ದಿ ಏಶಿಯನ್ ಏಜ್ ಮತ್ತು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ಕೆಲಸ ಮಾಡಿ ಅನುಭವ ಇರುವ ಮಂಗಳೂರು ಮೂಲದ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ ಈಗ ವೃತ್ತಿಪರ ಪತ್ರಿಕೋದ್ಯಮಕ್ಕೆ ವಿದಾಯ ಹೇಳಿ ಹವ್ಯಾಸಿ ಪತ್ರಕರ್ತರಾಗಿದ್ದಾರೆ. ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಎಂಬ ಸಂಘಟನೆಯೊಂದನ್ನು ಹುಟ್ಟುಹಾಕಿಕೊಂಡು ಪರ್ಯಾಯ ಶಿಕ್ಷಣ ವಿಧಾನಗಳ ಅಭಿವೃದ್ಧಿಯ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ. ಇವೆರಡರ ಜೊತೆಗೆ ಆಗಾಗ ಕರಾವಳಿಯ ಪತ್ರಿಕೋದ್ಯಮ ಕಾಲೇಜುಗಳ ವಿದ್ಯಾರ್ಥಿಗಳಿಗೆಂದು ಪ್ರಾಯೋಗಿಕ ಪತ್ರಿಕೋದ್ಯಮ ತರಗತಿಗಳನ್ನೂ ನಡೆಸುತ್ತಿದ್ದಾರೆ.
ಒಮ್ಮೆ ಹೀಗೆ ಅವರ ತರಗತಿಯಲ್ಲಿ ಕುಳಿತಿದ್ದಾಗ ಅವರ ಒಂದು ಮಾತು ಥಟ್ಟನೆ ಮನಸ್ಸಿನ ಆಳಕ್ಕೆ ಇಳಿಯಿತು. ಪತ್ರಕರ್ತನಾದವ ಆಶಾವಾದಿಯೂ ಆಗಬೇಕಿಲ್ಲ, ನಿರಾಶಾವಾದಿಯೂ ಆಗಬೇಕಿಲ್ಲ. ಆತ ವಾಸ್ತವವಾದಿಯಾಗಿದ್ದರೆ ಸಾಕು. ಆತ ತನ್ನ ವಯುಕ್ತಿಕ ಬದುಕಿನಲ್ಲಿ ಆಶಾವಾದಿಯಾಗಿರಬಾರದು ಎಂದು ಹೇಳುತ್ತಿಲ್ಲ. ಆದರೆ ಪತ್ರಕರ್ತನ ಕೆಲಸ ನಿರ್ವಹಿಸುತ್ತಿರುವಾಗ ಆತ ಖಂಡಿತವಾಗಿಯೂ ವಾಸ್ತವವಾದಿಯಾಗಿರಬೇಕು. ಪತ್ರಿಕೋದ್ಯಮವನ್ನು ಮತ್ತು ವೈಯುಕ್ತಿಕ ಬದುಕನ್ನು ಒಂದೇ ಎಂದು ತಿಳಿದವರು ವಾಸ್ತವವಾದಿಗಳೇ ಆಗಿರಲಿ. ಅಂಥವರು ಆಶಾವದಿಗಳೋ ಅಥವಾ ನಿರಾಶಾವಾದಿಗಳೋ ಆಗಿರುವುದು ಬೇಡ ಎಂಬುದು ಅವರ ಆ ದಿನದ ಪಾಠದ ಸಾರ.
ಅವರ ಮಾತು ಸರಿಯಾಗಿ ಅರ್ಥವಾಗಬೇಕಾದರೆ ಒಂದು ಕಾಲ್ಪನಿಕ ಕಥೆಯನ್ನು ಹೇಳಬೇಕು. ಈ ಕಥೆಯನ್ನು ನನಗೆ ಹೇಳಿದ್ದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರಾಗಿರುವ ಆದಿತ್ಯ ಭಟ್ಟರು.
ಒಮ್ಮೆ ಹೀಗಾಯಿತು. ಒಬ್ಬ ಮಧ್ಯಮ ವರ್ಗದ ಮೇಲ್ಜಾತಿಯ ಯುವಕ ಬಡ ಕೆಳಜಾತಿಯ ಯುವತಿಯೊಬ್ಬಳಿಗೆ ಒಂದು ಸಾವಿರ ರೂಪಾಯಿ ಸಾಲ ನೀಡಿದ್ದ. ಆ ಯುವತಿ ಸಕಾಲದಲ್ಲಿ ಆ ಸಾಲವನ್ನು ಹಿಂದಿರುಗಿಸುವುದಾಗಿ ಸಾಲ ಪಡೆಯುವ ಸಮಯದಲ್ಲಿ ಮಾತು ಕೊಟ್ಟಿದ್ದಳು.
