Friday, April 29, 2011

ದೇಶಪ್ರೇಮ ಅನ್ನುವುದು ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಮಾತ್ರ ಸೀಮಿತವಾ?

ಮೊಹಾಲಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು ಕ್ರಿಕೆಟ್ ಆಟದಲ್ಲಾ? ಅಥವಾ ಯುದ್ಧದಲ್ಲಾ? ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಪಂದ್ಯ ಗೆದ್ದ ನಂತರ ಕ್ರಿಕೆಟ್ ಪ್ರೇಮಿಗಳು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸಂಭ್ರಮಿಸಿದ ಪರಿ ನೋಡಿದರೆ, ಭಾರತ ಗೆಲುವು ಸಾಧಿಸಿದ್ದು ಕ್ರಿಕೆಟ್ ಪಂದ್ಯವೊಂದರಲ್ಲಿ ಅಲ್ಲ; ಅದಕ್ಕಿಂತಲೂ ಮಿಗಿಲಾದ ಸ್ಪರ್ಧೆಯೊಂದರಲ್ಲಿ ಎಂಬ ಭಾವನೆ ಮೂಡುತ್ತಿತ್ತು.

‘ಯುವಜನತೆಯಲ್ಲಿ ದೇಶದ ಬಗ್ಗೆ ಗೌರವ ಇಲ್ಲ, ದೇಶಭಕ್ತಿಯೇ ಇಲ್ಲ’ ಎಂಬಂತಹ ಗೊಣಗಾಟಗಳಿಗೆ ಉತ್ತರ ಎಂಬಂತಿತ್ತು ಅಂದಿನ ಸಂಭ್ರಮಾಚರಣೆ.

ಹಾಗಾದರೆ ಯುವಕರ ದೇಶಪ್ರೇಮ ಎಂದರೆ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಮಾತ್ರ ಉಕ್ಕಿಬರುವಂಥದ್ದಾ? ಬೇರೆ ದೇಶಗಳ ವಿರುದ್ಧ ಭಾರತ ಜಯಗಳಿಸಿದಾಗ ಈ ಪರಿಯ ಖುಷಿ ಏಕಿರುವುದಿಲ್ಲ? ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡಗಳಾದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಭಾರತ ಗೆದ್ದಾಗ ಈ ಪರಿಯ ದೇಶಪ್ರೇಮ ಎಲ್ಲಿ ಅಡಗಿರುತ್ತದೆ? ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ೮೫ ರನ್ ಸಿಡಿಸಿದಾಗ ನಮ್ಮಲ್ಲಿ ಉಕ್ಕಿ ಬರುವ ಭಾವನೆಗಳು ಅದೇ ‘ಕ್ರಿಕೆಟ್ ದೇವತೆ’ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದಾಗ ಏಕೆ ಸ್ಫುರಿಸುವುದಿಲ್ಲ? ಎಂಬ ಪ್ರಶ್ನೆಗಳೂ ಹಿರಿಯರಿಂದ ಸಹಜವಾಗಿಯೇ ಬಂದವು.

ನಿಜ, ಪಾಕಿಸ್ತಾನದ ವಿರುದ್ಧ ಪಂದ್ಯ ಗೆದ್ದಾಗ ಭಾರತೀಯರಲ್ಲಿ ಸ್ಫುರಿಸುವ ಸಂಭ್ರಮ ಬೇರೆಯದೇ ಮಾದರಿಯದು, ಇತರ ದೇಶಗಳ ವಿರುದ್ಧ ಗೆಲುವು ಸಾಧಿಸಿದಾಗ ಬಾರದಂಥದ್ದು. ಇದಕ್ಕೆ ಸಾಕಷ್ಟು ಕಾರಣಗಳಿವೆ.

ಎಪ್ಪತರ ದಶಕದ ನಂತರ ಜನಿಸಿದವರೇ ಹೆಚ್ಚಾಗಿರುವ ಭಾರತೀಯರಲ್ಲಿ, ಪಾಕಿಸ್ತಾನವನ್ನು ಹೆಚ್ಚಿನವರು ಅರ್ಥ ಮಾಡಿಕೊಂಡಿರುವುದು ಪತ್ರಿಕೆ, ಪುಸ್ತಕಗಳ ಮೂಲಕ. ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ, ಭಯೋತ್ಪಾದಕರ ದಾಳಿಗೆ ಅಮಾಯಕರ ಬಲಿ, ಉಗ್ರರಿಗೆ ಪಾಕ್ ನಂಟು ಎಂಬ ವರದಿಗಳನ್ನು ಪತ್ರಿಕೆಗಳಲ್ಲಿ ಪ್ರತಿನಿತ್ಯ ಓದುವ ನಮ್ಮಲ್ಲಿ ಪಾಕಿಸ್ತಾನವೆಂಬ ಪುಂಡು ರಾಷ್ಟ್ರದ ಬಗ್ಗೆ ಆಕ್ರೋಶ ಮೂಡುವುದು ಸಹಜ. ಭಾರತದ ವಿಭಜನೆಯ ನಂತರ ತನ್ನ ಪಾಡಿಗೆ ತಾನಿರಲು ಪಾಕಿಸ್ತಾನಕ್ಕೆ ಯಾವ ಅಡಚಣೆಯೂ ಇರಲಿಲ್ಲ. ಒಂದು ಬದಿಯಲ್ಲಿ ಯಾವ ರೀತಿಯಲ್ಲೂ ತನಗೆ ತೊಂದರೆ ನೀಡುವ ಯೋಚನೆಯನ್ನೂ ಮಾಡದ ಭಾರತ, ಇನ್ನೊಂದು ಬದಿಯಲ್ಲಿ ತನ್ನೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡ ಆಫ್ಘಾನಿಸ್ತಾನ. ಇದು ಪಾಕಿಸ್ತಾನಕ್ಕೆ ನೆಮ್ಮದಿಯಿಂದಿರಲು ಸಾಕಿತ್ತು.

ಆದರೆ, ವಿನಾಕಾರಣ ಭಾರತದ ಮೇಲೆ ದಂಡೆದ್ದು ಬರುವ ಪಾಕಿಸ್ತಾನದ ರಾಜಕೀಯ ನಾಯಕರ ಮನಃಸ್ಥಿತಿಯೇ ಭಾರತೀಯರಲ್ಲಿ ಆ ದೇಶದ ಮೇಲೆ ಆಕ್ರೋಶ ಹರಳುಗಟ್ಟಲು ಕಾರಣ. ೧೯೪೮, ೧೯೬೫, ೧೯೭೧ ಮತ್ತು ೧೯೯೯ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ಧಗಳು, ಪ್ರತಿದಿನವೆಂಬಂತೆ ನಡೆಯುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಛಾಯಾ ಸಮರ ಆ ದೇಶ ಭಾರತದ ಸಾಂಪ್ರದಾಯಿಕ ಎದುರಾಳಿ ಎಂಬ ಮನೋಭಾವವನ್ನು ಜನರ ಮನಸ್ಸಿನಲ್ಲಿ ಗಟ್ಟಿಗೊಳಿಸಿವೆ.

ಪಾಕಿಸ್ತಾನದ ಜನಸಾಮಾನ್ಯರಲ್ಲಿ ಲಕ್ಷಾಂತರ ಮಂದಿಗೆ ಭಾರತದೊಂದಿಗೆ ಶಾಂತಿಯಿಂದಿರುವ ಆಸೆಯಿರಬಹುದು. ಆದರೆ, ಅದಕ್ಕೆ ದೊಡ್ಡ ಪ್ರಮಾಣದ ಕ್ರಿಯಾತ್ಮಕ ಅಭಿವ್ಯಕ್ತಿ ಇನ್ನೂ ದೊರೆತಿಲ್ಲ. ಅಲ್ಲಿನ ರಾಜಕೀಯ ನಾಯಕರು ಪೋಷಿಸಿರುವ ದ್ವೇಷದ ಮನಃಸ್ಥಿತಿ ಹಾಗೆಯೇ ಇದೆ.

ಅದೇ ಕಾರಣಕ್ಕೆ, ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟವೆಂದರೆ ಅಭಿಮಾನಿಗಳ ಮನದಲ್ಲಿ ಉನ್ಮಾದ ಸೃಷ್ಟಿಯಾಗುವುದು. ದೇಶಪ್ರೇಮ ಹೆಚ್ಚಿನ ಸಂದರ್ಭಗಳಲ್ಲಿ ಪಾಕಿಸ್ತಾನದ ವಿರುದ್ಧ ಮಾತ್ರ ಅಭಿವ್ಯಕ್ತಿಗೊಳ್ಳುವುದು. ಶ್ರೀಲಂಕಾ, ದಕ್ಷಿಣ ಆಫ್ರಿಕ ವಿರುದ್ಧ ಭಾರತ ಗೆದ್ದಾಗ ಈ ಪರಿಯ ಉನ್ಮಾದ ಏಕಿರುವುದಿಲ್ಲ ಎಂಬುದಕ್ಕೂ ಇದೇ ಕಾರಣ - ಆ ದೇಶಗಳು ಭಾರತವನ್ನು ವಿನಾಕಾರಣ ಗೋಳು ಹೊಯ್ದುಕೊಂಡಿಲ್ಲ!

ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ತೋರಿದ ಕ್ರೀಡಾ ಮನೋಭಾವ ನಿಜಕ್ಕೂ ಅನುಕರಣೀಯ. ಅಂಥ ಮನೋಭಾವವನ್ನು ಭಾರತೀಯರು ಖಂಡಿತ ಸ್ವಾಗತಿಸುತ್ತಾರೆ. ಆದರೆ, ಅವರು ಪಾಕಿಸ್ತಾನಕ್ಕೆ ತೆರಳಿದ ನಂತರ ಭಾರತದ ಕುರಿತು ನೀಡಿದ ಹೇಳಿಕೆಯನ್ನು ಯಾವುದೇ ಸಭ್ಯ ಕ್ರೀಡಾಪ್ರೇಮಿ ವಿರೋಧಿಸುತ್ತಾನೆ ಎಂಬುದನ್ನೂ ಮರೆಯುವಂತಿಲ್ಲ.

ಇದೇನೇ ಇರಲಿ, ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಭಾರತ ಪಾಕಿಸ್ತಾನ ನಡುವೆ ೧೯೯೯ರ ಫೆಬ್ರವರಿಯಲ್ಲಿ ನಡೆದ ಟೆಸ್ಟ್ ಪಂದ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಅದೇ ಪಂದ್ಯದಲ್ಲೇ ಕನ್ನಡಿಗ ಅನಿಲ್ ಕುಂಬ್ಳೆ ಹತ್ತು ವಿಕೆಟ್ ಪಡೆದದ್ದು. ಆ ಪಂದ್ಯದಲ್ಲೂ ಪಾಕಿಸ್ತಾನಿ ಆಟಗಾರರು ತೋರಿದ ಕ್ರೀಡಾಮನೋಭಾವ ನಿಜಕ್ಕೂ ಶ್ರೇಷ್ಠ ಮಟ್ಟದ್ದು. ಕುಂಬ್ಳೆ ವಿಶ್ವದಾಖಲೆ ಸೃಷ್ಟಿಸಬಾರದು ಎಂದು ಒಬ್ಬ ಪಾಕಿಸ್ತಾನ ಆಟಗಾರ ರನ್ ಔಟ್ ಆಗಿದ್ದರೆ ಅಥವಾ ಬೇರೆ ಬೌಲರ್‌ಗೆ ವಿಕೆಟ್ ಒಪ್ಪಿಸಿದ್ದರೆ ಕುಂಬ್ಳೆ ಹೆಸರಿನಲ್ಲಿ ಅಂಥ ಮಹತ್ವದ ದಾಖಲೆ ಇರುತ್ತಿರಲಿಲ್ಲ. ಇಂಥ ಅನೇಕ ಉದಾಹರಣೆಗಳೂ ನಮ್ಮ ಕಣ್ಣ ಮುಂದೆ ಇವೆ.

ಇಷ್ಟಿದ್ದರೂ ಭಾರತೀಯರು ಪಾಕಿಸ್ತಾನದ ವಿರುದ್ಧ ಆಟ ಆಡುವಾಗ ಮಾತ್ರ ಇತರ ತಂಡಗಳ ನಡುವೆ ಆಡುವಂತೆ ಆಡುವುದಿಲ್ಲ. ಕಾರಣ ಇಲ್ಲಿಯವರೆಗೆ ಭಾರತ ಪಾಕಿಸ್ತಾನದಿಂದ ಅನುಭವಿಸಿರುವುದರಲ್ಲಿ ನೋವೇ ಹೆಚ್ಚು. ಆ ನೋವು ಮಾಯಲಿ, ಪಾಕಿಸ್ತಾನದ ನಾಯಕರು ಭಾರತದೆಡೆಗೆ ತಮ್ಮ ಮನೋಭಾವ ಬದಲಿಸಿಕೊಳ್ಳಲಿ. ಆಗ ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳು ಯಾರಲ್ಲೂ ಯುದ್ಧೋನ್ಮಾದ ಹುಟ್ಟಿಸುವುದಿಲ್ಲ. ‘ದೇಶಪ್ರೇಮ ಎಂಬುದು ಪಾಕಿಸ್ತಾನದ ವಿರುದ್ಧ ಮಾತ್ರ ಪ್ರದರ್ಶಿಸುವಂಥದ್ದಾ’ ಎಂಬ ಪ್ರಶ್ನೆಗಳೂ ಹುಟ್ಟುವುದಿಲ್ಲ.

ಅಂದಹಾಗೆ, ಚೀನಾ ಕೂಡ ಭಾರತದ ವಿರುದ್ಧ ಯುದ್ಧ ಮಾಡಿದೆ. ಮೋಸದಿಂದ ನಮ್ಮ ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳನ್ನು ಆಕ್ರಮಿಸಿಕೊಂಡಿದೆ. ಭಾರತೀಯರಿಗೆ ಪಾಕಿಸ್ತಾನದ ಬಗ್ಗೆ ಯಾವ ಮನೋಭಾವ ಇದೆಯೋ ಅದೇ ಮನೋಭಾವವೇ ಚೀನಾ ದೇಶ ಬಗ್ಗೆಯೂ ಇದೆ. ಒಂದು ವೇಳೆ ಚೀನಾ ಕೂಡ ಕ್ರಿಕೆಟ್ ಆಡುವ ದೇಶವಾಗಿದ್ದು, ಅದರದ್ದೂ ಅಂತರರಾಷ್ಟ್ರೀಯ ಕ್ರಿಕೆಟ್ ತಂಡ ಇದ್ದಿದ್ದರೆ ಭಾರತ-ಚೀನಾ ಪಂದ್ಯಗಳೂ ಭಾರತ-ಪಾಕ್ ಪಂದ್ಯಗಳಂತೆಯೇ ’ಬಿಸಿ ಬಿಸಿ’ ವಾತಾವರಣ ಸೃಷ್ಟಿಸುತ್ತಿದ್ದವೇನೊ!?

ಕ್ರಿಕೆಟ್ ಅಲ್ಲದೆ ಹಾಕಿ, ಫುಟ್ಬಾಲ್‌ನಂತಹ ಪಂದ್ಯಗಳು ಏಕೆ ಈ ಪರಿಯ ಭಾವುಕತೆಯನ್ನು ನಮ್ಮಲ್ಲಿ ಸೃಷ್ಟಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ನಮ್ಮಲ್ಲೇ ಇದೆ. ಆ ಯಾವ ಆಟವನ್ನೂ ಭಾರತೀಯರು ಕ್ರಿಕೆಟ್‌ನಷ್ಟು ಗಾಢವಾಗಿ ಪ್ರೀತಿಸಲು ಆರಂಭಿಸಿಲ್ಲ, ಅಷ್ಟೆ.

- ವಿಜಯ್ ಜೋಷಿ

Monday, April 25, 2011

ಆ ಪ್ರಶ್ನೆಗೆ ಮಹಾತ್ಮ ಗಾಂಧೀಜಿಯೂ ಉತ್ತರ ನೀಡಲಾರರು...


ನೀವು ಭೇಟಿ ಮಾಡುವ ಪುಟಾಣಿಗಳನ್ನೆಲ್ಲಾ ವಿಜ್ಞಾನಿ, ಎಂಜಿನಿಯರ್, ಡಾಕ್ಟರ್ ಆಗುಎಂದು ಹುರಿದುಂಬಿಸುತ್ತೀರಿ. ಆದರೆ ನೀವು ಯಾರನ್ನೂ ರೈತನಾಗು ಎಂದುಪ್ರೋತ್ಸಾಹಿಸುವುದಿಲ್ಲ. ಯಾಕೆ ಕಲಾಂ?’

ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಭಾರತರತ್ನ ಅಬ್ದುಲ್ ಕಲಾಂಗೆ ಶಾಲಾವಿದ್ಯಾರ್ಥಿಯೊಬ್ಬ ಪ್ರಶ್ನೆ ಕೇಳಿದಾಗ ಒಮ್ಮೆ ಅವರ ಬಾಯಿ ತಡವರಿಸಿರಬಹುದು. ಆದರೆಅವರಿಗೆ ಪ್ರಶ್ನೆಗೆ ಉತ್ತರ ಥಟ್ಟನೆ ಹೊಳೆದಿರಲಿಕ್ಕಿಲ್ಲ.

ಕಾಲಚಕ್ರದ ಮೇಲೆ ಕುಳಿತು ಒಮ್ಮೆ ಹಿಮ್ಮುಖವಾಗಿ ಚಲಿಸೋಣ. ‘ಅಂವ ತನ್ನ ತೋಟವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವಂತೆ. ಅವನ ಅಪ್ಪ ಅದೆಷ್ಟು ಕಷ್ಟಪಟ್ಟು ತೋಟವನ್ನು ಬೆಳೆಸಿದರು. ಅವನಿಗಾಗಿ ಬಿಟ್ಟುಹೋದರು. ಸೋಂಬೇರಿ ಪಿತ್ರಾರ್ಜಿತತೋಟವನ್ನು ಹಾಳುಮಾಡಿಕೊಳ್ಳುತ್ತಿದ್ದಾನೆ.’

ನಾವಿನ್ನೂ ಚಿಕ್ಕವರಾಗಿದ್ದಾಗ ನಮ್ಮ ಊರಿನಲ್ಲಿ ರೀತಿಯ ಮಾತುಗಳು ಊರಿನ ಹಿರಿಯರ ಬಾಯಲ್ಲಿ ಆಗಾಗ ಕೇಳಿಬರುತ್ತಲೇಇದ್ದವು. ‘ಬೇಜವಾಬ್ದಾರಿವ್ಯಕ್ತಿ ತನ್ನ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳದಿದ್ದರೂ ಆದೀತು, ಆದರೆ ಆತ ತನ್ನ ತೋಟವನ್ನೋಅಥವಾ ಹೊಲವನ್ನೋ ಚೆನ್ನಾಗಿ ನೋಡಿಕೊಂಡಿರದಿದ್ದರೆ ಊರವರ ಬಾಯಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದ. ಕೃಷಿ ಮತ್ತುರೈತಾಪಿಯ ಬಗ್ಗೆ ವ್ಯಕ್ತಿಯೊಬ್ಬ ತೋರಿಸುತ್ತಿದ್ದ ಶ್ರದ್ಧೆಯ ಆಧಾರದ ಮೇಲೆ ಆತನ ವ್ಯಕ್ತಿತ್ವವನ್ನು ಅಳೆಯುತ್ತಿದ್ದರು ನಮ್ಮ ಹಿರಿಯರು.

ಇವತ್ತಿನ ಸಂದರ್ಭ ಬೇರೆಯೇ ಆಗಿದೆ. ‘ಅಂವ ತನ್ನ ತೋಟ ಮಾರಿದ. ಬೆಂಗಳೂರಿನಲ್ಲಿ ಫ್ಲಾಟ್ ಕೊಂಡಿದ್ದಾನಂತೆ. ಇನ್ನು ಅಂವಅಲ್ಲೇ ಇರ್ತಾನಂತೆಇಂಥ ಮಾತುಗಳು ಇವತ್ತು ನಮ್ಮ ಹಳ್ಳಿಗರ ಬಾಯಲ್ಲಿ ಬಹಳ ಹೆಮ್ಮೆಯಿಂದ ಬರುತ್ತಿವೆ. ಜೊತೆಗೇಮುಂದೊಂದು ದಿನ ತಮ್ಮ ಮಕ್ಕಳೂ ಬೆಂಗಳೂರಿನಲ್ಲೊಂದು ಚೆಂದದ ಮನೆ ಕಟ್ಟಿಸಬಹುದು, ನಾವೂ ಅಲ್ಲಿಗೇ ವಲಸೆಹೋಗಬಹುದೆಂಬ ಸಣ್ಣ ಆಶಾಭಾವವೂ ಅವರ ಮಾತುಗಳಲ್ಲಿ ಇರಬಹುದು. ರೈತಾಪಿಯಲ್ಲಿನ ಯಶಸ್ಸನ್ನು ಜೀವನದ ಯಶಸ್ಸುಎಂದು ಅರ್ಥೈಸುತ್ತಿದ್ದ ಕಾಲದಿಂದ ರೈತಾಪಿಯನ್ನು ಬಿಟ್ಟರೇ ಜೀವನದಲ್ಲಿ ಯಶಸ್ಸು ಎಂದು ಅರ್ಥೈಸುವವರೆಗೆ ಕಾಲ ಮುಂದೆಸಾಗಿದೆ - ಅಥವಾ ಹಿಂದೆ ನಡೆದಿದೆ.

೧೯೯೦ರ ನಂತರ ಭಾರತ ಕಂಡ ಆರ್ಥಿಕ ಸಮೃದ್ಧತೆ ನಮ್ಮಲ್ಲಿನ ಅನೇಕ ಸಾಮಾಜಿಕ ಚಳವಳಿಗಳನ್ನು ಕೊಂದುಹಾಕಿತು. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ಖಾಸಗಿ ವಲಯದಲ್ಲಿ ಅಸಂಖ್ಯ ಹೊಸ ಉದ್ಯೋಗಗಳುಸೃಷ್ಟಿಯಾದವು. ಭಾರತೀಯ ಸಮಾಜದ ಒಂದು ವರ್ಗ ಹೊಸ ಅವಕಾಶಗಳನ್ನು ಸಮರ್ಥವಾಗಿ ಬಾಚಿಕೊಂಡಿತು; ಮೂಲಕಆರ್ಥಿಕವಾಗಿ ಸಾಕಷ್ಟು ಬಲವಾಯಿತು. ಒಟ್ಟಾರೆಯಾಗಿ ನಮ್ಮ ಸಮಾಜದ ಒಂದು ದೊಡ್ಡ ವರ್ಗಹಣಮಾಡುವ ಚಳವಳಿ ಹಿಂದೆಸಾಗಿತು. ಆರ್ಥಿಕ ಸಮೃದ್ಧಿಯ ಫಲವಾದ ಮೇಲ್ಮಧ್ಯಮ ಮಟ್ಟದ ಬದುಕನ್ನು ಅನುಭವಿಸತೊಡಗಿತು.

ಹಣ ಮಾಡುವ ಚಳವಳಿ ಹಿಂದೆ ಸಮಾಜದ ಬಹುದೊಡ್ಡ ವರ್ಗವೊಂದು ಸಾಗಿದ್ದು ತಪ್ಪಲ್ಲ. ಆದರೆ ಅಂಥದ್ದೊಂದು ಮಹತ್ವದಕಾಲಘಟ್ಟವನ್ನು ಹಾದು ಬಂದು ಎರಡು ದಶಕದ ನಂತರ ತಿರುಗಿ ನೋಡಿದರೆ, ಸಮಾಜದಲ್ಲಾದ ಅನೇಕ ಉತ್ಪಾತಗಳಿಗೆಹಣವೇಮೂಲ ಕಾರಣ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರೆ ಐದಂಕಿ ಸಂಬಳ ಖಚಿತ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಸಾಹಿತ್ಯ, ಸಂಸ್ಕೃತಿ ಮತ್ತಿತರ ಮಾನವಿಕ ವಿಷಯಗಳ ಬಗ್ಗೆ ತೀವ್ರ ಕುತೂಹಲ ತೋರುತ್ತಿದ್ದ ವಿದ್ಯಾರ್ಥಿಗಳಿಗೆ ಇದಕ್ಕಿದ್ದಂತೆ ಕಂಪ್ಯೂಟರ್ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿದ್ದನ್ನು ನಮ್ಮ ಓರಗೆಯ ಅನೇಕರು ಖುದ್ದಾಗಿ ಗಮನಿಸಿರುತ್ತಾರೆ.

ಹಾಗಂತ ಅಲ್ಲಿಯವರೆಗೆ ಯಾರೂ ಸಾಫ್ಟ್ವೇರ್ ಎಂಜಿನಿಯರಿಂಗ್ ಓದಿರಲಿಲ್ಲ ಎಂಬ ವಾದ ಇಲಿಲ್ಲ. ಅಲ್ಲಿಯವರೆಗೂ ಆಸಕ್ತಿಯಿಂದಓದುತ್ತಿದ್ದರು, ಆದರೆ ನಂತರದ ದಿನಗಳಲ್ಲಿ ಪಾಲಕರ ಒತ್ತಡದ ಕಾರಣ ಕೋರ್ಸ್ ಓದುವವರ ಸಂಖ್ಯೆ ಹೆಚ್ಚಾಯಿತು, ಹಾಗೆಯೇಹಣದ ಒತ್ತಡದಿಂದಲೂ ಸಹ.

ಎಂಜಿನಿಯರಿಂಗ್ ಓದುವುದು, ಹಣ ಮಾಡುವುದು, ವಿದೇಶಕ್ಕೆ ಹಾರುವುದು... ಇವೆಲ್ಲದಕ್ಕೂ ಮಿಗಿಲಾದ ಬದುಕು ಇದೆ ಎಂದು ಗಟ್ಟಿಸ್ವರದಲ್ಲಿ ಹೇಳುತ್ತಿದ್ದ ವಿದ್ಯಾರ್ಥಿ ಚಳವಳಿಗಳು, ರೈತ ಚಳವಳಿಗಳುಹಣ ಮಾಡುವ ಚಳವಳಿಯನ್ನು ಎದುರಿಸಲಾಗದೆಬಡವಾದವು. ಅನಿಶ್ಚಿತ ಹವಾಮಾನ, ಬೆಳೆ ಮತ್ತು ಮಾರುಕಟ್ಟೆಯ ಉರುಳು ಯಾವತ್ತಿನಂತೆ ರೈತನ ಕೊರಳ ಸುತ್ತ ಸುತ್ತಿಕೊಂಡೇಇತ್ತು. ೯೦ರ ದಶಕದ ಆರಂಭದಿಂದ ದೇಶದೊಳಕ್ಕೆ ಹರಿದು ಬಂದು ವಿದೇಶಿ ಹಣ ಹೇಗೋ ರೈತನ ಜೇಬು ತುಂಬಲಿಲ್ಲ. ಹಣಕೃಷಿಯೇತರ ಕಾಯಕದಲ್ಲಿ ತೊಡಗಿಸಿಕೊಂಡವರಲ್ಲೇ ಉಳಿದುಬಿಟ್ಟಿತು.

ಸೆನ್ಸೆಕ್ಸ್ನಲ್ಲಿ ಒಂದಂಶ ಕುಸಿತ ಕಂಡರೂ ದೇಶದ ಹಣಕಾಸು ಸಚಿವರು ಶೇರು ದಲ್ಲಾಳಿಗಳ ಯೋಗಕ್ಷೇಮ ವಿಚಾರಿಸಲು ಓಡೋಡಿಬರುತ್ತಾರೆ. ಆದರೆ ನೂರಾರು ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಂಡರೂ ದೇಶದ ಪ್ರಧಾನಿ ರೈತರತ್ತ ಮುಖಮಾಡಲಾರಎಂಬ ದಾರುಣ ಸತ್ಯ ಕೂಡ ರೈತನಿಗೆ ಅರ್ಥವಾಯಿತು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲೇ ನಮ್ಮ ದೇಶದ ರೈತ ತನ್ನಜೀವದ ಕಸುಬನ್ನು ಬಿಟ್ಟು ತಿಂಗಳ ಸಂಬಳ ಬರುವ ಕೆಲಸಗಳತ್ತ ಮುಖ ಮಾಡಿದ್ದು.

ಓದಿನಲ್ಲಿ ಬುದ್ಧಿವಂತನಾಗಿರುವವ ರೈತನಾಗಿ ಜೀವನ ನಡೆಸುವುದು ಅಪರಾಧ ಎಂಬ ಭಾವನೆಯನ್ನು ಎಳೆಯ ಮಕ್ಕಳ ಮನಸ್ಸಿನಲ್ಲಿವ್ಯವಸ್ಥಿತವಾಗಿ ಬಿತ್ತುವ ಇಂದಿನ ಶಿಕ್ಷಣ ಪದ್ಧತಿಯೂ ರೈತಾಪಿಯಿಂದ ಇತರೆ ವೃತ್ತಿಗಳೆಡೆ ಜನ ಆಕರ್ಷಿತರಾಗುವಂತೆ ಮಾಡಿದೆಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ, ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆ ಇಲ್ಲ... ಮುಂತಾದ ಅನೇಕಇಲ್ಲಗಳಿಗಿಂತ ಹೆಚ್ಚಾಗಿ ರೈತರಿಗೆ ನಮ್ಮ ಸಮಾಜ ನಿರಾಕರಿಸುತ್ತಿರುವ ಆತ್ಮಗೌರವ ಕೂಡ ವೃತ್ತಿಯಿಂದ ಅಸಂಖ್ಯ ಮಂದಿವಿಮುಖರಾಗುವಂತೆ ಮಾಡಿದೆ. ಸಾಫ್ಟ್ವೇರ್, ಹಾರ್ಡ್ವೇರ್...ಉದ್ಯೋಗಿಗಳಿಗೆ ನಾವು ತೋರಿಸುತ್ತಿರುವ ಗೌರವದಅರ್ಧದಷ್ಟನ್ನಾದರೂ ರೈತನಿಗೆ ನೀಡಿದ್ದರೆ ಇವತ್ತಿಗೂ ಒಂದಿಷ್ಟು ಮಂದಿ ಯುವಕರು ಹೆಮ್ಮೆಯಿಂದ ನೊಗ ಹೊರುತ್ತಿದ್ದರು. ತಮ್ಮತೋಟ-ಹೊಲಗಳ ಮಣ್ಣು ಮುಟ್ಟಿ ಖುಷಿ ಅನುಭವಿಸುತ್ತಿದ್ದರು.

ಬ್ರೆಜಿಲ್ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕೃಷಿಯ ಕುರಿತು ಪ್ರಾಯೋಗಿಕ ತರಗತಿಗಳಿರುತ್ತವೆ. ತರಗತಿಗಳು ಅಂದರೆ ನಮ್ಮ ದೇಶದಲ್ಲಿ ಆಗುವಂತೆ ಕರಿ ಹಲಗೆಯ ಮೇಲೆ ನೇಗಿಲ ಚಿತ್ರ ಬರೆದುಇದು ರೈತನ ಸಾಧನಎಂದುಗಿಳಿಪಾಠ ಹೇಳಿಕೊಡುವಂತಹ ಕ್ರಮ ಅಲ್ಲ ಅದು. ಅಲ್ಲಿ ಪ್ರತಿ ಮಗುವನ್ನೂ ಹೊಲಕ್ಕೆ ಕರೆದೊಯ್ದು, ಮಗು ಮಣ್ಣನಲ್ಲಿ ಕೆಲಸಮಾಡುವಂತೆ ಮಾಡಿ, ಮಗುವಿಗೆ ಮಣ್ಣಿನ ಜೊತೆ ಅವಿನಾಭಾವ ಸಂಬಂಧ ಬೆಳೆಯುವಂತೆ ಮಾಡಲಾಗುತ್ತದೆ.

