ನೀವೇ ಹೇಳಿ...
ಯಾವ ರಾಜಕಾರಣಿ ಇವತ್ತು ಏನು ಹೇಳಿದ, ನಿನ್ನೆ ನಡೆದ ಪ್ರಾಕೃತಿಕ ವಿಕೋಪದಲ್ಲಿ ಎಷ್ಟು ಜನ ಮಡಿದರು, ಎಲ್ಲಿ ಯಾರು ಯಾರನ್ನ ಕೊಲೆ ಮಾಡಿದರು...? ಇಂಥ ಯಾರು, ಯಾವಾಗ, ಎಲ್ಲಿ, ಮತ್ತು ಹೇಗೆ ಎಂಬ ವಿಚಾರಗಳ ಸುತ್ತ ಗಿರಕಿ ಹೊಡೆಯುವುದೇ ಪತ್ರಿಕೋದ್ಯಮವಾ? ಕೇವಲ ಅಂಥ ವಿಚಾರಗಳನ್ನು ಬರೆಯುವವರೇ ಪತ್ರಕರ್ತರಾ? ಹೌದು ಎಂದಾದರೆ ಪತ್ರಿಕೋದ್ಯಮ ವೃತ್ತಿಗೆ ಬರಲು ಮೂರು ವರ್ಷದ ಡಿಗ್ರಿ, ಮತ್ತೆರಡು ವರ್ಷಗಳ ಮಾಸ್ಟರ್ ಡಿಗ್ರಿ ಪಡೆಯುವ ಅವಶ್ಯಕತೆಯೇನಿದೆ? ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಗಳ ಗಂಭೀರ ಅಧ್ಯಯನ ಮತ್ತು ಸಾಮಾಜಿಕ ಕಳಕಳಿಯ ಜರೂರತ್ತಾದರೂ ಏನು? ತಕ್ಕ ಮಟ್ಟಿಗಿನ ಭಾಷಾಜ್ಞಾನ ಹಾಗೂ ಘಟನಾಸ್ಥಳಕ್ಕೆ ಹೋಗಿ ಕಂಡಿದ್ದನ್ನು ಕಂಡಹಾಗೆ ವರದಿಮಾಡುವ ಸಾಮರ್ಥ್ಯವಿದ್ದರೆ ಸಾಕಲ್ಲವೇ?
ತಪ್ಪು ತಿಳಿಯುವ ಅವಶ್ಯಕತೆಯಿಲ್ಲ. ಪತ್ರಿಕೋದ್ಯಮವೆಂಬ ಪವಿತ್ರ ವೃತ್ತಿಯ ಬಗ್ಗೆ ಲಘುವಾಗಿ ಮಾತನಾಡುವ ಉದ್ದೇಶ ಲೇಖನಕ್ಕಿಲ್ಲ. ಇಡೀ ಸಮಾಜದ ಹುಳುಕನ್ನು ಎತ್ತಿ ತೋರಿಸುವವರು ಪತ್ರಕರ್ತರು. ಆದರೆ ಪತ್ರಕರ್ತರಾದವರ ತಪ್ಪನ್ನು ಎತ್ತಿ ತೋರಿಸುವವರಾರು?
ಅದು ಗಾಂಧೀಜಿಯವರ 'ಹರಿಜನ' ಅಥವಾ 'ಯಂಗ್ ಇಂಡಿಯಾ' ಇರಬಹುದು, ವಿವೇಕಾನಂದರ 'ಪ್ರಬುದ್ಧ ಭಾರತ'ವಿರಬಹುದು ಅಥವಾ ತಿಲಕರ 'ಕೇಸರಿ' ಪತ್ರಿಕೆಯಿರಬಹುದು. ಅವೆಲ್ಲಾ ಪತ್ರಿಕೆಗಳಿಗೆ ಮತ್ತು ಆ ಪತ್ರಿಕೆಗಳಲ್ಲಿ ಕೆಲಸಮಾಡುತ್ತಿದ್ದವರಿಗೆ ಇದ್ದದ್ದು ರಾಷ್ಟ್ರ ಮತ್ತು ಸಮಾಜದೆಡೆಗಿನ ಬದ್ಧತೆಯೇ ಹೊರತು ಇಂದಿನ ಪತ್ರಿಕೋದ್ಯಮದಲ್ಲಿ ಇರುವಂಥ ಸಿದ್ಧ ಸೂತ್ರಗಳಲ್ಲ. ಆದರೆ ಇಂದಿನ ಪತ್ರಿಕೆಗಳಲ್ಲಿ ಅಂತಹ ಆದರ್ಶಗಳನ್ನೇಕೆ ಕಾಣಲು ಸಾಧ್ಯವಿಲ್ಲ?
