ವಿಷಯಕ್ಕೆ ಹೋಗಿ

ವಿವೇಕ ವಾಣಿ ನೆನಪಿರಲಿ...

ಸ್ವಾಮಿ ವಿವೇಕಾನಂದರು ವಿದೇಶದಿಂದ ಭಾರತಕ್ಕೆ ಹಿಂದಿರುಗಿ ಬರುತ್ತಿದ್ದರು. ಸ್ವಾಮೀಜಿಯವರು ಬರುತ್ತಿದ್ದ ಹಡಗಿನಲ್ಲಿಯೇ ಒಬ್ಬ ಕ್ರೈಸ್ತ ಪಾದ್ರಿಯೂ ಇದ್ದ. ಸ್ವಾಮೀಜಿಯವರು ಆ ಪಾದ್ರಿಯ ಬಳಿ ಪ್ರತಿದಿನವೂ ಧರ್ಮ, ಸಂಸ್ಕೃತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಪ್ರತಿ ಬಾರಿಯೂ ಆ ಪಾದ್ರಿ ಸ್ವಾಮೀಜಿಯ ಎದುರು ವಾದದಲ್ಲಿ ಸೋಲುತ್ತಿದ್ದ. ನಂತರ ವಿನಾಕಾರಣ ಭಾರತೀಯ ಸಂಸ್ಕೃತಿಯನ್ನು, ಹಿಂದೂ ಧರ್ಮವನ್ನು ನಿಂದಿಸುತ್ತಿದ್ದ.

ಸ್ವಾಮೀಜಿ ಮೊದಮೊದಲು ಸುಮ್ಮನಿದ್ದರಾದರೂ ನಂತರ ಒಂದು ದಿನ ಆ ಪಾದ್ರಿಯು ಹಡಗಿನ ಅಂಚಿನಲ್ಲಿ ಇದ್ದಾಗ ಅವನ ಸಮೀಪಕ್ಕೆ ಹೋಗಿ, ಅವನನ್ನು ಬಿಗಿಯಾಗಿ ಹಿಡಿದುಕೊಂಡು, "ನೋಡು, ನೀನು ನನ್ನ ಧರ್ಮವನ್ನು, ದೇಶವನ್ನು ಬಯ್ಯುವುದನ್ನು ಬಿಡದೆ ಇದ್ದರೆ ನಿನ್ನನ್ನು ಹೀಗೆಯೇ ಸಮುದ್ರಕ್ಕೆ ನೂಕಿಬಿಡುವೆ!" ಎಂದು ಗದರಿಸಿದರು. ಆಗ ಪಾದ್ರಿಯ ಕೈಕಾಲುಗಳು ಭಯದಿಂದ ಕಂಪಿಸತೊಡಗಿದವು. "ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ಇನ್ನುಮುಂದೆ ನಾನು ಹಾಗೆ ಮಾಡುವುದಿಲ್ಲ" ಎಂದು ಆ ಪಾದ್ರಿಯು ಸ್ವಾಮೀಜಿಯವರಲ್ಲಿ ಬೇಡಿಕೊಂಡನು. ಆತನ ಬೇಡಿಕೆಯನ್ನು ಮನ್ನಿಸಿದ ಸ್ವಾಮೀಜಿ ಅವನನ್ನು ಬಿಟ್ಟರು. ಅನಂತರ ಅವನು ಸ್ವಾಮೀಜಿಗೆ ಗೌರವ ನೀಡಲು ಪ್ರಾರಂಭಿಸಿದನು.

ನಿಜ, ಸ್ವಾಮಿ ವಿವೇಕಾನಂದರು ಸರ್ವಸ್ವವನ್ನೂ ತ್ಯಾಗ ಮಾಡಿದ ಸನ್ಯಾಸಿ. ಅವರು ಒಬ್ಬ ಪಾದ್ರಿಯ ಮೇಲೆ ಈ ಥರ ಕೋಪಗೊಂಡಿದ್ದು ಸರಿಯೇ ಅನ್ನುವ ಅನುಮಾನ ಬರಬಹುದು.

