ಪತ್ರಕರ್ತ ಪಿ ಸಾಯಿನಾಥ್ ಒಮ್ಮೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಫೆಲೋಶಿಪ್‌ಗಾಗಿ ಅರ್ಜಿ ಹಾಕಿದ್ದರು. ಅದರ ಸಂದರ್ಶನಕ್ಕಾಗಿ ಕರೆಯೂ ಬಂತು. ಟೈಮ್ಸ್ ಪತ್ರಿಕೆಯ ಸಂಪಾದಕರುಗಳ ಮುಂದೆ ಕುಳಿತು ತನಗೆ ಫೆಲೋಶಿಪ್ ಸಿಕ್ಕರೆ ಏನೇನು ಮಾಡುತ್ತೇನೆ ಎಂಬುದನ್ನು ಸವಿವರವಾಗಿ ಹೇಳುತ್ತಿದ್ದರು.
"ಇಂದಿನ ಪತ್ರಿಕೆಗಳು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲ್ಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಮಾತ್ರ ಬರೆಯುತ್ತಿವೆ, ನಾನು ಈ ದೇಶದ ಸಾಮಾಜಿಕ ವ್ಯವಸ್ಥೆಯ ಕೆಳಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಬರೆಯುತ್ತೇನೆ" ಎಂದು ಅದಾಗಲೇ ತೀರ್ಮಾನಿಸಿದ್ದ ಪಿ ಸಾಯಿನಾಥ್ ಟೈಮ್ಸ್ ಧಣಿಗಳ ಮುಂದೆಯೂ ತಮಗಿರುವ ಗ್ರಾಮೀಣ ವರದಿಗಾರಿಕೆಯಲ್ಲಿನ ಆಸಕ್ತಿಯ ಕುರಿತು ಹೇಳಿದರು. ಆಗ ಟೈಮ್ಸ್‌ನ ಸಂಪಾದಕ ಮಹಾಶಯನೊಬ್ಬ "ನಮ್ಮ ಪತ್ರಿಕೆಯ ಓದುಗರಿಗೆ ನೀವು ಬರೆಯುವ ಗ್ರಾಮೀಣ ವರದಿಯ ಬಗ್ಗೆ ಏನೂ ಆಸಕ್ತಿ ಇಲ್ಲ, ಏನು ಮಾಡ್ತೀರಾ" ಎಂದು ಕೇಳಿದ.
"ಓದುಗರಿಗೆ ಏನು ಬೇಕು, ಏನು ಬೇಡ ಎಂದು ಹೇಳಲು ನೀವು ನಿಮ್ಮ ಓದುಗರನ್ನು ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ?" ಎಂದು ಕೂಡಲೇ ಮರುಪ್ರಶ್ನಿಸಿದರು ಸಾಯಿನಾಥ್. ಸಾಯಿನಾಥ್ ಪ್ರಶ್ನೆ ಅದೆಷ್ಟು ತೀಕ್ಷ್ಣವಾಗಿತ್ತೆಂದರೆ ಅವರಿಗೆ ಸಂದರ್ಶನಕಾರರಿಂದ ತಿರುಗಿ ಪ್ರಶ್ನೆಯೇ ಬರಲಿಲ್ಲ. ಅದಲ್ಲದೆ ಅವರಿಗೆ ಟೈಮ್ಸ್‌ನ ಫೆಲೋಶಿಪ್ ಕೂಡ ದೊರೆಯಿತು.
ಪೇಜ್ ತ್ರಿ ಪತ್ರಿಕೋದ್ಯಮಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬ ಆರೋಪಕ್ಕೆ ಈಡಾಗಿರುವ ಟೈಮ್ಸ್‌ನ ಧಣಿಗಳ ಮುಂದೆ ಕುಳಿತು ಅವರ ಬಾಯಿ ಮುಚ್ಚಿಸುವುದು ಬಹುಷಃ ಸಾಯಿನಾಥ್‌ಗೆ ಮಾತ್ರ ಸಾಧ್ಯವೇನೋ. ಸಿಂಹದ ಗುಹೆಗೆ ಹೋಗಿ ಅಲ್ಲಿಯೇ ಅದನ್ನು ಸೋಲಿಸುವುದೆಂದರೆ ಸಾಮಾನ್ಯದ ಮಾತೇ?
