ಮೇ ೨೭, ೧೯೬೪ ರಂದು ಭಾರತದ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ತೀರಿಕೊಂಡಾಗ ದೇಶವಾಸಿಗಳೆಲ್ಲರೂ ಕೇಳುತ್ತಿದ್ದ ಪ್ರಶ್ನೆ ಒಂದೇ: 'ನೆಹರೂ ನಂತರ ಭಾರತದ ನಾಯಕ ಯಾರು?' ನಿಜ, ನೆಹರೂ ನಂತರ ಭಾರತದ ರಾಜಕೀಯ ವಲಯದಲ್ಲಿ ಅಂತಹ ಒಂದು ನಿರ್ವಾತ ಸ್ಥಿತಿ ನಿರ್ಮಾಣವಾಗಿತ್ತು. ನೆಹರೂ ಪ್ರಧಾನಿಯಾಗಿದ್ದಷ್ಟು ದಿನ ತಮ್ಮ ನಂತರ ದೇಶದ ಚುಕ್ಕಾಣಿ ಹಿಡಿಯಬೇಕಾದವರು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಕೂಡ ನೆಹರೂ ಉತ್ತರಾಧಿಕಾರಿಯಾಗಿ ಯಾರನ್ನು ನೇಮಕ ಮಾಡಬೇಕು ಎಂಬುದು ತೋಚಲಿಲ್ಲ.
ಆಗ ಮೂರಾರ್ಜಿ ದೇಸಾಯವರ ಹೆಸರು ಕೇಳಿಬಂತಾದರೂ, ದೇಸಾಯವರಿಗೆ ಬಹುಪಾಲು ಕಾಂಗ್ರೆಸ್ ನಾಯಕರು ಒಲವು ವ್ಯಕ್ತಪಡಿಸಲಿಲ್ಲ. ನಂತರ ಕೊನೆ ಕ್ಷಣದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ನೆಹರೂ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಶಾಸ್ತ್ರಿಯವರು ಮೂಲತಃ ಸಮಾಜವಾದಿಯಾಗಿದ್ದು, ಸ್ವಾತಂತ್ರ ಪೂರ್ವದಿಂದಲೂ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರಿಂದ ಅವರ ಆಯ್ಕೆಗೆ ಅಷ್ಟಾಗಿ ವಿರೋಧ ಬರಲಿಲ್ಲ.
ಜೂನ್ ೧೧, ೧೯೬೪ರಂದು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಶಾಸ್ತ್ರಿ, ಪ್ರಧಾನಿ ಹುದ್ದೆಂದ ಮಾಡಿದ ಪ್ರಥಮ ಭಾಷಣದಲ್ಲಿ ತಮ್ಮ ಕಾರ್ಯ-ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದರು. "ಪ್ರತಿಯೊಂದು ದೇಶವೂ ತನ್ನ ಜೀವಿತಾವಧಿಯಲ್ಲಿ ಎರಡು ದಾರಿಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದಂತಹ ಸಂದರ್ಭವನ್ನು ಎದುರಿಸುತ್ತದೆ. ನಾವೂ ಅಂತಹ ಸ್ಥಿತಿಯಲ್ಲಿ ಈಗ ಇದ್ದೇವೆ. ಆದರೆ ನಮಗೆ ಆಯ್ಕೆಯಲ್ಲಿ ಗೊಂದಲವಿಲ್ಲ. ನಮ್ಮ ದಾರಿ ಸ್ಪಷ್ಟವಾಗಿದೆ. ಎಲ್ಲರಿಗೂ ಸ್ವಾತಂತ್ರ ಮತ್ತು ಸಮಾನತೆಯನ್ನು ನೀಡುವುದು, ಸಮಾಜವಾದದ ಆಧಾರದ ಮೇಲೆ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುವುದು ಮತ್ತು ವಿಶ್ವದ ಎಲ್ಲ ದೇಶಗಳೊಂದಿಗೆ ಸ್ನೇಹ ಬಾಂಧವ್ಯವನ್ನು ಹೊಂದುವುದು ನಮ್ಮ ಧ್ಯೇಯ" ಎಂದು ತಮ್ಮ ಭಾಷಣದಲ್ಲಿ ಶಾಸ್ತ್ರೀಜಿ ಸಾರಿದ್ದರು. ಪ್ರಧಾನಿಯಾಗಿ ಮಾಡಿದ ತಮ್ಮ ಪ್ರಥಮ ಬಾನುಲಿ ಭಾಷಣದಲ್ಲಿಯೇ ಭಾರತೀಯರ ಹೃದಯ ಗೆದ್ದಿದ್ದರು.