ಒಮ್ಮೆ ಸ್ವಾಮೀಜಿ ಕಲ್ಕತ್ತಾದಲ್ಲಿದ್ದಾಗ ತಮ್ಮ ಶಿಷ್ಯರೊಬ್ಬರ ಬಳಿ:

"ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಧರ್ಮ ಎನ್ನುವುದು ತಾಯಿಯಿದ್ದಂತೆ. ಅಂತಹ ದೇಶ, ಧರ್ಮ, ಸಂಸ್ಕೃತಿಯನ್ನು ಕೆಲ ವಿದೇಶೀಯರು ಅಲ್ಲಗಳೆಯುತ್ತಿದ್ದಾರೆ. ನಿನ್ನ ಧರ್ಮಶ್ರದ್ಧೆಯೆಲ್ಲಿದೆ? ನಿನ್ನ ದೇಶಭಕ್ತಿಯೆಲ್ಲಿದೆ? ಅವರು ಇಂತಹ ದ್ರೋಹವನ್ನು ನಿನ್ನ ಕಣ್ಣೆದುರಿಗೇ ಮಾಡುತ್ತಿದ್ದರೂ ನಿನ್ನ ರಕ್ತ ಕುದಿಯುವುದಿಲ್ಲವೇ?" ಎಂದು ಆ ಶಿಷ್ಯನ ಪ್ರಶ್ನೆಗೆ ತೀಕ್ಷ್ಣ ಉತ್ತರ ನೀಡಿದ್ದರು.

ನಮ್ಮೆಲ್ಲರಿಗೂ ಗೊತ್ತಿರುವ ಭಾರತದ ದೇಶಭಕ್ತ ಸನ್ಯಾಸಿ ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಈ ಪುಟ್ಟ ಘಟನೆಯನ್ನು ನೆನಪಿಸಿಕೊಳ್ಳಲು ಕಾರಣಗಳಿವೆ.
ದೇಶದ ೬೧ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ನಾವಿದ್ದೇವೆ. ಇದೇ ಸಂದರ್ಭದಲ್ಲಿಯೇ ಬೆಂಗಳೂರು ಮತ್ತು ಅಹ್ಮದಾಬಾದಿನಲ್ಲಿ ಮತಾಂಧ ಉಗ್ರರ ಬಾಂಬ್ ದಾಳಿಗೆ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಯಥಾ ಪ್ರಕಾರ ನಮ್ಮ ರಾಜಕಾರಣಿಗಳು ಈ ದಾಳಿಯನ್ನು ಖಂಡಿಸಿದ್ದಾರೆ. "ಉಗ್ರರ ಕೃತ್ಯ ಹೇಡಿತನದ್ದು", "ಭಾರತ ಹಿಂಸೆಯನ್ನು ಸಹಿಸುವುದಿಲ್ಲ", ಎಂಬಂತಹ ಷಂಡತನದ ಹೇಳಿಕೆಗಳು ನಮ್ಮನ್ನಾಳುವವರಿಂದ ಹೊರಬಿದ್ದಿವೆ. ಆದರೆ ಭಯೋತ್ಪಾದನೆಯನ್ನು ಭಾರತದಿಂದ ಕಿತ್ತು ಹಾಕುತ್ತೇವೆ ಎಂಬ ದಿಟ್ಟ ಮಾತು ಮಾತ್ರ ಯಾವ ರಾಜಕಾರಣಿಯಿಂದಲೂ ಬಂದಿಲ್ಲ. ಏಕೆಂದರೆ ಉಗ್ರರ ದಾಳಿಯಲ್ಲಿ ಯಾವುದೇ ರಾಜಕಾರಣಿಯ ಮಗನೋ, ಮಗಳೋ ಸತ್ತಿಲ್ಲ.
ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆದಾಗಲೆಲ್ಲಾ ಓಡೋಡಿ ಬಂದು ಪ್ರತಿಭಟನೆ ಮಾಡುತ್ತಿದ್ದ ನi ಬುದ್ಧಿಜೀವಿಗಳು ಇವತ್ತಿನವರೆಗೂ ಭಯೋತ್ಪಾದನೆಯ ವಿರುದ್ಧ ಗಟ್ಟಿ ಸ್ವರದಲ್ಲಿ ಧಿಕ್ಕಾರ ಕೂಗಿಲ್ಲ. "ಹೀಗೇಕೆ?" ಎಂದು ಪ್ರಶ್ನಿಸಿದರೆ ಇವರಲ್ಲಿ ಯಾರೂ ಉತ್ತರಿಸುವುದಿಲ್ಲ.
