(ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಡಿಸೆಂಬರ್ ೨೮, ೨೦೦೮ರಂದು ’ಜೈಕನ್ನಡಮ್ಮ’ ವಾರಪತ್ರಿಕೆಯ ದಶಮಾನೋತ್ಸವ ಸಮಾರಂಭ ನಡೆಯಿತು. ಅಂದು ’ಭಯೋತ್ಪಾದನೆ, ಮತಾಂತರ ಮತ್ತು ಕೋಮುವಾದ’ ವಿಷಯದ ಬಗ್ಗೆ ನಾನು ಮಂಡಿಸಿದ ವಿಚಾರಗಳು.)
ಸಭಾಧ್ಯಕ್ಷರೆ, ವೇದಿಕೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳೇ ಹಾಗೂ ನೆರೆದಿರುವ ಎಲ್ಲ ಸಹೃದಯರೆ,
ಇಂದು ನನಗೆ ಪೂರಕ ಮಾಹಿತಿಗಳನ್ನಾಡಲು ಸೂಚಿಸಿರುವ ವಿಷಯ ಭಯೋತ್ಪಾದನೆ - ಕೋಮುವಾದ - ಮತಾಂತರ. ಬಹುಷಃ ಈ ಮೂರು ವಿಚಾರಗಳು ನಮ್ಮ ದೇಶವನ್ನು ತೀವ್ರವಾಗಿ ಕಾಡುತ್ತಿರುವ ಸಮಸ್ಯೆಗಳು ಅನ್ನುವುದನ್ನು ಎಲ್ಲರೂ - ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ - ಒಪ್ಪುತ್ತಾರೆ ಎಂದು ನಂಬಿದ್ದೇನೆ. ಹಾಗಾಗಿ ಈ ವಿಚಾರಗಳ ಬಗ್ಗೆ ಲಘುವಾಗಿ ಮಾತನಾಡುವುದು ಸಾಧ್ಯವಾಗದು. ಆದರೂ ನನಗೆ ನೀಡಿರುವ ಸಮಯದ ಪರಿಮಿತಿಯಲ್ಲಿ ಈ ವಿಚಾರಗಳ ಬಗ್ಗೆ ನನ್ನ ಅಭಿಪ್ರಾಯವನ್ನು ಮಂಡಿಸುವ ಪ್ರಯತ್ನ ಮಾಡುತ್ತೇನೆ.
ಭಯೋತ್ಪಾದನೆ ಎಂಬ ಪದದ ಅರ್ಥ ಮೇಲ್ನೋಟಕ್ಕೆ ಬಹಳ ಸರಳವಾಗಿದೆ. ಭಯದ ಉತ್ಪಾದನೆ, ಯಾರು ಇನ್ನೊಬ್ಬರ ಮನಸ್ಸಿನಲ್ಲಿ ತನ್ನ ಕೃತ್ಯಗಳಿಂದ ಭೀತಿಯನ್ನು ಮೂಡಿಸುತ್ತಾನೋ ಅವನನ್ನು ಭಯೋತ್ಪಾದಕ ಅನ್ನಬಹುದು ಹಾಗೂ ಆ ಪ್ರಕ್ರಿಯೆಯನ್ನು ಭಯೋತ್ಪಾದನೆ ಎಂದು ಕರೆಯಬಹುದು. ಇದರರ್ಥ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಭಾರತೀಯರ ಪಾಲಿಗೆ ಭಯೋತ್ಪಾದಕನಾದರೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಪಾಲಿಗೆ ಭಯೋತ್ಪಾದಕರಾಗಿ ಕಾಣಬಹುದು! ಜಗತ್ತಿನ ಪಾಲಿಗೆ ಪರಮ ಕ್ರೂರಿಯಾಗಿರುವ, ನಂ. ೧ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅಲ್-ಖೈದಾ ಕಾರ್ಯಕರ್ತರ ಪಾಲಿಗೆ ಆರಾಧ್ಯ ದೈವದಂತೆ ಕಾಣಬಹುದು! ಆದರೆ ಸಮಕಾಲೀನ ಜಗತ್ತಿನಲ್ಲಿ ಕಂಡುಬರುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಇಷ್ಟು ಸರಳವಾಗಿ ವಿವರಿಸಲು ಸಾಧ್ಯವಿಲ್ಲ.