ಇಂತಹ ಶಾಸ್ತ್ರೀಜಿ ಹುಟ್ಟಿದ್ದು ಉತ್ತರ ಪ್ರದೇಶದ ವಾರಣಾಸಿಯ ರಾಮನಗರದಲ್ಲಿ, ೧೯೦೪ರಲ್ಲಿ. ಇವರ ತಂದೆಯ ಹೆಸರು ಶಾರದಾ ಪ್ರಸಾದ್. ಬಡತನ ಎಂಬುದು ಲಾಲ್ ಬಹದ್ದೂರರ ಮನೆಗೆ ಪಿತ್ರಾರ್ಜಿತ ಆಸ್ತಿಯಂತೆ ಅಂಟಿಕೊಂಡಿತ್ತು. ಶಾಸ್ತ್ರಿಯವರು ಕೇವಲ ಒಂದೂವರೆ ವರ್ಷದವರಿದ್ದಾಗಲೇ ಅವರ ತಂದೆ ತೀರಿಕೊಂಡರು. ನಂತರ ಶಾಸ್ತ್ರಿಯವರ ತಾಯಿ ತಮ್ಮ ತಂದೆಯ ಮನೆಗೆ ಬಂದು ವಾಸಿಸಲಾರಂಭಿಸಿದರು. ಒಮ್ಮೆ ಶಾಸ್ತ್ರಿಯವರು ಬಾಲಕರಾಗಿದ್ದಾಗ ತಮ್ಮ ಸ್ನೇಹಿತರ ಸಂಗಡ ಗಂಗಾನದಿಯ ಇನ್ನೊಂದು ದಡಕ್ಕೆ ಹೋಗಿದ್ದರು. ಆದರೆ ವಾಪಸ್ ಬರುವಾಗ ಅವರ ಬಳಿ ದೋಣಿಯವನಿಗೆ ಕೊಡಲು ಹಣವಿರಲಿಲ್ಲ. ಸ್ನೇಹಿತರ ಬಳಿ ಹಣ ಕೇಳಲು ಸ್ವಾಭಿಮಾನ ಅಡ್ಡಿಬಂತು. ಗಂಗಾನದಿಯ ರಭಸವನ್ನು ಲೆಕ್ಕಿಸದ ಶಾಸ್ತ್ರೀಜಿ ಈಜಿಕೊಂಡೇ ತಾವು ಸೇರಬೇಕಾಗಿದ್ದ ದಡ ತಲುಪಿದರು! ೧೯೧೫ರಲ್ಲಿ ಮಹಾತ್ಮ ಗಾಂಧೀಜಿಯವರು ವಾರಣಾಸಿಯಲ್ಲಿ ಮಾಡಿದ ಭಾಷಣದಿಂದ ಪ್ರಭಾವಿತರಾದ ಶಾಸ್ತ್ರೀಜಿ ತಮ್ಮ ಜೀವನವನ್ನು ದೇಶಸೇವೆಗೆ ಮುಡಿಪಾಗಿಡುವ ಪಣ ತೊಟ್ಟರು. ೧೯೨೧ರಲ್ಲಿ ಗಾಂಧೀಜಿ ಕರೆ ನೀಡಿದ್ದ ಅಸಹಾಕಾರ ಚಳವಳಿಯಲ್ಲಿ ಭಾಗವಹಿಸಿದರು. ಭಾಗವಹಿಸಿದ 'ತಪ್ಪಿಗಾಗಿ' ಬ್ರಿಟಿಷ್ ಸರಕಾರ ಅವರನ್ನು ಬಂಧಿಸಿತು. ನಂತರ ಬಿಡುಗಡೆ ಮಾಡಲಾತು. ಅಸಹಾಕಾರ ಚಳವಳಿಯ ನಂತರ ರಾಷ್ಟ್ರೀಯವಾದಿ ವಿಚಾರಧಾರೆಗಳ ಕೇಂದ್ರಸ್ಥಾನಗಳಲ್ಲಿ ಒಂದಾಗಿದ್ದ ವಾರಣಾಸಿಯ 'ಕಾಶಿ ವಿದ್ಯಾಪೀಠ'ವನ್ನು ಸೇರಿದರು. ಅಲ್ಲಿನ ನಾಲ್ಕು ವರ್ಷಗಳ ವಿದ್ಯಾರ್ಥಿ ಜೀವನದಲ್ಲಿ ಡಾ. ಭಗವಾನ್ ದಾಸರ ಪಾಠಗಳಿಂದ ಪ್ರಭಾವಿತರಾದರು, ತತ್ವಶಾಸ್ತ್ರದೆಡೆಗೆ ಆರ್ಕತರಾದರು.
