ಮೊಟ್ಟಮೊದಲನೆಯದಾಗಿ ಮತಾಂತರವೆಂಬ ಪೀಡೆಯ ಬಗ್ಗೆ ಆರೋಗ್ಯಕರ ಚರ್ಚೆಯೊಂದನ್ನು ಆರಂಭಿಸಿದ್ದಕ್ಕಾಗಿ ವಿಜಯ ಕರ್ನಾಟಕದ ಹೆಮ್ಮೆಯ ಸಂಪಾದಕ ವಿಶ್ವೇಶ್ವರ ಭಟ್ಟರಿಗೆ ಮತ್ತು ಅದರ ವಿ.ಕ ಬಳಗಕ್ಕೆ ಅಭಿನಂದನೆಗಳು.
ಆ ದಿನ ವಿಜಯ ಕರ್ನಾಟಕದ ಮೊದಲ ಪುಟದಲ್ಲಿ ಭೈರಪ್ಪನವರ ಲೇಖನವನ್ನು ನೋಡಿದಾಗಲೇ ಇದು ಸಾಮಾನ್ಯ ವಿಷಯವಲ್ಲ, ಭೈರಪ್ಪನವರು ಎಂದಿನಂತೆ ವರ್ಷಗಳಕಾಲ ಅಧ್ಯಯನ ಮಾಡಿಯೇ ಇಂಥದ್ದೊಂದು ಸಾಹಸ ಮಾಡಿದ್ದಾರೆ ಅನಿಸಿತು. ವಿ.ಕ ಕೂಡ ತಾನು ಈ ವಿಷಯದ ಮೇಲಣ ಚರ್ಚೆಗೆ ವೇದಿಕೆಯೇ ಹೊರತು ವಕ್ತಾರ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಹಾಗಾಗಿ ಈ ವಿಚಾರದ ಬಗ್ಗೆ ಒಂದು ಆರೋಗ್ಯಕರ ಚರ್ಚೆ ನಡೆಯಬಹುದೆಂಬ ನಿರೀಕ್ಷೆ ಖಂಡಿತಾ ಎಲ್ಲರಿಗೂ ಇತ್ತು. ಅದು ಒಂದು ಹಂತದ ಮಟ್ಟಿಗೆ ನಿಜವಾಗಿದೆ ಕೂಡ.
ಆದರೆ ವಿಷಯ ಅದಲ್ಲ. ಭೈರಪ್ಪನವರು ಬರೆದ ಲೇಖನ ಓದಿದರೇ ಗೊತ್ತಾಗುತ್ತದೆ; ಇದು ಒಂದೋ ಎರಡೋ ದಿನದಲ್ಲಿ ಕುಳಿತು ಬರೆದದ್ದಲ್ಲ. ಬದಲಿಗೆ ಭೈರಪ್ಪನವರು ಸಾಕಷ್ಟು ಪರಿಶ್ರಮ ಪಟ್ಟು, ಅಧ್ಯಯನ ಮಾಡಿ ಬರೆದಿದ್ದಾರೆ ಅನ್ನುವುದು ಯಾರಿಗೂ ತಿಳಿಯುತ್ತದೆ. ಅದಲ್ಲದೆ ಅವರು ತಮ್ಮ ಲೇಖನದ ಕೊನೆಯಲ್ಲಿ ಕೊಟ್ಟಿರುವ ಆಕರ ಗ್ರಂಥಗಳ ಪಟ್ಟಿಯಲ್ಲಿರುವುದೆಲ್ಲ ಅರುಣ್ ಶೌರಿ, ನವರತ್ನ. ಎಸ್. ರಾಜಾರಾಮ್, ಸೀತಾರಾಮ್ ಗೋಯೆಲ್‌ರಂಥ ಖ್ಯಾತ ಸಂಶೋಧಕರು ಬರೆದದ್ದೇ. ಅವುಗಳಲ್ಲಿ ಯಾವೊಂದೂ ನಿರ್ಲಕ್ಷಿಸುವಂಥದ್ದಲ್ಲ.
ಅದಿರಲಿ. ಈಗ ನೀವೇ ಹೇಳಿ...
