ವಿಷಯಕ್ಕೆ ಹೋಗಿ

ಜಾತ್ಯತೀತತೆಯಲ್ಲಿ ಭಾರತೀಯತೆ

ನಾನು ಸಮಾಜಶಾಸ್ತ್ರವನ್ನಾಗಲಿ ಅಥವಾ ರಾಜನೀತಿಯನ್ನಾಗಲಿ ಶಾಸ್ತ್ರೀಯವಾಗಿ ಓದಿಲ್ಲ. ಬಹುಷ: ಅವುಗಳನ್ನು ಶಾಸ್ತ್ರೀಯವಾಗಿ ಓದುವುದು ನನ್ನಿಂದ ಸಾಧ್ಯವೂ ಇಲ್ಲ. ಆದರೆ ದಿನಂಪ್ರತಿ ಒಂದೆರಡು ಪತ್ರಿಕೆಗಳನ್ನು ಓದುವ ಕಾರಣದಿಂದ ಭಾರತೀಯ ಸಮಾಜ ಮತ್ತು ಭಾರತದ ರಾಜಕಾರಣದ ಬಗ್ಗೆ ಸ್ವಲ್ಪ ತಿಳುವಳಿಕೆ ಇದೆ. ("ಇದೆ" ಅಂತ ಗಟ್ಟಿ ಧ್ವನಿಯಲ್ಲಿ ಹೇಳಿಕೊಳ್ಳುವುದು ಅಹಂಕಾರವಾಗಬಹುದು.) ವಿದ್ವಾಂಸರು ರಾಜನೀತಿಯ ಬಗ್ಗೆಯಾಗಲಿ ಅಥವಾ ಸಮಾಜಶಾಸ್ತ್ರದ ಬಗ್ಗೆಯಾಗಲಿ ಬರೆದ ಯಾವ ಪುಸ್ತಕವನ್ನೂ ನಾನು ಓದಿಲ್ಲ. ಆದರೂ ಭಾರತದ ರಾಜಕಾರಣಿಯ ಮತ್ತು ಒಬ್ಬ ಸಾಮಾನ್ಯ ಭಾರತೀಯನ ಮನಸ್ಥಿತಿಯನ್ನು ತಕ್ಕ ಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲೆ.
ಚುನಾವಣೆಗಳು ಎದುರಾದಾಗ ಬಿಜೆಪಿಯ ಪ್ರಧಾನ ಕಛೇರಿಯಿಂದ ಯಾವ ತರಹದ ಹೇಳಿಕೆಗಳು ಹೊರಡಬಹುದು ಮತ್ತು ಅದಕ್ಕೆ ಕಾಂಗ್ರೆಸ್ಸಿಗರ ಪ್ರತಿಕ್ರಿಯೆಗಳು ಹೇಗಿರಬಹುದು ಎನ್ನುವುದನ್ನೂ ತಕ್ಕಮಟ್ಟಿಗೆ ಊಹಿಸುವುದು ಸಾಧ್ಯ.
ಭಾರತದ ಯಾವ ರಾಜಕಾರಣಿಯೇ ಇರಲಿ, ಮತ ಕೇಳುವ ಅವಕಾಶ ಸಿಕ್ಕಾಗಲೆಲ್ಲ 'ಜಾತ್ಯತೀತತೆ' ಎಂಬ ಅದ್ಭುತವಾದ ಪದವೊಂದನ್ನು ತನ್ನ ಚುನಾವಣಾ ಭಾಷಣದಲ್ಲಿ ಖಂಡಿತವಾಗಿಯೂ ಉಪಯೋಗಿಸುತ್ತಾನೆ. ರಾಜಕಾರಣಿಗಳು ಜಾತ್ಯತೀತತೆ ಎಂಬ ಪದವನ್ನು ಉಪಯೋಗಿಸಿಕೊಂಡು ಜನರ ಬಳಿ ಮತ ಕೇಳುವುದನ್ನು ನನ್ನ ಬಾಲ್ಯದಿಂದಲೂ ನೋಡುತ್ತಿದ್ದೇನೆ. ಭಾರತದ ಹೆಚ್ಚಿನ ರಾಜಕಾರಣಿಗಳು ಅವಕಾಶ ಸಿಕ್ಕಾಗಲೆಲ್ಲ ತಾವೊಬ್ಬರೇ ಜಾತ್ಯತೀತತೆಯ ನಿಜವಾದ ರಕ್ಷಕರು ಎಂದು ಫೋಸನ್ನೂ ಕೊಡುತ್ತಾರೆ. ಆದರೆ ಯಾವೊಬ್ಬ ರಾಜಕಾರಣಿಯೂ ಜಾತ್ಯತೀತತೆ ಎಂದರೆ ಏನು ಎಂದು ವ್ಯಾಖ್ಯಾನಿಸಿದ್ದನ್ನು ನಾನು ನೋಡಿಲ್ಲ. ಅಥವಾ ಯಾವೊಬ್ಬ ರಜಕಾರಣಿಯೂ ತನ್ನ ಪ್ರಕಾರ ಜಾತ್ಯತೀತತೆ ಅಂದರೆ ಏನು ಎಂಬುದನ್ನು ವಿವರಿಸುವ ಗೋಜಿಗೆ ಹೋದಂತಿಲ್ಲ.