೧೯೨೬ರಲ್ಲಿ ಕಾಶಿ ವಿದ್ಯಾಪೀಠದಿಂದ ಪದವಿಯನ್ನು ಪಡೆದರು. ಅಂದಿನ ಸಮಾಜದಲ್ಲಿ ವರದಕ್ಷಿಣೆಯ ಪಿಡುಗು ಜೋರಾಗಿತ್ತು. ಆದರೆ ೧೯೨೭ರಲ್ಲಿ ಮಿರ್ಜಾಪುರದ ಲಲಿತಾದೇವಿ ಯವರನ್ನು ಬಾಳಸಂಗಾತಿಯನ್ನಾಗಿ ಪಡೆದ ಶಾಸ್ತ್ರೀಜಿಯವರು ಕೇವಲ ಒಂದು ಚರಕ ಮತ್ತು ತುಂಡು ಖಾದಿ ಬಟ್ಟೆಯನ್ನು ವರದಕ್ಷಿಣೆಯಾಗಿ ಪಡೆಯುವುದರ ಮೂಲಕ ಕಿರಿಯರಿಗೆ ಮಾದರಿಯಾದರು. ೧೯೩೦ರಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿದಾಗ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪರಿಣಾಮವಾಗಿ ಎರಡೂವರೆ ವರ್ಷಗಳ ಜೈಲುವಾಸವನ್ನು ಅನುಭವಿಸಬೇಕಾತು. ಒಮ್ಮೆ ಶಾಸ್ತ್ರೀಜಿಯವರು ಜೈಲಿನಲ್ಲಿದ್ದಾಗ ಅವರ ಮಗಳು ಅನಾರೋಗ್ಯಕ್ಕೆ ತುತ್ತಾದಳು. ಆಗ ಜೈಲಿನ ಅಧಿಕಾರಿಗಳು ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಕೂಡದು ಎಂಬ ಷರತ್ತಿನ ಮೇರೆಗೆ ಶಾಸ್ತ್ರೀಜಿಯವರನ್ನು ಹದಿನೈದು ದಿನಗಳ ಮಟ್ಟಿಗೆ ಬಿಡುಗಡೆ ಮಾಡಿದರು. ಆದರೆ ದುರ್ದೈವದಿಂದ ಶಾಸ್ತ್ರಿಯವರು ಮನೆ ತಲುಪುವ ಮೊದಲೇ ಅವರ ಮಗಳು ತೀರಿಕೊಂಡಾಗಿತ್ತು. ಮಗಳ ಅಂತ್ಯಕ್ರಿಯೆಗಳನ್ನು ನೆರವೇರಿಸಿದ ಶಾಸ್ತ್ರೀಜಿ, ಅಂತಹ ದುಃಖದ ಸನ್ನಿವೇಶದಲ್ಲೂ ಹದಿನೈದು ದಿನಕ್ಕೆ ಮೊದಲೇ ಸ್ವಯಂ ಪ್ರೇರಣೆಂದ ಜೈಲಿಗೆ ಮರಳಿದರು.