ಅಂಥ ಪತ್ರಕರ್ತ, ದಿ ಹಿಂದೂ ಪತ್ರಿಕೆಯ ಗ್ರಾಮೀಣ ವರದಿಗಾರ ಪಿ ಸಾಯಿನಾಥ್ ಯಾವತ್ತಿಗೂ ನನ್ನ ಪಾಲಿನ ಆದರ್ಶ.
ಟೈಮ್ಸ್‌ನ ಫೆಲೋಶಿಪ್ ಸಿಕ್ಕಿದ್ದೇ ತಡ ಸಾಯಿನಾಥ್ ದೇಶದ ಬಡ ಜಿಲ್ಲೆಗಳ ಹಾದಿ ಹಿಡಿದರು. ದೇಶದ ಐದು ರಾಜ್ಯಗಳ ಹತ್ತು ಬಡ ಜಿಲ್ಲೆಗಳನ್ನು ತಿರುಗಿದರು. ಈ ತಿರುಗಾಟದಲ್ಲಿ ಅವರು ಸುಮಾರು ಒಂದು ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿದ್ದರು. ಅದ್ದರಲ್ಲೂ ಐದು ಸಾವಿರ ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸಿದ್ದರು! ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆಯೇ ಸಾಯಿನಾಥ್ ಅವರ ಒಟ್ಟೂ 84 ಗ್ರಾಮೀಣ ವರದಿಗಳನ್ನು 18 ತಿಂಗಳ ಅವಧಿಯಲ್ಲಿ ಪ್ರಕಟಿಸಿತು. ಮುಂದೆ ಆ ಲೇಖನಗಳೆಲ್ಲ ಒಟ್ಟಾಗಿ Everyone Loves A Good Drought ಎಂಬ ಹೆಸರಿನಲ್ಲಿ ಪುಸ್ತಕವಾಗಿ ಬಂತು. ಆ ಪುಸ್ತಕ ಇಂದಿಗೂ ಗ್ರಾಮೀಣ ವರದಿಗಾರಿಕೆಯ ಬಗ್ಗೆ ಆಸಕ್ತಿಯಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಪಾಲಿಗೆ ಭಗವದ್ಗೀತೆಯಿದ್ದಂತೆ.
ಕೆಲ ಕನ್ನಡ ಟಿವಿ ವಾರ್ತಾ ವಾಹಿನಿಗಳನ್ನು ನೋಡಿಕೊಂಡು ಈ ಪತ್ರಕರ್ತರೆಲ್ಲ ಹೀಗೇ ಎಂದು ಮೂದಲಿಸುವ ಎಡಬಿಡಂಗಿಗಳಿಗೆ ಮತ್ತು ಕೆಲ ಕರಿ ಬಣ್ಣದ ಕನ್ನಡ ಟ್ಯಾಬ್ಲಾಯ್ಡ್‌ಗಳನ್ನು ಓದಿಕೊಂಡು ಪತ್ರಿಕೋದ್ಯಮ ಎಂದರೆ ಇಷ್ಟೇ ಎಂದು ಉಡಾಫೆಯಲ್ಲಿ ಮಾತನಾಡುವ ಅತಿಬುದ್ಧಿವಂತರಿಗೆ ಪತ್ರಿಕೋದ್ಯಮದ ಬಗ್ಗೆ ಅಭಿಮಾನ ಇರುವವರು ಹೆಮ್ಮೆಯಿಂದ ಕೇಳಬೇಕಾದ ಪ್ರಶ್ನೆ ಎಂದರೆ: "ಸ್ವಾಮಿ, ನೀವು ಸಾಯಿನಾಥ್‌ರ ವರದಿಗಳನ್ನು ಓದಿದ್ದೀರಾ?"