ನಮ್ಮ ದೇಶವನ್ನು ಯಾರೋ ಒಬ್ಬ ವಿದೇಶೀಯ ಹೀಗೆಳೆದ ಅಂದ ಮಾತ್ರಕ್ಕೆ ಸರ್ವಸಂಗ ಪರಿತ್ಯಾಗಿ ಸ್ವಾಮಿ ವಿವೇಕಾನಂದರಿಗೇ ಆ ಪರಿಯ ಕೋಪ ಬರುವಾಗ, ದೇಶಭಕ್ತಿಯ ಬಗ್ಗೆ, ಮಹಾತ್ಮ ಗಾಂಧೀಜಿಯ ಬಗ್ಗೆ ಮಾರುದ್ದದ ಭಾಷಣ ಮಾಡುವ ನಮ್ಮ ರಾಜಕಾರಣಿಗಳಿಗೆ ದೇಶದ ನೆಮ್ಮದಿಯ ಮೇಲೇ ಗದಾಪ್ರಹಾರ ಮಾಡುತ್ತಿರುವ ಭಯೋತ್ಪಾದಕರನ್ನು ನೋಡಿ ಏನೂ ಅನ್ನಿಸುವುದೇ ಇಲ್ಲವೇ? ಭಾರತದಲ್ಲಿ ಸ್ವಾತಂತ್ರಾನಂತರ ನಡೆದ ಭಯೋತ್ಪಾದನಾ ದಾಳಿಗಳಲ್ಲಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಮುಗ್ಧರು ಜೀವ ಕಳೆದುಕೊಂಡಿದ್ದಾರೆ. ಅನೇಕ ಕಂದಮ್ಮಗಳು ತಬ್ಬಲಿಯಾಗಿವೆ. ಅನೇಕ ಮಂದಿ ಮಹಿಳೆಯರು ವಿಧವೆಯರಾಗಿದ್ದಾರೆ. ಇನ್ನು ಕೆಲವು ವೃದ್ಧರು ತಮ್ಮ ಕರುಳ ಕುಡಿಯನ್ನೇ ಕಳೆರುಕೊಂಡಿದ್ದಾರೆ. ಅವರೆಲ್ಲರ ನೋವಿಗೆ ಸ್ಪಂದಿಸಬೇಕಿದ್ದ ನಮ್ಮ ಆಳುವ ವರ್ಗಕ್ಕೆ ಭಯೋತ್ಪಾದಕರಿಗೆ ಅವರದೇ ಭಾಷೆಯಲ್ಲಿ ಉತ್ತರ ಕೊಡಬೇಕು ಎಂಬ ಸರಳ ಸತ್ಯ ಇವತ್ತಿಗೂ ಅರ್ಥವಾಗಿಲ್ಲವೇ?