ಅದಾದ ಒಂದು ವರ್ಷದ ನಂತರ ಶಾಸ್ತ್ರಿಯವರ ಮಗ ಕೂಡ ಅನಾರೋಗ್ಯಕ್ಕೆ ತುತ್ತಾದ. ಆಗ ಒಂದು ವಾರದ ಮಟ್ಟಿಗೆ ಶಾಸ್ತ್ರೀಜಿಯವರು ಜೈಲಿನಿಂದ ಮನೆಗೆ ಬಂದರು. ಒಂದು ವಾರದಲ್ಲಿ ಮಗನ ಆರೋಗ್ಯ ಸರಿಹೋಗಲಿಲ್ಲ. ಮನೆಯವರ ಒತ್ತಾಯವನ್ನು ಧಿಕ್ಕರಿಸಿದ ಶಾಸ್ತ್ರೀಜಿ ವಾರದ ಕೊನೆಯಲ್ಲಿ ಸ್ವ ಇಚ್ಚೆಂದ ಜೈಲು ಸೇರಿದರು!
೧೯೪೮ರ ಆಗಸ್ಟ್ ೮ರಂದು ಗಾಂಧೀಜಿ ಮುಂಬೈನಿಂದ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿದರು. ಶಾಸ್ತ್ರೀಜಿ ಆಗ ತಾನೆ ಜೈಲಿನಿಂದ ಬಿಡುಗಡೆಯಾಗಿದ್ದರು. ಗಾಂಧೀಜಿಯವರ ಕರೆಗೆ ತಕ್ಷಣ ಪ್ರತಿಕ್ರಿಸಿದ ಶಾಸ್ತ್ರಿ ನೇರವಾಗಿ ಅಲಹಾಬಾದ್‌ಗೆ ತೆರಳಿದರು. ಅಲಹಾಬಾದಿನ 'ಆನಂದ ಭವನ'ದಿಂದ (ನೆಹರೂ ಅವರ ಮನೆ) ಸ್ವಾತಂತ್ರ ಹೋರಾಟಗಾರರಿಗೆ ಸೂಚನೆಗಳನ್ನು ನೀಡಲಾರಂಭಿಸಿದರು. ನಂತರ ಕೆಲವೇ ದಿನಗಳಲ್ಲಿ ಬಂಧಿತರಾದರು. ೧೯೪೬ರವರೆಗೂ ಜೈಲಿನಲ್ಲೇ ಇರಬೇಕಾತು. ಸ್ವಾತಂತ್ರಾನಂತರ ಕೂಡ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಶಾಸ್ತ್ರೀಜಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ೧೯೫೪ರಲ್ಲಿ ಅವರು ನೆಹರೂ ಮಂತ್ರಿಮಂಡಲದಲ್ಲಿ ರೈಲ್ವೆ ಸಚಿವರಾಗಿದ್ದರು. ಆ ಸಮಯದಲ್ಲಿ ಮೆಹಬೂಬ್‌ನಗರದಲ್ಲಿ ನಡೆದ ರೈಲ್ವೆ ಅಪಘಾತದಲ್ಲಿ ೧೧೨ ಮಂದಿ ಪ್ರಯಾಣಿಕರು ಜೀವ ಕಳೆದುಕೊಂಡರು. ಈ ಅಪಘಾತದ ನೈತಿಕ ಹೊಣೆ ಹೊತ್ತ ಶಾಸ್ತ್ರೀಜಿ ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಆದರೆ ನೆಹರೂ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಅದಾದ ಒಂದು ತಿಂಗಳ ನಂತರ ತಮಿಳುನಾಡಿನ ಅರಿಯಾಲೂರಿನಲ್ಲಿ ನಡೆದ ಇನ್ನೊಂದು ರೈಲ್ವೆ ಅಪಘಾತದಲ್ಲಿ ೧೪೪ ಮಂದಿ ಮಡಿದಾಗ ಶಾಸ್ತ್ರೀಜಿ ಘಟನೆಯ ನೈತಿಕ ಮತ್ತು ಸಾಂವಿ ಧಾನಿಕ ಹೊಣೆ ಹೊತ್ತು ಮಂತ್ರಿ ಮಂಡಲದಿಂದ ಹೊರಬಂದರು.
