ವಿಷಯಕ್ಕೆ ಹೋಗಿ

ನಿಷ್ಠೆಯೊಂದೇ ನಿರೀಕ್ಷೆ, ಪತ್ರಕರ್ತನಿಗೆಲ್ಲಿದೆ ರಕ್ಷೆ?

“ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ ಜನಸಾಮಾನ್ಯರ ದ್ವೇಷಕ್ಕೆ ಅತ್ಯಂತ ಹೆಚ್ಚು ಒಳಗಾಗಿರುವ ಮೂರು ವ್ಯಕ್ತಿಗಳೆಂದರೆ ರಾಜಕಾರಣಿಗಳು, ಪೋಲೀಸರು ಮತ್ತು ಪತ್ರಕರ್ತರು. ಪತ್ರಕರ್ತರು ಈಗ ಮೂರನೆಯ ಸ್ಥಾನದಲ್ಲಿರಬಹುದು. ಆದರೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪತ್ರಕರ್ತರು ಮೊದಲನೆಯ ಸ್ಥಾನವನ್ನು ಆಕ್ರಮಿಸುವ ದಿನ ಬಹಳ ದೂರವಿಲ್ಲ ಎಂದು ನನಗನಿಸುತ್ತದೆ.”

ಯಾವಾಗಲೂ ಮಾಧ್ಯಮಗಳನ್ನು ತೆಗಳುವವರ ಒಂದು ದೊಡ್ಡ ಗುಂಪೇ ನಮ್ಮ ಸಮಾಜದಲ್ಲಿದೆ. ಅಂಥ ಗುಂಪಿಗೆ ಸೇರಿದ ವ್ಯಕ್ತಿಯೊಬ್ಬರು ಈ ಮೇಲಿನ ಮಾತನ್ನು ಹೇಳಿದ್ದರೆ ಅದನ್ನು ಅಲಕ್ಷಿಸಿಬಿಡಬಹುದಿತ್ತು. ಆದರೆ ಇತ್ತೀಚೆಗೆ ಮಾಧ್ಯಮದ ಹಿರಿಯ ವ್ಯಕ್ತಿಯೊಬ್ಬರು ಈ ರೀತಿ ಅಭಿಪ್ರಾಯಪಟ್ಟಿರುವುದರಿಂದ ಈ ಮಾತಿನ ಬಗ್ಗೆ ಗಂಭೀರವಾಗಿ ಪತ್ರಿಕೋದ್ಯಮದ ಬಗ್ಗೆ ಪ್ರೀತಿ ಇರುವ ಪ್ರತಿಯೊಬ್ಬರೂ ಆಲೋಚಿಸಬೇಕಾಗಿದೆ.

ಆ ಹಿರಿಯರ ಬಗ್ಗೆ, ಅವರ ಮಾತಿನ ಬಗ್ಗೆ ಗೌರವ ಇಟ್ಟುಕೊಂಡೇ ನನ್ನ ಮುಂದಿನ ಬರೆಹವನ್ನು ಬೆಳೆಸುತ್ತಿದ್ದೇನೆ.

ಭಾರತದ ಸಂವಿಧಾನದ ಪ್ರಕಾರ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಪ್ರಜಾಪ್ರಭುತ್ವದ ಮೂರು ಅಂಗಗಳು. ಸಂವಿಧಾನ ಇವೆಲ್ಲವಕ್ಕೂ ಮೇಲು. ಈ ಯಾವ ಅಂಗಗಳೂ ಸಂವಿಧಾನವನ್ನು ಮೀರಿ ಕೆಲಸ ಮಾಡುವಂತಿಲ್ಲ. ಹಾಗೆ ಯಾವುದೇ ಒಂದು ಅಂಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಹವಣಿಸಿದರೆ ಆ ಅಂಗಕ್ಕೆ ಲಗಾಮು ಹಾಕಲು ಬಲವಾದ, ಸ್ವತಂತ್ರವಾದ ನ್ಯಾಯಾಂಗ ನಮ್ಮಲ್ಲಿದೆ.
ನೆನಪಿಡಿ ಎಲ್ಲಿಯೂ ಕೂಡ ‘ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ’ ಎಂದು ಸಂವಿಧಾನಲ್ಲಿ ಬರೆದಿಲ್ಲ. ಆದರೆ ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ನಾವೆಲ್ಲ ಪ್ರೀತಿಯಿಂದ, ಗೌರವದಿಂದ ಒಪ್ಪಿಕೊಂಡಿದ್ದೇವೆ. ಹಾಗೂ ಪತ್ರಿಕಾರಂಗ ಪ್ರಜಾಪ್ರಭುತ್ವದ ಉಳಿದ ಮೂರು ಅಂಗಗಳಂತೆಯೇ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು ಎಂದು ಅಪೇಕ್ಷೆಪಡುತ್ತೇವೆ, ಅಷ್ಟೆ!

ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳು ಅಂತ ನಮ್ಮ ಸಂವಿಧಾನವೇ ಅಧಿಕೃತವಾಗಿ ಘೋಷಿಸಿರುವುದರಿಂದ ಈ ಮೂರು ಅಂಗಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಸಂವಿಧಾನದತ್ತವಾಗಿ ರಕ್ಷಣೆ ಇದೆ. ರಾಜಕಾರಣಿಗಳಿಗೆ ಅವರವರ ಸ್ಥಾನಕ್ಕನುಗುಣವಾಗಿ ವಿವಿಧ ಶ್ರೇಣಿಯ ಭದ್ರತೆ ಇದೆ. ನ್ಯಾಯಾಂಗದಲ್ಲಿರುವವರಿಗೂ (ನ್ಯಾಯಾಧೀಶರಿಗೆ) ಭದ್ರತೆ ಇದೆ. ಹಾಗೆಯೇ ಕಾರ್ಯಾಂಗದವರಿಗೂ ಅವರವರ ಸ್ಥಾನಕ್ಕನುಗುಣವಾದ ಭದ್ರತೆ ಇರುತ್ತದೆ. ಈ ಮೂರು ಅಂಗಗಳಲ್ಲಿರುವ ಎಲ್ಲರಿಗೂ ಸರಕಾರಿ ಭದ್ರತೆ ಇರದೆ ಇರಬಹುದು. ಆದರೆ ಸಂದರ್ಭ ಬಂದಾಗ ಸಂವಿಧಾನದ ಚೌಕಟ್ಟಿನೊಳಗೆ ಸರಕಾರಿ ಭದ್ರತೆಯನ್ನು ಕೇಳಲು ಅವರಿಗೆ ಅವಕಾಶ ಇರುವುದಂತೂ ಎಲ್ಲರಿಗೂ ತಿಳಿದ ಸತ್ಯ.
ಸಂವಿಧಾನವೇ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಅಧಿಕೃತ ಮಾನ್ಯತೆ ನೀಡಿರುವುದರಿಂದ ಈ ಮೂರು ಅಂಗಗಳಲ್ಲಿ ಕೆಲಸ ಮಾಡುವವರು ಸರಕಾರಿ ಹಣದಿಂದಲೇ ಸಂಬಳ ಪಡೆಯುತ್ತಾರೆ. ಸರಕಾರಿ ಹಣ ಅಂದರೆ ಜನರ ತೆರಿಗೆ ಹಣ. ಹಾಗಾಗಿಯೇ ಅವರು ಜನರಿಗೆ ಉತ್ತರದಾಯಿಯಾಗಿರಬೇಕು ಮತ್ತು ಅವರ ಆಸ್ತಿಪಾಸ್ತಿಗಳನ್ನು ಸಾರ್ವಜನಿಕವಾಗಿ ಘೋಷಣೆ ಮಾಡಬೇಕು ಎಂದು ನಿರೀಕ್ಷಿಸುವುದು ಸಂವಿಧಾನಬದ್ಧವೇ ಆಗಿರುತ್ತದೆ.