ಜಾತ್ಯತೀತತೆ ಪದವನ್ನು ನಾವು ಇಂಗ್ಲಿಷಿನ ಸೆಕ್ಯುಲರ್ ಪದಕ್ಕೆ ಸಂವಾದಿಯಾಗಿ ಬಳಸುತ್ತಿದ್ದೇವೆ. ಆಕ್ಸ್‌ಫರ್ಡ್ ನಿಘಂಟಿನ ಪ್ರಕಾರ ಸೆಕ್ಯುಲರ್ ಅಂದರೆ ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸಂಬಂಧ ಪಡದೇ ಇರುವಂಥದ್ದು ಎಂದರ್ಥ. ಸರಿ, ಆಕ್ಸ್‌ಫರ್ಡ್ ನಿಘಂಟಿನಲ್ಲಿ ಸೂಚಿಸಿರುವ ಸೆಕ್ಯುಲರ್ ಎಂಬ ಪದವನ್ನು ಅರ್ಥಮಾಡಿಕೊಳ್ಳುವಲ್ಲಿ ನನಗೆ ಯಾವುದೇ ತೊಂದರೆ ಇಲ್ಲ.
ಯುರೋಪಿನಲ್ಲಿ ಜಾತ್ಯತೀತತೆ ಎಂದರೆ; ದೇಶದ ಪ್ರಭುತ್ವವು ತನ್ನ ನಾಗರಿಕರ ಧಾರ್ಮಿಕ [ಅಥವಾ ಮತೀಯ] ವ್ಯವಹಾರಗಳಿಂದ ದೂರ ಉಳಿಯುತ್ತದೆ. ಧಾರ್ಮಿಕ ಸಂಸ್ಥೆಗಳ ವ್ಯವಹಾರಗಳಲ್ಲಿ ಸರಕಾರವು ತಲೆಹಾಕುವುದಿಲ್ಲ ಮತ್ತು ಸರಕಾರವು ಧಾರ್ಮಿಕ ಸಂಘ, ಸಂಸ್ಥೆಗಳಿಗೆ ಸರಕಾರದ ವ್ಯವಹಾರದಲ್ಲಿ ಮೂಗುತೂರಿಸಲು ಅವಕಾಶ ನೀಡುವುದಿಲ್ಲ. ಹೌದು, ಯುರೋಪು ಎಷ್ಟರ ಮಟ್ಟಿಗೆ ಜಾತ್ಯತೀತಯನ್ನು ಅಳವಡಿಸಿಕೊಂಡಿದೆ ಎಂಬುದು ಚರ್ಚಾಸ್ಪದ ವಿಚಾರವೇ. ಆದರೆ ಈ ಲೇಖನದಲ್ಲಿ ಆ ವಿಚಾರವನ್ನು ಎಳೆಯುವುದು ಬೇಡ.
ಭಾರತದ ಸಂವಿಧಾನ ಕೂಡ ನಮ್ಮ ದೇಶವನ್ನು ಜಾತ್ಯತೀತ ದೇಶ ಅಂತಲೇ ಘೋಷಿಸುತ್ತದೆ. ಅಂದರೆ; ಭಾರತ ಸರಕಾರವು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಮತನ್ನು ಅಪ್ಪಿಕೊಳ್ಳುವುದಿಲ್ಲ. ಭಾರತದಲ್ಲಿ ಧರ್ಮ ಮತ್ತು ಸರಕಾರ ಬೇರೆ ಬೇರೆಯಾಗಿರುತ್ತದೆ ಮತ್ತು ಈ ದೇಶಕ್ಕೆ ಯಾವುದೇ ಅಧಿಕೃತ ಧರ್ಮ ಇಲ್ಲ. ಇದೂ ನನಗೆ ಸರಿಯಾಗಿಯೇ ಅರ್ಥವಾಗುತ್ತದೆ. ಆದರೆ ಭಾರತದ ರಾಜಕಾರಣಿಯೊಬ್ಬ ಜಾತ್ಯತೀತತೆ ಎಂಬ ಪದಪ್ರಯೋಗ ಮಾಡಿದಾಗ ನನಗೆ ಆತ ಏನು ಹೇಳುತ್ತಿದ್ದಾನೆ ಎಂಬುದು ಅರ್ಥವಾಗುವುದಿಲ್ಲ! ನನ್ನು ಸಮಸ್ಯೆ ಇರುವುದೇ ಇಲ್ಲಿ.
