ನಾವು ಬಳಸುವ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಕಂಪ್ಯೂಟರ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್‌ಗಳು ಅದೆಷ್ಟು ಅಂದವಾಗಿರುತ್ತೆ ಅಲ್ಲವೇ? ಸ್ಮಾರ್ಟ್ ಫೋನ್, ಟ್ಯಾಬ್‌ಗಳನ್ನು ಅಂಗೈಯಲ್ಲಿ ಹಿಡಿದು ನಮ್ಮ ಗೆಳೆಯರೆದುರು ಅದನ್ನು ತೋರಿಸಿದಾಗ, ಕಚೇರಿಯ ಕೆಲಸಗಳನ್ನು ಅವುಗಳ ಮೂಲವೇ ನಿರ್ವಹಿಸಿದಾಗ ಆಗುವ ಸಂತಸಕ್ಕೆ ಪಾರವೇ ಇಲ್ಲ. ಈ ವಸ್ತುಗಳು ನಮಗೆ ಹೊಸದಾಗಿ ದೊರೆತಾಗ ಮನಸ್ಸು ಕುಂತಲ್ಲಿ–ನಿಂತಲ್ಲಿ ಅವುಗಳ ಬಗ್ಗೆಯೇ ಧೇನಿಸುತ್ತಿರುತ್ತದೆ. ಆದರೆ ಆಯಸ್ಸು ಮುಗಿದ ನಂತರ ಅವುಗಳಿಂದ ಆಗುವ ಅಪಾಯದ ಬಗ್ಗೆ ನಾವು ಹೆಚ್ಚಿನ ಸಂದರ್ಭಗಳಲ್ಲಿ ಚಿಂತಿಸಿರುವುದಿಲ್ಲ.
ಆರ್ಥಿಕ ಉದಾರೀಕರಣದ ನಂತರ ಭಾರತ, ಅದರಲ್ಲೂ ಬೆಂಗಳೂರು, ಮಾಹಿತಿ ತಂತ್ರಜ್ಞಾನ ಉದ್ಯಮದ ಮೂಲಕ ಅಪಾರ ಪ್ರಮಾಣದ ವಹಿವಾಟು ನಡೆಸಿದೆ. ದೊಡ್ಡ ಸಂಖ್ಯೆಯ ಜನರಿಗೆ ಕೈತುಂಬಾ ಸಂಬಳ ಬರುವ ನೌಕರಿ ನೀಡಿದೆ. ಇದರ ಜೊತೆಜೊತೆಗೇ ಅವರಿಗೆ ಬೇಕೆಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಆರ್ಥಿಕ ಶಕ್ತಿ ನೀಡಿದೆ. ಇದನ್ನು ಉದಾರೀಕರಣದ ವರ ಎನ್ನಿ ಅಥವಾ ಶಾಪ ಎನ್ನಿ – ಇ -ತ್ಯಾಜ್ಯದ ಉತ್ಪಾದನೆಯ ಪ್ರಮಾಣ ಕೂಡ ದೇಶದಲ್ಲಿ ತೀವ್ರವಾಗಿ ಏರುತ್ತಿದೆ. ಇದು, ಬೆಂಗಳೂರಿನಲ್ಲಂತೂ ಅಪಾಯದ ಮಟ್ಟ ತಲುಪಿದೆ.
ಖಾಸಗಿ ಸಂಸ್ಥೆಯೊಂದು 2012ರಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ ಮುಂಬೈ ಮಹಾನಗರಿಯಲ್ಲಿ ವರ್ಷಕ್ಕೆ ಅಂದಾಜು 61,500 ಮೆಟ್ರಿಕ್ ಟನ್ ಇ-–ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರ ನಂತರದ ಸ್ಥಾನ ನವದೆಹಲಿ ಮತ್ತು ಅದರ ಆಸುಪಾಸಿನ ನಗರಗಳದ್ದು. ಅಲ್ಲಿ ವರ್ಷಕ್ಕೆ 43,000 ಮೆಟ್ರಿಕ್ ಟನ್ ಇ–-ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಮೂರನೆಯ ಸ್ಥಾನ ನಮ್ಮ ಬೆಂಗಳೂರಿನದ್ದು. ಇಲ್ಲಿ ವಾರ್ಷಿಕ 37,000 ಮೆಟ್ರಿಕ್ ಟನ್ ಇ–ತ್ಯಾಜ್ಯ ಸಂಗ್ರಹ ಆಗುತ್ತದೆ ಎಂದು ಸಮೀಕ್ಷೆ ಅಂದಾಜಿಸಿದೆ.
