ಉತ್ತರದಲ್ಲಿ ಗುಜರಾತ್‌ನಿಂದ ದಕ್ಷಿಣದಲ್ಲಿ ಕೇರಳ ರಾಜ್ಯದವರೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಮೂಲಕ ಹಾದುಹೋಗುವ ಶಿಖರ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಅಂತ ಹೆಸರು. ಇದನ್ನೇ ಪಶ್ಚಿಮ ಘಟ್ಟಗಳು ಅಂತಲೂ ಕರೆಯುತ್ತಾರೆ. ಇಲ್ಲಿ ದಟ್ಟ ಅರಣ್ಯವಿದೆ, ಹುಲ್ಲುಗಾವಲಿದೆ, ಜಗತ್ತಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವಂಥ ಜೀವವೈವಿಧ್ಯವಿದೆ. ಇದು ದಕ್ಷಿಣ ಭಾರತದ ಅನೇಕ ಜೀವನದಿಗಳ ಉಗಮಸ್ಥಾನವೂ ಹೌದು.
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸುಮಾರು ೨೫-೩೦ ವರ್ಷಗಳ ಕಾಲ ದೇಶ ತೀವ್ರಗತಿಯ ಕೈಗಾರಿಕೀಕರಣಕ್ಕೆ ತನ್ನನ್ನು ತಾನು ತೆರೆದುಕೊಂಡಿತು. ಈಗಲೂ ತೆರೆದುಕೊಳ್ಳುತ್ತಿದೆ, ಅದು ಬೇರೆ ಮಾತು. ಅಂದಿನ ಕೈಗಾರಿಕೀಕರಣದ ಭರಾಟೆ ಹೇಗಿತ್ತೆಂದರೆ ಅರಣ್ಯನಾಶ, ಜೀವವೈವಿಧ್ಯ ನಾಶ, ನದಿಮೂಲಗಳ ಬತ್ತುವಿಕೆಯಂತಹ ಸಮಸ್ಯೆಗಳು ನಮ್ಮನ್ನು ಆಳುವ ಸರಕಾರಗಳಿಗೆ ಅರ್ಥವೇ ಆಗುತ್ತಿರಲಿಲ್ಲ. ಅವರ ಉದ್ದೇಶ ಒಂದೇ, ಭಾರತ ಕೂಡ ಯುರೋಪಿಯನ್ ರಾಷ್ಟ್ರಗಳಂತೆ ಔದ್ಯಮೀಕರಣಗೊಳ್ಳಬೇಕು.
ಇದರ ಪರಿಣಾಮವಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಯಿತು. ಪಶ್ಚಿಮ ಘಟ್ಟಗಳೂ ಇದರಿಂದ ಹೊರತಾಗಲಿಲ್ಲ. ಅಲ್ಲಿನ ಅಪಾರ ಪ್ರಮಾಣದ ಜೀವವೈವಿಧ್ಯಕ್ಕೆ ಕೊಡಲಿಪೆಟ್ಟು ಬಿತ್ತು. ನದಿಮೂಲಗಳು ಬತ್ತತೊಡಗಿದವು. ಜನರು ತೊಂದರೆ ಅನುಭವಿಸತೊಡಗಿದರು. ಕಾಡು ಕಡಿದು, ಪರಿಸರ ನಾಶಮಾಡಿ ದೇಶಕಟ್ಟಲು ಸಾಧ್ಯವಿಲ್ಲ ಎಂಬ ಸತ್ಯ ನಿಧಾನವಾಗಿಯಾದರೂ ಜನರ ಅರಿವಿಗೆ ಬರಲಾರಂಭಿಸಿತು.
