ವಿಷಯಕ್ಕೆ ಹೋಗಿ

ನೀನಿದ್ದರೂ ಜಗತ್ತಿನಲ್ಲಿ ಅನ್ಯಾಯ ಏಕೆ ನಡೆಯುತ್ತಿದೆ?


ದೇವರೇ, ನಿನಗೊಂದು ನಮಸ್ಕಾರ.

ನಾನು ಹುಟ್ಟಿದಾಗಿನಿಂದ ನಿನ್ನ ಬಗ್ಗೆ ಸಾಕಷ್ಟು ಬಾರಿ ಕೇಳಿದ್ದೇನೆ. ನನಗೆ ಹೊರಜಗತ್ತನ್ನು ತೋರಿಸುವುದಕ್ಕೆ ಮುಂಚೆಯೇ ನನ್ನ ತಂದೆ ತಾಯಿ ದೇವರ ಕೋಣೆಗೆ ಕರೆದುಕೊಂಡು ಹೋಗಿ ನಿನ್ನನ್ನು ತೋರಿಸಿದರು. ದೇವರನ್ನು ನಂಬು. ಆತನಲ್ಲಿ ವಿದ್ಯೆ, ಬುದ್ಧಿಯನ್ನು ದಯಪಾಲಿಸುವಂತೆ ಕೇಳಿಕೊ. ಆತ ಭಕ್ತರು ಕೇಳಿದ್ದೆಲ್ಲವನ್ನೂ ನೀಡುತ್ತಾನೆ ಎಂದರು. ನೆಲಮುಟ್ಟಿ ನಿನಗೆ ನಮಸ್ಕರಿಸುವುದನ್ನೂ ಹೇಳಿಕೊಟ್ಟರು. ದೇವರನ್ನು ತೋರಿಸಮ್ಮಾ ಅಂತ ಕೇಳಿದ್ದಕ್ಕೆ ಕಲ್ಲಿನ ವಿಗ್ರಹವನ್ನು ತೋರಿಸಿ ಅಲ್ಲಿ ದೇವರಿದ್ದಾನೆ ಅಂತ ಹೇಳಿದರು. ಆದರೆ ನನಗೆ ನೀನು ಕಾಣಲಿಲ್ಲ.

ಕೊನೆಗೆ ಸ್ವಲ್ಪ ಬುದ್ಧಿ ಬಂದ ನಂತರ, ಪುಟ್ಟಾ, ದೇವರು ಕಲ್ಲಿನ ಮೂರ್ತಿಯಲ್ಲಿಲ್ಲಪ್ಪಾ. ಆತ ಈ ಸೃಷ್ಟಿಯ ಅಣು ಅಣುವಿನಲ್ಲೂ ಇದ್ದಾನೆ. ಆತ ಎಲ್ಲವನ್ನೂ, ಎಲ್ಲರನ್ನೂ ಗಮನಿಸುತ್ತಿದ್ದಾನೆ ಅಂತ ತಿಳಿಸಿದರು. ಅವರ ಮಾತನ್ನು ನಂಬಿದೆ. ಅಷ್ಟಕ್ಕೂ ಅವರ ಮಾತನ್ನು ನಂಬದೆ ಬೇರೆ ವಿಧಿಯಿರಲಿಲ್ಲ. ಆದರೂ ಈ ಜಗತ್ತನ್ನಿಡೀ ನೋಡಿಕೊಳ್ಳಲು ಅದೆಷ್ಟು ಮಂದಿ ದೇವರಿದ್ದಾರೆ ಎಂಬ ಅನುಮಾನ ಇದ್ದೇ ಇತ್ತು.

ಬುದ್ಧಿ ಸ್ವಲ್ಪಮಟ್ಟಿಗೆ ಪಕ್ವವಾದ ನಂತರ ದೇವನೊಬ್ಬ, ನಾಮ ಹಲವು ಅಂತ ಕಲಿಸಿದರು. ಅದನ್ನೂ ಒಪ್ಪಿಕೊಂಡೆ.

ದೇವರ ಇಚ್ಛೆಯಿಲ್ಲದೆ ಈ ಜಗತ್ತಿನಲ್ಲಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ. ಎಲ್ಲವೂ ದೇವರ ಇಚ್ಛೆಗೆ ಅನುಗುಣವಾಗಿಯೇ ನಡೆಯುತ್ತವೆ. ದೇವರನ್ನು ನಂಬುವವ ಜೀವನದಲ್ಲಿ ಕಷ್ಟ ಬಂದರೂ ಅದನ್ನು ಜಯಿಸುತ್ತಾನೆ. ದೇವರ ವಿರುದ್ಧ ಹೋದವನು ಹೆಚ್ಚು ಕಾಲ ಬಾಳಲಾರ ಅಂತಲೂ ನನ್ನ ಹಿರಿಯರು ಕಲಿಸಿದರು.

