ವಿಷಯಕ್ಕೆ ಹೋಗಿ

ಕುಪ್ಪಳಿಯ ಸಾಂಗತ್ಯ

ಕುಪ್ಪಳಿಯಲ್ಲಿ ಮೊನ್ನೆ ತಾನೆ ಮುಕ್ತಾಯವಾದ ಎರಡು ದಿನಗಳ ಚಿತ್ರೋತ್ಸವದ ಬಗ್ಗೆ ನನ್ನ ನಾಲ್ಕು ಮಾತು ಬರೆಯೋಣ ಎಂದು ಕುಳಿತರೆ ಏನು ಬರೆಯುವುದು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ. ಕಾರಣ; ಸಾಂಗತ್ಯ ತಂಡದವರು ಆಯೋಜಿಸಿದ ಚಿತ್ರೋತ್ಸವದ ಕೊನೆಯಲ್ಲಿ ಪ್ರದರ್ಶಿಸಿದ ಬಾಯ್ ಇನ್ ದಿ ಸ್ಟ್ರೈಪ್ಡ್ ಪಾಯ್ಜಾಮಾ ಚಿತ್ರದ ಗುಂಗಿನಿಂದ ಇನ್ನೂ ಹೊರಬರಲು ಆಗುತ್ತಿಲ್ಲ. ಅಷ್ಟೊಂದು ಮನಮುಟ್ಟುವ ಚಿತ್ರ ಅದು.

ಜೂನ್ ನಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಗ ಅಲ್ಲಿನ ಸಿಬ್ಬಂದಿ ಸಿಬಂತಿ ಪದ್ಮನಾಭ ಅವರು ಕುಪ್ಪಳಿಯಲ್ಲಿ ಸಾಂಗತ್ಯ ಬಳಗದವರು ನಡೆಸುವ ಚಿತ್ರೋತ್ಸವದ ಬಗ್ಗೆ ಹೇಳಿದ್ದರು. ಚಿತ್ರೋತ್ಸವಕ್ಕೆ ಬರಲು ಆಪ್ತ ಆಮಂತ್ರಣವನ್ನೂ ನೀಡಿದ್ದರು. ಆದರೂ ಮನಸ್ಸು ಮಾತ್ರ ಹೋಗಲೋ ಬೇಡವೋ ಎಂದು ಕಾಲಹರಣ ಮಾಡುತ್ತಿತ್ತು.

ನೀನು ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದು, ತೃತೀಯ ಸೆಮಿಸ್ಟರ್ ಓದುತ್ತಿರುವವನಾಗಿದ್ದರೆ ಈ ಕಾರ್ಯಕ್ರಮಕ್ಕೆ ನೀನು ಕಡ್ಡಾಯವಾಗಿ ಬರಲೇಬೇಕು ಎಂದ ಸಿಬಂತಿ ಪದ್ಮನಾಭರ ಮಾತು ಮತ್ತು ಸಲಹೆ-ಚಿತ್ರೋತ್ಸವದಲ್ಲಿ ಬರುವಂತೆ ಮಾಡಿತು. ಆದರೂ ಚಿತ್ರೋತ್ಸವ ಹೇಗಾಗುತ್ತದೆಯೋ ಏನೋ, ಅಲ್ಲಿಗೆ ಯಾರ್ಯಾರು ಬರುತ್ತಾರೋ ಎಂಬ ಪ್ರಶ್ನೆಗಳೊಂದಿಗೆ ಕುಪ್ಪಳಿ ತಲುಪಿದ್ದೆ.

ಆದರೆ ಈಗ ಯಾವ ಪ್ರಶ್ನೆಗಳು, ಯಾವ ಅನುಮಾನಗಳೂ ಉಳಿದಿಲ್ಲ. ಅಲ್ಲಿನ ವಾತಾವರಣ, ಬಳಗದವರ ಆತ್ಮೀಯತೆ, ಪ್ರದರ್ಶಿಸಿದ ಚಿತ್ರಗಳು, ಮತ್ತೊಮ್ಮೆ ಸಿಕ್ಕ ಮತ್ತು ಮತ್ತೆ ಮತ್ತೆ ಸಿಗುವ ಸ್ನೇಹಿತರು ಈ ಕಾರ್ಯಕ್ರಮದ ನೆನಪುಗಳನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ.

ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಹಲವು ಚಿತ್ರಗಳ ಪೈಕಿ ಮೂರು ಚಿತ್ರಗಳು ನನ್ನನ್ನು ತೀವ್ರವಾಗಿ ಕಾಡಿವೆ. ಅವು ಕಾರಂತಜ್ಜನಿಗೊಂದು ಪತ್ರ, ಗೋಸ್ಟ್ ಆಂಡ್ ದಿ ಡಾರ್ಕ್‌ನೆಸ್ ಮತ್ತು ಮೊದಲೇ ಹೇಳಿದಂತೆ ಬಾಯ್ ಇನ್ ದಿ ಸ್ಟ್ರೈಪ್ಡ್ದಿ ಪಾಯ್ಜಾಮಾ.

ಕಾರಂತಜ್ಜನಿಗೊಂದು ಪತ್ರ ಚಿತ್ರ ಇಷ್ಟವಾಗಲು ನನ್ನೂರಾದ ಕರಾವಳಿಯಲ್ಲಿನ ಕಡಲ್ಕೊರೆತದ ಸಮಸ್ಯೆಯನ್ನು ಚಿತ್ರದ ಕಥೆಯನ್ನಾಗಿಸಿಕೊಂಡದ್ದು ಕಾರಣವಾಗಿರಬಹುದು. ಚಿತ್ರದಲ್ಲಿ ಬರುವ ಶಾನುಭೋಗರ ಮಗ ವಯಸ್ಸಿಗೆ ಅತಿ ಎನ್ನುವಂತಹ ಮಾತುಗಳನ್ನು ಆಡುತ್ತಾನಾದರೂ, ಒಟ್ಟಾರೆ ಆ ಚಿತ್ರ ನಮಗೆ ತಲುಪಿಸುವ ಸಂದೇಶ ನಿಜಕ್ಕೂ ಗಂಭೀರವಾದದ್ದು.

ಬಾಯ್ ಇನ್ ದಿ ಸ್ಟ್ರೈಪ್ಡ್ಸ್ಟ್ರಿಪಾಯ್ಜಾಮಾ ಹಿಟ್ಲರ್ ಕಾಲದ ಯಹೂದಿ ಮತ್ತು ಜರ್ಮನ್ ಮಕ್ಕಳಿಬ್ಬರ ನಡುವಿನ ಸ್ನೇಹವನ್ನು ಕಥೆಯನ್ನಾಗಿಸಿಕೊಂಡಿದೆ. ಅದರಲ್ಲಿ ಬರುವ ಯಹೂದಿ ಹುಡುಗನ ಅಭಿನಯವಂತೂ ಮತ್ತೆ ಮತ್ತೆ ಕಾಡುತ್ತದೆ. ಯಹೂದಿಗಳೆಲ್ಲಾ ಕೆಟ್ಟವರು ಅಂತ ಹಿಟ್ಲರ್ ಕಾಲದ ಜರ್ಮ್ನ್ ಪಠ್ಯಪುಸ್ತಗಳಲ್ಲಿ ಬರೆದಿದ್ದನ್ನು ಓದಿ ತಿಳಿದಿಕೊಂಡಿದ್ದ ಜರ್ಮನ್ ಬಾಲಕ ಯಹೂದಿ ಬಾಲಕನನ್ನು ಭೇಟಿಯಾದಾಗ ನಿನ್ನಪ್ಪ ನಿನ್ನನ್ನು ಪ್ರೀತಿಸುತ್ತಾನಾ? ಎಂದು ಪ್ರಶ್ನಿಸುತ್ತಾನೆ. ಕಾರಣ ಜರ್ಮನ್ ಬಾಲಕನ ಪ್ರಕಾರ ಯಹೂದಿಗಳೆಲ್ಲಾ ಕೆಟ್ಟವರು ಮತ್ತು ಅವರು ಕೆಟ್ಟವರಾಗಿರುವ ಕಾರಣ ಅವರು ಯಾರೂ ತಮ್ಮ ಮಕ್ಕಳನ್ನು ಪ್ರೀತಿಸುವುದಿಲ್ಲ.ನಿನ್ನಪ್ಪ ನಿನ್ನನ್ನು ಪ್ರೀತಿಸುವಷ್ಟೇ ನನ್ನಪ್ಪನೂ ನನ್ನನ್ನೂ ಪ್ರೀತಿಸುತ್ತಾನೆ ಎಂಬ ಯಹೂದಿ ಹುಡುಗನ ಮಾತು ಜರ್ಮನ್ ಬಾಲಕನನ್ನು ಒಂದು ಕ್ಷಣ ಮೂಕನನ್ನಾಗಿಸುತ್ತವೆ. ಪ್ರೇಕ್ಷಕರ ಮನಸ್ಸನ್ನೂ ಆರ್ದ್ರಗೊಳಿಸುತ್ತದೆ.