ಆದರೆ ಸಾಲ ತೀರಿಸಬೇಕಾದ ಅವಧಿ ಮುಗಿದು ಹಲವು ದಿನಗಳು ಕಳೆದರೂ ಆ ಯುವತಿ ಸಾಲವನ್ನು ಮರುಪಾವತಿ ಮಾಡಲಿಲ್ಲ. ಇತ್ತ ಯುವಕ ಸಹನೆಯಿಂದ ಹಲವು ಬಾರಿ ಸಾಲ ಮರುಪಾವತಿಸುವಂತೆ ಯುವತಿಗೆ ತಿಳಿಹೇಳಿದ. ಆದರೆ ಯುವತಿ ಇವನ ಮಾತಿಗೆ ಉಡಾಫೆ ತೋರಿಸುತ್ತಾ ಸಾಲವನ್ನು ಮರುಪಾವತಿ ಮಾಡಲೇ ಇಲ್ಲ. ಕೊನೆಗೊಂದು ದಿನ ರೋಸಿಹೋದ ಆ ಯುವಕ ನಡುಬೀದಿಯಲ್ಲಿ ಯುವತಿಯ ಕಪಾಳಕ್ಕೊಂದು ಬಾರಿಸಿದ. ನಡೆದ ಕಥೆ ಇಷ್ಟೆ.
ನಂತರ ಅಲ್ಲಿಗೆ ಅನೇಕ ಮಂದಿ ಪತ್ರಕರ್ತರು ಬಂದರು, ಘಟನೆಯ ವರದಿ ಮಾಡುವುದಕ್ಕೆ. ಅವರಲ್ಲಿ ಒಬ್ಬ ಕಮ್ಯುನಿಸ್ಟ್ ಪತ್ರಕರ್ತ, ಇನ್ನೊಬ್ಬ ’ಸೆಕ್ಯುಲರ್’ ಪತ್ರಕರ್ತ, ಮತ್ತೊಬ್ಬ ಸ್ತ್ರೀವಾದಿ, ಮಗದೊಬ್ಬ ವಾಸ್ತವವಾದಿ ಪತ್ರಕರ್ತ ಇದ್ದ, ನಾಲ್ವರೂ ಪತ್ರಕರ್ತರು ತಮ್ಮ ತಮ್ಮ ಪತ್ರಿಕೆಗಳಿಗೆ ವರದಿ ಬರೆದು ಕಳಿಸಿದರು. ಕಮ್ಯುನಿಸ್ಟ್ ಪತ್ರಕರ್ತ ಮೇಲ್ವರ್ಗದವರಿಂದ ಕೆಳವರ್ಗದವರ ಮೇಲೆ ನಿಲ್ಲದ ದೌರ್ಜನ್ಯ ಎಂಬ ಅರ್ಥದಲ್ಲಿ ವರದಿ ಬರೆದರೆ ಸೆಕ್ಯುಲರ್ ಪತ್ರಕರ್ತ ಈ ದೇಶದಲ್ಲಿ ಜಾತಿಬೇಧಗಳು ಅಳಿಸಿಹೋಗುವವರೆಗೆ ಈ ರೀತಿಯ ದೌರ್ಜನ್ಯಗಳು ನಿಲ್ಲುವುದಿಲ್ಲ ಎಂದು ಬರೆದ. ಸ್ತ್ರೀವಾದಿ ಪತ್ರಕರ್ತ ಸಮಾಜದಲ್ಲಿ ಸ್ತ್ರೀ ಶೋಷಣೆಗೆ ಲಗಾಮು ಹಾಕುವವರು ಯಾರು ಎಂಬ ಅರ್ಥದ ವರದಿ ಕಳಿಸಿದ. ಕೊನೆಯವನಾದ ವಾಸ್ತವಾದಿ ಪತ್ರಕರ್ತ ಮಾತ್ರ ಸಾಲ ಪಡೆದು ವಂಚಿಸಿದ ಯುವತಿಗೆ ಕಪಾಳಮೋಕ್ಷ ಎಂದು ವರದಿ ಕಳಿಸಿದ. ಎಲ್ಲರ ವರದಿಗಳೂ ಪ್ರಕಟವಾದವು.
