ದೇವರಾಣೆಗೂ ಹೌದು ನಾನು ಆತ್ಮಹತ್ಯೆಯ ಬಗ್ಗೆಯೇ ಯೋಚಿಸುತ್ತಿದ್ದೇನೆ. ಇದು ಭಾರತೀಯ ಕಾನೂನಿನ ಪ್ರಕಾರ ತಪ್ಪು ಅಂತ ಚೆನ್ನಾಗಿ ಗೊತ್ತು. ಆತ್ಮಹತ್ಯೆಗೆ ಯತ್ನಿಸಿ ಒಂದು ವೇಳೆ ಅದರಲ್ಲಿ ಸಫಲನಾಗದಿದ್ದರೆ ಭಾರತೀಯ ದಂಡಸಂಹಿತೆಯ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯ ಮೇಲೆ ಕೇಸು ಹಾಕಬಹುದು, ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾದರೆ ಆ ವ್ಯಕ್ತಿಗೆ ಶಿಕ್ಷೆಯನ್ನೂ ವಿಧಿಸಬಹುದು ಅಂತಲೂ ಗೊತ್ತಿದೆ. ಅದಲ್ಲದೆ, ಇನ್ನೊಬ್ಬ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸುವುದು ಕೂಡ ಕಾನೂನಿನ ಪ್ರಕಾರ ಮತ್ತು ನೈತಿಕ ದೃಷ್ಟಿಯಿಂದಲೂ ಅಪರಾಧ ಎಂಬ ಅರಿವೂ ಇದೆ.
ಆದರೂ 'ಆತ್ಮಹತ್ಯೆ'ಯ ಬಗ್ಗೆಯೇ ಯೋಚಿಸುತ್ತಿದ್ದೇನೆ! ಅನುಮಾನ ಬೇಡ.
ದಿನಂಪ್ರತಿ ಪತ್ರಿಗಳಲ್ಲಿ ಮತ್ತು ವಾರ್ತಾ ವಾಹಿನಿಗಳಲ್ಲಿ ಆತ್ಮಹತ್ಯೆಯ ವರದಿಗಳನ್ನು ನೋಡಿ, ಕೇಳಿ, ಓದಿ ಬೇಸರ ಮೂಡಿದೆ. ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಕೀಟನಾಶಕ ಸೇವಿಸಿಯೋ ಅಥವಾ ನೇಣು ಬಿಗಿದುಕೊಂಡೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮ ನಿರೀಕ್ಷೆಗೆ ತಕ್ಕಂತೆ ಪರೀಕ್ಷೆಯಲ್ಲಿ ಅಂಕ ಬರಲಿಲ್ಲ ಅಂತಲೋ ಅಥವಾ ರ್ಯಾಂಕ್ ತಪ್ಪಿಹೋಯಿತು ಅಂತಲೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಪ್ರೇಮಿಗಳ ಆತ್ಮಹತ್ಯೆಯ ಬಗ್ಗೆ ಬರೆದರೆ ಜಾಗ ಹಾಳು, ಹೇಳಿದರೆ ಬಾಯಿ ಹಾಳು. ಅವಳು ಬೈದಳು, ಅವನು ಕೈಕೊಟ್ಟ ಹೀಗೆ ನಾನಾ ಕಾರಣ ಒಡ್ಡಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಆತ್ಮಹತ್ಯೆ ಪ್ರಕರಣ ನಡೆದಾಗಲೆಲ್ಲ ಅವರ ಪ್ರೀತಿಪಾತ್ರರ ನೋವನ್ನೂ ತಕ್ಕ ಮಟ್ಟಿಗೆ ನೋಡಿದ್ದೇನೆ.
ಆದರೂ ಅದೇ 'ಆತ್ಮಹತ್ಯೆ'ಯ ಬಗ್ಗೆ ಆಲೋಚಿಸುತ್ತಿದ್ದೇನೆ. ತೀವ್ರವಾಗಿ ಅದರ ಬಗ್ಗೆ ಯೋಚಿಸುತ್ತಿದ್ದೇನೆ. ಅದು ಎಷ್ಟರ ಮಟ್ಟಿಗೆ ಸರಿ, ಎಷ್ಟರ ಮಟ್ಟಿಗೆ ತಪ್ಪು... ಊಹೂಂ, ಇದ್ಯಾವುದೂ ನನಗೆ ಮುಖ್ಯವಲ್ಲ.
