ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ರಾಮ, ಭೀಮ ಮತ್ತು ಸೋಮ ಎಂಬ ಮೂವರು ಚಡ್ಡಿ ದೋಸ್ತಿಗಳು ಇದ್ದರು. ಅವರದ್ದು ಎಂದಿಗೂ ಮುರಿಯಲಾರದಂತಹ ಸ್ನೇಹ. ಅವರಲ್ಲಿ ಪ್ರತಿಯೊಬ್ಬರೂ ಒಂದೊಂದು ವಿಷಯದಲ್ಲಿ ಅಸಾಮಾನ್ಯ ಬುದ್ಧಿವಂತರು.
ಹೀಗೆ ಒಂದು ದಿನ ಆ ಮೂವರು ಸ್ನೇಹಿತರು ಒಟ್ಟಿಗೆ ಅದು ಇದು ಅಂತ ಹರಟೆ ಹೊಡೆಯುತ್ತ ಚಹ ಕುಡಿಯುತ್ತ ಕುಳಿತಿದ್ದರು. ಆಗ ಅವರಲ್ಲಿ ಸೋಮನಿಗೆ ಜಗತ್ತಿನಲ್ಲಿ ಪರಮ ಸತ್ಯ ಯಾವುದು ಮತ್ತು ಜಗತ್ತಿನಲ್ಲಿ ಇರುವ ಸಿದ್ಧಾಂತಗಳಲ್ಲಿ ಸರ್ವಕಾಲಗಳಲ್ಲಿಯೂ ಸತ್ಯವಾಗಿರುವ ಸಿದ್ಧಾಂತ ಯಾವುದು ಎಂಬ ಅನುಮಾನ ಮೂಡಿತು.
ಸರಿ, ತನ್ನ ಅನುಮಾನ ಬಗೆಹರಿಸಿಕೊಳ್ಳಲು ಸೋಮ ತನ್ನ ಮನಸಿನಲ್ಲಿ ಮೂಡಿದ ಪ್ರಶ್ನೆಯನ್ನು ರಾಮ ಮತ್ತು ಭೀಮನ ಮುಂದೆ ಕೇಳುವ ನಿರ್ಧಾರಕ್ಕೆ ಬಂದ.
"ನಿಮ್ಮ ಪ್ರಕಾರ ಜಗತ್ತಿನ ಪರಮ ಸತ್ಯ ಯಾವುದು ಮತ್ತು ಜಗತ್ತಿನಲ್ಲಿ ಇರುವ ಸಿದ್ಧಾಂತಗಳ ಪೈಕಿ ಸಾರ್ವಕಾಲಿಕ ಸತ್ಯವಾದ ಸಿದ್ಧಾಂತ ಯಾವುದು?" ಅಂತ ಸೋಮ ತನ್ನ ಪ್ರಶ್ನೆಯನ್ನು ಉಳಿದಿಬ್ಬರ ಮುಂದೆ ಇಟ್ಟ.
ರಾಮ ಮತ್ತು ಭೀಮನ ಪೈಕಿ ರಾಮನಿಗೆ ಈ ಪ್ರಶ್ನೆಗೆ ಉತ್ತರಿಸುವುದು ಹೇಗೆ ಅನ್ನುವುದು ತಿಳಿಯಲಿಲ್ಲ. ಆದರೆ ಭೀಮ ಒಮ್ಮೆ ನಸುನಕ್ಕ. ಬಳಿಕ ಪ್ರಶ್ನೆ ಕೇಳಿದ ಸೋಮನ ಕಡೆಗೆ ತಿರುಗಿ "ನಿನ್ನ ಊಟ ಆಯಿತಾ?" ಎಂದು ಮರು ಪ್ರಶ್ನಿಸಿದ.
"ಆಯಿತು" ಎಂಬ ಉತ್ತರ ಸೋಮನ ಕಡೆಯಿಂದ ಬಂತು.
"ಹೊಟ್ಟೆ ತುಂಬಾ ಊಟ ಮಾಡಿದೆಯಾ? ಊಟ ತಕ್ಕಮಟ್ಟಿಗೆ ರುಚಿಯಾಗಿತ್ತಾ?" ಎಂದು ಮತ್ತೆ ಭೀಮ ಪ್ರಶ್ನಿಸಿದ.
"ಹೌದು, ರುಚಿಯಾಗಿತ್ತು. ಹೊಟ್ಟೆತುಂಬಾ ಊಟ ಮಾಡಿದೆ." ಎಂದುತ್ತರಿಸಿದ ಸೋಮ.
"ಜಗತ್ತಿನ ಪರಮ ಸತ್ಯ ಯಾವುದು ಮತ್ತು ಸಾರ್ವಕಾಲಿಕೆ ಸಿದ್ಧಾಂತ ಯಾವುದು ಎಂಬ ನಿನ್ನ ಪ್ರಶ್ನೆಗೆ ಇದೇ ನನ್ನ ಉತ್ತರ" ಎಂದ ಭೀಮ ಸೋಮನ ಉತ್ತರಕ್ಕೂ ಕಾಯದೆ ಎತ್ತಲೋ ಹೊರಟುಹೋದ.
***
(ನನ್ನ ಗುರುಗಳೊಬ್ಬರು ಹೇಳಿದ ಕತೆ)
ಕಾಮೆಂಟ್‌ಗಳು