ವಿಭಿನ್ನ ಸೈದ್ಧಾಂತಿಕ ನೆಲೆಯಿಂದ ಬಂದಿರುವ ಪತ್ರಕರ್ತರು ವರದಿ ಮಾಡಿರುವ ರೀತಿಯನ್ನು ಒಮ್ಮೆ ಗಮನಿಸಿ. ಪತ್ರಿಕಾಧರ್ಮವಾದ ವಾಸ್ತವವನ್ನು ಗ್ರಹಿಸಿ ವರದಿ ಮಾಡುವುದಕ್ಕಿಂತ ಹೆಚ್ಚಾಗಿ ಸಿದ್ಧಾಂತಗಳೇ ತಲೆಯಲ್ಲಿ ತುಂಬಿಕೊಂಡಾಗ ಆಗುವ ಅಚಾತುರ್ಯಗಳು ಏನು ಎಂಬುದನ್ನೂ ನೋಡಿ.
ಇಲ್ಲಿ ಒಬ್ಬ ಯುವಕ ಒಬ್ಬಳು ಯುವತಿಗೆ ವಿಶ್ವಾಸದಿಂದ ಸಾಲ ಕೊಟ್ಟಿದ್ದ. ಆದರೆ ಆಕೆ ಆ ವಿಶ್ವಾಸವನ್ನು ಉಳಿಸಿಕೊಳ್ಳಲಿಲ್ಲ. ಬದಲಿಗೆ ಯುವಕನನ್ನು ಸತಾಯಿಸತೊಡಗಿದಳು. ಗರಿಷ್ಠ ಸಹನೆಯನ್ನು ತೋರಿದ ಯುವಕ ಕೊನೆಗೊಂದು ದಿನ ರೋಸಿ ಹೋಗಿ ಆಕೆಯ ಕಪಾಳಕ್ಕೆ ಬಾರಿಸಿದ. ಘಟನೆ ಇಷ್ಟೆ. ಇಲ್ಲಿ ಆ ಇಬ್ಬರು ವ್ಯಕ್ತಿಗಳ ಜಾತಿ, ವರ್ಗ, ಲಿಂಗ ಇವ್ಯಾವುದೂ ಮಹತ್ವದ್ದಲ್ಲ. ಯುವಕ ಯುವತಿಗೆ ಹೊಡೆದದ್ದು ಕಾನೂನಿನ ದೃಷ್ಟಿಯಿಂದ ನಿಜಕ್ಕೂ ತಪ್ಪು. ಆದರೆ ಅದನ್ನು ಅರ್ಥೈಸುವಿಕೆ ಎಷ್ಟೊಂದು ರೀತಿಯಲ್ಲಾಯಿತು? ಸಾಲ ಹಿಂದಿರುಗಿಸಲು ಒಪ್ಪದ ಯುವತಿಗೆ ಒಬ್ಬ ಯುವಕ ಕಪಾಳಕ್ಕೆ ಹೊಡೆದದ್ದು - ಆ ಯುವಕ ಸಾಕಷ್ಟು ಸಹನೆಯನ್ನು ಈ ಹಿಂದೆ ತೋರಿದ್ದ ಎಂಬುದು ಮರೆತುಹೋಗಿ - ಸೈದ್ಧಾಂತಿಕ ಹಿನ್ನಲೆಯಲ್ಲಿ ಘಟನೆಗಳನ್ನು ಗ್ರಹಿಸುವ ಪತ್ರಕರ್ತರಿಂದಾಗಿ ತಪ್ಪಾಗಿ ವರದಿಯಾಯಿತು. ಪತ್ರಿಕೆಗಳಲ್ಲಿ ಬರುವ ವಿಚಾರಗಳು ನೂರಕ್ಕೆ ನೂರು ಸತ್ಯ ಎಂದು ನಂಬುವ(?) ಓದುಗ ಇಲ್ಲಿ ವಂಚನೆಗೊಳಗಾದ. ವಾಸ್ತವವನ್ನು ಗ್ರಹಿಸುವ ವ್ಯವಧಾನ ಇಲ್ಲದವ ಯಾವ ಸೀಮೆಯ ಪತ್ರಿಕೋದ್ಯಮ ಮಾಡಬಹುದು?!