ಆದರೆ ಒಮ್ಮೆ ಪತ್ರಕರ್ತರ ಪರಿಸ್ಥಿತಿಯ ಬಗ್ಗೆ ಆಲೋಚನೆ ಮಾಡಿ.
ಹೇಗಿದ್ದರೂ ಪತ್ರಿಕಾರಂಗ ಸಂವಿಧಾನದ ಪ್ರಕಾರ ಭಾರತೀಯ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಅಲ್ಲ. ಆನರು ಪ್ರೀತಿ, ಗೌರವದಿಂದ ಪತ್ರಿಕಾರಂಗಕ್ಕೆ ಆ ಮಾನ್ಯತೆಯನ್ನು ಕೊಟ್ಟಿದ್ದಾರೆ ಅಷ್ಟೆ. ಆದರೆ ಜನರ ಪ್ರೀತಿ, ಗೌರವಗಳು ಸಾಂವಿಧಾನಿಕ ರಕ್ಷಣೆಯನ್ನು ನೀಡುವುದಿಲ್ಲವಲ್ಲ? ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಲ್ಲಿ ಕೆಲಸ ಮಾಡುವವರಿಗಿರುವಂತೆ ಪತ್ರಿಕಾರಂಗದಲ್ಲಿರುವವರಿಗೆ ವಿಶೇಷ ರಕ್ಷಣೆಯನ್ನೇನೂ ನೀಡುವುದಿಲ್ಲವಲ್ಲ? ಅದಲ್ಲದೆ ಪತ್ರಿಕೆಗಳ ನ್ಯೂಸ್‌ಪ್ರಿಂಟ್‌ಗೆ ಸರಕಾರದ ಸಬ್ಸಿಡಿ ಮತ್ತು ಸರಕಾರದ ಕೆಲವು ಜಾಹೀರಾತುಗಳು ಆಗಾಗ ಪತ್ರಿಕೆಗಳಿಗೆ ಸಿಗುವುದನ್ನು ಬಿಟ್ಟರೆ ಬೇರೆ ಯಾವ ರೀತಿಯಿಂದಲೂ ಸರಕಾರದ (ಜನರ) ಹಣವನ್ನು ಪತ್ರಿಕೆಗಳು ಉಪಯೋಗಿಸಿಕೊಳ್ಳುವುದಿಲ್ಲ. ಅವು ಬದುಕಿರುವುದೇ ಓದುಗರು ನೀಡುವ ಹಣ ಮತ್ತು ಜಾಹೀರಾತುದಾರರು ನೀಡುವ ಹಣದಮೇಲೆ. ಪರಿಸ್ಥಿತಿ ಹೀಗಿರುವಾಗ ಪತ್ರಕರ್ತರೆಲ್ಲಾ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸುವುದಕ್ಕೆ ಸಾಂವಿಧಾನಿಕ ಆಧಾರ ಯಾವುದು?

ಹಾಗಂತ ಪತ್ರಕರ್ತರಿಂದ ನಿಷ್ಪಕ್ಷಪಾತ ಬರೆಹ, ಪ್ರಾಮಾಣಿಕತೆ ಮತ್ತು ದೇಶದ ಸಮಗ್ರ ಅಭಿವೃದಿಗಾಗಿ ದುಡಿಯುವುದನ್ನು ಅಪೇಕ್ಷಿಸಬಾರದು ಅಂತಲ್ಲ. ಭಾರತದ ಉಳಿದೆಲ್ಲ ನಾಗರಿಕರಂತೆ ಪತ್ರಕರ್ತ ಕೂಡ ಭಾರತದ ಪ್ರಜೆಯೇ. ಹಾಗೆಯೇ ಪ್ರತಿಯೊಬ್ಬ ಭಾರತೀಯ ಪ್ರಜೆ ಯಾವ ರೀತಿಯಲ್ಲಿ ಈ ದೇಶಕ್ಕೆ, ಈ ಸಮಾಜಕ್ಕೆ ನಿಷ್ಠನಾಗಿರಬೇಕೋ ಪತ್ರಕರ್ತನೂ ಅಷ್ಟೇ ನಿಷ್ಠೆಯನ್ನು ದೇಶಕ್ಕೆ, ಸಮಾಜಕ್ಕೆ ತೋರಿಸಲೇಬೇಕು. ಆ ಬಗ್ಗೆ ಖಂಡಿತಾ ಎರಡು ಮಾತಿಲ್ಲ.
ಆದರೆ ದೇಶಕ್ಕಾಗಿ ಪತ್ರಕರ್ತ ಕೆಲಸ ಮಾಡಬೇಕು ಎಂದು ಆಗ್ರಹಿಸುವಾಗ ಇನ್ನೊಂದು ಸೂಕ್ಷ್ಮವನ್ನೂ ನಾವು ಗಮನಿಸಬೇಕು.