ಎಲ್ಲವನ್ನೂ ಒಪ್ಪಿಕೊಂಡೆ. ಆದರೆ ಅದರ ಜೊತೆಜೊತೆಗೇ ಕೆಲವೊಂದು ಅನುಮಾನಗಳು ಹುಟ್ಟಿಕೊಂಡವು.

ದೇವರೆ, ಈ ಜಗತ್ತಿನ ಅಣು ಅಣುವಿನಲ್ಲೂ ನೀನಿದ್ದೀಯಾ ಮತ್ತು ಜಗತ್ತಿನಲ್ಲಿ ನೀನೊಬ್ಬನೇ ಪತಿತ ಪಾವನ. ಅದನ್ನು ನಾನು ನಂಬುತ್ತೇನೆ. ಏಕೆಂದರೆ ನನಗೆ ನನ್ನ ಹಿರಿಯರು ಹೇಳಿಕೊಟ್ಟಿದ್ದೇ ಅದನ್ನು. ಅಂದಮೇಲೆ ಈ ಜಗತ್ತಿನ ಪ್ರತಿಯೊಂದೂ ನಿನ್ನ ಅಂಶವೇ ಆಗುತ್ತದೆ. ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಯೂ ನಿನ್ನ ಅಂಶವೇ, ಏಕೆಂದರೆ ಪ್ರತಿ ಜೀವಿಯಲ್ಲೂ ನೀನಿದ್ದೀಯಾ. ಹಾಗಿದ್ದರೂ ಕೆಲವರೇಕೆ ಮೇಲು ಜಾತಿ? ಇನ್ನೊಂದಿಷ್ಟು ಜನ ಮಾತ್ರ ಏಕೆ ಕೀಳು ಜಾತಿ? ಎಲ್ಲರೂ ನಿನ್ನ ಅಂಶವೇ ಆಗಿರುವಾಗ ಈ ತಾರತಮ್ಯ ಸರಿಯೇ ದೆವರೆ? ನಿನ್ನನ್ನು ನೋಡಲು ಕೆಲವರಿಗೆ ಮಾತ್ರ ಅವಕಾಶ, ಇನ್ನು ಕೆಲವರಿಗೆ ನಿರಾಕರಣೆ ಸರಿಯೇ ಪ್ರಭೂ? ಜಗತ್ತಿನ ಪ್ರತಿಯೊಬ್ಬರೂ ನಿನ್ನ ಮಕ್ಕಳೇ ಆಗಿರುವಾಗ ಒಬ್ಬರನ್ನು ಕೀಳು, ಇನ್ನೊಬ್ಬರನ್ನು ಮೇಲು ಅಂತ ನಿನ್ನೆದುರಿಗೇ ಹೇಳುವವರನ್ನು ಕಂಡೂ ಏಕೆ ಸುಮ್ಮನಿದ್ದೀಯಾ?

ಈ ಜಗತ್ತಿನಲ್ಲಿ ಪ್ರಾಕೃತಿಕ ವಿಕೋಪಗಳು ಖಂಡಿತಾ ಹೊಸದಲ್ಲ. ಜಗತ್ತಿನ ಸೃಷ್ಟಿ ನಿನ್ನಿಂದ (ಜಗತ್ತನ್ನು ನೀನೇ ಸೃಷ್ಟಿಸಿದ್ದು ಅಂತಲೂ ಹಿರಿಯರು ಹೇಳಿದ್ದಾರೆ) ನಡೆದ ದಿನದಿಂದಲೂ ಇಲ್ಲಿ ಕಾಲಕಾಲಕ್ಕೆ ಒಂದಿಲ್ಲೊಂದು ಕಡೆ ಪ್ರಾಕೃತಿಕ ವಿಕೋಪಗಳು ನಡೆಯುತ್ತಲೇ ಇವೆ. ಆದರೆ ಒಮ್ಮೆ ಆಲೋಚಿಸು ದೇವರೆ. ಹಾಗೆ ನಡೆಯುವ ವಿಕೋಪಗಳಲ್ಲಿ ಮಡಿಯುವವರಾರು? ಬಡವ ಶ್ರೀಮಂತನೆಂಬ ಬೇಧವಿಲ್ಲದೆ ಲಕ್ಷಾಂತರ ಮಂದಿ ತಮ್ಮ ಜೀವ ತೆರುತ್ತಾರೆ. ತಮ್ಮನ್ನೇ ನಂಬಿದ, ತಮ್ಮ ಪ್ರೀತಿಪಾತ್ರರನ್ನು ತಬ್ಬಲಿಯಾಗಿಸಿ ಕಾಣದ ಲೋಕಕ್ಕೆ ಹೋಗಿಬಿಡುತ್ತಾರೆ. ಅವರೇನೋ ಹೊರಟುಹೋಗುತ್ತಾರೆ. ಆದರೆ ಅವರು ಅಗಲಿಹೋದ ಅವರ ಪ್ರೀತಿಪಾತ್ರರ ನೋವನ್ನು, ನೋಡಿದವರ ಕರುಳು ಕಿತ್ತು ಬರುವಂತಹ ಆರ್ತನಾದ ನಿನಗೆ ಕಾಣುವುದಿಲ್ಲವೇ? ಕಂಡೂ ನಿನ್ನ ಮನಸ್ಸಿಗೆ ನೋವಾಗುವುದಿಲ್ಲವೇ?