ಈ ರಾಜೀನಾಮೆಯನ್ನು ಅಂಗೀಕರಿಸಿದ ನೆಹರೂ "ನಾನು ರಾಜೀನಾಮೆಯನ್ನು ಅಂಗೀಕರಿಸುತ್ತಿರುವುದು ಶಾಸ್ತ್ರೀಜಿಯವರು ತಪ್ಪು ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲ. ಆದರೆ ಇದು ಮುಂದಿನ ತಲೆಮಾರಿನ ನಾಯಕರಿಗೆ ಮೇಲ್ಪಂಕ್ತಿಯಾಗಲಿ ಎಂಬ ಕಾರಣಕ್ಕೆ" ಎಂದು ಹೇಳಿಕೆ ನೀಡಿದರು. ಶಾಸ್ತ್ರೀಜಿಯವರ ಅಧಿಕಾರ ತ್ಯಾಗ ಎಲ್ಲರಿಂದ ಪ್ರಶಂಸೆಗೊಳಗಾತು.
೧೯೬೧ರಲ್ಲಿ ಗೃಹಮಂತ್ರಿಯ ಸ್ಥಾನವನ್ನು ಅಲಂಕರಿಸಿದ ಶಾಸ್ತ್ರೀಜಿ ಕೆ. ಶಾಂತಾರಾಮ್ ಅವರ ಅಧ್ಯಕ್ಷತೆಯಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯನ್ನು ಹುಟ್ಟುಹಾಕಿದ್ದು ಸ್ವತಂತ್ರ ಭಾರತದ ಮಹತ್ವದ ಅಧ್ಯಾಯಗಳಲ್ಲಿ ಒಂದು. ನೆಹರೂ ನಿಧನಾನಂತರ ಜೂನ ೧೧, ೧೯೬೪ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಶಾಸ್ತ್ರೀಜಿ 'ಹಸಿರು ಕ್ರಾಂತಿ'ಗೆ ಚಾಲನೆ ನೀಡಿದರು. ಇದು ಭಾರತ ಆಹಾರ ಉತ್ಪದನೆಯಲ್ಲಿ ಸ್ವಾಲಂಬನೆಯನ್ನು ಸಾಧಿಸಲು ಕಾರಣವಾತು. ಆದರೆ 'ಹಸಿರು ಕ್ರಾಂತಿ'ಯ ಫಲ ದೇಶಕ್ಕೆ ದೊರೆಯಲು ಪ್ರಾರಂಭವಾದ ಹೊತ್ತಿಗೆ ಶಾಸ್ತ್ರೀಜಿ ಇನ್ನಿಲ್ಲವಾಗಿದ್ದರು. ೧೯೬೪ರ ಅಕ್ಟೋಬರ್ ತಿಂಗಳಿನಲ್ಲಿ ಗುಜರಾತಿನ ಕೈರಾ ಜಿಲ್ಲೆಗೆ ಭೇಟಿ ನೀಡಿದ ಶಾಸ್ತ್ರೀಜಿ ಅಲ್ಲಿ ಹೈನುಗಾರಿಕೆಯಲ್ಲಾದ ಪ್ರಗತಿ ಕಂಡು ಪ್ರಭಾವಿತರಾದರು. ಹಸಿರು ಕ್ರಾಂತಿಯ ಜತೆಜತೆಗೇ 'ಶ್ವೇತ ಕ್ರಾಂತಿ'ಗೂ ಚಾಲನೆ ನೀಡಿದರು. ಹೈನುಗಾರಿಕೆಯಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯನ್ನು ೧೯೬೫ರಲ್ಲಿ ಆರಂಭಿಸಿದರು.