ಸಮಕಾಲೀನ ಜಗತ್ತಿನಲ್ಲಿ ಭಯೋತ್ಪಾದನೆಯನ್ನು ಇಸ್ಲಾಮಿನ ಜೊತೆಗೆ ಸಮೀಕರಿಸಲಾಗುತ್ತಿದೆ. ಈ ಸಮೀಕರಣವನ್ನು ಕೇವಲ ಒಬ್ಬ ಭಾರತೀಯ ಬಲಪಂಥೀಯ ಮಾತ್ರ ಮಾಡುತ್ತಿಲ್ಲ. ಬದಲಿಗೆ ಇಡೀ ವಿಶ್ವ ಇವತ್ತು ಭಯೋತ್ಪಾದನೆಯನ್ನು ಇಸ್ಲಾಮಿನ ಜತೆಗೆ ಸಮೀಕರಿಸುತ್ತಿದೆ. ಇವತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳಲ್ಲಿ ಶಂಕಿತರು ಮತ್ತು ತಪ್ಪಿತಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರೇ ಆಗಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ನಾವು ಭಯೋತ್ಪಾದನೆಯನ್ನು ಕೇವಲ ಧಾರ್ಮಿಕ ಚೌಕಟ್ಟಿನಿಂದ ಮಾತ್ರ ನೋಡಬಾರದು. ಬದಲಿಗೆ ಭಯೋತ್ಪಾದನೆಯನ್ನು ಪ್ರತ್ಯೇಕಿಸಿ ನೋಡಬೇಕು.
ನನ್ನ ಪ್ರಕಾರ ನಾಲ್ಕು ಬಗೆಯ ಭಯೋತ್ಪಾದನೆಗಳನ್ನು ನಾವು ಗಮನಿಸಬಹುದು:
೧. ಧಾರ್ಮಿಕ ಭಯೋತ್ಪಾದನೆ:- ಯಾವುದೇ ಧರ್ಮ ಅಥವಾ ಮತದ ಅನುಯಾಯಿ ತನ್ನ ಧರ್ಮ, ಮತ ಅಥವಾ ದೇವರೇ ಶ್ರೇಷ್ಠ, ಇನ್ನೊಬ್ಬರದು ನಿಕೃಷ್ಟ ಎಂದು ನಂಬಲು ಆರಂಭಿಸಿದರೆ ಆತ ಧಾರ್ಮಿಕ ಅಥವಾ ಮತೀಯ ಮೂಲಭೂತವಾದಿಯಾಗುತ್ತಾನೆ. ಮತೀಯ ಮೂಲಭೂತವಾದ ಭಯೋತ್ಪಾದನೆಗೆ ಮೂಲವಾಗುತ್ತದೆ. ಇವತ್ತಿನ ಇಸ್ಲಾಮಿಕ್ ಮೂಲಭೂತವಾದಿಗಳ ಸಮಸ್ಯೆಯೂ ಇಲ್ಲೇ ಇದೆ.
೨. ರಾಜಕೀಯ ಭಯೋತ್ಪಾದನೆ
೩. ಸೈದ್ಧಾಂತಿಕ ಭಯೋತ್ಪಾದನೆ:- ರಾಜಕೀಯ ಮತ್ತು ಸೈದ್ಧಾಂತಿಕ ಭಯೋತ್ಪಾದನೆಗಳು ಒಂದಕ್ಕೊಂದು ಬೆಸೆದುಕೊಂಡಿರುವಂಥವುಗಳು. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದು ಅಂತ ಒಂದು ಸಿದ್ಧಾಂತವಿರುತ್ತದೆ (ಹೇಳಿಕೊಳ್ಳಲಿಕ್ಕೆ ಮಾತ್ರ, ಆಚರಣೆಗಲ್ಲ!). ಆ ಸಿದ್ಧಾಂತವೆಂಬ ಹಣೆಪಟ್ಟಿ ಕೆಲವೊಮ್ಮೆ ಅಧಿಕಾರದ ಮದದಲ್ಲಿ ಹಣೆಯಿಂದ ಜಾರಿ ಕಣ್ಣಿಗೆ ಬರುತ್ತದೆ. ಆಗ ಅವನಿಗೆ ಜಗತ್ತು ಕಾಣದಾಗುತ್ತದೆ. ತನಗೆದುರಾದವನನ್ನು ನಿರ್ದಯವಾಗಿ ಹತ್ತಿಕ್ಕಲು ಅನುವಾಗುವ ಆತ ರಾಜಕೀಯ ಭಯೋತ್ಪಾದಕನಾಗುತ್ತಾನೆ. ಸೈದ್ಧಾಂತಿಕ ಭಯೋತ್ಪಾದನೆಯೂ ಇದೇ ರೀತಿಯದ್ದು.