ಈ ನಡುವೆ ೧೯೭೫ರ ಸುಮಾರಿಗೆ ಕರ್ನಾಟಕ ಸರಕಾರ ಬೇಡ್ತಿ ಯೋಜನೆಯನ್ನು ಕೈಗೆತ್ತಿಕೊಂಡಿತು. ಈ ಯೋಜನೆ ಕಾರ್ಯಗತಗೊಂಡರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಅನೇಕ ಗ್ರಾಮಗಳು ಮುಳುಗಡೆಯಾಗುತ್ತವೆ. ಸಾವಿರಾರು ಮಂದಿ ತಮ್ಮ ಮೂಲ ನೆಲೆಯನ್ನು ಬಿಡಬೇಕಾಗುತ್ತದೆ. ಇದನ್ನು ವಿರೋಧಿಸಿ ಅಂದಿನ ಅಂಕೋಲಾ ಕ್ಷೇತ್ರದ ಶಾಸಕಿಯಾಗಿದ್ದ ಅನಸೂಯಾ ಶರ್ಮ ಮತ್ತು ಶಿರಸಿಯ ಎಮ್‌ಇಎಸ್ ಕಾಲೇಜಿನ ಪ್ರಾಚಾರ್ಯರಾಗಿದ್ದ ಲಿಂಗೇಶ್ ಶರ್ಮಾ ಮುಂತಾದವರ ನೇತೃತ್ವದಲ್ಲಿ ಬೇಡ್ತಿ ವಿರೋಧಿ ಆಂದೋಲನ ಆರಂಭವಾಯಿತು. ೧೯೭೫ರಿಂದ ೮೦ರವರೆಗೆ ಸಣ್ಣ ಪ್ರಮಾಣದಲ್ಲಿ ಜನರ ಮನಸ್ಸಿನಲ್ಲಿದ್ದ ಬೇಡ್ತಿ ಯೋಜನೆ ವಿರೋಧಿ ಭಾವನೆ ೧೯೮೩ರ ಹೊತ್ತಿಗೆ ಸ್ಪಷ್ಟ ರೂಪ ಪಡೆದುಕೊಂಡಿತು. ೧೯೮೩ರಲ್ಲಿ ಶಿರಸಿಯಲ್ಲಿ ಹಲವಾರು ಪರಿಸರ ಪ್ರೇಮಿಗಳು ಮತ್ತು ತಜ್ಞರನ್ನೊಳಗೊಂಡ ಬೇಡ್ತಿ ಯೋಜನೆ ವಿರೋಧಿ ಹಿನ್ನಲೆಯ ಪ್ರಪ್ರಥಮ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ಬೇಡ್ತಿ ಯೋಜನೆಯನ್ನು ವಿರೋಧಿಸಿ ೯೦ರ ದಶಕದಲ್ಲಿ ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ನೇತೃತ್ವದಲ್ಲಿ ಸೋಂದಾದಿಂದ ಯಲ್ಲಾಪುರ ತಾಲೂಕಿನ ಮಾಗೋಡಿನವರೆಗೆ ಪಾದಯಾತ್ರೆಯೂ ನಡೆಯಿತು. ಭೈರುಂಬೆಯ ಕೆ.ಎಮ್.ಹೆಗಡೆಯಂತಹ ಪ್ರಗತಿಪರ ಕೃಷಿಕರ ಮುಂದಾಳತ್ವದಲ್ಲಿ ಬೇಡ್ತಿ ಯೋಜನೆಯನ್ನು ಪರಿಸರ ನಾಶವಾಗದಂತೆ ಕಾರ್ಯಗತಗೊಳಿಸುವ ಬಗೆ ಹೇಗೆ ಎಂಬ ಬಗ್ಗೆಯೂ ಚಿಂತನೆಗಳು ಪ್ರಾರಂಭವಾದವು.