ಇಂಗ್ಲೀಷಿನ suicide ಎಂಬ ಪದಕ್ಕೆ ಸಂವಾದಿಯಾಗಿ ನಾವು ಕನ್ನಡದಲ್ಲಿ ಆತ್ಮಹತ್ಯೆ ಎಂಬ ಪದವನ್ನು ಬಳಸುತ್ತೇವೆ. ನಿರ್ದಿಷ್ಟವಾಗಿ ಯಾವಾಗ ನಾವು ಆತ್ಮಹತ್ಯೆ ಎಂಬ ಪದವನ್ನು ಬಳಸಲು ಪ್ರಾರಂಭಿಸಿದೆವು ಎಂಬುದು ನನಗೆ ತಿಳಿಯದ ವಿಚಾರ. ಇಂಗ್ಲಿಷಿನಲ್ಲಿ suicide ಎಂಬ ಪದಕ್ಕೆ ಸ್ವ ಇಚ್ಛೆಯಿಂದ ತನ್ನನ್ನು ತಾನೇ ಕೊಂದುಕೊಳ್ಳುವುದು ಎಂಬ ಅರ್ಥವಿದೆ. ಅದಲ್ಲದೆ ಆತ್ಮಘಾತಕ ಕ್ರಿಯೆ ಎಂಬ ಇನ್ನೊಂದು ಅರ್ಥವೂ ಇದೆ ಈ ಪದಕ್ಕೆ. ಕನ್ನಡದಲ್ಲಿಯೂ ನಾವು ಸುಮಾರು ಇದೇ ಅರ್ಥವನ್ನು ಬಿಂಬಿಸಲು ಆತ್ಮಹತ್ಯೆ ಎಂಬ ಪದವನ್ನು ಬಳಸುತ್ತಿದ್ದೇವೆ.
'ಆತ್ಮ' ಎನ್ನುವುದು ಇದೇಯಾ? ಇಲ್ಲವಾ? ಇದ್ದರೆ ಅದು ಹೇಗಿದೆ? ಅದರ ಆಕಾರ ಯಾವುದು? ಅದು ಎಲ್ಲಿದೆ? ಅದು ಗಂಡೋ, ಹೆಣ್ಣೋ? ಅದು ಎಲ್ಲಿಂದ ಬರುತ್ತದೆ? ಎಲ್ಲಿಗೆ ಹೋಗುತ್ತದೆ? ಆತ್ಮ ಅಂದರೆ ಏನು? ಪರಮಾತ್ಮ ಅಂದರೆ ಯಾರು? ಅವೆರಡಕ್ಕಿರುವ ವ್ಯತ್ಯಾಸ ಏನು? ಮನುಷ್ಯ, ಪ್ರಾಣಿ ಮತ್ತು ಪಕ್ಷಿಗಳಲ್ಲಿರುವ ಆತ್ಮನ ಸ್ವರೂಪ ಒಂದೇ ರೀತಿಯದಾ? ಅಥವಾ ಅವೆಲ್ಲಾ ಬೇರೆ ಬೇರೆ ಸ್ವರೂಪ ಹೊಂದಿರುವಂಥದ್ದಾ? ಆತ್ಮಕ್ಕೆ ಭೌತಿಕ ಅಸ್ತಿತ್ವ ಇದೆಯಾ?...