ಭೈರಪ್ಪನವರ ತಾರ್ಕಿಕ ಲೇಖನಕ್ಕೆ ಬಂದಿರುವ ಕೆಲವು ಪ್ರತಿಕ್ರಿಯೆಗಳು ಯಾವ ಮಟ್ಟದವು? ಭೈರಪ್ಪನವರು ಎತ್ತಿರುವ ಪ್ರಶ್ನೆಗಳಿಗೆ ತಾರ್ಕಿಕ ಉತ್ತರ ನೀಡುವುದರ ಬದಲು ಅವರ ಮೇಲೆ ವಯುಕ್ತಿಕ ಸಿಟ್ಟಿದ್ದವರಂತೆ ಕೆಲವು ಖ್ಯಾತನಾಮರು ಬರೆದಿರುವುದು ಎಷ್ಟರ ಮಟ್ಟಿಗೆ ಸರಿ? ಭೈರಪ್ಪನವರ ಪ್ರಶ್ನೆಗಳಿಗೆ ಉತ್ತರಿಸುವಂಥ ಗಹನವಾದ ಅಧ್ಯಯನ ಇವರ ಬಳಿ ಇಲ್ಲವಾದರೆ ಸುಮ್ಮನೆ ಚರ್ಚೆಯನ್ನು ಓದಿಕೊಂಡಿರಲಿ, ಆದರೆ ಭೈರಪ್ಪ ಎಂಬ ಮೇರು ಸಾಹಿತಿಯ ಬಗ್ಗೆ ತೀರಾ ಕೆಳಮಟ್ಟದಲ್ಲಿ ಬರೆದದ್ದು ನಿಜಕ್ಕೊ ಬೇಸರ ಮೂಡಿಸುವಂಥದ್ದು.
ನಮಗೆ ಇತಿಹಾಸವನ್ನು ಬೋಧಿಸುವಲ್ಲಿ ಒಂದು ಮುಖ್ಯ ಉದ್ದೇಶವಿದೆ. ನಮ್ಮ ದೇಶದ, ಜನಾಂಗ ಹಿಂದೆ ಅನುಭವಿಸಿದ ಸವಾಲುಗಳು ನಮಗೆ ಅರಿವಾಗಬೇಕು. ಅವರು ಆ ಸವಾಲುಗಳನ್ನು ಹೇಗೆ ಎದುರಿಸಿದರು ಎನ್ನುವುದು ಅರ್ಥವಾಗಬೇಕು ಮತ್ತು ಮುಂಬರುವ ಸವಾಲುಗಳಿಗೆ ಇಂದಿನ ಪೀಳಿಗೆ ಯಾವ ರೀತಿಯಲ್ಲಿ ಉತ್ತರಿಸಬೇಕು ಎನ್ನುವ ತಿಳಿವಳಿಕೆಯನ್ನು ಪಡೆದುಕೊಳ್ಳಬೇಕು.
ಅದಲ್ಲದೆ, ನಮ್ಮ ಪೂರ್ವಿಕರು ಹಿಂದೆ ಎಸಗಿದ ಅಪರಾಧಗಳು ನಮಗೆ ತಿಳಿಯಬೇಕು. ಆ ಅಪರಾಧಗಳಿಂದಾಗಿ ಸಮಾಜದಲ್ಲಿ ಸಂಭವಿಸಿದ ವಿಪ್ಲವಗಳು, ಪಲ್ಲಟಗಳು ಇಂದಿನ ಪೀಳಿಗೆಗೆ ಅರ್ಥವಾಗಬೇಕು. ಮತ್ತು ಇಂದಿನ ಪೀಳಿಗೆ ಹಿಂದಿನವರು ಮಾಡಿದ ತಪ್ಪುಗಳನ್ನು ಪುನರಾವರ್ತಿಸಬಾರದು ಎಂಬ ಉದ್ದೇಶಕ್ಕಾಗಿ ನಾವು ಇತಿಹಾಸವನ್ನು ಓದುತ್ತೇವೆ.