ದೇಶದಲ್ಲಿ ಒಂದೊಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಶಾಸ್ತ್ರೀಜಿ ಕೈಗೆತ್ತಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ತಲೆನೋವು ದೇಶಕ್ಕೆ ಎದುರಾತು. ೧೯೬೫ರ ಸೆಪ್ಟೆಂಬರ್ ತಿಂಗಳಿನಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿಗಳು ಮತ್ತು ಪಾಕಿಸ್ತಾನಿ ಸೈನ್ಯ ಕಾಶ್ಮೀರ ಕಣಿವೆಯೊಳಕ್ಕೆ ನುಸುಳಲು ಆರಂಭಿಸಿತು. ಕಾಶ್ಮೀರದಲ್ಲಿ ಭಾರತ ವಿರೋಧಿ ದಂಗೆ ಆರಂಭವಾಗುವಂತೆ ಮಾಡಿ ಕಾಶ್ಮೀರದ ಕಾನೂನು ಮತ್ತು ವ್ಯವಸ್ಥೆ ಕುಸಿದುಬೀಳುವಂತೆ ಮಾಡುವುದೇ ಅವರ ಮುಖ್ಯ ಉದ್ದೇಶವಾಗಿತ್ತು. ಇತ್ತ ಭಾರತೀಯ ಸೈನ್ಯದ ಮನಸ್ಥಿತಿಯೂ ಅಷ್ಟೇನೂ ಉತ್ತಮವಾಗಿರಲಿಲ್ಲ. ನೆಹರೂರವರ ತಪ್ಪು ನಡೆಗಳಿಂದ ೧೯೬೨ರ ಯುದ್ಧದಲ್ಲಿ ಚೀನಾದ ವಿರುದ್ಧ ಅನುಭವಿಸಿದ ಐತಿಹಾಸಿಕ ಅವಮಾನ ಭಾರತೀಯ ಯೋಧರ ಮನೋಬಲವನ್ನು ತೀವ್ರವಾಗಿ ಕುಗ್ಗಿಸಿತ್ತು. ಇಂತಹ ಪರಿಸ್ಥಿತಿಯಲ್ಲೂ ಎದೆಗುಂದದ ಶಾಸ್ತ್ರೀಜಿ "ಜೈ ಜವಾನ್, ಜೈ ಕಿಸಾನ್" ಎಂದು ಘೋಸಿ ಪಾಕ್ ವಿರುದ್ದ ಯುದ್ಧ ಸಾರಿದರು. ಇದಕ್ಕೆ ಸೂಕ್ತವಾಗಿ ಪ್ರತಿಕ್ರಿಸಿದ ಭಾರತೀಯ ಯೋಧರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಮುನ್ನಡೆದರು. ಲಾಹೋರ್‌ವರೆಗಿನ ಪಾಕ್ ಭೂಪ್ರದೇಶವನ್ನು ವಶಪಡಿಸಿಕೊಂಡರು. ಭಾರತ - ಪಾಕ್ ಯುದ್ಧ ನಡೆಯುತ್ತಿರುವಾಗಲೇ ಚೀನಾ ಸೆಪ್ಟೆಂಬರ್ ೧೭, ೧೯೬೫ರಂದು ಭಾರತಕ್ಕೆ ಒಂದು ಪತ್ರ ರವಾನಿಸಿತು. "ಭಾರತೀಯ ಸೇನೆ ಚೀನಾದ ಭೂಮಿಯಲ್ಲಿ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸಿದೆ. ಇದನ್ನು ತೆರವುಗೊಳಿಸದೇ ಇದ್ದಲ್ಲಿ ಭಾರತ ಚೀನಾದ ದಾಳಿಯನ್ನು ಎದುರಿಸಬೇಕಾಗುತ್ತದೆ"ಎಂದು ಪತ್ರದಲ್ಲಿ ಎಚ್ಚರಿಸಲಾಗಿತ್ತು. ಅಸಲಿಗೆ ಭಾರತ ಚೀನಾದ ಒಂದಿಂಚು ನೆಲವನ್ನೂ ಅತಿಕ್ರಮಿಸಿರಲಿಲ್ಲ. ಚೀನಾದ ಪತ್ರದಿಂದ ಕೆರಳಿದ ಶಾಸ್ತ್ರೀಜಿ "ಚೀನಾದ ಹೇಳಿಕೆಗಳು ನಿರಾಧಾರವಾದವು. ನಾವು ಚೀನಾದ ದಾಳಿಯನ್ನು ಎದುರಿಸಲು ಸಿದ್ಧರಿದ್ದೇವೆ. ಆದರೆ ಒಂದು ಮಾತು ನೆನಪಿರಲಿ, ಭಾರತೀಯರಾದ ನಾವುಬಡತನವನ್ನು ಒಪ್ಪಬಲ್ಲೆವು, ಆದರೆ ಗುಲಾಮಗಿರಿಯನ್ನಲ್ಲ" ಎಂದು ತಿರುಗೇಟು ನೀಡಿದರು. ಶಾಸ್ತ್ರೀಜಿಯವರ ಸಾಮರ್ಥ್ಯದ ಅರಿವಿದ್ದ ಚೀನಾ ದಾಳಿ ಮಾಡಲೇ ಇಲ್ಲ!