ಇಂಥದೆಲ್ಲಾ ವಿಚಾರಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು ಹಿಂದೂ ಪರಂಪರೆಯ ಋಷಿ, ಮುನಿಗಳು. ದೂರದ ಹಿಮಾಲಯದ ಕೊರೆಯುವ ಚಳಿಯಲ್ಲಿ, ಹಿಮಾಚ್ಛಾದಿತ ಶಿಖರಗಳಲ್ಲಿ, ಜಗತ್ತಿನ ಗಲಿಬಿಲಿಗಳಾವುದೂ ತಟ್ಟದ, ಕಾಮ-ಕಾಂಚಾಣದಂತಹ ಯಾವ ವಾಂಛೆಗಳೂ ತಟ್ಟದ ಹಿಮಕಣಿವೆಗಳಲ್ಲಿ ಕುಳಿತು ಅವರು ಆತ್ಮ, ಪರಮಾತ್ಮನ ಬಗ್ಗೆ ಸಾಕಷ್ಟು ಚಿಂತನೆ ನಡೆಸಿದ್ದಾರೆ. ಆ ಬಗ್ಗೆ ವಿಪುಲ ಸಾಹಿತ್ಯವೂ ಲಭ್ಯವಿದೆ.
ಆತ್ಮ ಎನ್ನುವುದು ಇದೆ. ಅದು ನಿರಾಕಾರ. ಅದು ಗಂಡೂ ಅಲ್ಲ, ಹೆಣ್ಣೂ ಅಲ್ಲ. (ನಪುಂಸಕವೂ ಅಲ್ಲ!) ಅದು ಎಲ್ಲಿಂದಲೂ ಬರುವುದಿಲ್ಲ, ಎಲ್ಲಿಗೂ ಹೋಗುವುದಿಲ್ಲ, ಬದಲಿಗೆ ಒಂದು ದೇಹದಿಂದ ಬಿಡುಗಡೆಯನ್ನು ಪಡೆದು ಇನ್ನೊಂದು ದೇಹಕ್ಕೆ ಪ್ರವೇಶ ಮಾಡುತ್ತದೆ. ಅದು ಸಕಲ ಜೀವಕೋಟಿಗಳಿಗೂ ಚೈತನ್ಯ ಸ್ವರೂಪಿಯಾದದ್ದು. ಮನುಷ್ಯನಿರಲಿ, ಪ್ರಾಣಿಗಳದಿರಲಿ ಅಥವಾ ಪಕ್ಷಿಗಳದೇ ಇರಲಿ ಆತ್ಮನ ಸ್ವರೂಪ ಒಂದೇ. ನಿರಾಕಾರ, ನಿರ್ಗುಣ...
ಹೀಗೆ ಸಾಕಷ್ಟು ವಿವರಗಳು ಹಿಂದೂ ಧರ್ಮಶಾಸ್ತ್ರಗಳಲ್ಲಿ ಆತ್ಮನ ಬಗ್ಗೆ ಬರುತ್ತವೆ. ಅಷ್ಟಕ್ಕೂ, ಹಿಂದೂ ತತ್ವ ಶಾಸ್ತ್ರದ ಪ್ರಮುಖ ಹುಡುಕಾಟವೇ ಆತ್ಮನ ಅಸ್ತಿತ್ವದ ಕುರಿತು. ಆತ್ಮವನ್ನು ಆಧಾರವಾಗಿಟ್ಟುಕೊಂಡೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳು ನಮ್ಮಲ್ಲಿ ಬಂದಿವೆ.
