ಭಾರತದ ರಾಜಕಾರಣಿಗಳೆಂದರೆ ಜಗತ್ತಿನ ಶ್ರೇಷ್ಠ ಜಾದೂಗಾರರಿದ್ದಂತೆ. ಅವರ ಮುಂದೆ ಹೌದಿನಿ ಜಾದೂಗಾರರೂ ನಾಚಬೇಕು ಅಂಥ ಪ್ರತಿಭೆ ನಮ್ಮ ರಾಜಕಾರಣಿಗಳಿಗಿದೆ. ರಾಜಕಾರಣಿಗಳು ನಿನ್ನೆ ಒಂದು ಹೇಳಿಕೆ ಕೊಡುತ್ತಾರೆ, ಇವತ್ತು ಹಾಗೆ ಹೇಳಿಯೇ ಇಲ್ಲ ಎಂದು ರಾಗ ತೆಗೆಯುತ್ತಾರೆ. ಜನರನ್ನು ನಂಬಿಸುತ್ತಾರೆ. ಜನರಿಗೆ ಹಣ-ಹೆಂಡ ಹಂಚುತ್ತಾರೆ. ಆದರೂ ವೇದಿಕೆಗಳಲ್ಲಿ ಮರ್ಯಾದಾ ಪುರುಷೋತ್ತಮರಂತೆ ಕುಳಿತುಕೊಳ್ಳುತ್ತಾರೆ. ಜನ ಕೂಡ ಅವರನ್ನು ನಂಬುತ್ತಾರೆ.
ತಾವೇ ಕೋಮುಗಲಭೆಗಳಿಗೆ ಪ್ರಚೋದನೆ ನೀಡುತ್ತಾರೆ. ನಾಲ್ಕು ಜನ ಪ್ರಾಣ ಕಳೆದುಕೊಂಡಾಗ ಇದೇ ರಾಜಕಾರಣಿಗಳು ಶಾಂತಿಸಭೆ ನಡೆಸುತ್ತಾರೆ. ಸಮಯ ಸಿಕ್ಕಾಗೆಲ್ಲ ಅದೇನೋ ತತ್ವ, ಸಿದ್ಧಾಂತ ಎಂಬ ಅರ್ಥವಾಗದ ವಿಚಾರಗಳ ಬಗ್ಗೆ ಬಹಳ ಪ್ರಬುದ್ಧವಾಗಿ ಮಾತನಾಡುತ್ತಾರೆ. ಇವತ್ತು ಕಾಂಗ್ರೆಸ್ಸಿಗೆ ಬೆಂಬಲ ಕೊಟ್ಟವರು ನಾಳೆ ಬಿಜೆಪಿಯ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಯಾಕೆ ಹೀಗೆ ಅಂತ ಕೇಳಿದರೆ ಭಯೋತ್ಪಾದನೆಯನ್ನು ಹತ್ತಿಕ್ಕಲು ಬಿಜೆಪಿಯ ಜತೆ ಸೇರಿದ್ದೇವೆ ಎಂದು ಹೇಳುತ್ತಾರೆ. ನಾಳೆ ಮತ್ತೆ ಕಾಂಗ್ರೆಸ್ಸಿನ ಜತೆ ಮಂಚವೇರುತ್ತಾರೆ. ಕಾರಣ ಕೇಳಿದರೆ ಕೋಮುವಾದಿ ಶಕ್ತಿಗಳನ್ನು ದೂರವಿಡಲು ಹೀಗೆ ಮಾಡಿದ್ದೇವೆ ಎಂದು ಜನರ ತಲೆಗೆ ಎಣ್ಣೆ ಸವರುತ್ತಾರೆ.
ಇವತ್ತು ಬಿಜೆಪಿಯಲ್ಲಿದ್ದು ನಾಳೆ ಕಾಂಗ್ರೆಸ್ಸಿಗೆ ಸೇರಬೇಕಾಗಿರುವ ರಾಜಕಾರಣಿಗಳು ಬಿಜೆಪಿಯ ಕೋಮುವಾದಿ ಅಜೆಂಡಾದಿಂದಾಗಿ ದೇಶ ದುರ್ಬಲವಾಗುತ್ತಿದೆ. ಹಾಗಾಗಿ ಜಾತ್ಯಾತೀತ ಶಕ್ತಿಗಳನ್ನು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸೇರುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವವರು ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯಿಂದಾಗಿ ದೇಶ ವಿಘಟಿತವಾಗುತ್ತಿದೆ. ಹಾಗಾಗಿ ರಾಷ್ಟ್ರೀಯತೆಯನ್ನು ಬಲಪಡಿಸುವ ಉದ್ದೇಶದಿಂದ ಬಿಜೆಪಿಯನ್ನು ಸೇರುತ್ತಿದ್ದೇವೆ ಎಂದು ಕಥೆ ಹೇಳುತ್ತಾರೆ.
