. ಆದರೆ ದೇಶಪ್ರೇಮ ಅಂದರೆ ಏನು, ಅದನ್ನು ವ್ಯಕ್ತಪಡಿಸುವುದು ಹೇಗೆ ಎಂಬ ಬಗ್ಗೆ ಮಾತನ್ನೇ ಆಡುವುದಿಲ್ಲ. ಹಾಗಾಗಿಯೇ ಇವತ್ತಿನ ಯುವಕರಲ್ಲಿ - ದೊಡ್ಡವರ ದೃಷ್ಟಿಯ - ದೇಶಪ್ರೇಮ ಇಲ್ಲ. ಅಂಥ ಯುವಕರಲ್ಲಿ ಈ ದೇಶದ ನೆಲ, ಜಲ, ಭಾಷೆ, ಸಂಸ್ಕೃತಿ, ರೈತನ ಬದುಕು, ಗ್ರಾಮ ಭಾರತ... ಇಂಥವುಗಳ ಉಳಿವಿಗಾಗಿ ಕೆಲಸಮಾಡುವುದೂ ದೇಶಭಕ್ತಿಯ ಪ್ರಕಟೀಕರಣಕ್ಕೆ ಇರುವ ಮಾರ್ಗಗಳೇ ಎನ್ನುವ ಅರಿವು ಬರಲೇಬೇಕು. ಆಗ ಮಾತ್ರ ಈ ದೇಶದ ಗ್ರಾಮಗಳು, ಸಂಸ್ಕೃತಿ, ಭಾಷೆ, ಜಲ ಉಳಿದೀತು.

ಯೋಧರು ತಮ್ಮ ದೇಶಪ್ರೇಮದ ಅಭಿವ್ಯಕ್ತಿಗಾಗಿ ದೇಶದ ಬೇಲಿ ಕಾಯ್ದರೆ, ಯೋಧರಾಗಲು ಸಾಧ್ಯವಿಲ್ಲದವರು ದೇಶದೊಳಗಣ ಶತ್ರುವಿನ ವಿರುದ್ಧ ತೊಡೆ ತಟ್ಟಬೇಕು. ಆಗ ಮಾತ್ರ ಭಾರತ ಭಾರತವಾಗಿಯೇ ಉಳಿಯಬಲ್ಲದು.

ವಿಜಯ್ ಜೋಶಿ

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
ಹೌದು ನಿಮ್ಮ ಅನಿಸಿಕೆ ಸರಿ ನೀವು ಹೆಸರಿಸಿದಂಥ
ಮಹಾನೀಯರಲ್ಲದೆ ಇನ್ನು ಸಾಕಷ್ಟು ಮಂದಿಯನ್ನು
ನಾವು ರೋಲ್ ಮಾಡೆಲ್ ಗಳಾಗಿ ಪರಿಗಣಿಸಬೇಕಿದೆ
ಧರ್ಮೇಂದ್ರ
ಬಹ್ರೈನ್
Unknown ಹೇಳಿದ್ದಾರೆ…
very nice
Unknown ಹೇಳಿದ್ದಾರೆ…
excellent....it is reality of our country ..very nice.......

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her ...

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ...

ಕನ್ನಡ ಪುಸ್ತಕಗಳು ಹೇಗಿರಬೇಕು?

ನನಗೆ ಪತ್ರಿಕೋದ್ಯಮ ಮತ್ತು ಬರವಣಿಗೆಯ ಬಗ್ಗೆ ಅನುಮಾನಗಳು ಮೂಡಿದಾಗ, ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಲು ನಾನು ಆಯ್ಕೆಮಾಡಿಕೊಳ್ಳುವ ವ್ಯಕ್ತಿಗಳ ಪೈಕಿ ನಮ್ಮ ಮನೆಯ ಸಮೀಪದಲ್ಲೇ ಇರುವ ಗಣಪತಿ ಎಂ. ಎಂ. ಅವರೂ ಒಬ್ಬರು. ವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ವಿದ್ಯಾರ್ಥಿ ದೆಸೆಯಿಂದಲೂ ಪ್ರಗತಿಪರ ಚಳವಳಿಯೊಂದಿಗೆ ಬೆಳೆದುಬಂದವರು. ನಾನೊಬ್ಬ ಪ್ರಗತಿವಾದಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವವರು. ಜೊತೆಗೆ ಕನ್ನಡ ಭಾಷೆ, ಕನ್ನಡ ಪುಸ್ತಕಗಳ ಬಗ್ಗೆ ಅಭಿಮಾನ ಇರುವವರು. ಒಮ್ಮೆ ಹೀಗೆ ಅವರ ಮನೆಗೆ ಹೋಗಿದ್ದಾಗ ಕನ್ನಡ ಪುಸ್ತಕಗಳ ಬಗ್ಗೆ ನನ್ನ ಮತ್ತು ಅವರ ನಡುವೆ ನಡೆದ ಸಣ್ಣ ಮಾತುಕತೆಯ ಬಗ್ಗೆ ನಿಮ್ಮ ಮುಂದೆ ಪ್ರಸ್ತಾಪ ಮಾಡಬೇಕೆನಿಸುತ್ತಿದೆ. ನಾನು ಗಣಪತಿಯವರ ಮನೆಗೆ ಹೋದಾಗ ಅವರು ಆಗತಾನೇ ಕೊಂಡುತಂದಿದ್ದ ಯಾವುದೋ ಪುಸ್ತಕದ ಪುಟಗಳನ್ನು ತಿರುವಿ ಹಾಕುತ್ತಿದ್ದರು. ನನ್ನನ್ನು ಕಂಡೊಡನೆಯೇ ಒಮ್ಮೆ ಮುಗುಳ್ನಕ್ಕು ಒಂದೆರಡು ಪುಸ್ತಕಗಳನ್ನು ನನ್ನ ಮುಂದಿಟ್ಟರು. ಪುಸ್ತಕಗಳನ್ನು ಕಂಡೊಡನೆಯೇ ನಾನು ಕೆಲವೇ ದಿನಗಳ ಹಿಂದೆ ಕೊಂಡು ತಂದಿದ್ದ ಹೆಗ್ಗೋಡಿನ ಅಕ್ಷರ ಪ್ರಕಾಶನದ 'ಗೋಪಾಲಕೃಷ್ಣ ಅಡಿಗ ಅವರ ಆಯ್ದ ಕವಿತೆಗಳು' ಪುಸ್ತಕ ನೆನಪಿಗೆ ಬಂತು. ಈ ಪುಸ್ತಕದ ಮುದ್ರಣ, ಪುಟ ವಿನ್ಯಾಸ, ಕಾಗದದ ಗುಣಮಟ್ಟ ಇವೆಲ್ಲವೂ ಶ್ರೇಷ್ಠ ದರ್ಜೆಯಲ್ಲಿಯೇ ಇವೆಯಾದರೂ ಪುಸ್ತಕದ ಬೆಲೆ ತುಸು ಹೆಚ್ಚಾಯಿತು ಎಂಬ ಭಾವನೆ ನನ್ನಲ್ಲಿತ್ತು. ಇದೇ ವಿಚಾರವಾಗಿ ಗಣಪತಿಯ...