ಪ್ರಾಥಮಿಕ ಹಂತದಿಂದ ಆರಂಭವಾಗುವ ಕ್ರಮ ಪ್ರೌಢ ಶಿಕ್ಷಣದ ವರೆಗೂ ಮುಂದುವರೆಯುತ್ತದೆ. ಮುಂದೆ ಮಗು ಯಾವುದೇಜ್ಞಾನ ಶಾಖೆಯನ್ನು ಅಧ್ಯಯನ ಮಾಡುವ ಆಸಕ್ತಿ ಬೆಳೆಸಿಕೊಂಡರೂ ಮಣ್ಣು ಮತ್ತು ಕೃಷಿಯ ಬಗ್ಗೆ ತಾತ್ಸಾರ ಅಥವಾತಿರಸ್ಕಾರವನ್ನಂತೂ ಬೆಳೆಸಿಕೊಳ್ಳುವುದಿಲ್ಲ. ‘ನಾನು ಎಂಜಿನಿಯರ್, ನಾನ್ಯಾಕೆ ಬಂದು ಹೊಲದಲ್ಲಿ ಕೆಲಸ ಮಾಡಲಿ?’ ಎಂಬಂಥಅಹಂಕಾರದ ಮಾತನ್ನೂ ಖಂಡಿತ ಆಡುವುದಿಲ್ಲ. ಭಾರತದ ಮಟ್ಟಿಗೆ ಶ್ರಮ ಸಂಸ್ಕೃತಿ ಬೇರೆ ಅಲ ಕೃಷಿ ಬದುಕು ಬೇರೆ ಅಲ. ಅಂಥಬದುಕಿಗೆ ಹೆಮ್ಮೆಯಿಂದ ಮರಳಲು ಬ್ರೆಜಿಲ್ ನಮಗೆ ಅತ್ಯುತ್ತ ಮಾದರಿಯಾಗಬಲ್ಲದು.

ಎಳೆ ವಯಸ್ಸಿನಿಂದಲೇ ಮಕ್ಕಳಲ್ಲಿ ಕೃಷಿಯ ಬಗ್ಗೆ ಕಿಂಚಿತ್ ಅಭಿಮಾನವನ್ನೂ ಮೂಡಿಸದೆ ಯುವಕರು ಕೃಷಿಯೆಡೆಗೆಆಕರ್ಷಿತರಾಗುತ್ತಾರೆ ಎಂದು ನಿರೀಕ್ಷಿಸುವುದೇ ಮೂರ್ಖತನವಾಗುತ್ತದೆ. ಅಂಥದ್ದೊಂದು ಶಿಕ್ಷಣ ಕ್ರಮ ನಮ್ಮಲ್ಲಿ ಜಾರಿಗೆಬರುವವರೆಗೆ ಪುಟಾಣಿ ಕೇಳಿದ ಪ್ರಶ್ನೆಗೆ ಭಾರತರತ್ನ ಅಬ್ದುಲ್ ಕಲಾಂ ಮಾತ್ರವಲ್ಲ ಭಾರತರತ್ನಕ್ಕಿಂತ ಮಿಗಿಲಾದ ಮಹಾತ್ಮಗಾಂಧಿ ಕೂಡ ಉತ್ತರ ನೀಡಲು ಸಾಧ್ಯವಿಲ್ಲ.

‌‌ ‌ ‌‌ ‌ - ವಿಜಯ್ ಜೋಷಿ.

Friday, November 26, 2010

ಅಭಿವೃದ್ಧಿಯ ಜಪ: ಕೇಳಿಸದ ಪ್ರಕೃತಿಯ ಆಲಾಪ


ಅದು 1980-90ರ ದಶಕ. ಪ್ರಪಂಚದ ಅತಿಸೂಕ್ಷ್ಮ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟ ಸಾಲಿನ ಉತ್ತರ ಕನ್ನಡ ಜಿಲ್ಲೆಗೆ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಯೋಜನೆಗಳು ದಾಂಗುಡಿಯಿಡಲು ಸಿದ್ಧವಾಗಿ ನಿಂತಿದ್ದ ಕಾಲ.ಕೈಗಾದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಅಣುಸ್ಥಾವರದ, ಬೇಡ್ತಿ ಯೋಜನೆ ವಿರುದ್ಧ ರಾಜ್ಯದಾದ್ಯಂತ ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿದ್ದವು. 1981-82ರ ಸುಮಾರಿಗೆ ಉ.ಕ. ಜಿಲ್ಲೆಯ ಶಿರಸಿಯಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಸಭೆ ಸೇರಿ ಬೃಹತ್ ಜಲವಿದ್ಯುತ್ ಯೋಜನೆಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದ್ದರು.

ಶಿರಸಿ ತಾಲೂಕಿನ ಭೈರುಂಬೆಯ ಪ್ರಗತಿಪರ ಕೃಷಿಕ ಕೆ.ಎಂ. ಹೆಗಡೆ ಮತ್ತಿತರರು 1995-96ರ ಸಮಯದಲ್ಲಿ ಉ.ಕ. ಜಿಲ್ಲೆಗೆ ಪರ್ಯಾಯ ಅಭಿವೃದ್ಧಿ ಮಾದರಿಗಳ ರೂಪುರೇಷೆಗಳ ಬಗ್ಗೆ ಚಿಂತನೆ ನಡೆಸಿದ್ದರು. 1993-94ರಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬೇಡ್ತಿ ಯೋಜನೆಯನ್ನು ವಿರೋಧಿಸಿ ತಾವೇ ಖುದ್ದಾಗಿ ಸೋಂದಾದಿಂದ ಯಲ್ಲಾಪುರ ತಾಲೂಕಿನ ಮಾಗೋಡಿನ ತನಕ ಪಾದಯಾತ್ರೆ ನಡೆಸಿದ್ದರು; ಬೇಡ್ತಿ ನದಿಗೆ ಅಣೆಕಟ್ಟು ನಿರ್ಮಿಸಲು ಬಿಡಲಾರೆವು ಎಂದು ಮಾಗೋಡಿನಲ್ಲಿ ಸುಮಾರು 40 ಸಾವಿರ ಮಂದಿ ಪ್ರತಿಜ್ಞೆ ಕೈಗೊಂಡಿದ್ದರು. ಹೀಗೆ ಇಡೀ ಉ.ಕ. ಜಿಲ್ಲೆಯೇ ಪರಿಸರ ಪರ ಹೋರಾಟವೊಂದರಲ್ಲಿ ಕುದಿಯುತ್ತಿತ್ತು.

ಇಂಥ ಮಹತ್ವದ ಕಾಲಘಟ್ಟದಲ್ಲಿ, ಅಂದರೆ 1989ರಲ್ಲಿ ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರು ಕೆನರಾ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುವ ನಿರ್ಧಾರ ಕೈಗೊಂಡರು. ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದು ರಾಜಕೀಯ ಜೀವನ ಆರಂಭಿಸಲು ಅಲ್ಲ; ಬದಲಿಗೆ ಪ್ರಕೃತಿ ವಿರೋಧಿ ಯೋಜನೆಗಳ ವಿರುದ್ಧದ ಬಂಡಾಯಕ್ಕೆ ಶಕ್ತಿ ನೀಡಲು.




ಆ ಸಂದರ್ಭದಲ್ಲಿ ಉ.ಕ. ಜಿಲ್ಲೆಯ ರಾಜಕೀಯ ಪರಿಸ್ಥಿತಿ ಗಮನಿಸಿದ್ದ ರಾಜಕೀಯ ವಿಶ್ಲೇಷಕರು ‘ಚುನಾವಣೆಯಲ್ಲಿ ಕಾರಂತರ ಜಯ ನಿಶ್ಚಿತ’ ಎಂದು ಷರಾ ಬರೆದಿದ್ದರು. ಇಷ್ಟಿದ್ದರೂ ಚುನಾವಣೆ ಫಲಿತಾಂಶ ಬಂದಾಗ ಕಾರಂತರಿಗೆ ಸೋಲಾಗಿತ್ತು.ಅದೇ ಕೊನೆ, ಅನಂತರ ರಾಜ್ಯ ರಾಜಕೀಯದಲ್ಲಿ ಯಾರೊಬ್ಬರೂ ಪರಿಸರ ಸಂರಕ್ಷಣೆಯನ್ನು ಗುರಿಯಾಗಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ ದಾಖಲೆ ಇಲ್ಲ.


ನಮ್ಮ ಜನಪ್ರಿಯ ರಾಜಕೀಯ ಪಕ್ಷಗಳ ಸಿದ್ಧಾಂತದ ಬಗ್ಗೆ ಒಮ್ಮೆ ಕಣ್ಣು ಹಾಯಿಸೋಣ. ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‌ನ ಅಜೆಂಡಾ ಬಡತನ ನಿರ್ಮೂಲನೆ, ಜಾತ್ಯತೀತ ತತ್ವದ ಬಲಪಡಿಸುವಿಕೆ ಮತ್ತು ಅಭಿವೃದ್ಧಿ.ದೇಶದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯ ರಾಜಕೀಯ ಸಿದ್ಧಾಂತ ಗಾಂಧೀ ಪ್ರಣೀತ ಸಮಾಜವಾದ (1984ರ ಲಖನೌ ಸಮಾವೇಶದಲ್ಲಿ ಪಕ್ಷ ಕೈಗೊಂಡ ನಿರ್ಣಯದಂತೆ). ಇನ್ನು ಎಡಪಕ್ಷಗಳು, ಜನತಾದಳ, ಡಿಎಂಕೆ, ಪಿಎಂಕೆ ಮುಂತಾದ ಅಸಂಖ್ಯ ಪಕ್ಷಗಳ ರಾಜಕೀಯ ಸಿದ್ಧಾಂತ ಕೂಡ ಬಡತನ ನಿರ್ಮೂಲನೆ, ಅಭಿವೃದ್ಧಿಯೇ ಆಗಿದೆ. ರಾಜಕೀಯ ಪಕ್ಷಗಳು ತಾವು ಹೇಳಿಕೊಳ್ಳುವ ಸಿದ್ಧಾಂತವನ್ನು ಎಷ್ಟರಮಟ್ಟಿಗೆ ಪಾಲಿಸುತ್ತವೆ ಎಂಬ ವಿಚಾರದ ಚರ್ಚೆಗೆ ಈಗ ಹೋಗುವುದೇ ಬೇಡ!

ಆದರೆ ಪ್ರಶ್ನೆಯಿಷ್ಟೆ: ನಮ್ಮ ಪ್ರಮುಖ ರಾಜಕೀಯ ಪಕ್ಷಗಳಿಗೆ ಕನಿಷ್ಟ ಹೇಳಿಕೊಳ್ಳಲಿಕ್ಕಾದರೂ ಪರಿಸರ ಪರ ನಿಲುವು ಇಲ್ಲವಾ? ಯಾವ ಪಕ್ಷಕ್ಕೆ ಅಂಥ ಗಟ್ಟಿ ನಿಲುವಿದೆ? ಕಾಂಗ್ರೆಸ್ ಆಡಳಿತವಿದ್ದಾಗ ಪರಿಸರ ವಿರೋಧಿ ಯೋಜನೆಯೊಂದು ಜಾರಿಗೆ ಬಂದರೆ ಬಿಜೆಪಿ ಅದನ್ನು ವಿರೋಧಿಸುವ ನಾಟಕವಾಡುತ್ತದೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ನಾಟಕ ಆಡುವ ಸರದಿ ಕಾಂಗ್ರೆಸ್‌ನದ್ದಾಗುತ್ತದೆ, ಅಷ್ಟೆ. ಇದೇ ಕಾರಣಕ್ಕೇ ಇವತ್ತು ನಮ್ಮ ರಾಜಕೀಯ ಪಕ್ಷಗಳಿಗೆ ಎಸ್.ಇ.ಝೆಡ್, ತದಡಿ ಯೋಜನೆ, ಗುಂಡ್ಯ ಯೋಜನೆ, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ, ಕುಲಾಂತರಿ ತಳಿಗಳ ಬಗ್ಗೆ ಒಂದು ಖಚಿತ ನಿಲುವು ತೆಗೆದುಕೊಳ್ಳಲಾಗುತ್ತಿಲ್ಲ.

ನಾವು ಪ್ರಾಕೃತಿಕ ಸಂಪನ್ಮೂಲಗಳನ್ನು ಈಗ ಬಳಸುತ್ತಿರುವ ವೇಗದಲ್ಲೇ ಮುಂದೆಯೂ ಬಳಸಿದರೆ ಈ ಭೂಮಿ ಇನ್ನು ನೂರು ವರ್ಷಕ್ಕಿಂತ ಹೆಚ್ಚು ಕಾಲ ಬಾಳಲಾರದು ಎಂಬ ಮಾತು ಪರಿಸರ ವಿಜ್ಞಾನಿಗಳ ವಲಯದಲ್ಲಿ ಈಗಾಗಲೇ ಕೇಳಿಬರುತ್ತಿದೆ.ಪರಿಸರ ಹಾಳು ಮಾಡುವ ಕೆಲಸದಲ್ಲಿ ಭಾರತ ಕೂಡ ವಿಶ್ವದ ಮುಂದುವರೆದ ದೇಶಗಳಿಗೆ ಸ್ಪರ್ಧೆ ನೀಡುತ್ತಿದೆ.ಇನ್ನು ‘ಅಭಿವೃದ್ಧಿ’ಯ ಹೆಸರಿನಲ್ಲಿ ಅರಣ್ಯ ಮತ್ತು ಕೃಷಿ ಭೂಮಿಯನ್ನೂ ಕೈಗಾರಿಕೆಗಳಿಗೆ ದಾನ ಮಾಡುವ ಕೆಲಸ ನಮ್ಮ ದೇಶದಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಭಾರತ ಭೀಕರ ಆಹಾರ ಕ್ಷಾಮಕ್ಕೆ ಒಳಗಾಗುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ.

ಹಿಂದೆ ಎಲ್ಲೋ ಓದಿದ ನೆನಪು. ಬಹುಷಃ ಯು.ಆರ್. ಅನಂತಮೂರ್ತಿ ಅವರು ಬರೆದ ವಾಲ್ಮೀಕಿಯ ನೆವದಲ್ಲಿ ಪುಸ್ತಕದಲ್ಲಿರಬೇಕು: "ನಮ್ಮಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ... ಹೀಗೆ ಎಲ್ಲ ಜಾತಿ ಧರ್ಮಗಳ ಪರವಾಗಿ ಮಾತನಾಡಲು ಒಂದೊಂದು ರಾಜಕೀಯ ಪಕ್ಷಗ್ಳಿವೆ. ಆದರೆ ನಮ್ಮ ದೇಶದ ಅವಿಭಾಜ್ಯ ಅಂಗವಾದ ಪರಿಸರ, ಪ್ರಾಣಿ, ಪಕ್ಷಿಗಳ ಪರವಾಗಿ ಮಾತನಾಡಲು ಒಂದೇ ಒಂದೆ ರಾಜಕೀಯ ಪಕ್ಷನಮ್ಮಲ್ಲಿಲ್ಲ" ಎಂದು ಅವರು ಬರೆದಿದ್ದರು.

ರಾಜಕೀಯ ಎಂಬುದು ಕೊಳಕು, ಅಲ್ಲಿರುವವರೇ ಭ್ರಷ್ಟರು ಎಂಬ ಮಾತುಗಳನ್ನು ಕ್ಷಣಕಾಲ ಬದಿಗಿಟ್ಟು ಯೋಚಿಸಿದರೆ ಇಂದು ಪರಿಸರಪರ ಚಳವಳಿಗಳಿಗೆ ರಾಜಕೀಯ ಬಲ ಅತ್ಯಗತ್ಯ ಎಂಬುದು ಯಾರಿಗಾದರೂ ಮನವರಿಕೆಯಾದೀತು.ಪರಿಸರದ ಪರವಾಗಿ ಯಾರೆಷ್ಟೇ ಪ್ರಾಮಾಣಿಕ ಹೋರಾಟ ನಡೆಸಿದರೂ ಆಳುವವರಿಗೆ ಅವರ ಕಳಕಳಿ ಅರ್ಥವಾಗದಿದ್ದರೆ ಆ ಹೋರಾಟ ವ್ಯರ್ಥವಾಗಿಬಿಡುವ ಅಪಾಯ ಇದೆ. ರಾಜಕೀಯ ಬಲವಿಲ್ಲದ ಹೋರಾಟ ಬಲಹೀನನ ಆರ್ತನಾದವಾಗುವ ಸಂಭವವೂ ಇದೆ.ಇದಕ್ಕೆ ನಮ್ಮ ಇತಿಹಾಸವೇ ಸಾಕ್ಷಿ.

ನಮ್ಮ ಭೂಮಿ, ಕಾಡನ್ನು ರಕ್ಷಿಸಲು ಆಡಳಿತ ಕೇಂದ್ರದಲ್ಲಿ ಅಚಲ ನಿರ್ಧಾರ ತೆಗೆದುಕೊಳ್ಳಬಲ್ಲ ಗಟ್ಟಿಯಾದ ನಾಯಕತ್ವ ಬೇಕು. ನಮ್ಮ ನೆಮ್ಮದಿಯ ಬದುಕಿಗೆ ಪ್ರಬಲ ‘ಹಸಿರು ಪಕ್ಷ’ ಬೇಕು. ನಾಡಿನ ಅಭಿವೃದ್ಧಿ ಮಾಡುತ್ತೇವೆ ಎಂದು ದಿನಂಪ್ರತಿ ಘೋಷಿಸುವ ರಾಜಕಾರಣಿಗಳು ತಮ್ಮ ಪ್ರಣಾಳಿಕೆಗಳಲ್ಲಿ ‘ಹಸಿರು ತತ್ವ’ವನ್ನು ತರುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು.

ವಿಜಯ್ ಜೋಶಿ

Sunday, October 17, 2010

ಪರಿಸರ ಸಂರಕ್ಷಣೆಯೇ ಅಭಿವೃದ್ಧಿಯಾಗಬಾರದೇ?

ಅಂಕೋಲಾ ಮತ್ತು ಹುಬ್ಬಳ್ಳಿ ನಡುವಿನ ರೈಲು ಮಾರ್ಗ ಕಾರ್ಯಗತಗೊಂಡರೆ ಆರ್ಥಿಕವಾಗಿ ಬಹಳ ಅನುಕೂಲವಾಗುತ್ತದೆ. ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾಗಾಟದ ಅಮೂಲ್ಯ ವೇಳೆ ಮತ್ತು ಇಂಧನ ಉಳಿತಾಯವಾಗುತ್ತದೆ.

ಆದರೆ ಈ ಯೋಜನೆ ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಕ್ಕೆ ಅಪಾರ ಪ್ರಮಾಣದ ಪೆಟ್ಟು ನೀಡುತ್ತದೆ. ಸಾವಿರಾರು ಎಕರೆ ನೈಸರ್ಗಿಕ ಅರಣ್ಯ ಇನ್ನಿಲ್ಲದಂತೆ ನಾಶವಾಗುತ್ತದೆ.

ಉದ್ದೇಶಿತ ಗುಂಡ್ಯ ಜಲವಿದ್ಯುತ್ ಯೋಜನೆಯ ಕಥೆಯೂ ಇದೇ ಆಗಿದೆ. ಒಂದು ವೇಳೆ ಈ ಯೋಜನೆ ಕಾರ್ಯಗತಗೊಂಡರೆ 400 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗುವುದು ನಿಜವಾದರೂ ಸುಮಾರು 700 ಹೆಕ್ಟೇರ್‌ನಷ್ಟು ಅಮೂಲ್ಯ ಅರಣ್ಯ ಸಂಪತ್ತು ನಾಶವಾಗುತ್ತದೆ. ಅಲ್ಲಿರುವ ವನ್ಯಜೀವಿಗಳು, ಮಳೆಯ ಕಾಡುಗಳು ಶಾಶ್ವತವಾಗಿ ಕಣ್ಮರೆಯಾಗಲಿವೆ.


‘ಪರಿಸರ-ಅಭಿವೃದ್ಧಿ’ ಮೇಲಿನ ಚರ್ಚೆ ಇಂದು ನಿನ್ನೆಯದಲ್ಲ, ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾದದ್ದೂ ಅಲ್ಲ. ವಿಶ್ವದಾದ್ಯಂತ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ ಸಂಪತ್ತು ನಾಶವಾಗಿದ್ದು ನಿಜ. ಅದೇ ರೀತಿ ಭಾರತದ ಬಹುಪಾಲು ಅಭಿವೃದ್ಧಿ ಯೋಜನೆಗಳು ಇಲ್ಲಿನ ಅರಣ್ಯ ನಾಶಕ್ಕೆ ಸಾಕಷ್ಟು ಕೊಡುಗೆ ನೀಡಿವೆ.

ಹಾಗಂತ ಅರಣ್ಯವನ್ನು ನಾಶಮಾಡಬೇಕೆಂಬುದೇ ಅಭಿವೃದ್ಧಿ ಯೋಜನೆಗಳ ಉದ್ದೇಶವಾಗಿರುವುದಿಲ್ಲ. ನಾವು ಕೈಗೊಂಡ ಎಲ್ಲ ಅಭಿವೃದ್ಧಿ ಯೋಜನೆಗಳ ಹಿಂದೆಯೂ ಆರ್ಥಿಕ ಲಾಭದ ಉದ್ದೇಶವಿರುತ್ತದೆ.

ಹಾಗೆ ಬರುವ ಆರ್ಥಿಕ ಸಂಪತ್ತು ಮತ್ತು ಇನ್ನಿತರ ಲಾಭಗಳ ಮೂಲಕ ಜನರ ಬದುಕನ್ನು ಇನ್ನಷ್ಟು ಸಹನೀಯಗೊಳಿಸುತ್ತದೆ ಎಂದು ಯೋಜನೆಯ ಪ್ರತಿಪಾದಕರು ನಂಬಿರುತ್ತಾರೆ. ಆದರೆ ಜನರ ಬದುಕನ್ನು ಹೆಚ್ಚು ಸುಖಮಯಗೊಳಿಸುವ ಈ ಪ್ರಕ್ರಿಯೆಯಲ್ಲಿ ಪರಿಸರ ಸರಿಪಡಿಸಲಾರದಷ್ಟು ನಾಶಗೊಂಡಿರುತ್ತದೆ.

ಜಗತ್ತಿನ ಎಲ್ಲ ದೇಶಗಳಲ್ಲಿ ಆರ್ಥಿಕ ತಜ್ಞರು ಅಭಿವೃದ್ಧಿಯನ್ನು ಅಳೆಯುವುದು ದೇಶದ ಒಟ್ಟೂ ಆಂತರಿಕ ಉತ್ಪನ್ನದ (ಜಿಡಿಪಿ) ಆಧಾರದಲ್ಲಿ. ಹಾಗಾಗಿಯೇ ದೇಶವನ್ನಾಳುವವರು ‘ಅಭಿವೃದ್ಧಿ’ ಎಂದಾಕ್ಷಣ ಜಿಡಿಪಿ ದರವನ್ನು ಹೆಚ್ಚಿಸುವ ಸರಳ ತೀರ್ಮಾನಕ್ಕೆ ಬರುತ್ತಾರೆ.

ಹೆಚ್ಚಿನ ಜಿಡಿಪಿ ದರಕ್ಕಾಗಿ ಹೆಚ್ಚು ವಿದ್ಯುತ್ ಶಕ್ತಿ, ಹೆಚ್ಚು ಕೈಗಾರಿಕೆಗಳು, ಹೆಚ್ಚು ದುಡಿಯುವ ವರ್ಗ, ಹೆಚ್ಚು ಸಂಪನ್ಮೂಲಗಳ ಬಳಕೆ... ಎಲ್ಲಾ ಜಿಡಿಪಿಯ ಹೆಚ್ಚಳಕ್ಕಾಗಿ. ಅರ್ಥಾತ್ ಅಭಿವೃದ್ಧಿಗಾಗಿ. ಎಲ್ಲಿಯೂ ಅರಣ್ಯ ಪ್ರದೇಶದ ಹೆಚ್ಚಳದಿಂದ ದೇಶ ಅಭಿವೃದ್ಧಿಯೆಡೆಗೆ ಸಾಗಿತು ಎಂದು ವ್ಯಾಖ್ಯಾನಿಸುವುದಿಲ್ಲ.

ಅಭಿವೃದ್ಧಿ ಎಂದರೆ ಇದು, ಇದಲ್ಲ ಎಂದು ವ್ಯಾಖ್ಯಾನಿಸುವಲ್ಲಿನ ಸಮಸ್ಯೆ ಎಂದರೆ, ಇವತ್ತಿನವರೆಗೂ ನಮ್ಮಲ್ಲಿ ಪರಿಸರವನ್ನು ಸಂಪತ್ತು ಎಂದು ಗ್ರಹಿಸುವ ಪರಿಪಾಠ ಬೆಳೆದಿಲ್ಲ.

ಸುಮ್ಮನೆ ಬಾಯಿಮಾತಿಗೆ ‘ಪರಿಸರ ಸಂಪತ್ತು’ ಎನ್ನಲಾಗುತ್ತಿದೆಯೇ ಹೊರತು, ಅಭಿವೃದ್ಧಿಯ ವಿಚಾರಗಳ ಬಗ್ಗೆ ಮಾತನಾಡುವಾಗ ಪರಿಸರ ನಮಗೆ ಸಂಪತ್ತಾಗಿ ಕಾಣಿಸುತ್ತಿಲ್ಲ. ಅರಣ್ಯೀಕರಣ ನಮ್ಮ ಸಂಪತ್ತನ್ನು ಹೆಚ್ಚು ಮಾಡುವ ಪ್ರಕ್ರಿಯೆ ಎಂದು ನಾವು ಇಂದಿಗೂ ತಿಳಿದುಕೊಂಡಿಲ್ಲ. ಹಾಗಾಗಿಯೇ ‘ಅಭಿವೃದ್ಧಿಯ ಹಾದಿಯಲ್ಲಿ ಸ್ವಲ್ಪ ಮಟ್ಟಿಗೆ ಪರಿಸರ ನಾಶವಾಗುತ್ತದೆ’ ಎಂಬ ಜಾಳುಜಾಳಾದ ಮಾತುಗಳನ್ನಾಡುತ್ತೇವೆ.

ನಾಲ್ಕು ಹೆಜ್ಜೆ ಮುಂದೆ ಹೋಗಿ ಆರು ಹೆಜ್ಜೆ ಹಿಂದೆ ಬರುವುದು ಮುನ್ನಡೆಯಾಗುತ್ತದೆಯೇ? ಹಾಗೆಯೇ, ಜಲವಿದ್ಯುತ್, ಅಣುವಿದ್ಯುತ್ ಎಂದು ಅಳಿದುಳಿದ ಅರಣ್ಯ ಸಂಪತ್ತನ್ನು ನಾಶಮಾಡುವುದು ಅಭಿವೃದ್ಧಿ ಹೇಗಾಗುತ್ತದೆ?

ನಿಜ, ನೂರು ಕೋಟಿಗೂ ಮಿಕ್ಕಿದ ಜನಸಂಖ್ಯೆ ಇರುವ ಈ ದೇಶದ ಇಂಧನ ಬೇಡಿಕೆ ಅಗಾಧವಾದದ್ದು. ಅದನ್ನು ಪೂರೈಸಲೇಬೇಕು. ಈಗಿರುವ ತಂತ್ರಜ್ಞಾನದಲ್ಲಿ ಸೌರವಿದ್ಯುತ್ ಉಪಯೋಗಿಸಿ ಇಡೀ ದೇಶದ ಇಂಧನ ಬೇಡಿಕೆಯನ್ನು ಪೂರೈಸುವುದು ಆಗದ ಕೆಲಸ.

ಸದ್ಯದ ಪರಿಸ್ಥಿತಿಯಲ್ಲಿ ದೇಶದ ಇಂಧನ ಬಳಕೆಯನ್ನು ತಗ್ಗಿಸಿ, ಸಂಪನ್ಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡದ ಹೊರತು ಅನ್ಯಮಾರ್ಗವಿಲ್ಲ ಎಂಬ ಮಾತನ್ನು ಅನೇಕ ವಿಜ್ಞಾನಿಗಳು ಹೇಳುತ್ತಿದ್ದಾರೆ.

ದೇಶವಾಸಿಗಳ ಆರೋಗ್ಯಯುತ ಬದುಕಿಗೆ ದೇಶದ ಒಟ್ಟೂ ವಿಸ್ತೀರ್ಣದ ಶೇಕಡಾ 33ರಷ್ಟು ಅರಣ್ಯ ಪ್ರದೇಶ ಇರಲೇಬೇಕು. ಆದರೆ ನಮ್ಮ ದೇಶದಲ್ಲಿ ಇದು ಶೇಕಡಾ 20ರ ಆಸುಪಾಸಿನಲ್ಲಿದೆ. ಈಗಿರುವ ಪರಿಸರವನ್ನೂ ನಾಶಮಾಡಿ ಹೆಚ್ಚು ವಿದ್ಯುತ್, ಹೆಚ್ಚಿನ ಸೌಕರ್ಯ ಎಂದು ಮಾತನಾಡುತ್ತ ಕುಳಿತರೆ ದೇಶವಾಸಿಗಳ ನೆಮ್ಮದಿಯ ಬದುಕೇ ಹಾಳಾಗುತ್ತದೆ.

ಆಗ ಯಾವ ಸೀಮೆಯ ಅಭಿವೃದ್ಧಿಯ ಮಾತನಾಡುವುದು? ಜಿಡಿಪಿ ಎರಡಂಕಿಯಿಂದ ಮೂರಂಕಿಗೆ ಜಿಗಿದರೂ ಅಂಥದೊಂದು ಪರಿಸ್ಥಿತಿಯನ್ನು ಅಭಿವೃದ್ಧಿ ಎಂದು ಕರೆಯಲಾಗದು.

ಅಭಿವೃದ್ಧಿಯ ತಪ್ಪು ಕಲ್ಪನೆಯನ್ನು ಮುಂದಿಟ್ಟುಕೊಂಡು ನಾಗಾಲೋಟದಲ್ಲಿ ಓಡಿದ ನಾವು ಈಗ ಭೂ ತಾಪಮಾನ ಏರಿಕೆಯಂತಹ ವಿಚಾರದ ಬಗ್ಗೆ ಆಲೋಚಿಸಲಾರಂಭಿಸಿದ್ದೇವೆ. ಇದೇ ವೇಗದಲ್ಲಿ ಭೂಮಿಯ ತಾಪಮಾನ ಏರಿಕೆಯಾಗಿ ಮುಂದೊಂದು ದಿನ ಭುವಿಯ ಮೇಲಿನ ಬದುಕೇ ಅಸಹನೀಯವಾದರೆ, ಆಗ ಜಿಡಿಪಿ ಎಷ್ಟೇ ಹೆಚ್ಚಿರಲಿ, ಅಂಥದೊಂದು ಸಂದರ್ಭವನ್ನು ಅಭಿವೃದ್ಧಿಯೆಂದು ಕರೆಯಲು ಸಾಧ್ಯವೇ?

ಭಾರತದಲ್ಲಿ ಸ್ವಾತಂತ್ರ್ಯಾನಂತರ ನಡೆದ ಅಭಿವೃದ್ಧಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು ದೇಶದ ಪ್ರಪ್ರಥಮ ಪ್ರಧಾನಿ ನೆಹರೂ ಅವರು. ಆಗ ಇಡೀ ವಿಶ್ವ ಅಭಿವೃದ್ಧಿ ಎಂದರೆ ಕೈಗಾರಿಕೀಕರಣ, ಉದ್ಯೋಗಸೃಷ್ಟಿ ಮತ್ತು ಆರ್ಥಿಕ ಸಂಪತ್ತಿನ ಹೆಚ್ಚಳ ಎಂಬ ನಂಬಿಕೆಯಲ್ಲಿದ್ದ ಕಾಲ. ನೆಹರೂ ಕೂಡ ಇಡೀ ಜಗತ್ತು ಏನು ಮಾಡುತ್ತಿತ್ತೋ ಅದನ್ನೇ ಮಾಡಿದರು. ಅಭಿವೃದ್ಧಿ ಮತ್ತು ಪರಿಸರ ಎಂಬ ವಿಶ್ವವ್ಯಾಪಿ ಚರ್ಚೆ ಆರಂಭವಾಗಿದ್ದೇ 60 ಮತ್ತು 70ರ ದಶಕದ ನಂತರ. ಆ ವೇಳೆಗಾಗಲೇ ದೇಶದಲ್ಲಿ ನೆಹರೂ ಯುಗ ಮುಗಿದುಹೋಗಿತ್ತು. ಹಾಗಾಗಿ ನೆಹರೂ ಅವರು ದೇಶದಲ್ಲಿ ಪರಿಸರ ನಾಶಕ್ಕೆ ಕಾರಣವಾಗಬಲ್ಲ ಅಭಿವೃದ್ಧಿ ನೀತಿಯನ್ನು ಅನುಸರಿಸಿದರು ಎಂದು ವಾದಿಸುವ ಅಗತ್ಯವಿಲ್ಲ.