ತನ್ನ ಸಿದ್ಧಾಂತವನ್ನು ಬೆಂಬಲಿಸುವ ಅಥವಾ ಅನುಮೋದಿಸುವ ಸರಕಾರ ಆಡಳಿತದಲ್ಲಿ ಇದೆ ಎಂದಾಗ - ಕೆಲವು ಸಂದರ್ಭಗಳಲ್ಲಿ - ಆ ಸಿದ್ಧಾಂತದ ಬೆಂಬಲಿಗರ ಹಣೆಪಟ್ಟಿ ಕಣ್ಣಿನ ಪಟ್ಟಿಯಾಗುತ್ತದೆ. ಆಗ ಅವಿವೇಕಗಳು ಸಂಭವಿಸುತ್ತವೆ.
೪. ಆರ್ಥಿಕ ಭಯೋತ್ಪಾದನೆ:- ಇದು ಜಗತ್ತಿನ ಮುಂದುವರೆದ ರಾಷ್ಟ್ರಗಳು ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ನಡೆಸುತ್ತಿರುವ ಆರ್ಥಿಕ ಶೋಷಣೆಗೆ ನಾನಿಟ್ಟಿರುವ ಹೆಸರು. ಇದಕ್ಕೆ ಕಾರಣಗಳನ್ನು ಮತ್ತು ಇದರ ಪರಿಣಾಮಗಳನ್ನು ನನಗೆ ನೀಡಿರುವ ಅವಧಿಯಲ್ಲಿ ಚರ್ಚಿಸಲು ಸಾಧ್ಯವಿಲ್ಲ.
ಎಲ್ಲ ರೀತಿಯ ಭಯೋತ್ಪಾದನೆಗಳಿಗೂ ಮೂಲಭೂತವಾದವೇ ಕಾರಣ. ಹಾಗಾಗಿ ಮೂಲಭೂತವಾದವನ್ನು ಚಿವುಟಿಹಾಕಿದರೆ ಭಯೋತ್ಪಾದನೆಯೆಂಬುದು ತನ್ನಿಂತಾನೆ ಇಲ್ಲವಾಗುತ್ತದೆ.
ಇನ್ನು ಮತಾಂತರದ ವಿಚಾರಕ್ಕೆ ಬರೋಣ.
ಭಾರತದ ಪಾಲಿಗೆ ಮತಾಂತರ ಎಂಬುದು ಹೊಸ ಸಂಗತಿಯಲ್ಲ. ಸೆಮೆಟಿಕ್ ಮತಗಳ ಆಗಮನದ ಜತೆಜತೆಗೇ ಭಾರತದಲ್ಲಿ ಮತಾಂತರ ಆರಂಭವಾಯಿತು. ಆಗ ಕೂಡ - ಈಗಿನಂತೆಯೇ - ಒತ್ತಾಯದ, ಆಮಿಷದ, ಮನಃಪೂರ್ವಕವಾದ ಮತಾಂತರಗಳು ಜಾರಿಯಲ್ಲಿದ್ದವು. ಆದರೆ ಇಂದು ಮತಾಂತರವೆಂಬುದು ರಾಜಕೀಯ ಆಯಾಮವನ್ನು ಪಡೆದುಕೊಂದಿದೆ. ಹಾಗಾಗಿ ಅದು ದೊಡ್ಡ ಪ್ರಮಾಣದ ಗಮನವನ್ನು ಪಡೆದುಕೊಳ್ಳುತ್ತಿದೆ.