ಈ ಘಟನೆ ನೂರಕ್ಕೆ ನೂರು ಕಾಲ್ಪನಿಕವೇ ಇರಬಹುದು. ಅದಲ್ಲದೆ ಸೈದ್ಧಾಂತಿಕ ಹಿನ್ನಲೆ ಹೊಂದಿರುವ ಎಲ್ಲ ಪತ್ರಕರ್ತರೂ ಇದೇ ರೀತಿ ಬರೆಯುತ್ತಾರೆ ಎಂದು ಹೇಳುತ್ತಿಲ್ಲ. ತಮ್ಮ ವೈಯುಕ್ತಿಕ ನಂಬಿಕೆ, ಸಿದ್ಧಾಂತಗಳು ಯಾವುದೇ ಆಗಿದ್ದರೂ ವರದಿಗಾರಿಕೆಗೆ ಕುಳಿತಾಗ ಕೇವಲ ವಾಸ್ತವ ಸಂಗತಿಯನ್ನು ಗ್ರಹಿಸಿ ವಸ್ತುನಿಷ್ಠವಾಗಿ ವರದಿ ಮಾಡುವ ಪತ್ರಕರ್ತರ ದೊಡ್ಡ ಸಮೂಹ ಎಲ್ಲ ಸೈದ್ಧಾಂತಿಕ ಗುಂಪುಗಳಲ್ಲಿಯೂ ಇದೆ. ಆದರೆ ಇದೇ ಹೊತ್ತಿನಲ್ಲಿ ಸರಳ ಘಟನೆಯನ್ನೂ ಸಿದ್ಧಾಂತದ ಹಿನ್ನಲೆಯಲ್ಲಿ ವಿಮರ್ಶಿಸಿ ಸತ್ಯವನ್ನೇ ಮರೆಮಾಚುವ ಪತ್ರಕರ್ತರೂ ನಮ್ಮ ನಡುವೆ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.
ಹಾಗಾದರೆ ಪತ್ರಕರ್ತನಾದವನಿಗೆ ಸಿದ್ಧಾಂತಗಳೇ ಇರಬಾರದಾ? ಸೈದ್ಧಾಂತಿಕ ಹಿನ್ನಲೆ ಇರದೆ ಬರಹ ಎನ್ನುವುದು ಕೈಗೆ ಹತ್ತುತ್ತಾ? ಇಂಥ ಪ್ರಶ್ನೆಗಳು ಖಂಡಿತ ಮನಸ್ಸಿನಲ್ಲಿ ಮೂಡುತ್ತವೆ. ಅವಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಬೇಕಾದ ಅಗತ್ಯವೂ ಇದೆ.
ಪತ್ರಿಕಾ ಬರಹದ ಎರಡು ಮುಖ್ಯ ವರ್ಗೀಕರಣಗಳಾದ ವರದಿಗಾರಿಕೆ ಮತ್ತು ಸಂಪಾದಕೀಯ ಬರಹಗಳ ವಿಚಾರದ ಬಗ್ಗೆ ಮಾತನಾಡುವಾಗ ಪತ್ರಕರ್ತನ ನಿಲುವುಗಳು ಪ್ರಮುಖವಾಗಿ ಚರ್ಚೆಗೆ ಬರುತ್ತವೆ.
ಈ ಬಗ್ಗೆ ಒಂದು ಸ್ವಾರಸ್ಯಕರ ಕಥೆಯಿದೆ. ಕನ್ನಡನಾಡಿನ ಹಿರಿಯ ಆಂಗ್ಲ ಭಾಷಾ ಪತ್ರಕರ್ತ ಮಾಧವ ವಿಠಲ ಕಾಮತ್ (ಅಥವಾ ಎಮ್ ವಿ ಕಾಮತ್) ಅವರು ಪತ್ರಕರ್ತರಾಗಿ ಸಕ್ರಿಯರಾಗಿದ್ದ ದಿನಗಳಲ್ಲಿ ನಡೆದ ಘಟನೆ ಇದು.