ನಾವು ಪ್ರಸ್ತುತ ಅಭಿವೃದ್ಧಿಯನ್ನು ಅರ್ಥೈಸುತ್ತಿರುವ ವಿಧಾನವೇ ಬದಲಾಗಬೇಕಿದೆ. ಅಭಿವೃದ್ಧಿ ಎಂದರೆ ಮನುಷ್ಯನ ಬದುಕನ್ನು ಹೆಚ್ಚು ಸಹನೀಯಗೊಳಿಸುವುದು. ಪರಿಸರ ಸಂರಕ್ಷಿತವಾದಂತೆಲ್ಲಾ ವಸುಂಧರೆಯ ಮೇಲಿನ ಬದುಕು ಹೆಚ್ಚು ಹೆಚ್ಚು ಸಹ್ಯವಾಗುತ್ತದೆ. ಅರಣ್ಯಸಂಪತ್ತಿನ ಹೆಚ್ಚಳ ಎಂದರೆ ಅದು ನಮ್ಮದೇ ಸಂಪತ್ತಿನ ಹೆಚ್ಚಳ. ಆದಾಯ ಹೆಚ್ಚಳದಿಂದ ನಮ್ಮ ಬದುಕು ಬದಲಾಗುವುದು ನಿಜ. ಹಾಗೆಯೇ ಪರಿಸರ ಸಂರಕ್ಷಣೆಯಿಂದ ಇಡೀ ಭೂಮಿಯ ಬದುಕು ಸುಂದರವಾಗುತ್ತದೆ. ಹೀಗೊಂದು ಅಭಿವೃದ್ಧಿಯ ಪರಿಕಲ್ಪನೆಯನ್ನು ನಮ್ಮದಾಗಿಸಿಕೊಂಡರೆ ನೆಮ್ಮದಿಯ ನಾಳೆ ನಮ್ಮದಾಗಲು ಸಾಧ್ಯ.

ವಿಜಯ್ ಜೋಷಿ.

ಅಕ್ಟೋಬರ್ ೧೪, ೨೦೧೦ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ.

Tuesday, October 05, 2010

ಕನ್ನಡದ ಸಮಸ್ತ ಬರಹಗಾರರಿಗೆ...

ಆದರಪೂರ್ವಕ ನಮನಗಳು. ಕನ್ನಡ ಬರಹಗಾರರು ಅಂತ ನಾನು ಸಂಬೋಧಿಸಿದ್ದು ಪತ್ರಿಕೆ-ನಿಯತಕಾಲಿಕೆಗಳ ಮೂಲಕ, ಬ್ಲಾಗು/ವೆಬ್‌ಸೈಟುಗಳ ಮೂಲಕ, ಪುಸ್ತಕಗಳ ಮೂಲಕ ಕನ್ನಡದಲ್ಲಿ ಬರೆಯುತ್ತಿರುವ ಪ್ರತಿಯೊಬ್ಬ ಹಿರಿಕಿರಿಯ ಬರಹಗಾರರನ್ನು.

ಒಂದು ಘಟನೆ ನೆನಪಿಗೆ ಬರುತ್ತಿದೆ. ಕನ್ನಡದ ಹೆಮ್ಮೆಯ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರಿಗೆ ಸಂಬಂಧಿಸಿದ್ದು. ಹೊಸ ಸಹಸ್ರಮಾನವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಲೆಂದು ತೇಜಸ್ವಿ ‘ಮಿಲೆನಿಯಮ್’ ಸರಣಿ ಪುಸ್ತಕಗಳನ್ನು ಬರೆದರಷ್ಟೇ. ವಿಶ್ವದ ಅಸಂಖ್ಯ ಕೌತುಕಗಳನ್ನು, ವಿವಿಧ ನಾಗರೀಕತೆಗಳು ನಡೆಸಿದ ‘ಜೀವನ ಸಂಗ್ರಾಮ’ಗಳನ್ನು, ಪ್ರಪಂಚ ಕಂಡ ಮಹಾಯುದ್ಧಗಳನ್ನು ಕನ್ನಡದ ಮೂಲಕವೇ ಓದುಗರಿಗೆ ಪರಿಚಯಿಸುವ ವಿನೂತನ ಪ್ರಯತ್ನವದು. ಕನ್ನಡ ಪುಸ್ತಕಲೋಕ ಕಂಡ ಬಹಳ ವಿಶಿಷ್ಟ ಕೈಂಕರ್ಯ ತೇಜಸ್ವಿ ಮತ್ತು ಅವರ ಸಂಗಡಿಗರು ಹೊರತಂದ ಮಿಲೆನಿಯಮ್ ಸರಣಿ ಪುಸ್ತಕಗಳು.

ತೇಜಸ್ವಿಯವರ ಈ ಪುಸ್ತಕ ಸರಣಿಯ ಪ್ರಕಟಣೆ ಆರಂಭವಾಗುತ್ತಿದ್ದಂತೆಯೇ ಒಂದು ವರ್ಗದಿಂದ ಕೂಗು ಆರಂಭವಾಯಿತು. ‘ತೇಜಸ್ವಿಯವರ ಸೃಜನಶೀಲ ಬರವಣಿಗೆ ಸತ್ತುಹೋಗುತ್ತಿದೆ’ ಎಂದು ಕೆಲವರು ವಾದಿಸತೊಡಗಿದರು. ಆದರೆ ಟೀಕೆಟಿಪ್ಪಣಿಗಳಿಗೆ ಸೊಪ್ಪು ಹಾಕದ ತೇಜಸ್ವಿ ತಮ್ಮ ಕಾಯಕ ಮುಂದುವರೆಸಿದರು; ಮಿಲೆನಿಯಮ್ ಸರಣಿಯ 16 ಪುಸ್ತಕಗಳನ್ನು ಕನ್ನಡಿಗರಿಗೆ ಕೊಟ್ಟರು. ಕನ್ನಡಿಗರಿಗೆ ವಿಶ್ವದರ್ಶನ ಮಾಡಿಸಿದ ಪುಣ್ಯ ಅವರದ್ದು.



ಅಂದಹಾಗೆ, ಯಾವುದು ಸೃಜನಶೀಲ ಸಾಹಿತ್ಯ? ಯಾವುದು ಸೃಜನೇತರ ಸಾಹಿತ್ಯ? ಕಥೆ, ಕಾದಂಬರಿ, ನಾಟಕ, ಕವನಗಳು ಮಾತ್ರ ಸೃಜನಶೀಲವೆ? ಉಳಿದ ಪ್ರಕಾರಗಳೆಲ್ಲ ಸೃಜನೇತರ ಎಂದು ಷರಾ ಬರೆದದ್ದು ಯಾರು? ಯಾಕೆ? ಸೃಜನಶೀಲ-ಸೃಜನೇತರ ಎಂದು ತೇಜಸ್ವಿ ಯೋಚಿಸುತ್ತಾ ಕುಳಿತಿದ್ದರೆ ನಮಗೆಲ್ಲಿ ಸಿಗುತ್ತಿದ್ದವು ಮಿಲೆನಿಯಮ್ ಪುಸ್ತಕಗಳು? ಸೃಜನೇತರ ಎಂದು ಕರೆಸಿಕೊಂಡ ಬರವಣಿಗೆಯನ್ನು ನಿರ್ಲಕ್ಷಿಸಿದ ಕಾರಣ ಕನ್ನಡ ತೆತ್ತ ಬೆಲೆ ಸಾಮಾನ್ಯದ್ದಾ?


ನಾನು ಹೇಳಲಿಕ್ಕೆ ಹೊರಟಿರುವುದು ತೇಜಸ್ವಿಯವರ ಮಿಲೆನಿಯಮ್ ಸರಣಿಯ ಪುಸ್ತಕಗಳ ಬಗ್ಗೆ ಮಾತ್ರ ಅಲ್ಲ. ಪ್ರಸ್ತುತ ಪರಿಸ್ಥಿತಿ ಹೇಗಿದೆಯೆಂದರೆ, ಯುವ ಬರಹಗಾರನೊಬ್ಬ ಕನ್ನಡದಲ್ಲಿ ಬರೆಯುತ್ತಿದ್ದಾನೆ ಎಂದರೆ ಆತ ಒಂದೋ ಕಥೆ, ಕವನ ಅಥವಾ ಕಾದಂಬರಿ (ಅಪರೂಪದ ಸಂದರ್ಭದಲ್ಲಿ) ಬರೆಯುತ್ತಿದ್ದಾನೆ ಎಂದು ಅರ್ಥೈಸಬೇಕಾಗುತ್ತದೆ. ವಿಜ್ಞಾನ, ಇತಿಹಾಸ, ಅರ್ಥಶಾಸ್ತ್ರ, ಕಂಪ್ಯೂಟರ್ ತಂತ್ರಜ್ಞಾನ, ಭೌತವಿಜ್ಞಾನ, ರಸಾಯನವಿಜ್ಞಾನ- ಇವುಗಳಲ್ಲಿ ಒಂದಾದರೂ ವಿಷಯದ ಬಗ್ಗೆ ಬರೆಯುವ ಯುವ ಬರಹಗಾರರೊಬ್ಬರ ಹೆಸರು ನೆನಪು ಮಾಡಿಕೊಳ್ಳಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇವತ್ತಿನದು.

ಇಂಗ್ಲಿಷಿನಲ್ಲಿ ನೋಡಿ: ಎಲ್ಲ ವಯೋಮಾನದ ಓದುಗನಿಗೂ ಅಗತ್ಯವಾದ ಪುಸ್ತಕಗಳ ರಾಶಿಯೇ ಸಿಗುತ್ತದೆ. 2-4, 4-6, 6-9, ಹೀಗೆ ಆಯಾ ವಯೋಮಾನದವರು ಓದಬಹುದಾದ ಪುಸ್ತಕಗಳು ದೊಡ್ಡ ಸಂಖ್ಯೆಯಲ್ಲಿ ಇಂಗ್ಲಿಷ್‌ನಲ್ಲಿ ಲಭ್ಯ. ಇದರಿಂದಾಗಿ ಇಂಗ್ಲಿಷ್ ಬಲ್ಲ ಮಕ್ಕಳಿಗೆ ಎಳೆ ವಯಸಿನಲ್ಲೇ ಓದು ಆಪ್ತವೆನ್ನಿಸುತ್ತೆ. ಆದರೆ ಕನ್ನಡದಲ್ಲಿ?

ಬೆರಳೆಣಿಕೆಯ ಆಕರ್ಷಕ ಪುಸ್ತಕಗಳನ್ನು ಬಿಟ್ಟರೆ (ಉದಾ: ಬೊಳುವಾರು ಮಹಮದ್ ಕುಂಞಿ ಅವರ ‘ಪಾಪು ಗಾಂಧಿ ಬಾಪು ಗಾಂಧಿ ಆದ ಕತೆ’) ವಿವಿಧ ವಯೋಮಾನದ ಮಕ್ಕಳು ಓದುವಂತಹ ಪುಸ್ತಕಗಳೇ ನಮ್ಮಲ್ಲಿ ಲಭ್ಯವಿಲ್ಲ. ಶಿಶು ಸಾಹಿತ್ಯ ಕನ್ನಡದಲ್ಲಿ ಬಡವಾಗಲು ಕಾರಣವೇನು? ಓದುವವರಿಲ್ಲವೋ ಅಥವಾ ಬರೆಯುವರಿಲ್ಲವೋ? ಶಿಶು ಸಾಹಿತ್ಯ ಅಂದಕೂಡಲೇ ಅದು ಕಥೆ, ಕವಿತೆಯೇ ಆಗಬೇಕಿಲ್ಲ. ಪರಿಸರ, ಕಾಡು, ಅಂತರಿಕ್ಷ ಮುಂತಾದ ಬೆರಗು ಹುಟ್ಟಿಸುವ ವಿಷಯಗಳ ಬಗ್ಗೆ ಮಕ್ಕಳಿಗೆ ಅರ್ಥವಾಗುವಂತೆ ಬರೆಯುವವರು ಕನ್ನಡದಲ್ಲಿ ಯಾರಿದ್ದಾರೆ? ಎಲ್ಲಿದ್ದಾರೆ?

ಚಿಕ್ಕ ವಯಸ್ಸಿನವರಿಗೆ ಕನ್ನಡದಲ್ಲಿ ಓದಿನ ರುಚಿ ಹಿಡಿಸುವಂಥ ಪುಸ್ತಕಗಳ ಅಭಾವ, ವಯಸ್ಸು ಹೆಚ್ಚಾದಂತೆಲ್ಲಾ ಅವರು ಕನ್ನಡ ಪುಸ್ತಕಗಳಿಂದ ವಿಮುಖವಾಗುವಂತೆ ಮಾಡಬಹುದು. ಹಾಗೊಂದು ವೇಳೆ ಆ ಮಗು ಕನ್ನಡ ಓದುಗನಾಗಿಯೇ ಉಳಿದುಕೊಂಡರೂ- ಆಧುನಿಕ, ವಿಜ್ಞಾನ ವಿಷಯಗಳಲ್ಲಿನ ಕನ್ನಡ ಪುಸ್ತಕಗಳ ಕೊರತೆ ಆತನನ್ನು ಇಂಗ್ಲಿಷಿನೆಡೆಗೆ ಗಮನಹರಿಸುವಂತೆ ಮಾಡಬಲ್ಲದು.

ಇವತ್ತಿನ ಕನ್ನಡ ಬ್ಲಾಗುಗಳನ್ನೊಮ್ಮೆ ನೋಡಿ. ಹೊಸ ಬರಹಗಾರರು ಮುಕ್ತವಾಗಿ ಬ್ಲಾಗುಗಳ ಮೂಲಕ ಬರೆಯುತ್ತಿದ್ದಾರೆ ಎಂಬುದನ್ನು ಬಿಟ್ಟರೆ, ಹೆಚ್ಚಿನ ಬ್ಲಾಗ್ ಬರಹಗಳು ಅಧ್ಯಯನದ ಬಲವಿಲ್ಲದ, ವೈಯುಕ್ತಿಕ ವಿಚಾರಗಳ ಸರಕು. ಯಾವ ವಿಚಾರದ ಬಗ್ಗೆ ಬೇಕಾದರೂ ಬರೆಯುವ ಸ್ವಾತಂತ್ರ್ಯ ಅವರಿಗಿದೆ, ನಿಜ. ಆದರೆ ಅನುಭವ, ಅಧ್ಯಯನ ಎರಡೂ ಇಲ್ಲದ ಕೇವಲ ವೈಯುಕ್ತಿಕ ಖಯಾಲಿಗಳಿಂದ ಯಾರಿಗೆ ಲಾಭ?

ಇತ್ತೀಚೆಗೆ ನಡೆದ ‘ಅಕ್ಕ’ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ವಿದ್ವಾಂಸರಾದ ಡಾ.ಎಂ.ಎಂ.ಕಲಬುರ್ಗಿ ಅವರು ಕನ್ನಡದ ‘ಕಲ್ಪನಾ ಸಾಹಿತ್ಯ’ದ ಮೇಲೆ ಚಾಟಿ ಬೀಸಿದ್ದು ಇಂಥ ಪುಸ್ತಕ ವೈವಿಧ್ಯದ ಅಭಾವ ಕಂಡೇ ಇರಬೇಕು. ಆಧುನಿಕ ವಿಜ್ಞಾನ, ಖಗೋಳ ವಿಜ್ಞಾನ, ರಾಜಕೀಯ ಮುಂತಾದ ವಿಚಾರಗಳಲ್ಲಿ ಕನ್ನಡದಲ್ಲಿ ವಿಪುಲ ಸಾಹಿತ್ಯ ಬಾರದಿರಲು ಕಾರಣವೇನು? ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಗಳಲ್ಲಿಯೂ ‘ಬರಹಗಾರರು’ ಎಂದು ಮಿಂಚುವವರು ಕತೆ, ಕವನ, ಕಾದಂಬರಿ ಪ್ರಕಾರಗಳಲ್ಲಿ ಬರೆಯುವವರೇ ವಿನಾ ವಿಜ್ಞಾನ, ಇತಿಹಾಸ, ಅರ್ಥಶಾಸ್ತ್ರ, ಪರಿಸರದ ಬಗ್ಗೆ ಬರೆಯುವವರಲ್ಲ. ಅಂಥವರು ‘ಸಾಹಿತಿ’ ಎಂದು ಪರಿಗಣಿತವಾಗುವುದಿಲ್ಲ. ಇದು ಈ ಹೊತ್ತಿನ ವಿಪರ್ಯಾಸ.

ಹಿಂದೆ ತೇಜಸ್ವಿಯವರೇ ಒಂದು ಮಾತು ಬರೆದಿದ್ದರು: ‘ಕನ್ನಡದಲ್ಲಿ ಏನೂ ಇಲ್ಲ ಅನ್ನುವವರೂ, ಕನ್ನಡದಲ್ಲಿ ಎಲ್ಲವೂ ಇದೆ ಅನ್ನುವವರು ಒಟ್ಟಿಗೆ ಕುಳಿತು ಕನ್ನಡದ ಮುಂದಿರುವ ಸವಾಲುಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು’. ಕನ್ನಡದ ಮೂಲಕವೇ ವಿಶ್ವವನ್ನು ಓದಲು, ಗ್ರಹಿಸಲು ಸಾಧ್ಯವಾಗಬೇಕು ಎಂಬುದೂ ತೇಜಸ್ವಿಯವರ ಆಶಯವಾಗಿತ್ತು. ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕು, ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾಗದ ಹೊರತು ಕನ್ನಡಕ್ಕೆ ಉಳಿವಿಲ್ಲ ಎಂಬುದನ್ನು ತೇಜಸ್ವಿ ಎಂದೋ ಹೇಳಿದ್ದರು.

ಗೂಗಲ್‌ಗೆ ಹೋಗಿ ಇಂಗ್ಲಿಷಿನಲ್ಲಿ ‘ಲಿಟರೇಚರ್’ ಅಂತ ಟೈಪ್ ಮಾಡಿದರೆ ಲಕ್ಷಗಟ್ಟಲೆ ಪುಟಗಳು ತೆರೆದುಕೊಳ್ಳುತ್ತವೆ. ಕನ್ನಡದಲ್ಲಿ ‘ಸಾಹಿತ್ಯ’ ಎಂದು ಟೈಪ್ ಮಾಡಿ? ತೆರೆದುಕೊಳ್ಳುವ ಪುಟಗಳ ಸಂಖ್ಯೆ ನೂರನ್ನು ಮೀರುವುದಿಲ್ಲ. ಮಾಹಿತಿ ಸ್ಫೋಟದ ಈ ಯುಗದಲ್ಲಿ ಕನ್ನಡದಲ್ಲಿ ಅಗತ್ಯ ಮಾಹಿತಿ ಸಿಗುವುದಿಲ್ಲ ಎಂದಾದರೆ ಯಾರು ತಾನೇ ಕನ್ನಡದ ಬಳಕೆಯನ್ನು ಹೆಚ್ಚಿಸಿಯಾರು? ವಿವಿಧ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ‘ಬರೆಯಬಲ್ಲ’ ಪ್ರತಿಭಾನ್ವಿತರನ್ನು ನಾವು ಪ್ರೋತ್ಸಾಹಿಸದೇ ಇದ್ದರೆ ಕನ್ನಡದ ಭವಿಷ್ಯ ಏನಾದೀತು? ಇಂಗ್ಲಿಷ್‌ನಿಂದಾಗಿ ಕನ್ನಡ ಹಾಳಾಯಿತು ಎಂಬ ಕೂಗಿಗೆ ಅರ್ಥವಾದರೂ ಇದೆಯೇ?

ಸೃಜನಶೀಲವೋ, ಸೃಜನೇತರವೋ; ವಿವಿಧ ಕೇತ್ರಗಳ ಬಗೆಗಿನ ಮಾಹಿತಿಯನ್ನು ಕನ್ನಡಲ್ಲಿ ಬರೆಯುವ ಕಾರ್ಯ ಮೊದಲಾಗಬೇಕು. ಕತೆ, ಕವಿತೆ ಬರೆಯುವವರನ್ನು ವಿವಿಧ ಸ್ಪರ್ಧೆಗಳ ಮೂಲಕ ಗುರುತಿಸಿ, ಗೌರವಿಸುವಂತೆ ಗಹನ ಅಧ್ಯಯನದ ಆಧಾರದಲ್ಲಿ ಮಾಹಿತಿ, ವಿಶ್ಲೇಷಣೆ ಬರೆಯುವವರನ್ನೂ ಗುರುತಿಸುವ, ಬೆಳೆಸುವ, ಗೌರವಿಸುವ ಕೆಲಸ ಆಗಬೇಕು- ಕನ್ನಡ ಬೆಳೆಯಬೇಕು ಎಂಬ ಆಸೆ ನಮಗಿದ್ದರೆ.

ಇಂತೀ ತಮ್ಮ ವಿಶ್ವಾಸಿ,
-ವಿಜಯ್ ಜೋಷಿ
ಅಕ್ಟೋಬರ್ ೩, ೨೦೧೦ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.

Tuesday, September 28, 2010

ಅನ್ನ ಕೊಡುವ ಭಾಷೆಯಾಗಲಿ ಕನ್ನಡ

ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಕನ್ನಡ ರಾಜ್ಯೋತ್ಸವ ಬರಲಿದೆ. ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಕುರಿತು ಭರ್ಜರಿಚರ್ಚೆಗಳು ರಾಜ್ಯದಾದ್ಯಂತ ನಡೆಯಲಿವೆ. ಹಾಗೆಯೇ ಕೆಲವು ದಿನಗಳಲ್ಲಿ ಚರ್ಚೆಗಳು ಮನಸ್ಸಿನ ಮೂಲೆ ಸೇರಲಿವೆ.

ಅದೇನೇ ಇರಲಿ, ಕೆಳಗಿನ ಒಂದಷ್ಟು ಸಂಗತಿಗಳನ್ನು ಗಮನಿಸಿ. ಕರ್ನಾಟಕದಲ್ಲಿ ಇಂಗ್ಲಿಷ್ಗೆಂದೇ ಪ್ರತ್ಯೇಕ ವಿಶ್ವವಿದ್ಯಾಲಯಇಲ್ಲ. ಇಂಗ್ಲಿಷ್ ಪುಸ್ತಕ ಪ್ರಾಧಿಕಾರ, ಇಂಗ್ಲಿಷ್ ಸಾಹಿತ್ಯ ಪರಿಷತ್ತು, ಇಂಗ್ಲಿಷ್ ಕಾವಲು ಪಡೆ, ಇಂಗ್ಲಿಷ್ ಮತ್ತು ಸಂಸ್ಕೃತಿ ಇಲಾಖೆ... ಇವ್ಯಾವುದೂ ಇಲ್ಲ. ಯಾವುದೇ ರೀತಿಯ ಸರಕಾರಿ ಕೃಪೆ ಮತ್ತು ಮೇಲೆ ತಿಳಿಸಿದ ಅನೇಕ ಇಲ್ಲಗಳ ಹೊರತಾಗಿಯೂ ಇವತ್ತುಇಂಗ್ಲಿಷ್ ಭಾಷೆ ಕನ್ನಡ ಭಾಷೆಗೆ ಸಡ್ಡು ಹೊಡೆದು ನಿಂತಿದೆ. ರಾಜಧಾನಿಯಲ್ಲೇ ಇಬ್ಬರು ಅಪರಿಚಿತರು ಎದುರಾದರೆಮಾತನಾಡುವುದು ಇಂಗ್ಲಿಷ್ನಲ್ಲಿ ಎಂಬಷ್ಟರ ಮಟ್ಟಿಗೆ ಭಾಷೆ ಬೆಳೆದಿದೆ.

ಇದಕ್ಕೆ ಕಾರಣ ಹುಡುಕುವುದು ಕಷ್ಟದ ಸಂಗತಿಯೇನಲ್ಲ. ಕೆಲವೇ ವರ್ಷಗಳ ಹಿಂದಿನವರೆಗೆ ಒಂದು ರೀತಿಯಲ್ಲಿ ಫ್ಯಾಷನ್ ಮಾತ್ರಆಗಿದ್ದ ಇಂಗ್ಲಿಷ್ ಇವತ್ತು ತನ್ನ ಭಾಷಿಗನನ್ನು ಹೊಟ್ಟೆ ಹೊರೆಯುವ ಮಟ್ಟಕ್ಕೆ ಬೆಳೆದುನಿಂತಿದೆ. ಇವತ್ತು ಮುಗಿಬಿದ್ದು ಇಂಗ್ಲಿಷ್ಕಲಿಯುತ್ತಿರುವವರೆಲ್ಲರೂ ಇಂಗ್ಲಿಷ್ ಸಾಹಿತ್ಯ, ಷೆಕ್ಸ್ಪಿಯರ್ ಮೇಲಿನ ಪ್ರೀತಿಯಿಂದ ಭಾಷೆಯನ್ನು ಕಲಿಯುತ್ತಿಲ್ಲ. ಇಂಗ್ಲಿಷ್ಕಲಿತರೆ ಕೆಲಸ ಸಿಗುತ್ತದೆ, ಇಂಗ್ಲಿಷ್ ಭಾಷೆ ಅನ್ನಕೊಡಬಲ್ಲ ಸಾಮರ್ಥ್ಯ ಹೊಂದಿದೆ ಎಂಬ ಕಾರಣಕ್ಕೆ ಅನೇಕರು ಇವತ್ತು ಇಂಗ್ಲಿಷ್ಪಠಣಕ್ಕೆ ಅಣಿಯಾಗಿದ್ದಾರೆ. (ಕೆಲವು ಅಪವಾದಗಳಿರಬಹುದು). ಕಾರಣಕ್ಕಾಗಿಯೇ ಇವತ್ತು ನೆಲದ ಭಾಷೆ ಕನ್ನಡವನ್ನುಮೀರಿಸಿ ಇಂಗ್ಲಿಷ್ ಬೆಳೆಯುತ್ತಿದೆ.

ಕೇವಲ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಸಂವಹನ ಮಾಡಬಲ್ಲ ವ್ಯಕ್ತಿ - ಬೇರೆ ಯಾವ ಕೌಶಲಗಳು ಇಲ್ಲದಿದ್ದರೂ ಇವತ್ತು ತಿಂಗಳಿಗೆ೧೦ರಿಂದ ೧೫ ಸಾವಿರ ರೂಪಾಯಿ ಪಗಾರು ಎಣಿಸಬಲ್ಲ. ಇಂಗ್ಲಿಷ್ ಜೊತೆಗೆ ಇನ್ನು ಯಾವುದಾದರೂ ಕೌಶಲ ಆತನಿಗೆ ಸಿದ್ಧಿಸಿದರೆಅದೃಷ್ಟ ಖುಲಾಯಿಸಿದಂತೆಯೇ ಸರಿ.

ಅದೇ ಕನ್ನಡ ಮಾತ್ರ ತಿಳಿದಿರುವ ವ್ಯಕ್ತಿಯ ಪಾಡು? ಮೊದಲನೆಯದಾಗಿ ಆತನಿಗೆ (ಇಂಗ್ಲಿಷ್ ಬಾರದಿರುವ ಸಂದರ್ಭದಲ್ಲಿ) ಒಂದುಒಳ್ಳೆಯ ಕೆಲಸ ಸಿಗುತ್ತದೆ ಎಂಬ ಭರವಸೆ ಇಲ್ಲ. ಸಿಕ್ಕರೂ ಅದು ಆತನನ್ನು ಆರ್ಥಿಕವಾಗಿ ಗಟ್ಟಿಯಾಗಿಡುತ್ತದೆ ಎಂಬ ವಿಶ್ವಾಸ ಇಲ್ಲ. ಅಂದರೆ ಇಂದು ಕನ್ನಡ ಕರ್ನಾಟಕದಲ್ಲಿಯೇ ಅನ್ನ ಕೊಡುವ ಭಾಷೆಯಾಗಿ ಉಳಿದಿಲ್ಲ. ಇನ್ನು ಜನಸಾಮಾನ್ಯನಿಗೆ ಭಾಷೆಯ ಮೇಲೆಪ್ರೀತಿ ಎಲ್ಲಿಂದ ಬರಬೇಕು? ಮಾತೃಭಾಷೆಯ ಮೇಲಿನ ಪ್ರೀತಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹುಟ್ಟುವುದಿಲ್ಲ. ತಾಯಿಭಾಷೆಅನ್ನಕೊಡಲಾರದು ಎಂದು ತಿಳಿದಾಗ ಭಾಷೆಯನ್ನು ಕಲಿಯುವ ಅಗತ್ಯವಾದರೂ ಏನಿದೆ ಎಂಬ ಪ್ರಶ್ನೆ ಯಥೋಚಿತವಾಗಿಯೇಹುಟ್ಟುತ್ತದೆ. ಇಂಥ ಸಂದರ್ಭದಲ್ಲಿಯೇ ಕನ್ನಡ ಮಾಧ್ಯಮ ಶಾಲೆಗಳ ಮೇಲಿನ ಪ್ರೀತಿಗಿಂತ ಇಂಗ್ಲಿಷ್ ಶಾಲೆಗಳ ಮೇಲಿನ ಮೋಹವಿಜೃಂಭಿಸುತ್ತದೆ.

ಇವತ್ತಿಯ ಯುವ ಜನಾಂಗ ಭಾಷೆಯನ್ನು ಕೇವಲ ಸಾಹಿತ್ಯ, ಸಂವಹನದ ದೃಷ್ಟಿಯಿಟ್ಟುಕೊಂಡು ಮಾತ್ರ ಕಲಿಯುತ್ತಿಲ್ಲ. ಇವೆಲ್ಲಕ್ಕಿಂತಮಿಗಿಲಾಗಿ ಭಾಷೆ ತರಬಲ್ಲ ಆರ್ಥಿಕ ಸಮೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಓದುತ್ತಾರೆ (ಇದಕ್ಕೆ ಕೆಲವು ಅಪವಾದಗಳಿರಬಹುದು).

ಒಂದೆಡೆ ತನ್ನ ಭಾಷಿಗನಿಗೆ ವಿಪುಲ ಉದ್ಯೋಗಾವಕಾಶ ನೀಡಿ ಆರ್ಥಿಕವಾಗಿ ಸಧೃಡವಾಗಿಡುವ ಇಂಗ್ಲಿಷ್, ಇನ್ನೊಂದೆಡೆ ತನ್ನಕುಡಿಯನ್ನು ಆರ್ಥಿಕವಾಗಿ ಸಲಹುತ್ತೇನೆ ಎಂಬ ಯಾವುದೇ ಭರವಸೆ ಹುಟ್ಟಿಸದ ಕನ್ನಡ. ಇಂಥ ಇಕ್ಕಟ್ಟಿನ ಸಂದರ್ಭದಲ್ಲಿ ಯಾವಭಾಷೆಯನ್ನು ಕಲಿಯಬೇಕು? ಇಂಥ ಸಂದರ್ಭದಲ್ಲಿ ದಿನದ ಕೂಳಿಗಾಗಿ ಶ್ರಮ ವಹಿಸುವ ವ್ಯಕ್ತಿ ಆರ್ಥಿಕ ಸಮೃದ್ಧತೆ ತರಬಲ್ಲಭಾಷೆಯತ್ತಲೇ ಮುಖ ಮಾಡುತ್ತಾನೆ.