ಕೆಲವು ರಾಜಕಾರಣಿಗಳು ಪರಮ ಭ್ರಷ್ಟರೆಂಬುದು ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಅದೇ ರಾಜಕಾರಣಿ ಹಿಂದೆ ಹಲವಾರು ಬಾರಿ ಸಮಾಜದ ಶಾಂತಿ ಕದಡುವಂಥ ಕೆಲಸ ಮಾಡಿದ್ದ ಎಂಬುದೂ ಕೂಡ ಪತ್ರಕರ್ತರಾದಿಯಾಗಿ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಅದೇ ರಾಜಕಾರಣಿ ಗಾಂಧಿ ಜಯಂತಿಯಂದು ಭಾಷಣ ಮಾಡುತ್ತಾನೆ. 'ದೇಶದ ಪ್ರಜೆಗಳೇ, ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ' ಎಂದು ಕರೆನೀಡುತ್ತಾನೆ. ಅದನ್ನು ನಮ್ಮ ಪತ್ರಿಕೆಗಳು 'ಗಾಂಧಿ ತತ್ವ ಪಾಲಿಸಲು ___ ಕರೆ' ಎಂಬ ಶೀರ್ಷಿಕೆಯಡಿ ಪ್ರಕಟಿಸುತ್ತವೆ. ಇದಕ್ಕಿಂತ ಹಾಸ್ಯಾಸ್ಪದ ವಿಚಾರ ಇನ್ನೊಂದಿದೆಯೇ? ಪರಮಭ್ರಷ್ಟ ರಾಜಕಾರಣಿಯೊಬ್ಬ ಗಾಂಧೀಜಿಯವರ ಆದರ್ಶಗಳ ಬಗ್ಗೆ ಮಾತನಾಡಿದ್ದನ್ನು ಯಥಾವತ್ತಾಗಿ ವರದಿ ಮಾಡುವುದು ಗಾಂಧೀಜಿಯ ಆದರ್ಶಗಳನ್ನು ಗೇಲಿಮಾಡಿದಂತಲ್ಲವೇ?
ಪತ್ರಿಕೆಗಳು ಅದೆಷ್ಟರ ಮಟ್ಟಿಗೆ ರಾಜಕೀಯ ಮತ್ತು ರಾಜಕಾರಣಿಗಳಿಗೆ ಮಹತ್ವಕೊಟ್ಟಿವೆಯೆಂದರೆ, ರಾಜಕೀಯದ ವಾಸನೆಯಿಲ್ಲದ ಪತ್ರಿಕೆ ಹೇಗಿರುತ್ತದೆಂಬುದನ್ನು ನಮ್ಮಿಂದ ಊಹಿಸಲೂ ಸಾಧ್ಯವಿಲ್ಲ. ಹಾಗಿದ್ದರೆ ರಾಜಕೀಯೇತರ ಘಟನೆಗಳು ನಮ್ಮ ಸುತ್ತಮುತ್ತ ಸಂಭವಿಸುವುದೇ ಇಲ್ಲವೇ? ಖಂಡಿತ ಅಂಥ ಘಟನೆಗಳು ಸಂಭವಿಸುತ್ತವೆ. ಆದರೆ ಅವುಗಳಿಗೆ ನೀಡಬೇಕಾದ ಮನ್ನಣೆಯನ್ನು ಪತ್ರಿಕೆಗಳು ನೀಡುತ್ತಿಲ್ಲ.