ನಾನು ಕಂಡಹಾಗೆ ಭಾರತದ ರಾಜಕಾರಣದಲ್ಲಿ ಮೂರು ವಿಧದ ಜಾತ್ಯತೀತತೆಗಳಿವೆ.
ಒಂದನೆಯ ವಿಧದ ಜಾತ್ಯತೀತತೆ ಯಾವತ್ತಿಗೂ ಹಿಂದೂ ಸಂವೇದನೆಗಳನ್ನು ಅರ್ಥಮಾಡಿಕೊಳ್ಳಲಾರದು. ಇದು ಹಿಂದೂ ಧರ್ಮದ ಎಲ್ಲ ವಿಚಾರಗಳನ್ನು ಖಂಡಿಸುತ್ತಿರುತ್ತದೆ ಮತ್ತು ಹಿಂದೂ ಮೌಲ್ಯಗಳ ಬಗ್ಗೆ ಯಾವಾಗಲೂ ಕೀಳಾಗಿ ಮಾತಾಡುತ್ತಿರುತ್ತದೆ. ಆದರೆ ಜಾತ್ಯತೀತತೆಯ ಈ ವಿಧ ಯಾವತ್ತಿಗೂ ಹಿಂದೂಯೇತರ ಧರ್ಮವನ್ನು ವಸ್ತುನಿಷ್ಠವಾಗಿ ವಿಮರ್ಶಿಸುವ ಗೋಜಿಗೆ ಹೋಗುವುದಿಲ್ಲ. ಇದು ಯಾವತ್ತಿಗೂ ಒಬ್ಬ ಜಿಹಾದಿಯ ಬಳಿ ಹಿಂಸೆಯನ್ನು ಬಿಡು ಅಂತ ಹೇಳುವುದಿಲ್ಲ. ಆದರೆ ಹಿಂದೂ ಕಾರ್ಯಕರ್ತರೆಲ್ಲರೂ ಫ್ಯಾಸಿಸ್ಟ್‌ಗಳು ಮತ್ತು ಹಿಂದೂ ಫ್ಯಾಸಿಸಮ್‌ನಿಂದ ದೇಶಕ್ಕೇ ಗಂಡಾಂತರ ಅಂತ ಈ ಜಾತ್ಯತೀತತೆ ಯಾವತ್ತಿಗೂ ಮಾತಾಡುತ್ತಿರುತ್ತದೆ. ಆದರೆ ಹಿಂದೂಯೇತರರ ಫ್ಯಾಸಿಸಮ್ ಕೂಡ ದೇಶಕ್ಕೆ ಅಪಯಕಾರಿ ಎನ್ನುವುದನ್ನು ಇವರು ಯಾವತ್ತಿಗೂ ಹೇಳುವುದಿಲ್ಲ. ಯಾಕೆ ಅಂತ ಗೊತ್ತಿಲ್ಲ.
ಭಾರತದ ರಾಜಕಾರಣದಲ್ಲಿ ವ್ಯಾಪಕವಾಗಿರುವುದೇ ಈ ಮಾದರಿಯ ಜಾತ್ಯತೀತತೆ. ಈ ಮಾದರಿಯ ಜಾತ್ಯತೀತತೆಯ ಆರಾಧಾಕರು ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನು ಮತ್ತು ಅವುಗಳಲ್ಲಿ ಬರುವ ಪಾತ್ರಗಳ ಬಗ್ಗೆ ಕುಹಕಮಾಡಲು ಸದಾ ಕಾದಿರುತ್ತಾರೆ. ಆ ಕಾವ್ಯಗಳು ಸಾರುವ ಜೀವನ ಮೌಲ್ಯಗಳ ಬಗ್ಗೆ ಅವರಿಗೆ ಕಾಳಜಿಯಿಲ್ಲ. ಅದಲ್ಲದೆ, ಜಾತ್ಯತೀತತೆ ಮತ್ತು ವಿಚಾರವಾದದ ಹೆಸರಿನಲ್ಲಿ ಇವರು ಯಾವತ್ತಿಗೂ ಹಿಂದೂ ನಂಬಿಕೆಗಳನ್ನು ಹಳಿಯಲು ಅವಕಾಶ ನೋಡುತ್ತಿರುತ್ತಾರೆ. ಆದರೆ ಹಿಂದೂಯೇತರ ಧರ್ಮಗಳ ಬಗ್ಗೆ, ಅವುಗಳ ನಂಬಿಕೆಯ ಬಗ್ಗೆ ಪ್ರಶ್ನೆ ಮಾಡುವ ಗೋಜಿಗೇ ಇವರು ಹೋಗುವುದಿಲ್ಲ. ಏಕೆ ಅಂತ ಗೊತ್ತಿಲ್ಲ. ಬಹುಷಃ ಜೀವ ಭಯವಿರಬೇಕು! ಹಿಂದೂ ನಂಬಿಕೆಗಳನ್ನು ತೆಗಳುವುದು ಮತ್ತು ಹಾಸ್ಯಮಾಡುವುದೇ ಈ ಮಾದರಿಯ ಜಾತ್ಯತೀತತೆ.
