ಬದುಕೊಂದು ಸುಂದರವಾಗಬೇಕಾದರೆ ಎಷ್ಟೆಲ್ಲ ಜನರು ನಮ್ಮ ಮೇಲೆ ಪ್ರಭಾವ ಬೀರುತ್ತಾರಲ್ಲ? ಹೆತ್ತವರು, ಬಂಧುಗಳು, ಸ್ನೇಹಿತರು, ಗುರುಗಳು ಹಾಗೂ ಪರಿಸರ - ಎಲ್ಲರೂ ಒಂದಲ್ಲ ಒಂದು ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾರೆ. ನಮ್ಮ ಭವಿಷ್ಯ ನಮ್ಮ ಕೈಯಲ್ಲೆ ಇರುವುದು ಹೌದಾದರೂ, ಬಹುತೇಕ ಬಾರಿ ನಮ್ಮ ಹಿತೈಷಿಗಳ, ಆಪ್ತರ ಸಣ್ಣ ಪುಟ್ಟ ಸಲಹೆ ಸೂಚನೆ ನಮ್ಮ ಜೀವನಕ್ಕೊಂದು ತಿರುವು ನೀಡುತ್ತದೆ, ಬಾಳು ಬೆಳಗಿಸಲು ಸಹಕರಿಸುತ್ತದೆ.
ನನಗೂ ಹೀಗೇ ಆಯ್ತು. ನಾನು ಎಂಟನೇ ತರಗತಿಯಲ್ಲಿ ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಅಲ್ಲಿನ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಪ್ರಸನ್ನ ಕುಮಾರ ಐತಾಳರು ನನ್ನನ್ನು ತರಗತಿಯ ಆರಂಭದ ದಿನದಲ್ಲಿಯೇ ಕರೆದು ಹೇಳಿದ ಮಾತು ಇಂದಿಗೂ ನನ್ನಲ್ಲಿ ಅಚ್ಚಳಿಯದೇ ನಿಂತಿವೆ. ಹೆಚ್ಚೂ ಕಡಿಮೆ ಯಾವುದೇ ಹುಟ್ಟಾ ಫಟಿಂಗನೂ ಹುಬ್ಬೇರಿಸುವಂತೆ ವರ್ತಿಸುತ್ತಿದ್ದ ನನ್ನನ್ನು ತರಗತಿಯಲ್ಲಿ ನಿಲ್ಲಿಸಿ, "ನಿನಗೇನಾದರೂ ಮನುಷ್ಯನಾಗಬೇಕು ಎಂದಿದ್ದರೆ ಮೊದಲು ಈ ಉಢಾಳತನವನ್ನೆಲ್ಲಾ ಬಿಟ್ಟು ತರಗತಿಯ ಪಾಠಗಳತ್ತ ಹೆಚ್ಚಿನ ಗಮನಕೊಡು. ಅದಕ್ಕಿಂತಲೂ ಹೆಚ್ಚಾಗಿ ಮೊದಲು ಪುಸ್ತಕಗಳನ್ನು ಓದಲು ಆರಂಭಿಸು. ಪುಸ್ತಕಗಳನ್ನು ಓದದ ಮನುಷ್ಯ ಮನುಷ್ಯನೇ ಅಲ್ಲ" ಎಂದು ನನ್ನನ್ನು ಪುಸ್ತಕಗಳತ್ತ ಮುಖಮಾಡಿ ನಿಲ್ಲುವಂತೆ ಮಾಡಿದ್ದು ಐತಾಳರು. ತೇಜಸ್ವಿ, ಭೈರಪ್ಪ ಮುಂತಾದ ಖ್ಯಾತನಮರ ಕೃತಿಗಳನ್ನು ತೋರಿಸಿದ್ದು ಕೂಡಾ ಅವರೇ. ಇವತ್ತು ನಾನು ನನ್ನ ಆಸೆಯಂತೆ ಪತ್ರಿಕೋದ್ಯಮವನ್ನು ಆಯ್ದುಕೊಂಡಿದ್ದರೆ ಅದಕ್ಕೆ ಐತಾಳರು ನನ್ನಲ್ಲಿ ಪುಸ್ತಕಗಳ ಬಗ್ಗೆ ಹುಟ್ಟಿಸಿದ ಕುತೂಹಲವೂ ಕಾರಣ.
ನಂತರ ಕುಂದಾಪುರದ ಭಂಡಾರ್ಕಾರ್ಸ್ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದಾಗಲೂ ನನ್ನ ಅದೃಷ್ಟಕ್ಕೆ ಐತಾಳರೇ ಸಂಸ್ಕೃತ ಅಧ್ಯಾಪಕರಾಗಿ ಬಂದರು. ಸಂಸ್ಕೃತ ಪಾಠದ ಮಧ್ಯೆ ಅವರು ಆಗಾಗ ಹೇಳುತ್ತಿದ್ದ ಹೊಸ ಪುಸ್ತಕಗಳ ವಿಚಾರಗಳು 'ನಾನೂ ಪುಸ್ತಕ ಓದಬೇಕು' ಎಂಬ ಭಾವನೆಯನ್ನು ನನ್ನಲ್ಲಿ ಗಟ್ಟಿಯಾಗಿ ಬಿತ್ತಿದ್ದವು. ಮುಂದಿನ ದಿನಗಳಲ್ಲಿ ಪತ್ರಿಕೆಗಳು ನನ್ನ ಮುಂಜಾನೆಯ ಸಂಗಾತಿಗಳಾದರೆ, ಪುಸ್ತಕಗಳು ಮುಸ್ಸಂಜೆಯ ಜೊತೆಗಾರರಾದವು. ರವಿ ಬೆಳಗೆರೆಯವರ 'ಹಿಮಾಲಯನ್ ಬ್ಲಂಡರ್' ಪುಸ್ತಕವನ್ನು ಓದಲು ಕೊಟ್ಟು ಯುದ್ಧ ಮತ್ತು ಯೋಧರ ಬಗೆಗಿನ ನನ್ನ ತಿಳಿವಳಿಕೆಯನ್ನೇ ಬದಲಾಯಿಸಿದ ಜಾದೂಗಾರರೂ ಅವರೇ.