ನಿಜ, ವ್ಯಕ್ತಿಯೊಬ್ಬ ಹುಟ್ಟಿದ ಮೇಲೆ ಸಾಯಲೇಬೇಕು. ಅದರ ಬಗ್ಗೆ ತಕರಾರಿಲ್ಲ. ಒಬ್ಬ ವ್ಯಕ್ತಿಗೆ ಸಹಜವಾಗಿ ಬರುವ ಸಾವನ್ನು ಎದುರಿಸಲು ವ್ಯಕ್ತಿ ಮತ್ತು ಆತನನ್ನು ಅವಲಂಬಿಸಿರುವವರು ಮಾನಸಿಕವಾಗಿ ಸಿದ್ಧರಾಗಿರುತ್ತಾರೆ. ಆದರೆ ನಮ್ಮ ಪ್ರೀತಿಪಾತ್ರರಿಗೆ ಧುತ್ತೆಂದು ಬಂದೆರಗುವ ಸಾವನ್ನು ಎದುರಿಸುವುದಿರಲಿ, ಅದರ ಬಗ್ಗೆ ನೆನೆಸಿದರೇನೇ ಮನಸ್ಸು ತೀವ್ರ ಯಾತನೆಗೆ ಒಳಗಾಗುತ್ತದೆ. ಅಂಥ ಸಾವು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಾವಿರ ಸಾವಿರ ಮಂದಿಗೆ ಬಂದೆರಗುತ್ತದೆ. ಅವರ ಮಕ್ಕಳು ಅನಾಥರಾಗುತ್ತಾರೆ. ಇದನ್ನು ನೋಡಿ ನಿನಗೂ ನೋವಾಗುತ್ತಲ್ಲವಾ ದೇವರೆ?

ಅದಿರಲಿ. ಮನುಷ್ಯನೊಬ್ಬ ಈ ಜನ್ಮದಲ್ಲಿ ಅನುಭವಿಸುವ ಕಷ್ಟಗಳಿಗೆ ಆತ ಪೂರ್ವಜನ್ಮದಲ್ಲಿ ಮಾಡಿದ ಕರ್ಮಗಳೇ ಕಾರಣ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಒಪ್ಪೋಣ ಅವರ ಮಾತನ್ನು.

ಹಿಂದೆ ಒರಿಸ್ಸಾ ರಾಜ್ಯವನ್ನು ಅಪ್ಪಳಿಸಿದ ಚಂಡಮಾರುತದಲ್ಲಿ ಸಾವಿರಾರು ಮಂದಿ ದಾರುಣವಾಗಿ ಸಾವನ್ನಪ್ಪಿದರು. ಇನ್ನಷ್ಟು ಮಂದಿ ತಮ್ಮವರೆನ್ನುವ ಎಲ್ಲರನ್ನೂ ಕಳೆದುಕೊಂಡು ಬದುಕುಳಿದರು. ಅಂಥವರ ಪೈಕಿ ಪುಟ್ಟ, ಮುಗ್ಧ ಮಗುವೂ ಒಂದು. ಅದರ ತಾಯಿ ತಂದೆ ತೀರಿಕೊಂಡಿದ್ದರು. ಮಗು ತನ್ನ ಮೃತ ತಂದೆ ತಾಯಿಯ ಶರೀರದ ಮುಂದೆ ಕುಳಿತು ಭೋರಿಟ್ಟು ಅಳುತ್ತಿತ್ತು. ಹೇಳು ದೇವರೆ, ಆ ಮೃತ ತಾಯಿ-ತಂದೆ ಮಾಡಿದ ತಪ್ಪೇನು? ಅಲ್ಲದೆ, ಇನ್ನೂ ಜಗತ್ತು ಅಂದರೆ ಏನೆಂದು ಅರಿಯದ ಆ ಪುಟ್ಟ ಮಗು ತನ್ನ ಪೂರ್ವಜನ್ಮದಲ್ಲಿ ಮಾಡಿದ ಪಾಪವಾದರೂ ಏನು? ದಯವಿಟ್ಟು ಉತ್ತರಿಸು.