ಎರಡನೆಯ ಮಾದರಿಯ ಜಾತ್ಯತೀತತೆಯ ಸ್ವರೂಪ ಸ್ವಲ್ಪ ಭಿನ್ನವಾಗಿದೆ. ಇದು ನಾಸ್ತಿಕವಾದಕ್ಕೆ ಹತ್ತಿರವಾಗಿದೆ. ಅವರು ಎಲ್ಲಾ ಧರ್ಮಗಳ ದೇವರ ಕಲ್ಪನೆಯನ್ನು [ಅಥವಾ ಅಸ್ತಿತ್ವವವನ್ನು] ಪ್ರಶ್ನಿಸುತ್ತಿರುತ್ತಾರೆ. ಅವರಿಗೆ ಹಿಂದೂ - ಮುಸ್ಲಿಮ್ ಎಂಬ ಬೇಧವಿಲ್ಲ. ದೇವರ ಅಸ್ತಿತ್ವದ ಪ್ರಶ್ನೆಯಲ್ಲಿ ಅವರ ಪಾಲಿಗೆ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲಾ ಒಂದೇ. ಇವರು ಎಲ್ಲ ಧರ್ಮೀಯರ ಆಸ್ತಿಕ ಭಾವನೆಗಳನ್ನೂ ಗೇಲಿಮಾಡುತ್ತಾರೆ. ಇದೇ ಈ ಮಾದರಿಯ ಜಾತ್ಯತೀತತೆಯ ದೋಷ. ಹಾಗೆ ಗೇಲಿ ಮಾಡುವುದರಿಂದ ಆಸ್ತಿಕ ಮನಸ್ಸುಗಳು ಅದೆಷ್ಟು ನೊಂದುಕೊಳ್ಳಬಹುದು ಎಂಬ ಬಗ್ಗೆ ಇವರು ಚಿಂತಿಸುವುದಿಲ್ಲ.
ಸಮಾಜದ ಒಳಿತಿಗೆ ಕೆಲವೊಂದು ಧಾರ್ಮಿಕ ನಂಬಿಕೆಗಳು ಅಗತ್ಯ. ದೇವರನ್ನು ನಂಬುವುದು, ಭಕ್ತಿಯಿಂದ ಅವನನ್ನು ಪೂಜಿಸುವುದು ಮನುಷ್ಯನನ್ನು ಆಧ್ಯಾತ್ಮಿಕ ಔನ್ನತ್ಯಕ್ಕೆ ಕೊಂಡೊಯ್ಯಬಲ್ಲವು. ಉಪವಾಸ, ದೇವರಿಗೆ ಹಣ್ಣುಹಂಪಲುಗಳನ್ನು ಅರ್ಪಿಸುವುದು, ದೇವರ ಹೇಸರಿನಲ್ಲಿ ಬಡವರಿಗೆ ಉಪಯುಕ್ತ ವಸ್ತುಗಳನ್ನು ದಾನ ಮಾಡುವುದು ಮುಂತಾದವುಗಳನ್ನು ಆಸ್ತಿಕತೆಯು ಅನಾದಿಯಿಂದಲೂ ಪೋಷಿಸಿಕೊಂಡು ಬಂದಿದೆ. ಇದರಿಂದ ಸಮಾಜಕ್ಕೆ ಸಾಕಷ್ಟು ಒಳ್ಳೆಯದಾಗಿದೆ. ಆದರೆ ಈ ಜಾತ್ಯತೀತತೆಯ ಮುಖವಾಡವನ್ನು ತೊಟ್ಟುಕೊಂಡಿರುವ ನಾಸ್ತಿಕತೆಯ ದೆಸೆಯಿಂದ ಪ್ರತಿಯೊಂದು ಧಾರ್ಮಿಕ ನಂಬಿಕೆಗಳೂ ಪ್ರಶ್ನಿಸಲ್ಪಡುತ್ತಿವೆ. ಇವರು ಜನಿವಾರ ಹಾಕಿಕೊಳ್ಳುವ ಬ್ರಹ್ಮಣರನ್ನು ಬಯ್ಯುತ್ತಾರೆ, ತಿಲಕ ಇಟ್ಟುಕೊಳ್ಳುವ ಕಾರಣಕ್ಕೆ ಇಡೀ ಹಿಂದೂ ಸಮಾಜವನ್ನು ತೆಗಳುತ್ತಾರೆ, ಗಡ್ಡ ಬಿಡುವ ಕಾರಣಕ್ಕೆ ಮುಸ್ಲಿಮರನ್ನು ಹಾಸ್ಯಮಾಡುತ್ತಾರೆ.