ಇವತ್ತು ಅವರು ನನಗೆ ಪಾಠಮಾಡುತ್ತಿಲ್ಲದಿರಬಹುದು, ಆದರೆ ಅಂದು ಅವರು ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಹೇಳಿದ ಮಾತುಗಳು ಕೊನೆಯವರೆಗೂ ನನ್ನೆದೆಯ ಗೂಡಲ್ಲಿ ಬೆಚ್ಚಗೆ, ಹಚ್ಚ ಹಸಿರಾಗಿ ಇರುತ್ತದೆ.
ಶಾಲಾ ಕಾಲೇಜಿಗೆ ಸೇರಿದ ನಂತರ ನಮ್ಮ ಬಹುತೇಕ ಬೆಳವಣಿಗೆಗಳು ಶಿಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಬಗೆ, ಅವರಿಗೆ ಅನನ್ಯ ಜೀವನದೆಡೆಗೆ ದಾರಿತೋರಿಸಬಲ್ಲದು. ಒಂದು ಮಾತಿದೆ 'ಒಬ್ಬ ಸಾಮನ್ಯ ಶಿಕ್ಷಕ ಪಾಠ ಮಾಡುತ್ತಾನೆ, ಉತ್ತಮ ಶಿಕ್ಷಕ ವಿಷಯವನ್ನು ಆಕರ್ಷಕವಾಗಿ ಪ್ರಸ್ತುತಪಡಿಸುತ್ತಾನೆ ಆದರೆ ಒಬ್ಬ ಶ್ರೇಷ್ಠ ಶಿಕ್ಷಕ ವಿದ್ಯಾರ್ಥಿಗಳಿಗೆ ಸ್ಪೂರ್ಥಿಯಾಗುತ್ತಾನೆ.' ಇದೆಷ್ಟು ನಿಜವಲ್ಲವಾ? ಪಾಠ ಮಾಡದೇ ಇದ್ದರೂ ವಿದ್ಯಾರ್ಥಿಗಳಿಗೆ ಸ್ಪೂರ್ಥಿಯಾಗಿ, ಅವರ ಬದುಕಿಗೆ ದೀವಿಗೆಯಾಗುವ ಐತಾಳರಂತಹ ಶಿಕ್ಷಕರು ತರಗತಿಯ ನಾಲ್ಕು ಕೋಣೆಯನ್ನು ಬಿಟ್ಟು ಹೊರಬಂದರೂ, ಬದುಕಿನ ನಾಲ್ಕೂ ದಿಕ್ಕನ್ನು ನೋಡುವಾಗಲೂ ಆದರ್ಶ ಶಿಕ್ಷಕರೆನಿಸುತ್ತಾರೆ.
ಅಂತಹ ಶಿಕ್ಷರಿಗೆ ಗುರುವಂದನೆಯ ರೂಪದ ಬರಹವಿದು.
'ಗರ್ವ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ.
ಓದುಗರಲ್ಲೊಂದು ವಿನಂತಿ:
ಈಗ ತಾನೇ ಪತ್ರಿಕೋದ್ಯಮವನ್ನು ಆಯ್ದುಕೊಂಡು ಬರೆಯುವ ಹೊಸ ಹುರುಪಿನಲ್ಲಿರುವ ನನ್ನ ಸ್ನೇಹಿತರೊಬ್ಬರು ಉತ್ಸಾಹದಿಂದ "ನಿವೇದನೆ" ಎಂಬ ಬ್ಲಾಗೊಂದನ್ನು ಆರಂಭಿಸಿದ್ದಾರೆ. ಅದರ ವಿಳಾಸ ಇಲ್ಲಿದೆ.
http://www.nivedhane.blogspot.com/
ನೀವೊಮ್ಮೆ ಈ ಬ್ಲಾಗಿಗೆ ಭೇಟಿ ನೀಡಿ ನಿಮಗನ್ನಿಸಿದ್ದನ್ನು ಪ್ರತಿಕ್ರಿಯಿಸಿ.
ಕಾಮೆಂಟ್‌ಗಳು
ನಿಮ್ಮ ಬರವಣಿಗೆ ಸುಧಾರಿಸಲು ಬ್ಲಾಗು ಸಹಕಾರಿಯಾಗಲಿ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
@ವಿನಾಯಕ ಭಟ್
ನೀವು ಹೇಳಿದ್ದು ಸರಿ. ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ನಾನು ಅಕ್ಷರ ತಪ್ಪುಗಳನ್ನು ಎಸಗಬಾರದು. ಮುಂದೆ ಹಾಗಾಗದಂಟೆ ನೋಡಿಕೊಳ್ಳುತ್ತೇನೆ.
@ಚೈತ್ರಾ ಹೆಗಡೆ
ನಿಮಗೊಂದು ಥ್ಯಾಂಕ್ಸ್. ನನ್ನ ಲೇಖನದ ಉದ್ದೇಶವನ್ನು ಅರ್ಥಮಾಡಿಕೊಂಡಿದ್ದಕ್ಕೆ.