ಇತ್ತ ಭಾರತ - ಪಾಕ್ ಯುದ್ಧದಲ್ಲಿ ಪಾಕಿಸ್ತಾನ ತೀವ್ರ ಜೀವಹಾನಿಯನ್ನು ಅನುಭವಿಸಿತು. ೧೯೬೫ರ ಸೆಪ್ಟೆಂಬರ್ ೨೩ರಂದು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿ ಕದನವಿರಾಮ ಘೋಸಿದ್ದರಿಂದ ಯುದ್ಧ ನಿಂತಿತು.
ಯುದ್ಧ ವಿರಾಮ ಘೋಷಣೆಯ ನಂತರ ೧೯೬೬ ಜನವರಿ ೧೦ರಂದು ಅಂದಿನ ಸೋವಿಯತ್ ರಷ್ಯಾದ ತಾಶ್ಕೆಂಟ್‌ನಲ್ಲಿ ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್‌ರನ್ನು ಶಾಸ್ತ್ರೀಜಿ ಭೇಟಿಯಾದರು. ಅವತ್ತೇ ಐತಿಹಾಸಿಕ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು.
ಭಾರತಕ್ಕೆ ಮರಳುವ ಸಿದ್ಧತೆಯಲ್ಲಿದ್ದ ಶಾಸ್ತ್ರೀಜಿ ಜನವರಿ ೧೧ರ ಮಧ್ಯರಾತ್ರಿ ೧.೩೦ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಭಾರತದ ಹಲವಾರು ನಾಯಕರು ತಾಷ್ಕೆಂಟ್‌ಗೆ ತೆರಳದಂತೆ ಮಾಡಿಕೊಂಡಿದ್ದ ಮನವಿಯನ್ನು ಲೆಕ್ಕಿಸದೆ ತೆರಳಿದ್ದ ಶಾಸ್ತ್ರೀಜಿ ಅನಿರೀಕ್ಷಿತವಾಗಿ ನಮ್ಮನ್ನಗಲಿದ್ದರು. ವಿದೇಶಿ ನೆಲದಲ್ಲಿ ಮಡಿದ ಪ್ರಥಮ ಮತ್ತು ಏಕೈಕ ಭಾರತೀಯ ಪ್ರಧಾನಿ ಶಾಸ್ತ್ರೀಜಿ.
ಎಲ್ಲರಿಗೂ ತಿಳಿದಿರುವ ಶಾಸ್ತ್ರೀಜಿಯವರ ಜೀವನಗಾಥೆಯನ್ನು ಮತ್ತೊಮ್ಮೆ ಹೇಳಲು ಸಾಕಷ್ಟು ಕಾರಣಗಳಿವೆ.
ಮಹಾತ್ಮ ಗಾಂಧೀಜಿ ಜನಿಸಿದ ದಿನವಾದ ಅಕ್ಟೋಬರ್ ೨ರಂದೇ ಜನಿಸಿದ ಶಾಸ್ತ್ರೀಜಿಯವರ ಜನ್ಮದಿನವನ್ನು ಆಚರಿಸದೇ ನಿರ್ಲಕ್ಷ ತೋರುವುದನ್ನು ನೋಡಿದಾಗ ಮನಸ್ಸಿಗೆ ಬೇಸರವಾಗುತ್ತದೆ. ತಮ್ಮ ಜೀವಿತಾವಧಿಯಲ್ಲಿ ಸುಮಾರು ೩೨೪೦ ದಿನಗಳ ಕಾಲ ಜೈಲಿನಲ್ಲಿಯೇ ಜೀವ ಸವೆಸಿದ ಶಾಸ್ತ್ರೀಜಿಯವರ ಬಗ್ಗೆ ಏಕಿಂಥ ಅಸಡ್ಡೆ ಎಂಬ ಪ್ರಶ್ನೆಯೂ ಮೂಡುತ್ತದೆ. ಭಾರತೀಯ ಸಮಾಜ ಶಾಸ್ತ್ರೀಜಿಯವರ ತ್ಯಾಗವನ್ನು ಅರ್ಥಮಾಡಿಕೊಳ್ಳುಬುದು ಯಾವಾಗ?
ಕಾಮೆಂಟ್‌ಗಳು
- Vijay Joshi