ಇಷ್ಟೆಲ್ಲಾ ಅಪಸವ್ಯಗಳ ನಡುವೆಯೂ ಜನ ಕಳೆದ ಅರವತ್ತು ವರ್ಷಗಳಿಂದ ನಿಯತ್ತಾಗಿ ಮತದಾನ ಮಾಡುತ್ತ ಬಂದಿದ್ದಾರೆ. ಒಮ್ಮೊಮ್ಮೆ ಒಂದೊಂದು ಪಕ್ಷದವರನ್ನು ಗೆಲ್ಲಿಸಿದ್ದಾರೆ. ಜನತಂತ್ರವನ್ನು ಜೀವಂತವಾಗಿಟ್ಟಿದ್ದಾರೆ.
ಈಗ ಮತ್ತೆ ಚುನಾವಣೆಗಳು ಎದುರಾಗಿವೆ. ರಾಜಕಾರಣಿಗಳು ಹೇಳುವ ಕಥೆಗಳು ದಿನನಿತ್ಯ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ.
ಒಂದಷ್ಟು ಮಂದಿ ಹೊಸ ಒಕ್ಕೂಟಗಳನ್ನು ರಚಿಸಿಕೊಳ್ಳುತ್ತಿದ್ದರೆ ಇನ್ನೊಂದಷ್ಟು ಮಂದಿ ಪಕ್ಷಾಂತರದಲ್ಲಿ ನಿರತರಾಗಿದ್ದಾರೆ. ಇದೇ ಸಂದರ್ಭದಲ್ಲಿಯೇ ತೃತೀಯ ರಂಗವೆಂಬ ಅತೃಪ್ತ ಆತ್ಮಗಳ ಸಮಯಸಾಧಕ ಕೂಟವೊಂದು ಜನ್ಮತಾಳಿದೆ. ತೃತೀಯ ರಂಗದಲ್ಲಿ ಈಗ ಗುರುತಿಸಿಕೊಂಡಿರುವ ಎಲ್ಲಾ ಪಕ್ಷಗಳೂ ಹಿಂದೆ ಒಂದಲ್ಲಾ ಒಂದು ಬಾರಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಗದ್ದುಗೆಯ ಸುಖ ಅನುಭವಿಸಿದವರೇ. ಆದರೂ ಈಗ ಅವರೆಲ್ಲರೂ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಬಗ್ಗುಬಡಿಯುವ ಮಾತನಾಡುತ್ತಿದ್ದಾರೆ.
ಬಿಜೆಪಿಯ ಬೆಂಬಲದಿಂದ ಮಗನನ್ನು ಮುಖ್ಯಮಂತ್ರಿಯನ್ನಾಗಿಸಿದ ದೇವೇಗೌಡ, ಬಿಜೆಪಿಯ ಬೆಂಬಲದಿಂದ ಮುಖ್ಯಮಂತ್ರಿಯ ಗಾದಿ ಹಿಡಿದಿದ್ದ ಬೆಹೆನ್‌ಜಿ ಮಾಯಾವತಿ ಮತ್ತು ಚಂದ್ರಬಾಬು ನಾಯ್ಡು, ಬಿಜೆಪಿ ಜೊತೆ ಹಿಂದೆ ಗುರುತಿಸಿಕೊಂಡಿದ್ದ ಎಡಿಎಮ್‌ಕೆ ಈಗ ತೃತೀಯ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಇತ್ತ ನಾಲ್ಕು ವರ್ಷ ಕಾಂಗ್ರೆಸ್ಸಿಗರ ಜೊತೆಗಿದ್ದುಕೊಂಡು ಜವಾಬ್ದಾರಿಯನ್ನು ವಹಿಸಿಕೊಳ್ಳದೇ ಅಧಿಕಾರದ ಮಜ ಅನುಭವಿಸಿದ್ದ ಕಮ್ಯುನಿಸ್ಟರು ಕೂಡ ತೃತೀಯ ರಂಗದಲ್ಲಿ ಪೂಜನೀಯರು.