ಆ ವಿಚಾರ ಬದಿಗಿಡಿ. ಕೆಲವೊಂದು ಪತ್ರಿಕೆಗಳ ಸಿನಿಮಾ ಪುರವಣಿಯನ್ನೊಮ್ಮೆ ಕೈಗೆತ್ತಿಕೊಳ್ಳಿ. ಆ ಪುರವಣಿಯಲ್ಲಿ ಮಹಿಳೆಯ (ಸಾಮಾನ್ಯ ಮಹಿಳೆಯರಲ್ಲ, ಸೆಲೆಬ್ರಿಟಿಗಳು!) ಅರೆಬೆತ್ತಲೆ ಚಿತ್ರ ಒಂದಾದರೂ ಇದ್ದೇ ಇರುತ್ತದೆ. ಇದರರ್ಥ ಆ ಪತ್ರಿಕೆಗೆ ಮಹಿಳೆಯರ ಬಗ್ಗೆ ಗೌರವ ಭಾವನೆಯಿಲ್ಲ ಅಂತಲ್ಲ. ಅದೇ ಪತ್ರಿಕೆ ತನ್ನ ಸಂಪಾದಕೀಯ ಬರಹದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ತನ್ನ ಕಾಳಜಿಯನ್ನು ವ್ಯಕ್ತಪಡಿಸಿರುತ್ತದೆ. ಮಹಿಳೆಯರನ್ನು ಚಲನಚಿತ್ರಗಳಲ್ಲಿ ಅಶ್ಲೀಲವಾಗಿ ಬಳಸಿಕೊಳ್ಳುತ್ತಿರುವುದರ ವಿರುದ್ಧ ತನ್ನ ಆಕ್ರೋಶವನ್ನೂ ವ್ಯಕ್ತಪಡಿಸಿರುತ್ತದೆ. ಆದರೂ ತನ್ನ ಸಿನಿಮಾ ಪುರವಣಿಯಲ್ಲಿ ಯಾರದಾದರೂ ಒಂದು ಉದ್ರೇಕಕಾರಿ ಚಿತ್ರವನ್ನು ಅಚ್ಚುಹಾಕಿರುತ್ತದೆ! ಇದರರ್ಥ ಏನು? ಸಮಾಜದಿಂದ ದೂರವಾಗುತ್ತಿರುವ ಸಭ್ಯತೆಯ ಬಗ್ಗೆ ಎಚ್ಚರಿಕೆ ನೀಡುವ ಪತ್ರಿಕೆಗಳು ಕೂಡ ತಮ್ಮ ಪ್ರಸಾರ ಸಂಖ್ಯೆ ಹೆಚ್ಚುಮಾಡಿಕೊಳ್ಳಲು ಅಡ್ಡದಾರಿ ಹಿಡಿದಿವೆ ಎಂದೇ ಅಲ್ಲವೇ? (ಹಾಗಂತ ಎಲ್ಲ ಪತ್ರಿಕೆಗಳೂ ಉದ್ರೇಕಕಾರಿ ಚಿತ್ರ ಪ್ರಕಟಿಸಿ ತಮ್ಮ ಪ್ರಸಾರ ಹೆಚ್ಚು ಮಾಡಿಕೊಳ್ಳುತ್ತಿವೆ ಎಂದು ಭಾವಿಸಬೇಕಿಲ್ಲ. ಆದರೆ ಕೆಲವೊಂದು ಪತ್ರಿಕೆಗಳು ಖಂಡಿತಾ 'ಅಡ್ಡದಾರಿ' ಹಿಡಿದಿವೆ.)