ಒಂದು ಕಥೆಯನ್ನು ಬಹುಷಃ ನಾವೆಲ್ಲರೂ ಕೇಳಿದ್ದೇವೆ. ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ. ಹಿಂದೆ ಔರಂಗಜೇಬನ ಸೈನಿಕರು ಕಾಶಿಯ ವಿಶ್ವನಾಥ ಮಂದಿರವನ್ನು ಒಡೆದ ನಂತರ ಕಾಶಿಯಲ್ಲಿ ಹರಿಯುವ ಗಂಗೆಯ ತಟದಲ್ಲಿ ಅಡ್ಡಾಡುತ್ತಿದ್ದರಂತೆ. ಆಗ ಅವರಿಗೆ ಧ್ಯಾನಮಗ್ನನಾಗಿದ್ದ ಒಬ್ಬ ಸಾಧು ಕಣ್ಣಿಗೆ ಬಿದ್ದನಂತೆ. ಆ ಸಾಧು ಧ್ಯಾನಮಗ್ನನಾಗಿದ್ದ ಕಾರಣ ಅವನಿಗೆ ಔರಂಗಜೇಬನ ಸೈನಿಕರು ಅಲ್ಲಿಗೆ ಬಂದಿದ್ದು ತಿಳಿಯಲಿಲ್ಲವಂತೆ. ಆತ ಧ್ಯಾನಮಗ್ನನಾಗಿಯೇ ಇದ್ದನಂತೆ. ಇದನ್ನು ಸಾಧುವಿನ ಅಹಂಕಾರ ಎಂದು ತಿಳಿದ ಸೈನಿಕರು ಆ ಸಾಧುವಿನ ಧ್ಯಾನವನ್ನು ಭಂಗಗೊಳಿಸಿ, ಅವನನ್ನು ಎಚ್ಚರಗೊಳಿಸಿ, ತಮ್ಮ ಖಡ್ಗದಿಂದ ಸಾಧುವನ್ನು ಕಡಿಯಲು ಮುಂದಾದರಂತೆ. ಅಂಥ ಸಂದರ್ಭದಲ್ಲೂ ಎದೆಗುಂದದ ಆ ಸಾಧು; "ನೀವು ನಿಮ್ಮ ಖಡ್ಗದಿಂದ ನನ್ನ ದೇಹವನ್ನು ಸಾಯಿಸಬಲ್ಲಿರಿ. ಆದರೆ ನನ್ನ ಆತ್ಮವನ್ನು ಕೊಲ್ಲುವ ಶಕ್ತಿ ನಿಮಗಿದೆಯಾ?" ಎಂದು ಕೇಳಿದನಂತೆ. ಆಗ ಸೈನಿಕರಿಗೆ ತಮ್ಮ ತಪ್ಪು ಹಾಗೂ ಅಜ್ಞಾನದ ಅರಿವಾಗಿ ಖಡ್ಗವನ್ನು ಪುನಃ ತಮ್ಮ ಓರೆಗೆ ಸಿಕ್ಕಿಸಿ ಅಲ್ಲಿಂದ ಕಾಲ್ಕಿತ್ತರಂತೆ.
ಅಂದರೆ ಎಲ್ಲ ಭಾರತೀಯ (ಅಥವಾ ಹಿಂದೂ) ತತ್ವಶಾಸ್ತ್ರಜ್ಞರ ಅಭಿಪ್ರಾಯವೂ ಒಂದೇ; ಆತ್ಮಕ್ಕೆ ಸಾವಿಲ್ಲ! ದೇಹ ಸಾಯುತ್ತದೆ. ಮತ್ತು ದೇಹಕ್ಕೆ ಸಾವು ಖಂಡಿತ. ಆದರೆ ಆತ್ಮಕ್ಕೆ ಎಂದಿಗೂ ಸಾವಿಲ್ಲ. ಇದು ಹಿಂದೂ ತತ್ವಶಾಸ್ತ್ರದ ಖಡಾಖಂಡಿತ ತೀರ್ಮಾನ. ಈ ಬಗ್ಗೆ ಚರ್ಚೆಗೆ ಆಸ್ಪದ ಇಲ್ಲದಂತೆ ವಿವರಣೆಗಳನ್ನೂ ಹಿಂದೊ ತತ್ವಶಾಸ್ತ್ರ ಆತ್ಮದ ಬಗ್ಗೆ ನೀಡಿದೆ.
ಈಗ ಮತ್ತೊಮ್ಮೆ 'ಆತ್ಮಹತ್ಯೆ'ಯ ಬಗ್ಗೆ ಮಾತನಾಡೋಣ.
