(ಪರೀಕ್ಷೆ, ತಿರುಗಾಟ, ಅನಾರೋಗ್ಯ... ಹೀಗೆ ಹಲವಾರು ಕಾರಣಗಳಿಂದ ಬ್ಲಾಗಿನಲ್ಲಿ ಹಲವು ದಿನಗಳ ನಂತರ ಅಕ್ಷರಗಳನ್ನು ಕಟ್ಟುತ್ತಿದ್ದೇನೆ. ಇದೇನೂ ಲೇಖನವಲ್ಲ. ಸುಮ್ಮನೆ ಕುಳಿತುಕೊಂಡು ಬರೆದ - ಯಾರನ್ನೂ ನೇರವಾಗಿ ಉದ್ದೇಶಿಸಿರದ - ಒಂದು ಪುಟ್ಟ ಪತ್ರ. ಹೊಸ ಬರಹದೊಂದಿಗೆ ಮತ್ತೆ ಕೆಲವೇ ದಿನಗಳಲ್ಲಿ ಭೇಟಿಯಾಗೋಣ.)
ಆತ್ಮೀಯ ಸ್ನೇಹಿತೆ...
ಬರಹವನ್ನು ಮುಂದುವರೆಸುವದೋ ಬೇಡವೋ ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ನೀನು ನನಗೆ ಬರೆದ ಪತ್ರ ಓದಿದೆ. ಆ ಪತ್ರವನ್ನೇ ನಿನ್ನ ಬ್ಲಾಗಿನಲ್ಲಿ ಹಾಕಿದ್ದರೆ ಒಂದು ಒಳ್ಳೆಯ ಲೇಖನ ಆಗುತ್ತಿತ್ತು. ನಾನು ನಿನಗೆ support ಮಾಡ್ತಿ ಅಂತ ಬರೆದಿದ್ದೀಯಾ. ಧನ್ಯವಾದ ನೆನಪಿಟ್ಟುಕೊಂಡದ್ದಕ್ಕೆ!
ಅದಿರಲಿ. ಒಂದು ವಿಷಯ ನೆನಪಿರಲಿ. ಯಾರೊಬ್ಬರ ಬರಹವೂ ಪರಿಪೂರ್ಣ ಅಲ್ಲ. ಪರಿಪಕ್ವವೂ ಅಲ್ಲ. ನನ್ನ ಬರಹ ಪರಿಪಕ್ವ ಅಂತ ಇವತ್ತಿನವರೆಗೆ ಯಾರೂ ಘೋಷಿಸಿಕೊಂಡಿಲ್ಲ. ಹಾಗೊಮ್ಮೆ ಯಾರಾದರೂ ಘೋಷಿಸಿಕೊಂಡರೆ ಅದು ಅಹಂಕಾರವಷ್ಟೆ.
ನೀನು ಲಂಕೇಶ್, ಅಡಿಗರ ಉದಾಹರಣೆ ಕೊಟ್ಟಿದ್ದೀಯಾ. ಇದರರ್ಥ ನೀನು ಅವರ ಬರಹ ಓದುತ್ತಿದ್ದೀಯಾ ಎಂದಾಯಿತು. ಬಹಳ ಒಳ್ಳೆಯದು. ಅವರ ಬರಹಗಳಿಗೆ ದೊಡ್ಡ ಪ್ರಮಾಣದ ಓದುಗರಿದ್ದಾರೆ. ಹಾಗೆಯೇ ಲಂಕೇಶರ ಬರಹಗಳನ್ನು ಟೀಕಿಸುವ ಒಂದು ಬಣವೇ ಇದೆ. ಅಡಿಗರ ಬರಹವನ್ನೂ ಹಲವು ಮಂದಿ ಪ್ರಶ್ನಿಸಿದ್ದಾರೆ. ಇವರಿಬ್ಬರೇ ಅಲ್ಲ ಜಗತ್ತಿನ ಯಾವ ಬರಹಗಾರನ ಬರಹವೂ ಪ್ರಶ್ನಾತೀತವಲ್ಲ. ನನ್ನದು-ನಿನ್ನದೂ ಕೂಡ. ನೀನು ಬರೆದದ್ದನ್ನು ಹತ್ತು ಮಂದಿ ಇಷ್ಟಪಟ್ಟರೆ ಹನ್ನೊಂದನೆಯ ವ್ಯಕ್ತಿ ಟೀಕಿಸುತ್ತಾನೆ ಎಂಬುದು ನೆನಪಿರಲಿ.