೧೯೦೫ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿದ್ದನ್ನು ವಿರೋಧಿಸಿ ಬಾಲಗಂಗಾಧರ ತಿಲಕರು ತಮ್ಮ 'ಕೇಸರಿ' ಪತ್ರಿಕೆಯಲ್ಲಿ ಬೆಂಕಿಯಂಥ ಲೇಖನಗಳನ್ನು ಬರೆದರು. ಅದನ್ನು ಓದಿದ ಜನ ಬೀದಿಗಿಳಿದು ಪ್ರತಿಭಟಿಸತೊಡಗಿದರು. ಅಂತಿಮವಾಗಿ ಕರ್ಜನ್ ಬಂಗಾಳವನ್ನು ವಿಭಜಿಸುವ ನಿರ್ಧಾರ ಕೈಬಿಟ್ಟ. ಇದಕ್ಕೆ ಕಾರಣ ತಿಲಕರ ಬರಹಗಳು.
ಕೇವಲ 'ಕೇಸರಿ' ಪತ್ರಿಕೆ ಮಾತ್ರವಲ್ಲ, ಅರವಿಂದರ ಸಂಪಾದಕತ್ವದಲ್ಲಿ ಬರುತ್ತಿದ್ದ 'ವಂದೇ ಮಾತರಮ್', ನೆಹರೂರವರ 'ನ್ಯಾಶನಲ್ ಹೆರಾಲ್ಡ್', ಕನ್ನಡದ 'ಸಂಯುಕ್ತ ಕರ್ನಾಟಕ' ಹೀಗೆ ಸ್ವಾತಂತ್ರ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡ ಯಾವುದೇ ಪತ್ರಿಕೆಗಳನ್ನು ನೋಡಿದರೂ ನಮಗೆ ಕಾಣಿಸುವುದು ಒಂದೋ ರಾಷ್ಟ್ರಭಕ್ತಿಯ ಲೇಖನಗಳು ಅಥವಾ ಬ್ರಿಟಿಷರ ವಿರುದ್ಧ ಹೋರಾಡಲು ಜನರನ್ನು ಪ್ರಚೋದಿಸುತ್ತಿದ್ದ ಬರಹಗಳು.
ಅಂದು ಬ್ರಿಟಿಷರು ಭಾರತೀಯರ ಜೀವಹಿಂಡುವ ಕಾಯಕ ನಡೆಸುತ್ತಿದ್ದರೆ ಇಂದು ಅದೇ ಕೆಲಸದ ಗುತ್ತಿಗೆಯನ್ನು ಭಯೋತ್ಪಾದಕರು, ಅಧಿಕಾರಶಾಹಿಗಳು ಪಡೆದಿದ್ದಾರೆ. ಬಹುಶಃ ಬ್ರಿಟಿಷರಿಗಿಂತ ಘೋರವಾಗಿ ಭಾರತೀಯರನ್ನು ಶೋಷಿಸುತ್ತಿದ್ದಾನೆ. ದೇಶದಲ್ಲಿ ವಾರವೊಂದಕ್ಕೆ ಕನಿಷ್ಟಪಕ್ಷ ಒಂದಾದರೂ ಭಯೋತ್ಪಾದಕ ಧಾಳಿ ನಡೆಯುತ್ತದೆ. ಧಾಳಿ ನಡೆದಿದ್ದನ್ನು, ಧಾಳಿಯಲ್ಲಿ ಸತ್ತವರ ಸಂಖ್ಯೆಯನ್ನು ಪತ್ರಿಕೆಗಳು ಮುಖಪುಟದಲ್ಲಿ ವರದಿಮಾಡುತ್ತವೆ. (ಕೆಲವೊಮ್ಮೆ ಅದೂ ಇಲ್ಲ.) ಮಾರನೆ ದಿನದ ಪತ್ರಿಕೆಗಳಲ್ಲಿ 'ಬಾಂಬ್ ಧಾಳಿ ನಡೆದ ನಗರದ ಜನಜೀವನ ಸಾಮಾನ್ಯವಾಗಿತ್ತು, ಜನ ತಮಗೇನೂ ಆಗೇ ಇಲ್ಲವೇನೋ ಎಂಬಂತೆ ತಮ್ಮ ಕರ್ತವ್ಯಕ್ಕೆ ಹಾಜರಾದರು' ಎಂಬಂಥ ಸುದ್ದಿ ಪ್ರಕಟವಾಗಿರುತ್ತದೆ. ಪತ್ರಿಕೆಗಳು ಅಲ್ಲಿನ ಜನರ ಇಂಥ ವರ್ತನೆಯನ್ನು ಹೊಗಳಿ ಬರೆದಿರುತ್ತವೆ. ತಮ್ಮ ನಗರದಲ್ಲಿ ನಡೆದ ಭಯೋತ್ಪಾದಕ ಧಾಳಿಯಲ್ಲಿ ನೂರಾರು ಜನ ಮೃತಪಟ್ಟಿರುವ ಸುದ್ದಿಯನ್ನು ಕೇಳಿಯೂ ತಮಗೇನೂ ಆಗೇ ಇಲ್ಲ ಎಂಬಂತೆ ವರ್ತಿಸುವ ಜನರ ಸಂವೇದನಾಶೂನ್ಯತೆಯನ್ನೂ ಪತ್ರಿಕೆಗಳು ಹೊಗಳಿ ಬರೆಯುತ್ತವೆ(?)