ಸಾಯಿನಾಥ್‌ರ Everyone Loves A Good Drought ಪುಸ್ತಕ ಬಿಡುಗಡೆಯಾಗಿ ಎರಡು ವರ್ಷಗಳ ಕಾಲ ಟಾಪ್ ಟೆನ್ ಪುಸ್ತಗಳ ಸಾಲಿನಲ್ಲಿ ನಂಬರ್ ೧ ಆಗಿತ್ತು! ಅದಲ್ಲದೆ ನಂತರ ಖ್ಯಾತ ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾದವರ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳ ಸಾಲಿನಲ್ಲಿ ಅದು ಒಂದಾಗಿದೆ! ಅಷ್ಟೊಂದು ದೊಡ್ಡಮಟ್ಟದ ಮಾರಾಟ ಕಂಡ ಆ ಪುಸ್ತಕದ ರಾಯಲ್ಟಿಯ ಅಷ್ಟೂ ಹಣವನ್ನು ಸಾಯಿನಾಥ್ ಯುವ ಗ್ರಾಮೀಣ ವರದಿಗಾರರನ್ನು ಪ್ರೋತ್ಸಾಹಿಸಲು ವಿನಿಯೋಗಿಸಿದರು!! ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ೨೦೦೭ನೆಯ ಇಸವಿಯ ಮ್ಯಾಗ್ಸೆಸೇ ಪ್ರಶಸ್ತಿ ಸಾಯಿನಾಥ್‌ರನ್ನು ಅರಸಿಕೊಂಡು ಬಂತು.
ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ರೈತರ ಆತ್ಮಹತ್ಯೆಗಳ ಬಗ್ಗೆ ಅವರು ಬರೆದ ಲೇಖನ ಮಾಲೆ ಪ್ರಧಾನಿ ಮನಮೋಹನ್ ಸಿಂಗ್ ವಿದರ್ಭಕ್ಕೆ ಧಾವಿಸಿ ಬರುವಂತೆ ಮಾಡಿತು. ಅಲ್ಲದೆ, ವಿದರ್ಭ ಪ್ರಾಂತ್ಯದ ರೈತರ ಕಲ್ಯಾಣಕ್ಕೆಂದೇ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಮಾಡಿತು. ಪತ್ರಕರ್ತನ ಬರಹಗಳಿಂದ ಸಾಮಾಜಿಕ ಬದಲಾವಣೆ ಅಸಾಧ್ಯ ಎಂದು ಆರೋಪಿಸುವವರಿಗೆ ಮತ್ತು ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ತಾಕತ್ತನ್ನು ಪತ್ರಿಕೋದ್ಯಮ ಕಳೆದುಕೊಂಡಿದೆ ಎಂದು ಮಾತಾಡುವವರಿಗೆ ಉತ್ತರದಂತೆ ವಿದರ್ಭ ಘಟನೆ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.
ಇರಲಿ, ಸಾಯಿನಾಥ್‌ರ ಸಾಧನೆಗಳು ಸಾಕಷ್ಟು ದೊಡ್ಡದಿದೆ.ಸಾಯಿನಾಥ್‌ರಂತಹ ಪತ್ರಕರ್ತರು ಯಾವ ಪತ್ರಿಕೆಯಲ್ಲಿದ್ದರೂ ಅವರ ಇರುವಿಕೆಯೇ ಪತ್ರಿಕೋದ್ಯಮಕ್ಕೊಂದು ಹೆಮ್ಮೆ. ಅವರು ಕೇವಲ ತಾವು ಮಾತ್ರ ಬೆಳೆಯುವುದಿಲ್ಲ. ಇಡೀ ಜನ ಸಮೂಹವನ್ನು ಬೆಳೆಸುತ್ತಾರೆ. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿಯೂ ತಾವು ನಂಬಿದ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತಾ ನಮಗೆಲ್ಲ ಹೊಸ ನಾಡಿನ, ರಸದ ಬೀಡಿನ ಭರವಸೆ ನೀಡುವ ರೂಪಕವಾಗಿ ಕಾಣಿಸುತ್ತಾರೆ.
ಕಾಮೆಂಟ್‌ಗಳು