ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ಕತೆ.
ಆತನ ಹೆಸರು ಸೋಮಣ್ಣ, ಅವನ ನೆರೆಮನೆಯವನ ಹೆಸರು ರಾಮಣ್ಣ. ಇಬ್ಬರೂ ವಾಸಿಸುತ್ತಿದ್ದದ್ದು ಕಾನೂರು ಎಂಬ ಪುಟ್ಟ ಹಳ್ಳಿಯಲ್ಲಿ. ಇಬ್ಬರೂ ಬ್ರಾಹ್ಮಣರು.
ರಾಮಣ್ಣ ಬಹಳ ಸಾಧು ಸ್ವಭಾವದವ. ಯಾವತ್ತೂ, ಯಾರ ಮೇಲೂ ಹರಿಹಾಯ್ದವನಲ್ಲ. ದಿನದ ಮೂರೂ ಹೊತ್ತು ಶ್ರದ್ಧೆಯಿಂದ ಸಂಧ್ಯಾವಂದನೆ ಮಾಡುತ್ತಿದ್ದ. ಮೊಸ, ಕಪಟ, ಜೂಜು... ಇದ್ಯಾವುದೂ ರಾಮಣ್ಣನಿಗೆ ಗೊತ್ತಿಲ್ಲ. ಹೆಂಡ, ಮಾಂಸ, ಪರಸ್ತ್ರೀ ಸಹವಾಸಗಳಿಂದ ರಾಮಣ್ಣ ಮೈಲು ದೂರ. ಒಟ್ಟಿನಲ್ಲಿ ಒಬ್ಬ ಸಂಭಾವಿತ, ಸುಭಗ ನಾಗರಿಕ.
ರಾಮಣ್ಣನ ವ್ಯಕ್ತಿತ್ವಕ್ಕೆ ಸ್ವಲ್ಪ ಮಟ್ಟಿಗೆ ವಿರುದ್ಧವಾದ ವ್ಯಕ್ತಿತ್ವ ಸೋಮಣ್ಣನದು. ಸೋಮಣ್ಣನಿಗೆ ಸುಳ್ಳು ಹೇಳಲು, ಸೋಗು ಹಾಕಲು, ಇನ್ನೊಬ್ಬರ ಮೇಲೆ ದ್ವೇಷ ಕಾರಲು ಬರುತ್ತಿರಲಿಲ್ಲವಾದರೂ ಸ್ವಲ್ಪ ಮುಂಗೋಪ. ಅದಲ್ಲದೆ ಸೋಮಣ್ಣನಿಗೆ ಹೆಂಡ, ಮಾಂಸಗಳ ಸಹವಾಸ ಸ್ವಲ್ಪ ಜೋರಾಗಿಯೇ ಇತ್ತು. ಇಸ್ಪೀಟು ಕೂಡಾ ಜನ್ಮಜಾತ ಕಲೆಯೆಂಬಂತೆ ಬಂದಿತ್ತು. ಅದೇ ಕಾರಣದಿಂದ ಊರ ಬ್ರಾಹ್ಮಣರ ದೃಷ್ಟಿಯಲ್ಲಿ ಸೋಮಣ್ಣ ಒಬ್ಬ ಫಟಿಂಗನಾಗಿದ್ದ. ಆತ ಊರ ಬ್ರಾಹ್ಮಣರ ದೃಷ್ಟಿಯಲ್ಲಿ ಸಂಭಾವಿತನೂ ಅಲ್ಲ, ಸುಭಗನೂ ಅಲ್ಲ.