ಯಾರಾದರೂ, ಯಾವುದಾದರೂ ಕಾರಣಕ್ಕೆ ತನ್ನ ಜೀವವನ್ನು ತಾನೇ ಕೊಂದುಕೊಂಡರೆ ನಮ್ಮ ಪತ್ರಕರ್ತರು, ನಮ್ಮ ಲೇಖಕರು 'ಆತ್ಮಹತ್ಯೆ' ಎಂಬ ಪದದಿಂದಲೇ ಬರೆಯುತ್ತಾರೆ. ಆದರೆ ಆತ್ಮ ಎಂಬ ನಿರ್ಗುಣ, ನಿರಾಕಾರ ಅಸ್ತಿತ್ವದ ಬಗ್ಗೆ ನಮಗೆ ತಿಳಿವಳಿಕೆ ಕೊಟ್ಟ ನಮ್ಮ ತತ್ವಶಾಸ್ತ್ರಗಳೇ ಆತ್ಮಕ್ಕೆ ಸಾವಿಲ್ಲ. ಅದು ಅನಾದಿ, ಅನಂತ ಅಂತ ಹೇಳಿರುವಾಗ ಆತ್ಮಹತ್ಯೆ ಎಂಬ ಪದಬಳಕೆ ಎಷ್ಟರ ಮಟ್ಟಿಗೆ ಸರಿ? ಅದು ಆತ್ಮಹತ್ಯೆ ಎಂಬುದರ ಬದಲಾಗಿ 'ಜೀವಹತ್ಯೆ' ಅಥವಾ 'ದೇಹಹತ್ಯೆ' ಎಂದಾಗಬೇಕಲ್ಲವೇ? ಹಾಗಂತ ಆತ್ಮಹತ್ಯೆ ಎಂಬ ಪದಬಳಕೆ ಮಾಡುವವರಿಗೆ ಈ ಸಂಗತಿ ತಿಳಿದಿಲ್ಲ ಅಂತಲ್ಲ. ಆದರೂ ಅದೇನೋ ಕಾರಣದಿಂದ ಆತ್ಮಹತ್ಯೆ ಎಂಬ ಪದಬಳಕೆ ನಮ್ಮಲ್ಲಿ ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ.
ನಾನು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಲು ಇದೇ ಕಾರಣ! ಆತ್ಮಹತ್ಯೆ ಎಂಬ ಪದಬಳಕೆಯ ಬದಲು ದೇಹಹತ್ಯೆ ಅಥವಾ 'ಜೀವಹತ್ಯೆ' ಎಂಬ ಪದವನ್ನು ಬಳಸೋಣ. "ಅಲ್ಲಲ್ಲ, ಅದು ಆತ್ಮಹತ್ಯೆ ಅಂತಲೇ ಬಳಸಬೇಕು. ಆತ್ಮಕ್ಕೆ ಸಾವಿದೆ. ಆತ್ಮವನ್ನು ಹತ್ಯೆಮಾಡಬಹುದು. ದೇಹಹತ್ಯೆ ಅಥವಾ ಜೀವ ಹತ್ಯೆ ಎಂಬ ಪದಬಳಕೆ ತಪ್ಪು" ಎಂದು ವಾದಿಸುವವರು ಖಂಡಿತಾ ಇರಬಹುದು. ಅಂಥವರು ತಮ್ಮ ವಾದವನ್ನು ಸಮರ್ಥವಾಗಿ, ಒಪ್ಪುವಂತೆ ಮುಂದಿಟ್ಟರೆ ಆತ್ಮಹತ್ಯೆಯ ಬಗ್ಗೆ ಒಂದು ಒಳ್ಳೆಯ ಚರ್ಚೆ ನಡೆಯಬಹುದು. ಏನಂತೀರಿ?
ಕಾಮೆಂಟ್‌ಗಳು
ಯಾವಾಗ್ಲಾದ್ರು ಟೈಮ್ ಆದ್ರೆ Fitzgeraldನ RUBAYAT of OMAR KHAYYAMಓದು ಅದರ ಒಂದು ಸ್ಯಾಂಪಲ್ ನಿಮಗೆ ಆಸಕ್ತಿ ಬರಲಿ ಅಂತ
Dreaming when Dawn's Left Hand was in the Sky
I heard a Voice within the Traven cry,
"Awake my Little ones, and fill the Cup
Before Life's Liquor in its Cup be dry"