ಈ ಮಾದರಿಯ ಜಾತ್ಯತೀತತೆಯ ಬೆಂಬಲಿಗರು ಕೂಡ ವಿಚಾರವಾದ ಮತ್ತು ಜಾತ್ಯತೀತತೆಯ ಹೆಸರಿನಲ್ಲಿ ತಾವು ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಾರೆ.
ಇವೆರಡೂ ಮಾದರಿಗಳನ್ನು ಬಿಟ್ಟು - ಭಾರತೀಯ ಮನಸ್ಥಿತಿಗೆ ಅತ್ಯಂತ ಹತ್ತಿರವಾದ - ಮೂರನೆಯ ಮಾದರಿಯ ಜಾತ್ಯತೀತತೆಯೊಂದಿದೆ. ಈ ಮಾದರಿಯ ಜಾತ್ಯತೀತತೆ ಒಬ್ಬ ಹಿಂದೂವನ್ನು ನೈಜ ಹಿಂದೂವಾಗಿಯೇ ಉಳಿಯಲು, ಮುಸ್ಲಿಮನನ್ನು ನೈಜ ಮುಸ್ಲಿಮನಾಗಿಯೇ ಉಳಿಯಲು ಮತ್ತು ಒಬ್ಬ ಕ್ರೈಸ್ತನನ್ನು ನೈಜ ಕ್ರೈಸ್ತನಾಗಿಯೇ ಉಳಿಯುವ ಅವಕಾಶ ಕಲ್ಪಿಸುತ್ತದೆ. ಇದು ಎಲ್ಲ ಧರ್ಮಗಳೂ ನಿಜವಾದ ಧರ್ಮಗಳು ಎಂದೇ ನಂಬುತ್ತದೆ ಅಲ್ಲದೆ ಎಲ್ಲ ಧರ್ಮಗಳೂ ಸಮಾನ ಎಂದೇ ಭಾವಿಸುತ್ತದೆ. "ನಿಜವಾದ ದೇವರು ಯಾರು?" ಅಂತ ಯಾರಾದರೂ ಈ ಮಾದರಿಯ ಜಾತ್ಯತೀತರಲ್ಲಿ ಕೇಳಿದರೆ "ಎಲ್ಲವೂ ದೇವರ ಅಂಶವೇ" ಎಂದು ಉತ್ತರಿಸುತ್ತಾರೆ. ಎಲ್ಲ ಅವತಾರಗಳೂ ಒಂದೇ ಶಕ್ತಿಯ ವಿವಿಧ ರೂಪಗಳು ಎಂಬುದು ಈ ಮಾದರಿಯ ಜಾತ್ಯತೀತತೆಯ ವಿವರಣೆ. ಖ್ಯಾತ ಪತ್ರಕರ್ತ ಎಮ್. ಜೆ. ಅಕ್ಬರ್ "ಹೇಳಿದಂತೆ, ಇದು, ಒಬ್ಬ ಹಿಂದೂವಿಗೆ ಹಿಂದುತ್ವವಾದಿಯಾಗಿರಲು ಅವಕಾಶ ನೀಡುತ್ತದೆ. ಆದರೆ ಮುಸ್ಲಿಮ್ ವಿರೋಧಿಯಾಗುವ ಅಧಿಕಾರ ನೀಡುವುದಿಲ್ಲ. ಹಾಗೆಯೇ ಒಬ್ಬ ಮುಸಲ್ಮಾನನಿಗೆ ಮುಸ್ಲಿಮ್ ಪರ ಇರಲು ಅವಕಾಶ ನೀಡುತ್ತದೆ. ಆದರೆ ಹಿಂದೂ ವಿರೋಧಿಯಾಗಲು ಅಧಿಕಾರ ನೀಡುವುದಿಲ್ಲ."