ದೇಶದ ಒಳಿತಿಗಾಗಿ ಪತ್ರಕರ್ತನೊಬ್ಬ ಬರೆಯುವಾಗ (ಅಥವಾ ದೃಶ್ಯಗಳನ್ನು ಚಿತ್ರೀಕರಿಸುವಾಗ) ಆತ ಅನಿವಾರ್ಯವಾಗಿ ಪ್ರಭುತ್ವದ ವೈಖರಿಯನ್ನು ಪಶ್ನಿಸಬೇಕಾದ ಅನೇಕ ಸಂದರ್ಭಗಳನ್ನು ಎದುರಿಸುತ್ತಾನೆ. ಪ್ರಭುತ್ವವನ್ನು ವಿರೋಧಿಸುವುದು ಎಂದರೆ ನಮ್ಮ ದೇಶದಲ್ಲಿ ಸಾಮಾನ್ಯದ ಮಾತೇ? ನಾವೆಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದರೂ ಇವತ್ತು ಪತ್ರಕರ್ತನೊಬ್ಬ ರಾಜಕಾರಣಿಯೊಬ್ಬನ ವಿರುದ್ಧ ಬರೆದರೆ ಆತ ಒಂದಲ್ಲಾ ಒಂದು ದಿನ ಹಾಗೆ ಬರೆದ ಪತ್ರಕರ್ತನ ವಿರುದ್ಧ ತನ್ನ ದ್ವೇಷವನ್ನು ಹೇಗೆ ತೀರಿಸಿಕೊಳ್ಳಬೇಕು ಅಂತ ಕಾಯುತ್ತಲೇ ಇರುತ್ತಾನೆ. ಇಂಥ ಸಂದರ್ಭದಲ್ಲಿ ಪತ್ರಕರ್ತ ಏನು ಮಾಡಬೇಕು? ತನ್ನ ಜೀವಕ್ಕೆ ಖಂಡಿತವಾಗಿಯೂ ಅಪಾಯವಿದೆ ಅಂತ ಖಚಿತವಾಗಿ ಗೊತ್ತಿದ್ದರೆ ಕೆಲ ಕಾಲದ ಮಟ್ಟಿಗೆ ಪೋಲೀಸ್ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಆದರೆ ಅದನ್ನೇನೂ ಶಾಶ್ವತವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಪತ್ರಕರ್ತ ಯಾವ ಧೈರ್ಯದಲ್ಲಿ ಪ್ರಭುತ್ವವನ್ನು ಪ್ರಶ್ನಿಸಿಯಾನು? ೨೪ಘಿ೭ ಪತ್ರಕರ್ತರನ್ನು ಬೈಯುತ್ತಾ ಕುಳಿತಿರುವವರಿಂದ ಉತ್ತರದ ನಿರೀಕ್ಷೆಯಿದೆ.
ಹಿಂದೆ ಕನ್ನಡದ ಹೆಸರಾಂತ ದಿನಪತ್ರಿಕೆಯೊಂದರ ಜನಪ್ರಿಯ ಅಂಕಣಕಾರರೊಬ್ಬರು ನಕ್ಸಲರ ವಿರುದ್ಧ ನೇರಮಾತುಗಳ ಲೇಖನ ಬರೆದಾಗ ಉಡುಪಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ನಕ್ಸಲರು ಕರಪತ್ರ ಹಂಚಿ ಆ ಅಂಕಣಕಾರರ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇಲ್ಲಿ ಅಂಕಣಕಾರರ ಧೈರ್ಯವನ್ನು ಮೆಚ್ಚಬಹುದಾದರೂ ಅವರಿಗೆ ನಕ್ಸಲರಿಂದ ಯಾವ ಅಪಾಯ ಎದುರಾಗದಂತೆ ರಕ್ಷಣೆ ನೀಡುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ಅವರು ರಾಜಕಾರಣಿಯೋ ಅಥವಾ ಐಎಎಸ್ ಅಧಿಕಾರಿಯೋ ಆಗಿದ್ದರೆ ಅವರಿಗೆ ಸರಕಾರದಿಂದ ಸದಾಕಾಲ ಭದ್ರತೆ ಸಿಗುತ್ತಿತ್ತು. ಆದರೆ ಪತ್ರಕರ್ತ/ಅಂಕಣಕಾರನಿಗೆ? ಸಿಗುವುದು ಪ್ರಶಂಸೆ ಮಾತ್ರ. ಜೊತೆಗೊಂದಿಷ್ಟು ಮಂದಿಯಿಂದ ಬಯ್ಗುಳಗಳು.