ಇದೇ ಕಾರಣಕ್ಕೇ ಇಂದು ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದರೆ ಇಂಗ್ಲಿಷ್ ಮಾಧ್ಯಮ ಶಾಲೆಗಳುಎಗ್ಗಿಲ್ಲದೆ ಬೆಳೆಯುತ್ತಿವೆ. ಅಪ್ಪಟ ಮಲೆನಾಡಿನ ಶಿರಸಿಯಿಂದ ೩೫ ಕಿಲೋ ಮೀಟರ್ ದೂರವಿರುವ ಹಳ್ಳಿಯೊಂದರಿಂದ ಕೆಲವು ಮಂದಿತಮ್ಮ ಮಕ್ಕಳನ್ನು ಇವತ್ತು ಶಿರಸಿಯ ಇಂಗ್ಲಿಷ್ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ತಮ್ಮ ಮಕ್ಕಳಾದರೂ ಇಂಗ್ಲಿಷ್ ಕಲಿತು ಒಳ್ಳೆಯನೌಕರಿ ಸಂಪಾದಿಸಲಿ ಎಂಬ ಆಸೆಯಿಂದ. ಪರಿಸ್ಥಿತಿ ಹೀಗೇ ಮುಂದುವರಿದರೆ ಇಂದು ಹಳ್ಳಿಗಳಲ್ಲಾದರೂ ಗಟ್ಟಿಯಾಗಿರುವ ಕನ್ನಡನಾಳೆ ಅಲ್ಲೂ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದೀತು. ಹಳ್ಳಿಗಾಡಿನಲ್ಲಿ ಬಲವಾದ ಓದುಗ ವೃಂದ ಹೊಂದಿರುವ ಕನ್ನಡಪತ್ರಿಕೆಗಳು ನಾಳೆ ಅಲ್ಲಿಯೂ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಸಂದರ್ಭ ಬಂದೀತು.

ಕನ್ನಡದ ಬಗ್ಗೆ ಗಂಭೀರವಾಗಿ ಚಿಂತಿಸುವ ಪ್ರತಿಯೊಬ್ಬರೂ ಇವತ್ತು ಕನ್ನಡ ಕಲಿತವನಿಗೊಂದು ಕೆಲಸ ಕೊಡಿಸುವ ಬಗ್ಗೆ ಚಿಂತಿಸಬೇಕು. ಇದರ ಜೊತೆಗೇ ಇತಿಹಾಸ, ಆರ್ಥಿಕತೆ, ಅಭಿವೃದ್ಧಿಯ ವ್ಯಾಖ್ಯಾನಗಳ ಬಗ್ಗೆ ಕನ್ನಡದಲ್ಲಿ ಇಂಗ್ಲಿಷ್ಗೆ - ಅಥವಾ ಜಗತ್ತಿನ ಯಾವುದೇಭಾಷೆಗೆ - ಸರಿಸಾಟಿಯಾಗಬಲ್ಲ ಪುಸ್ತಕಗಳು ಬರಬೇಕು.

ಕಥೆ, ಕಾವ್ಯಗಳಷ್ಟೇ ಸಮೃದ್ಧವಾಗಿ ವಿವಿಧ ಅಕಾಡೆಮಿಕ್ ವಿಚಾರ ಕುರಿತ ಪುಸ್ತಕಗಳು ಕನ್ನಡದಲ್ಲಿ ರೂಪುಗೊಳ್ಳಬೇಕು. ಕನ್ನಡದಮೂಲಕವೇ ಜಗತ್ತನ್ನು ಓದುವ, ಅರಿತುಕೊಳ್ಳುವ ಕಾಲ ಬರಬೇಕು.

ಈಗ ಬೇಕಾಗಿರುವುದು ಸಮ್ಮೇಳನ, ಸಮಾರಂಭಗಳಿಗಿಂತ ಹೆಚ್ಚಾಗಿ ಕನ್ನಡವನ್ನು ಅನ್ನ ಕೊಡುವ ಭಾಷೆಯನ್ನಾಗಿಸುವ ದಾರಿ. ದಾರಿ ಕಂಡುಕೊಳ್ಳದ ಹೊರತು ಕನ್ನಡದ ಬಗೆಗಿನ ಹೋರಾಟಗಳು ವ್ಯರ್ಥ ಕಸರತ್ತಾಗಿಯೇ ಉಳಿದುಹೋಗುವ ಅಪಾಯವಿದೆ.

‌ ‌ ‌ ‌ ‌ ‌ - ವಿಜಯ್ ಜೋಶಿ.
(ಪ್ರಜಾವಾಣಿಯಲ್ಲಿ ಸೆಪ್ಟೆಂಬರ್ ೨, ೨೦೧೦ ರಂದು ಪ್ರಕಟವಾಗಿದ್ದ ಲೇಖನ)

Tuesday, July 20, 2010

ನೇಗಿಲು ಹೊತ್ತ ರೈತನಿಗೆ ಲೇಖನಿ ನೀಡಿದ ಆಂದೋಲನ

ಸಮಸ್ಯೆ ಯಾವುದೂ ಇರಬಹುದು, ಯಾರಿಗೂ ಬರಬಹುದು. ಒಂದು ಮಾಧ್ಯವಾಗಿ ಸಮಸ್ಯೆಗೆ ಎರಡು ರೀತಿಯಲ್ಲಿ ಸ್ಪಂದಿಸಲು ಸಾಧ್ಯ. ಒಂದು: ಆ ಸಮಸ್ಯೆಯಿಂದ ಬಾಧಿತರಾಗಿರುವವರ ನೋವಿಗೆ ದನಿಯಾಗಿ, ಅವರ ಬಗ್ಗೆ ಒಂದಿಷ್ಟು ಅನುಕಂಪ ತೋರಿಸಿ ನಂತರ ಸುಮ್ಮನಾಗುವುದು. ಇನ್ನೊಂದು: ನೋವಿಗೆ ದನಿಯಾಗುವುದು ಮತ್ತು ಅನುಕಂಪತೋರುವುದಕ್ಕಿಂತ ಮಿಗಿಲಾಗಿ, ಸಮಸ್ಯೆಗೆ ಸ್ಪಷ್ಟ ಪರಿಹಾರ ಸೂಚಿಸುವುದು.

ಎರಡನೆಯ ಮಾದರಿಗೆ ಒಂದು ಅನನ್ಯ ಉದಾಹರಣೆ ಎಂದರೆ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್‌ನ ಅಡಿಕೆ ಪತ್ರಿಕೆ ಮತ್ತು ಅದರ ಕೃಷಿಕರ ಕೈಗೆ ಲೇಖನಿ ಕಾರ್ಯಕ್ರಮ.

ಪತ್ರಿಕೆ ಆರಂಭವಾದದ್ದು ಹೀಗೆ:

ಅದು ಎಂಭತ್ತರ ದಶಕದ ಮಧ್ಯಭಾಗ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯ ಮಾರುಕಟ್ಟ ಧಾರಣೆ ತೀವ್ರವಾಗಿ ಕುಸಿದಿತ್ತು. ಅಸಂಖ್ಯ ಅಡಿಕೆ ಬೆಳೆಗಾರರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾಲ ಅದು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಪುತ್ತೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಅಡಿಕೆ ಕೃಷಿಕರನ್ನು ಸಂಕಷ್ಟದಿಂದ ಪಾರುಮಾಡಲು ಮತ್ತು ಅಡಿಕೆ ಕೃಷಿಯಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಯೋಚಿಸಲಾರಂಭಿಸಿತು. ಇದೇ ಸಂದರ್ಭದಲ್ಲಿ (ಅಂದರೆ ೧೯೮೫-೮೬ರಲ್ಲಿ) ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಸ್ಥಾನವನ್ನು ವಾರಣಾಶಿ ಸುಬ್ರಾಯ ಭಟ್ಟರಿಂದ ಡಾ. ಪಿ ಕೆ ಎಸ್ ಭಟ್ ಪಾಣಾಜೆ ಇವರು ವಹಿಸಿಕೊಂಡರು.

ಸಂಘದ ಅಧ್ಯಕ್ಷತೆ ವಹಿಸಿಕೊಂಡ ತಕ್ಷಣವೇ ಒಂದಿಷ್ಟು ಸಮಾನ ಮನಸ್ಕ ಅಡಿಕೆ ಬೆಳೆಗಾರರನ್ನು ಸಂಘಕ್ಕೆ ಆಹ್ವಾನಿಸಿದ ಡಾ. ಭಟ್ ಅಡಿಕೆ ಕೃಷಿಯಲ್ಲಿ ತರಬಹುದಾದ ಸುಧಾರಣೆಗಳ ಕುರಿತು ಚರ್ಚಿಸಲು ಒಂದಷ್ಟು ಮಂದಿ ಸಮಾನ ಮನಸ್ಕರ ಸಭೆ ಸೇರಿಸಿದರು. ಇದೇ ಸಭೆಯಲ್ಲಿ ಅಡಿಕೆ ಬೆಳೆಗಾರರ ಆಶೋತ್ತರಗಳಿಗೆ ಸ್ಪಂದಿಸಲೆಂದೇ ಮತ್ತು ಅಡಿಕೆ ಕೃಷಿಯಲ್ಲಿ ಹೊಸ ಸಾಧ್ಯತೆಗಳ ಕುರಿತು ಮಾತುಕತೆ ನಡೆಸಲು ವೇದಿಕೆಯಾಗಿ ಒಂದು ಪತ್ರಿಕೆಯನ್ನು ಪ್ರಕಟಿಸುವ ಕುರಿತೂ ಚರ್ಚೆಯಾಯಿತು. ಸಂಘದ ವತಿಯಿಂದ ಹೊರತರಲು ಉದ್ದೇಶಿಸಿದ ಪತ್ರಿಕೆಯ ಜವಾಬ್ದಾರಿ ಆ ಸಮಯಕ್ಕಾಗಲೇ ಹವ್ಯಾಸಿ ಪತ್ರಕರ್ತರಾಗಿ ಹೆಸರು ಮಾಡಿದ್ದ ಶ್ರೀ ಪಡ್ರೆಯವರ ಹೆಗಲೇರಿತು.

ಅನಂತರ ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಘಟಿಸಿದ್ದು ಒಂದು ಇತಿಹಾಸವೇ ಸರಿ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರಕಾಶನದಡಿಯಲ್ಲಿ ಹೊರಬಂದರೂ ಸಂಘದ ಮುಖವಾಣಿಯಾಗಲೊಲ್ಲದ, ಇಡೀ ರೈತಸಮುದಾಯದ ಮುಖವಾಣಿಯಾಗುವ ಉದ್ದೇಶದೊಂದಿಗೆ ಶ್ರೀ ಪಡ್ರೆಯವರ ಸಂಪಾದಕತ್ವದಲ್ಲಿ ಅರೆಕಾ ನ್ಯೂಸ್ಎಂಬ ದ್ವೈಮಾಸಿಕ ಪತ್ರಿಕೆ ೧೯೮೭ರ ನವೆಂಬರ್ ತಿಂಗಳಿನಲ್ಲಿ ಜನ್ಮತಾಳಿತು. ಅರೆಕಾ ನ್ಯೂಸ್ ಎಂಬ ಇಂಗ್ಲಿಷ್ ನಾಮ ಹೊಂದಿದ್ದ ಕನ್ನಡ ಪತ್ರಿಕೆಗೆ ಸಿಕ್ಕ ಧನಾತ್ಮಕ ಪ್ರತಿಕ್ರಿಯೆ ಕಂಡ ಅಡಿಕೆ ಬೆಳೆಗಾರರ ಸಂಘ ಪತ್ರಿಕೆಯನ್ನು ಮಾಸಿಕವನ್ನಾಗಿಸುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರದೊಂದಿಗೆ ಹೊರಬಂದ ಪತ್ರಿಕೆಯೇ ಅಡಿಕೆ ಪತ್ರಿಕೆ. ಬಹುಷಃ ಅಡಿಕೆ ಪತ್ರಿಕೆ ಕನ್ನಡದ ಮೊಟ್ಟಮೊದಲ ಕೃಷಿಕರೇ ರೂಪಿಸಿದ ಕೃಷಿಕಪರ ಮಾಧ್ಯಮ.

ಅಡಿಕೆ ಪತ್ರಿಕೆ ಎಂಬ ೧೯೮೮ರಲ್ಲಿ ಜನ್ಮತಳೆದ, ಈಗ ತನ್ನ ೨೨ರ ಹರೆಯದಲ್ಲಿರುವ, ಪುತ್ತೂರಿನಂತಹ ತಾಲೂಕು ಕೇಂದ್ರವೊಂದರಿಂದ ಹೊರಬರುತ್ತಿರುವ ಪತ್ರಿಕೆ ನಾಡಿನ ಸಮಸ್ತ ಮಾಧ್ಯಮಾಸಕ್ತರಿಗೆ ಅಧ್ಯಯನಯೋಗ್ಯ ವಿಷಯ. ಇದಕ್ಕೆ ಕಾರಣಗಳು ಹಲವಾರು.

ಅಡಿಕೆ ಪತ್ರಿಕೆಯ ಜನನದ ವರೆಗೆ ಕನ್ನಡದಲ್ಲಿ ಕೃಷಿ ಸಂಬಂಧಿ ಸಂವಹನ ಇರಲೇ ಇಲ್ಲ ಎಂದಲ್ಲ. ಆದರೆ ಅಲ್ಲಿಯವರೆಗೆ ಕೃಷಿ ಸಂಬಂಧಿ ಲೇಖನಗಳನ್ನು ಹೆಚ್ಚಾಗಿ ವಿಜ್ಞಾನಿಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳ ಉಪನ್ಯಾಸಕರೇ ಬರೆಯುತ್ತಿದ್ದರು. ದಿನವಿಡೀ ಜಮೀನಿನಲ್ಲಿ ದುಡಿಯುವ, ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ರೈತ ಕೃಷಿ ಪತ್ರಿಕೆಗಳಿಗೆ ಬರೆಯುವುದು ತೀರಾ ನಗಣ್ಯವಾಗಿತ್ತು. ಅದಲ್ಲದೆ, ಅಂದಿನ ಸಂದರ್ಭದಲ್ಲಿ ಕೃಷಿ ಪತ್ರಿಕೆಯೊಂದು ಸರಕಾರ ಅಥವಾ ವಿಶ್ವವಿದ್ಯಾಲಯಗಳ ಧನಸಹಾಯವಿಲ್ಲದೆ, ಕೇವಲ ಓದುಗ ಮತ್ತು ಜಾಹೀರಾತುದಾರ ನೀಡುವ ಹಣವನ್ನು ನೆಚ್ಚಿಕೊಂದು ನಡೆಯುವುದು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇತ್ತು. ಸರಕಾರದ ಸಹಾಯದ ಕೃಷಿ ಪತ್ರಿಕೆಗಳಿದ್ದರೂ ಅವುಗಳಲ್ಲಿ ರೈತ ಬರೆದ ಯಾವ ಲೇಖನಗಳೂ ಇರುತ್ತಿರಲಿಲ್ಲ. ಏಕೆಂದರೆ ರೈತ ತನಗಾಗಿ ತಾನು ಬರೆಯುತ್ತಲೇ ಇರಲಿಲ್ಲ.

ಇಂಥದ್ದೊಂದು ಅಲಿಖಿತ ನಿಯಮವನ್ನು ಮುರಿದು, ’ರೈತರಿಂದ ರೈತರೆಡೆಗೆ’, ’ರೈತರಿಂದ ವಿಜ್ಞಾನಿಗಳೆಡೆಗೆಮಾದರಿಯ ಸಂವಹನಕ್ಕೆ ಚಾಲನೆ ನೀಡಿದ್ದು ಅಡಿಕೆ ಪತ್ರಿಕೆ ಬಳಗ. ಅಡಿಕೆ ಪತ್ರಿಕೆಯ ಆಡಳಿತ ಮಂಡಳಿಯಲ್ಲಿರುವವರಿಂದ ಹಿಡಿದು ಸಂಪಾದಕರವರೆಗೆ ಎಲ್ಲರೂ ಕೃಷಿಕರೇ ಆಗಿರುವುದು ಇನ್ನೊಂದು ವಿಶೇಷ.

ಕೃಷಿಕರ ಕೈಗೆ ಲೇಖನಿ ಎಂಬ ಮೌನಕ್ರಾಂತಿ:

ಕೃಷಿಕರ ಅನುಭವಗಳು, ಆ ಅನುಭವದಿಂದ ದಕ್ಕುವ ಜ್ಞಾನವನ್ನೇ ಪತ್ರಿಕೆಯಲ್ಲಿ ಪ್ರಧಾನವಾಗಿ ಪ್ರಕಟಿಸಬೇಕು ಎಂಬ ಮೂಲೋದ್ದೇಶದಿಂದ ಜನ್ಮತಾಳಿದ ಅಡಿಕೆ ಪತ್ರಿಕೆಗೆ ರೈತರ ಕಡೆಯಿಂದ ಲೇಖನಗಳೆನೂ ಹರಿದುಬರಲಿಲ್ಲ. ಮೊದಮೊದಲು ಒಂದಷ್ಟು ಮಂದಿ ಉತ್ಸಾಹದಿಂದ ಬರೆದರೂ ಕೊನೆಗೆ ಅವರ ಲೇಖನ ಹರಿವಿನ ತೀವ್ರತೆ ಕುಗ್ಗಲಾರಂಭಿಸಿತು. ಪತ್ರಿಕೆಯ ಓದುಗರಿಗೆ ಹೆಚ್ಚಿನ ಮಾಹಿತಿ ನೀಡಲು ಮತ್ತು ಮಾಹಿತಿಗಳು ಹೆಚ್ಚು ಉಪಯುಕ್ತವಾಗಲು ವಿಸ್ತಾರವಾದ ಲೇಖಕರ ವರ್ಗದ ಅವಶ್ಯಕತೆ ಆ ಹೊತ್ತಿಗಾಗಲೇ ಅಡಿಕೆ ಪತ್ರಿಕೆ ಬಳಗಕ್ಕೆ ಅರಿವಾಗಿತ್ತು. ಆದರೇನು ಮಾಡುವುದು? ಕೃಷಿಕರೇನೂ ಮುಗಿಬಿದ್ದು ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಿರಲಿಲ್ಲ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಆರಂಭವಾಗಿದ್ದೇ ಕೃಷಿಕರ ಕೈಗೆ ಲೇಖನಿ ಎಂಬ ವಿನೂತನ ಕಾರ್ಯಕ್ರಮ.

ನೇಗಿಲು ಹಿಡಿದವನ ಕೈಗೆ ಲೇಖನಿ ಕೊಟ್ಟು ಬರೆಸುವ ಈ ಸಾಹಸದ ಬಗ್ಗೆ ಡಾ. ನಿರಂಜನ ವಾನಳ್ಳಿ ಹೇಳಿರುವ ಒಂದು ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. ಡಾ. ವಾನಳ್ಳಿ ಅಡಿಕೆ ಪತ್ರಿಕೆಯ ಬೆಳವಣಿಗೆಯನ್ನು ತುಂಬ ಹತ್ತಿರದಿಂದ ಗಮನಿಸಿದವರು. ಕಳೆದೆರಡು ದಶಕಗಳಿಂದ ಕರ್ನಾಟಕದಲ್ಲಿ ಕೃಷಿಕರ ಕೈಗೆ ಲೇಖನಿ ಎಂಬ ಮೌನಕ್ರಾಂತಿ ನಡೆಯುತ್ತಿದೆ. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ತಿರುವು ಕೊಟ್ಟ ಚಳವಳಿ ಇದು. ನಮ್ಮ ರೈತರ ಬಳಿ ಅಪಾರ ಅನುಭವ, ಜ್ಞಾನ ಇರುವುದು ಹೌದಾದರೂ ಅವರಲ್ಲಿ ಅನೇಕರು ಅನಕ್ಷರಸ್ಥರು. ಅಕ್ಷರಸ್ಥ ರೈತರಲ್ಲಿ ಬರೆಯುವ ಕೌಶಲ್ಯ ಸಾಕಷ್ಟು ಇಲ್ಲದ ಕಾರಣ ಕೃಷಿಯ ಬಗ್ಗೆ ಯಾರೂ ಬರೆಯಬಹುದು ಎಂಬ ವಾತಾವರಣ ಸೃಷ್ಟಿಯಾಗಿತ್ತು. ಯಾವತ್ತೂ ಕೃಷಿ ಮಾಡದವರು ಕೃಷಿಕ ಸಮೂಹದ ಏಕೈಕ ಧ್ವನಿಯೋ ಎಂಬಂತೆ ಬರೆಯುತ್ತಿದ್ದರು. ಇಂಥ ಒಂದು ಪರಿಸ್ಥಿತಿಯನ್ನು ನೋಡಿಯೇ ಶ್ರೀ ಪಡ್ರೆ ಮತ್ತು ಅವರ ಸ್ನೇಹಿತರು ಕೃಷಿಕರ ಕೈಗೆ ಲೇಖನಿ ಆಂದೋಲನವನ್ನು ಆರಂಭಿಸಿದರು ಎನ್ನುತ್ತಾರೆ ಡಾ. ವಾನಳ್ಳಿ.

ಅಡಿಕೆ ಪತ್ರಿಕೆಯ ಪುಟದಲ್ಲಿ ಒಂದು ಪುಟ್ಟ ಪ್ರಕಟಣೆಯ ಮೂಲಕ ಕೃಷಿಕರ ಕೈಗೆ ಲೇಖನಿತರಬೇತಿ ಶಿಬಿರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಯಿತು. ರೈತರು ತಮ್ಮ ಅರ್ಜಿಗಳ ಜೊತೆಗೆ ಅವರ ಬರಹದ ಒಂದು ಪ್ರತಿಯನ್ನೂ ಇಡುವಂತೆ ಕೇಳಿಕೊಳ್ಳಲಾಯಿತು. ಹಾಗೆ ಪಡೆದುಕೊಂಡ ಅರ್ಜಿ ಮತ್ತು ಬರಹದ ಮಾದರಿಯ ಆಧಾರದ ಮೇಲೆ ೨೫-೩೦ ಮಂದಿ ಶಿಬಿರಾರ್ಥಿ ಕೃಷಿಕರನ್ನು ಆಯ್ಕೆ ಮಾಡಲಾಯಿತು. ಶಿಬಿರ ನಡೆಯುವ ಊರಿನ ರೈತರ ಜೊತೆ ಮಾತನಾಡಿ ಅವರಿಗೆ ಈ ಶಿಬಿರದ ಬಗ್ಗೆ ವಿಶ್ವಾಸ ಮೂಡುವಂತೆ ಮಾಡುವ ಕೆಲಸವೂ ಆಯಿತು. ಆ ಊರಿನ ರೈತರ ಬಳಿ ತರಬೇತುದಾರರಾಗಿ ಬರುವ ಸಂಪನ್ಮೂಲ ವ್ಯಕ್ತಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಬಗ್ಗೆಯೂ ಮಾತುಕತೆ ನಡೆಸಲಾಯಿತು. ನಾಲ್ಕು ದಿನಗಳ ಕಾಲ ನಡೆಯುವ ಪ್ರತಿ ಶಿಬಿರದಲ್ಲಿಯೂ ಉಪನ್ಯಾಸ ಕಾರ್ಯಕ್ರಮ ಹೊರತುಪಡಿಸಿ ಅನೇಕ ಪ್ರಾಯೋಗಿಕ ತರಗತಿಗಳೂ ಇದ್ದವು. ಬರಹಕ್ಕೆ ವಿಷಯವನ್ನು ಗುರುತಿಸುವ ಮತ್ತು ಆಯ್ದುಕೊಳ್ಳುವ ಬಗ್ಗೆ, ಬರಹದ ವಿಧಾನಗಳ ಬಗ್ಗೆ ಮತ್ತು ಅದನ್ನು ಪ್ರಸ್ತುತಪಡಿಸುವ ವಿಧಾನಗಳ ಕುರಿತು, ಅಭ್ಯುದಯ ಸಂವಹನ, ಕೃಷಿ ಪತ್ರಿಕೋದ್ಯಮ ಮತ್ತು ಪರಿಸರ ಹೀಗೆ ಅನೇಕ ವಿಚಾರಗಳ ಕುರಿತು ಸರಣಿ ಉಪನ್ಯಾಸ ಮತ್ತು ಪ್ರಾಯೋಗಿಕ ತರಗತಿಗಳನ್ನು ತೆಗೆದುಕೊಳ್ಳಲಾಯಿತು.

ಪ್ರತಿ ಶಿಬಿರದಲ್ಲಿಯೂ ಮೂರು ಪ್ರಾಯೋಗಿಕ ಬರಹದ ತರಗತಿಗಳು ಇದ್ದವು. ಮೂರನೆಯ ಬಾರಿ ಶಿಬಿರಾರ್ಥಿಗಳು ತಮ್ಮ ಹತ್ತಿರದ ಹೊಲಕ್ಕೋ ತೋಟಕ್ಕೋ ಹೋಗಿ ಅಲ್ಲಿ ತಮ್ಮ ಬರಹಕ್ಕೆ ವಸ್ತುವಾಗಬಲ್ಲ ವಿಷಯವೊಂದನ್ನು ಹುಡುಕಿ ನುಡಿಚಿತ್ರವೊಂದನ್ನು ಬರೆಯಬೇಕಿತ್ತು. ತಾವು ಶಿಬಿರದಲ್ಲಿ ಕಲಿತ ಎಲ್ಲ ಬಗೆಯ ಪ್ರಾಯೋಗಿಕ ವಿಚಾರಗಳು ಆಗ ಬಳಕೆಗೆ ಬರುತ್ತಿದ್ದವು. ಹಾಗೆ ಶಿಬಿರಾರ್ಥಿಗಳು ಬರೆದ ನುಡಿಚಿತ್ರವನ್ನು ಅಡಿಕೆ ಪತ್ರಿಕೆಯ ಸಂಪನ್ಮೂಲ ವ್ಯಕ್ತಿಗಳು ಮೌಲ್ಯಮಾಪನ ಮಾಡುತ್ತಿದ್ದರು. ಶಿಬಿರಾರ್ಥಿಗಳ ಪೈಕಿ ಆಯ್ದ ಹತ್ತು ಮಂದಿಗೆ ತಮ್ಮ ಬರಹವನ್ನು ಓದಿ ಹೇಳುವಂತೆ ತಿಳಿಸಲಾಗುತ್ತಿತ್ತು. ಪ್ರತಿಯೊಬ್ಬ ಶಿಬಿರಾರ್ಥಿ ತನ್ನ ಬರಹವನ್ನು ಓದಿದ ನಂತರ ಸಂಪನ್ಮೂಲ ವ್ಯಕ್ತಿಗಳು ಆತನ ಬರವಣಿಗೆ, ಪ್ರಸ್ತುತಪಡಿಸುವ ಶೈಲಿಯ ಕುರಿತು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಇದರಿಂದ ಎಲ್ಲ ಶಿಬಿರಾರ್ಥಿಗಳಿಗೂ ತಮ್ಮ ಬರಹವನ್ನು ಸುಂದರವಾಗಿಸುವ ಕುರಿತು ಸ್ಪಷ್ಟ ಕಲ್ಪನೆ ಮೂಡುತ್ತಿತ್ತು.

ಅಡಿಕೆ ಪತ್ರಿಕೆಯ ಮೂಲಕ ನಾವು ನಮ್ಮ ಕೃಷಿಕ ಓದುಗರಿಗೆ ಬರೆಯುವಂತೆ ಆಹ್ವಾನ ನೀಡಿದ್ದೆವು. ನಾವು ಕೃಷಿಕರಿಂದ ದೊಡ್ಡ ಮಟ್ಟದ ಲೇಖನಗಳನ್ನು ನಿರೀಕ್ಷಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಕೆಲವೇ ದಿನಗಳಲ್ಲಿ ಸುಳ್ಳಾಯಿತು. ನಮ್ಮ ಆಹ್ವಾನಕ್ಕೆ ಬಂದ ಸಣ್ಣ ಮಟ್ಟದ ಪ್ರತಿಕ್ರಿಯೆ ನೋಡಿ ಈ ಬಗ್ಗೆ ಏನಾದರೂ ಮಾಡಬೇಕು, ಕೃಷಿಕರು ತಮ್ಮ ಸಮಸ್ಯೆ, ಸಾಧನೆಗಳ ಬಗ್ಗೆ ತಾವೇ ಬರೆಯುವಂತಾಗಬೇಕು ಎಂಬ ಉದ್ದೇಶದಿಂದ ಕೃಷಿಕರ ಕೈಗೆ ಲೇಖನಿ ಕಾರ್ಯಕ್ರಮ ಆರಂಭವಾಯಿತು ಎನ್ನುತ್ತಾರೆ ಶ್ರೀ ಪಡ್ರೆ. ಅಂದಹಾಗೆ ಇದುವರೆಗೆ ಶಿರಸಿ ತಾಲೂಕಿನ ಭೈರುಂಬೆ ಮತ್ತು ಯಡಳ್ಳಿ, ಕಾಸರಗೋಡು ತಾಲೂಕಿನ ನೀರ್ಚಾಲು, ಕೊಪ್ಪ, ಚಿತ್ರದುರ್ಗದ ಭೀಮಸಮುದ್ರ ಸೇರಿದಂತೆ ವಿವಿಧೆಡೆ ಇಂಥ ಆರು ಕಾರ್ಯಕ್ರಮಗಳು ನಡೆದಿವೆ. ಅದಲ್ಲದೆ ಮೊಟ್ಟಮೊದಲ ಕೃಷಿಕರ ಕೈಗೆ ಲೇಖನಿ ಶಿಬಿರ ನಡೆದ ಎರಡು ದಶಕಗಳೇ ಕಳೆದಿವೆ.

ನಾಡಿನ ವಿವಿಧೆಡೆ ನಡೆದ ಈ ಕಾರ್ಯಕ್ರಮಗಳಲ್ಲಿ ಬರವಣಿಗೆಯ ಪ್ರಾಥಮಿಕ ಜ್ಞಾನ ಪಡೆದ ಅನೇಕ ಮಂದಿ ಇವತ್ತು ಅಡಿಕೆ ಪತ್ರಿಕೆಯ ಬರಹಗಾರರ ಪಡೆಯಲ್ಲಿ ಸೇರಿದ್ದಾರೆ. ಇನ್ನೂ ಅನೇಕ ಮಂದಿ ನಾಡಿನ ವಿವಿಧ ಪತ್ರಿಕೆಗಳಿಗೆ ಕೃಷಿ ಸಂಬಂಧಿ ವಿಚಾರಗಳ ಬಗ್ಗೆ ಬರೆಯುತ್ತಿದ್ದಾರೆ. ಅವರ್ಯಾರೂ ರೈತರ ನೋವಿಗೆ ಕೇವಲ ಧ್ವನಿಯಾಗಿ, ತಮ್ಮ ಆಕ್ರೋಶವನ್ನು ಅಕ್ಷರ ರೂಪಕ್ಕಿಳಿಸಿ ನಂತರ ಸುಮ್ಮನೆ ಕೂರುವುದಿಲ್ಲ. ಬದಲಿಗೆ, ರೈತನ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ. ತಮ್ಮದೇ ಒಂದು ಸಮಸ್ಯೆಗೆ ತಾವೇ ಕಂಡುಕೊಂಡ ಪರಿಹಾರವನ್ನೂ ಬರಹರೂಪಕ್ಕಿಳಿಸುತ್ತಾರೆ. ತನ್ಮೂಲಕ ಅದೇ ರೀತಿಯ ಸಮಸ್ಯೆ ಎದುರಿಸುತ್ತಿರುವ ಇನ್ನೊಬ್ಬ ರೈತನಿಗೆ ಪರಿಹಾರ ಸೂಚಿಸುವ ಕೆಲಸ ಮಾಡುತ್ತಾರೆ. ನಾಡಿನೆಲ್ಲೆಡೆ ರೈತಾಪಿ ಎಂದರೆ ನಷ್ಟದ ಕಾಯಕ ಎಂಬ ನಂಬಿಕೆಯೇ ಗಟ್ಟಿಯಾಗಿರುವಾಗಲೂ, ಕೃಷಿಯನ್ನು ಲಾಭದಾಯಕವಾಗಿಸಬಹುದು ಎಂದೂ ವಿಶ್ವಾಸದಿಂದ ಹೇಳುತ್ತಾರೆ. ಅಭ್ಯುದಯ ಮಾಧ್ಯಮವೊಂದು ನಾಡಿನ ಸಮಸ್ಯೆಗೆ ಸ್ಪಂದಿಸುವ ವಿಧಾನಕ್ಕೆ ಮಾದರಿ ಎಂಬಂತೆ ಈ ಆಂದೋಲನ ಬೆಳೆದುನಿಂತಿದೆ.