ಭಾರತದಲ್ಲಿ ಬಿಬಿಸಿಯ ಪ್ರತಿನಿಧಿಯಾಗಿದ್ದ ಮಾರ್ಕ್ ಟುಲ್ಲಿ ಒಮ್ಮೆ ಹೀಗೆ ಹೇಳಿದ್ದರು: ಭಾರತದಲ್ಲಿ ವಾಸಿಸುತ್ತಿರುವ ಒಬ್ಬ ಕ್ರೈಸ್ತನಾಗಿ ನಾನು ಇಲ್ಲಿ ದೊರಕಿರುವ ಸ್ವಾತಂತ್ರವನ್ನು ಕಂಡು ಖುಷಿಪಡುತ್ತೇನೆ. "ಎಲ್ಲ ನದಿಗಳು ಸಮುದ್ರದತ್ತ ಸಾಗುತ್ತವೆ. ಆದರೆ ಅವುಗಳ ಮಾರ್ಗ ಮಾತ್ರ ಬೇರೆ ಬೇರೆ. ಕೆಲವು ನೇರವಾಗಿ ಸಾಗಿದರೆ ಇನ್ನು ಕೆಲವು ಸುತ್ತು ಹಾಕಿ ಸಾಗುತ್ತವೆ. ಆದರೆ ಅವೆಲ್ಲಾ ಸಾಗುವುದು ಸಮುದ್ರದ ಕಡೆಗೆ. ಹಾಗೆಯೇ, ದೇವರ ಅನುಗ್ರಹದಿಂದ, ದೇವರೆಡೆಗೆ ಸಾಗಲು ಹಲವು ಪಥಗಳಿವೆ" ಎಂದು ನನಗೆ ಹೇಳಿಕೊಟ್ಟವರು ಒಬ್ಬ ಹಿಂದೂ ಸನ್ಯಾಸಿಯಾಗಿದ್ದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು. ನಾನು ಮೊದಲು ಭಾರತಕ್ಕೆ ಬಂದಾಗ ಇದನ್ನು ನಂಬಲಿಲ್ಲ. ದೇವರೆಡೆಗೆ ಸಾಗಲು ಕ್ರೈಸ್ತಮತವೊಂದೇ ದಾರಿ ಎಂದು ನಾನು ನಂಬಿದ್ದೆ. ಆದರೆ ಭಾರತದ ಸಹಿಷ್ಣುತೆ ಮತ್ತು ಅದರ ಜಾತ್ಯತೀತತೆ ನನ್ನ ನಂಬಿಕೆಯನ್ನು ಬದಲಾಯಿಸಿದೆ.
ಜಾತ್ಯಾತೀತತೆಯ ಮೂರನೆಯ ವಿಧವನ್ನು ನಾನು ಭಾರತೀಯ ಜಾತ್ಯತೀತತೆ ಅಂತ ಕರೆಯುತ್ತೇನೆ. ಜಗತ್ತಿನಲ್ಲೇ ಅತ್ಯಂತ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಭಾರತ ಅನುಸರಿಸಬೇಕಾಗಿದ್ದು ಇದೇ ಮಾದರಿಯ ಜಾತ್ಯತೀತತೆಯನ್ನು.
ಅದಿರಲಿ. ನಮ್ಮ ರಾಜಕೀಯ ನಾಯಕ ಶಿಖಾಮಣಿಗಳು ಯಾವ ಮಾದರಿಯ ಜಾತ್ಯಾತೀತತೆಯನ್ನು ಅನುಸರಿಸುತ್ತಿದ್ದಾರೆ ಅಂತ ಯಾರಾದರೂ ಹೇಳಬಹುದಾ?
ಭಾರತದ ಕೆಲವು ರಾಜಕೀಯ ಪಕ್ಷಗಳಿಗೆ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವುದರಲ್ಲಿಯೇ ಸಮಯ ಹೋಗುತ್ತಿದೆ. ಇನ್ನು ಕೆಲವರು ಬಹುಸಂಖ್ಯಾತ ವಿರೋಧಿ ಭಾವನೆಗಳನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದಿಷ್ಟು ಮಂದಿ ಅಲ್ಪಸಂಖ್ಯಾತರ ಮತವೇ ತಮಗೆ ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಇವರಿಬ್ಬರೂ ಜಾತ್ಯತೀತತೆಯ ನೆಜವಾದ ಸಂರಕ್ಷಕರು ತಾವೇ ಎಂದು ವೇದಿಕೆಯ ಮೇಲೆ ಹೇಳಿಕೊಳ್ಳುತ್ತಾರೆ.