ನೀನು ಬರೆದ ಬರಹ ನಿನಗೇ ನಗು ತರಿಸುವಂತಿದೆ ಎಂದೆ. ಒಪ್ಪೋಣ. ನಮ್ಮ ಮೊದಮೊದಲ ಬರಹಗಳು ನಮಗೆ ನಗುಬರಿಸುವಂಥದ್ದೇ ಆಗಿರುತ್ತವೆ. ನನಗೂ ಆ ಅನುಭವ ಇದೆ. ನಿನ್ನ ಬ್ಲಾಗಿನ ಬಗ್ಗೆ ಈಗೊಂದು ಹದಿನೈದು ದಿನಗಳ ಹಿಂದೆ ಕನ್ನಡದ ಹೆಸರಾಂತ ಪತ್ರಿಕೆಯೊಂದರಲ್ಲಿ ನಿನ್ನ ಪರಿಚಯದೊಂದಿಗೆ ಬಂದಿತ್ತು. ನಾನಂತೂ ಖಂಡಿತ ನಿನ್ನದು ಹೀಗೊಂದು ಬ್ಲಾಗಿದೆ ನೋಡಿ ಅಂತ ಅವರಿಗೆ ಹೇಳಿಲ್ಲ. ಅವರು ಬೇರೆ ಬೇರೆ ಬ್ಲಾಗುಗಳನ್ನು ನೋಡುವಾಗ ನಿನ್ನದು ಅವರಿಗೆ ಕಂಡಿದೆ. ಅವರಿಗೆ ಇಷ್ಟವಾಗಿದೆ. ಹಾಗಾಗಿ ಅವರ ಪತ್ರಿಕೆಯಲ್ಲಿ ಹಾಕಿದ್ದಾರೆ. ನೀನು ಬರೆದದ್ದು ನಿನಗೆ ಸಮಾಧಾನ ತರದಿರಬಹುದು. ಆದರೆ ಅದನ್ನು ಓದಿದವರಿಗೆ ಇಷ್ಟವಾಗಿದೆ. ನಿನ್ನ ಕವನಗಳಿಗೆ ೧೦-೧೩ ಪ್ರತಿಕ್ರಿಯೆಗಳೂ ಬಂದಿವೆ. ಅವರಲ್ಲಿ ಹೆಚ್ಚಿನವರಿಗೆ ನಿನ್ನ ಬ್ಲಾಗು ಇಷ್ಟವಾಗಿದೆ. ಹೀಗಿರುವಾಗ ನೀನು ಇಷ್ಟು ದಿನ ಹೊಸದನ್ನು ಬರೆಯದೆ ಕುಳಿತಿದ್ದು ಸರಿಯಲ್ಲ..
ಒಂದು ಮಾತು ನೆನಪಿಡು. ಇವತ್ತಿನ ಅನೇಕ ಯಶಸ್ವಿ ಬ್ಲಾಗರ್‌ಗಳ ಮೊದಲ ಬರಹಗಳಿಗೆ ಒಂದೂ ಪ್ರತಿಕ್ರಿಯೆ ಬರುತ್ತಿರಲಿಲ್ಲ. ನನ್ನ ಬ್ಲಾಗ್ ಬರಹಕ್ಕೆ ಇವತ್ತಿಗೂ ೬-೭ ಪ್ರತಿಕ್ರಿಯೆಗಳು ಬಂದರೆ ಹೆಚ್ಚು. ಅದಲ್ಲದೆ ಕನ್ನಡದ ಯಾವ ಪತ್ರಿಕೆಗಳಲ್ಲೂ ನನ್ನ ಬ್ಲಾಗಿನ ಬಗ್ಗೆ ಬರೆದಿಲ್ಲ - ನಿನ್ನ ಬ್ಲಾಗಿನ ಬಗ್ಗೆ ಬಂದಂತೆ. ನನಗಂತೂ ನಿನ್ನ ಬ್ಲಾಗ್ ಪಡೆದುಕೊಂಡಿರುವ ಜನಪ್ರಿಯತೆಯನ್ನು ನೋಡಿ ಹೊಟ್ಟೆಕಿಚ್ಚಾಗುತ್ತಿದೆ.
ಹಿರಿಯರು, ಅನುಭವಿಗಳು ನಿನ್ನ ಬ್ಲಾಗನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿರುವಾಗ ಇನ್ನೆಂತ ಕೀಳರಿಮೆ ನಿನಗೆ? ಶ್ರೇಷ್ಠತೆಯ ವ್ಯಸನ ಬೇಡ, ನಿನಗನ್ನಿಸಿದ್ದನ್ನು ಬರೆಯುತ್ತಿರು. ಭಾಷೆ ಕೂಡ ಚೆನ್ನಾಗಿದೆ.