ವಿಜಯ್ ಜೋಶಿ


Tuesday, June 22, 2010

ವಚನಭ್ರಷ್ಟತೆ ಮತ್ತು ಸಮಾಜ

ಕೆಲವರಿರುತ್ತಾರೆ. ಅವರಿಗೆ ರಾಜಕಾರಣಿಗಳನ್ನು ತೆಗಳುವುದೆಂದರೆ ಎಲ್ಲಿಲ್ಲದ ಸಂತೋಷ. ರಾಜಕಾರಣಿಗಳೆಲ್ಲಾ ಭ್ರಷ್ಟರು, ಅಯೋಗ್ಯರು, ಪಾಪಿಗಳು... ಹೀಗೆ ಸಾಧ್ಯವಾದ ಎಲ್ಲ ಪದವಿಶೇಷಣಗಳನ್ನೂ ಉಪಯೋಗಿಸಿ ರಾಜಕಾರಣಿಗಳನ್ನು ಬಯ್ಯುತ್ತಾರೆ. ಅಂದಹಾಗೆ, ರಾಜಕಾರಣಿಗಳನ್ನು ಆ ಪಾಟಿ ಬಯ್ಯುವುದರಲ್ಲಿ ತಪ್ಪೇನೂ ಇಲ್ಲ ಬಿಡಿ. ನಮ್ಮ ರಾಜಕಾರಣಿಗಳು ಜನರಿಂದ ತೆಗಳಿಸಿಕೊಳ್ಳಲು ಯೋಗ್ಯರೇ. ಅದಲ್ಲದೆ, ಜನರಿಂದ ಹೇಲಿಸಿಕೊಳ್ಳದ ರಾಜಕಾರಣಿ ಜಗತ್ತಿನಲ್ಲಿ ಒಬ್ಬನೂ ಇರಲಿಕ್ಕಿಲ್ಲ.

ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ತಮ್ಮ ಪಕ್ಷ ಉಳಿಸುವ ನೆಪ ಒಡ್ಡಿ ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಸರಕಾರ ರಚಿಸಿದಾಗ ಕರ್ನಾಟಕದಲ್ಲಿ ವಚನಭ್ರಷ್ಟತೆಯ ಬಗ್ಗೆ ಅಷ್ಟೇನೂ ಚರ್ಚೆಯಾಗಲಿಲ್ಲ. ಆದರೆ ಯಾವಾಗ ಇಪ್ಪತ್ತು ತಿಂಗಳ ತನ್ನ ಅವಧಿ ಮುಗಿದ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಕುಮಾರಸ್ವಾಮಿ ನಿರಾಕರಿಸಿದರೋ ಆವಾಗ ವಚನಭ್ರಷ್ಟತೆಯ ಬಗ್ಗೆ ನಾಡಿನಾದ್ಯಂತ ಚರ್ಚೆ ಆರಂಭವಾಯಿತು. ಅದರಲ್ಲೂ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದಿರಲು ಕುಮಾರಸ್ವಾಮಿ ನೀಡಿದ ಕಾರಣಗಳು ಜನರಲ್ಲಿ ಪ್ರಸ್ತುತ ರಾಜಕಾರಣದ ಬಗ್ಗೆ ಹೇಸಿಗೆ ಮೂಡಲು ಕಾರಣವಾಯಿತು.

ಇವತ್ತು ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹ ಎನ್ನುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ದೇವರ ಕೆಲಸವೇ ಆಗಿರುವ ಸರಕಾರದ ಕೆಲಸದಲ್ಲಂತೂ ಭ್ರಷ್ಟತೆ ಎಂಬುದು ಸಾಂಸ್ಥಿಕ ರೂಪವನ್ನೇ ಪಡೆದುಕೊಂಡಿದೆ. ಹಾಗಂತ ಮನುಷ್ಯನ ವಯುಕ್ತಿಕ ಜೀವನದಲ್ಲಿ ವಚನಭ್ರಷ್ಟತೆ, ವಿಶ್ವಾಸದ್ರೋಹ ಎಂಬುದು ಚಾಲ್ತಿಯಲ್ಲಿ ಇಲ್ಲ ಅಂತಲ್ಲ. ಅಪ್ಪ ಕಾಲೇಜಿನ ಶುಲ್ಕ ಕಟ್ಟಲು ನೀಡಿದ ಹಣದಿಂದ ಇನ್ನೇನೋಮಾಡಿ, ಅಪ್ಪ ಮಗನ ಮೇಲಿಟ್ಟಿರುವ ವಿಶ್ವಾಸವನ್ನು ಕೊಂದುಹಾಕುವ ಮಕ್ಕಳಿಂದ ಹಿಡಿದು ರೈತನ ಬೆವರಿನ ಪ್ರತೀಕವಾದ ಬೆಳೆಯನ್ನು ಆತನ ಶ್ರಮಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಮತ್ತೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮಧ್ಯವರ್ತಿಯವರೆಗೆ ಭ್ರಷ್ಟಾಚಾರವೆಂಬುದು ವ್ಯಾಪಿಸಿದೆ. ನಮ್ಮಲ್ಲಿ ಕೆಲವರಿಗೆ ನ್ಯಾಯವಾಗಿ ತೆರಿಗೆ ಕಟ್ಟಲು ಮನಸ್ಸಿಲ್ಲ. ಕೆಲವೇ ಕೆಲವರು ನ್ಯಾಯವಾಗಿ ಕಟ್ಟುವ ತೆರಿಗೆಯನ್ನು ನಾಡಿನ ಅಭ್ಯುದಯಕ್ಕೆ ವಿನಿಯೋಗಿಸಲು ನಮ್ಮ ಅಧಿಕಾರಶಾಹಿಗೆ ಮತ್ತು ಆಡಳಿತಶಾಹಿಗೆ ಆಗಿಬರುವಂಥದ್ದಲ್ಲ. ಇನ್ನು ಕೆಲವರಿಗೆ ತಾವು ಅಕ್ರಮವಾಗಿ ಒತ್ತುವರಿ ಮಾಡಿಕೊಂದ ಜಮೀನು ಹೇಗಾದರೂ ಸಕ್ರಮವಾದರೆ ಸಾಕು ಎಂಬ ಮನಸ್ಥಿತಿ.

ವಸ್ತುಸ್ಥಿತಿ ಹೀಗಿರುವಾಗ ಜನಸಾಮಾನ್ಯರ ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹದ ವರ್ತನೆಯನ್ನು ಗಣನೆಗೆ ತೆಗೆದುಕೊಳ್ಳದೆ, ಕೇವಲ ರಾಜಕಾರಣಿಗಳು ಮಾಡಿದ ಭ್ರಷ್ಟಾಚಾರ ಮತ್ತು ವಚನಭ್ರಷ್ಟತೆಯನ್ನು ನಾವು ವೈಭವೀಕರಿಸುವುದು ಎಷ್ಟು ಸರಿ? ನಿಜ, ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಉನ್ನತ ವಿಚಾರಗಳನ್ನು ಮೈಗೂಡಿಸಿಕೊಂಡಿರಬೇಕು ಎಂಬ ನಿರೀಕ್ಷೆ ಖಂಡಿತಾ ತಪ್ಪಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಕೂಡ ನಾವು-ನೀವು ಜೀವಿಸುತ್ತಿರುವ ಸಮಾಜದ ಒಂದು ಭಾಗವೇ ಆಗಿದ್ದಾರೆ. ಅವರೇನೂ ದೇವಲೋಕದಿಂದ ಇಳಿದುಬಂದವರಲ್ಲ. ಸಮಾಜವೇ ಇಡಿಯಾಗಿ ಭ್ರಷ್ಟವಾಗಿರುವಾಗ ರಾಜಕಾರಣಿಯೊಬ್ಬ ಪ್ರಾಮಾಣಿಕನಾಗಿರಲು ಹೇಗೆ ಸಾಧ್ಯ.

ಅದಲ್ಲದೆ ಪ್ರತಿಯೊಬ್ಬ ರಾಜಕಾರಣಿಯೂ ನಮ್ಮಿಂದಲೇ ಆರಿಸಿಬಂದವನಾಗಿರುತ್ತಾನೆ. ಅವನ ಪೂರ್ವಾಪರಗಳು ಚುನಾವಣೆಗೆ ಮೊದಲೇ ಸ್ವಲ್ಪಮಟ್ಟಿಗಾದರು ಆತ ಪ್ರತಿನಿಧಿಸಲಿರುವ ಕ್ಷೇತ್ರದ ಜನತೆಗೆ ತಿಳಿದಿರುತ್ತದೆ.

ಇವತ್ತಿನ ರಾಜಕಾರಣ ಮತ್ತು ರಾಜಕಾರಣಿಗಳು ದಾರಿತಪ್ಪಿದ್ದಾರೆ ಎನ್ನುವುದಾದರೆ ಇವತ್ತಿನ ಸಮಾಜ ಕೂಡ ದಾgತಪ್ಪಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ರಾಜಕಾರಣಿಗಳೂ ನಾಚುವಷ್ಟರಮಟ್ಟಿಗೆ ವಿಶ್ವಾಸಘಾತುಕತನ ಎಸಗಿದವರು ಇದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ನಮ್ಮದೇ ಸಮಾಜವನ್ನು ಪ್ರತಿನಿಧಿಸುವ ರಾಜಕೀಯ ನಾಯಕರನ್ನು ಮಾತ್ರ ದೂರಿ ನಾವು ನಮ್ಮ ಸಮಾಜದ ತಪ್ಪನ್ನು ತಿದ್ದಿಕೊಳ್ಳದೇ ಹೋದಲ್ಲಿ ರಾಜಕೀಯ ಎನ್ನುವುದು ಶುಚಿಯಾಗಲು ಸಾಧ್ಯವಿಲ್ಲ.

Friday, April 16, 2010

ನಮ್ಮೊಳಗಿನ ಅಂಬೇಡ್ಕರ್...

"ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರಿಗೆ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಸಂಸ್ಕೃತದಲ್ಲಿ ಮಾತ್ರ ಸಾಧ್ಯ - ಡಾ. ಬಿ ಆರ್ ಅಂಬೇಡ್ಕರ್"

ಈ ಮೇಲಿನ ಅರ್ಥ ಬರುವ ಎಸ್ಸೆಮ್ಮೆಸ್ ಅನ್ನು ಕೆಲ ತಿಂಗಳುಗಳ ಹಿಂದೆ ಸ್ನೇಹಿತರಿಗೆಲ್ಲ ಕಳುಹಿಸುತ್ತಿದ್ದೆ. ಹಾಗೆ ಮಾಡುತ್ತಿದ್ದಾಗ ಸ್ನಾತಕೋತ್ತರ ಪದವಿ ಓದುತ್ತಿರುವ ಸ್ನೇಹಿತರೊಬ್ಬರಿಂದ ಪ್ರತಿಕ್ರಿಯೆ ಬಂತು; "ಅಂಬೇಡ್ಕರ್ ನಿಜಕ್ಕೂ ಹಾಗಂದಿದ್ದರಾ?" ಎಂಬ ಪ್ರಶ್ನೆಯನ್ನು ಅವರ ಪ್ರತಿಕ್ರಿಯೆ ಹೊತ್ತು ತಂದಿತ್ತು. "ಹೌದು, ನನಗೆ ತಿಳೀದಿರುವಂತೆ ಅಂಥದೊಂದು ಮಾತನ್ನು ಡಾ. ಅಂಬೇಡ್ಕರ್ ೧೯೪೯ರ ಸುಮಾರಿಗೆ ಆಡಿದ್ದರು. ಅದಲ್ಲದೆ ಸೆಪ್ಟೆಂಬರ್ ೧೦, ೧೯೪೯ ರಂದು ಸಂಸ್ಕೃತವನ್ನೇ ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸುವಂತೆ ಸಂಸತ್ತಿನಲ್ಲಿ ವಿಧೇಯಕವೊಂದನ್ನು ಮುಂದಿಟ್ಟವರೂ ಸ್ವತಃ ಅಂಬೇಡ್ಕರ್" ಎಂದು ನನ್ನ ಉತ್ತರ ಕಳಿಸಿದೆ. ನನ್ನ ಸ್ನೇಹಿತರಿಗೆ ಸಮಾಧಾನವಾಯಿತಿರಬೇಕು. ಆದರೂ ಕೊನೆಗೊಂದು ಮಾತು ಹೇಳಿದರು;

"ಈ ಅಂಬೇಡ್ಕರ್ ತಂದ ಮೀಸಲಾತಿಯೆಂಬ ನೀತಿಯಿಂದಾಗಿ ನಾವೆಲ್ಲರೂ ಇವತ್ತು ಪಡಿಪಾಟಲು ಅನುಭವಿಸುವಂತಾಗಿದೆ."

ಇವತ್ತು ನಾಡಿನ ಉದ್ದಗಲಕ್ಕೂ ಅಂಬೇಡ್ಕರ್ ಹೆಸರನ್ನು ಕೇಳದವರು ಇಲ್ಲ. ಅವರ ಬಗ್ಗೆ ಓದದವರು ಇಲ್ಲ. ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ಅಂಬೇಡ್ಕರ್ ಚಿಂತನೆಗಳ ಮಾತು ಬರುತ್ತಿರುತ್ತದೆ. ಇಷ್ಟೆಲ್ಲ ಆದರೂ ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥಮಾಡಿಕೊಂಡವರು ನಮ್ಮಲ್ಲಿ ಬಹಳ ಕಡಿಮೆ ಮಂದಿ ಎಂಬುದನ್ನೂ ನೋವಿನಿಂದಲೇ ಹೇಳಬೇಕಾದ ಪರಿಸ್ಥಿತಿ ಬಂದಿದೆ. ನಮ್ಮಲ್ಲಿ ಅನೇಕರಿಗೆ ಇವತ್ತು ಅಂಬೇಡ್ಕರ್ ಬಗ್ಗೆ ತಕರಾರು ಇರುವುದು ಅವರು ನಮ್ಮ ಸಮಾಜದ ಉಪೇಕ್ಷಿತ ಬಂಧುಗಳಿಗೆ ಮೀಸಲಾತಿಯ ವ್ಯವಸ್ಥೆಯನ್ನು ತಂದು ನಮ್ಮ ಸಮಾಜದ ತಥಾಕಥಿತ ಮೇಲ್ವರ್ಗದವರಿಗೆ (ಅವರೇಕೆ ಮೇಲ್ವರ್ಗದವರು ಎಂಬುದನ್ನು ಸ್ವತಃ ಬ್ರಹ್ಮನೂ ತಾರ್ಕಿಕವಾಗಿ ವಿವರಿಸಲಾರ!) ಸಿಗುತ್ತಿದ್ದ ಅವಕಾಶಗಳನ್ನು ಕಡಿಮೆ ಮಾಡಿದರು ಎಂಬುದೇ ಆಗಿದೆ. ಈ ಒಂದು ಕಾರಣ ಬಿಟ್ಟರೆ, ಅಂಬೇಡ್ಕರ್ ವಿಚಾರಗಳನ್ನು ವಿರೋಧಿಸುವ ಬಹುತೇಕರಲ್ಲಿ ಬೇರೆ ಯಾವುದೇ ಕಾರಣಗಳು ಇಲ್ಲ.

ಮೀಸಲಾತಿಯ ವಿಚಾರಕ್ಕಾಗಿ ತಪ್ಪು ತಿಳುವಳಿಕೆಗೆ ಒಳಪಟ್ಟಿರುವ ಅಂಬೇಡ್ಕರ್‌ರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮುಂಚೆ ಅಂಬೇಡ್ಕರ್ ಹೇಳಿದ ಮೀಸಲಾತಿಯ ವ್ಯವಸ್ಥೆ ಹೇಗಿತ್ತೆಂಬುದನ್ನು ಅರ್ಥಮಾಡಿಕೊಳ್ಳಬೇಕು.

ಒಂದೂರಿನಲ್ಲಿ ನೂರು ಮೀಟರ್ ಓಟದ ಸ್ಪರ್ಧೆ ಇದೆ ಅಂತ ಇಟ್ಟುಕೊಳ್ಳಿ. ಇಲ್ಲಿ ಅಂಬೇಡ್ಕರ್ ಪ್ರಣೀತ ಮೀಸಲಾತಿಯ ವ್ಯವಸ್ಥೆ ಇದೆ. ಹಾಗಂದರೆ ಸಮಾಜದ ಕೆಳವರ್ಗದವರೆಲ್ಲಾ ಐವತ್ತು ಮೀಟರ್ ಮಾತ್ರ ಓಡಲಿ, ಸಮಾಜದ ಮೇಲ್ವರ್ಗದವರೆಲ್ಲಾ ನೂರು ಮೀಟರ್ ಓಡಲಿ ಎಂಬುದಲ್ಲ ಅಂಬೇಡ್ಕರ್ ಚಿಂತನೆ. ಅವರು ಹೇಳಿದ್ದು ’ಓಟದ ಸ್ಪರ್ಧೆಯಲ್ಲಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟವರೂ ಬಂದು ಸೇರಿಕೊಳ್ಳಲಿ. ಎಲ್ಲರೂ ಓಟದ ಸ್ಪರ್ಧೆಯಲ್ಲಿ ಭಾಗವಹಿಸೋಣ. ಯಾರು ಮೊದಲು ಬರುತ್ತಾರೋ ಅವರೇ ವಿಜಯಿ’ ಎಂದು.

ಅಂಬೇಡ್ಕರ್ ಪ್ರಣೀತ ಮೀಸಲಾತಿ ವ್ಯವಸ್ಥೆ ಎಂಬುದು ಇಲ್ಲವಾಗಿದ್ದರೆ ನಮ್ಮ ಸಮಾಜದಲ್ಲಿ ಮೇಲೆ ಹೇಳಿದ ಒಂದು ಕಾಲ್ಪನಿಕ ನೂರು ಮೀಟರ್ ಓಟದ ರೇಸಿನಲ್ಲಿ ಸಮಾಜದ ಕೆಳವರ್ಗದವರಿಗೆ ಓಡಲು ಅವಕಾಶವೇ ಸಿಗುತ್ತಿರಲಿಲ್ಲ. ಅಲ್ಲೇನಿದ್ದರೂ ಸಮಾಜದ ಮೇಲ್ವರ್ಗದವರ ಪ್ರತಿಭೆಯಷ್ಟೇ ಪರಿಗಣನೆಗೆ ಬರುತ್ತಿತ್ತು. ಆದರೆ ಅಂಬೇಡ್ಕರ್‌ರ ಮೀಸಲಾತಿಯನ್ನು ನಮ್ಮ ಕಾನೂನು ನಿರ್ಮಾತೃಗಳು ಒಪ್ಪಿಕೊಂಡ ಪರಿಣಾಮವಾಗಿ ಇವತ್ತು ಸಮಾಜದ ಎಲ್ಲ ವರ್ಗಗಳಿಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ, ಅದರ ಪ್ರಯೋಜನವನ್ನು ಸಮಾಜಕ್ಕೆ ನೀಡುವ ಅವಕಾಶ ಸಿಗುತ್ತಿದೆ. ಇದು ಅಂಬೇಡ್ಕರ್ ಅವರ ಕಲ್ಪನೆಯ ಮೀಸಲಾತಿ. ಆದರೆ ಅಂಬೇಡ್ಕರ್ ನಂತರ ಬಂದ ರಾಜಕಾರಣಿಗಳು ತಂದ ಸ್ವಹಿತಾಸಕ್ತಿ ಕೇಂದ್ರಿತ ಮೀಸಲಾತಿಗೆ ನಾವು ಅಂಬೇಡ್ಕರ್‌ರನ್ನು ಜವಾಬ್ದಾರರನ್ನಾಗಿಸಬೇಕಾಗಿಲ್ಲ. ಅಂಬೇಡ್ಕರ್ ಹೆಸರು ಹೇಳಿಕೊಂಡು ತೀರಾ ಕೆಳಮಟ್ಟದ ರಾಜಕೀಯ ಮಾಡುವ ಕೆಲವು ಸಂಘಟನೆಗಳ ಕೆಲಸಕ್ಕೂ ನಾವು ಅಂಬೇಡ್ಕರ್‌ರಂತಹ ಮಹಾಮೇಧಾವಿಯನ್ನು ಜವಾಬ್ದಾರಿ ವ್ಯಕ್ತಿಯನ್ನಾಗಿಸಬೇಕಾಗಿಲ್ಲ.

ಅದಲ್ಲದೆ, ಅಂಬೇಡ್ಕರ್‌ರ ಒಟ್ಟೂ ಹೋರಾಟವಿದ್ದದ್ದು ಅಸಮಾನತೆ ಮತ್ತು ತಾರತಮ್ಯದ ವಿರುದ್ಧವೇ ಹೊರತು ಯಾವ ಜಾತಿಯ ವಿರುದ್ಧವೂ ಅಲ್ಲವಾಗಿತ್ತು. ಅವರ ಹೋರಾಟ ಯಾವುದಾದರೂ ಜಾತಿಯ ವಿರುದ್ಧ ಆಗಿದ್ದಿದ್ದರೆ, ಅಂದಿನ ಕಾಲದಲ್ಲಿ ಅವರಿಗಿದ್ದ ದಲಿತ ವರ್ಗಗಳ ಮೇಲಿನ ಪ್ರಭಾವವನ್ನು ಬಳಸಿ ದಲಿತರನ್ನು ಮೇಲ್ವರ್ಗಗಳ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಅಣಿಗೊಳಿಸುವ ತಾಕತ್ತೂ ಅವರಿಗಿತ್ತು. ಆದರೆ ಈ ದೇಶದ ಐಕ್ಯತೆ ಮತ್ತು ಸಮಗ್ರತೆಯ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ. ತಮ್ಮ ಪ್ರತಿಯೊಂದು ಹೋರಾಟವನ್ನೂ ಅವರು ಪ್ರಜಾಸತ್ತಾತ್ಮಕ ಮಾರ್ಗಗಳಲ್ಲಿಯೇ ಕೈಗೊಂಡರು. ಪ್ರಜಾಸತ್ತೆಯ ಬಗೆಗೆ ಅವರಿಗಿದ್ದ ಅಪಾರ ಗೌರವ ಮುಂದೊಂದು ದಿನ ಗಾಂಧಿಯ ಅಸಹಕಾರ ಚಳವಳಿಯ ಬಗ್ಗೆ ಐತಿಹಾಸಿಕ ಮಾತನ್ನಾಡುವಂತೆ ಮಾಡಿತು. ಗಾಂಧಿಯವರ ಅಸಹಕಾರ ಚಳವಳಿಗಳು ವಿದೇಶಿ ಪ್ರಭುತ್ವದ ವಿರುದ್ಧ ಒಳ್ಳೆಯ ಅಸ್ತ್ರಗಳಾಗಬಲ್ಲವು. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕ ನಂತರ ನಾವು ನಮ್ಮಿಂದಲೇ ಚುನಾಯಿತವಾದ ಸರ್ಕಾರದ ವಿರುದ್ಧ ಇಂತಹ ಚಳವಳಿಗಳನ್ನು ಹಮ್ಮಿಕೊಳ್ಳಬಾರದು. ಆಗೇನಿದ್ದರೂ ಕಾನೂನಿನ ಮೂಲಕವೇ ಹೋರಾಟ ನಡೆಸಬೇಕು.

ಅಂಬೇಡ್ಕರ್ ಪೂರ್ವಾಪರ ಹೀಗಿದ್ದರೂ ೧೯೫೧-೫೨ ರಲ್ಲಿ ನಡೆದ ದೇಶದ ಮೊಟ್ಟಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟದಿಂದ ಮುಂಬಯಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂಬೇಡ್ಕರ್ ಸೋಲೊಪ್ಪಬೇಕಾಯಿತು. ಚುನಾವಣೆಯ ನಂತರ ಜಾತಿವಾರು ಮತ ಚಲಾವಣೆ ಹೇಗಿದೆ ಎಂಬುದನ್ನು ಪರಿಶೀಲಿಸಿದ ಅಂಬೇಡ್ಕರ್‌ಗೆ ಆಘಾತ ಕಾದಿತ್ತು. ದಲಿತರನ್ನು ಬಿಟ್ಟರೆ ಮೇಲ್ವರ್ಗದವರಾರೂ ಅಂಬೇಡ್ಕರ್‌ಗೆ ಮತ ನೀಡಿರಲಿಲ್ಲ!

ಸ್ವತಃ ಅಂಬೇಡ್ಕರ್ ಮೀಸಲಾತಿಯ ಕಾರಣದಿಂದ ಉನ್ನತ ಮಟ್ಟಕ್ಕೆ ಬಂದವರಲ್ಲ. ಅವರು ತಮ್ಮ ಕಾಲದ ಇತರರೆಲ್ಲರಿಗಿಂತ ಹೆಚ್ಚೇ ಶ್ರಮ ಪಟ್ಟು ಜ್ಞಾನ ಸಂಪಾದಿಸಿದ್ದು. ಮಹರ್ ಜಾತಿಗೆ ಸೇರಿದ ಹುಡುಗ ಎಂಬ ಕಾರಣಕ್ಕಾಗಿಯೇ ತಮ್ಮ ಬಾಲ್ಯದಿಂದಲೂ ತಿರಸ್ಕಾರ, ಅಪಮಾನವನ್ನೇ ಅನುಭವಿಸುತ್ತಾ ಸಾಗಿದ ಭೀಮನ ಜೀವನ ಹೂವಿನ ಹಾದಿಯೇನಲ್ಲವಲ್ಲ. ಸಾರ್ವಜನಿಕ ಸ್ಥಳದಲ್ಲಿ ನೀರು ಕುಡಿದ ಕಾರಣಕ್ಕೆ ಅಮಾನವೀಯವಾಗಿ ಪೆಟ್ಟು ತಿಂದಿದ್ದು, ಸವರ್ಣೀಯನೊಬ್ಬನ ಎತ್ತಿನ ಗಾಡಿಯ ಮೇಲೆ ಹೋಗುತ್ತಿದ್ದಾಗ ಆತ ಅಂಬೇಡ್ಕರರ ಜಾತಿ ಯಾವುದು ಅಂತ ಗೊತ್ತಾಗಿ ಅವರನ್ನು ಅವಮಾನಿಸಿದ್ದು... ಇವೆಲ್ಲಾ ಭೀಮನಲ್ಲಿನ ಅಂಬೇಡ್ಕರ್ ಪ್ರಜ್ಞೆ ಜಾಗೃತಗೊಳ್ಳಲು ಕಾರಣವಾದವು.

ರಾಷ್ಟ್ರದ ಐಕ್ಯತೆ ಕಾಪಾಡುವಲ್ಲಿ ಮತ್ತು ಇಲ್ಲಿ ಪ್ರಜಾಪ್ರಭುತ್ವ ಭದ್ರವಾಗಿ ತಳವೂರುವಲ್ಲಿಯೂ ಅಂಬೇಡ್ಕರ್ ಪ್ರಜ್ಞೆ ಸಾಕಷ್ಟು ಕೆಲಸಮಾಡಿದೆ. ದೇಶಕ್ಕೆ ಸ್ವಾತಂತ್ರ ಸಿಕ್ಕಾಗ ಗಾಂಧಿ ಈ ದೇಶದಲ್ಲಿ ಹಿಂದೂ ಮುಸ್ಲಿಂ ಐಕ್ಯತೆಗಾಗಿ ಶ್ರಮಿಸುತ್ತಿದ್ದರು. ಆದರೆ ಆ ಯೋಜನೆಯಲ್ಲಿ ಗಾಂಧಿ ಸೋತಿದ್ದು ಈ ದೇಶದ ಮತ್ತೊಂದು ದುರಂತ ಅಧ್ಯಾಯ. ಅದರ ಚರ್ಚೆ ಇಲ್ಲಿ ಬೇಡ. ಇತ್ತ ನೆಹರೂ ತಮಗೆ ದಕ್ಕಿದ ದೇಶದ ಮೊಟ್ಟಮೊದಲ ಪ್ರಧಾನಿ ಹುದ್ದೆಯನ್ನು ಸಂಪೂರ್ಣವಾಗಿ ಅನುಭವಿಸಲು ಕುಳಿತಿದ್ದರು. ಅತ್ತ ಸರ್ದಾರ್ ಪಟೇಲರು ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಹೊಂಚುಹಾಕುತ್ತಿದ್ದ ಹೈದರಾಬಾದಿನ ನಿಜಾಮನಂತಹ ಸಮಯಸಾಧಕರನ್ನು ಹದ್ದುಬಸ್ತಿನಲ್ಲಿಡುವ ಕೆಲಸದಲ್ಲಿ ನಿರತರಾಗಿದ್ದರು. ಇಡೀ ದೇಶ ಸಂಭ್ರಮ ಮತ್ತು ಉತ್ಸಾಹದಲ್ಲಿ ಇದ್ದಂತಹ ಸಂದರ್ಭದಲ್ಲಿ ಇತ್ತ ಅಂಬೇಡ್ಕರ್ ಇಡೀ ದೇಶಕ್ಕಾಗಿ ಸಂವಿಧಾನ ಹೇಗಿರಬೇಕು, ಈ ದೇಶದಲ್ಲಿ ಯಾವುದು ಪರಮೋಚ್ಛವಾಗಿರಬೇಕು, ಈ ದೇಶದ ಬಹುಸಂಸ್ಕೃತಿಯನ್ನು ಪೋಷಿಸುವಂತಹ ವ್ಯವಸ್ಥೆಯೊಂದನ್ನು ಕಾಪಾಡುವ ಸಂವಿಧಾನ ಹೇಗಿರಬೇಕು ಎಂಬ ಚಿಂತನೆಯಲ್ಲಿ ಮಗ್ನರಾಗಿದ್ದರು.

ಪರಿಣಾಮವಾಗಿಯೇ ದೇಶದ ಪ್ರತಿಯೊಬ್ಬ ಪ್ರಜೆಗೂ ಆತನ ಹುಟ್ಟಿನೊಂದಿಗೆ ದಕ್ಕುವ ಮೂಲಭೂತ ಹಕ್ಕುಗಳ ಪರಿಕಲ್ಪನೆ ದೇಶದ ಸಂವಿಧಾನದೊಳಗೆ ಭದ್ರವಾಗಿ ಬೇರೂರಿತು. ಯಾವುದೇ ಸಾಂವಿಧಾನಿಕ ತಿದ್ದುಪಡಿ ಕೂಡ ದೇಶದ ಪ್ರತಿಯೊಬ್ಬ ಪ್ರಜೆಗೆ ಸಂವಿಧಾನವೇ ನೀಡಿರುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವಂತಿಲ್ಲ ಎಂಬ ಅನುಪಮ ಲಕ್ಷಣಗಳು ನಮ್ಮ ಸಂವಿಧಾನದಲ್ಲಿ ಬರಲು ಕಾರಣ ಅಂಬೇಡ್ಕರ್ ಪ್ರಜ್ಞೆ.