ಆದರೆ ಭಾರತದ ಯಾವೊಂದು ರಾಜಕೀಯ ಪಕ್ಷವೂ ನೈಜ ಅರ್ಥದಲ್ಲಿ ಜಾತ್ಯತೀತ ಅಂತ ನನಗನಿಸುವುದಿಲ್ಲ. ಮೂರನೆಯ ಮಾದರಿಯ ಜಾತ್ಯತೀತತೆಯನ್ನು ಯಾವ ಪಕ್ಷವೂ ಅನುಸರಿಸುತ್ತಿರುವಂತೆ ಕಾಣಿಸುತ್ತಿಲ್ಲ. ತಾನು ಹಿಂದೂ ಮತ್ತು ಮುಸ್ಲಿಮರ ನಡುವೆ ತಾರತಮ್ಯ ಮಾಡಲಾರೆ ಅಂತ ಬಿಜೆಪಿ ಹೇಳಿದರೆ, ತನ್ನಿಂದ ಮಾತ್ರ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಉಳಿಯುತ್ತದೆ ಅಂತ ಕಾಂಗ್ರೆಸ್ ಘೋಷಿಸಿಕೊಳ್ಳುತ್ತದೆ. ಆದರೆ ಇವೆರಡೂ ಪಕ್ಷಗಳು ಏನನ್ನು ಮಾಡಬಾರದೋ ಅದನ್ನೇ ಮಾಡುತ್ತವೆ.
ಬಿಜೆಪಿ ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕನಾಗಿ ದೇಶವನ್ನು ಆಳುತ್ತಿದ್ದಾಗ ಹಜ್ ಸಬ್ಸಿಡಿಯನ್ನು ಹೆಚ್ಚಿಸಿತು. ಆದರೆ ಮತ್ತೊಂದೆಡೆ ಸಮಾನ ನಾಗರಿಕ ಸಂಹಿತೆಯ ಮಂತ್ರವನ್ನು ಜಪಿಸುತ್ತ ಕುಳಿತಿತ್ತು. ಇತ್ತ ಸ್ವಯಂಘೋಷಿತ ಸೆಕ್ಯುಲರ್ ಪಕ್ಷವಾದ ಕಾಂಗ್ರೆಸ್ ತನ್ನಿಂದ ಮಾತ್ರ ಈ ದೇಶದ ಅಲ್ಪಸಂಖ್ಯಾತರ ರಕ್ಷಣೆ ಸಾಧ್ಯ, ತಾನು ಮಾತ್ರ ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬಲ್ಲೆ ಎಂದು ಹೇಳುತ್ತಿದೆ. ಆದರೆ ೧೯೮೪ರ ಸಿಖ್ ವಿರೋಧಿ ಹತ್ಯಾಕಾಂಡದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್‌ಗೆ ಗಂಟಲು ಕಟ್ಟಿದಂತಾಗುತ್ತದೆ. ಆದ ಅಲ್ಪಸಂಖ್ಯಾತರು, ಜಾತ್ಯತೀತತೆ ಕಾಂಗ್ರೆಸ್ಸಿಗೆ ಮಾಯಾಜಿಂಕೆಯಂತೆ ಕಾಣಬಹುದು.
ಇರಲಿ, ಯಾವುದೇ ಬರಹಗಳಿಂದ, ಯಾವ ಪತ್ರಕರ್ತನ ವರದಿಗಳಿಂದ ಭಾರತದ ರಾಜಕೀಯ ಪಕ್ಷಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಪಕ್ಷಗಳ ಇಬ್ಬಂದಿತನವನ್ನು ಇಲ್ಲವಾಗಿಸುವುದು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಪಕ್ಷಗಳಿಗೆ ಜನಪರವಾಗಿರಿ ಅಂತ ಹೇಳುವುದು ಬಾಯಿ ಹಾಳಿನ ಕೆಲಸ ಮತ್ತು ಬರೆಯುವುದು ಜಾಗ ಹಾಳು ಮಾಡುವ ಕೆಲಸ.
ಆದರೆ ಈ ದೇಶದ ಪ್ರಜಾಸತ್ತೆ ಖಂಡಿತ ಕೆಲವು ಬದಲಾವಣೆಗಳನ್ನು ತರಬಹುದು. ಅದಕ್ಕೆ ಬಲವಾದ ಇಚ್ಛಾಶಕ್ತಿ ಬೇಕು. ಮೇಲೆ ವಿವರಿಸಲಾದ ಮೂರು ಮಾದರಿಯ ಜಾತ್ಯತೀತತೆಯನ್ನು ಒಮ್ಮೆ ನೋಡಿ. ನಾವು ಯಾವ ಮಾದರಿಯ ಜಾತ್ಯತೀತತೆಯನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಿ. ನೀವು ಮೂರನೆಯ ಮಾದರಿಯ ಜಾತ್ಯತೀತತೆಯನ್ನು ಇಷ್ಟಪಡುತ್ತೀರಿ ಎಂಬ ನಂಬಿಕೆಯಿದೆ. ಏಕೆಂದರೆ ಇದು ಎಲ್ಲರ ಭಾವನೆಗಳನ್ನೂ ಗೌರವಿಸುತ್ತದೆ, ಎಲ್ಲ ಧರ್ಮದ ನಂಬಿಕೆಗಳ ಬಗ್ಗೆಯ ಗೌರವ ಹೊಂದಿದೆ. ಅದನ್ನು ಅನುಸರಿಸೋಣ - ಅಕ್ಷರರೂಪದಲ್ಲಿಯೂ ಮತ್ತು ಕಾರ್ಯರೂಪದಲ್ಲಿಯೂ.
