ಒಂದಾನೊಂದು ಕಾಲದಲ್ಲಿ ಇನ್ನೂ ಜನಿಸಿಲ್ಲದ ಆದರೆ ಇನ್ನೊಂದೆರಡು ದಿನಗಳಲ್ಲಿ ಜನಿಸಲಿಕ್ಕಿರುವ ಮಗುವೊಂದಿತ್ತು. ಆ ಮಗು ದೇವರನ್ನೊಮ್ಮೆ ಪ್ರಶ್ನಿಸಿತು. "ದೇವರೇ, ನೀನು ನನ್ನನ್ನು ನಾಳೆ ಭೂಮಿಗೆ ಕಳಿಸುತ್ತೀಯಾ ಎಂದು ಇಲ್ಲಿ (ಸ್ವರ್ಗ) ಇರುವವರೆಲ್ಲಾ ಮಾತಾಡಿಕೊಳ್ಳುತ್ತಿದ್ದಾರೆ. ನಾನು ಇನ್ನೂ ತುಂಬಾ ಚಿಕ್ಕವ. ಅದಕ್ಕಿಂತಲೂ ಹೆಚ್ಚಾಗಿ ನಾನೊಬ್ಬ ನಿಸ್ಸಹಾಯಕ ಮಗು. ಹೀಗಿರುವಾಗ ನಾನು ಇಲ್ಲಿಂದ ಭೂಮಿಗೆ ಹೋಗಿ ಹೇಗೆ ಜೀವಿಸಲಿ?"
ದೇವರು ಪ್ರೀತಿಯಿಂದ "ಮಗೂ, ಭೂಮಿಯ ಮೇಲೆ ತುಂಬಾ ದೇವತೆಗಳಿದ್ದಾರೆ. ಅವರಲ್ಲಿ ಒಬ್ಬಳನ್ನು ನಾನು ನಿನಗಾಗಿ ಆರಿಸಿಟ್ಟಿದ್ದೇನೆ. ಅವಳು ನಿನಗಾಗಿ ಕಾಯುತ್ತಿರುತ್ತಾಳೆ. ಅವಳೇ ನಿನ್ನ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ" ಎಂದ.
"ಆದರೆ ನಾನಿಲ್ಲಿಯೇ ತುಂಬಾ ಸಂತೋಷದಿಂದಿದ್ದೇನೆ. ನಾನಿಲ್ಲಿ ನನ್ನಷ್ಟಕ್ಕೇ ಹಾಡಿಕೊಂಡು, ನಗಾಡಿಕೊಂಡು ಸಂತೋಷಪಡುತ್ತಿದ್ದೇನೆ. ನನಗೆ ಖುಷಿಯಿಂದಿರಲಿಕ್ಕೆ ಇಷ್ಟು ಸಾಕು. ನಾನು ಭೂಮಿಗೆ ಹೋದರೆ ಇವೆಲ್ಲವನ್ನೂ ಕಳೆದುಕೊಳ್ಳಬೇಕಾಗುವುದಿಲ್ಲವೇ?" ಎಂದಿತು ಮಗು.
"ನಿನ್ನ ಪಾಲಿನ ದೇವತೆ ನಿನಗಾಗಿ ದಿನಾ ಹಾಡುತ್ತಾಳೆ. ಅದಕ್ಕಿಂತ ಹೆಚ್ಚಾಗಿ ಅವಳು ನಿಷ್ಕಾಮ ಪ್ರೇಮವನ್ನು ನೀಡುತ್ತಾಳೆ. ಅವಳ ಪ್ರೀತಿಯನ್ನು ಅನುಭವಿಸುತ್ತಾ ನೀನು ಸುಖವಾಗಿರಬಹುದಲ್ಲವೇ?"