ನಮಗೆ ಇಂದು ಅಂಬೇಡ್ಕರ್ ಬೇಕಾಗಿರುವುದು ಅಸಮಾನತೆಯ ವಿರುದ್ಧದ ಹೋರಾಟದ ಪ್ರಜ್ಞೆಯಾಗಿ. ಅಸಮಾನತೆ ಎಂದ ಕೂಡಲೆ ಅದು ಜಾತಿ ಆಧಾರಿತ ಅಸಮಾನತೆಯೇ ಆಗಬೇಕೆಂದಿಲ್ಲ. ಅದು ಶ್ರೀಮಂತ - ಬಡವ ಎಂಬ ಅಸಮಾನತೆಯೂ ಆಗಿರಬಹುದು, ನಗರವಾಸಿ - ಗ್ರಾಮವಾಸಿ ಎಂಬ ಅಸಮಾನತೆಯೂ ಆಗಿರಬಹುದು. ಇಂಥದ್ದೆಲ್ಲ ಅಸಮಾನತೆಗಳ ವಿರುದ್ಧದ ಹೋರಾಟಕ್ಕೆ ಅಂಬೇಡ್ಕರ್ ಪ್ರಜ್ಞಾಶಕ್ತಿಯಾಗಿ ಕಾಣುತ್ತಾರೆ. ಯಾವುದೇ ಹೋರಾಟವನ್ನಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನೊಳಗೆಯೇ ಮಾಡಬೇಕು ಎಂಬ ಎಚ್ಚರವನ್ನೂ ಅಂಬೇಡ್ಕರ್ ಪ್ರಜ್ಞೆ ನಮಗೆ ಕೊಡುತ್ತದೆ.

ಅಸಮಾನತೆಯೆಂಬುದು ನಿನ್ನೆ ಇತ್ತು, ಇವತ್ತೂ ಇದೆ. ಆದೆ ಅದು ನಾಳೆಯೂ ಇರದಂತೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟವರೆಲ್ಲರ ಜವಾಬ್ದಾರಿ. ಅಂಥದೊಂದು ಜವಾಬ್ದಾರಿಯನ್ನು ನಿರ್ವಹಿಸಲು ನಮ್ಮೊಳಗಿನ ಅಂಬೇಡ್ಕರ್ ಪ್ರಜ್ಞೆ ಪ್ರೇರಣೆಯಾಗಲಿ.

- ವಿಜಯ್ ಜೋಷಿ

Saturday, April 03, 2010

ಚೇರ್ಕಾಡಿ ರಾಮಚಂದ್ರ ರಾಯರ ನೆವದಲ್ಲಿ...

"ಚೇರ್ಕಾಡಿ ರಾಮಚಂದ್ರ ರಾಯರು ತೀರಿಕೊಂಡರಂತೆ."

ಭಾರತದ ಫುಕುವೋಕಾ ಎಂಬ ಬಿರುದನ್ನು ಅರ್ಹವಾಗಿಯೇ ಹೊತ್ತಿದ್ದ ಚೇರ್ಕಾಡಿ ರಾಯರು ತೀರಿಕೊಂಡ ಸುದ್ದಿಯನ್ನು ಕೇಳಿದ ತಕ್ಷಣ "ಅವರ ಸಾವಿನ ಸುದ್ದಿಯನ್ನು ನಂಬಲಾಗಲಿಲ್ಲ, ಅವರ ಸಾವು ಬಹಳ ದುಃಖ ತಂದಿತು ಅಂತ ಹೇಳುವುದು" ತೀರಾ ಕೃತಕವಾಗುತ್ತದೆ. ಆದರೆ ಅವರ ಸಾವಿನ ಸುದ್ದಿಯನ್ನು ಕೇಳಿದ ತಕ್ಷಣ ಮನಸ್ಸು ನೆನಪಿಸಿಕೊಂಡಿದ್ದು ಸುಮಾರು ಎರಡು ತಿಂಗಳುಗಳ ಹಿಂದೆ ಪುತ್ತೂರಿನ ಅಡಿಕೆ ಪತ್ರಿಕೆ ಕಛೇರಿಯಲ್ಲಿ ಪತ್ರಕರ್ತ ಶ್ರೀ ಪಡ್ರೆಯವರೊಂದಿಗೆ ಕಳೆದ ಕ್ಷಣಗಳು.

ಸ್ನಾತಕೋತ್ತರ ಪದವಿಯ ಅನಿವಾರ್ಯ ಭಾಗವಾದ ಕಿರು ಸಂಶೋಧನಾ ಪ್ರಬಂಧಕ್ಕೆ ಅಗತ್ಯ ಮಾಹಿತಿ ಕಲೆಹಾಕಲು ಶ್ರೀ ಪಡ್ರೆಯವರ ಸಹಾಯ ಕೋರಿ ಅವರ ಅಡಿಕೆ ಪತ್ರಿಕೆಯ ಕಛೇರಿಗೆ ಹೋಗಿದ್ದೆ. ಆಗ ಅವರು ಆಡಿದ್ದ ಒಂದೊಂದೂ ಮಾತುಗಳು ಚೇರ್ಕಾಡಿ ರಾಯರ ಸಾವಿನ ಸುದ್ದಿಯ ಹಿಂದೆಯೇ ಮೆರವಣಿಗೆಯಲ್ಲಿ ತೇಲಿ ಬಂದವು.

"ನಮ್ಮ ದೇಶವನ್ನು ಕೃಷಿ ಪ್ರಧಾನ ದೇಶ ಅಂತ ನಮಗೇ ಬೇಸರವಾಗುವಷ್ಟು ಹೇಳುತ್ತೇವೆ. ರೈತನೇ ದೇಶದ ಬೆನ್ನೆಲುಬು ಅಂತ ಹಾಡಿಹೊಗಳುತ್ತೇವೆ. ನಮ್ಮ ಸರಕಾರ ಕೂಡ ಸಮಯ ಸಿಕ್ಕಾಗಲೆಲ್ಲ ಇದೇ ಮಾತನ್ನು ಹೇಳುತ್ತದೆ. ಆದರೆ ತನ್ನ ನೀತಿಗಳ ಮೂಲಕ ವ್ಯವಸ್ಥಿತವಾಗಿ ರೈತನ ಬೆನ್ನೆಲುಬನ್ನೇ ಮುರಿಯುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ರೈತರ ಜಪವನ್ನೇ ಉರುಹೊಡೆಸುತ್ತೇವೆ. ಅವರು ಪರೀಕ್ಷೆಗಳಲ್ಲಿ ಇದನ್ನೇ ಬರೆಯುತ್ತಾರೆ. ತೊಂಭತ್ತು ತೊಂಭತ್ತೈದು ಅಂಕಗಳನ್ನೂ ತೆಗೆದುಕೊಳ್ಳುತ್ತಾರೆ. ಆದರೆ ನಾವು ಯಾವತ್ತಾದರೂ ಕೃಷಿ ಒಂದು ಬದುಕು ಅಂತ ನಮ್ಮ ಮಕ್ಕಳಿಗೆ ಕಲಿಸುತ್ತೇವಾ?"

"ಬ್ರೆಝಿಲ್ ಕೂಡ ನಮ್ಮಂತೆಯೇ ಒಂದು ಕೃಷಿ ಪ್ರಧಾನ ದೇಶ. ಅಲ್ಲಿಯೂ ಕೂಡ ರೈತನೇ ಆರ್ಥಿಕತೆಯ ಬೆನ್ನೆಲುಬು. ಆದರೆ ಅಲ್ಲಿಗೂ ನಮಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲಿ ಒಂದನೆಯ ತರಗತಿಯಿಂದಲೇ ಮಕ್ಕಳಿಗೆ ಕೃಷಿಯ ಬಗ್ಗೆ ಪ್ರಾಯೋಗಿಕ ತರಗತಿಗಳು ಇರುತ್ತವೆ. ಒಂದರಿಂದ ಹಿಡಿದು ಹತ್ತನೆಯ ತರಗತಿಯವರೆಗೂ ಕೃಷಿಯ ಪಾಠಗಳು ಅಲ್ಲಿನ ಮಕ್ಕಳಿಗೆ ಕಡ್ಡಾಯ. ಅವರೆಲ್ಲರೂ ತಮ್ಮ ಪಠ್ಯ ಚಟುವಟಿಕೆಗಳ ಭಾಗವಾಗಿ ಹೊಲ, ಗದ್ದೆ, ತೋಟಗಳಿಗೆ ಹೋಗಿ ಕೈಗೆ ಮಣ್ಣನ್ನು ಮೆತ್ತಿಕೊಳ್ಳಬೇಕು. ಮಣ್ಣಿನ ಗುಣ ಅವರಿಗೆ ತಿಳಿಯಬೇಕು. ಮಣ್ಣಿನೊಂದಿಗೆ ಭಾವನಾತ್ಮಕ ಬೆಸುಗೆ ಎಳೆಯ ಪ್ರಾಯದಿಂದಲೇ ಅವರಲ್ಲಿ ಬೆಳೆಯಬೇಕು. ಅಂತಹ ಶಿಕ್ಷಣ ವ್ಯವಸ್ಥೆ ಅಲ್ಲಿದೆ. ಅದೇ ಕಾರಣಕ್ಕಾಗಿ ಬ್ರೆಝಿಲ್ ದೇಶದ ಸುಶಿಕ್ಷಿತರಾರೂ ಕೃಷಿಯ ಬಗ್ಗೆ ತಾತ್ಸಾರದ ಮಾತುಗಳನ್ನು ಆಡುವುದಿಲ್ಲ."

ನಾವೆಲ್ಲರೂ ಅನ್ನವನ್ನೇ ಊಟಮಾಡುತ್ತೇವೆ ಅನ್ನುವುದರಲ್ಲಿ ಎರಡು ಮಾತಿಲ್ಲ. ನಾವು ಉಣ್ಣುವ ಪ್ರತಿ ತುತ್ತಿನ ಹಿಂದೆಯೂ ರೈತನೊಬ್ಬ ತನ್ನ ಬೆವರಿನ ಹನಿಯನ್ನು ಬಂಡವಾಳದ ರೂಪದಲ್ಲಿ ಹರಿಸಿರುತ್ತಾನೆ ಎಂಬುದೂ ನಮಗೆ ಗೊತ್ತು. ಆದರೂ ಇವತ್ತು ಕೃಷಿಕ ನಮ್ಮ ಸಮಾಜದ ಉಪೇಕ್ಷಿತ ಬಂಧುವಾಗಿದ್ದಾನೆ. ವಿದ್ಯಾವಂತರು ಸ್ವಇಚ್ಛೆಯಿಂದ ಕೃಷಿಯನ್ನು ತಮ್ಮ ಬದುಕನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಅದಲ್ಲದೆ, ಇವತ್ತು ವ್ಯಕ್ತಿಯೊಬ್ಬ ವಿದ್ಯಾವಂತನಾಗುತ್ತಿದ್ದಾನೆ ಅಂದರೆ ಆತ ಕೃಷಿಯಿಂದ ದೂರವಾಗುತ್ತಿದ್ದಾನೆ ಎಂದೇ ಅರ್ಥೈಸಬೇಕಾದ ಪರಿಸ್ಥಿತಿ ಬಂದಿದೆ. ಏಕೆ ಹೀಗೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಉತ್ತರ ಅರಸುತ್ತಾ ಹೊರಟರೆ ಅಂಧಕಾರವೇ ಎದುರಾಗುತ್ತದೆಯೇ ಹೊರತು ಉತ್ತರ ದೊರಕುವ ಆಸೆ ಎಲ್ಲಿಯೂ ಚಿಮ್ಮುವುದಿಲ್ಲ.

ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಉಡುಪಿ ತಾಲೂಕಿನ ಬ್ರಹ್ಮಾವರದ ಬಳಿಯ ಚೇರ್ಕಾಡಿಯ ತಮ್ಮ ಎರಡೆಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದ ರಾಮಚಂದ್ರ ರಾಯರು ತಮ್ಮ ಬದುಕು ಮುಗಿಸಿದ್ದಾರೆ. ಆದರೆ ಇವತ್ತಿನ ಕೃಷಿರಂಗ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ, ಉತ್ತರಿಸಲಾಗದೆ ಬಿಟ್ಟಿರುವ ಪ್ರಶ್ನೆಗಳಿಗೆ ಪರಿಹಾರವನ್ನು ತಮ್ಮ ಜಮೀನಿನ ಮಣ್ಣಿನಲ್ಲಿ ಬರೆದಿಟ್ಟು ಹೊರಟುಹೋಗಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಅವಾಂತರಗಳನ್ನೇ ಮಾಡುತ್ತಿರುವ ನಮಗೆ ರಾಮಚಂದ್ರ ರಾವ್ ಒಬ್ಬ ವ್ಯಕ್ತಿಯಂತೆ ಅಲ್ಲ, ಒಂದು ಪ್ರಜ್ಞೆಯಂತೆ ಕಾಣತೊಡಗುತ್ತಾರೆ.

ಇವತ್ತು ಚೇರ್ಕಾಡಿ ರಾಮಚಂದ್ರ ರಾಯರ ಕೃಷಿ ಪ್ರಯೋಗಗಳನ್ನು ಕೇಳದವರು ಇಲ್ಲ. ಆದರೆ ಅಷ್ಟೇ ಮಂದಿ ಟೀಕಾಕಾರರೂ ಅವರ ಬದುಕಿನ ನೀತಿಯ ಕುರಿತು ಮಾತನಾಡುತ್ತಾರೆ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಚೇರ‍್ಕಾಡಿಯವರ ಕೃಷಿ ಬದುಕನ್ನು ಟೀಕಿಸುವವರ ವಾದಗಳನ್ನು ಸಂಪೂರ್ಣವಾಗಿ ಆಲಿಸಿದ ನಂತರವೂ ಚೇರ್ಕಾಡಿಯವರ ಬಗ್ಗೆ ಗೌರವ ಉಳಿದುಕೊಳ್ಳುತ್ತದೆ. ಅಷ್ಟೇ ಅಲ್ಲ ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತದೆ.

ಚೇರ್ಕಾಡಿ ರಾಯರಂತೆ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ, ತಮ್ಮ ಕೃಷಿ ಭೂಮಿಗೆ ವಿದ್ಯುತ್ ಪಂಪ್‌ಸೆಟ್ ಸಂಪರ್ಕ ಪಡೆಯದೆ, ಆಧುನಿಕ ಸವಲತ್ತುಗಳಿಂದ ಬಹುತೇಕ ದೂರವಾಗಿಯೇ ಬದುಕುವುದು ಎಷ್ಟು ಮಂದಿಗೆ ಸಾಧ್ಯ? ಎಂಬ ಪ್ರಶ್ನೆ ಯಾವ ಕಾಲಕ್ಕೂ ಇದ್ದಿದ್ದೇ. ಅಂಥದ್ದೊಂದು ಪ್ರಶ್ನೆ ಇರಬೇಕಾದದ್ದೂ ಸಹಜವೇ. ನಿಜ, ಚೇರ್ಕಾಡಿ ರಾಮಚಂದ್ರ ರಾಯರಂತೆ ಬದುಕುವುದು ಎಲ್ಲರಿಂದ ಸಾಧ್ಯವಿಲ್ಲ. ಅವರಂತೆಯೇ ಬದುಕಿ ಅಂತ ಹೇಳುವ ನೈತಿಕ ಧೈರ್ಯ ಕೂಡ ನಮ್ಮಲ್ಲಿಲ್ಲ. ಆದರೆ, ಆಧುನಿಕ ಜಗತ್ತಿನ ಸುಖವನ್ನು ಅನುಭವಿಸಬಹುದಾದ ಎಲ್ಲ ಅವಕಾಶಗಳಿದ್ದೂ ಒಬ್ಬ ವ್ಯಕ್ತಿ ಅದನ್ನು ತಿರಸ್ಕರಿಸುತ್ತಾನೆ, ಉದ್ದೇಶಪೂರ್ವಕವಾಗಿ ಅವುಗಳಿಂದ ದೂರವೇ ಉಳಿಯುತ್ತಾನೆ ಎಂದರೆ ಅದು ಸೋಜಿಗವೇ ಸರಿ. "ನಾನು ನಮ್ಮ ದೇಶ ಭಾರತವನ್ನು ಬಿಟ್ಟು ಅಮೆರಿಕಾಕ್ಕೆ ಹೋಗಿ ಚಾಕರಿ ಮಾಡುವವರನ್ನು ವಿರೋಧಿಸುತ್ತೇನೆ" ಎಂಬ ಮಾತುಗಳನ್ನಾಡುವುದು ಬಹಳ ಸುಲಭ. ಆದರೆ ಅನಾಯಾಸವಾಗಿ ಅಮೆರಿಕಕ್ಕೆ ಹೋಗುವ ಅವಕಾಶವೊಂದು ನಮ್ಮ ಕೈಯಲ್ಲಿದ್ದಾಗ ನಿರ್ಮೋಹದಿಂದ, ನಿರ್ಮಾತ್ಸರ್ಯದಿಂದ ಅದನ್ನು ತಿರಸ್ಕರಿಸುವುದು ಬಹಳ ಸವಾಲಿನ ಕೆಲಸ. ನಮ್ಮ ಮಾತಿನಲ್ಲಿರುವ ಪ್ರಾಮಾಣಿಕತೆಯ ತೀವ್ರತೆ ಪರೀಕ್ಷೆಗೆ ಒಳಗಾಗುವುದು ಅಂಥ ಸಂದರ್ಭಗಳಲ್ಲಿಯೇ.

ಗಾಂಧಿಯ ಹಿಂದ್ ಸ್ವರಾಜ್ ಪುಸ್ತಕವನ್ನಿಟ್ಟುಕೊಂಡು ಆಧುನಿಕ ವಿಜ್ಞಾನದ ಅಪಾಯವನ್ನು ಮಾತನಾಡುವುದು ಸುಲಭ. ಆದರೆ ಹಿಂದ್ ಸ್ವರಾಜ್ ಪುಸ್ತಕವನ್ನು ಓದದೆಯೇ ಆಧುನಿಕ ಸುಖ ಸವಲತ್ತುಗಳನ್ನು ನಿರಾಕರಿಸುವುದು - ಅಂತಹ ಸವಲತ್ತುಗಳನ್ನು ಪಡೆದುಕೊಳ್ಳುವ ಎಲ್ಲ ಅವಕಾಶಗಳಿದ್ದೂ - ನಿಜಕ್ಕೂ ಸವಾಲಿನದ್ದು.

ಸ್ವಾತಂತ್ರ ಬಂದ ನಂತರದ ಕಾಲದಿಂದ ಹಿಡಿದು ಇಂದಿನವರೆಗೂ ನಮ್ಮ ಪಾಲಿಗೆ ’ಅಭಿವೃದ್ಧಿ’ ಎಂಬ ಪದ ಬಹಳ ಮಟ್ಟಿಗೆ ಮೋಡಿ ಮಾಡುತ್ತ ಬಂದಿದೆ. ಸ್ವಾತಂತ್ರ ಸಿಕ್ಕಾಗ ನಾವು ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತಿದ್ದ ರೀತಿಗೂ ಇವತ್ತು ನಾವು ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ರೀತಿಗೂ ಸಾಕಷ್ಟು ವ್ಯತ್ಯಾಸವಿರಬಹುದು. ಆದರೆ ಸ್ವಾತಂತ್ರ ಸಿಕ್ಕ ಕಾಲದಲ್ಲೇ (ಸುಮಾರು ೧೯೫೦-೫೧ನೆಯ ಇಸವಿ) ಚೇರ್ಕಾಡಿಯಲ್ಲಿ ತಮ್ಮ ಕೃಷಿ ಬದುಕನ್ನು ಆರಂಭಿಸಿದ ರಾಯರು ತಮ್ಮ ಕೊನೆಯ ಉಸಿರಿನವರೆಗೂ ತಮ್ಮ ನೀತಿಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಅವರಿಗೆ ೧೯೫೧ನೆಯ ಇಸವಿಯಲ್ಲೇ - ಅಂದರೆ ಇಡೀ ಭಾರತ ಅಭಿವೃದ್ಧಿ ಎಂದರೆ ಕಾಡನ್ನು ಕಡಿಯುವುದು, ಕೈಗಾರಿಕೆಗಳನ್ನು ನೆಡುವುದು ಎಂದು ತಿಳಿದುಕೊಂಡಿದ್ದ ಕಾಲದಲ್ಲಿಯೇ - ಪರಿಸರಕ್ಕೆ ಸಂಪೂರ್ಣ ಶರಣಾಗಿ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಿದರು. ಒಂದು ಕ್ಷಣ ಕಾಲಕ್ಕೂ ಅವರು ಪರಿಸರದ ನಿಯಮದ ವಿರುದ್ಧ ಯೋಚಿಸಲಿಲ್ಲ. ಚೇರ್ಕಾಡಿ ಮಾದರಿಯ ಕೃಷಿ ನಮಗೆ ಅಪ್ಯಾಯಮಾನವಾಗುವುದು ಇದೇ ವಿಚಾರದಲ್ಲಿ.

ಸ್ವಾತಂತ್ರ ಬಂದ ನಂತರ, ಅಂದರೆ ೧೯೬೦ರ ದಶಕದಲ್ಲಿ ಭಾರತ ಕಂಡ ಹಸಿರು ಕ್ರಾಂತಿ ನಮ್ಮ ಆಹಾರ ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದ್ದೇನೋ ನಿಜ. ಆದರೆ ಆ ಕಾಲಘಟ್ಟದಲ್ಲಿ ರೈತರ ಕೈಗೆ ಬಂದ ಹೈಬ್ರಿಡ್ ಬೀಜಗಳು, ಭೂಮಿಯ ಸತ್ವವನ್ನೇ ಹೀರಿಬಿಟ್ಟವು. ದೇಸೀ ತಳಿಗಳಿಗಿಂತ ಅತಿಹೆಚ್ಚಿನ ಪ್ರಮಾಣದಲ್ಲಿ ನೀರು ಬೇಡುತ್ತಿದ್ದ ಹೈಬ್ರಿಡ್ ತಳಿಗಳು ನಮ್ಮ ದೇಶದ ಅಂತರ್ಜಲವನ್ನು ಅಪಾಯಕಾರಿ ಮಟ್ಟಕ್ಕೆ ಇಳಿಸಿದವು. ಆ ಕಾಲದಲ್ಲಿ ನಾವು ಬೆಳೆಗಳಿಗೆ ಎಗ್ಗಿಲ್ಲದೆ ಉಣಿಸಿದ ರಾಸಾಯನಿಕಗಳು ಭೂಮಿಯ ಒಡಲಿಗೆ ವಿಷವುಣಿಸಿ, ಬೆಳೆಯನ್ನು ಉಣ್ಣುವ ಜನಸಾಮಾನ್ಯನ ಹೊಟ್ಟೆಗೂ ವಿಷಪ್ರಾಶನ ಮಾಡಿಸಿದವು. ಪರಿಣಾಮವಾಗಿ ಪಡ್ರೆ, ಸ್ವರ್ಗದಂತಹ ಆಧುನಿಕ ಜಗತ್ತಿನ ಯಾವ ಜಂಜಡವೂ ಇಲ್ಲದಿದ್ದ ಊರುಗಳಿಗೆ ಎಂಡೋಸಲ್ಫಾನ್ ಕೀಟನಾಶಕದಿಂದಾಗಿ ಅರ್ಥೈಸಲಾಗದ ರೋಗಗಳು ಬರುವಂತಾದವು. ಒಂದಿಡೀ ಜನಾಂಗವೇ ರೋಗಗ್ರಸ್ತವಾಯಿತು. ಇತ್ತ ಭೂಮಿ ಕೂಡ ತನ್ನ ಸಾರ ಕಳೆದುಕೊಳ್ಳುತ್ತ ಬಂದಿತು. ಹೈಬ್ರಿಡ್ ಬೀಜಗಳನ್ನೇ ಬಿತ್ತಿದರೂ ಬೆಳೆಯ ಪ್ರಮಾಣ ಕಡಿಮೆಯಾಗುತ್ತ ಹೋಯಿತು. ಆ ಹೊತ್ತಿಗೆ ನಾವು ಅನುಸರಿಸಿದ ಕೃಷಿ ಅಭಿವೃದ್ಧಿ ನೀತಿ ಸುಸ್ಥಿರವಲ್ಲ ಎಂಬ ಅರಿವು ಹೆಚ್ಚಿನವರಿಗೆ ಬರಲಾರಂಭಿಸಿತು. ಸುಸ್ಥಿರ ಅಭಿವೃದ್ಧಿಯ ಮಾದರಿಗಳತ್ತ ನಮ್ಮ ದೇಶದ ನೀತಿ ನಿರ್ಮಾಪಕರ ಗಮನ ಹರಿಯಿತು.

ಇನ್ನೊಂದು ಬದಿಯಲ್ಲಿ ಗಾಂಧಿಯ ಅಭಿವೃದ್ಧಿ ಮಾದರಿಯನ್ನು ಸ್ಪಷ್ಟವಾಗಿ ಧಿಕ್ಕರಿಸಿದ ನೆಹರೂ ಮಾದರಿಯ ಅಭಿವೃದ್ಧಿಯನ್ನು (ನೆಹರೂ ಮಾದರಿಯ ಅಭಿವೃದ್ಧಿ ಅಂದರೆ ಕೈಗಾರಿಕೀಕರಣದ ಮಾದರಿ ಎಂದೇ ಅರ್ಥೈಸಬೇಕಾಗುತ್ತದೆ) ಸ್ವಾತಂತ್ರ ಸಿಕ್ಕ ಸಂದರ್ಭದಿಂದಲೇ ಅನುಸರಿಸುತ್ತ ಬಂದ ನಮಗೆ ನಮ್ಮ ಪರಿಸರ ಒಂದು ಕಡೆಯಿಂದ ನಾಶವಾಗುತ್ತ ಬಂದದ್ದು ಅರಿವಿಗೆ ಬರಲಿಲ್ಲ. ಅದಲ್ಲದೆ ಪರಿಸರ ರಕ್ಷಣೆಯೊಂದಿಗೆ ಅಭಿವೃದ್ಧಿ ಕಾರ್ಯ ನಡೆಯಲಿ ಎಂದು ಗಟ್ಟಿಯಾಗಿ ಹೇಳಿದವರಿಗೆ ಪ್ರತಿಗಾಮಿಗಳು ಎಂಬ ಹಣೆಪಟ್ಟಿ ಅಂಟಿಸಿ ಅವರನ್ನು ಅಪ್ರತಿಭರನ್ನಾಗಿ ಮಾಡುವ ಕೆಲಸ ಕೂಡ ನಿರಾತಂಕವಾಗಿ ಸಾಗಿತು. ಇಂಥ ಒಂದು ದೋಷಪೂರಿತ ಅಭಿವೃದ್ಧಿ ಮಾದರಿಯನ್ನು ಅನುಸರಿಸಿದ ಪರಿಣಾಮ ನಮ್ಮ ದೇಶದ ಬಹುದೊಡ್ಡ ಪ್ರಮಾಣದ ಕಾಡು ಇನ್ನಿಲ್ಲದಂತೆ ನಾಶವಾಯಿತು. ಅದಲ್ಲದೆ ಇತ್ತೀಚಿನ ಒಂದು ವರದಿಯಂತೆ ದೇಶದ ಸುಮಾರು ೪೩ ನಗರಗಳು ಮನುಷ್ಯನ ಆರೋಗ್ಯಕರ ಬದುಕಿಗೆ ಅಯೋಗ್ಯವಾದ ಪ್ರದೇಶಗಳು ಎಂದು ಹೇಳುವಷ್ಟರ ಮಟ್ಟಿಗೆ ಪ್ರದೂಷಣೆಗೊಂಡವು. ಈಗ ಎಲ್ಲರಿಗೂ ಅರ್ಥವಾಗುತ್ತಿದೆ; ಪರಿಸರ ಕೇಂದ್ರಿತ ಅಭಿವೃದ್ಧಿ ನಮ್ಮ ಭೂಮಿಯ ಉಳಿವಿಗೆ ಅನಿವಾರ್ಯ ಎಂದು.

ಒಂದು ಹಂತದಲ್ಲಿ ಅಭಿವೃದ್ಧಿಯ ಬಗ್ಗೆ ಮಾತ್ರ ತಲೆಕೆಡಿಸಿಕೊಂಡ ನಾವು (ಅಭಿವೃದ್ಧಿ ಅಂದರೆ ಏನು ಎಂಬುದನ್ನೂ ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ. ಆ ಮಾತು ಬೇರೆ) ಎರಡನೆಯ ಹಂತದಲ್ಲಿ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಹೆಚ್ಚು ಚಿಂತಿತರಾದೆವು. ಈಗ ’ಸುಸ್ಥಿರ ಪರಿಸರ ಪೂರಕ ಅಭಿವೃದ್ಧಿ’ ಮಾದರಿಯ ಶೋಧದಲ್ಲಿ ತೂಡಗುವ ಹಂತಕ್ಕೆ ಬಂದು ತಲುಪಿದ್ದೇವೆ. ಒಳ್ಳೆಯದೇ. ಆದರೆ ಸ್ವತಂತ್ರ ಭಾರತಕ್ಕೆ ಈ ಹಂತಕ್ಕೆ ತಲುಪಲು ಅರವತ್ತು ವರ್ಷಗಳೇ ಬೇಕಾಯಿತು. ಅರವತ್ತು ವರ್ಷಗಳು ಸಂದರೂ ಪರಿಸರ ಕೇಂದ್ರಿತ ಅಭಿವೃದ್ಧಿಯ ಮಹತ್ವ ನಮ್ಮ ತಲೆಗಿನ್ನೂ ಸರಿಯಾಗಿ ಹೋಗಿಲ್ಲ. ಆದರೆ ಸುಸ್ಥಿರ ಅಭಿವೃದ್ಧಿ ನಮ್ಮ ನೀತಿನಿರೂಪಕರ ಪಾಲಿಗೆ ಅರ್ಥವಾಗಿರುವ ಲಕ್ಷಣಗಳು ಕಾಣಿಸುತ್ತಿವೆ.

ಇಷ್ಟೆಲ್ಲ ವಿಚಾರಗಳು ದೇಶದ ಉದ್ದಗಲಕ್ಕೂ ಸಂಭವಿಸುತ್ತಿದ್ದಾಗ ಚೇರ್ಕಾಡಿ ರಾಮಚಂದ್ರ ರಾಯರು ಮಾತ್ರ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ತಮ್ಮ ಪಾಡಿಗೆ ತಾವು ಪ್ರಕೃತಿಯೊಂದಿಗೆ ಸಂಪೂರ್ಣ ಸಾಮರಸ್ಯದೊಂದಿಗೆ ಜೀವನ ನಡೆಸುತ್ತಿದ್ದರು. ಸುಸ್ಥಿರ, ಪರಿಸರ ಪೂರಕ ಎಂಬ ಪದಗಳು ಗೊಡ್ಡು ಎಂಬ ಅರ್ಥ ಕೊಡುತ್ತಿದ್ದ ಕಾಲದಲ್ಲಿಯೇ ಅವೆರಡು ಪದಗಳ ಅರ್ಥವನ್ನು ಸರಿಯಾಗಿಯೇ ಗ್ರಹಿಸಿ ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದರು. ಯಾವತ್ತಿಗೂ ತಮ್ಮ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ, ರಾಸಾಯನಿಕ ಕೀಟನಾಶಕಗಳನ್ನು ಬಳಸಲಿಲ್ಲ. ಕೊಳವೆಬಾವಿ ತೆಗೆದು, ಯಥೇಚ್ಛ ನೀರು ತೆಗೆದು ಅಂತರ್ಜಲದ ಒಡಲಿಗೆ ಕೈ ಹಾಕಲಿಲ್ಲ. ಒಟ್ಟಿನಲ್ಲಿ ನಾವು ಇವತ್ತು ಬಹಳ ಆಸಕ್ತಿಯಿಂದ ಹೇಳುತ್ತಿರುವ ’ಸುಸ್ಥಿರ ಪರಿಸರ ಪೂರಕ ಅಭಿವೃದ್ಧಿ’ ಎಂಬ ವಿಚಾರವನ್ನು ಇವತ್ತಿಗೆ ಸುಮಾರು ಅರವತ್ತು ವರ್ಷಗಳ ಹಿಂದೆಯೇ ಕಾರ್ಯದಲ್ಲಿ ತೋರಿಸಿಕೊಟ್ಟರು. ಕೇವಲ ಮೂರನೆಯ ತರಗತಿಯವರೆಗೆ ಮಾತ್ರ ಶಾಲಾ ಶಿಕ್ಷಣ ಪಡೆದ, ಆಧುನಿಕ ಜಗತ್ತಿನ ಪಾಲಿಗೆ ಅಷ್ಟೇನೂ ಸುಶಿಕ್ಷಿತ ಅನಿಸದ, ಆದರೆ ಜನತಾ ವಿಶ್ವವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪಡೆದ ಚೇರ್ಕಾಡಿ ರಾಮಚಂದ್ರ ರಾಯರು ಇವತ್ತು ಮಹತ್ವವಾಗುವುದು ಇದೇ ಕಾರಣಕ್ಕೆ.