ನಿನ್ನನ್ನು, ನಿನ್ನ ಇಚ್ಛೆಯನ್ನು ಯಾರೂ ಪ್ರಶ್ನಿಸಬಾರದು ಅಂತ ದೊಡ್ಡವರು ಹೇಳುತ್ತಾರೆ. ಆದರೂ ನಿನ್ನನ್ನು ಇವತ್ತು ಪ್ರಶ್ನಿಸಲೇಬೇಕಾಗಿದೆ. ಒಬ್ಬ ವ್ಯಕ್ತಿಗೆ ಶಿಕ್ಷೆ ನೀಡುವುದು ಆತ ತನ್ನ ತಪ್ಪನ್ನು ಅರಿತುಕೊಳ್ಳಲಿ ಮತ್ತು ಮುಂದೆ ಅಂಥ ತಪ್ಪನ್ನು ಮಾಡದಿರಲಿ ಅನ್ನುವುದಕ್ಕಾಗಿ. ಆಧುನಿಕ ಸಮಾಜ ಕೂಡ ತಾನು ಶಿಕ್ಷಿಸುವ ವ್ಯಕ್ತಿಗೆ ನೀನು ಇಂಥ ತಪ್ಪು ಮಾಡಿದ್ದೀಯಾ, ಹಾಗಾಗಿಯೇ ನಿನಗೆ ಈ ಶಿಕ್ಷೆ ಎಂದು ಹೇಳಿ ಶಿಕ್ಷಿಸುತ್ತದೆ. ಆದರೆ ನೀನು ಮಾತ್ರ ಅದ್ಯಾವ ಕಾರಣಗಳನ್ನೂ ನೀಡದೆಯೇ ನಮ್ಮನ್ನು ಶಿಕ್ಷಿಸುತ್ತೀಯೆ. ಯಾಕೆ ದೇವರೆ? ಒರಿಸ್ಸಾ ಚಂಡಮಾರುತ, ಗುಜರಾತ್ ಭೂಕಂಪದಂತಹ ವಿಕೋಪಗಳಲ್ಲಿ (ಇಂಥ ವಿಕೋಪಗಳು ಒಂದೆರಡಲ್ಲ, ಸಾವಿರಾರು) ಮೃತಪಟ್ಟವರು ತಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ತಪ್ಪೇನು? ತಮ್ಮವರೆಲ್ಲರನ್ನೂ ಕಳೆದುಕೊಂಡು ಬದುಕುಳಿದವರು ಮಾಡಿದ ಅಪರಾಧವೇನು? ಆ ಪುಟ್ಟ, ಮುಗ್ಧ, ಅಸಹಾಯಕ ಮಗು ತನ್ನ ಪೂರ್ವಜನ್ಮದಲ್ಲಿ ಮಾಡಿದ ಮಹಾಪರಾಧವಾದರೂ ಏನು? ಯಾಕಿಂಥ ಕ್ರೂರ ಶಿಕ್ಷೆ? ಮಾತನಾಡು, ಇನ್ನಾದರೂ ನಿನ್ನ ಮೌನವನ್ನು ಮುರಿ.

ನಿನ್ನನ್ನು ಜಗತ್ ರಕ್ಷಕ ಅಂತ ಕರೆಯುತ್ತಾರೆ. ಅಂದರೆ ಇಡೀ ಜಗತ್ತಿನ ರಕ್ಷಣೆ ನಿನ್ನದು.

ಅದೇಕೊ ಏನೊ, ನೀನು ಭೂಮಿಯ ಮೇಲೆ ಹಲವಾರು ಮತ ಧರ್ಮಗಳನ್ನು ಸೃಷ್ಟಿಸಿದೆ. ಅವೆಲ್ಲಕ್ಕೂ ಒಂದೊಂದು ಬಗೆಯ ದೇವರ ಕಲ್ಪನೆಯನ್ನು (ಅಥವಾ ಅಸ್ತಿತ್ವವನ್ನು) ನೀಡಿದೆ. ಪ್ರತಿಯೊಂದು ಮತ ಧರ್ಮಕ್ಕೂ ತನ್ನದೇ ಆದ ಧರ್ಮಗ್ರಂಥವನ್ನು, ಪೂಜಾ ಕೇಂದ್ರವನ್ನೂ ನೀಡಿದೆ.