"ಅದು ಸರಿ. ಆದರೆ ಭೂಮಿಯಲ್ಲಿರುವ ಮನುಷ್ಯರು ನನ್ನ ಜೊತೆ ಮಾತನಾಡಲು ಬಂದರೆ ಅವರ ಭಾಷೆಯನ್ನು ನಾನು ಹೇಗೆ ಅರ್ಥಮಾಡಿಕೊಳ್ಳಲಿ? ನನಗೆ ಇಲ್ಲಿ ನಿನ್ನ ಜೊತೆ ಮಾತನಾಡಿದ ಅನುಭವ ಬಿಟ್ಟರೆ ಮನುಷ್ಯರ ಜೊತೆ ಮಾತನಾಡಿ ಗೊತ್ತಿಲ್ಲ" ಮತ್ತೆ ಪ್ರಶ್ನಿಸಿತು ಮಗು.
ಮಗುವಿನ ಮುಗ್ಧತೆ, ಸ್ನಿಗ್ಧ ಸೌಂದರ್ಯ ಕಂಡು ದೇವರಿಗೂ ಮರುಕ ಬಂತು. "ಮಗೂ ನಿನ್ನ ಪಾಲಿನ ದೇವತೆಗೆ ತುಂಬಾ ಸಹನೆಯಿದೆ. ಅವಳು ಜಗತ್ತಿನಲ್ಲೆಲ್ಲೂ ಕೇಳಲಾರದಷ್ಟು ಸುಂದರವಾದ, ಸಿಹಿಯಾದ ಮಾತನ್ನು ನಿನಗೆ ಕಲಿಸುತ್ತಾಳೆ. ಅಷ್ಟು ಅದ್ಭುತವಾದ ಮಾತನ್ನು ನೀನು ಸ್ವರ್ಗದಲ್ಲಿಯೂ ಕೇಳಲು ಸಾಧ್ಯವಿಲ್ಲ. ಅವಳು ನಿನಗೆ ಬೇರೆಯವರ ಜೊತೆ ಮಾತನಾಡುವುದು ಹೇಗೆ ಅಂತ ಕಲಿಸುತ್ತಾಳೆ."
ಆದರೂ ಮಗುವಿಗೆ ಸಮಾಧಾನವಾಗಲಿಲ್ಲ. "ಮನುಷ್ಯರ ಬಳಿಯೇನೋ ಮಾತನಾಡಬಹುದು. ಆದರೆ ನಿನ್ನ ಜೊತೆ ಮಾತನಾಡಬೇಕು ಅಂತ ಅನಿಸಿದಾಗ ಏನು ಮಾಡಲಿ?" ಎಂದು ಪ್ರಶ್ನಿಸಿತು.
ದೇವರು ಮುಗುಳ್ನಕ್ಕ. "ನಿನ್ನ ದೇವತೆ ನಿನ್ನ ಕೈ ಜೋಡಿಸಿ ನನಗಾಗಿ ಪ್ರಾರ್ಥಿಸುವುದು ಹೇಗೆ ಎಂಬುದನ್ನೂ ಹೇಳಿಕೊಡುತ್ತಾಳೆ. ಪ್ರಾರ್ಥನೆಯ ಮೂಲಕ ನೀನು ನನ್ನ ಜೊತೆ ಮಾತನಾಡಬಹುದು."
"ಭೂಮಿಯ ಮೇಲೆ ತುಂಬಾ ಕೆಟ್ಟ ಮನುಷ್ಯರು ಇದ್ದಾರೆ ಅಂತ ಕೇಳಿದ್ದೇನೆ. ಅಲ್ಲಿ ನನ್ನನ್ನು ಯಾರು ರಕ್ಷಿಸುತ್ತಾರೆ? ಇಲ್ಲಿ ನೀನಿದ್ದೀಯಾ? ಅಲ್ಲಿ ಯಾರಿದ್ದಾರೆ?" ಮಗು ಮತ್ತೆ ತನ್ನ ಮುಗ್ಧ ಪ್ರಶ್ನೆಯಿಟ್ಟಿತು.
ದೇವರು ಮಗುವಿನ ಹತ್ತಿರಕ್ಕೆ ಬಂದ. ನಿಧಾನವಾಗಿ ಮಗುವನ್ನು ಅಪ್ಪಿಕೊಂಡ. ಎಂತಹ ಅಸಹಾಯಕನ ಎದೆಯಲ್ಲೂ ಅಶಾಕಿರಣವನ್ನು ಹೊತ್ತಿಸಬಲ್ಲ ಬೆಚ್ಚನೆಯ ಅಪ್ಪುಗೆ ಅದು. "ನಿನ್ನ ದೇವತೆ ನಿನ್ನನ್ನು ರಕ್ಷಿಸುತ್ತಾಳೆ ಮಗು. ತನ್ನ ಪ್ರಾಣ ಕೊಟ್ಟಾದರೂ ನಿನ್ನನ್ನು ಕಾಪಾಡುತ್ತಾಳೆ ಇದು ಖಂಡಿತ."