ಈಗ ಇವರೆಲ್ಲರ ಉದ್ದೇಶ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವನ್ನು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ದೂರವಿಡುವುದು. ಆದರೆ ಒಂದು ವೇಳೆ ತೃತೀಯ ರಂಗವೇ ಅಧಿಕಾರಕ್ಕೆ ಬಂದರೆ ಪ್ರಧಾನಿ ಯಾರಾಗುತ್ತಾರೆ ಎಂಬ ಬಗ್ಗೆ ಇವರಲ್ಲೇ ಒಮ್ಮತವಿಲ್ಲ. ಮಾಯಾವತಿ ತಾನೇ ಸೂಕ್ತ ಎಂದು ಹೇಳಿಕೊಂದರೆ ದೇವೇಗೌಡರಿಗೆ ಒಂಥರಾ ಆತಂಕವಾಗುತ್ತದೆ. ನಾಯ್ಡು ಪ್ರಧಾನಿ ಪಟ್ಟಕ್ಕೆ ಆಸೆಪಟ್ಟರೆ ಕಮ್ಯುನಿಸ್ಟರ ಹೊಟ್ಟೆಯಲ್ಲಿ ಅದೇನೋ ಸಂಕಟ. ಒಟ್ಟಿನಲ್ಲಿ ತೃತೀಯ ರಂಗವೆಂಬ ಗೊಂದಲಗಳ ನಾಟಕ ತಂಡಕ್ಕೆ ನಾಯಕನೇ ಇಲ್ಲ.
ಚುನಾವಣೆಯ ನಂತರ ಪ್ರಧಾನಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ತೃತೀಯ ರಂಗದ ನಾಯಕರು ಹೇಳಿಕೆ ಕೊಡುತ್ತಿದ್ದರೂ ಚುನಾವಣೆಯ ನಂತರ - ತೃತೀಯ ರಂಗಕ್ಕೆ ಬಹುಮತ ಸಿಕ್ಕ ಕಲ್ಪಿತ ಸಂದರ್ಭದಲ್ಲಿ - ದೆಹಲಿಯಲ್ಲಾಗುವುದು ಅಧಿಕಾರಕ್ಕಾಗಿನ ನಾಯಿ ಕಾಳಗವೇ ಹೊರತು ಇನ್ನೇನೂ ಅಲ್ಲ. ಹೀಗಿರುವಾಗ ತೃತೀಯ ರಂಗದಿಂದ ಸ್ಥಿರ ಸರಕಾರವೊಂದನ್ನು ನಿರೀಕ್ಷಿಸುವುದು ಮೂರ್ಖತನವಾದೀತು.
ಸರಿ, ನಮ್ಮ ಮುಂದಿನ ಆಯ್ಕೆ ಯಾವುದು?
ಕಾಂಗ್ರೆಸ್ ಮತ್ತು ಬಿಜೆಪಿ ಅದೆಷ್ಟೇ ಭ್ರಷ್ಟರಿರಲಿ ಅವರಿಬ್ಬರಿಗೂ ಅಧಿಕಾರ ನಡೆಸಿದ ಅನುಭವವಿದೆ. ದೇಶದ ಅಲ್ಪಸಂಖ್ಯಾತರ ಹಿತ ಕಾಯಲು (ಅಥವಾ ಹಾಗಂತ ಹೇಳಿಕೊಳ್ಳಲು) ಕಾಂಗ್ರೆಸ್ಸಿದೆ. ಇತ್ತ ದೇಶದ ಹಿಂದೂಗಳ ಹಿತ ಕಾಯಲು (ಅಥವಾ ಹಾಗಂತ ಹೇಳಿಕೊಳ್ಳಲು) ಬಿಜೆಪಿಯಿದೆ. ಅವೆರಡೂ ಪಕ್ಷಗಳು ಒಂದಾಗಲಿ!
ಆಶ್ಚರ್ಯ ಬೇಡ. ಒಮ್ಮೆ ಸಾವಧಾನವಾಗಿ ಆಲೋಚಿಸಿ. ಕಾಂಗ್ರೆಸ್ ಪಕ್ಷ ಜಾತ್ಯತೀತತೆ, ಅಲ್ಪಸಂಖ್ಯಾತರ ಅಭಿವೃದ್ಧಿ ಎಂಬ ಹೆಸರುಗಳನ್ನು ಹೇಳಿಕೊಂದು ಜನರಿಂದ ಮತ ಗಿಟ್ಟಿಸುತ್ತದೆ. ಬಹುಮತ ಸಿಕ್ಕು ಅಧಿಕಾರ ಗಿಟ್ಟಿಸಿಕೊಂಡ ನಂತರ ಜಾತ್ಯತೀತತೆಯೂ ಇಲ್ಲ, ಅಲ್ಪಸಂಖ್ಯಾತರ ಅಭಿವೃದ್ಧಿಯೂ ಇಲ್ಲ. ನಂತರ ಇರುವುದೇನಿದ್ದರೂ ಸಮಯಸಾಧಕತನ ಮಾತ್ರ. ಅದಲ್ಲದೆ ಶಾಭಾನೋ ಪ್ರಕರಣದಲ್ಲಿ ಸಂವಿಧಾನಕ್ಕೇ ತಿದ್ದುಪಡಿ ತಂದ ಕಾಂಗ್ರೆಸ್ ಪಕ್ಷ ಕೂಡ ಕೋಮುವಾದಿಯೇ ಎಂಬುದರಲ್ಲಿ ಅನುಮಾನವಿಲ್ಲ.