ಆದರೆ ಒಮ್ಮೆ ಭೂಮಿಯ ಮೇಲೆ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡು? ಜನ ನಿನ್ನದೇ ಹೆಸರಿನಲ್ಲಿ ಒಬ್ಬರನ್ನೊಬ್ಬರು ಕೊಂದುಕೊಳ್ಳುತ್ತಿದ್ದಾರೆ. ತನ್ನ ದೇವರೇ ಶ್ರೇಷ್ಠ, ಇತರರ ದೇವರು ನಿಕೃಷ್ಟ ಎಂದೂ ಬಹಿರಂಗವಾಗಿಯೇ ಕೆಲವರು ಹೇಳುತ್ತಿದ್ದಾರೆ. ತಾವು ಪೂಜಿಸುವ ದೇವರನ್ನಲ್ಲದೆ ಇನ್ನೊಂದು ರೂಪದಲ್ಲಿ ದೇವರನ್ನು ಪೂಜಿಸುವವರನ್ನು ನಿರ್ದಯವಾಗಿ ಕೊಲ್ಲುತ್ತಿದ್ದಾರೆ. ಮುಗ್ಧರು ವಿನಾಕಾರಣ ಸಾಯುತ್ತಿದ್ದಾರೆ. ನೀನೆಲ್ಲಿದ್ದೀಯಾ? ಬೇಗ ಒಮ್ಮೆ ಭೂಮಿಗೆ ಬಂದು ದೇವರು, ಧರ್ಮ, ಮತದ ಹೆಸರಿನಲ್ಲಿ ಅನಾಗರಿಕರಂತೆ ವರ್ತಿಸುತ್ತಿರುವವರನ್ನು ಶಿಕ್ಷಿಸದೆ ಇನ್ನೂ ಸುಮ್ಮನಿರುವುದೇಕೆ? ಯಾವ ರೀತಿಯ ಮೌನ ನಿನ್ನದು? ಯಾವ ಸೆಳೆತಕ್ಕೆ ಸಿಕ್ಕು ಇನ್ನೂ ಸುಮ್ಮನಿದ್ದೀಯಾ? ದೇವರು ಅಂತ ಇರುವುದು ನಾನೊಬ್ಬನೆ. ಇದನ್ನು ಅರ್ಥಮಾಡಿಕೊಳ್ಳಿ, ನಿಮ್ಮನಿಮ್ಮಲ್ಲಿ ಹೊಡೆದಾಡಿಕೊಳ್ಳುವುದನ್ನು ಬಿಡಿ ಅಂತ ನೀನೇ ಬಂದು ಒಮ್ಮೆ ಹೇಳಬಾರದೆ?

ಇನ್ನೊಂದು ವಿಚಾರವನ್ನು ಸ್ವಲ್ಪ ಗಂಭೀರವಾಗಿ ಆಲೋಚಿಸು. ಭಾರತವನ್ನು ಎಲ್ಲರೂ ಯೋಗಭೂಮಿ, ತಪೋಭೂಮಿ, ಮಾತೃಭೂಮಿ, ಕರ್ಮಭೂಮಿ... ಹೀಗೆ ಹಲವಾರು ದೊಡ್ಡ ದೊಡ್ಡ ಪದಗಳನ್ನು ಬಳಸಿ ಕರೆಯುತ್ತಾರೆ. ಒಪ್ಪೋಣ ಅವರ ಗೌರವ ಭಾವನೆಯನ್ನು. ಆದರೆ ಜಗತ್ತಿನ ಶ್ರೇಷ್ಠ ಚಿಂತಕರಿಂದ, ಸ್ವಾಮಿ ವಿವೇಕಾನಂದರಂತಹ ಪರಿವ್ರಾಜಕರಿಂದ ಯೋಗ ಭೂಮಿ ಅಂತ ಕರೆಸಿಕೊಂಡ ಭಾರತವೇಕೆ ಶತಮಾನಗಳ ಕಾಲ ಅನ್ಯರಿಂದ ತುಳಿತಕ್ಕೊಳಗಾಯಿತು? ತ್ಯಾಗಭೂಮಿಯೆಂದು ಕರೆಸಿಕೊಂಡ ಈ ನೆಲೆ ಅದೇಕೆ ಗುಲಾಮಗಿರಿಗೆ ನೂಕಲ್ಪಟ್ಟಿತು? ಯಾವ ತಪ್ಪಿಗೆ ಈ ಶಿಕ್ಷೆ?