ಚೇರ್ಕಾಡಿ ರಾಯರು ಹೊರಟುಹೋಗಿದ್ದಾರೆ; ಸುಸ್ಥಿರ ಪರಿಸರ ಪೂರಕ ಅಭಿವೃದ್ಧಿ ಮಾದರಿಯೊಂದನ್ನು ತಮ್ಮ ಜಮೀನಿನಲ್ಲಿ ಬರೆದಿಟ್ಟು. ಅದನ್ನು ಓದುವ ಮನಸ್ಸು ನಮ್ಮದಾಗಲಿ.

ವಿಜಯ್ ಜೋಶಿ.

Thursday, April 01, 2010

ಅನ್ವಯಿಕ ಸಿದ್ಧಾಂತಗಳು, ಮಾಧ್ಯಮ ಯಶೋಗಾಥೆ ಮತ್ತು ಸಮರ್ಥ ಗುರುವಿನ ನಿರೀಕ್ಷೆ...

ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಒಂದು ತಿಂಗಳ ಇಂಟನರ್್ಶಿಪ್ಗಾಗಿ ಸೇರಿದ್ದ ದಿನಗಳು. ಪತ್ರಿಕೋದ್ಯಮದಲ್ಲಿ ಮೂರು ವರ್ಷದ ಡಿಗ್ರಿ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಕೋಸರ್ಿನ ಒಂದು ವರ್ಷದ ಅವಧಿ ಪೂರ್ಣಗೊಂಡಿತ್ತು. ಇನ್ನೊಂದು ವರ್ಷದ ಅಧ್ಯಯನ ಬಾಕಿಯಿತ್ತು.

ಮಂಗಳೂರು ಡೆಕ್ಕನ್ ಹೆರಾಲ್ಡ್ನ ಮುಖ್ಯಸ್ಥ ರೊನಾಲ್ಡ್ ಫನರ್ಾಂಡೀಸ್ ನನ್ನನ್ನು ಕರೆದು ಒಂದು ಉದ್ದದ ಪತ್ರಿಕಾ ಹೇಳಿಕೆಯನ್ನು ಕೊಟ್ಟು ಅದರ ಆಧಾರದಲ್ಲಿ ಚುಟುಕು ಸುದ್ದಿಯೊಂದನ್ನು ಬರೆಯಲು ಹೇಳಿದರು. ಪತ್ರಿಕಾ ಹೇಳಿಕೆಯನ್ನು ಆಮೂಲಾಗ್ರವಾಗಿ ಓದಿದ ನನಗೆ ಆ ಪತ್ರಿಕಾ ಹೇಳಿಕೆಯಲ್ಲಿ ಸುದ್ದಿ ಯಾವುದು, ಸುದ್ದಿಯಲ್ಲದ್ದು ಯಾವುದು ಎಂಬುದರ ವ್ಯತ್ಯಾಸ ಫಕ್ಕನೆ ಹೊಳೆಯಲಿಲ್ಲ. ಪತ್ರಿಕೋದ್ಯಮ ತರಗತಿಗಳಲ್ಲಿ ಆರಂಭದಲ್ಲಿಯೇ ಬೋಧಿಸುವ "5 ಡಬ್ಲ್ಯೂ 1 ಎಚ್ "ಪಾಠಗಳು ಆ ಹೊತ್ತಿಗೆ ನನಗೆ ಸಾಕಷ್ಟು ಬಾರಿ ಆಗಿದ್ದವು. "ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಆದರೆ ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ "ಎಂಬ ಪಾಠಗಳಂತೂ ಬೋರು ಹೊಡೆಸುವಷ್ಟು ಆಗಿದ್ದವು. ಹೀಗಿದ್ದರೂ ರೊನಾಲ್ಡ್ ಅವರು ಕೊಟ್ಟ ಪತ್ರಿಕಾ ಹೇಳಿಕೆಯಲ್ಲಿ "5ಡಬ್ಲ್ಯೂ "ಯಾವುದು "1ಎಚ್" ಯಾವುದು ಎಂಬ ಗೊಂದಲ ಬಗೆಹರಿಯುತ್ತಿರಲಿಲ್ಲ. ಅಷ್ಟೊಂದು ದೊಡ್ಡ ಪತ್ರಿಕಾ ಹೇಳಿಕೆಯನ್ನು ನೂರಿನ್ನೂರು ಪದಗಳಲ್ಲಿ ಬರೆಯುವುದು ಹೇಗೆಂಬುದೂ ಬಗೆಹರಿಯುತ್ತಿರಲಿಲ್ಲ.

ಹೀಗೇ ತಡಕಾಡುತ್ತಿದ್ದವನನ್ನು ಡೆಕ್ಕನ್ ಹೆರಾಲ್ಡ್ನಲ್ಲಿ ಹಿರಿಯ ವರದಿಗಾರರಾಗಿರುವ ಸಿಬಂತಿ ಪದ್ಮನಾಭ ತಮ್ಮ ಬಳಿ ಕರೆದು "ಏನಯ್ಯಾ, ಯಾಕೆ ಒಂದು ವರದಿ ಬರೆಯಲು ಅಷ್ಟೊಂದು ಕಷ್ಟ ಪಡುತ್ತಿದ್ದೀಯಾ?" ಎಂದು ಕೇಳಿದರು. "ವರದಿ ಬರೆಯಲು ಕಷ್ಟ ಏನಿಲ್ಲ, ಹಿಂದೆಯೆಲ್ಲಾ ಕೆಲವು ವರದಿಗಳನ್ನು ಬರೆದಿದ್ದೇನೆ. ಆದರೂ ಇದೊಂದು ಮಾತ್ರ ಏಕೋ ತಲೆ ಕೆಡಿಸುತ್ತಿದೆ ಎಂದೆ. "ಸಿಬಂತಿ ಪದ್ಮನಾಭ ಆಗ ಕರೆದು ಹೇಳಿದ ಕೆಲವು ಮಾತುಗಳು ಇನ್ನೂ ತಲೆಯಲ್ಲಿ ಗುಂಯ್ ಗುಡುತ್ತಿವೆ.

"ಪತ್ರಿಕೋದ್ಯಮದ ತರಗತಿಯಲ್ಲಿ ಕಲಿಸುವ ಮಾಧ್ಯಮ ಸಂಬಂಧಿ ಸಿದ್ಧಾಂತಗಳು ಕೆಲಸಕ್ಕೆ ಬಾರವು ಎಂದು ನಾನು ಹೇಳುವುದಿಲ್ಲ. ಆದರೆ ಅಂತಹ ಹಲವಾರು ಸಿದ್ಧಾಂತಗಳನ್ನು ಕಲಿತ ನೀವು ಅವುಗಳನ್ನು ಪ್ರಾಯೋಗಿಕವಾಗಿ ಬಳಸಲು ಅಸಮರ್ಥರಾದರೆ ಕಷ್ಟ. ನೀನೇ ನೋಡು, ಆ ಪತ್ರಿಕಾ ಹೇಳಿಕೆಯಲ್ಲಿ ಇವತ್ತಿನ ಸಂದರ್ಭ ಮತ್ತು ಪ್ರದೇಶಕ್ಕೆ ಸೂಕ್ತವಾದ, ಅಗತ್ಯವಾದ ಕೆಲವು ಅಂಶಗಳನ್ನು ಆರಿಸಿ ವರದಿ ಬರೆಯಬೇಕಾಗಿತ್ತು. ಆದರೆ ನೀನು ಅದೆಷ್ಟು ಒದ್ದಾಡಿದೆ? ಪತ್ರಿಕಾ ಹೇಳಿಕೆಗಳು ಎಷ್ಟೇ ದೀರ್ಘವಾಗಿರಬಹುದು, ಅವನ್ನೆಲ್ಲಾ ಯಥಾವತ್ತಾಗಿ ಪತ್ರಿಕೆಯಲ್ಲಿ ಪ್ರಕಟಿಸಲು ಆಗುವುದಿಲ್ಲ. ಪತ್ರಿಕಾ ಹೇಳಿಕೆಗಳನ್ನು ಒಮ್ಮೆ ಸಮಗ್ರವಾಗಿ ಓದಿ, ನಮ್ಮ ಓದುಗರಿಗೆ, ನಮ್ಮ ಪ್ರದೇಶಕ್ಕೆ, ಇವತ್ತಿನ ಸಂದರ್ಭಕ್ಕೆ ಯಾವುದು ತೀರಾ ಅವಶ್ಯಕತೆಯಿದೆ ಅಂತ ಮನವರಿಕೆಯಾಗುತ್ತದೆಯೋ ಅದನ್ನು ಮಾತ್ರ ವರದಿಯಲ್ಲಿ ಸೇರಿಸಬೇಕು. ಹಾಗೆ ನಮ್ಮ ಪ್ರದೇಶ, ಓದುಗರು, ಸಂದರ್ಭಕ್ಕೆ ಸೂಕ್ತ ಯಾವುದು, ಯಾವುದಲ್ಲ ಎಂಬುದನ್ನು ನಿರ್ಧರಿಸುವಾಗ ನಮ್ಮ ಸುತ್ತಲಿನ ಸಂದರ್ಭಗಳ ಸ್ಪಷ್ಟ ಅರಿವು ಬೇಕು. ಸುತ್ತಲ ಜಗತ್ತನ್ನು ಸೂಕ್ಷ್ಮವಾಗಿ ಗಮನಿಸದವ ಒಳ್ಳೆಯ ವರದಿಗಾರ ಆಗಲಾರ..."

ಪದ್ಮನಾಭರ ಮಾತನ್ನು ಕೇಳಿಸಿಕೊಳ್ಳುತ್ತಿದ್ದವನಿಗೆ ನಾನು ಕಲಿಯುತ್ತಿರುವುದೇ ಬೇರೆ, ಪತ್ರಿಕಾವೃತ್ತಿ ನನ್ನಿಂದ ಅಪೇಕ್ಷಿಸುತ್ತಿರುವುದೇ ಬೇರೆ ಎಂದು ತೀವ್ರವಾಗಿ ಅನಿಸತೊಡಗಿತ್ತು. ಇತ್ತ ಸಿಬಂತಿ ಪದ್ಮನಾಭ ಮಾತಾಡುತ್ತಿದ್ದರು...

"...ನೀನು ಪುಸ್ತಕಗಳನ್ನು ಓದುತ್ತೀಯಾ ಅಂದುಕೊಂಡಿದ್ದೇನೆ. ಕನರ್ಾಟಕದಲ್ಲಿ ಪತ್ರಕರ್ತ ಆಗುವವನು ಅದು ಇಂಗ್ಲಿಷ್ ಇರಲಿ ಅಥವಾ ಕನ್ನಡವೇ ಆಗಿರಲಿ - ಕಾರಂತ, ತೇಜಸ್ವಿ, ನಾಗೇಶ ಹೆಗಡೆಯವರಂತಹ ಲೇಖಕ/ಬರಹಗಾರರ ಪುಸ್ತಕಗಳನ್ನು ಓದಲೇಬೇಕು. ಅಂಥವರ ಬರಹಗಳ ಪ್ರಭಾವ ಪತ್ರಕರ್ತನ ಮೇಲೆ ಇದ್ದರೆ, ಆತ ಬರೆಯುವ ವರದಿಯಲ್ಲಿ ಒಂದು ಗಾಂಭೀರ್ಯತೆ ಇದ್ದೇ ಇರುತ್ತದೆ. ಬೇಕಿದ್ದರೆ ನೀನೇ ನೋಡು, ಕಾರಂತರ ಬೆಟ್ಟದ ಜೀವ, ಚೋಮನ ದುಡಿ ಕಾದಂಬರಿ ಓದಿದ ಪತ್ರಕರ್ತ ಕನ್ನಡ ಕರಾವಳಿಯ ಜನಜೀವನವನ್ನು ಗ್ರಹಿಸುವ ಪರಿಯೇ ಬೇರೆಯಾಗಿರುತ್ತದೆ."

ಈ ಮೇಲಿನ ಅನುಭವ ಪತ್ರಿಕೋದ್ಯಮದ ತರಗತಿಗಳಲ್ಲಿ ಕಲಿಸುವ ಮಾಧ್ಯಮ ಸಿದ್ಧಾಂತಗಳು ಮತ್ತು ಅವುಗಳನ್ನು ವೃತ್ತಿಯಲ್ಲಿ ಹೇಗೆ ಅನ್ವಯಿಸುವುದು ಎಂಬುದರ ಬಗ್ಗೆ ನನ್ನ ಗ್ರಹಿಕೆಯನ್ನು ಬದಲಾಯಿಸಿತು.

***

ಕನ್ನಡದ ಹೆಮ್ಮೆಯ ಪತ್ರಕರ್ತ ಶ್ರೀ ಪಡ್ರೆಯವರ ಬಗ್ಗೆ ಮತ್ತವರ ಅಡಿಕೆ ಪತ್ರಿಕೆಯ ಬಗ್ಗೆ ಗೊತ್ತಿಲ್ಲದವರಿಲ್ಲ. ಭಾರತದ ಮಾಧ್ಯಮ ಲೋಕದ ಭಿನ್ನ ಪಯಣಿಗರ ಸಾಲಿನಲ್ಲಿ ಶ್ರೀ ಪಡ್ರೆಯವರೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಒಮ್ಮೆ ಅಡಿಕೆ ಪತ್ರಿಕೆಯ ಕಛೇರಿಯಲ್ಲಿ (ಪುತ್ತೂರಿನ ಏಳ್ಮುಡಿಯ ಭಟ್ಸ್ ಬಿಲ್ಡಿಂಗ್) ಅವರ ಜೊತೆ ಮಾತನಾಡುವ ಅವಕಾಶ ದೊರಕಿತ್ತು. ಶ್ರೀ ಪಡ್ರೆ ತಮ್ಮ ಅಡಿಕೆ ಪತ್ರಿಕೆಯ ಆರಂಭದ ದಿನದಿಂದ ಇಲ್ಲಿಯವರೆಗೆ ಎದುರಿಸಿದ ಸವಾಲು, ಕಂಡುಕೊಂಡ ಸಾಧ್ಯತೆಗಳ ಬಗ್ಗೆ ಸಾದ್ಯಂತವಾಗಿ ವಿವರಿಸುತ್ತಿದ್ದರು.

"ನೋಡು ವಿಜಯ್, ನಾವು ಅಡಿಕೆ ಪತ್ರಿಕೆಯನ್ನು ಆರಂಭಿಸಿದ ಕಾಲ 1988ನೆಯ ಇಸವಿ. ಆವತ್ತಿನ ಪರಿಸ್ಥಿತಿ ಹೇಗಿತ್ತು ಅಂದರೆ ಕೃಷಿ ವಿಚಾರಗಳನ್ನು ಬರೆಯುವ ಪತ್ರಿಕೆಯೊಂದು, ಕೃಷಿಕರಿಂದ ಬರುವ ಬರಹಗಳನ್ನು ನೆಚ್ಚಿಕೊಂಡು, ಕೃಷಿಕರನ್ನೇ ತನ್ನ ಮುಖ್ಯ ಗುರಿಯನ್ನಾಗಿಟ್ಟುಕೊಂಡು ಬಹಳ ದಿನಗಳ ಕಾಲ ನಡೆಯಲು ಸಾಧ್ಯವೇ ಇಲ್ಲ ಎಂದು ಅನೇಕ ಮಂದಿ ಮಾಧ್ಯಮ ಪಂಡಿತರುಗಳು ಭವಿಷ್ಯ ಹೇಳಿದ್ದರು. ಅವರು ಹಾಗೆ ಹೇಳುತ್ತಿದ್ದಾರೆ ಎಂದು ಸುಮ್ಮನೆ ಕುಳಿತುಕೊಳ್ಳುವ ಮನಸ್ಸು ನಮ್ಮದಾಗಿರಲಿಲ್ಲ. ನಾವು ಇದನ್ನೊಂದು ಸವಾಲು ಅಂತಲೇ ಸ್ವೀಕರಿಸಿ ಪತ್ರಿಕೆಯನ್ನು ಆರಂಭಿಸಿದೆವು. ಪತ್ರಿಕೆ ಇವತ್ತು 22ರ ಹರೆಯದಲ್ಲಿದೆ..."

ಕರ್ನಾಟಕ 1988ರವರೆಗೆ ಆದ ಕೃಷಿ ಸಂಬಂಧಿ ಸಂವಹನಗಳಲ್ಲಿ ಹೆಚ್ಚಿನವು ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳಿಂದ ರೈತರೆಡೆಗೆ ಹರಿದುಬಂದಂತಹವು. ಅಲ್ಲಿಯವರೆಗೆ ಕೃಷಿಕರಿಂದ ವಿಜ್ಞಾನಿಗಳೆಡೆ ಮತ್ತು ಕೃಷಿಕರಿಂದ ಕೃಷಿಕರೆಡೆಗೆ ಸಂವಹನ ತೀರಾ ಕಡಿಮೆ ಪ್ರಮಾಣದಲ್ಲಿ ಆಗುತ್ತಿತ್ತು. ರೈತನಿಗೆ ಏನು ಬೇಕು, ಏನು ಬೇಡ ಎಂಬುದನ್ನು ವಿಜ್ಞಾನಿಗಳೇ ನಿರ್ಧರಿಸುತ್ತಿದ್ದರು. ಅದಲ್ಲದೆ ಹೊಲದಲ್ಲಿ, ತೋಟದಲ್ಲಿ ಬೆವರು ಸುರಿಸುವ ರೈತ ಯಾವತ್ತೂ ಬರೆಯಲಾರ, ವಿಶ್ವವಿದ್ಯಾಲಯಗಳ ಛೇಂಬರಿನಿಂದ ರೈತರಿಗಾಗಿ ಬರೆಯುವ ವಿಜ್ಞಾನಿ ಹೊಲಕ್ಕೋ ತೋಟಕ್ಕೋ ಬಂದು ಬೆವರು ಹರಿಸಲಾರ. ಪರಿಸ್ಥಿತಿ ಹೀಗಿರುವಾಗ ರೈತನ ಬೇಕು ಬೇಡಗಳು ಸರಿಯಾಗಿ ತಿಳಿಯುವುದಾದರೂ ಹೇಗೆ ಎಂಬ ಪರಿಸ್ಥಿತಿ ಇತ್ತು. ಇಂಥ ಒಂದು ಕೊರತೆಯನ್ನು ತುಂಬುವ ಉದ್ದೇಶದಿಂದ ಹುಟ್ಟಿಕೊಂಡ ಅಡಿಕೆ ಪತ್ರಿಕೆ ಅನಂತರ ಮಾಡಿದ ಕೆಲಸ ಇಡೀ ಪತ್ರಿಕಾಸಮೂಹವೇ ಮೂಗಿನಮೇಲೆ ಬೆರಳಿಟ್ಟುಕೊಂಡು ನೋಡುವಂಥದ್ದು.

"...ಅಡಿಕೆ ಪತ್ರಿಕೆ ಆರಂಭವಾದಾಗ ರೈತರೇನೂ ಮುಗಿಬಿದ್ದು ತಮ್ಮ ಕೃಷಿ ಅನುಭವಗಳನ್ನು ಪತ್ರಿಕೆಗೆ ಬರೆದು ಕಳುಹಿಸಲಿಲ್ಲ. ರೈತರಲ್ಲಿ ಬರೆಯುವ ಹುಮ್ಮಸ್ಸು ತುಂಬುವ ಪ್ರಯತ್ನಕ್ಕೆ ಕೈಹಾಕಿದ ಅಡಿಕೆ ಪತ್ರಿಕೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಹಳ್ಳಿಗಳಲ್ಲಿ ಕೃಷಿಕರ ಕೈಗೆ ಲೇಖನಿ ಎಂಬ ವಿನೂತನ ಶಿಬಿರಗಳನ್ನು ಸಂಘಟಿಸಿತು. ಈ ಶಿಬಿರಗಳಲ್ಲಿ ಪತ್ರಿಕಾವೃತ್ತಿಯ ಮೂಲ ಪಾಠಗಳನ್ನು ಕೃಷಿಕರಿಗೆ ಅಡಿಕೆ ಪತ್ರಿಕೆ ಬಳಗ ತನ್ನ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಹೇಳಿಕೊಟ್ಟಿತು. ಮುಂದೆ ಕೃಷಿಕರ ಕೈಗೆ ಲೇಖನಿ ಒಂದು ಸಾಮಾಜಿಕ ಆಂದೋಲನದ ರೂಪ ಪಡೆದುಕೊಂಡಿತು. ಕನ್ನಡದಲ್ಲಿ ಅಲ್ಲಿಯವರೆಗೆ ಚಾಲ್ತಿಯಲ್ಲಿಲ್ಲದ ಸ್ವಸಹಾಯ ಪತ್ರಿಕಾವೃತ್ತಿಯನ್ನು ಪರಿಚಯಿಸಿದ್ದೇ ಅಡಿಕೆ ಪತ್ರಿಕೆ. ಮೊದಲು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮೂಲಕ ಪ್ರಕಟವಾಗುತ್ತಿದ್ದ ಅಡಿಕೆ ಪತ್ರಿಕೆ ನಂತರ ಫಾರ್ಮರ್ ಫಸ್ಟ್ ಟ್ರಸ್ಟ್ ಮೂಲಕ ಪ್ರಕಟವಾಗಲು ಆರಂಭಿಸಿತು. ಅಡಿಕೆ ಪತ್ರಿಕೆಯ ಸಂಪಾದಕೀಯ ಬಳಗದಲ್ಲಿರುವವರು, ಪತ್ರಿಕೆಗೆ ಲೇಖನಗಳನ್ನು ಬರೆಯುವವರು ರೈತರೇ ಆಗಿದ್ದಾರೆ. ಅವರಿಗೆ ಇಲ್ಲಿನ ಮಣ್ಣಿನ ಗುಣ ಬಹಳ ಸ್ಪಷ್ಟವಾಗಿ ತಿಳಿದಿದೆ. ಪತ್ರಿಕೆಯನ್ನು ಓದುವ ದೊಡ್ಡ ವರ್ಗ ಕೂಡ ರೈತರೇ ಆಗಿದ್ದಾರೆ..."

"...ಇವತ್ತು ರೈತ ಅಂದಕೂಡಲೇ ನಮ್ಮ ಕಣ್ಣಮುಂದೆ ಬರುವುದು ಸರಣಿ ಆತ್ಮಹತ್ಯೆಗಳು, ಆಥರ್ಿಕವಾಗಿ ಶಕ್ತಿ ಇಲ್ಲದಿರುವಿಕೆ. ಒಟ್ಟಿನಲ್ಲಿ ಕೃಷಿಬದುಕು ನಮ್ಮ ಮುಂದೆ ನೀಡುವುದೇ ನಕಾರಾತ್ಮಕ ಚಿತ್ರಣವನ್ನು ಎಂಬಂತಹ ಪರಿಸ್ಥಿತಿಯನ್ನು ಇವತ್ತಿನ ಆಥರ್ಿಕ ಮತ್ತು ರಾಜಕೀಯ ವ್ಯವಸ್ಥೆ ಸೃಷ್ಟಿಸಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ನಾವೊಂದು ಮಹತ್ವದ ನಿಧರ್ಾರವನ್ನು ತೆಗೆದುಕೊಂಡೆವು. ನಾವು ಇನ್ನುಮುಂದೆ ಕೃಷಿಬದುಕಿನ ಬಗ್ಗೆ ಕೇವಲ ನಕಾರಾತ್ಮಕ ಚಿತ್ರಣಗಳನ್ನು ಮಾತ್ರ ಕೊಡುವುದಿಲ್ಲ. ಬದಲಿಗೆ, ಕೃಷಿ ಬದುಕಿನಲ್ಲಿ ಹೊಸ ಹೊಸ ಅನ್ವೇಷಣೆಗಳನ್ನು ಮಾಡಿದ, ಕೃಷಿ ಜೀವನದಲ್ಲಿ ಬದುಕಿನ ಸಾರ್ಥಕ್ಯವನ್ನು ಕಂಡ ರೈತರ ಯಶೋಗಾಥೆಗಳನ್ನು ನಮ್ಮ ಓದುಗರ ಮುಂದಿಡುವ ಕೆಲಸ ಆರಂಭಿಸಿದೆವು. ರೈತರ ಬೌದ್ಧಿಕ ಕೆಲಸ ಮತ್ತು ಶ್ರಮಜೀವನಕ್ಕೆ ಗೌರವ ಸಿಗಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು ನಮ್ಮ ಬರವಣಿಗೆಯನ್ನು ಬೆಳೆಸಿದೆವು..."

ಶ್ರೀ ಪಡ್ರೆ ಅಡಿಕೆ ಪತ್ರಿಕೆ ಸಾಧಿಸಿದ ಇನ್ನೂ ಅನೇಕ ಅದ್ಭುತಗಳನ್ನು ಹೇಳಿದರು. ಅದರಲ್ಲಿ ಜಲಸಾಕ್ಷರತೆ ಮೂಡಿಸುವಲ್ಲಿ ಪತ್ರಿಕೆಯ ಕಾರ್ಯಗಳು ಮಹತ್ತರವಾದದ್ದು.

ನೆಲಜಲ ಉಳಿಸಲು ನೂರು ವಿಧಿ ಎಂಬ ಅಂಕಣ ಮಾಲಿಕೆಯ ಮೂಲಕ ಅಡಿಕೆ ಪತ್ರಿಕೆ ಕನ್ನಡ ನಾಡಿನಲ್ಲಿ ಮೂಡಿಸಿದ ಜಲಸಾಕ್ಷರತೆ ಚರಿತ್ರಾರ್ಹ.

ಯಶಸ್ವಿಯಾಗಿ ಮಳೆನೀರನ್ನು ತಮ್ಮ ಜಮೀನಿನಲ್ಲಿ ಇಂಗಿಸಿದ ರೈತರ ಯಶೋಗಾಥೆಗಳನ್ನು ತನ್ನ ಪ್ರತಿ ಸಂಚಿಕೆಯಲ್ಲೂ ವರದಿ ಮಾಡಲು ಆರಂಭಿಸಿದ ಅಡಿಕೆ ಪತ್ರಿಕೆ ಒಟ್ಟೂ ನೂರು ತಿಂಗಳುಗಳ ಅವಧಿಯಲ್ಲಿ ನಾಡಿನ ಮೂಲೆಮೂಲೆಗಳಲ್ಲಿ ನಡೆಯುತ್ತಿರುವ ಜಲಕೊಯ್ಲಿನ ಪ್ರಯತ್ನಗಳನ್ನು ತನ್ನ ಓದುಗರಿಗೆ ನೀಡಿತ್ತು. ತನ್ಮೂಲಕ ತನ್ನ ಓದುಗರನ್ನು ಜಲಕೊಯ್ಲಿಗೆ ಹಚ್ಚಿತ್ತು. ಒಂದು ಪತ್ರಿಕೆ ತನ್ನ ಬರಹಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವುದು ಅಂದರೆ ಇದೇ.

ಅಡಿಕೆ ಪತ್ರಿಕೆಯ ಯಶೋಗಾಥೆ ಪತ್ರಿಕೋದ್ಯಮವೆಂದರೆ ಅವರಿವರ ಹುಳುಕಗಳನ್ನು ಬರೆಯುತ್ತ ಕುಳಿತಿರುವವರ ಅಡ್ಡೆ, ಟೀಕೆ ಮಾಡುವುದೇ ಪತ್ರಿಕಾವೃತ್ತಿ, ಪತ್ರಕರ್ತರ ಕೆಲಸದಿಂದ ಯಾವುದೇ ರೀತಿಯ ಸಾಮಾಜಿಕ ಬದಲಾವಣೆ ಅಸಾಧ್ಯ ಎಂಬ ನಂಬಿಕೆಗಳನ್ನು ಕಿತ್ತುಹಾಕಲು ಸಾಕು.

***

ಇವತ್ತು ಪತ್ರಿಕೋದ್ಯಮವನ್ನು ನಾಡಿನ ಅನೇಕ ಕಾಲೇಜುಗಳಲ್ಲಿ ಶಾಸ್ತ್ರೀಯವಾಗಿ ಕಲಿಸಲಾಗುತ್ತಿದೆ. ಅನೇಕ ಕಡೆ ಬಹಳ ಪರಿಣಾಮಕಾರಿಯಾಗಿ ಪತ್ರಿಕೋದ್ಯಮವನ್ನು ಬೋಧಿಸುವ ಅಧ್ಯಾಪಕರಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಸಾಕಷ್ಟು ಮಂದಿ ಅಸಮರ್ಥ ಅಧ್ಯಾಪಕರೂ ಇದ್ದಾರೆ.

ಪತ್ರಿಕಾವೃತ್ತಿಯ ಬಗ್ಗೆ ಒಂದಷ್ಟು ಬೆರಗು, ಗೌರವ ಮತ್ತು ಆ ವೃತ್ತಿ ಮುಂದೊಡ್ಡುವ ಸವಾಲುಗಳ ಬಗ್ಗೆ ಪರಿಣಾಮಕಾರಿಯಾಗಿ ಅಧ್ಯಾಪನ ಮಾಡಬೇಕಾದವರು "ಪತ್ರಕರ್ತರಿಗೆ ಸರಿಯಾಗಿ ಝಾಡಿಸಿ ಒದೆಯಬೇಕು ಅಂತ ತರಗತಿಗಳಲ್ಲೇ ಹೇಳುತ್ತಾರೆ "ಎಂಬ ವರದಿಗಳೂ ಪತ್ರಿಕೆಗಳಲ್ಲಿ ಬಂದಿವೆ. ಇಂಥವರ ತರಗತಿಗಳಲ್ಲಿ ಪಳಗುವ ವಿದ್ಯಾರ್ಥಿಗಳು ಮುಂದೆ ಅದೆಂಥ ರೀತಿಯಲ್ಲಿ ತಮ್ಮ ವೃತ್ತಿಯನ್ನು ನಿಭಾಯಿಸಬಹುದು? ಅದಕ್ಕಿಂತಲೂ ಮಿಗಿಲಾಗಿ, ಪತ್ರಿಕಾವೃತ್ತಿಯ ಬಗ್ಗೆ ಅವರ ಮನದಲ್ಲಿ ಎಂಥಹ ಭಾವನೆ ಮೂಡಬಹುದು?