ಇತ್ತ ಬಿಜೆಪಿ ರಾಮ, ದತ್ತ, ಅಯೋಧ್ಯೆ, ರಾಷ್ಟ್ರೀಯತೆ ಎಂಬ ಆಕರ್ಷಕ ಹೆಸರುಗಳನ್ನು ಹೇಳಿಕೊಂಡು ಜನರ ಮತ ಗಿಟ್ಟಿಸುತ್ತದೆ. ಆದರೆ ಅಧಿಕಾರ ಸಿಕ್ಕ ನಂತರ ಅದೂ ಕೂಡ ಮಾಡುವುದು ವೈಯುಕ್ತಿಕ ಹಿತಾಸಕ್ತಿಗಳ ರಕ್ಷಣೆಯನ್ನು ಮಾತ್ರ. ಬಿಜೆಪಿಗಳು ಹೋದಲೆಲ್ಲಾ ಹಿಂದೂಗಳ ಹಿತರಕ್ಷಣೆಯ ಮಾತಾಡುತ್ತಾರೆ. ಕಾಶ್ಮೀರಿ ಹಿಂದೂಗಳಿಗೆ ಇಸ್ಲಾಮಿಕ್ ಉಗ್ರರಿಂದ ಆದ ಅನ್ಯಾಯದ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಬಿಜೆಪಿ ಕೇಂದ್ರದಲ್ಲಿ ಆರು ವರ್ಷ ಅಧಿಕಾರದಲ್ಲಿದ್ದಾಗ ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ಏನು ಮಾಡಿದೆ ಅಂತ ಕೇಳಿ. ಬಿಜೆಪಿಗಳ ಬಾಯಿ ಬೆಬ್ಬೆಬ್ಬೆ ಅನ್ನುತ್ತದೆ.
ಇರಲಿ. ಆ ವಿಷಯ ಬದಿಗಿರಲಿ. ರಾಜಕೀಯ ಪಕ್ಷಗಳಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವುದು ಬೇಡ. ಆದರೆ ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾದರೆ ಬಹುಮತದ ಚಿಂತೆ ಇಲ್ಲವಾಗುತ್ತದೆ. ಕೇಂದ್ರದಲ್ಲಿ ಒಂದು ಸ್ಥಿರ ಸರಕಾರ ಸಿಗಬಹುದು. ಐದು ವರ್ಷಗಳವರೆಗೆ ಚುನಾವಣೆಯ ಚಿಂತೆ ಇರುವುದಿಲ್ಲ. ಅದಲ್ಲದೆ ಪ್ರಣಬ್ ಮುಖರ್ಜಿ, ಮನಮೋಹನ್ ಸಿಂಗ್, ಆಡ್ವಾಣಿ, ಅರುಣ್ ಜೇಟ್ಲಿಯಂತಹ ಸಂಸದೀಯ ಪಟುಗಳನ್ನು ಮತ್ತೊಮ್ಮೆ ಆಡಳಿತದ ಸ್ಥಾನದಲ್ಲಿ ಕುಳಿತುಕೊಳ್ಳುವುದನ್ನು ನೋಡುವ ಅಪರೂಪದ ಅವಕಾಶ ಸಿಗಬಹುದು! ತೃತೀಯ ರಂಗವೆಂಬ ಅವಕಾಶವಾದಿಗಳ ಅಡ್ಡೆಯನ್ನು ಸಂಸತ್ತಿನಲ್ಲಿ ಮೆರೆಯದಂತೆ ಮಾಡಬಹುದು.
ತತ್ವ ಸಿದ್ಧಾಂತದ ಚಿಂತೆ ಬಿಡಿ. ಅದು ಯಾವ ಪಕ್ಷಗಳಿಗೂ ಇಲ್ಲ. ದೇಶದ ಅಬಿವೃದ್ಧಿ ಇದೇ ಗತಿಯಲ್ಲಿ ಸಾಗುತ್ತದೆ. ತೃತೀಯ ರಂಗ ಬರಲಿ ಚತುರ್ಥ ರಂಗ ಬರಲಿ. ದೇಶದ ಕತೆ ಇಷ್ಟೆ. ಆದರೆ ಕೇಸರಿ ಮತ್ತು ಕಾಂಗ್ರೆಸ್ಸು ಒಂದಾದರೆ ಕನಿಷ್ಟ ಪಕ್ಷ ಒಂದು ಸ್ಥಿರ ಸರ್ಕಾರ ಸಿಗಬಹುದು.
ಈ ಬಾರಿ ಮತ ನೀಡುವ ಮುನ್ನ ಒಮ್ಮೆ ಈ ವಿಚಾರದ ಬಗ್ಗೆ ಆಲೋಚಿಸಿ.
ಕಾಮೆಂಟ್‌ಗಳು