ಅದು ಕಾಮತ್‌ರು ಸ್ವಾಮಿನಾಥನ್ ಸದಾನಂದ್ ಅವರ ದಿ ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳು. ಆ ದಿನಗಳಲ್ಲಿ ಕಾಮತ್‌ರಿಗೆ ಸಮಾಜವಾದದ ಬಗ್ಗೆ ಬಹಳ ಒಲವಿತ್ತು. ಅವರು ಆ ದಿನಗಳಲ್ಲಿ ಒಬ್ಬ ಸಮಾಜವಾದಿ ಪತ್ರಕರ್ತ. ಹಾಗಿದ್ದಾಗ ಒಮ್ಮೆ ಮುಂಬಯಿಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಒಂದು ಸಭೆ ಇತ್ತಂತೆ. ಆ ಸಭೆಯನ್ನು ಫ್ರೀ ಪ್ರೆಸ್ ಜರ್ನಲ್‌ನ ಪರವಾಗಿ ವರದಿ ಮಾಡುವ ಜವಾಬ್ದಾರಿ ಕಾಮತ್ ಹೆಗಲ ಮೇಲೆ ಬಿತ್ತು. ಸರಿ, ಕಾಮತ್ ಪೆನ್ನು, ಪುಸ್ತಕ ಹಿಡಿದು ಹೊರಟರು. ಸಭೆಯಲ್ಲಿ ಸಂಪೂರ್ಣವಾಗಿ ಹಾಜರಿದ್ದು ನಂತರ ಕಛೇರಿಗೆ ಮರಳಿ ಕಾರ್ಯಕ್ರಮದ ವರದಿ ಬರೆದಿಟ್ಟು ಹೋದರು ಕಾಮತರು. ಮರುದಿನದ ಸಂಚಿಕೆಯಲ್ಲಿ ಸುದ್ದಿ ಪ್ರಕಟವೂ ಆಯಿತು. ಆದರೆ ಸುದ್ದಿ ಪ್ರಕಟವಾದ ಬೆನ್ನಿಗೇ ಒಂದು ವಿವಾದವೂ ಕಾಮತ್‌ರನ್ನು ಅರಸಿಕೊಂಡು ಬಂದಿತು.
ಆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿಗರು ಮತ್ತು ಸಮಾಜವಾದಿ ಪಕ್ಷದವರಿಬ್ಬರೂ ಮಾತಾಡಿದ್ದರು. ಇಬ್ಬರ ಭಾಷಣವೂ ಪ್ರಮುಖವೇ ಆಗಿತ್ತು. ಆದರೆ ಕಾಮತ್ ಅವರು ತಮ್ಮ ವರದಿಯಲ್ಲಿ ಸಮಾಜವಾದಿಗಳ ಭಾಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಕಾಂಗ್ರೆಸ್ಸಿಗರ ಮಾತುಗಳ ಬಗ್ಗೆ ಸ್ವಲ್ಪ ಮಟ್ಟಿಗೆ ನಿರ್ಲಕ್ಷ್ಯ ತೋರಿಸಲಾಗಿದೆ ಎಂದು ಕಾಂಗ್ರೆಸ್ಸಿಗರ ಒಂದು ಗುಂಪು ಪತ್ರಿಕೆಯ ಸಂಪಾದಕ ಎಸ್ ಸದಾನಂದ್‌ರಲ್ಲಿ ದೂರು ನೀಡಿತು. ದೂರನ್ನು ಗಂಭೀರವಾಗಿ ಪರಿಗಣಿಸಿದ ಸದಾನಂದ್ ಕಾಮತ್‌ರನ್ನು ತಮ್ಮ ಕೋಣೆಗೆ ಕರೆಸಿ ವಿವರಣೆ ಕೇಳಿದರು.
ಕಾಮತ್‌ರು ಮೂಲತಃ ತಾವೊಬ್ಬ ಸಮಾಜವಾದಿ ವಿಚಾರದ ಬಗ್ಗೆ ಒಲವಿದ್ದವನಾಗಿದ್ದರಿಂದ ಸಮಾಜವಾದಿಗಳ ಭಾಷಣಕ್ಕೆ ಸ್ವಲ್ಪ ಹೆಚ್ಚಿನ ಆದ್ಯತೆ ನೀಡಿರಲೂಬಹುದು ಎಂದು ಹೇಳಿದರು. ಆಗ ಎಸ್ ಸದಾನಂದ್ ಸ್ವಲ್ಪ ಖಡಕ್ ಆಗಿ ಕಾಮತ್‌ರಲ್ಲಿ ಒಂದು ಮಾತು ಹೇಳಿದರು: ಕಾಮತ್, ನಿನಗೆ ಸಮಾಜವಾದ ಅಷ್ಟೊಂದು ಇಷ್ಟ ಅನ್ನುವುದಾದರೆ ಪತ್ರಕರ್ತನ ಕೆಲಸ ಬಿಟ್ಟು ಸಮಾಜವಾದಿ ಪಕ್ಷಕ್ಕೇ ಸೇರಿಕೊ. ಆಗಲ್ಲ, ಪತ್ರಕರ್ತನ ಕೆಲಸ ಬೇಕು ಎನ್ನುವುದಾದರೆ ಎಲ್ಲರನ್ನೂ ಸಮಾನವಾಗಿ ನೋಡು. ಆಯ್ಕೆ ನಿನ್ನದು. ಸದಾನಂದ್‌ರ ಕಡ್ಡಿ ಮುರಿದಂತಹ ಮಾತಿಗೆ ಕಾಮತ್ ಒಪ್ಪಲೇಬೇಕಾಯಿತು.