ಚಿತ್ರ ಪ್ರದರ್ಶನದ ನಂತರದ ಚರ್ಚೆಯ ಬಗ್ಗೆ ವಿಭಿನ್ನ ರೀತಿಯ ಅಭಿಪ್ರಾಯಗಳಿವೆ. ಸಾಂಗತ್ಯದ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನದ ನಂತರ ಒಮ್ಮೆ ಎಲ್ಲರೂ ಒಟ್ಟಾಗಿ ಕುಳಿತು ಆ ಚಿತ್ರದ ಬಗ್ಗೆ ಚರ್ಚಿಸುತ್ತಾರೆ. ಆ ಸಂದರ್ಭದಲ್ಲಿ ಕೆಲವು ಹಿರಿಯರ ಉಪಸ್ಥಿತಿ (ಉದಾ: ಡಾ. ಜಿ ಬಿ ಹರೀಶ್, ಪರಮೇಶ್ ಗುರುಸ್ವಾಮಿ) ವಿಮರ್ಶೆ/ಚರ್ಚೆಗೊಂದು ಘನತೆಯನ್ನು ತಂದುಕೊಟ್ಟಿತ್ತು.

ಆದರೆ ಚಿತ್ರಪ್ರದರ್ಶನದ ಕೂಡಲೇ ಆ ಚಿತ್ರದ ಬಗ್ಗೆ ಚರ್ಚೆ ನಡೆಸುವುದು ಚೆನ್ನಾಗಿರದು. ಹಾಗೆ ಮಾಡುವುದರಿಂದ ಪ್ರೇಕ್ಷಕನಿಗೆ ಚಿತ್ರವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗದು. ಪ್ರೇಕ್ಷಕ ಚಿತ್ರವನ್ನು ಸಂಪೂರ್ಣವಾಗಿ ಅನುಭವಿಸಿ, ಯೋಚಿಸಿ ಅನಂತರ ಮಾತಾಡಬೇಕು ಎಂಬ ವಾದವೂ ಇದೆ. ಈ ಸಾಧ್ಯತೆ ಬಗ್ಗೆಯೂ ಸಾಂಗತ್ಯ ತಂಡ ಯೋಚಿಸಲೆಂಬುದು ನನ್ನ ಮನವಿ.

ಉಳಿದಂತೆ ಎಲ್ಲವೂ ಖುಶ್… ಊಟ, ವಸತಿ, ಆತಿಥ್ಯ…. ಇವ್ಯಾವುದರ ಬಗ್ಗೆಯೂ ಎರಡು ಮಾತನಾಡುವಂತಿಲ್ಲ. ಇದೆಲ್ಲಕ್ಕೂ ಕಳಶಪ್ರಾಯವಾಗಿ ಕುಪ್ಪಳಿಯ ರಮ್ಯ ಪರಿಸರ, ಕವಿಶೈಲದ ಮನಮೋಹಕ, ಎದೆಗೂಡಲ್ಲಿ ಸದಾ ಬೆಚ್ಚಗಾಗಿರುವ ನೆನಪುಗಳು.

ಸಾಂಗತ್ಯ ತಂಡ ಮತ್ತೆ ಮತ್ತೆ ಈ ಚಿತ್ರೋತ್ಸವವನ್ನು ಕುಪ್ಪಳಿಯಲ್ಲೇ ನಡೆಸಲಿ. ನಮ್ಮನ್ನು ಪ್ರತಿ ಬಾರಿಯೂ ಮರೆಯದೇ ಆಹ್ವಾನಿಸಲಿ.

ಕಾಮೆಂಟ್‌ಗಳು

Vinoda.R.Joshiಹೇಳಿದ್ದಾರೆ…
ಕುಪ್ಪಳ್ಳಿಯ ಚಲನಚಿತ್ರದ ಬಗ್ಗೆ ಅಭಿಪ್ರಾಯ ತಿಳಿಸುವಾಗ ಕಥೆಯ
ಸಂದೇಶವನ್ನು ತಿಳಿಸಿದ್ದರೆ ಚೆನ್ನಾಗಿತ್ತು ಅನಿಸುತ್ತದೆ..ನಿಮ್ಮ ಜೊತೆಗೆ ನಮ್ಮಂತವರು ಬಾವನೆಗಳನ್ನು ಅನುಭವಿಸಲು ಆಗುತ್ತಿತ್ತೇನೋ....
Unknown ಹೇಳಿದ್ದಾರೆ…
ಒಂದು ಒಳ್ಳೆಯ ಕಾರ್ಯಕ್ರಮ
Vinutha Joshi ಹೇಳಿದ್ದಾರೆ…
Karavali yavaga ninnooraytu

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