ಭಾರತದ ಮಟ್ಟಿಗೆ ಹೇಳುವುದಾದರೆ, ಕುಟುಂಬದ ಆದಾಯ ಹೆಚ್ಚಿದಷ್ಟೂ ಆ ಕುಟುಂಬ ಉತ್ಪಾದಿಸುವ ಇ-–ತ್ಯಾಜ್ಯದ ಪ್ರಮಾಣ ಹೆಚ್ಚುತ್ತದೆ. ಇದನ್ನು 1990ರ ನಂತರ ಹಣಕಾಸಿನ ಚಲಾವಣೆಯಲ್ಲಿ ಆದ ಹೆಚ್ಚಳ ಹಾಗೂ ಇ-–ತ್ಯಾಜ್ಯ ಉತ್ಪಾದನೆಯ ಪ್ರಮಾಣದಲ್ಲಿ ಆದ ಹೆಚ್ಚಳ ಸೂಚಿಸುತ್ತದೆ. ರಾಷ್ಟ್ರೀಯ ಆನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಪರಿಷತ್ತಿನ ಅಂದಾಜಿನ ಪ್ರಕಾರ, ದೇಶದಲ್ಲಿ ಮಧ್ಯಮ ಪ್ರಮಾಣದ ಆದಾಯ ಹೊಂದಿರುವ ಕುಟುಂಬಗಳ ಸಂಖ್ಯೆ 2015ರ ವೇಳೆಗೆ 5.33 ಕೋಟಿ ತಲುಪಲಿದೆ. 2025ರ ವೇಳೆಗೆ 11.38 ಕೋಟಿಗೆ ಏರಲಿದೆ. ಅಂದರೆ ಈ ಅವಧಿಯಲ್ಲಿ ದೇಶದ ಮತ್ತು ಬೆಂಗಳೂರಿನ ಇ-–ತ್ಯಾಜ್ಯದ ಉತ್ಪಾದನಾ ಪ್ರಮಾಣವೂ ಹೆಚ್ಚಳವಾಗಲಿದೆ.
ದೇಶದ ನಗರ ಪ್ರದೇಶಗಳ ಶೇಕಡ 14ರಷ್ಟು ಮತ್ತು ಗ್ರಾಮೀಣ ಪ್ರದೇಶದ ಶೇಕಡ 2ರಷ್ಟು ಮನೆಗಳು ರೆಫ್ರಿಜರೇಟರ್ ಸೌಕರ್ಯ ಹೊಂದಿವೆ. ನಗರಗಳ ಶೇಕಡ 15ರಷ್ಟು ಮತ್ತು ಹಳ್ಳಿಗಳ ಶೇಕಡ 0.5ರಷ್ಟು ಮನೆಗಳು ವಾಷಿಂಗ್ ಮೆಷಿನ್ ಹೊಂದಿವೆ. ಇನ್ನುಳಿದ ಮನೆಗಳು ಇನ್ನಷ್ಟೇ ಈ ಸೌಕರ್ಯ ಹೊಂದಬೇಕಿವೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಮತ್ತು ‘ಫ್ರಾಸ್ಟ್ ಅಂಡ್ ಸಲ್ಲಿವಾನ್’ ಸಂಸ್ಥೆ ಜಂಟಿಯಾಗಿ ಸಿದ್ಧಪಡಿಸಿರುವ ವರದಿ ಹೇಳಿದೆ. ಅವು ಇಂಥ ಎಲೆಕ್ಟ್ರಾನಿಕ್ ಉಪಕರಣಗಳ ಸೌಕರ್ಯ ಹೊಂದಿದಂತೆ, ನಗರ ಪ್ರದೇಶಗಳ ಇನ್ನಷ್ಟು ಜನ ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್ ಖರೀದಿ ಮಾಡಿದಂತೆ ಇ-–ತ್ಯಾಜ್ಯದ ಗುಡ್ಡೆ ಇನ್ನಷ್ಟು