ನೆನಪಿಡಿ; ಇಲ್ಲಿ ಸದಾನಂದ್ ಅವರು ಕಾಮತ್‌ಗೆ ಹೇಳಿದ ಮಾತುಗಳು ವರದಿಗಾರಿಕೆಗೆ ಹೆಚ್ಚು ಅನ್ವಯವಾಗುತ್ತವೆ.
ಇನ್ನು ಸಂಪಾದಕೀಯ ಪುಟದಲ್ಲಿ ಬರುವ ಬರೆಹಗಳ ಬಗ್ಗೆ ಮಾತಾಡೋಣ. ಸಂಪಾದಕೀಯ ಪುಟದಲ್ಲಿ ಬರುವ ಲೇಖನಗಳೆಲ್ಲ ಪತ್ರಕರ್ತರೇ ಬರೆಯುವುದಿಲ್ಲ. ಆದರೆ ಸಂಪಾದಕೀಯವನ್ನು ಮಾತ್ರ ಆಯಾ ಪತ್ರಿಕೆಯ ಸಂಪಾದಕ ಅಥವಾ ಸಂಪಾದಕೀಯ ಮಂಡಳಿಯ ಹಿರಿಯ ಸದಸ್ಯರು ಬರೆಯುತ್ತಾರೆ.
ಸಂಪಾದಕೀಯವನ್ನು ಬರೆಯುವಾಗಲೂ ಅಷ್ಟೆ. ಸಿದ್ಧಾಂತಗಳು, ಇಸಮ್ಮುಗಳನ್ನು ತಲೆಯಲ್ಲಿ ಇಟ್ಟುಕೊಂಡು ಬರೆಯಲು ಕುಳಿತರೆ ವಾಸ್ತವ ಕಣ್ಣಿಗೆ ಕಾಣಿಸುವುದಿಲ್ಲ. ತಮ್ಮ ಸಿದ್ಧಾಂತವನ್ನು ಒಪ್ಪುವವರು ಮಾಡಿದ್ದೆಲ್ಲ ಸರಿಯಾಗಿಯೇ ಕಾಣುತ್ತದೆ; ತಮ್ಮ ಸಿದ್ಧಾಂತವನ್ನು ಒಪ್ಪದವರು ಮಾಡಿದ್ದೆಲ್ಲ ತಪ್ಪಾಗಿಯೇ ಕಾಣಿಸುತ್ತದೆ. ಸಿದ್ಧಾಂತಗಳನ್ನು ಅತಿಯಾಗಿ ಪ್ರತಿಪಾದಿಸಲು ಹೊರಟರೆ ಟಿಬೆಟ್‌ನಲ್ಲಿನ ಬೌದ್ಧ ಭಿಕ್ಷುಗಳ ಮೇಲೆ ಕಮ್ಯುನಿಸ್ಟ್ ಚೀನಾ ನಡೆಸುತ್ತಿರುವ ದಬ್ಬಾಳಿಕೆ, ಹಿಂಸೆ ಕೂಡ ಸಮರ್ಥನೀಯ ಅನಿಸುತ್ತದೆ. ಭಾರತದ ಮೇಲೆ ಚೀನಾ ೧೯೬೨ರಲ್ಲಿ ಆಕ್ರಮಣ ನಡೆಸಿದ್ದು ತಪ್ಪು ಅಂತ ಅನ್ನಿಸುವುದಿಲ್ಲ. ಅಷ್ಟಲ್ಲದೆ, ನಮ್ಮ ದೇಶದ ಹೆಸರಾಂತ ಆಂಗ್ಲ ಪತ್ರಿಕೆಯೊಂದರ ಸಿದ್ಧಾಂತದ ಕನ್ನಡಕಕ್ಕೆ ಕಂಡಂತೆ, ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಕಮ್ಯುನಿಸ್ಟರು ನಡೆಸಿದ ಬಡವರ ಮಾರಣಹೋಮದಲ್ಲಿ ತಪ್ಪು ಕಾಣಿಸುವುದೇ ಇಲ್ಲ! ನಕ್ಸಲರು ಒಂದೆಕರೆ ಜಮೀನು ಇರುವವರನ್ನು ಕೊಂದರೆ ಅದು ಒಂದು ಜೀವಿಯನ್ನು ಹಿಂಸಿಸುವ ಪರಿಯಂತೆ ತೋರದೆ, ಭೂಮಾಲಕರ ವಿರುದ್ಧದ ಹೋರಾಟದಂತೆ ಕಾಣಿಸುತ್ತದೆ!!