ವೈದೇಹಿಯವರ ಕವನಗಳು ’ತೂಕ’ದಿಂದ ಕೂಡಿರುತ್ತವೆ. ನಿನ್ನದು ಹಾಗಿಲ್ಲ ಎಂಬ ಭಾವನೆ ಒಳ್ಳೆಯದಲ್ಲ. ನೀನು ವೈದೇಹಿಯಲ್ಲ. ವೈದೇಹಿ ನೀನಲ್ಲ. ಸಾಧ್ಯವಾದರೆ ನಿನ್ನನ್ನು ನಿನ್ನದೇ ವಯಸ್ಸಿನ ಇತರ ಬರಹಗಾರರ ಜೊತೆ ಹೋಲಿಸಿಕೊ, ಆಗಲೂ ನಿನ್ನ ಬರಹಗಳ ಬಗ್ಗೆ ನಿನಗೆ ವಿಶ್ವಾಸ ಮೂಡದಿದ್ದರೆ ನನ್ನ ಬಳಿ ಹೇಳು. ಅದಲ್ಲದೆ ಲಂಕೇಶರು ಹಾಗೆ ಬರೆಯುತ್ತಿದ್ದರು, ಹೀಗೆ ಬರೆಯುತ್ತಿದ್ದರು ಎಂದು ತಲೆ ಕೆಡಿಸಿಕೊಳ್ಳಬೇಡ. ಎಲ್ಲರಿಂದಲೂ ’ಲಂಕೇಶ್’ ಆಗಲು ಸಾಧ್ಯವಿಲ್ಲ. ಅದಲ್ಲದೆ ಲಂಕೇಶರ ಕಾಲಾನಂತರ ಕನ್ನಡದಲ್ಲಿ ಮತ್ತೊಬ್ಬ ಲಂಕೇಶ್ ಹುಟ್ಟಿಲ್ಲ ಎನ್ನುವುದೂ ನೆನಪಿರಲಿ.
ಇವತ್ತಿನ ಓದುಗರಿಗೆ ಬೇಕಿರುವುದು ಸರಳವಾಗಿರುವ, ತಮಗನ್ನಿಸಿದ್ದನ್ನು ನೇರವಾಗಿ ಹೇಳುವ ಬರಹಗಳೇ ಹೊರತು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಹ ಬರಹಗಳಲ್ಲ. ಅದಲ್ಲದೆ ಬರಹ ಎನ್ನುವುದು ಮನುಷ್ಯನ ಆತ್ಮ ಮತ್ತು ಮನಸ್ಸನ್ನು ಶುದ್ಧವಾಗಿಡುವ ಸಾಧನಗಳಲ್ಲಿ ಒಂದು. ಅದು ಯಾರನ್ನೂ ಖುಷಿಪಡಿಸುವ ಅಥವಾ ಯಾರಿಗೋ ಸಿಟ್ಟು ಬರಿಸುವ ಸಾಧನ ಅಲ್ಲವಲ್ಲ? ಇನ್ನು ಪಕ್ವ ಅಪಕ್ವದ ಪ್ರಶ್ನೆ ಎಲ್ಲಿಯದು? ಅದರಲ್ಲಿ ಕೆಟ್ಟ ವಿಚಾರ ಇಲ್ಲದಿದ್ದರಾಯಿತು, ಅಷ್ಟೆ.
ಇನ್ನು ನಿನ್ನ ಸಮಯವನ್ನು ನೀನು ಹೇಗೆ ಹೊಂದಿಸಿಕೊಳ್ಳುತ್ತೀಯಾ ಎನ್ನುವುದು ನಿನಗೆ ಬಿಟ್ಟಿದ್ದು.
ಸುಮ್ಮನೆ ಇಲ್ಲಸಲ್ಲದ ಕಾರಣ, ನೆವಗಳನ್ನು ಹುಡುಕುವುದನ್ನು ಬಿಡು. ಇದು ನನಗನಿಸಿದ್ದು. ಬರೆಯುವುದನ್ನು ಬಿಡಬೇಡ. ಸಾಹಿತ್ಯ ಮತ್ತು ಬರಹ ನಮ್ಮನ್ನು ಕಡೆ ತನಕವೂ ಕೆಟ್ಟ ದಾರಿ ಹಿಡಿಯಲು ಬಿಡುವುದಿಲ್ಲ.
ನನ್ನ ಪತ್ರ ಸ್ವಲ್ಪ ಖಾರವಾಗಿದ್ದರೆ ಬೇಸರಿಸಿಕೊಳ್ಳಬೇಡ. ನಿನ್ನ ಬಗೆಗಿನ ಕಾಳಜಿಯಿಂದಾಗಿ ಹಾಗೆ ಬರೆಯಬೇಕಾಯಿತು. ನಿನ್ನ ಪ್ರತಿಕ್ರಿಯೆಗಾಗಿ ಕಾಯುತ್ತಿರುತ್ತೇನೆ.
ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ...
ಕಾಮೆಂಟ್‌ಗಳು
ಅಷ್ಟಕ್ಕೂ ಅಭಿಪ್ರಾಯಭೇದ ಇರಬಾರದು ಅಂತಲ್ಲ. ಆದರೆ, ಅದು ವೈಯಕ್ತಿಕ ಭೇದವಾಗಬಾರದು ಅಷ್ಟೇ.
ಚೆನ್ನಾಗಿ ಬರೆದಿದ್ದೀರಿ. ಇಷ್ಟವಾಯಿತು.
- ಚಾಮರಾಜ ಸವಡಿ
Intha baraha bekittu nange :)thanks a lot :)
Baritaa iri :)
shubhavaagali :)
Sunil.