ಮೊನ್ನೆ ಉಡುಪಿಯ ಪದ್ಮಪ್ರಿಯಾ ತೀರಿಕೊಂಡಾಗ ಕನ್ನಡದ ಕೆಲವು ಟಿವಿ ಚಾನೆಲ್‌ಗಳು ವರ್ತಿಸಿದ ರೀತಿಯನ್ನು ಖಂಡಿತಾ ಯಾವೊಬ್ಬ ವಿವೇಕಿಯೂ ಸಮರ್ಥಿಸಲಾರ. ಪದ್ಮಪ್ರಿಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಪದ್ಮಪ್ರಿಯಾ ಅವರ ಸಹೋದರನೊಂದಿಗ ದೂರವಾಣಿ ಸಂಪರ್ಕ ಸಾಧಿಸಿಕೊಂಡ ಖಾಸಗಿ ಸುದ್ದಿ ವಾಹಿನಿಯೊಂದು ಪದ್ಮಪ್ರಿಯಾ ಆತ್ಮಹತ್ಯೆಗೆ ಶರಣಾಗಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು ಅಂತ ಕೇಳಿದರು. ತನ್ನ ಸಹೋದರಿ ತೀರಿಕೊಂಡಿರುವಾಗ ಒಬ್ಬ ವ್ಯಕ್ತಿಗೆ ದು:ಖವಲ್ಲದೆ ಇನ್ನೇನಾಗಲು ಸಾಧ್ಯ? ಇಂತಹ ಮನನೋಯಿಸುವ ಪ್ರಶ್ನೆಗಳ ಅವಶ್ಯಕತೆ ಇತ್ತೇ?
ಅದಿರಲಿ, ಪದ್ಮಪ್ರಿಯಾ ಸತ್ತ ನಂತರ ಆಕೆಯ ಶೀಲದ ಬಗ್ಗೆ ಸಂಶಯ ಪಡುವ ಅವಶ್ಯಕತೆ ಏನಿತ್ತು? ಬದುಕಿರುವ, ಪದ್ಮಪ್ರಿಯಾ ಸಾವಿನಲ್ಲಿ ಕೈವಾಡ ಹೊಂದಿದ್ದಾರೆ ಎನ್ನಲಾಗಿರುವ ವ್ಯಕ್ತಿಗಳ ಶೀಲದ ಬಗ್ಗೆಯೇಕೆ ಸಂಶಯ ವ್ಯಕ್ತಪಡಿಸಲಿಲ್ಲ ? ಹಾಗಾದರೆ 'ಶೀಲ'ವನ್ನು ಕಾಯ್ದುಕೊಳ್ಳುವ ಅಗತ್ಯವಿರುವುದು ಹೆಣ್ಣಿಗೆ ಮಾತ್ರವಾ ?