ಭಾರತದಲ್ಲಿ ನಡೆಯುವ ಪ್ರತಿಯೊಂದು ಭಯೋತ್ಪಾದಕ ದಾಳಿಯಲ್ಲೂ ಪಾಕಿಸ್ತಾನದ ಐಎಸ್‌ಐ ಸಂಘಟನೆಯ ಕೈವಾಡವಿರುವುದು ದಾಳಿ ನಡೆದ ಕೆಲವೇ ಸಮಯದಲ್ಲಿ ನಮ್ಮ ಸರಕಾರಗಳಿಗೆ ಗೊತ್ತಾಗುತ್ತದೆ. ಹಾಗಿದ್ದೂ ನಮ್ಮವರಿಗೆ ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಕ್ಕದ ಇನ್ನೊಂದು ಮೂಲಭೂತವಾದಿ ರಾಷ್ಟ್ರವಾಗಿರುವ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸಿಗರು ಭಾರತದೊಳಗೆ ನುಸುಳಿ ಬರುತ್ತಲೇ ಇದ್ದಾರೆ. ಇದರ ಬಗ್ಗೆಯೂ ನಮ್ಮ ಸ್ವಘೋಷಿತ ಸೆಕ್ಯುಲರ್ ಪಕ್ಷಗಳು ತಲೆಕೆಡಿಸಿಕೊಂಡಿಲ್ಲ. ಬಾಂಗ್ಲಾದೇಶೀಯರ ಅಕ್ರಮ ಒಳನುಸುಳುವಿಕೆಯ ಕುರಿತು ಇವರೆಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅಮೆರಿಕವನ್ನು ನೋಡಿ. ಸೆಪ್ಟೆಂಬರ್ ೧೧ರಂದು ತನ್ನ ಮೇಲೆ ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ "ದಾಳಿ ನಡೆಸಿದವರ ಮೇಲೆ ಯುದ್ಧ" ಎಂಬ ಎದೆಗಾರಿಕೆಯ ಮಾತನ್ನಾಡಿತು. ಅಲ್ಲಿನ ರಾಜಕೀಯ ಪಕ್ಷಗಳೂ ಕೂಡ ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ವ್ಯರ್ಥ ಆರೋಪ ಪ್ರತ್ಯಾರೋಪದಲ್ಲಿ ಕಾಲಹರಣ ಮಾಡಲಿಲ್ಲ. ಬದಲಿಗೆ ಭಯೋತ್ಪಾದನೆಯ ವಿರುದ್ಧ ಒಟ್ಟಿಗೆ ನಿಂತವು.
ಆದರೆ ನಮ್ಮ ದೇಶದ ರಾಜಕೀಯ ಪಕ್ಷಗಳು ಯಾವ ಹೇಳಿಕೆ ನೀಡಿದರೆ ಮುಂದಿನ ಚುನಾವಣೆಗಳಲ್ಲಿ ತನಗೆ ಎಷ್ಟು ಮತ ಹೆಚ್ಚಿಗೆ ಬೀಳಬಹುದು ಎಂಬ ಲೆಕ್ಕಾಚಾರ ಹಾಕುತ್ತಿವೆ. ಲಾಲೂ ಪ್ರಸಾದ್, ಮುಲಾಯಮ್ ಸಿಂಗ್‌ರಂತ ಸೋಗಲಾಡಿ ರಾಜಕಾರಣಿಗಳು ಕುಖ್ಯಾತ ಸಂಘಟನೆ, ಸಿಮಿಯ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂಬ ಮಾತುಗಳನ್ನಾಡುತ್ತಿದ್ದಾರೆ.
ಭಯೋತ್ಪಾದಕರ ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ ದಾಳಿಗೆ ಗುಪ್ತಚರ ಇಲಾಖೆ ಮತ್ತು, ಪೋಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ನಮ್ಮ ರಾಜಕಾರಣಿಗಳು ಆರೋಪ ಮಾಡಲು ಪ್ರಾರಂಭ ಮಾಡುತ್ತಾರೆ. ಇರಬಹುದು, ಭಯೋತ್ಪಾದನೆ ಭಾರತದಾದ್ಯಂತ ವಿಸ್ತರಿಸಲು ಕೆಲ ಮಟ್ಟಿಗೆ ಪೋಲೀಸ್ ಮತ್ತು ಗುಪ್ತಚರ ಇಲಾಖೆಯ ವೈಫಲ್ಯವೂ ಕಾರಣವಿರಬಹುದು. ಆದರೆ ಅದಕ್ಕಿಂತಲೂ ಹೆಚ್ಚಾಗಿ, ಭಯೋತ್ಪಾದಕರು ಪಾಕಿಸ್ತಾನದಿಂದ ಭಾರತಕ್ಕೆ ಬಂದು ಇಲ್ಲಿ ತಮ್ಮ ಜಾಲವನ್ನು ವ್ಯವಸ್ಥಿತವಾಗಿ ಹರಡಲು ಭಾರತದ ಅನ್ನ ತಿಂದುಕೊಂಡೂ ಭಾರತೀಯರಾಗಿಲ್ಲದ ಕೆಲವರ ಬೆಂಬಲವೇ ಕಾರಣ ಎಂಬ ಬಗ್ಗೆ ನಮ್ಮ ರಾಜಕಾರಣಿಗಳು ಮಾತನಾಡುವುದಿಲ್ಲ.