೧೯೮೫ರಲ್ಲಿ ಪಶ್ಚಿಮ ಘಟ್ಟ ಉಳಿಸಿ ಆಂದೋಲನ ಪ್ರಾರಂಭವಾಯಿತು. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದ ಜನರು ಈ ಆಂದೋಲನದ ಹೆಸರಿನಲ್ಲಿ ಪರಿಸರ ನಾಶದ ವಿರುದ್ಧ ಹೋರಾಡಲು ಒಂದಾದರು. ಜನರಲ್ಲಿ ಪರಿಸರ ನಾಶಕ್ಕೆ ಕಾರಣವಾಗುವ ಸರಕಾರಿ ಯೋಜನೆಗಳ ವಿರುದ್ಧದ ಆಕ್ರೋಶ ಹರಳುಗಟ್ಟಿತು. ಪರಿಣಾಮವಾಗಿ ೧೯೮೭-೮೮ರಲ್ಲಿ ಭಾರತದ ಭೂತಲ ಕನ್ಯಾಕುಮಾರಿಯಿಂದ ಗುಜರಾತಿನವರೆಗೆ 'ಪಶ್ಚಿಮ ಘಟ್ಟ ಉಳಿಸಿ' ಪಾದಯಾತ್ರೆ ನಡೆಯಿತು. ಅಸಂಖ್ಯ ಮಂದಿ ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಭಾಗವಹಿಸಿದರು.
ಇವೆಲ್ಲದರ ನಡುವೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕೋಟದ ಶಿವಾರಾಮ ಕಾರಂತರು ಪರಿಸರಪರ ಹೋರಾಟದ ಪಣತೊಟ್ಟು ಚುನಾವಣಾ ಕಣಕ್ಕೆ ಧುಮುಕಿದರು. ಕೆನರಾ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದರು. ಕಾರಂತರ ಸ್ಪರ್ಧೆ ಇಡೀ ದೇಶದ ಗಮನ ಸೆಳೆಯಿತು. ದೇಶದ ರಾಜಕೀಯ ಪಂಡಿತರು "ಕಾರಂತರ ಜಯ ನಿಶ್ಚಿತ" ಎಂದು ಷರಾ ಬರೆದರು. ಆದರೆ ದುರದೃಷ್ಟವಶಾತ್ ಕಾರಂತರು ಚುನಾವಣೆಯಲ್ಲಿ ಪರಾಭವಗೊಂಡರು.
ಇವೆಲ್ಲ ಘಟನೆಗಳು ಒಟ್ಟಾರೆಯಾಗಿ ದೇಶವನ್ನು ಪ್ರಭಾವಿಸಿದವು. ರಾಜ್ಯ ಸರಕಾರ ಅರಣ್ಯ ಮತ್ತು ಪರಿಸರ ಇಲಾಖೆಯನ್ನು ಹೊಸದಾಗಿ ಆರಂಭಿಸಿತು. ಪರಿಸರ ಸಂರಕ್ಷಣೆಯೇ ಇವುಗಳ ಪರಮ ಧ್ಯೇಯವಾಯಿತು. ವನಮಹೋತ್ಸವ ಕಾರ್ಯಕ್ರಮಗಳು ನಾಡಿನೆಲ್ಲೆಡೆ ಆರಂಭವಾದವು. ಜೀವವೈವಿಧ್ಯ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣಾ ಕಾನೂನು ಜಾರಿಯಾಯಿತು.
ಒಟ್ಟಾರೆಯಾಗಿ ರಾಷ್ಟ್ರದಾದ್ಯಂತ ಪರಿಸರ ಕಾಳಜಿ ಜಾಗೃತಗೊಳ್ಳಲು ಪಶ್ಚಿಮ ಘಟ್ಟ ಉಳಿಸಿ ಆಂದೋಲನ ಕಾರಣವಾಯಿತು.
ಕಾಮೆಂಟ್‌ಗಳು
ಅಭಿನಂದನೆಗಳು.
-nidhi
ಇಂಥ ಚಳುವಳಿಗಳು ನಡೆದಿದ್ದೇ ಎಲ್ಲರಿಗು ಗೊತ್ತಿರಲ್ಲ..ಅದನ್ನು ತಿಳಿಸುವುದರಿಂದಾಗಿ ಚಳುವಳಿಗಾರರ ಪ್ರಯತ್ನಕ್ಕೆ ಇನಿತಾದರೂ ಸಫಲತೆ ದೊರಕಿಸಿದಂತಾದೀತು...
ನನಗಂತೂ ತುಂಬಾ ಹಿಡಿಸಿತು ಈ ಲೇಖನ..
informative piece of writing. thanks...
-venu