ಭಾರತದ ಉದ್ದಗಲಕ್ಕೂ ಪ್ರಸಾರವನ್ನು ಹೊಂದಿರುವ ದಿನಪತ್ರಿಕೆಯೊಂದಕ್ಕೆ ಬಡವರ ಕಷ್ಟಗಳಿಗಿಂತ ಸಿನಿಮಾ ನಟಿಯರ ತುಂಡುಗೆಯ ನೃತ್ಯಗಳೇ ಪ್ರಮುಖವಾಗಿ ಕಂಡರೆ, ದೇಶಾದ್ಯಂತ ಪ್ರಸಾರವಿರುವ ದಿನಪತ್ರಿಕೆಯೊಂದು ದೇಶದ ಜಾತ್ಯತೀತ ತತ್ವದ ದೇಗುಲವಾಗಿರುವ ಸಂಸತ್ತಿನ ಮೇಲೆ ದಾಳಿಮಾಡಿದ ಪ್ರಕರಣದ ರೂವಾರಿ ಭಯೋತ್ಪಾದಕ ಅಫ್ಜಲ್ ಗುರುವಿನ ಮರಣದಂಡನೆಯ ಶಿಕ್ಷೆಯನ್ನು ಕಡಿಮೆ ಮಾಡಬೇಕು ಎನ್ನುವ ಅರ್ಥದಲ್ಲಿ ಸಂಪಾದಕೀಯವನ್ನೇ ಬರೆದಿದೆ.
ಪತ್ರಿಕೆ ಮತ್ತು ಪತ್ರಿಕೋದ್ಯಮ ಇವೆರಡೂ ಕೂಡ ಜನ್ಮತಾಳಿದ್ದೇ ಆದರ್ಶಗಳಿಗಾಗಿ ಹೋರಾಡಲು. ಜನ ಪತ್ರಿಕೆಗಳನ್ನು ಇಷ್ಟಪಟ್ಟಿದ್ದೊ ಕೂಡ ಅವುಗಳಲ್ಲಿನ ಆದರ್ಶಗಳಿಗಾಗಿ. ಅಂಥ ಆದರ್ಶಗಳಿಂದಾಗಿಯೇ ಪ್ರತಿಯೊಂದು ಪತ್ರಿಕೆಯೂ ಕೂಡ ತನ್ನದೇ ಆದ ಓದುಗ ವರ್ಗವನ್ನು ಸೃಷ್ಟಿಸಿಕೊಂಡಿದೆ. ಓದುಗರು ತಾವು ಓದುವ ಪತ್ರಿಕೆಯಲ್ಲಿ ಪ್ರತಿಪಾದಿಸಲ್ಪಡುವ ಜೀವನ ಮೌಲ್ಯಗಳನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲು ಇಷ್ಟಪಡುತ್ತಾರೆ. ಪತ್ರಿಕೆಗಳೇ ಅವರಿಗೆ ಸರಿಯಾದ ಮಾರ್ಗದರ್ಶನ ನೀಡದಿದ್ದರೆ ಆ ಕೆಲಸವನ್ನು ಇನ್ಯಾರು ಮಾಡಲು ಸಾಧ್ಯ?
ಸ್ವಾತಂತ್ರ ಹೋರಾಟದ ಕಾಲದಲ್ಲಿದ್ದಂಥ ಪರಿಸ್ಥಿತಿ ಈಗಿಲ್ಲ. ಅಂದಿನ ಪತ್ರಿಕೆಗಳಲ್ಲಿ ಕಾಣುತ್ತಿದ್ದ ಆದರ್ಶಗಳು ಇಂದಿನ ವ್ಯಾಪಾರಿ ಜಗತ್ತಿನಲ್ಲಿ ಅರ್ಥ ಕಳೆದುಕೊಂಡಿರಬಹುದು. ಆದರೆ ದೇಶವೇನೂ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಅಂದು ಶತ್ರುವಿನ ರೂಪದಲ್ಲಿದ್ದ 'ಬ್ರಿಟಿಷ್' ಇಂದು 'ಭಯೋತ್ಪಾದಕ'ನ ರೂಪ ಪಡೆದಿದ್ದಾನೆ. ಬ್ರಿಟಿಷರು ಅಂದು ನಮ್ಮನ್ನು ಆರ್ಥಿಕವಾಗಿ ಶೋಷಿಸುತ್ತಿದ್ದರೆ ಇಂದು ಅದೇ ಕೆಲಸವನ್ನು ಬಹುರಾಷ್ಟ್ರೀಯ ಕಂಪನಿಗಳು ಮಾಡುತ್ತಿವೆ. ಮಹಿಳಾ ಸಶಕ್ತತೆ, ಭ್ರಷ್ಟಾಚಾರ ಮುಕ್ತ ರಾಜಕಾರಣ, ಸರ್ವರಿಗೂ ಸಮಪಾಲು ಮುಂತಾದ ಕಲ್ಪನೆಗಳು ಕೇವಲ ಮರೀಚಿಕೆಯಾಗುಳಿದಿವೆ. ಸಮಾಜದ, ದೇಶದ ಇಂಥ ಹುಳುಕುಗಳ ವಿರುದ್ಧ ಹೋರಾಡಲು ಜನರನ್ನು ಪ್ರಚೋದಿಸಬೇಕಿದ್ದ ಪತ್ರಿಕೆಗಳೂ ಕೂಡ ನಿಧಾನವಾಗಿ ಆದರ್ಶಗಳಿಂದ ದೂರವಾಗುತ್ತಿವೆ.