ಪತ್ರಕರ್ತರೇನೂ ಜೀವ ಭಯವನ್ನು ಬಿಟ್ಟು ದುಡಿಯಲು ಬಂದಿರುವ ರೋಬೋಟ್‌ಗಳಲ್ಲವಲ್ಲ? ಅವರಿಗೂ ಅವರದೇ ಆದ ಸಂಸಾರವಿದೆ. ಪ್ರೀತಿಪಾತ್ರರಿದ್ದಾರೆ. ಹಾಗಿರುವಾಗ ಕೇವಲ ಪತ್ರಕರ್ತರು ಮಾತ್ರ ಜೀವ ಭಯ ಬಿಟ್ಟು ಪ್ರಭುತ್ವವನ್ನು ಮತ್ತು ಸಮಾಜದ ಅನ್ಯಾಯ, ಹುಳುಕುಗಳನ್ನು ಪ್ರಶ್ನಿಸುತ್ತಿರಬೇಕು ಎಂದು ನಿರೀಕ್ಷಿಸುವುದನ್ನು ಏನೆಂದು ಕರೆಯಬೇಕು?
ಪತ್ರಕರ್ತನಿಂದ ವೃತ್ತಿಪರತೆಯನ್ನು ನಿರೀಕ್ಷಿಸುವುದಕ್ಕೂ, ಮನುಷ್ಯಪ್ರಯತ್ನಕ್ಕೆ ಮೀರಿದ ಕಾರ್ಯವನ್ನು ನಿರೀಕ್ಷಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪತ್ರಕರ್ತರಿಂದ ಪ್ರಾಮಾಣಿಕತೆಯನ್ನು, ಪತ್ರಿಕಾ ಧರ್ಮದ ಪಾಲನೆಯನ್ನು ನಿರೀಕ್ಷಿಸಬೇಕು. ಆದರೆ ಸಂವಿಧಾನದಿಂದ ಯಾವ ವಿಶೇಷ ಅಧಿಕಾರ ನೀಡದೆಯೆ ಪ್ರಭುತ್ವದ ವಿರುದ್ಧ ಹೋರಾಡಬೇಕು ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಎಷ್ಟು ಸರಿ?