ಎತ್ತರವಾಗುತ್ತದೆ. ಆದರೆ ಇಲ್ಲಿ ಒಂದು ಅಂಶ ಗಮನಿಸಬೇಕು. ಇ-–ತ್ಯಾಜ್ಯದ ಗುಡ್ಡೆಯಲ್ಲಿ ಶೇಕಡ 70ರಷ್ಟು ಪಾಲಿರುವುದು ಸರ್ಕಾರಿ ಇಲಾಖೆಗಳು, ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳದ್ದು. ಖಾಸಗಿ ವ್ಯಕ್ತಿಗಳು ಬಳಸಿ ಬಿಸಾಡಿದ ಎಲೆಕ್ಟ್ರಾನಿಕ್ ವಸ್ತುಗಳ ಪಾಲು ಶೇ 15ರಷ್ಟು ಮಾತ್ರ. ಇನ್ನುಳಿದ ಶೇ 15ರಷ್ಟು ಇ-–ತ್ಯಾಜ್ಯ ಉತ್ಪಾದನಾ ಘಟಕಗಳಿಂದಲೇ ಬರುವಂಥದ್ದು.
ಸಂಸ್ಕರಣೆ ಏಕೆ?: ಮೈಕ್ರೋವೇವ್ ಓವನ್‌ಗಳು, ಎಲ್‍ಇಡಿ ಪರದೆಗಳು, ಬ್ಯಾಟರಿ ಸೆಲ್‌ಗಳಲ್ಲಿ ವಿಷಕಾರಕ ಅಂಶಗಳಿರುತ್ತವೆ. ಕಂಪ್ಯೂಟರ್‌ನಲ್ಲಿ ಬಳಸುವ ಬ್ಯಾಟರಿಗಳಲ್ಲಿರುವ ವಿಷಕಾರಕ ಅಂಶಗಳು ನಮ್ಮ ಮೂತ್ರಕೋಶದ ಮೇಲೆ ದುಷ್ಪರಿಣಾಮ ಬೀರಬಲ್ಲವು. ಸೌರವಿದ್ಯುತ್ ಸೆಲ್‌ಗಳಲ್ಲಿ ಇರುವ ಕ್ಯಾಡ್ಮಿಯಂ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣ ಆಗಬಲ್ಲದು. ಮೊಬೈಲ್, ಸ್ಮಾರ್ಟ್ ಫೋನ್‌ಗಳಲ್ಲಿ ಬಳಸುವ ಬ್ಯಾಟರಿ, ವಿವಿಧ ನಮೂನೆಯ ಸರ್ಕ್ಯೂಟ್ ಬೋರ್ಡ್‌ಗಳು, ಎಲ್‍ಇಡಿ ಪರದೆಗಳಲ್ಲಿ ಬಳಸುವ ಸೀಸದ ಅಂಶ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೆಟ್ಟು ನೀಡಬಲ್ಲವು, ಸಂತಾನೋತ್ಪತ್ತಿ ಸಾಮರ್ಥ್ಯ ಕುಂದಿಸಬಲ್ಲದು ಮತ್ತು ಮೂತ್ರಕೋಶದ ಸಮಸ್ಯೆಗೆ ದಾರಿಯಾಗಬಲ್ಲದು. ನಾವು ಖುಷಿಯಿಂದ ಬಳಸುವ ಯಾವುದೇ ಎಲೆಕ್ಟ್ರಾನಿಕ್ ವಸ್ತುವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿದ್ದರೆ, ಅದರಿಂದ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ.