ಸಾಧು ಸ್ವಭಾವದ ರಾಮಣ್ಣ ತನ್ನ ಜೀವಿತಾವಧಿಯ ಕಟ್ಟಕಡೆಯ ದಿನದವರೆಗೂ ಸಾಧು ಪ್ರಾಣಿಯಾಗಿಯೇ ಉಳಿದ. ಅವನಿಂದ ಯಾರಿಗೂ ಹಾನಿಯಾಗಲಿಲ್ಲ, ಯಾರಿಗೂ ಉಪಕಾರವೂ ಆಗಲಿಲ್ಲ. ಆದರೆ ರಾಜಾರೋಷವಾಗಿ ಹೆಂಡ, ಮಾಂಸಗಳ ಸಹವಾಸ ಮಾಡಿದ ಸೋಮಣ್ಣ ತನ್ನ ಜೀವಿತಾವಧಿಯ ಕೊನೆಯ ದಿನಗಳಲ್ಲಿ ಊರಿಗೆ ಅಂತ ಭಗೀರತ ಕೆಲಸಗಳನ್ನು ಮಾಡಿದ. ತನ್ನ ಅಷ್ಟಿಷ್ಟು ರಾಜಕೀಯ ಪ್ರಭಾವ ಬಳಸಿ ಊರಿಗೊಂದು ಶಾಲೆಯನ್ನು ಮತ್ತು ಪ್ರಥಮದರ್ಜೆ ಕಾಲೇಜೊಂದನ್ನು ಸರಕಾರದಿಂದ ಮಂಜೂರು ಮಾಡಿಸಿದ. ಊರಿನವರ ಆರ್ಥಿಕ ಅಭಿವೃದ್ಧಿಗಾಗಿ ಊರಿನಲ್ಲೊಂದು ರಾಷ್ಟ್ರೀಕೃತ ಬ್ಯಾಂಕ್‌ನ ಶಾಖೆ ಆರಂಭವಾಗುವಂತೆ ಮಾಡಿದ. ಇಷ್ಟೆಲ್ಲ ಒಳ್ಳೆಯ ಕೆಲಸಗಳನ್ನು ಮಾಡಿದ ಸೋಮಣ್ಣ ತನ್ನ ಕಟ್ಟಕಡೆಯ ದಿನದವರೆಗೂ ಕುಡಿತ, ಮಾಂಸ ಸೇವನೆಯನ್ನು ಬಿಡಲಿಲ್ಲ. ಯಾರಾದರೂ ಆ ಬಗ್ಗೆ ಕೇಳಿದರೆ "ನನ್ನ ಜೀವನ, ನನ್ನಿಷ್ಟ. ನಿಮಗೇನು?" ಎಂಬ ಧಾಟಿಯಲ್ಲಿ ಉತ್ತರ ನೀಡುತ್ತಿದ್ದ.
ಇವರಿಬ್ಬರೂ ಸುಮಾರು ಒಂದೇ ಅವಧಿಯಲ್ಲಿ ತೀರಿಕೊಂಡರು.
ಈಗ ನೀವೇ ಹೇಳಿ, ಇವರಿಬ್ಬರಲ್ಲಿ ಯಾರು ಒಳ್ಳೆಯವರು, ಯಾರು ಉಪಕಾರಿಗಳು? ದಿನವಿಡೀ ದೇವರ ಧ್ಯಾನ, ಜಪ, ತಪ ಎಂಬ ಆಧ್ಯಾತ್ಮಿಕ ವಿಚಾರಗಳಲ್ಲಿ ಮುಳುಗಿರುತ್ತಿದ್ದರೂ ಊರಿಗೆ ಅಂತ ಏನೂ ಮಾಡದ ರಾಮಣ್ಣ ಒಳ್ಳೆಯವನೋ ಅಥವಾ ದಿನವಿಡೀ ಮದಿರೆ-ಮಾಂಸ ಅಂತ ಓಡಾಡಿಕೊಂಡೂ ತನ್ನ ಜೀವಿತದ ಕೊನೆಯ ಅವಧಿಯಲ್ಲಿ ಊರಿಗಾಗಿ ಕೈಲಾದ ಕೆಲಸ ಮಾಡಿದ ಸೋಮಣ್ಣ ಒಳ್ಳೆಯವನೋ?
ಕಾಮೆಂಟ್‌ಗಳು