ಕನ್ನಡದ ಕೆಲವು ಹೆಸರಾಂತ ಕಾದಂಬರಿಕಾರರು ತಮ್ಮ ಕೃತಿಗಳಲ್ಲಿ ಹಿಂದೂ ಧರ್ಮದ (ಅಥವಾ ಸಂಸ್ಕೃತಿಯ) ನ್ಯೂನತೆಗಳನ್ನು, ದೋಷಗಳನ್ನು ಚಿತ್ರಿಸಿದ್ದಾರೆ. ಆ ಮೂಲಕ ಹಿಂದೂ ಸಮಾಜ ಎಲ್ಲಿ ತಪ್ಪಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೆಲವರು ತಮ್ಮ ಕಾದಂಬರಿಗಳಲ್ಲಿ ಬ್ರಾಹ್ಮಣ ಸಮುದಾಯದ ತಪ್ಪು-ಒಪ್ಪುಗಳನ್ನು ವಿಮರ್ಶಿಸಿದ್ದಾರೆ. ಮೇಲ್ವರ್ಗದವರ ಮಾನಸಿಕತೆಯಿಂದಾಗಿ ಸಮಾಜದ ಇನ್ನೊಂದು ವರ್ಗ ಯಾವ ರೀತಿಯ ನೋವನ್ನು ಅನುಭವಿಸಿತು ಎಂಬುದೂ ಕೆಲವರ ಕಾದಂಬರಿಯ, ಬರಹಗಳ ವಸ್ತುಗಳಾಗಿವೆ. ಇವೆಲ್ಲವುಗಳ ಉದ್ದೇಶಗಳೂ ಹಿಂದೂ ಸಮಾಜ ಸರಿಯಾಗಲಿ, ತನ್ನ ದೋಷಗಳನ್ನೆಲ್ಲ ನಿವಾರಿಸಿಕೊಂಡು ಆದರ್ಶ ಸ್ಥಿತಿಗೇರಲಿ ಎಂಬುದೇ ಆಗಿದೆ. ಹಿಂದೂ ಸಮಾಜ ಕೂಡ ಈ ವಿಚಾರಕ್ಕೆ ಸೂಕ್ತವಾಗಿ ಸ್ಪಂದಿಸಿದೆ. ತನ್ನ ದೋಷಗಳನ್ನೆಲ್ಲ ನಿವಾರಿಸಿಕೊಳ್ಳುವತ್ತ ಧೃಡ ಹೆಜ್ಜೆಯನ್ನು ಅದು ಈಗಾಗಲೇ ಹಾಕಿದೆ.
ಆದರೆ ಕನ್ನಡದ ಯಾವುದೇ ಸಾಹಿತಿಯ ಕೃತಿಗಳಲ್ಲಿ ಮುಸ್ಲಿಮ್ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವಂಥ ಬರಹಗಳಿವೆಯೇ? ಹಿಂದೂ ಸಮಾಜದ ಪಾಲಿಗೆ ಪೀಡೆಯಂತಾಗಿರುವ ಅಸ್ಪೃಷ್ಯತೆಯನ್ನು ವಸ್ತುವಾಗಿಟುಕೊಂಡು ಬೇಕಾದಷ್ಟು ಮಂದಿ ಕೃತಿಗಳನ್ನು ರಚಿಸಿದ್ದಾರೆ. ಆದರೆ ಮುಸ್ಲಿಮ್ ಸಮುದಾಯದ ಹುಳುಕುಗಳನ್ನು ವಸ್ತುವಾಗಿಸಿಕೊಂಡು ನಮ್ಮ ಖ್ಯಾತನಾಮ ಕಾದಂಬರಿಕಾರರು ಏಕೆ ಬರೆಯುವುದಿಲ್ಲ? ಜೀವ ಭಯವೇ? ಹಿಂದೆ ಬ್ರಾಹ್ಮಣರು ದಲಿತರನ್ನು ಸಾಮಾಜಿಕವಾಗಿ ತುಳಿದಿದ್ದಾರೆ ಎನ್ನುವವರಿಗೆ ಕ್ರಿಶ್ಚಿಯನ್ ಮಿಶನರಿಗಳು ಗೋವಾದಲ್ಲಿ ನಡೆಸಿದ ಹಿಂಸಾತ್ಮಕ ಮತಾಂತರವನ್ನು ಖಂಡಿಸಲು ಹಿಂಜರಿಕೆಯೇಕೆ? ಪೋಪ್ ಏನಾದರು ಅಂದುಬಿಟ್ಟರೆ ಎನ್ನುವ ಭಯವೇ?