ಅಡಿಕೆ ಪತ್ರಿಕೆಯಂತಹ ಮಾಸಿಕವೊಂದು ಏಕಾಂಗಿಯಾಗಿ ಮಾಡುವ ಕೆಲಸಗಳ ಬಗ್ಗೆ, ಪಿ ಸಾಯಿನಾಥ್, ನಾಗೇಶ ಹೆಗಡೆಯವರಂತೆ ಮಾಧ್ಯಮ ಲೋಕದಲ್ಲಿ ತಮ್ಮದೇ ಆದ ಹೆದ್ದಾರಿ ಸೃಷ್ಟಿಸಿದ ಪತ್ರಕರ್ತರ ಬಗ್ಗೆ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ತುತರ್ು ಪರಿಸ್ಥಿತಿಯ ಸಂದರ್ಭದಲ್ಲಿ ಕೈಗೊಂಡ ಸಾಹಸಗಳ ಬಗ್ಗೆ, ಸಿವಿಲ್ ಸೊಸೈಟಿ ಎಂಬ ಪತ್ರಿಕೆ ಪ್ರಕಟಿಸುವ ಅಭ್ಯುದಯ ವರದಿಗಳ ಬಗ್ಗೆ, ಡೌನ್ ಟು ಅಥರ್್ ಪತ್ರಿಕೆಯ ಪರಿಸರ ಸಂಬಂಧಿ ಬರಹಗಳಿಗಿರುವ ಲೋಕಮಾನ್ಯತೆಯ ಬಗ್ಗೆ... ತಮ್ಮ ವಿದ್ಯಾಥರ್ಿಗಳಿಗೆ ಅನುಭವಿಸಿ ಹೇಳುವ ಅಧ್ಯಾಪಕರು ನಮಗೆ ಬೇಕು. ಅದು ಬಿಟ್ಟು ಪತ್ರಿಕಾವೃತ್ತಿಯ ಬಗ್ಗೆ ಆರಂಭದಲ್ಲೇ ಕೀಳರಿಮೆ ಮೂಡಿಸುವವರು ಖಂಡಿತಾ ಬೇಡ. ಹಾಗಂತ ಪತ್ರಿಕಾವೃತ್ತಿಯಲ್ಲಿ ಕೊಳಕುಗಳು ಇಲ್ಲವೇ ಇಲ್ಲ ಅಂತಲ್ಲ. ಆದರೆ ಅದನ್ನು ಎದುರಿಸುವುದು ಹೇಗೆ ಅಂತ ಕಲಿಸುವುದು ವಿವೇಕಯುತವಾದದ್ದೇ ಹೊರತು, ಕೇವಲ ನಕಾರಾತ್ಮಕ ಸಂಗತಿಗಳನ್ನು ಮಾತ್ರ ಹೇಳಿ ವಿದ್ಯಾಥರ್ಿಗಳ ಆಸೆಯನ್ನೇ ಚಿವುಟಿಹಾಕುವುದು ಪತ್ರಿಕೋದ್ಯಮದ ಅಧ್ಯಾಪಕರಿಂದ ಆಗಬಾರದಲ್ಲ?

ಹಾಗೆ ಒಬ್ಬ ಅಧ್ಯಾಪಕ ಪತ್ರಿಕಾವೃತ್ತಿಯನ್ನು ಅನುಭವಿಸಿ ತನ್ನ ವಿದ್ಯಾಥರ್ಿಗಳಿಗೆ ಬೋಧಿಸಬೇಕು ಅಂದರೆ ಆತ ಮೊದಲು ಸ್ವಲ್ಪ ವರ್ಷಗಳಾದರೂ ಮಾಧ್ಯಮಗಳಲ್ಲಿ ದುಡಿದ ಅನುಭವ ಇದ್ದವನಾಗಿರಬೇಕು. ಅಂಥವರ ಗರಡಿಯಲ್ಲಿ ಪಳಗಿದ ವಿದ್ಯಾಥರ್ಿಗಳು ಖಂಡಿತ ಉತ್ತಮ ಪತ್ರಕರ್ತರಾಗಬಲ್ಲರು.

ಮಣಿಪಾಲದ ವರದೇಶ್ ಹಿರೇಗಂಗೆ, ಉಜಿರೆಯ ಭಾಸ್ಕರ ಹೆಗಡೆ, ಡಾ. ನಿರಂಜನ ವಾನಳ್ಳಿ, ಪ್ರೊ. ಕೆ ವಿ ನಾಗರಾಜ್, ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದ ದಿವಂಗತ ಡಾ. ಶ್ರೀಧರ್ ಇವರೆಲ್ಲ ಹಿಂದೆ ಒಂದೊಂದು ಪತ್ರಿಕೆಗಳಲ್ಲಿ ದುಡಿದವರೇ. ಅವರ ಪಾಠಗಳಲ್ಲಿ ಅವರು ಹಿಂದೆ ಪತ್ರಿಕೆಗಳಿಗೆ ಕೆಲಸ ಮಾಡಿದ ಅನುಭವದ ಕಥನಗಳು ಸಾಕಷ್ಟು ಬರುತ್ತವೆ ಎಂದು ನಂಬಿದ್ದೇನೆ. ಬಹುಷಃ ಇದೇ ಕಾರಣಕ್ಕೆ ಇವರ ವಿದ್ಯಾಥರ್ಿಗಳು ಕನ್ನಡದ ಎಲ್ಲ ಪತ್ರಿಕೆ ಮತ್ತು ಟಿವಿ ಚಾನಲ್ಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಸಾಕಷ್ಟು ಹೆಸರು ಮಾಡಿದ್ದಾರೆ.

ಇವತ್ತಿನ ಪತ್ರಿಕೋದ್ಯಮದ ವಿದ್ಯಾರ್ಥಿಗಳು ತರಗತಿಗಳಲ್ಲಿ ಬೇಕಿರುವುದು ಗಟ್ಟಿಯಾದ ಮಾಧ್ಯಮ ಸಿದ್ಧಾಂತಗಳು, ಅವುಗಳನ್ನು ವೃತ್ತಿಯಲ್ಲಿ ಅನ್ವಯ ಮಾಡುವ ಬಗೆ, ನಾಡಿನೆಲ್ಲೆಡೆ ಕಾಣಸಿಗುವ ಮಾಧ್ಯಮದ ಯಶೋಗಾಥೆಗಳು. ಮತ್ತು ಅವೆಲ್ಲವನ್ನು ಪರಿಣಾಮಕಾರಿಯಾಗಿ ಕಲಿಸುವ ಒಬ್ಬ ಗುರು.

- ವಿಜಯ್ ಜೋಷಿ

Wednesday, February 03, 2010

ಕೃಷಿ ತಾತ್ಸಾರಕ್ಕೆ ಶಿಕ್ಷಣ ವ್ಯವಸ್ಥೆಯೂ ಕಾರಣವಲ್ಲವೇ?

"ಹಳ್ಳಿಯ ಬಗ್ಗೆ ನಿಮಗೇನ್ರಯ್ಯಾ ಗೊತ್ತು? ನಿಮ್ಮ ಪ್ರಕಾರ ಹಳ್ಳಿಗಳು ಎಂದರೆ ಒಂಥರಾ ವಾರಾಂತ್ಯದ ರಜಾ ತಾಣಗಳಿದ್ದಂತೆ. ನಿಮಗೆ ಇಲ್ಲಿನ ತಂಪಾದ ಹವೆ ಇಷ್ಟ, ಇಲ್ಲಿನ ಪರಿಸರ ಇಷ್ಟ ಮತ್ತು ಇಲ್ಲಿನ ಹಸಿರು ಇಷ್ಟ..."

ಮೊನ್ನೆ ವಯಕ್ತಿಕ ಕಾರ್ಯನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿದ್ದೆ. ಅಲ್ಲಿನ ಹಳ್ಳಿಯೊಂದರಲ್ಲಿ ಸ್ವಂತ ತೋಟ, ಗದ್ದೆ ನೋಡಿಕೊಂಡಿರುವ ಸ್ನೇಹಿತನ ಜೊತೆ ಮಾತಾಡುತ್ತಿದ್ದಾಗ ಹಳ್ಳಿಯ ಜೀವನದ ಬಗ್ಗೆ ನಾನು ವ್ಯಕ್ತಪಡಿಸಿದ ಅಭಿಮಾನಕ್ಕೆ ಆತನ ಪ್ರತಿಕ್ರಿಯೆ ಈ ಮೇಲಿನಂತಿತ್ತು.

"...ಆದರೆ ನಮ್ಮ ಹಳ್ಳಿಗಳಿಗೆ ಭವಿಷ್ಯವಿದೆ ಅಂತ ನನಗಂತೂ ಅನಿಸುತ್ತಿಲ್ಲ. ಬೆಳೆಗೆ ಬೆಲೆಯಿಲ್ಲ. ನಾವು ಮಾಡುವ ಕೆಲಸಕ್ಕೆ ಗೌರವವಿಲ್ಲ. ಒಬ್ಬ ವ್ಯಕ್ತಿ ಅಲ್ಪ ಸ್ವಲ್ಪ ಓದಿಕೊಂಡು ಯಾವುದೋ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅಂದರೆ ಹೆಣ್ಣು ಹೆತ್ತವರು ಸ್ಪರ್ದೆಗೆ ಬಿದ್ದವರಂತೆ ಅವನ ಬೆನ್ನು ಬೀಳುತ್ತಾರೆ. ಅದೇ ಹಳ್ಳಿಯ ಕೃಷಿಕನೊಬ್ಬನಿಗೆ ಹೆಣ್ಣು ಕೊಡುವವರು ಇಲ್ಲ. ಆತ ತನ್ನ ಕೃಷಿ ಅಗತ್ಯತೆಗಾಗಿ ಏನೇ ಸಂಶೋಧನೆ ಮಾಡಿದರೂ ಅವನ ಬೌದ್ಧಿಕ ಕೆಲಸಕ್ಕೆ ಮರ್ಯಾದೆ ಇಲ್ಲ. ಅಲ್ಲ ಮಾರಾಯಾ, ಸಾಫ್ಟ್‌ವೇರ್ ಕಂಪನಿಗಳು ಎಷ್ಟೇ ಶ್ರೀಮಂತವಾಗಿರಬಹುದು ಆದರೆ ಅವುಗಳ ಹಿತ್ತಿಲಿನಲ್ಲಿ ತರಕಾರಿ ಬೆಳೆಯಲು ಸಾಧ್ಯವಾ ಹೇಳು. ಇನ್‌ಫೋಸಿಸ್‌ನವರು ಎಲ್ಲಾದರೂ ಅಕ್ಕಿ ಬೆಳೆದು ಅವರ ನೌಕರರ ಹೊಟ್ಟೆ ತುಂಬಿಸಲು ಸಾಧ್ಯವಾ? ರೈತ, ಕೃಷಿಕನ ಶ್ರಮ ಜೀವನಕ್ಕೆ ಈ ಸಮಾಜ ಸೂಕ್ತ ಗೌರವ ನೀಡದ ಹೊರತು ನಮ್ಮ ಹಳ್ಳಿಗಳಿಗೆ ಭವಿಷ್ಯವಿಲ್ಲ."

ನನ್ನ ಕೃಷಿಕ ಸ್ನೇಹಿತ ಈ ಮಾತನ್ನು ಹೇಳುತ್ತಿದ್ದರೆ ಸುಶಿಕ್ಷಿತರು ಅಂತ ಕರೆಸಿಕೊಂಡು ಆಧುನಿಕ ಜಗತ್ತಿನ ಪ್ರಗತಿಯ ಬಗ್ಗೆ, ಮಾಹಿತಿ ತಂತಜ್ಞಾನ ಕಂಪನಿಗಳ ಕೆಲಸಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡುವವರು ನಮ್ಮವರೇ ಆದ ರೈತ ಮತ್ತು ಕೃಷಿ ಸಮುದಾಯದವರ ಭಾವನೆಗಳಿಗೆ, ಅವರ ಶ್ರಮಜೀವನಕ್ಕೆ ನೀಡುವ ಗೌರವದ ಬಗ್ಗೆ ಮನಸ್ಸು ಆಲೋಚಿಸುತ್ತಿತ್ತು.

ಇವತ್ತು ಹಳ್ಳಿಗಳಿಂದ ನಗರಗಳತ್ತ ಯುವಕರು ವಲಸೆ ಹೋಗುತ್ತಿರುವುದರ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. "ನಾವೆಲ್ಲ ಯುವಕರಾಗಿದ್ದಾಗ ಹೀಗಿರಲಿಲ್ಲ. ಇಂದಿನ ಯುವಕರಿಗೆ ಪೇಟೆಯ ಹುಚ್ಚು, ಪೇಟೆಯಲ್ಲಿ ಸಿಗುವ ಹಣದ ಮೇಲೆ ವ್ಯಾಮೋಹ ಅಧಿಕ. ಅಷ್ಟಲ್ಲದೆ ಅವರಿಗೆ ಮೈಬಗ್ಗಿಸಿ ದುಡಿಯಲು ಆಗುವುದಿಲ್ಲ. ಹಾಗಾಗಿಯೇ ಇಂದಿನ ಯುವಕರು ಪೇಟೆಗಳತ್ತ ಮುಖ ಮಾಡಿದ್ದಾರೆ" ಎಂಬ ಮಾತು ಸಾಕಷ್ಟು ಬಾರಿ ಕೇಳಿಬರುತ್ತಿದೆ. ಇದು ಪೂರ್ತಿ ಸುಳ್ಳಲ್ಲ. ಆದರೆ ಇಂದಿನ ಹಳ್ಳಿಯ ಯುವಕರ ಪೇಟೆ ಪೆರೇಡ್‌ಗೆ ಕೇವಲ ದುಡ್ಡಿನ ಮೇಲಿನ ವ್ಯಾಮೋಹ ಮತ್ತು ಮೈಗಳ್ಳತನ ಮಾತ್ರ ಕಾರಣವಲ್ಲ. ಅವೆರಡನ್ನು ಮೀರಿದ ಇನ್ನೂ ಅನೇಕ ಸೂಕ್ಷ್ಮ ಸಂಗತಿಗಳು ಇವತ್ತಿನ ವಲಸೆಗೆ ಮೂಲಭೂತ ಕಾರಣಗಳಾಗುತ್ತವೆ.

ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹವ್ಯಕ ಸಮುದಾಯದವರಲ್ಲಿ ಹಿಂದೆ ಒಂದು ಸಂಪ್ರದಾಯ ಇತ್ತು. ಹೆಣ್ಣು ಹೆತ್ತವರು ತಾವು ತಮ್ಮ ಮನೆಯ ಹೆಣ್ಣನ್ನು ಕೊಡಲಿಚ್ಛಿಸುವ ಗಂಡಿನ ಮನೆಯ ತೋಟ ಹೇಗಿದೆ (ಎಷ್ಟಿದೆ ಅಂತಲ್ಲ!) ಅಂತ ಹೇಗಾದರೂ ಮಾಡಿ ಕಂಡುಕೊಂಡುಕೊಳ್ಳುತ್ತಿದ್ದರು. ಆ ಗಂಡು ತನ್ನ ತೋಟವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾನೆ ಅಂದರೆ ಆತನಿಗೆ ತನ್ನ ಮಗಳನ್ನು ಧಾರಾಳವಾಗಿ ಧಾರೆ ಎರೆದು ಕೊಡಬಹುದು ಎಂದು ಅಂದಿನವರು ನಂಬುತ್ತಿದ್ದರು. ಏಕೆಂದರೆ; ಆತ ತನ್ನ ಮನೆಯ ತೋಟವನ್ನು ಚೆನ್ನಾಗಿ ನೋಡಿಕೊಂಡಿದ್ದಾನೆ ಅಂದರೆ ಆತನಿಗೆ ಜವಾಬ್ದಾರಿಯನ್ನು ನಿರ್ವಹಿಸಲು ಸರಿಯಾಗಿ ಗೊತ್ತಿದೆ. ಹಾಗಾಗಿಯೇ ಆತ ಮನೆಗೆ ಬರುವ ಹೆಣ್ಣನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ ಎಂಬ ಭಾವ ಅಂದಿನ ಹವ್ಯಕರದಾಗಿತ್ತು. ಕೃಷಿ ಬದುಕಿನ ಯಶಸ್ಸನ್ನು ಅರಿತು ಗಂಡಿನ ಸಾಮರ್ಥ್ಯವನ್ನು ಅಳೆಯುವ ಒಂದು ಅಪರೂಪದ ಸಂಪ್ರದಾಯ ಹವ್ಯಕ ಸಮುದಾಯದಲ್ಲಿ ಬಹಳ ಹಿಂದಿನಿಂದಲೂ ಇದ್ದಿದ್ದನ್ನು ಹಿರಿಯ ಹವ್ಯಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಆದರೆ ಇವತ್ತು ಅದೇ ಸಮುದಾಯದಲ್ಲಿ ಏನಾಗಿದೆ ಗೊತ್ತಲ್ಲ? ಊರಿನಲ್ಲಿ ತೋಟ, ಗದ್ದೆ ನೋಡಿಕೊಂಡಿರುವ ಅನೇಕ ಹವ್ಯಕರು ಇಂದು ಒತ್ತಾಯದ ಅವಿವಾಹಿತ ಜೀವನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಯಲ್ಲಿದ್ದಾರೆ. ಹಳ್ಳಿಯ ಹವ್ಯಕ ಮಾಣಿಗಳಿಗೆ ಜಪ್ಪಯ್ಯ ಅಂದರೂ ಹೆಣ್ಣು ಸಿಗುತ್ತಿಲ್ಲ. ಕೆಲ ಹವ್ಯಕ ಹುಡುಗಿಯರು ಕೂಡ "ಹಳ್ಳಿಯವನನ್ನು ಮದುವೆಯಾಗಿ ನನ್ನಮ್ಮ ಅನುಭವಿಸಿದ್ದು ಸಾಕು. ನಾನಾದರೂ ಪೇಟೆಯವನನ್ನು ಮದುವೆಯಾಗಿ ಆರಾಮವಾಗಿರೋಣ ಅಂದುಕೊಂಡಿದ್ದೇನೆ" ಅಂತ ಮುಲಾಜಿಲ್ಲದೇ ಹೇಳುತ್ತಿದ್ದಾರೆ. ಹವ್ಯಕರಲ್ಲಿ ಹೆಣ್ಣು ಹೆತ್ತ ಅನೇಕ ಮಂದಿ ಇದೇ ಧಾಟಿಯ ಮಾತನ್ನು ಹೇಳುತ್ತಿದ್ದಾರೆ. ಹಳ್ಳಿಯ ಜೀವನದಲ್ಲಿ ನೆಮ್ಮದಿಯಿಲ್ಲ, ಪೇಟೆಯ ಜೀವನದಲ್ಲಿ ನೆಮ್ಮದಿಯೇ ಎಲ್ಲ ಅಂತ ಇವರಿಗೆ ಹೇಳಿಕೊಟ್ಟವರು ಯಾರು ಸ್ವಾಮಿ?

ಇದು ಕೇವಲ ಹವ್ಯಕ ಸಮುದಾಯದ ಕಥೆಯಲ್ಲ. ಅನೇಕ ಸಮುದಾಯಗಳ ವ್ಯಥೆ.

ಸಾಫ್ಟ್‌ವೇರ್, ಹಾರ್ಡ್‌ವೇರ್, ವೈದ್ಯಕೀಯ ವೃತ್ತಿ ಮತ್ತು ಇಂಜಿನಿಯರಿಂಗ್‌ಗೆ ಅಪಾರವಾದ ಗೌರವ ಕೊಡುವ ಇಂದಿನ ಸಮಾಜ, ಶ್ರಮಿಕ ಜೀವನ ನಡೆಸುವ ರೈತ ಮತ್ತು ಆತನ ಕೆಲಸಕ್ಕೇಕೆ ಗೌರವ ನೀಡುತ್ತಿಲ್ಲ?

ಇವತ್ತು ನಮ್ಮ ದೇಶದ ಹಳ್ಳಿಗಳಲ್ಲಿಯೇ ಉಳಿದುಕೊಂದು ಕೃಷಿ ಅಥವಾ ರೈತಾಪಿ ಕೆಲಸವನ್ನು ಮಾಡುತ್ತಿರುವ ಯುವಕ ಮತ್ತು ಮಧ್ಯಮ ವಯಸ್ಕರ ಶೈಕ್ಷಣಿಕ ಹಿನ್ನಲೆ ಸ್ವಲ್ಪ ವಿಚಿತ್ರವಾಗಿದೆ. ಅದು ಯಾವುದೇ ಹಳ್ಳಿಯಿರಲಿ, ಅಲ್ಲಿ ಸ್ವಲ್ಪ ಮಟ್ಟಿಗೆ ಅಕ್ಷರ ಕಲಿತವ ಹಳ್ಳಿಗೆ ಹತ್ತಿರವಿರುವ ಯಾವುದಾದರೂ ಪಟ್ಟಣದಲ್ಲಿ ನೆಲೆ ನಿಲ್ಲಲು ಪ್ರಯತ್ನ ಪಡುತ್ತಾನೆ. ಆ ಅಕ್ಷರ ಕಲಿತವನಿಗೆ ಸ್ವಲ್ಪ ಮಟ್ಟಿಗಿನ ಇಂಗ್ಲಿಷ್ ಜ್ಞಾನವಿದ್ದರೆ ಬೆಂಗಳೂರು, ಮುಂಬಯಿಯ ಹಾದಿ ಹಿಡಿಯುತ್ತಾನೆ. ಆತ ಖಂಡಿತ ಹಳ್ಳಿಯಲ್ಲಿಯೇ ಉಳಿದು ರೈತನಾಗಿ ಬದುಕುವ ಕನಸು ಕಾಣುವುದಿಲ್ಲ. ಇವತ್ತಿನ ಯುವಕರಲ್ಲಿ ರೈತಾಪಿಯನ್ನು ಆಯ್ದುಕೊಂಡವರಲ್ಲಿ ಹೆಚ್ಚಿನವರು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆಯನ್ನು ಮಾಡಿದವರಲ್ಲ.

ಇಂಥ ಒಂದು ವಿಚಿತ್ರ ಸನ್ನಿವೇಶಕ್ಕೆ ಕಾರಣ ಹುಡುಕುತ್ತಾ ಹೋದರೆ ನಮ್ಮ ಹುಡುಕಾಟ ಬಂದು ತಲುಪುವುದು ಇಂದಿನ ಶಿಕ್ಷಣ ವ್ಯವಸ್ಥೆಯ ಕಾಲಬುಡಕ್ಕೆ.

ನಾನು ಕುಂದಾಪುರದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದಾಗ ಅಲ್ಲಿನ ಶಿಕ್ಷಕರೊಬ್ಬರು "ನೀವು ಚೆನ್ನಾಗಿ ಕಲಿಯದಿದ್ದರೆ, ನಿಮ್ಮಿಂದ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಅಮೆರಿಕಕ್ಕೆ ಹೋಗಲು ಸಾಧ್ಯವಿಲ್ಲ. ಹಳ್ಳಿಯಲ್ಲೇ ಇರಬೇಕಾದೀತು" ಎಂದು ತರಗತಿಯಲ್ಲಿ ಪದೇ ಪದೇ ಹೇಳುತ್ತಿದ್ದದ್ದು ಇನ್ನೂ ಚೆನ್ನಾಗಿ ನೆನಪಿದೆ. ಬಹುಷಃ, ಅವರ "ಹಳ್ಳಿಯಲ್ಲಿಯೇ ಇರಬೇಕಾದೀತು" ಎಂಬ ಮಾತು ಶಾಲೆಯಲ್ಲಿ ಓದಿಯೂ ಹಳ್ಳಿಯನ್ನು ಬಿಡಲು ಸಾಧ್ಯವಾಗದೇ ಇರುವುದು ಮಹಾ ಅಪರಾಧ ಎಂಬ ಭಾವವನ್ನು ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಬಿತ್ತುತ್ತಿತ್ತು. ನಮಗೆ ಶಾಲೆಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ, ಒಳೆಯ ವಿದ್ಯಾಭ್ಯಾಸ ಪಡೆದು ಅಮೆರಿಕಕ್ಕೋ ಅಥವಾ ಬೆಂಗಳೂರಿಗೋ ಹೋಗಿ ನೆಲೆಸಿ ಅಲ್ಲಿ ಸಾಕಷ್ಟು ಕಾಸು ಮಾಡಿಕೊಂದವರ ಕಥೆಗಳನ್ನು ಆದರ್ಶವಾಗಿ ಹೇಳುತ್ತಿದ್ದರೇ ಹೊರತು, ನಮ್ಮ ಹಳ್ಳಿಯಲ್ಲೇ ಸಾವಯವ ಕೃಷಿಯ ಕುರಿತು ಸಾಕಷ್ಟು ಸಂಶೋಧನೆ ಮಾಡಿ ಗ್ರಾಮಜೀವನದಲ್ಲೇ ಬದುಕಿನ ಸಾರ್ಥಕ್ಯ ಕಂಡ ರೈತನೊಬ್ಬನ ಜೀವನಗಾಥೆಯನ್ನು ಆದರ್ಶವನ್ನಾಗಿ ಯಾವತ್ತೂ ಹೇಳಿಕೊಡಲಿಲ್ಲ. ಇಂಥದೆಲ್ಲ ಕಥೆಗಳ, ನಿದರ್ಶನಗಳ ಪರಿಣಾಮವಾಗಿಯೇ ನಮ್ಮ ಓರಗೆಯ ಅಸಂಖ್ಯ ಮಂದಿ ಯುವಕರ ಪಾಲಿಗೆ ರೈತ ಜೀವನ, ಕೃಷಿ ಜೀವನ ಎಂಬುದು ಓದಿನಲ್ಲಿ ಯಶಸ್ಸು ಸಾಧಿಸಲಾಗದವರ ಪಾಲಿನ ಕೊನೆಯ ಆಯ್ಕೆ ಎಂಬ ಭಾವನೆ ಮೂಡಿಸಿತು.

ನಾವು ಹೈಸ್ಕೂಲು, ಪಿಯುಸಿ ಓದುತ್ತಿದ್ದಾಗ ’ನೀವು ನಿಮ್ಮ ಜೀವನದಲ್ಲಿ ಮುಂದೆ ಏನಾಗಬೇಕು ಅಂತ ಬಯಸಿದ್ದೀರಿ?’ ಅಂತ ಶಿಕ್ಷಕರು, ಉಪನ್ಯಾಸಕರು ಕೇಳುವುದು ತೀರಾ ಸಾಮಾನ್ಯವಾಗಿತ್ತು. ಆ ಪ್ರಶ್ನೆಗಳಿಗೆ ನಾನು ಇಂಜಿನಿಯರ್ ಆಗುತ್ತೇನೆ, ಡಾಕ್ಟರ್ ಆಗುತ್ತೇನೆ ಎಂಬ ಉತ್ತರಗಳೂ ತೀರಾ ಸಾಮಾನ್ಯವಾಗಿದ್ದವು. ಆಪಿತಪ್ಪಿಯೂ ಕೂಡ ಯಾವುದೇ ವಿದ್ಯಾರ್ಥಿ ನಾನು ರೈತನಾಗುತ್ತೇನೆ ಅಂತ ಹೇಳುತ್ತಿರಲಿಲ್ಲ. ಬಹುಷಃ, ನಾವು ಅಷ್ಟು ಚಿಕ್ಕವರಿದ್ದಾಗಲೇ ನಮ್ಮ ಪಾಲಿಗೆ ರೈತಾಪಿ ಎಂಬುದು ಅಕ್ಷರವಿದ್ಯೆ ಕಲಿಯಲಾಗದವರ ಪಾಲಿನ ಕೊನೆಯ ಆಯ್ಕೆಯ ವೃತ್ತಿ ಎಂಬ ಭಾವ ಗಟ್ಟಿಯಾಗಿ ಮನೆಮಾಡಿತ್ತು. ಅದರಲ್ಲೂ ಧೈರ್ಯ ಮಾಡಿ "ನಮ್ಮ ಮನೆಯಲ್ಲಿ ತೋಟ ಇದೆ, ನಾನು ಕೃಷಿ ಮಾಡುತ್ತೇನೆ" ಎಂದು ಹೇಳಿದ ನಮ್ಮ ಸಹಪಾಠಿಯೆಡೆಗೆ ನೋಡಿ ನಾವೆಲ್ಲಾ ಅಪಹಾಸ್ಯದಿಂದ ನಕ್ಕಿದ್ದು, ತರಗತಿಯ ಶಿಕ್ಷಕರು ಆತನನ್ನು ನೋಡಿ ಹಾಸ್ಯ ಮಾಡಿದ್ದು ಅನ್ನದಾತನ ಕೆಲಸಕ್ಕೆ ನಾವು ಕೊಡುತ್ತಿರುವ ಗೌರವ ಯಾವ ಮಟ್ಟದ್ದಿರಬಹುದು ಎಂಬುದಕ್ಕೆ ಒಂದು ನಿದರ್ಶನವಾಗಿತ್ತು.

ಅನುಮಾನ ಬೇಡ: ಇವತ್ತಿನ ಶಾಲಾ ಶಿಕ್ಷಣದಲ್ಲಿಯೇ "ನೀನು ರೈತನಾಗಬೇಡ; ನೀನು ಚೆನ್ನಾಗಿ ಕಲಿತು ತಿಂಗಳ ಪಗಾರ ಬರುವ ಯಾವುದಾದರೂ ಕೆಲಸಕ್ಕೆ ಸೇರಿಕೋ" ಎಂಬ ಭಾವವನ್ನು ಪ್ರತಿಯೊಬ್ಬ ಎಳೆಯ ವಿದ್ಯಾರ್ಥಿಯ ಮನಸ್ಸಿನಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಪಾಲಕರು ಕೂಡ "ನಮ್ಮಿಂದ ಏನೂ ಮಾಡಲಾಗಲಿಲ್ಲ, ನೀನಾದರೂ ಕಲಿತು ದೊಡ್ಡ ನೌಕರಿ ಹಿಡಿದು ಏನಾದರೂ ಮಾಡು" ಎಂದು ಪದೇ ಪದ್ದೇ ಮಕ್ಕಳಿಗೆ ತಿಳಿಹೇಳಿ ಅವರಲ್ಲಿ ಮನಸ್ಸಿನಲ್ಲಿ ಕೃಷಿ ಬದುಕನ್ನು ಕೊನೆಯ ಆಯ್ಕೆಯನ್ನಾಗಿ ಮಾಡುತ್ತಿದ್ದಾರೆ.

ಕೃಷಿ ಮತ್ತು ರೈತಾಪಿ ಬುದ್ಧಿವಂತ ವಿದ್ಯಾರ್ಥಿಯ ಆಯ್ಕೆಯಲ್ಲ, ಅದೇನಿದ್ದರೂ ಶೈಕ್ಷಣಿಕ ಸಾಧನೆಯಲ್ಲಿ ಹಿಂದೆ ಉಳಿಯುವ ವಿದ್ಯಾರ್ಥಿಯ ಪಾಲಿನ ಕೊನೆಯ ಆಯ್ಕೆ ಎಂಬ ಮನೋಭಾವವನ್ನು ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಪಾಲಕರು ವ್ಯವಸ್ಥಿತವಾಗು ಮಕ್ಕಳ ಮನಸ್ಸಿನಲ್ಲಿ ವ್ಯವಸ್ಥಿತವಾಗಿ ಬಿತ್ತುತ್ತಿದ್ದಾರೆ. ಇವತ್ತಿನ ಆರ್ಥಿಕ ಮತ್ತು ರಾಜಕೀಯ ಜಗತ್ತು ಕೂಡ ಇಂಥದ್ದೊಂದು ಭಾವಕ್ಕೆ ಪುಷ್ಟಿ ಕೊಡುವಂತೆ ಕೆಲಸಮಾಡುತ್ತಿದೆ. ಇವರೇ ಮುಂದೆ ದೊಡ್ಡವರಾದಾಗ ಅವರಿಂದ ರೈತಜೀವನದೆಡೆಗೆ ಗೌರವವನ್ನು ನಿರೀಕ್ಷಿಸುವುದು ಮೂರ್ಖತನದ ಕೆಲಸವಾಗುತ್ತದೆ.

ರೈತ ಮತ್ತು ಕೃಷಿಕನ ಶ್ರಮಜೀವನದೆಡೆಗೆ ಗೌರವ ಹುಟ್ಟಿಸದ, ರೈತರ ಯಶೋಗಾಥೆಗಳನ್ನು ಆದರ್ಶ ಎಂದು ಪರಿಗಣಿಸದ ಇಂದಿನ ಶಿಕ್ಷಣ ವ್ಯವಸ್ಥೆ ಬದಲಾಗುವವರೆಗೆ ಹಳ್ಳಿಗಳಿಂದ ಪಟ್ಟಣಗಳತ್ತ ಯುವಕರ ವಲಸೆ ತಡೆಯಲು ಸಾಧ್ಯವಿಲ್ಲ.

ವಿಜಯ್ ಜೋಶಿ, (ಫೆಬ್ರವರಿ ೩, ೨೦೧೦ರ ವಿಜಯ ಕರ್ನಾಟಕ ದೈನಿಕದಲ್ಲಿ ಪ್ರಕಟವಾದ ಲೇಖನ)
 

ವಿರಾಟ್ Copyright © 2009 BeMagazine Blogger Template is Designed by Blogger Template
In Collaboration with fifa