ಭಾರತದಲ್ಲಿ ಉತ್ಪಾದನೆಯಾಗುವ ಇ-–ತ್ಯಾಜ್ಯದಲ್ಲಿ ಶೇಕಡ 4.5ರಷ್ಟು ಮಾತ್ರ ವ್ಯವಸ್ಥಿತ ಕೇಂದ್ರಗಳಲ್ಲಿ ಪುನರ್‌ಬಳಕೆಗೆ ಒಳಪಡುತ್ತದೆ ಎನ್ನುತ್ತದೆ ಅಸೋಚಾಂ ವರದಿ. ಶೇ 5ರಿಂದ 8ರಷ್ಟು ಇ-–ತ್ಯಾಜ್ಯ ಸುರಿಹೊಂಡಗಳಲ್ಲಿ ಸೇರಿಹೋಗುತ್ತಿದೆ. ಇನ್ನುಳಿದ ಶೇ 87.5ರಿಂದ 90.5ರಷ್ಟು ಇ-–ತ್ಯಾಜ್ಯವನ್ನು ನಮ್ಮ- ನಿಮ್ಮ ಊರಿನ ಚಿಕ್ಕಪುಟ್ಟ ಗುಜರಿ ವ್ಯಾಪಾರಿಗಳೇ ಸಂಸ್ಕರಿಸುತ್ತಾರೆ. ಇಲ್ಲಿಯೂ ಬಹುದೊಡ್ಡ ಅಪಾಯ ಅಡಗಿದೆ. ‘ಇಂಥ ಕಡೆಗಳಲ್ಲಿ ಇ-–ತ್ಯಾಜ್ಯಗಳ ಸಂಸ್ಕರಣ ಕಾರ್ಯವನ್ನು ವೈಜ್ಞಾನಿಕವಾಗಿ ಮಾಡುವುದಿಲ್ಲ. ಅಲ್ಲಿ ಕೆಲಸ ಮಾಡುವವರು ವಿಷಕಾರಕ ವಸ್ತುಗಳಿಂದ ಹಾನಿಗೆ ಒಳಗಾಗುತ್ತಿದ್ದಾರೆ. ಇವುಗಳಿಂದ ಮನುಷ್ಯರ ಆರೋಗ್ಯ ಮತ್ತು ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇ-–ತ್ಯಾಜ್ಯದ ನಿರ್ವಹಣೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ 2011ರಲ್ಲಿ ನಿಯಮವೊಂದನ್ನು ರೂಪಿಸಿದೆ. ಇದು 2012ರ ಮೇ 1ರಿಂದ ಜಾರಿಗೆ ಬಂದಿದೆ.
‘ನಾವು ಪ್ರತಿವರ್ಷ ಅಂದಾಜು 80ರಿಂದ 100 ಟನ್‌ಗಳಷ್ಟು ಇ–ತ್ಯಾಜ್ಯವನ್ನು ಸಂಸ್ಕರಿಸುತ್ತೇವೆ. ಹಾಳಾದ ಟ್ಯೂಬ್ ಲೈಟ್‌ಗಳು, ಕಂಪ್ಯೂಟರ್ ಮಾನಿಟರ್‌ಗಳು (ಪರದೆ) ಅತಿ ಹೆಚ್ಚಿನ ಪ್ರಮಾಣದಲ್ಲಿ ನಮ್ಮಲ್ಲಿಗೆ ಬರುತ್ತವೆ. ಕಂಪ್ಯೂಟರ್ ಮಾನಿಟರ್‌ನ ಬಹುತೇಕ ಎಲ್ಲ ಬಿಡಿ ಭಾಗಗಳನ್ನು ಮರುಬಳಕೆ ಮಾಡಬಹುದು. ನಮ್ಮ ಜೀವನದಲ್ಲಿ ದಿನನಿತ್ಯ ಬಳಸುವ ಸ್ಮಾರ್ಟ್ ಫೋನ್‌ಗಳು, ಟ್ಯಾಬ್‌ಗಳು, ಮೊಬೈಲ್ ಫೋನ್‌ಗಳನ್ನು ಸುಲಭದಲ್ಲಿ ಸಂಸ್ಕರಿಸಬಹುದು’ ಎನ್ನುತ್ತಾರೆ ಬೆಂಗಳೂರು ಮೂಲದ ‘ಆ್ಯಶ್ ರೀಸೈಕ್ಲರ್ಸ್’ ಕಂಪೆನಿಯ ಮಹಮ್ಮದ್ ಶೋಯೆಬ್. ಈ ಸಂಸ್ಥೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆದುಕೊಂಡಿದೆ.
ಇ–-ತ್ಯಾಜ್ಯವನ್ನು ಮನೆಮನೆಗಳಿಂದ ಅಥವಾ ಕಚೇರಿಗಳಿಂದ ಸಂಗ್ರಹಿಸಿ ಅದನ್ನು ಪರವಾನಗಿ ಪಡೆದ ಸಂಸ್ಕರಣಾ ಘಟಕಗಳಿಗೆ ತಲುಪಿಸುವ ವ್ಯವಸ್ಥೆ ಕೂಡ ರೂಪ ಪಡೆದುಕೊಳ್ಳುತ್ತಿದೆ. ‘ನಾವು ಇ–-ತ್ಯಾಜ್ಯವನ್ನು ಜನರಿಂದ ಸಂಗ್ರಹಿಸಿ, ಸಂಸ್ಕರಣಾ ಘಟಕಗಳಿಗೆ ಪೂರೈಸುತ್ತೇವೆ. ಪರವಾನಗಿ ಪಡೆದ ಸಂಸ್ಕರಣಾ ಘಟಕ ಮತ್ತು ಇ-–ತ್ಯಾಜ್ಯ ಉತ್ಪಾದಕರ ನಡುವೆ ಸೇತುವೆಯಂತೆ ನಾವು ಕಾರ್ಯ ನಿರ್ವಹಿಸುತ್ತೇವೆ. ದೇಶದಲ್ಲಿ ಮತ್ತು ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಬಹುಪಾಲು ಇ-–ತ್ಯಾಜ್ಯ ಪರವಾನಗಿ ಇಲ್ಲದ ಸಂಸ್ಕರಣಾ ಘಟಕ ಸೇರುವುದೇ ಹೆಚ್ಚು. ಅಲ್ಲಿ ಪರಿಸರಕ್ಕೆ ಮಾರಕವಾಗದಂತೆ ಅವುಗಳನ್ನು ಸಂಸ್ಕರಿಸುವ ವಿಧಾನ ಅನುಸರಿಸುತ್ತಿಲ್ಲ. ಇ-–ತ್ಯಾಜ್ಯ ನಿರ್ವಹಣೆ ಕುರಿತು ಜನರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕಿದೆ’ ಎನ್ನುವುದು ಬೆಂಗಳೂರಿನ ‘ಸಾಹಸ್’ ಸಂಸ್ಥೆಯ ಮಲ್ಲಿಕಾರ್ಜುನ್ ಅಲಗುಂಡಗಿ ಅವರ ಮಾತು.
ಪರಿಸರದ ಮೇಲೆ ಅತ್ಯಾಚಾರ ಎಸಗುವಂಥ ಜೀವನ ಪದ್ಧತಿ ಮನುಷ್ಯನಿಗೆ ಬೇಡ ಎಂದು ಮಹಾತ್ಮ ಗಾಂಧೀಜಿ ಆದಿಯಾಗಿ ಎಲ್ಲ ಹಿರಿಯರೂ ಹೇಳಿದ್ದಾರೆ. ಆದರೆ ಇಂದಿನ ಜೀವನ ಶೈಲಿಯಲ್ಲಿ, ನಾವು ಬಳಕೆ ಮಾಡುವ ಪ್ರತಿಯೊಂದು ವಸ್ತುವೂ ಒಂದಲ್ಲ ಒಂದು ಬಗೆಯಲ್ಲಿ ಪರಿಸರಕ್ಕೆ ಮಾರಕ ಆಗುವಂಥದ್ದೇ. ಯಂತ್ರಗಳನ್ನು ಕಳಚಿಟ್ಟು ಬದುಕಲಾರದಷ್ಟು ನಾವು ಮುಂದೆ ಬಂದಿದ್ದೇವೆ – ಅಥವಾ ಹಿಂದೆ ನಡೆದಿದ್ದೇವೆ. ಇ–ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆಗೆ ಇಂದೇ ಮುಂದಾಗದಿದ್ದರೆ ಅಲ್ಲೆಲ್ಲೋ ದೂರದಲ್ಲಿರುವ ಸುರಿಹೊಂಡಗಳು ನಮ್ಮ ಬೀದಿ ಬದಿಯಲ್ಲೇ ನಿರ್ಮಾಣಗೊಂಡಾವು.
ಇದಕ್ಕೂ ಒಂದು ಕಾನೂನಿದೆ...