ಭಾರತೀಯ ಸಮಾಜದಲ್ಲಿ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರೂ ಇದ್ದಾರೆ. ಹಾಗಾಗಿ ಭಾರತೀಯ ಸಮಾಜ ಶುದ್ಧವಾಗಬೇಕು, ತನ್ನ ಹುಳುಕುಗಳನ್ನೆಲ್ಲ ಕಳಚಿಕೊಳ್ಳಬೇಕು ಎನ್ನುವ ಉದ್ದೇಶ ಇರುವವರು ಕೇವಲ ಹಿಂದೂ ಸಮಾಜದ ತಪ್ಪುಗಳನ್ನು ಮಾತ್ರ ಹುಡುಕುತ್ತಾ, ಬೈಯುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಅವರು ಮುಸ್ಲಿಮ್ ಸಮುದಾಯದಲ್ಲಿರುವ ಬೇರುಬಿಟ್ಟಿರುವ ಮೂಲಭೂತವಾದವನ್ನೂ ಟೀಕಿಸಬೇಕಾಗುತ್ತದೆ. ಆತ್ಮೋನ್ನತಿಯ ಸಾಧ್ನವಾಗಬೇಕಿದ್ದ ಧರ್ಮವನ್ನು ಮಾರುಕಟ್ಟೆಯ ಸರಕಾಗಿಸಿರುವ ಕ್ರಿಶ್ಚಿಯನ್ ಮತಾಂತರಿಗಳ ಪುಂಡಾಟಿಕೆಯನ್ನೂ ಬೊಟ್ಟು ಮಾಡಿ ತೋರಿಸಬೇಕಾಗುತ್ತದೆ. ಆಗ ಮಾತ್ರ ಭಾರತೀಯ ಸಮಾಜ ತನ್ನ ಹುಳುಕುಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಈ ದೃಷ್ಟಿಯಿಂದ ನೋಡಿದಾಗ ಭೈರಪ್ಪನವರ ’ಆವರಣ’ ಇಷ್ಟವಾಗುತ್ತದೆ. ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿರುವ ಮುಸ್ಲಿಮ್ ಸಮುದಾಯದ ತಪ್ಪು-ಒಪ್ಪುಉಗಳನ್ನು ಅವರ ಪರಾಮರ್ಶಿಸಿದ್ದಾರೆ. ಆ ಸಮುದಾಯದವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಮುಂದೆ ಆ ತಪ್ಪುಗಳು ಸಂಭವಿಸದಂತೆ ಬೌದ್ಧಿಕ ಪರಿಪಕ್ವತೆಯನ್ನು ಬೆಳೆಸಿಕೊಳ್ಳಬೇಕೇ ಹೊರತು "ಭೈರಪ್ಪ ಮುಸ್ಲಿಮ್ ವಿರೋಧಿ" ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ.
’ಆವರಣ’ ಕಾದಂಬರಿಯಲ್ಲಿ ಭೈರಪ್ಪನವರು ಹಿಂದಿನ ಮುಸ್ಲಿಮ್ ದೊರೆಗಳು ಭಾರತದಲ್ಲಿ ನಡೆಸಿದ ಹಿಂಸಾಚಾರವನ್ನು ಚಿತ್ರಿಸಿದ್ದಾರೆ. ಅದನ್ನು ಸಾರಾಸಗಟಾಗಿ ಅಲ್ಲಗಳೆಯಲು ಸಾಧ್ಯವಾಗದ ಕೆಲವರು "ಆವರಣ ಕಾದಂಬರಿಯೇ ಅಲ್ಲ. ಅದೊಂದು ಸಿದ್ಧಾಂತವನ್ನು ಬೋಧಿಸುವ ಪುಸ್ತಕ" ಎಂದು ಸುಮ್ಮನಾಗಿದ್ದರೆ. ಆ ಮೂಲಕ ಭೈರಪ್ಪ ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡದೆ ಪಲಾಯನ ಮಾಡಿದ್ದಾರೆ. ಇದೇ ಮಾನಸಿಕತೆ ವಿ.ಕ ಚರ್ಚೆಯಲ್ಲೂ ಕೆಲವರಲ್ಲಿ ಕಂಡುಬಂದಿದೆ.
"ಭೈರಪ್ಪನವರ ಕಾದಂಬರಿಯಲ್ಲಿ ಪ್ರಾಮಾಣಿಕತೆಯಿಲ್ಲ" ಎನ್ನುವ ಹಗುರವಾದ ಮಾತುಗಳನ್ನಾಡುತ್ತ ಚರ್ಚೆಯಿಂದ ತಪ್ಪಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ.