ಭಾರತದ ಸಂವಿಧಾನದಲ್ಲೆಲ್ಲೂ ಪತ್ರಿಕಾ ಸ್ವಾತಂತ್ರ್ಯ ಎಂದು ಪ್ರತ್ಯೇಕವಾದ ವರ್ಗೀಕರಣ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಪತ್ರಿಕೆಗಳ ಮೂಲಕ ತಮಗೆ ಅನಿಸಿದ್ದನ್ನು ಬರೆಯುವ ಸ್ವಾತಂತ್ರ್ಯ ನಮಗೆ (ಭಾರತದ ನಾಗರಿಕರಿಗೆ) ದಕ್ಕಿದೆ. ಪತ್ರಕರ್ತನಿಗೆ ಅಂತ ಯಾವ ವಿಶೇಷ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲ. ಹಾಗಾಗಿ ಒಬ್ಬ ವ್ಯಕ್ತಿ ಪತ್ರಿಕಾ ರಂಗದಲ್ಲಿ ಇದ್ದಾನೆ ಎಂಬ ಮಾತ್ರಕ್ಕೆ ಅವನಿಂದ ಉಳಿದ ಪ್ರಜೆಗಳು ಮಾಡಲು ಇಚ್ಛಿಸದ ಕೆಲಸಗಳನ್ನು ನಿರೀಕ್ಷಿಸುವುದು ತಪ್ಪಾದೀತು.
ಇನ್ನು ಕೆಲವು ಮಂದಿ ಪತ್ರಿಕಾ ರಂಗ ಇಂದು ಉದ್ಯಮವಾಗಿದೆ, ಅದರಲ್ಲಿ ಯಾವ ಆದರ್ಶಗಳೂ ಕಾಣಿಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಂಥವರ ಆರೋಪದ ಬಗ್ಗೆಯೂ ಗೌರವವಿದೆ. ಆದರೆ ಪತ್ರಿಕಾರಂಗದಿಂದ ಮಾತ್ರ ಏಕೆ ಆದರ್ಶಗಳನ್ನು ನಿರೀಕ್ಷಿಸಬೇಕು. ಇಡೀ ಸಮಾಜದಿಂದ ಏಕೆ ಉನ್ನತ ಧ್ಯೇಯಗಳನ್ನು, ಆದರ್ಶಗಳನ್ನು ನಿರೀಕ್ಷಿಸಬಾರದು?

ಪತ್ರಿಕೆಯೊಂದು ಜನರಿಗೆ ಸತ್ಯಸುದ್ದಿಯನ್ನು ಮಾತ್ರ ಕೊಡಬೇಕು, ಸುಳ್ಳನ್ನು ಯಾವ ಕಾರಣಕ್ಕೂ ಕೊಡಬಾರದು ಎಂದು ನಿರೀಕ್ಷಿಸುವುದು ಸರಿ. ಆದರೆ ಆದರ್ಶದ ವ್ಯಸನದಲ್ಲಿ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ದೊಡ್ಡ ಪ್ರಮಾಣದ ಜಾಹೀರಾತುಗಳನ್ನೇ ಪ್ರಕಟಿಸಬಾರದು ಎಂದೆಲ್ಲ ಮಾತಾಡುವುದು ಅರ್ಥಹೀನ. ಪತ್ರಿಕಾರಂಗ ಇವತ್ತು ಒಂದು ಪಕ್ಕಾ ಉದ್ಯಮವಾಗಿದೆ. ಅಲ್ಲಿ ಒಬ್ಬ ಮನುಷ್ಯ ಹತ್ತು ರೂಪಾಯಿ ಬಂಡವಾಳ ಹೂಡಿ ಅದರಲ್ಲಿ ಒಂದಷ್ಟು ಲಾಭ ಪಡೆಯಲು ಪ್ರಯತ್ನಿಸುತ್ತಾನೆ. ಅದರಲ್ಲಿ ತಪ್ಪೇನಿದೆ? ನ್ಯಾಯವಾಗಿ ಲಾಭ ಮಾಡಿಕೊಳ್ಳಲು ನಮ್ಮ ಸಂವಿಧಾನವೇನು ಬೇಡವೆಂದಿಲ್ಲವಲ್ಲ?
ಹಾಗಂತ ಇಂದಿನ ಕೆಲ ಮಾಧ್ಯಮಗಳು ಮಾಡುತ್ತಿರುವ ಅತಿರಂಜಿತ ವರದಿಗಳನ್ನು, ಕೆಲ ಟ್ಯಾಬ್ಲಾಯ್ಡ್‌ಗಳ ಹೂರಣವನ್ನೆಲ್ಲಾ ವ್ಯಾಪಾರಿ ಮನಸ್ಥಿತಿಯಲ್ಲಿ ಒಪ್ಪಿಕೊಳ್ಳಬೇಕು ಎಂದಲ್ಲ. ಆದರೆ ಆದರ್ಶದ ಗುಂಗನ್ನು ಅತಿಯಾಗಿ ತಲೆಗೆ ಹಚ್ಚಿಕೊಂಡು ಪತ್ರಿಕೆಗಳನ್ನು ಸಂತರು ನಡೆಸುವ ಆಶ್ರಮದ ಲಾಭೋದ್ದೇಶವಿಲ್ಲದ ಪ್ರಕಟಣೆಗಳು ಎಂದು ಅರ್ಥೈಸುವುದು ಬೇಡ.