ಭಾರತೀಯರು ಯಾವ ಕಾಲದಲ್ಲೂ ಯಾರ ಮೇಲೂ ಸ್ವಯಂಪ್ರೇರಣೆಯಿಂದ ಆಕ್ರಮಣ ಮಾಡಿದವರಲ್ಲ. ಅಷ್ಟಲ್ಲದೆ ಲೋಕಾಃ ಸಮಸ್ತಾ ಸುಖಿನೋ ಭವಂತು, ಅಹಿಂಸಾ ಪರಮೋ ಧರ್ಮಃ ಎಂಬ ಸಾರ್ವಕಾಲಿಕ ಶ್ರೇಷ್ಠ ಚಿಂತನೆಗಳನ್ನು ಜಗತ್ತಿಗೆ ನೀಡಿದವರೇ ಭಾರತೀಯರು. ಇಂಥ ಚಿಂತನೆಗಳನ್ನು ಜಗತ್ತಿಗೆ ನೀಡಿದ್ದಷ್ಟೇ ಅಲ್ಲ, ಅದನ್ನು ತಮ್ಮ ಬದುಕಿನಲ್ಲಿ ಆಚರಣೆಗೂ ತಂದ ಜಗತ್ತಿನ ಶ್ರೇಷ್ಠ ಸಂಸ್ಕೃತಿಗಳಲ್ಲಿ ಭಾರತೀಯ ಸಂಸ್ಕೃತಿಯೂ ಒಂದು. ಅಷ್ಟಿದ್ದರೂ ಭಾರತದ ಮೇಲೆ ಅದ್ಯಾವ ಕಾರಣಕ್ಕೆ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಕ್ರೂರವಾದ ಆಕ್ರಮಣ ೧೧ನೆಯ ಶತಮಾನದಲ್ಲಿ ನಡೆಯಿತು? ಯಾವ ತಪ್ಪಿಗಾಗಿ ನಮ್ಮ ಲಕ್ಷಾಂತರ ಮಂದಿ ಬಂಧುಗಳ ದಾರುಣ ಹತ್ಯೆಯಾಯಿತು? ಅಹಿಂಸೆಯನ್ನು ಪರರಿಗೆ ಬೋಧಿಸಿ, ಆಚರಣೆಗೆ ತಂದಿದ್ದೇ ಭಾರತೀಯರು ಮಾಡಿದ ಅಪರಾಧವಾಗಿತ್ತೇ?!

ಭಗವಂತ, ನಿನ್ನ ಬಗ್ಗೆ ತೀವ್ರ ಗೌರವವಿದೆ, ಅಷ್ಟೇ ಸಿಟ್ಟೂ ಇದೆ. ನಿನ್ನಿಂದ ಅಪಾರವಾದ ನಿರೀಕ್ಷೆಗಳಿವೆ. ಆ ನಿರೀಕ್ಷೆಗಳು ಕೇವಲ ಭ್ರಮೆಗಳು ಅಂತ ಅನಿಸಿದಾಗ ನಿನ್ನ ಮೇಲೆ ಅಸಾಧ್ಯ ಕೋಪ ಉಕ್ಕಿ ಬರುತ್ತದೆ. ಹಾಗೆ ಕೋಪಿಸಿಕೊಳ್ಳುವುದು ಅಪರಾಧವೇ ಇರಬಹುದು, ಆದರೂ ಕೋಪವನ್ನು ತಡೆಯಲಾಗುತ್ತಿಲ್ಲ. ಜಗತ್ತಿನಲ್ಲಿ ಪ್ರತಿಯೊಂದೂ ನಿನ್ನಿಚ್ಛೆಯಂತೆಯೇ ಜರುಗುತ್ತದೆ ಎಂಬುದನ್ನು ಮತ್ತೊಮ್ಮೆ ಒಪ್ಪಿಕೊಳ್ಳುತ್ತಲೇ ಮತ್ತೊಂದಿಷ್ಟು ಪ್ರಶ್ನೆಗಳನ್ನು ನಿನ್ನ ಮುಂದಿಡುವ ಪ್ರಯತ್ನ ಮಾಡುತ್ತೇನೆ.