ಇನ್ನು ಅಂಕಣ ಬರಹಗಳ ಮಜವೇ ಬೇರೆ. ಸಾಮಾನ್ಯವಾಗಿ ದಿನಪತ್ರಿಕೆಗಳು ಪ್ರತಿದಿನ ಒಬ್ಬ ವ್ಯಕ್ತಿಯ ಅಂಕಣವನ್ನು ಪ್ರಕಟಿಸುತ್ತವೆ. ಕೆಲವು ಪತ್ರಿಕೆಗಳು ತಮ್ಮ ಸ್ಥಳಾವಕಾಶವನ್ನು ನೋಡಿಕೊಂಡು ಎರಡು ಮೂರು ಅಂಕಣವನ್ನೂ ಪ್ರತಿದಿನ ಪ್ರಕಟಿಸಬಹುದು.
ನಾಗೇಶ ಹೆಗಡೆಯವರು ಪರಿಸರ, ವಿಜ್ಞಾನ ವಿಚಾರಗಳ ಬಗ್ಗೆ ಬರೆಯುವಂತೆ, ವಿಶ್ವೇಶ್ವರ ಭಟ್ಟರು ಬರೆಯುವ ಸುದ್ದಿಮನೆ ಕಥೆಯಂತೆ, ವಿ ಎನ್ ಸುಬ್ಬರಾವ್ ಬರೆಯುವ ವಾರದ ರಾಜಕೀಯ ಬೆಳವಣಿಗೆಗಳ ಕುರಿತ ಬರೆಹದಂತೆ, ಅಂಕಣ ಬರಹ ಎಂದರೆ ಅದೊಂದು ರೀತಿಯಲ್ಲಿ ಜನಸಾಮಾನ್ಯರ ವಿಶ್ವಕೋಶವಿದ್ದಂತೆ.
ಈಗ ಕೆಲವು ತಿಂಗಳುಗಳ ಹಿಂದೆ ದಿ ಹಿಂದೂ ಪತ್ರಿಕೆಯಲ್ಲಿ ಆ ಪತ್ರಿಕೆಯ ರೀಡರ್ಸ್ ಎಡಿಟರ್ (ಓದುಗರ ಸಂಪಾದಕ) ಕೆ ನಾರಾಯಣನ್ ಅವರ ಆನ್‌ಲೈನ್ ಆಂಡ್ ಆಫ್‌ಲೈನ್ ಎಂಬ ಅಂಕಣ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತಿತ್ತು. ಪತ್ರಿಕೋದ್ಯಮದ ಭಾಷೆ, ನಿಯಮಗಳು, ಬದಲಾವಣೆಗಳು, ಕಾನೂನುಗಳು, ಪತ್ರಿಕಾ ರಂಗದ ದಿಗ್ಗಜರುಗಳ ಬಗ್ಗೆ ಅವರು ತಮ್ಮ ಅಂಕಣದಲ್ಲಿ ಬರೆಯುತ್ತಿದ್ದರು. ಅದಲ್ಲದೆ ಅವರು ಕೆಲಸ ಮಾಡುವ ಪತ್ರಿಕೆಯಾದ ದಿ ಹಿಂದೂ ದಲ್ಲಿ ಬರುವ ವರದಿಗಳ ಬಗ್ಗೆಯೂ ವಸ್ತುನಿಷ್ಠ ವಿಮರ್ಶೆಗಳನ್ನು ಅವರು ಬರೆಯುತ್ತಿದ್ದರು. ಅಂಥ ಅಂಕಣಗಳು ಇಂದಿನ ಪತ್ರಿಕೆಗಳಲ್ಲಿ ಬಹಳ ಅಪರೂಪ. ಅವರು ತಮ್ಮ ಸೇವೆಯಿಂದ ನಿವೃತ್ತರಾಗುವುದರೂಂದಿಗೆ ಅವರ ಅಂಕಣ ಬರವಣಿಗೆಯೂ ನಿಂತಿತು. ಈಗ ಅದನ್ನು ವಿಶ್ವನಾಥನ್ ಅವರು ಬರೆಯುತ್ತಿದ್ದಾರೆ.