ಎಲೆಕ್ಟ್ರಾನಿಕ್ ತ್ಯಾಜ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ‘ಇ–ತ್ಯಾಜ್ಯ ನಿರ್ವಹಣೆ ನಿಯಮ – 2011’ ಅನ್ನು 2012ರ ಮೇ 1ರಿಂದ ಅನ್ವಯ ಆಗುವಂತೆ ಜಾರಿಗೆ ತಂದಿದೆ. ಪರಿಸರ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲೇ ಇದು ಜಾರಿಗೆ ಬಂದಿದೆ.
ಇ–ತ್ಯಾಜ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ಈ ನಿಯಮ, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದಕ, ವಿತರಕ ಮತ್ತು ಖರೀದಿದಾರರ ಮೇಲೆ ಹೊರಿಸಿದೆ. ಅಣು ತ್ಯಾಜ್ಯವನ್ನು ಇ–ತ್ಯಾಜ್ಯದ ಪಟ್ಟಿಯಿಂದ ಹೊರಗಿಡಲಾಗಿದೆ.
ತಯಾರಕರ ಜವಾಬ್ದಾರಿ: ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯ ಸಂದರ್ಭದಲ್ಲಿ ಉತ್ಪಾದನೆಯಾಗುವ ಇ–ತ್ಯಾಜ್ಯಗಳ ಸಂಸ್ಕರಣೆಯ ಜವಾಬ್ದಾರಿ ತಯಾರಕನ ಹೆಗಲ ಮೇಲಿದೆ. ತಯಾರಕರು ಇ–ತ್ಯಾಜ್ಯಗಳ ಸಂಗ್ರಹಣಾ ಘಟಕಗಳನ್ನು ಯಾರದಾರೂ ಜೊತೆಗೂಡಿ ಅಥವಾ ಪ್ರತ್ಯೇಕವಾಗಿ ಆರಂಭಿಸಬೇಕು ಎಂದೂ ನಿಯಮ ಹೇಳುತ್ತದೆ. ಇ–ತ್ಯಾಜ್ಯಗಳನ್ನು ಪರಿಸರಕ್ಕೆ ಹಾನಿಕರ ಅಲ್ಲದ ಮಾರ್ಗದಲ್ಲಿ ವಿಲೇವಾರಿ ಮಾಡುವ ಘಟಕಗಳ ಸ್ಥಾಪನೆಗೆ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಕರು ಹಣಕಾಸಿನ ಸಹಾಯ ನೀಡಬೇಕು. ಇ–ತ್ಯಾಜ್ಯಗಳ ಸಂಗ್ರಹಣಾ ಘಟಕಗಳ ವಿಳಾಸವನ್ನು ಗ್ರಾಹಕರಿಗೆ ನೀಡಬೇಕು.
ಗ್ರಾಹಕರ ಜವಾಬ್ದಾರಿ: ಈ ನಿಯಮವು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಗ್ರಾಹಕರಿಗೂ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಲು ಸೂಚಿಸಿದೆ. ತಾವು ಖರೀದಿ ಮಾಡಿದ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಉತ್ಪನ್ನಗಳನ್ನು ಸಂಸ್ಕರಣಾ ಘಟಕ ಅಥವಾ ನೋಂದಾಯಿತ ಸಂಗ್ರಹಣಾ ಘಟಕದಲ್ಲೇ ಸುರಿಯುವುದು ಗ್ರಾಹಕರ ಕರ್ತವ್ಯ. ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುವವರು, ತಮ್ಮಲ್ಲಿ ಉತ್ಪಾದನೆಗೊಂಡ ಇ–ತ್ಯಾಜ್ಯದ ಪ್ರಮಾಣ ಎಷ್ಟು ಎಂಬುದರ ದಾಖಲೆ ಇಡಬೇಕು. ಆಯಾ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕೋರಿದಾಗ ಈ ವಿವರ ನೀಡಬೇಕು.
ವಿಜಯ್ ಜೋಶಿ. (ಪ್ರಜಾವಾಣಿ ದಿನಪತ್ರಿಕೆಯ 2013 ನವೆಂಬರ್ 23ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)
ಕಾಮೆಂಟ್‌ಗಳು