ಬಹುಷಃ, ಭಾರತೀಯರ ಮನಸ್ಸನ್ನು ಆವರಿಸಿಕೊಂಡಿದ್ದ ಷಂಡತನವನ್ನು ತೊಡೆದುಹಾಕಲೆಂದೇ ಹದಿನೆಂಟನೆಯ ಶತಮಾನದಲ್ಲಿ ಸ್ವಾಮಿ ವಿವೇಕಾನಂದರ ರೂಪದಲ್ಲಿ ಮಹಾ ಚೈತನ್ಯವೊಂದು ಭರತಭೂಮಿಯಲ್ಲಿ ಜನ್ಮತಾಳಿತು. ಸಾಮಾನ್ಯರು ಏಳೇಳು ಜನ್ಮಗಳಲ್ಲೂ ಸಾಧಿಸಲಾರದಷ್ಟನ್ನು ಸ್ವಾಮಿ ವಿವೇಕಾನಂದ ಎಂಬ ದೇಶಭಕ್ತ ಸನ್ಯಾಸಿ ಕೇವಲ ಒಂಭತ್ತು ವರ್ಷಗಳ ತನ್ನ ಸಾರ್ವಜನಿಕ ಜೀವನದಲ್ಲಿ ಸಾಧಿಸಿದರು. ಭಾರತ ಮರೆತಿದ್ದ ಅಸ್ಮಿತೆಯನ್ನು ಪುನಃ ನೆನಪಿಸುವ ಅಪೂರ್ವ ಕಾಯಕಕ್ಕೆ ಕೈಹಾಕಿದರು. ಅಂತಹ ಅನನ್ಯ ಚೇತನವನ್ನು ಅದೇಕೆ ಅಕಾಲಿಕವಾಗಿ ಭೂಮಿಯಿಂದ ಹಿಂದಕ್ಕೆ ಕರೆಸಿಕೊಂಡೆ? ಭಾರತೀಯರ ಮನಸ್ಸಿನಲ್ಲಿ ಜಡ್ಡುಗಟ್ಟಿ ಕುಳಿತಿದ್ದ ಕ್ಲೈಬ್ಯ ತೊಲಗುವುದು ನಿನಗಿಷ್ಟವಿರಲಿಲ್ಲವೇ?

ಅದಿರಲಿ, ಮಹಾತ್ಮನಿಗೇಕೆ ಅಂಥ ಕ್ರೂರ ಸಾವು ತಂದಿಟ್ಟೆ? ಹಿಟ್ಲರ್‌ನಂಥ ಪಾತಕಿಯನ್ನು ಜಗತ್ತಿನಲ್ಲಿ ಜನ್ಮತಾಳುವಂತೆ ಮಾಡಿದ್ದೇಕೆ? ಸಾವಿರಾರು ಮಂದಿ ಯಹೂದಿಯರ ಮಾರಣಹೋಮಕ್ಕೆ ಯಾರು ಹೊಣೆ?

ಇಷ್ಟೆಲ್ಲ ಪ್ರಶ್ನೆ ಕೇಳಿದ ನನಗೆ ನಿನ್ನ ಬಗ್ಗೆ ಗೌರವವಿಲ್ಲ, ಆದರವಿಲ್ಲ ಅಂತ ದಯವಿಟ್ಟು ಅಂದುಕೊಳ್ಳಬೇಡ. ನಿನ್ನ ಬಗ್ಗೆ ಜಗತ್ತಿನಲ್ಲಿರುವ ಎಲ್ಲ ಸಾಮಾನ್ಯ ಮನಷ್ಯರಿಗೆ ಯಾವ ಮಟ್ಟಿನ ಭಕ್ತಿಯಿದೆಯೋ ಅದೇ ತರನಾದ ಭಯ, ಭಕ್ತಿ, ಆದರ ನನಗಿದೆ. ಆದರೆ ಈ ಜಗತ್ತನ್ನು ನೋಡಿಕೊಳ್ಳಲು ನೀನಿದ್ದೀಯಾ, ಅಬಲರು ಜಗತ್ತಿನ ಯಾವುದೇ ಭಾಗದಲ್ಲಿ ಆಪತ್ತಿನಲ್ಲಿದ್ದರೂ ಅವರ ರಕ್ಷಣೆಗೆ ನೀನು ಧಾವಿಸುತ್ತೀಯಾ ಎಂಬ ಮಾತನ್ನು ಕೇಳಿ ಕೇಳಿ ನಮಗೆ ಸಾಕಾಗಿಹೋಗಿದೆ. ದುರ್ಬಲರ ಮೇಲೆ ಜಗತ್ತಿನಲ್ಲಿ ಎಗ್ಗಿಲ್ಲದೆ ದಾಳಿಗಳು ನಡೆಯುತ್ತಿದ್ದರೂ ಅವರ ರಕ್ಷಣೆಗೆ ಯಾರೂ ಇಲ್ಲದಂತಾಗಿದೆ. ಉಳ್ಳವರ ಸೊಕ್ಕಿಗೆ ಕಡಿವಾಣವಿಲ್ಲದಂತಾಗಿದೆ. ತುಳಿತಕ್ಕೊಳಗಾದವರು ದೇವರೇ ಕಾಪಾಡೂ ಅಂತ ಭೋರಿಟ್ಟು ಅಳುತ್ತಿದ್ದರೂ ಅವರ ಬದುಕು ಇನ್ನೂ ಸರಿದಾರಿಗೆ ಬಂದಿಲ್ಲ. ನೀನೇಕೆ ಮೌನವಾಗಿದ್ದೀಯೋ ತಿಳಿಯುತ್ತಿಲ್ಲ. ಅದೇ ಸಿಟ್ಟು ನಿನ್ನನ್ನು ಪ್ರಶ್ನಿಸುವಂತೆ ಪ್ರೇರೇಪಿಸಿದೆ.