ಹಾಗಾಗಿಯೇ ಆತಂಕವಾಗುತ್ತಿದೆ.
ಕಾಮೆಂಟ್‌ಗಳು
’ಜಾತ್ಯಾತೀತತೆ’ ಎನ್ನುವ ಪದಪ್ರಯೋಗ ತಪ್ಪು.
ಅದು ’ಜಾತ್ಯತೀತತೆ’ ಎ೦ದಾಗಬೇಕು.
ಜಾತಿ+ಅತೀತ=ಜಾತ್ಯತೀತ (ಯಣ್ ಸ೦ಧಿ)
delete this comment after you edit the word.
ನನ್ನ ತಪ್ಪನ್ನು ತಿದ್ದಿ, ಸರಿಯಾದ ಪದ ಯಾವುದು ಅಂತ ತಿಳಿಸಿದ್ದಕ್ಕೆ ನಿಮಗೆ ವಂದನೆಗಳು. ನನ್ನ ಬ್ಲಾಗಿನ ಜೊತೆಗಿನ ನಿಮ್ಮ ಸಂಬಂಧ ಹೀಗೇ ಇರಲಿ.
mangalore.abdulkhadar@gmail.com
ಏನೇ ಏರಲಿ ಚೆನ್ನಾಗಿದೆ....
ನಿಜ ಅಲ್ವಾ??ಇದನ್ನು ಅರಿತ ಯಾವ ಪತ್ರಕರ್ತನೂ ತಪ್ಪಿಗೆ ಅವಕಾಶ ಮಾಡಿ ಕೊಡಲಾರ...
ತುಂಬಾನೇ ಚೆನ್ನಾಗಿ ಬರೆದದೀರ ಕಣ್ರೀ...
ನಿಮ್ಮ ಬೆಂಬಲಕ್ಕೆ ಧನ್ಯವಾದಗಳು.
@ಅಬ್ದುಲ್ ಖಾದರ್
ಧನ್ಯವಾದ.
@ರವಿ
ನೀವು ಇದೇ ರೀತಿಯ ಲೇಖನಗಳನ್ನು ಹಲವಾರು ಕಡೆ ಓದಿರಬಹುದು. ಎಮ್.ವಿ.ಕಾಮತರು "ಪತ್ರಿಕೋದ್ಯಮದ ವೇಶ್ಯಾವಾಟಿಕೆ" ಎಂಬ ಲೇಖನವನ್ನು ಇದೇ ವಿಷಯಗಳ ಮೇಲೆ ಬರೆದಿದ್ದಾರೆ.
@ಪದ್ಮಾವತಿ
ಧನ್ಯವಾದಗಳು
@ಚೈತ್ರಾ ಹೆಗಡೆ
ಧನ್ಯವಾದಗಳು ನಿಮ್ಮ ಬೆಂಬಲಕ್ಕೆ.
@ಸುಶ್ಮಾ
Thank u..