ಮಗುವಿನ ಕಣ್ಣಂಚಿನಿಂದ ಜಾರಿದ ನೀರು ಕೆನ್ನೆಯ ಮೂಲಕ ಇಳಿದಿ ಹೋಯಿತು. "ನಂಗೆ ನಿಜಕ್ಕೂ ಅಳು ಬರುತ್ತಿದೆ ದೇವರೆ, ಏಕೆಂದರೆ ನನಗಿನ್ನು ನಿನ್ನನ್ನು ನೋಡಲು ಸಾಧ್ಯವಿಲ್ಲ." ಆಗ ದೇವರಿಗೂ ಕೂಡ ದುಃಖ ಉಮ್ಮಳಿಸಿ ಬಂತು. ಮತ್ತೊಮ್ಮೆ ಆ ಮಗುವ ಬಿಗಿದಪ್ಪಿ ಮುದ್ದಾಡಿದ. "ನಾನು ಯಾವತ್ತಿಗೂ 'ಅವಳ' ರೂಪದಲ್ಲಿ ನಿನ್ನ ಜೊತೆಗಿರುತ್ತೇನೆ. 'ಅವಳು' ಸದಾ ನನ್ನ ಬಗ್ಗೆ ನಿನಗೆ ಹೇಳುತ್ತಿರುತ್ತಾಳೆ. ಅಷ್ಟೇ ಅಲ್ಲ, ನೀನು ನನ್ನನ್ನು ಪುನಃ ಸೇರುವುದು ಹೇಗೆ ಅಂತಲೂ ಹೇಳಿಕೊಡುತ್ತಾಳೆ."
ಅಷ್ಟೊತ್ತಿಗೆ ಸ್ವರ್ಗದಲ್ಲಿ ಮೌನ ಆವರಿಸಿತು. ಭೂಮಿಯ ಮೇಲಿನ ಗದ್ದಲ ಮಗುವಿಗೆ ಕೇಳಲಾರಂಭಿಸಿತು. ಅವಸರದಲ್ಲಿ ಮಗು ದೇವರನ್ನು ಪ್ರಶ್ನಿಸಿತು "ದೇವರೆ, ಇನ್ನೇನು ನಾನು ನಿನ್ನನ್ನು ಬಿಟ್ಟು ಹೋಗುತ್ತಿದ್ದೇನೆ. ನನಗೆ ನನ್ನ ಪಾಲಿನ ದೇವತೆಯು ಹೆಸರನ್ನೊಮ್ಮೆ ಹೇಳುವೆಯಾ?"
ದೇವರು ಉತ್ತರಿಸಿದ: "ಆ ದೇವತೆಯ ಹೆಸರನ್ನು ತಿಳಿದುಕೊಂಡು ನೀನು ಮಾಡಬೇಕಾದ್ದೇನೂ ಇಲ್ಲ. ನೀನು ಅವಳನ್ನು ಕೇವಲ 'ಅಮ್ಮಾ' ಎಂದು ಕರೆ, ಅಷ್ಟು ಸಾಕು!"
ಕಾಮೆಂಟ್‌ಗಳು
ಅದೇ ರೀತಿ ದೆವ್ವವೂ ಕೂಡ ತಾನೂ ಎಲ್ಲಾ ಕಡೆ ಇರೋಕ್ಕಾಗಲ್ಲ ಅಂತ ಗರ್ಲ್ ಫ್ರೆಂಡುಗಳನ್ನ ಸೃಷ್ಟಿಸಿತು ಅನ್ನೋದು ಸುಮ್ನೆ ಕುಹಕ ಅಷ್ಟೆ :)
excellent artical
kannada dalli kalisiddu nane