ಮತಾಂತರವನ್ನು ವರ್ಗೀಕರಿಸಿ ನೋಡಬೇಕಾಗಿರುವುದು ನಮ್ಮ ಕಾಲದ ಅಗತ್ಯತೆಗಳಲ್ಲಿ ಒಂದು.
೧. ಆಮಿಷದ ಮತಾಂತರ:- ಕ್ರಿಶ್ಚಿಯನ್ ಮಿಶನರಿಗಳು ಆಮಿಷದ ಮತಾಂತರದಲ್ಲಿ ತೊಡಗಿರುವ ಬಗ್ಗೆ ಸಾಕಷ್ಟು ಆರೋಪಗಳಿವೆ. ಅವು ನಿರಾಧಾರವೇನೂ ಅಲ್ಲ.
ಜಗತ್ತಿನ ಪಾಪವನ್ನು ತೊಳೆಯುವುದಕ್ಕಾಗಿ ಏಸುವು ಭೂಮಿಯ ಮೇಲೆ ಜನ್ಮತಾಳಿದನು ಎಂದು ಕ್ರಿಶ್ಚಿಯನ್ ಮಿಶನರಿಗಳು ವ್ಯಾಪಕ ಪ್ರಚಾರ ಮಾಡುತ್ತಾರೆ. ಅಂದರೆ ಏಸುವಿನ ಜನನದಿಂದಾಗಿ ಭೂಮಿಯ ಮೇಲಿನ ಜನರ ಪಾಪವೆಲ್ಲ ತೊಳೆದುಹೋಯಿತು. ಆದರೆ ಮತಾಂತರ ಕೈಗೊಳ್ಳುವಾಗ ನಿಮ್ಮ ಪಾಪಗಳನ್ನು ತೊಳೆದುಕೊಳ್ಳಲು ಏಸುವನ್ನು ನಂಬುವುದೊಂದೇ ದಾರಿ ಎಂದು ಹೇಳುತ್ತಾರೆ. ಅವರ ವಾದದಲ್ಲಿ ಇರುವ ದ್ವಂದ್ವವನ್ನು ಅರ್ಥಮಾಡಿಕೊಂಡರೆ ಕ್ರಿಶ್ಚಿಯನ್ ಮಿಶನರಿಗಳ ಮತಾಂತರದ ವಿಧಾನ ಎಷ್ಟು ಜೊಳ್ಳು ಎನ್ನುವುದು ಅರ್ಥವಾಗುತ್ತದೆ.
೨. ಬಲಾತ್ಕಾರದ ಮತಾಂತರ:- ಹಿಂದೆ ಮುಸ್ಲಿಂ ರಾಜರುಗಳು ಇಂತಹ ರೀತಿಯಲ್ಲಿ ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ ಹೇರಳ ಉದಾಹರಣೆಗಳು ಇತಿಹಾಸದುದ್ದಕ್ಕೂ ನಮಗೆ ಕಂಡುಬರುತ್ತವೆ. ಕ್ರೈಸ್ತ ಮತಪ್ರಚಾರಕರು ಕೂಡ ಗೋವಾ, ಕೊಂಕಣ ತೀರ ಪ್ರದೇಶಗಳಲ್ಲಿ ಬಲಾತ್ಕಾರದ ಮೂಲಕವೇ ಜನರನ್ನು ಮತಾಂತರಿಸಿದರು. ಮತಾಂತರದಲ್ಲಿ ಅತ್ಯಂತ ಹೇಯ ಮತ್ತು ಅಕ್ಷಮ್ಯ ವಿಧಾನ ಇದು.
೩. ಮನಃಪೂರ್ವಕ ಮತಾಂತರ:- ಒಂದು ಮತವನ್ನು ಆಳವಾಗಿ ಅಧ್ಯಯನ ಮಾಡಿ, ಅದರಲ್ಲಿನ ಒಳಿತು ಕೆಡುಕುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸ್ವ-ಇಚ್ಛೆಯಿಂದ ಒಂದು ಮತದಿಂದ ಇನ್ನೊಂದು ಮತಕ್ಕೆ ಪರಿವರ್ತನೆಗೊಳ್ಳುವುದು. ಇದು ವ್ಯಕ್ತಿಸ್ವಾತಂತ್ರ್ಯವನ್ನು ಗೌರವಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿಕೊಳ್ಳಬೇಕಾಗುತ್ತದೆ.