"ಭಯೋತ್ಪಾದಕರಿಗೆ ಯಾವುದೇ ಜಾತಿಯೂ ಇಲ್ಲ, ಧರ್ಮವೂ ಇಲ್ಲ" ಎಂದು ಗಟ್ಟಿ ಸ್ವರದಲ್ಲಿ ಹೇಳುವವರಿಗೆ ಇವತ್ತು ಭಯೋತ್ಪಾದನೆ ನಡೆಯುತ್ತಿರುವುದು ಧರ್ಮದ ಹೆಸರಿನಲ್ಲಿಯೇ ಎಂಬುದು ಇನ್ನೂ ಅರ್ಥವಾಗಿಲ್ಲ. ಭಯೋತ್ಪಾದಕರಿಗೆ ಜಾತಿ, ಧರ್ಮ ಇಲ್ಲದಿದ್ದರೆ ಇವತ್ತು ಭಯೋತ್ಪಾದನೆ ಯಾವ ಕಾರಣಕ್ಕಾಗಿ ಧರ್ಮದ ಹೆಸರಿನಲ್ಲಿಯೇ ನಡೆಯುತ್ತಿದೆ ಎಂಬ ಪ್ರಶ್ನೆಗೆ ಇವರು ಯಾವತ್ತೂ ಉತ್ತರಿಸುವುದಿಲ್ಲ.
ಒಂದೆಡೆ ನಾವು (ಭಾರತೀಯರು) ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕೆ ಆಗ್ರಹಿಸುತ್ತಿದ್ದೇವೆ. ಆದರೆ ಅದೇ ಹೊತ್ತಿನಲ್ಲಿ ನಮ್ಮ ನೆರೆಯಲ್ಲೇ ಇರುವ ಪುಂಡು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಹದ್ದುಬಸ್ತಿನಲ್ಲಿಡಲು ಹೆಣಗುತ್ತಿದ್ದೇವೆ. ಭಯೋತ್ಪಾದನೆಯ ಮುಂದೆ ತಲೆಬಾಗಿ, ಮಂಡಿಯೂರುವುದೊಂದು ಬಾಕಿಯಿದೆ. ದೇಶದೆಲ್ಲೆಡೆ ವ್ಯಾಪಕವಾಗುತ್ತಿರುವ ಮತೀಯ ಮೂಲಭೂತವಾದವನ್ನು ಹತ್ತಿಕ್ಕುವಲ್ಲಿಯೂ ವಿಫಲವಾಗುತ್ತಿದ್ದೇವೆ.
ಇದೆಲ್ಲ ಸಮಸ್ಯೆಗಳ ನಡುವೆಯೂ ಮತ್ತೊಮ್ಮೆ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಜ್ಜಾಗುತ್ತಿದ್ದೇವೆ. ಮತ್ತೊಮ್ಮೆ ವಂದೇ ಮಾತರಮ್, ಝಂಡಾ ಊಂಚಾ ರಹೇ ಹಮಾರಾ ಗೀತೆಗಳು ದೇಶದ ಯುವ ಮನಸ್ಸುಗಳನ್ನು ತುಂಬಿಕೊಳ್ಳಲಿವೆ. ಇದೇ ಸಮಯದಲ್ಲಿ ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ದಯನೀಯವಾಗಿ ಸೋಲುತ್ತಿದ್ದೇವೆ. ಭಯೋತ್ಪಾದಕರು ದೇಶವನ್ನೇ ಕತ್ತು ಹಿಸುಕಿ ಸಾಯಿಸುವ ಮಟ್ಟಕ್ಕೆ ಬಂದಿದ್ದರೂ ನಮ್ಮಿಂದ ಭಯೋತ್ಪಾದಕರನ್ನು ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ. ಶಾಂತಿಪ್ರಿಯತೆಯ ನೆಪದಲ್ಲಿ ಹಿಂಸಾಚಾರಿಗಳ ಮುಂದೆ ತಲೆತಗ್ಗಿಸುವ ಪರಿಸ್ಥಿತಿ ನಮಗೊದಗಿದೆ. ಇದೆಲ್ಲದರ ಪರಿಣಾಮವಾಗಿ ಅಂತಾರಾಷ್ಟ್ರೀಯ ಸಮುದಾಯದ ಮುಂದೆ "ಭಾರತೀಯರು ಹೇಡಿಗಳು" ಎಂಬ ಮಾತನ್ನು ನಿಜವಾಗಿಸುವ ಹಂತಕ್ಕೆ ತಲುಪಿದ್ದೇವೆ.