ಅಂಕಣ ಬರಹದಲ್ಲಿಯೂ ಕೂಡ ವಾಸ್ತವವನ್ನು ಗ್ರಹಿಸುವ ಬರಹಗಾರನ ಪ್ರಜ್ಞೆ ತನ್ನ ಜಾದೂ ತೋರಿಸುತ್ತದೆ. ಅಂಕಣಕಾರ ಬರೆಯುವ ವಸ್ತುವಿನ ಇತಿಹಾಸ, ಅದರ ಈಗಿನ ಸ್ವರೂಪ ಮತ್ತು ಮುಂದೊಂದು ದಿನ ಅದು ಪಡೆದುಕೊಳ್ಳಬಹುದಾದ ರೂಪದ ಬಗ್ಗೆ ಓದುಗರನ್ನು ಹಿಡಿದಿಡಬಲ್ಲದು. ಬೇಕಿದ್ದರೆ ನಾಗೇಶ ಹೆಗಡೆಯವರ ಪರಿಸರ ಸಂಬಂದಿ ಬರಹಗಳನ್ನು ಒಮ್ಮೆ ಓದಿ ನೋಡಿ. ಹಸಿರುಕ್ರಾಂತಿಯ ಕಾರಣ, ಪರಿಣಾಮಗಳ ಬಗ್ಗೆ ಅವರು ಬರೆದಿರುವ ಲೇಖನಗಳನ್ನು ಓದಿದರೆ ಅವರ ತಿಳಿವಳಿಕೆಯ ಆಳ ನಮ್ಮ ಗಮನಕ್ಕೂ ಬರುತ್ತದೆ.
ಪತ್ರಿಕೋದ್ಯಮ ಏನು ಎಂಬ ಪ್ರಶ್ನೆಗೆ ಒಂದು ಸ್ವಾರಸ್ಯಕರವಾದ ಉತ್ತರವಿದೆ: Truth is factual and unalterable. Unravelling of truth which always sides with society and is subsumed in community consciousness is journalism. ಸತ್ಯವೆಂಬುದು ನೈಜತೆಯನ್ನು ಎತ್ತಿಹಿಡಿಯುತ್ತದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಸಮೂಹದ ಸಾಕ್ಷಿಪ್ರಜ್ಞೆಯಲ್ಲಿ ಅಂತರ್ಗತವಾಗಿರುವ ಸತ್ಯವನ್ನು ಹೊರಗೆಳೆಯುವುದೇ ನಿಜವಾದ ಪತ್ರಿಕೋದ್ಯಮ.
ಪತ್ರಿಕೋದ್ಯಮಕ್ಕೆ ಸಿದ್ಧಾಂತಗಳ ಹಂಗಿನ ಅವಶ್ಯಕತೆಯಿಲ್ಲ. ಪತ್ರಿಕೋದ್ಯಮದ ನಿಷ್ಠೆಯಿರಬೇಕಾದದ್ದು ವಾಸ್ತವದೆಡೆಗೆ ಮಾತ್ರ. ಅದಲ್ಲದೆ ಯಾರೋ ಯಾವುದೋ ಒಂದು ಕಾಲಘಟ್ಟದಲ್ಲಿ ಹೇಳಿದ ಸಿದ್ಧಾಂತಗಳು ಎಲ್ಲಾ ಕಾಲಕ್ಕೂ ಅನ್ವಯವಾಗಬೇಕಾಗಿಲ್ಲ. ಎಲ್ಲ ಕಾಲಕ್ಕೊ ಅನ್ವಯವಾಗುವ ವಾಸ್ತವವಾದವೇ ಪತ್ರಿಕೋದ್ಯಮದ ನಿಜವಾದ ಸಿದ್ಧಾಂತ.
ಏಕೆಂದರೆ ವಾಸ್ತವವಾದಿ ಪತ್ರಕರ್ತನಿಗೆ ಸತ್ಯ-ಅಸತ್ಯಗಳ ನಡುವಣ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ. ಅದನ್ನು ತಿಳಿದವ ಓದುಗನ ವಿಶ್ವಾಸಕ್ಕೆ ಧಕ್ಕೆ ತರಲಾರ. ಪ್ರಜಾಪ್ರಭುತ್ವದ ನಾಲ್ಕನೆಯ ಆಧಾರ ಸ್ತಂಭದ ಗೌರವಕ್ಕೆ ಚ್ಯುತಿ ತರಲಾರ.
ವಿಜಯ್ ಜೋಶಿ
ಕಾಮೆಂಟ್‌ಗಳು
Nanidannu ninna vudaharanege purakavagi nanna anisike yanna thilside...
SHREYA SHETTY
Joshi good writup keep it up....