೪. ಪ್ರತಿಭಟನೆಯ ಅಸ್ತ್ರವಾಗಿ ಮತಾಂತರ:- ನೀವು ಅಗಾಗ ಪತ್ರಿಕೆಗಳಲ್ಲಿ ಓದುತ್ತಿರುತ್ತೀರಿ. ಸಾವಿರಾರು ಮಂದಿ ದಲಿತರು ಬೌದ್ಧ ಮತಕ್ಕೆ ಮತಾಂತರಗೊಂಡ ಸುದ್ದಿಗಳು ಆಗಾಗ್ಗೆ ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತವೆ. ಇದು ಹಿಂದೂ ಸಮಾಜಕ್ಕೆ ಶಾಪದಂತೆ ಅಂಟಿಕೊಂಡಿರುವ ಜಾತಿ ಪದ್ಧತಿಯೆಂಬ ಬೌದ್ಧಿಕ ದಾರಿದ್ರ್ಯವನ್ನು ವಿರೋಧಿಸಿ ನಡೆಯುವ ಪ್ರಕ್ರಿಯೆ. ಮತಾಂತರವಾಗುವ ಎಲ್ಲ ದಲಿತರಿಗೂ ಬೌದ್ಧ ಮತದ ಬೋಧನೆಗಳ ಪೂರ್ಣ ಪ್ರಮಾಣದ ಅರಿವಿಲ್ಲದಿರಬಹುದು. ಆದರೆ ಹಿಂದೂ ಧರ್ಮೀಯರು ತೋರಿದ ಅನಾದರವನ್ನು ಪ್ರತಿಭಟಿಸಿ ದಲಿತರು ಅನ್ಯ ಮತಕ್ಕೆ ಮತಾಂತರಗೊಂಡರೆ ಅದನ್ನು ತಡೆಯುವ ನೈತಿಕ ಸ್ಥೈರ್ಯ ಯಾರಿಗಿದೆ?
ಎಲ್ಲ ಧರ್ಮಗಳೂ ಬೋಧಿಸುವುದು ಒಂದೇ ಎಂಬುದನ್ನು ನಾನು ಒಪ್ಪುವುದಿಲ್ಲ. ಎಲ್ಲ ಧರ್ಮಗಳೂ ಕೇವಲ ಶಾಂತಿಯನ್ನೇ ಬೋಧಿಸಿದ್ದರೆ ಜಗತ್ತಿನಲ್ಲಿ ಜಿಹಾದ್ ಇರುತ್ತಿರಲಿಲ್ಲ, ಕ್ರುಸೇಡ್ ಕೂಡ ಸಂಭವಿಸುತ್ತಿರಲಿಲ್ಲ. ಹಾಗೆ ನೋಡಿದರೆ ಪ್ರತಿಯೊಂದು ಧರ್ಮದಲ್ಲಿಯೂ ಅದರದೇ ಆದ ಶಕ್ತಿ-ದೌರ್ಬಲ್ಯಗಳು ಇವೆ.
ಅನ್ಯ ಧರ್ಮಗಳನ್ನು ಒಪ್ಪುವುದು ಬಿಡುವುದು ವ್ಯಕ್ತಿಗತ ವಿಚಾರ. ಆದರೆ ಅನ್ಯಮತಗಳನ್ನು ಗೌರವಿಸುವುದು ಜಾಗತಿಕ ಶಾಂತಿಗೆ ಅನಿವಾರ್ಯ. ಯಾವ ಧರ್ಮ ಶ್ರೇಷ್ಠ, ಯಾವುದು ಅಲ್ಲ ಎಂಬ ಕೊನೆಯಿರದ ಚರ್ಚೆ ನಡೆಸಿ ಸಮಯ ಹಾಳು ಮಾಡುವುದಕ್ಕಿಂತ ಪರಧರ್ಮಗಳೆಡೆ ಗೌರವ ಬೆಳೆಸಿಕೊಳ್ಳುವುದು ಒಳ್ಳೆಯದು. maatanaadalu
ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಳು.
ಕಾಮೆಂಟ್ಗಳು
udaaharaNegaLu iddiddre vishayada manDane innaShTu pariNaamakaari aagtitu annOdu nanna abhipraaya