ಸ್ವಾತಂತ್ರ್ಯೂತ್ತರ ಕಾಲದಲ್ಲಿದ್ದಂತಹ ಆದರ್ಶ, ಧ್ಯೇಯಗಳಿಗಾಗಿಯೇ ಹೋರಾಡಿದ ಪತ್ರಿಕೆಗಳನ್ನು ಇವತ್ತು ನಿರೀಕ್ಷಿಸುವುದೇ ತಪ್ಪು ಅಂತ ಹೇಳುತ್ತಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಹೋರಾಟದ ಕಿಚ್ಚು ಇವತ್ತು ಇಡೀ ಭಾರತೀಯ ಸಮಾಜದಲ್ಲಿಯೇ ಸತ್ತುಹೋಗಿದೆ. ಇಡೀ ಸಮಾಜದಲ್ಲಿಯೇ ಸತ್ತುಹೋಗಿರುವ ಕಿಚ್ಚನ್ನು ಕೇವಲ ಪತ್ರಕರ್ತರಲ್ಲಿ ಮಾತ್ರ ನಿರೀಕ್ಷಿಸುವ, ಉಳಿದವರಿಂದ ಆ ಕೆಚ್ಚನ್ನು ನಿರೀಕ್ಷಿಸದೆ ಇರುವ ಇಬ್ಬಂದಿತನ ಬೇಡ.
(ನವೆಂಬರ್ ೧೬, ೨೦೦೯ ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳು

Narasimha Joshi Sonda ಹೇಳಿದ್ದಾರೆ…
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Unknown ಹೇಳಿದ್ದಾರೆ…
ಜನ ಸಾಮಾನ್ಯರ ದ್ವೇಶಕ್ಕೆ ಅತ್ಯಂತ ಹೆಚ್ಚು ಬಲಿಯಾಗಿರುವುದು ರಾಜಕಾರಣಿಗಳು ಸರಿ. ಏಕೆಂದರೆ ಈಗಿನ ರಾಜಕೀಯ ಹಾಗೂ ರಾಜಕಾರಣಿಗಳು ಹಾಗಿವೆ. ಪೋಲೀಸರು ಕೂಡಾ ಜನ ಸಾಮಾನ್ಯರ ದ್ವೇಶಕ್ಕೆ ಬಲಿಯಾಗಿದ್ದಾರೆ. ಕಿಲ್ಲರ್ ಮೋಹನನ ಕಥೆಯೊಂದೆ ಸಾಕು. ಪೋಲೀಸರ ದೌರ್ಬಲ್ಯಕ್ಕೆ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ...

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her ...

Get up Indians, hang him!

Do you think that whatever the Indian government and its ministers do are according to the secular principle? If your answer is ‘YES’, then you need not read this article! You might be well aware of the case of S.S.Sandhu, Superintendent of Police, Taran Taaran, who himself protected the people of Panjab from the brutal hands of terrorists in the 80s decade. He and his fellowmen had conducted many military operations against Sikh terrorists throughout Panjab and had strived hard to restore normalcy in the Panjab state. Later the National Human Right Commission of India filed many cases against him for he had, allegedly, violated the ‘human rights’ of terrorists! At that time no secularists, no human rights activists were present to advocate on behalf of Sandhu. Later Sandhu surrendered to death as he was unable to prove that he had not violated the ‘human rights’ of terrorists! It is strange but true that many a times Indian ‘secularists’ and ‘human right’ activists advocate on behalf ...