ಸೈದ್ಧಾಂತಿಕವಾಗಿ ಈಗಾಗಲೇ ದಿವಾಳಿಯಾಗಿರುವ ರಾಜಕಾರಣಿಗಳು ನಮ್ಮನ್ನೇ ಹಿಂಬಾಲಿಸುತ್ತಾರೆ. ನೆನಪಿರಲಿ!

ಕಾಮೆಂಟ್‌ಗಳು

Unknown ಹೇಳಿದ್ದಾರೆ…
ಚೆನ್ನಾಗಿದೆ, ನನಗೆ ಈ ರಾಜಕೀಯ, ಸೆಕ್ಯುಲರಿಜ್ಹಮ್ ಯಾವುದು ಅರ್ಥವಾಗಲ್ಲ ಎಷ್ಟು ಹೇಳಿ ಎಷ್ಟು ಬರೆದರೂ ನಮ್ಮ ರಾಜಕೀಯ ಬದಲಾಗಲ್ಲ.
Unknown ಹೇಳಿದ್ದಾರೆ…
ಆತ್ಮ ಹತ್ಯೆಯ ಬಗ್ಗೆ ಯೋಚಿಸುತ್ತಿದ್ದೇನೆ ಆ ಲೇಖನಕ್ಕಿಂತ ತುಂಬಾ ಚೆನ್ನಾಗಿದೆ.
Chaitra hegde ಹೇಳಿದ್ದಾರೆ…
"ಪ್ರಜಾಸತ್ತೆ ಖಂಡಿತ ಕೆಲವು ಬದಲಾವಣೆಗಳನ್ನು ತರಬಹುದು. ಅದಕ್ಕೆ ಬಲವಾದ ಇಚ್ಛಾಶಕ್ತಿ ಬೇಕು."
ಖಂಡಿತಾ ಸತ್ಯ...ನಾವು ಸರಿಯಾದ ದಾರಿಯಲ್ಲಿ ನಡೆದರೆ ರಾಜಕಾರಣಿಗಳು ನಮ್ಮನ್ನು ಹಿಂಬಾಲಿಸಲೇ ಬೇಕು...

ತುಂಬಾ ಒಳ್ಳೆಯ ಲೇಖನ.............
Prashanth Suvarna ಹೇಳಿದ್ದಾರೆ…
sakataagi barediddiya
Jayashekhar Madappadi ಹೇಳಿದ್ದಾರೆ…
ನಿಜವಾಗಲೂ ಒಳ್ಳೆಯ ಲೇಖನ.....
ನೀನು ಹೀಗೆ ಬರೆಯಬಲ್ಲೆ ಎಂದು ನಾನು ಊಹಿಸಿರಲಿಲ್ಲ...
ಜಯಶೇಖರ್ ಮಡಪ್ಪಾಡಿ
prasca ಹೇಳಿದ್ದಾರೆ…
ಒಳ್ಳೆಯ ಲೇಖನ. ಅಭಿನಂದನೆಗಳು
ashok karanthಹೇಳಿದ್ದಾರೆ…
chennagi barediddiraa ...........abhinandanegalu

kep it up

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ...

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her ...

Get up Indians, hang him!

Do you think that whatever the Indian government and its ministers do are according to the secular principle? If your answer is ‘YES’, then you need not read this article! You might be well aware of the case of S.S.Sandhu, Superintendent of Police, Taran Taaran, who himself protected the people of Panjab from the brutal hands of terrorists in the 80s decade. He and his fellowmen had conducted many military operations against Sikh terrorists throughout Panjab and had strived hard to restore normalcy in the Panjab state. Later the National Human Right Commission of India filed many cases against him for he had, allegedly, violated the ‘human rights’ of terrorists! At that time no secularists, no human rights activists were present to advocate on behalf of Sandhu. Later Sandhu surrendered to death as he was unable to prove that he had not violated the ‘human rights’ of terrorists! It is strange but true that many a times Indian ‘secularists’ and ‘human right’ activists advocate on behalf ...