ಹಿಂದೂ ಒಬ್ಬ ಕ್ರೈಸ್ತನಾಗಿ ಮತಾಂತರಗೊಂಡ ಎಂದಾಕ್ಷಣ ಆತನ ಪೂಜಾ ಪದ್ಧತಿ ಮಾತ್ರ ಬದಲಾಗುವುದಿಲ್ಲ. ಹಾಗೆಯೇ ಹಿಂದೂ ಸಮಾಜ ಇಡಿಯಾಗಿ ಕ್ರೈಸ್ತ ಸಮಾಜವಾಗಿ ಪರಿವರ್ತನೆಗೊಂಡರೆ ಅಲ್ಲಿ ಕಂಡುಬರುವುದು ಕೇವಲ ಪೂಜಾ ಪದ್ಧತಿಯ ಸ್ಥಿತ್ಯಂತರ ಮಾತ್ರವಲ್ಲ. ಹಿಂದೂ ಸಮಾಜ ಅಥವಾ ಸಿಂಧೂ ನದಿಯ ಪೂರ್ವಕ್ಕಿರುವ ಸಮಾಜ ಸಹಸ್ರಾರು ವರ್ಷಗಳಿಂದ ತನ್ನದೇ ಆದ ಸಾಹಿತ್ಯ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ತನ್ನದೇ ಆದ ವೈದ್ಯ ಪರಂಪರೆ (ಆಯುರ್ವೇದ ಮತ್ತು ನಾಟಿ ವೈದ್ಯ ಪದ್ಧತಿ) ಹಿಂದೂ ಸಮಾಜಕ್ಕೆ ಇದೆ. ’ಸೊನ್ನೆ’ಯನ್ನು ಕಂಡುಹಿಡಿದು ವಿಜ್ಞಾನಕ್ಕೆ ಹಿಂದೂ ಸಮಾಜ ನೀಡಿದ ಕೊಡುಗೆ ಸಾರ್ವಕಾಲಿಕೆ ಶ್ರೇಷ್ಠ ಕೊಡುಗೆಗಳಲ್ಲಿ ಒಂದು. ತನ್ನದೇ ನೃತ್ಯ, ಸಂಗೀತ, ಕಲೆ, ಜನಪದ... ಇವೆಲ್ಲ ಹಿಂದೂ ಸಂಸ್ಕೃತಿಯ ಕೊಡುಗೆಗಳೆ. ಇದನ್ನೆಲ್ಲ ಗಮನಿಸಿಯೇ ದೇಶದ ಸರ್ವೋಚ್ಛ ನ್ಯಾಯಾಲಯ ’ಹಿಂದೂ’ ಎನ್ನುವುದು ಜೀವನ ಪದ್ಧತಿ ಎಂದು ತೀರ್ಪಿತ್ತಿದೆ. ಹೀಗೆ ಮಾನವನ ಬದುಕಿನ ಇಂಚಿಂಚನ್ನೂ ಆವರಿಸಿಕೊಂಡಿರುವ ಹಿಂದೂ ಸಂಸ್ಕೃತಿಯ ಕತ್ತು ಹಿಸುಕಿ, ತನ್ಮೂಲಕ ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಇಡೀ ಸಮಾಜವನ್ನೇ ಬುಡಮೇಲು ಮಾಡಲು ಹೊರಟಿರುವ ಮತಾಂತರಿಗಳನ್ನು ಸಮರ್ಥಿಸಲು ಯಾವುದೇ ಕಾರಣಗಳು ಇಲ್ಲ.
ಮತಾಂತರವನ್ನು ಇನ್ನೂ ಸಮರ್ಥಿಸುವವರು ಒಮ್ಮೆ ಗತ ರೋಮನ್ ಸಂಸ್ಕೃತಿಯನ್ನು, ಗ್ರೀಕ್ ಸಂಸ್ಕೃತಿಯನ್ನು ನೆನಪಿಸಿಕೊಳ್ಳಲಿ. ಅಲ್ಲಿನ ಸಂಸ್ಕೃತಿ ಕ್ರಿಶ್ಚಿಯನ್ ಮತಾಂತರಿಗಳ ಕೈಗೆ ಸಿಕ್ಕು ಹೇಗೆ ನಾಶವಾಯಿತು ಎಂಬುದನ್ನೂ ನೆನಪುಮಾಡಿಕೊಳ್ಳಲಿ. ಅದಲ್ಲದೆ, ಮುಕ್ತ ಚಿಂತನೆಯನ್ನು ಪ್ರತಿಪಾದಿಸುವ, ಪ್ರತಿಯೊಬ್ಬರ ಧಾರ್ಮಿಕ ಭಾವನೆಯನ್ನೂ ಗೌರವಿಸುವ, ಬಹುಸಂಸ್ಕೃತಿಯ ತಾಯಿಯಾಗಿರುವ ಹಿಂದೂ ಸಂಸ್ಕೃತಿ ಕೂಡ ’ಗತ ಸಂಸ್ಕೃತಿ’ ಎನ್ನುವ ಪಟ್ಟ ಕಟ್ಟಿಕೊಳ್ಳಬೇಕೆ ಎಂದು ಪ್ರಾಮಾಣಿಕವಾಗಿ ಚಿಂತಿಸಲಿ.
ಕಾಮೆಂಟ್‌ಗಳು
Y do u think conversion is bad.. if its nt forced then tht is the wish of a individual...
Conversion was common in old-age tht time wht the king follows the people in his country also follows the same .. now if someone are willing I dont think somebody can oppose it..