ನಿನ್ನ ಸಹಸ್ರಾರು ವರ್ಷಗಳ ಮೌನ ಇವತ್ತಿಗೆ ಸಾಕಾಗಿದೆ. ನೀನು ನಿಜವಾಗಿಯೂ ಅಸ್ತಿತ್ವದಲ್ಲಿದ್ದೀಯಾ ಎಂಬುದನ್ನು ಅಹಂಕಾರದಿಂದ ಮೆರೆಯುತ್ತಿರುವವರಿಗೂ, ಅಸಹಾಯಕತೆಯಿಂದ ಕುಗ್ಗಿ ಹೋದವರಿಗೂ ಒಮ್ಮೆ ತೋರಿಸು. ನೊಂದರ ನೋವನ್ನು ದಯವಿಟ್ಟು ಮರೆಸು.

ಅದೆಲ್ಲಕ್ಕಿಂತ ಹೆಚ್ಚಾಗಿ ಇನ್ನಾದರೂ ಮಾತನಾಡು. ಜಗತ್ತಿನಲ್ಲಿ ನಿನ್ನ ಅಸ್ತಿತ್ವ ಇದ್ದರೂ ಅನ್ಯಾಯಗಳೇಕೆ ನಡೆಯುತ್ತಿವೆ ಎಂಬ ಒಂದೇ ಒಂದು ಪ್ರಶ್ನೆಗೆ ಉತ್ತರ ಕೊಡು. ಅಷ್ಟು ಸಾಕು.

ಕಾಮೆಂಟ್‌ಗಳು

ವಿ.ರಾ.ಹೆ. ಹೇಳಿದ್ದಾರೆ…
ಜೊತೆಗೆ ದೇವರಿಗೆ ಇನ್ನೊಂದು ಪ್ರಶ್ನೆ.

ನಿಜ ಹೇಳಿಬಿಡು, ನಿನ್ನಿಂದ ಮನುಷ್ಯನೋ ಅಥವಾ ಮನುಷ್ಯನಿಂದ ನೀನೋ?
Unknown ಹೇಳಿದ್ದಾರೆ…
ದೇವರು ಬೇರೆ ಇಲ್ಲಾ ನಮ್ಮಲ್ಲಿರುವ ಒಂದು ಅಘಾದ ಶಕ್ತಿಯೇ ದೇವರು.ಇನ್ನಂದು ಅಥಱದಲ್ಲಿ ಪ್ರಕೃತಿಯನ್ನು ದೇವರು ಎಂದು ಹೇಳಬಹುದು. ನಾವು ಎವೆಲ್ಲವನ್ನು ದೇವರು ಎಂದು ಹೇಳುತ್ತೇವೆ ಮತ್ತು ನಂಬುತ್ತೇವೆ.
Unknown ಹೇಳಿದ್ದಾರೆ…
ರಾಜ ಕಾರಣಿಗಳ ಬಗ್ಗೆ ಒಂದು ಲೇಖನ ಬರೆ. ಅವರ ವಯೋಮಾನ ಮತ್ತು ವಿಧ್ಯಾಹಱತೆ ಇವುಗಳನ್ನು ಇಟ್ಟುಕೊಂಡು

ದೇವರ ಬಗ್ಗೆ ಬರೆದ ಲೇಖನ ಚೆನ್ನಾಗಿದೆ.
Shree ಹೇಳಿದ್ದಾರೆ…
nice:)devre ishtu cute agi doubts kwliddre clear maaadapppppppppa plz:):0)
ಅನಾಮಧೇಯಹೇಳಿದ್ದಾರೆ…
kelavu sala devara bagge nangu i ella prashnegalu huttiddide..........
nodona nimma prasnegadaru devaru uttaristana anta..........

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