ಇನ್ನೇನು ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯೋತ್ಸವ ಬರಲಿದೆ. ಆ ದಿನವನ್ನು ಸಂಭ್ರಮದಿಂದಲೇ ಆಚರಿಸೋಣ. ಅದರ ಜೊತೆಗೇ ಭಾರತದ ದೇಶಭಕ್ತ ಸನ್ಯಾಸಿ ಸ್ವಾಮಿ ವಿವೇಕಾನಂದರ ಮೇಲಿನ ಮಾತುಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ನಮ್ಮನ್ನಾಳುವವರು ಅನಾಗರಿಕ ಹಿಂಸಾಚಾರಿಗಳ ಮುಂದೆ ಯಾವ ಕಾರಣಕ್ಕೂ ತಲೆ ಬಾಗದಿರಲಿ ಎಂದು ಪ್ರಾರ್ಥಿಸೋಣ. ಅದಕ್ಕಿಂತಲೂ ಹೆಚ್ಚಾಗಿ ಭಯೋತ್ಪಾದನೆಯೆಂಬುದು ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಮೇಲೆ ನಡೆಯುವ ಅನಾಗರಿಕ ಹಲ್ಲೆ. ಇಂಥ ವಿಚಾರದಲ್ಲೂ ನಮ್ಮ ಲಾಲೂ ಯಾದವ್, ಮುಲಾಯಮ್ ಸಿಂಗ್‌ರಂತವರು ತಮ್ಮ ಸ್ವಾರ್ಥ ಸಾಧನೆಯನ್ನು, ಸಣ್ಣ ಬುದ್ಧಿ ತೋರಿಸುವುದನ್ನು ಬಿಡಲಿ ಎಂದು ಆಶಿಸೋಣ.
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
hat's up to u brother.....
Harisha - ಹರೀಶ ಹೇಳಿದ್ದಾರೆ…
ನಿಜ, ಜನ ಅಹಿಂಸೆ ಎಂದು ಕುಳಿತರೆ ಭಯೋತ್ಪಾದನೆ ದಿನೇ ದಿನೇ ಹೆಚ್ಚುತ್ತದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
Unknown ಹೇಳಿದ್ದಾರೆ…
ವಿಜು ಲೇಖನ ಬಹಳ ಹರಿತವಾಗಿದೆ.
Unknown ಹೇಳಿದ್ದಾರೆ…
ರಾಮಾಚಾರ್ ಬಹಳ ಚೆನ್ನಾಗಿದೆ ಎಂದು ಹೇಳಿದ್ದಾರೆ
ಅನಾಮಧೇಯಹೇಳಿದ್ದಾರೆ…
Article really well written man.. Really sad to see our politicians lacking the will to tackle terror..
Ravi Adapathya ಹೇಳಿದ್ದಾರೆ…
kandabate super
ಅನಾಮಧೇಯಹೇಳಿದ್ದಾರೆ…
tumba cennagide.
ಅನಾಮಧೇಯಹೇಳಿದ್ದಾರೆ…
tumba cennagide
ವಿ.ರಾ.ಹೆ. ಹೇಳಿದ್ದಾರೆ…
ರಾಜಕೀಯವೇ ಈ ದೇಶಕ್ಕೆ ಶತ್ರುವಾಗಿರುವುದು ದುರಂತ.
ಇನ್ನಾದರೂ ಸೋಗಲಾಡಿ ರಾಜಕಾರಣಿಗಳಿಗೆ ದೇಶದ ಭದ್ರತೆ ವಿಷಯದಲ್ಲಾದರೂ ಬುದ್ಧಿ ಬರಲಿ ಎಂದು ಆಶಿಸೋಣ. ಜೈ ಹಿಂದ್.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